ಮೀಸಲಾತಿ ನೀತಿಯ ವಿರುದ್ಧ ವಂಚನೆ ಮತ್ತು ಪ್ರತಿರೋಧ

ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವುದು ಮತ್ತು ತೆಗೆದುಕೊಳ್ಳುವುದು ಕಾನೂನು ಪ್ರಕಾರ ಎರಡೂ ಶಿಕ್ಷೆಗೆ ಗುರಿಯಾಗುವಂತಹ ಅಪರಾಧಗಳು ಎಂಬುದರಲ್ಲಿ ಎರಡು ಮಾತಿಲ್ಲ; ಆದರೂ ಸರಕಾರದ ಸಡಿಲ ನಿಲುವಿನಿಂದ ಇವರು ಕಾನೂನು ವ್ಯಾಪ್ತಿಯಿಂದ ತಪ್ಪಿಸಿಕೊಳ್ಳುತ್ತಲೇ ಇದ್ದಾರೆ. ಇಲ್ಲಿ ಕೊಡುವವನಿಗಿಂತ ಪಡೆಯುವವನ ಹೊಣೆಗಾರಿಕೆ ಹೆಚ್ಚಿದೆ. ಬಹುಶಃ ಇಂತಹ ಹೀನ ಕೆಲಸಕ್ಕೆ ಕೈ ಹಾಕುವವರು ಕಾನೂನಿನ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳುವ ಕಲೆಗಾರಿಕೆಯನ್ನು ಚೆನ್ನಾಗಿ ಬಲ್ಲವರೇ ಆಗಿರುತ್ತಾರೆ. ಕರ್ನಾಟಕದಲ್ಲಂತೂ ಇಂಥ ಪ್ರಕರಣಗಳು ಸಾವಿರಾರಿವೆ.

Update: 2024-03-05 04:17 GMT

ಅಲಿಖಿತ ಮೀಸಲಾತಿ

ಬದ್ಧತೆ, ಪ್ರತಿರೋಧ ಮತ್ತು ಕುಟಿಲೋಪಾಯದಿಂದ ಇತರ ಹಿಂದುಳಿದ ವರ್ಗಗಳ ಮೀಸಲಾತಿ ಜಾರಿಯಲ್ಲಿ ಹಿನ್ನಡೆ ಆಗುತ್ತಿರುವುದನ್ನು ಕೆಲವು ಉದಾಹರಣೆಗಳ ಸಹಿತ ಗಮನಿಸಬಹುದು. ಸೆಪ್ಟಂಬರ್ 21, 1990ರಂದು ಗುಜರಾತ್ ಸರಕಾರವು ಸರಕಾರಿ ಅಲ್ಲದ ಶಾಲೆಗಳ ನಿರ್ವಹಣೆಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ಶಿಕ್ಷಕರಿಗೆ ಮೀಸಲಿಟ್ಟ ಸ್ಥಾನಗಳಿಗೆ ನೇಮಕ ಮಾಡಲು ನಿರ್ಧರಿಸಿತು. ಇದನ್ನು ಸಾಮಾಜಿಕ ನ್ಯಾಯಮಂಡಳಿಯ ಕಾರ್ಯದರ್ಶಿ ಒಲಿಜ್ ಭಾಯಿ ಪಟೇಲ್ ಪ್ರಶ್ನಿಸಿದರು. ಸರಕಾರದ ನಿರ್ಣಯವು ಅನಪೇಕ್ಷಿತವಾಗಿದೆ ಮತ್ತು ಮೀಸಲಾತಿ ನೀತಿಯನ್ನು ದುರ್ಬಲಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ವಾದಿಸಲಾಯಿತು. ಇದು ಶಾಲೆಗಳಿಗೆ ರಾಜ್ಯ ಸರಕಾರದ ಸ್ವಂತ ಅನುದಾನಿತ ಸಹಾಯ ಪಡೆಯುವ ಸಂಹಿತೆಯನ್ನು ಉಲ್ಲಂಘಿಸುತ್ತದೆ, ಜೊತೆಗೆ ಗುಜರಾತ್ ಮಾಧ್ಯಮಿಕ ಶಿಕ್ಷಣ ಕಾಯ್ದೆ ಸೆಕ್ಷನ್ 34 ಮತ್ತು 14,15(4),16(4) ಮತ್ತು 46ನೇ ಸಂವಿಧಾನದ ವಿಧಿಗಳಿಗೆ ವಿರುದ್ಧವಾಗಿದೆ ಎಂದೂ ತರ್ಕಿಸಲಾಯಿತು. ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಲಭ್ಯತೆ ಇಲ್ಲದ ಕಾರಣದಿಂದ ಮೀಸಲಾತಿ ಸ್ಥಾನಗಳು ಖಾಲಿ ಉಳಿದಿವೆ ಎಂಬುದು ಸರಿಯಲ್ಲ, ಬದಲಾಗಿ ದುರುದ್ದೇಶದ ಕ್ರಮ ಇದಾಗಿದೆ ಎಂದು ಉದಾಹರಣೆ ಸಹಿತ ಬಲವಾದ ಮನವಿಯನ್ನು ಸಲ್ಲಿಸಲಾಯಿತು. ಗುಜರಾತ್ ಉಚ್ಚ ನ್ಯಾಯಾಲಯದ ನ್ಯಾ. ಆರ್.ಎ. ಮೆಹತಾ ಅವರು ವಿವಾದಿತ ನಿರ್ಣಯದ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಿದರು.

ಪ್ರತಿಗಾಮಿ ಪ್ರಬಲ ಜಾತಿಯ ಮನಸ್ಥಿತಿ, ಬದ್ಧತೆಯ ಕೊರತೆ ಮತ್ತು ಮೀಸಲಾತಿಯಲ್ಲಿ ಸರಕಾರಕ್ಕೆ ಪ್ರತಿರೋಧ ತೋರಿಸುವುದು, ಜೀವನದ ಪ್ರತಿಯೊಂದು ರಂಗದಲ್ಲೂ ಇಂಥವು ಕಂಡುಬರುತ್ತವೆ. ಶಾಲಾ-ಕಾಲೇಜು ಪ್ರವೇಶಾತಿಯಲ್ಲಿ ಮೀಸಲಾತಿ ಕೋಟಾವನ್ನು ಕನಿಷ್ಠ 27 ಪ್ರತಿಶತದಷ್ಟು ಖಾತರಿ ಪಡಿಸಿದೆಯೇ ಹೊರತು ಅದು ಅರ್ಹತೆಗಿಂತ ಹೆಚ್ಚಿರುವುದಿಲ್ಲ. ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿದ ಕೋಟಾದಲ್ಲಿಯೇ ಪ್ರತಿಭಾನ್ವಿತ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನೂ ಸೇರಿಸಿಕೊಂಡು ಅನ್ಯಾಯ ಮಾಡಲಾಗುತ್ತಿತ್ತು.ಅದನ್ನು ಮೀಸಲಾತಿ ಕಾಯ್ದೆಯಡಿಯಲ್ಲಿ ಮಧ್ಯಪ್ರವೇಶಿಸಿ ಪ್ರಶ್ನೆ ಮಾಡಿದ ನಂತರವಷ್ಟೆ ಸರಿಪಡಿಸಿಕೊಳ್ಳಲಾಗಿತ್ತು. ಗೋರಖ್‌ಪುರ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಿಲಯಗಳಲ್ಲಿ ಯಾವುದೇ ಹಿಂದುಳಿದ ವರ್ಗದ ಅಭ್ಯರ್ಥಿಗಳನ್ನು ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅವಕಾಶ ನೀಡಲು ಯಾವುದೇ ನಿಯಮವಿಲ್ಲ ಎಂಬ ನೆಪ ಹೇಳಿ ಪ್ರವೇಶ ನೀಡುತ್ತಿರಲಿಲ್ಲ. ಬೋಧನಾ ತರಗತಿಗಳ ಪ್ರವೇಶಕ್ಕೆ ಮೀಸಲಾತಿ ನಿಯಮ ಅನ್ವಯ ಆಗುವುದಾದರೆ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶವನ್ನು ನಿರಾಕರಿಸುವುದು ಅತಿಯಾಯಿತಲ್ಲವೇ? ಅಂದು ಮಾಯಾವತಿ ಸರಕಾರವು ಆ ನಿಟ್ಟಿನಲ್ಲಿ ಆದೇಶವನ್ನು ಹೊರಡಿಸಿದರೂ ಆ ಹೊತ್ತಿಗೆ ಪ್ರವೇಶಕ್ಕಾಗಿ ಕೊಠಡಿಗಳು ಖಾಲಿ ಇರಲಿಲ್ಲ. ವಿದ್ಯಾರ್ಥಿ ನಿಲಯಗಳಲ್ಲಿ ಯಾವುದೇ ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯವನ್ನೇ ಕೊಡುತ್ತಿರಲಿಲ್ಲ. ನಾಲ್ಕು ಬಾಲಕರ ವಿದ್ಯಾರ್ಥಿ ನಿಲಯಗಳಲ್ಲಿ ಮೂರು ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರಾಗಿ ಬ್ರಾಹ್ಮಣರೇ ಆಕ್ರಮಿಸಿ ಕೊಂಡಿದ್ದರು. ಮೇಲ್ವಿಚಾರಕರಾಗಿ ಬ್ರಾಹ್ಮಣ, ಠಾಕೂರ್ ಮತ್ತು ಕಾಯಸ್ಥರ ನಡುವೆಯೇ ಹಂಚಲಾಗುತ್ತಿತ್ತು. ಮೇಲ್ವರ್ಗದ ಪ್ರಾಬಲ್ಯ ಮತ್ತು ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಾಯಕರ ನಿರಂತರ ದೂರಿನ ನಂತರ ವಿಶ್ವವಿದ್ಯಾನಿಲಯಗಳ ಶಿಕ್ಷಣ ಕಾರ್ಯದರ್ಶಿಯ ಆದೇಶವನ್ನು ಜಾರಿಗೆ ತರಲು, ಪರಿಶಿಷ್ಟ ಜಾತಿಗಳಿಗೆ ಶೇ.21, ಪರಿಶಿಷ್ಟ ಪಂಗಡಗಳಿಗೆ ಶೇ.2 ಮತ್ತು ಶೇ.27ರಷ್ಟು ಸ್ಥಾನಗಳನ್ನು ಇತರ ಹಿಂದುಳಿದ ವರ್ಗಗಳಿಗೆ ವಿದ್ಯಾರ್ಥಿ ನಿಲಯಗಳಲ್ಲಿ ಮೀಸಲಿಡಲಾಯಿತು.

ಸದಾ ಕಾಲ ಸಾಮಾನ್ಯವಾಗಿ ಮೀಸಲಾತಿ ವಿರುದ್ಧ ಪ್ರತಿರೋಧ ಇದ್ದೇ ಇರುತ್ತಿತ್ತು. ಮನೋಜ್ ಕುಮಾರ್ ಎಂಬವರು ಪತ್ರಿಕೆಯೊಂದರಲ್ಲಿ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ.

ಯುಪಿಎಸ್‌ಸಿ ಮತ್ತು ಮೀಸಲಾತಿ

‘‘ಮೀಸಲಾತಿ ವಿಚಾರದಲ್ಲಿ ಕೇಂದ್ರ ಲೋಕಸೇವಾ ಆಯೋಗ ಸರಕಾರದ ನೀತಿಯನ್ನು ಅನುಸರಿಸುತ್ತಿಲ್ಲ ಎಂಬುದು ಅಚ್ಚರಿಯ ಸಂಗತಿ. ಹೆಚ್ಚಿನ ಸಂದರ್ಭಗಳಲ್ಲಿ ನ್ಯಾಯಾಲಯಗಳು ಈ ವಿಷಯದಲ್ಲಿ ಆಯೋಗಕ್ಕೆ ನಿರ್ದೇಶನ ನೀಡುತ್ತವೆ. ಕೇಂದ್ರ ಲೋಕಸೇವಾ ಆಯೋಗ ಏಕೆ ಹೀಗೆ ಮಾಡುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ’’.

1994ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಸಮಯದಲ್ಲಿ ಅದು ಮೀಸಲಾತಿ ನಿಯಮಗಳನ್ನು ಅನುಸರಿಸಲಿಲ್ಲ ಮತ್ತು ಹಾಗೆ ಮಾಡಲು ಒತ್ತಾಯಿಸಿದ ನಂತರವೇ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಹೆಚ್ಚುವರಿ ಪಟ್ಟಿ ಹೊರಬಂದಿತು. ಮತ್ತೆ 1995ರ ಪೂರ್ವಭಾವಿ ಪರೀಕ್ಷೆಯಲ್ಲಿಯೂ ಕೇಂದ್ರ ಲೋಕಸೇವಾ ಆಯೋಗ ಅನುಸರಿಸಿದ ಮೀಸಲಾತಿ ವಿಧಾನದಿಂದಾಗಿ ಸಾಮಾನ್ಯ ಅಭ್ಯರ್ಥಿಗಳಿಗೆ ಶೇ.50.5ರ ವಿಶೇಷ ಮೀಸಲಾತಿ ಪರಿಣಾಮ ಬೀರಿತು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮದ್ರಾಸ್ ಉಚ್ಚ ನ್ಯಾಯಾಲಯ ಕೇಂದ್ರ ಲೋಕಸೇವಾ ಆಯೋಗಕ್ಕೆ ಸೂಚಿಸಿತ್ತು. 2015ರಲ್ಲೂ ಇದು ಪುನರಾವರ್ತಿತವಾಗಿದೆ. ನೂರಕ್ಕೂ ಹೆಚ್ಚು ಇತರ ಹಿಂದುಳಿದ ವರ್ಗಗಳು ಸಾಮಾನ್ಯ ವರ್ಗದಲ್ಲಿ ಅರ್ಹತೆ ಪಡೆದಿದ್ದರೂ, ಅವರಿಗೆ ಸಾಮಾನ್ಯ ವರ್ಗದಲ್ಲಿ ನೇಮಕ ಮಾಡದೆ, ಅವರನ್ನು ಮೀಸಲಾತಿ ಅಡಿಯಲ್ಲಿಯೇ ಪರಿಗಣಿಸಲಾಯಿತು. ಪರಿಣಾಮ ನೂರಕ್ಕೂ ಹೆಚ್ಚು ಜನ ಇತರ ಹಿಂದುಳಿದ ವರ್ಗಗಳಿಗೆ ಘನ ಘೋರ ಅನ್ಯಾಯವಾಗಿದೆ.

ಇಲಾಖಾವಾರು ಮೀಸಲಾತಿಗೆ ಆಗ್ರಹ

ಮಂಡಲ್ ನಿಯಮ ಮತ್ತು ಅದರ ಪರಿಣಾಮವಾಗಿ ಮೀಸಲಾತಿ ಯೋಜನೆ ಪ್ರಾರಂಭವಾದಾಗಿನಿಂದ ವಿಶ್ವವಿದ್ಯಾನಿಲಯಗಳು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಮೀಸಲಾತಿ ಯೋಜನೆಯನ್ನು ಹೇಗೆ ಜಾರಿಗೊಳಿಸಬೇಕು ಮತ್ತು ಮೀಸಲಾತಿ ಘಟಕ ಯಾವುದು? ಇದು ವಿಶ್ವವಿದ್ಯಾನಿಲಯವಾರು ಅಂದರೆ ಒಂದೇ ದರ್ಜೆ/ಕೇಡರ್‌ನ ಎಲ್ಲಾ ಹುದ್ದೆಗಳನ್ನು ಒಟ್ಟಿಗೆ ತೆಗೆದುಕೊಳ್ಳ ಬೇಕೇ ಅಥವಾ ಇಲಾಖೆ/ಪ್ರಾಧ್ಯಾಪಕವಾರು ಇರಬೇಕೇ ಎಂಬುದಾಗಿದೆ.

ಉತ್ತರ ಪ್ರದೇಶ ಸರಕಾರ ಮಾರ್ಚ್ 6, 1995ರಲ್ಲಿ ಸುತ್ತೋಲೆ ಹೊರಡಿಸಿದಂತೆ, ಒಂದು ವರ್ಗದ ಮೀಸಲಾತಿಯಲ್ಲಿ ಕೇವಲ ಒಂದು ಹುದ್ದೆ ರಚಿಸಿದರೆ ಅಥವಾ ಮಂಜೂರು ಮಾಡಿದ್ದರೆ ಮೀಸಲಾತಿ ಅನ್ವಯಿಸುವುದಿಲ್ಲ ಮತ್ತು ನೇರ ನೇಮಕಾತಿ ಸಂದರ್ಭದಲ್ಲಿ ಅದು ಅನ್ವಯಿಸುವುದಿಲ್ಲ ಮತ್ತು (2) ನೇರ ನೇಮಕಾತಿಯ ಸಂದರ್ಭದಲ್ಲಿ ಕನಿಷ್ಠ 5 ಅಥವಾ ಹೆಚ್ಚಿನ ಹುದ್ದೆಗಳಿದ್ದಾಗ ಮಾತ್ರ ಅನ್ವಯಿಸುತ್ತದೆ.

ಸುತ್ತೋಲೆಯನ್ನು ಅಕ್ಷರಶಃ ತೆಗೆದುಕೊಂಡರೆ ವಿಶ್ವವಿದ್ಯಾನಿಲಯಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚಿನ ಹುದ್ದೆಗಳು ಅಗತ್ಯವಿದ್ದಲ್ಲಿ, ಮೀಸಲಾತಿಯ ಕಾನೂನನ್ನು ತರಲು ಓದುಗರ ಒಟ್ಟು ಅನುಮೋದಿತ ಬಲದ ಮೇಲೆ ಕೆಲವು ವಿಭಾಗಗಳು ಇರುತ್ತವೆಯೇ ಹೊರತು ಅಧ್ಯಾಪಕರ ಸಂಖ್ಯೆಯ ಮೇಲಲ್ಲ.

ಈ ಸಮಸ್ಯೆ, ಮಂಡಲ್ ವರದಿ ಜಾರಿಗೆ ಬಂದ ಸಮಯದ್ದಾದರೂ, ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಇಂದಿಗೂ ಬಗೆ ಹರಿದಿಲ್ಲ. ಹಿಂದುಳಿದ ವರ್ಗಗಳ ಅಧ್ಯಾಪಕರು ಸಿಗಬೇಕಾದ ಮೀಸಲಾತಿ ನ್ಯಾಯಕ್ಕಾಗಿ ಹಿಂದುಳಿದ ವರ್ಗಗಳ ಆಯೋಗ ಮತ್ತು ಸರಕಾರವನ್ನು ಎಡತಾಕುತ್ತಲೇ ಇದ್ದಾರೆ. ಅದು ಇತ್ಯರ್ಥ ಕಂಡಿಲ್ಲ.

ಇದಕ್ಕೆ ಕರ್ನಾಟಕವೂ ಹೊರತಾಗಿಲ್ಲ. ಇಂಥಾ ಸಮಸ್ಯೆಗಳನ್ನು ಹೊತ್ತು ವಿಶ್ವವಿದ್ಯಾನಿಲಯಗಳ ಹಿಂದುಳಿದ ವರ್ಗಗಳ ಅಧ್ಯಾಪಕರು ಆಯೋಗ ಮತ್ತು ಸರಕಾರಗಳನ್ನು ಒತ್ತಾಯಿಸುತ್ತಲೇ ಇದ್ದಾರೆ. ಕೆಲವೊಮ್ಮೆ ಆಯೋಗ-ಸರಕಾರಗಳು ನ್ಯಾಯ ದೊರಕಿಸಿಕೊಡುವ ದಿಶೆಯಲ್ಲಿ ಕ್ರಮ ತೆಗೆದುಕೊಂಡರೂ, ವಿಶ್ವವಿದ್ಯಾನಿಲಯಗಳ ಆಡಳಿತ ಮೇಲ್ಜಾತಿ-ವರ್ಗಗಳ ಬಿಗಿಮುಷ್ಟಿಯಲ್ಲಿರುವುದರಿಂದ, ಹಿಂದುಳಿದವರಿಗೆ ದಕ್ಕಬೇಕಾದ ನ್ಯಾಯವನ್ನು ದೊರಕಿಸಿಕೊಡಲು ತೊಡರುಗಾಲಿಕ್ಕುವರು.

ಸುಳ್ಳು ಜಾತಿ ಪ್ರಮಾಣ ಪತ್ರ

ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವುದು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಗೆ ಬಂದ ದಿನದಿಂದಲೂ ಅವ್ಯಾಹತವಾಗಿ ನಡೆದು ಬಂದೇ ಇದೆ. ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವುದು ಮತ್ತು ತೆಗೆದುಕೊಳ್ಳುವುದು ಕಾನೂನು ಪ್ರಕಾರ ಎರಡೂ ಶಿಕ್ಷೆಗೆ ಗುರಿಯಾಗುವಂತಹ ಅಪರಾಧಗಳು ಎಂಬುದರಲ್ಲಿ ಎರಡು ಮಾತಿಲ್ಲ; ಆದರೂ ಸರಕಾರದ ಸಡಿಲ ನಿಲುವಿನಿಂದ ಇವರು ಕಾನೂನು ವ್ಯಾಪ್ತಿಯಿಂದ ತಪ್ಪಿಸಿಕೊಳ್ಳುತ್ತಲೇ ಇದ್ದಾರೆ. ಇಲ್ಲಿ ಕೊಡುವವನಿಗಿಂತ ಪಡೆಯುವವನ ಹೊಣೆಗಾರಿಕೆ ಹೆಚ್ಚಿದೆ. ಬಹುಶಃ ಇಂತಹ ಹೀನ ಕೆಲಸಕ್ಕೆ ಕೈ ಹಾಕುವವರು ಕಾನೂನಿನ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳುವ ಕಲೆಗಾರಿಕೆಯನ್ನು ಚೆನ್ನಾಗಿ ಬಲ್ಲವರೇ ಆಗಿರುತ್ತಾರೆ. ಕರ್ನಾಟಕದಲ್ಲಂತೂ ಇಂಥ ಪ್ರಕರಣಗಳು ಸಾವಿರಾರಿವೆ. ಲಿಂಗಾಯತ ಗಾಣಿಗರು ‘ಗಾಣಿಗ’ ಎಂದು, ಸಾದರ ಲಿಂಗಾಯತರು ‘ಹಿಂದೂ ಸಾದರು’ ಎಂದು, ನಾಮಧಾರಿ ಒಕ್ಕಲಿಗರು ‘ನಾಮಧಾರಿ’ ಇತ್ಯಾದಿ, ಸುಳ್ಳು ಪ್ರಮಾಣ ಪತ್ರ ಪಡೆಯುವ ಪ್ರಕರಣಗಳಿಗೆ ತಡೆಯೇ ಇಲ್ಲ. ಇಂಥ ಹೇಯ ಕೃತ್ಯ ಕರ್ನಾಟಕಕ್ಕೆ ಸೀಮಿತವಾದುದೇನೂ ಅಲ್ಲ ಬಿಡಿ, ಅದು ದೇಶ ವ್ಯಾಪಿ.

ನಿಜವಾಗಿ ಇತರ ಹಿಂದುಳಿದ ವರ್ಗಗಳಲ್ಲದವರು ಸುಳ್ಳು ಪ್ರಮಾಣ ಪತ್ರಗಳನ್ನು ಸಲ್ಲಿಸುವ ಮೂಲಕ ಕೆಲವು ಮೀಸಲಾತಿ ಅವಕಾಶಗಳನ್ನು ಕೈವಶ ಮಾಡಿಕೊಳ್ಳುವುದರಿಂದ ನೈಜ ಅರ್ಹರು ತಮ್ಮ ಮೀಸಲಾತಿ ಪ್ರಯೋಜನಗಳಿಂದ ವಂಚಿತರಾಗುತ್ತಾರೆ. ಉತ್ತರ ಭಾರತದ ಪ್ರಕರಣ ಒಂದು ಹೀಗಿದೆ: ಎಲ್‌ಎಲ್‌ಬಿ ತರಗತಿಗಳ ಪ್ರವೇಶಾತಿಗೆ ತ್ರಿಗೋತ್ರ ಬ್ರಾಹ್ಮಣರಾದ ತಿವಾರಿ ಮತ್ತು ಮಿಶ್ರ ಜಾತಿಯವರಿಂದ ‘ಗೋಸಾಯಿ’ ಮತ್ತು ಠಾಕೂರ್ ಅಭ್ಯರ್ಥಿಗಳಿಂದ ‘ಕುರ್ಮಿ’ ಎಂದು ಹಿಂದುಳಿದ ವರ್ಗಗಳ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಿದ ಘಟನೆಗಳು ನಡೆದಿವೆ. ಬಿಎ ಮತ್ತು ಎಂಎ ತರಗತಿಗಳ 800ಕ್ಕೂ ಹೆಚ್ಚು ಅಭ್ಯರ್ಥಿಗಳು ಸಾಮೂಹಿಕ ಪ್ರವೇಶ ಪಡೆದಿದ್ದಾರೆ ಎಂಬುದು ಹಿಂದೊಮ್ಮೆ ವರದಿಯಾಗಿತ್ತು.

ನ್ಯಾಯಾಲಯದಲ್ಲಿ ಪ್ರಶ್ನಿಸುವ ಮೂಲಕ ನ್ಯಾಯಾಂಗದ ಗಮನಕ್ಕೆ ತಂದ ಕೆಲವು ಪ್ರಕರಣಗಳಿವೆ. ವಂಚಿತ ಹಿಂದುಳಿದ ಅಭ್ಯರ್ಥಿಗಳು ಮತ್ತು ಅವರ ಪೋಷಕರ ಕಡೆಯಿಂದ ಅಧೈರ್ಯ ಮತ್ತು ಬಲಹೀನತೆಯಿಂದ ಅಂಥ ಪ್ರಕರಣಗಳನ್ನು ಬಯಲಿಗೆಳೆಯಲು ಪ್ರಬಲ ಜಾತಿಗಳೊಡನೆ ಸೆಣಸಲು ಸಾಧ್ಯವಾಗದೆ ಎಷ್ಟೋ ಪ್ರಕರಣಗಳು ಮುಚ್ಚಿ ಹೋಗಿವೆ.

ಹಿಂದುಳಿದ ವರ್ಗಗಳು ತಮಗೆ ಆಗಿರುವ-ಆಗುತ್ತಿರುವ ಇಂಥ ದುರಿತಗಳನ್ನು ಎದುರಿಸುವ ಎದೆಗಾರಿಕೆ ಅವರಿಗಿಲ್ಲ. ಜನಸಂಖ್ಯೆಯಲ್ಲಿ ಹೆಚ್ಚಿದ್ದರೂ ವರ್ಗ ಪ್ರಜ್ಞೆಯ ಕೊರತೆ, ಆರ್ಥಿಕ ದುಸ್ಥಿತಿ, ರಾಜಕೀಯ ದೌರ್ಬಲ್ಯದಿಂದಾಗಿ ಇಂತಹ ದುಷ್ಟ- ಅನಿಷ್ಟಗಳ ವಿರುದ್ಧ ಹೋರಾಡಲಾಗದ ಅವರನ್ನು ಅಸಹಾಯಕ ಸ್ಥಿತಿ ಆವರಿಸಿಕೊಂಡು ಬಿಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎನ್. ಲಿಂಗಪ್ಪ

contributor

Similar News