ಜ.26ರಿಂದ ಮಡಿಕೇರಿಯಲ್ಲಿ ಫಲಪುಷ್ಪ ಪ್ರದರ್ಶನ

Update: 2024-01-22 08:18 GMT

ಮಡಿಕೇರಿ, ಜ.21: ಭಾರತದ ಸ್ಕಾಟ್‌ಲ್ಯಾಂಡ್, ದಕ್ಷಿಣದ ಕಾಶ್ಮೀರ ಕೊಡಗು ಜಿಲ್ಲೆ ಪ್ರವಾಸಿಗರದ ಸ್ವರ್ಗ ಎಂದೇ ಖ್ಯಾತಿ ಪಡೆದಿದ್ದು, ಮಡಿಕೇರಿಯ ರಾಜಾಸೀಟ್ ಪ್ರವಾಸಿಗರ ಹಾಟ್ ಸ್ಪಾಟ್ ಆಗಿದೆ.

ರಾಜಾಸೀಟ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಪ್ರತೀ ವರ್ಷವೂ ಅನೇಕ ವಿಶೇಷತೆಗಳ ನಡುವೆ ಜ.26ರಿಂದ 28ರವರೆಗೆ ಮಡಿಕೇರಿಯಲ್ಲಿ ‘ಫ್ಲವರ್ ಶೋ’ ನಡೆಯಲಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಅನೇಕ ರೀತಿಯ ಕಲಾಕೃತಿಗಳು ಹೂವಿನಿಂದ ಸೃಷ್ಟಿಯಾಗಲಿವೆ. ಜೊತೆಗೆ ಹಣ್ಣು, ತರಕಾರಿಗಳ ಕೆತ್ತನೆಗಳು ಇರಲಿವೆ.

ತೋಟಗಾರಿಕೆ ಇಲಾಖೆ ಈ ಸಂಬಂಧ ಪೂರ್ವ ಸಿದ್ಧತೆ ಕೈಗೊಳ್ಳುತ್ತಿದ್ದು, ಸುಣ್ಣಬಣ್ಣ ಬಳಿದು ಸಿಂಗರಿಸುವುದರ ಜೊತೆಗೆ 15 ಸಾವಿರ ಹೂ ಗಿಡಗಳನ್ನು ಬೆಳೆಸಿದೆ. ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನವಷ್ಟೇ ಮಡಿಕೇರಿ ಫ್ಲವರ್ ಶೋ ಪ್ರಖ್ಯಾತಿ ಗಳಿಸಿದ್ದು, ಕಳೆದ ವರ್ಷ 30 ಸಾವಿರದಷ್ಟು ಮಂದಿ ವೈಭವವನ್ನು ಕಣ್ತುಂಬಿಕೊಂಡಿದ್ದರು. ಈ ವರ್ಷ ಸಾಲು ಸಾಲು ರಜೆ ಇರುವ ಕಾರಣ 40 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆಯನ್ನು ಹೊಂದಲಾಗಿದೆ.

25 ಸಾವಿರ ವೈವಿಧ್ಯಮಯ ಹೂ ಬಳಸಿಕೊಂಡು ಜಿಲ್ಲೆಯ ಕಕ್ಕಬ್ಬೆಯಲ್ಲಿರುವ ಪಾಡಿ ಇಗ್ಗುತ್ತಪ್ಪ ದೇವಾಲಯದ ಕಲಾಕೃತಿಯನ್ನು ಈ ಬಾರಿ ರಚಿಸಲಾಗುತ್ತಿದ್ದು, ‘ಫ್ಲವರ್ ಶೋ’ನ ಪ್ರಮುಖ ಆಕರ್ಷಣೆ ಇದಾಗಲಿದೆ. ಸೇವಂತಿಗೆ, ಗುಲಾಬಿ, ಅಸ್ಟರ್ ಜೊತೆಗೆ ಬೇರೆ ಬೇರೆ ಜಾತಿಗಳ ಹೂಗಳನ್ನು ಬಳಸಿ 30 ಅಡಿ ಅಗಲ, 35 ಅಡಿ ಉದ್ದ ಹಾಗೂ 14 ಅಡಿ ಎತ್ತರದ ಬೃಹತ್ ದೇವಾಲಯವನ್ನು ಹೂವಿನಲ್ಲಿ ಸೃಷ್ಟಿಸಲಾಗುತ್ತಿದೆ.

ಗಣರಾಜ್ಯೋತ್ಸವ ಅಂಗವಾಗಿ ಫಿರಂಗಿ, ರಾಷ್ಟ್ರ ಧ್ವಜ ಹಾಗೂ ಸೈನಿಕನ ಕಲಾಕೃತಿ ವಿಶೇಷವಾಗಿ ಮೂಡಿಬರಲಿದ್ದು, ಇದರೊಂದಿಗೆ ಹೃದಯದ ಆಕಾರದಲ್ಲಿ ತ್ರಿವರ್ಣ ಧ್ವಜದ ಫೋಟೊ ಪಾಯಿಂಟ್, ಚಿಟ್ಟೆ, ಬಲೂನ್ ಹಾರುವ, ನೀರು ಹರಿಯುವ ರೀತಿ, ಚೋಟ ಭೀಮ್, ಬಾರ್ಬಿ ಡಾಲ್, ಸ್ಪೆಡರ್ ಮ್ಯಾನ್, ಬ್ಯಾಟ್ ಮ್ಯಾನ್, ಹುಲಿ, ಅಣಬೆಯ ಕಲಾಕೃತಿಗಳನ್ನು ಹೂವಿನಲ್ಲಿ ರಚಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಹಣ್ಣು, ತರಕಾರಿಗಳ ಕೆತ್ತನೆಯನ್ನು ಪ್ರದರ್ಶನಕ್ಕಿಡುತ್ತಾರೆ.

ವಿವಿಧ ಕಾರ್ಯಕ್ರಮ

ಫಲಪುಷ್ಪ ಪ್ರದರ್ಶನದೊಂದಿಗೆ ಹೂವಿನ ಕುಂಡಗಳ ಪ್ರದರ್ಶನ, ವಿವಿಧ ಇಲಾಖೆ ವಸ್ತು ಪ್ರದರ್ಶನ, ಕೃಷಿ ವಸ್ತು ಪ್ರದರ್ಶನ, ಹಣ್ಣು ತರಕಾರಿ ಪ್ರದರ್ಶನ, ಒಣಹೂಗಳ ಜೋಡಣೆ, ಇಕೆಬಾನಾ, ರಂಗೋಲಿ ಸ್ಪರ್ಧೆ ನಡೆಯಲಿದೆ. ಜ.26 ರಂದು ಬೆಳಗ್ಗೆ 8 ಗಂಟೆಗೆ ರಂಗೋಲಿ ಸ್ಪರ್ಧೆ ನಡೆಯಲಿದ್ದು, ಆಸಕ್ತರು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಅಥವಾ ಸ್ಥಳದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಉದ್ದೇಶಿಸಿರುವ ಪ್ರದರ್ಶನಗಳು ರಾಜಾಸೀಟ್ ಸಮೀಪದ ಗಾಂಧಿ ಮೈದಾನದಲ್ಲಿ ನಡೆಯಲಿದೆ.

ಕಾರ್ಯಕ್ರಮಕ್ಕೆ ಒಟ್ಟು 30 ಲಕ್ಷ ರೂ. ವೆಚ್ಚ ತಗುಲಲಿದ್ದು, ಕಲಾಕೃತಿ ರಚನೆಗೆ ಟೆಂಡರ್ ನೀಡಲಾಗುತ್ತದೆ. ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಸಿದ್ಧತೆ ಕೈಗೊಂಡಿದ್ದು, ಈ ಬಾರಿ 40 ಸಾವಿರ ಜನ ಆಗಮಿಸುವ ಸಾಧ್ಯತೆ ಇದೆ. ಶಾಲೆಯ ಮೂಲಕ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ ಇರಲಿದ್ದು, ಮಾಮೂಲಿಯಂತೆ ಪ್ರವೇಶ ಶುಲ್ಕ ಹೆಚ್ಚು ಮಾಡುವುದಿಲ್ಲ. 3 ದಿನಗಳು ಕಾರ್ಯಕ್ರಮ ನಡೆಯಲಿದ್ದು, ಹೂ ಬಾಡುವ ತನಕ ಕಲಾಕೃತಿ ಹಾಗೆಯೇ ಇರಲಿದೆ.

- ಎಚ್.ಆರ್.ಯೋಗೇಶ್,

ತೋಟಗಾರಿಕೆ ಇಲಾಖೆ ಉಪನಿರ್ದೇಶಕ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎಂ ಇಸ್ಮಾಯಿಲ್ ಕಂಡಕರೆ

contributor

Similar News