ಆಡು ಜೀವನ - ಕಂಬಳಿ ಹುಳವೊಂದು ಚಿಟ್ಟೆಯಾಗಿ ರೂಪಾಂತರಗೊಂಡಾಗ...

ಕಂಬಳಿ ಹುಳವೊಂದಕ್ಕೆ ರೆಕ್ಕೆ ಮೂಡಿ ಚಿಟ್ಟೆಯಾದಂತೆ, ನಜೀಬ್ ಎಂಬ ಕೇರಳ ನಿವಾಸಿ ಮರುಭೂಮಿಯಲ್ಲಿ ಅನುಭವಿಸಿದ ಹೃದಯವಿದ್ರಾವಕ ಬದುಕು ಕಾದಂಬರಿಯಾಗಿ, ಆ ಬಳಿಕ ಸಿನೆಮಾ ಆಗಿ ರೂಪಾಂತರಗೊಂಡ ಬಗೆಯೇ ವಿಸ್ಮಯ ಹುಟ್ಟಿಸುತ್ತದೆ.

Update: 2024-04-18 07:05 GMT

ಇತ್ತೀಚೆಗೆ ತೆರೆಕಂಡ ಬಹುನಿರೀಕ್ಷಿತ ‘ಆಡು ಜೀವಿದಂ’ ಸಿನೆಮಾ ಮಲಯಾಳಂ ಭಾಷೆಯಲ್ಲಿ ಪ್ರಕಟಿತ ‘ಆಡು ಜೀವಿದಂ’ ಎಂಬ ಕಾದಂಬರಿ ಆಧಾರಿತ ಚಿತ್ರ. ಈ ಸಿನೆಮಾ ಪೂರ್ತಿಗೊಳಿಸಲು ಚಿತ್ರತಂಡ 14 ವರ್ಷಗಳನ್ನು ತೆಗೆದುಕೊಂಡಿದೆ. ಚಿತ್ರೀಕರಣ ಆರಂಭಗೊಂಡ ದಿನದಿಂದ ನಿರ್ದೇಶಕ ಬ್ಲೆಸ್ಸಿ ತಂಡ ಸವಾಲುಗಳನ್ನು ಎದುರಿಸಿದ್ದು ಒಂದೆರಡಲ್ಲ. ಕೋವಿಡ್ ಅಲೆಗಳ ಸಂದರ್ಭದಲ್ಲಿ ಚಿತ್ರೀಕರಣ ಅರ್ಧಕ್ಕೆ ಮೊಟಕುಗೊಳಿಸಬೇಕಾಗಿ ಬಂದದ್ದೂ ಇದೆ. ಕೊನೆಗೂ ಎಲ್ಲರ ನಿರೀಕ್ಷೆಯಂತೆ ಸಿನೆಮಾ ಬಿಡುಗಡೆಯಾಗಿ ನೂರು ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ ಬಾಚಿಕೊಂಡಿದೆ.

ಕಾದಂಬರಿ ಪರಿಚಯ:

‘ಆಡು ಜೀವಿದಂ’ ಮಲಯಾಳಂ ಕಾದಂಬರಿಯನ್ನು ಬರೆದವರು ಖ್ಯಾತ ಲೇಖಕ, ಕಥೆಗಾರ, ಕೇರಳ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಬೆನ್ಯಾಮೀನ್. ಈ ಕಾದಂಬರಿ ಇಂಗ್ಲಿಷ್, ಅರೇಬಿಕ್, ಕನ್ನಡ, ತಮಿಳು, ಹಿಂದಿ ಭಾಷೆಗಳಿಗೂ ಅನುವಾದಗೊಂಡಿದೆ. ಖ್ಯಾತ ಲೇಖಕ ಡಾ. ಅಶೋಕ್ ಕುಮಾರ್‌ರವರು ‘ಆಡುಜೀವನ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಅರೇಬಿಕ್ ಭಾಷೆಗೆ ಸುಹೈಲ್ ವಾಫಿ ಎಂಬವರು ಅನುವಾದಿಸಿದ್ದು, ‘ಅಯ್ಯಾಮುಲ್ ಮಾಯಿಝ್’ ಎಂಬ ಶೀರ್ಷಿಕೆ ನೀಡಲಾಗಿದೆ.

ಕೇರಳದ ಆಲಪ್ಪುಝ ಜಿಲ್ಲೆಯ ಆರಾಟ್ಟುಪುಝ ಎಂಬಲ್ಲಿಯ ನಜೀಬ್ ಎಂಬವರ ಗಲ್ಫ್ ಬದುಕಿನಲ್ಲಿ ಸಂಭವಿಸಿದ ನೈಜ ಘಟನೆಗಳನ್ನಾಧರಿಸಿ ಈ ಕಾದಂಬರಿಯನ್ನು ರಚಿಸಲಾಗಿದೆ. ಈಗ ಬಿಡುಗಡೆಗೊಂಡಿರುವ ಸಿನೆಮಾದಲ್ಲಿ ಮಲಯಾಳಂ ನಟ ಪೃಥ್ವಿರಾಜ್, ಕಾದಂಬರಿಯ ಪ್ರಧಾನ ಪಾತ್ರವಾದ ನಜೀಬ್‌ನ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಅಂದ ಹಾಗೆ, ಲಾಕ್‌ಡೌನ್‌ಗೂ ಮುನ್ನ ಸಿನೆಮಾ ಚಿತ್ರೀಕರಣ ತಂಡವು, ಜೋರ್ಡಾನ್‌ನ ಮರುಭೂಮಿಗೆ ಚಿತ್ರೀಕರಣಕ್ಕಾಗಿ ತೆರಳಿತ್ತು. ಶೂಟ್ ಮುಗಿಸಿ ಹಿಂದಿರುಗಬೇಕೆನ್ನುವಷ್ಟರಲ್ಲಿ ಲಾಕ್‌ಡೌನ್ ಘೋಷಣೆಯಾಗಿ, ವಿಮಾನಯಾನ ಸ್ಥಗಿತ ಗೊಂಡು ಚಿತ್ರೀಕರಣ ತಂಡವೂ ಮರುಭೂಮಿಯಲ್ಲೇ ಉಳಿಯಬೇಕಾಗಿ ಬಂದಿತ್ತು.

ನಜೀಬ್‌ನ ಕಥೆ, ವ್ಯಥೆ:

ಸಂಕ್ಷಿಪ್ತವಾಗಿ ಹೇಳುವುದಾದರೆ, ‘ಆಡು ಜೀವನ’ದ ಕಥಾನಾಯಕ ನಜೀಬ್ (ಇವರು ಈಗಲೂ ಬದುಕಿದ್ದಾರೆ) ಸರಳ ಬದುಕನ್ನು ಸಾಗಿಸುತ್ತಿದ್ದ ಒಬ್ಬ ಮಲಯಾಳಿ. ತನ್ನದೇ ಗ್ರಾಮದಲ್ಲಿ ನದಿಯಿಂದ ಮರಳು ತುಂಬುವ ಕೆಲಸ ಮಾಡಿ ಬದುಕು ದೂಡುತ್ತಿದ್ದವನು. ಸಿಗುವ ಸಣ್ಣ ಕೂಲಿಯಿಂದ ಜೀವನ ನಿರ್ವಹಣೆ ಅಸಾಧ್ಯವೆನಿಸಿದಾಗ ಎಲ್ಲರಂತೆಯೇ ನಜೀಬನೂ ಗಲ್ಫ್ ಬದುಕಿನ ಕನಸು ಕಂಡು, ಹೇಗೋ ವೀಸಾ ಸಂಪಾದಿಸಿ ಅಲ್ಲಿಗೆ ಹೋಗುತ್ತಾನೆ.

ಕಂಪೆನಿ ವೀಸಾದಲ್ಲಿ ಕೆಲಸಕ್ಕೆಂದು ಹೋದ ನಜೀಬ್ ವಿಮಾನ ನಿಲ್ದಾಣದಲ್ಲಿ ತನ್ನ ಪ್ರಾಯೋಜಕನನ್ನು ಗುರುತಿಸಲು ವಿಫಲನಾಗುತ್ತಾನೆ. ಕೊನೆಗೆ ಇನ್ಯಾವನೋ ಒಬ್ಬ ಬಂದು ನಜೀಬ್ ಮತ್ತು ಸ್ನೇಹಿತ ಹಕೀಮ್‌ನನ್ನು ಕರೆದುಕೊಂಡು ಆಡು, ಒಂಟೆ ಸಾಕಣೆ ಕೇಂದ್ರಕ್ಕೆ (ಮಝರ) ತಂದು ಬಿಡುತ್ತಾನೆ. ಅಲ್ಲಿ ಇವರಿಗೆ ಆಡು, ಒಂಟೆಗಳನ್ನು ನೋಡಿಕೊಳ್ಳುವ ಕೆಲಸ. ಜೊತೆಗೆ ಬಂದಿದ್ದ ಹಕೀಮ್‌ಗೂ ಇನ್ನೊಂದು ಮಝರದಲ್ಲಿ ಕೆಲಸ. ಆದರೆ ಒಂದಕ್ಕೊಂದು ಮಝರ ಸಂಪರ್ಕಕ್ಕೆ ಸಿಗದಷ್ಟು ದೂರ.

ಮಾಲಕ ಅರ್ಬಾಬ್ ನಿಷ್ಕರುಣಿ. ನಜೀಬನಿಗೆ ಗೊತ್ತಿರುವುದು ಮಲಯಾಳಂ ಮಾತ್ರ. ಮರಳುಗಾಡು, ಅರಿಯದ ಭಾಷೆ, ಕ್ರೂರಿ ಅರ್ಬಾಬ್.... ಇಂತಹ ಪರಿಸ್ಥಿತಿಯಲ್ಲಿ ನಜೀಬನ ಬದುಕು ಸಿಕ್ಕಿ ಹಾಕಿಕೊಳ್ಳುತ್ತದೆ. ಮಾಲಕ ಹೇಳಿದ ಕೆಲಸ ಮಾಡದಿದ್ದರೆ ತನ್ನ ಸೊಂಟಕ್ಕೆ ಸುತ್ತಿದ ಬೆಲ್ಟ್ ಬಿಚ್ಚಿ ನಜೀಬನನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದ. ಕೋವಿ ತಂದು ಸುಟ್ಟು ಹಾಕುತ್ತೇನೆಂದು ಗದರಿಸುತ್ತಿದ್ದ.

ಆಡು ಸಾಕಣೆ ಕೇಂದ್ರಕ್ಕೆ ಟ್ಯಾಂಕರಿನಲ್ಲಿ ಸಾಕಷ್ಟು ನೀರು ತಂದು ಸುರಿಯುತ್ತಾರೆ. ಆದರೆ, ಅದು ಆಡುಗಳಿಗೆ ಮಾತ್ರ. ಅದನ್ನು ನಜೀಬ್ ಮುಟ್ಟುವಂತಿಲ್ಲ. ಕುಡಿಯುವುದಕ್ಕೆ ಅರ್ಬಾಬ್ ಕುಡಿದು ಮಿಕ್ಕಿದ ಹಾಲು ಸಿಗುತ್ತೆ. ನೀರು ಸಿಗದು. ಕಕ್ಕಸಿಗೆ ಹೋದರೆ ಅಂಡು ತೊಳೆಯುವಂತಿಲ್ಲ. ಸ್ನಾನದ ಮಾತಂತೂ ಇಲ್ಲವೇ ಇಲ್ಲ. ಊರಿನ ನದಿಯ ನೀರಿನಲ್ಲಿ ಚೆಲ್ಲಾಟವಾಡುತ್ತಿದ್ದ ನಜೀಬನಿಗೆ ಇಲ್ಲಿ ಯಾವುದಕ್ಕೂ ನೀರಿಲ್ಲ. ಆಕಸ್ಮಿಕವಾಗಿ ನೀರು ಬಳಸಿದರೆ ಅರ್ಬಾಬ್‌ನ ಕೈಗೆ ಮತ್ತೆ ಬೆಲ್ಟ್ ಬರುತ್ತದೆ. ಇಂತಹ ಪರಿಸ್ಥಿತಿಯಿಂದ ನಜೀಬ್ ಹೇಗೆ ಅಲ್ಲಿಂದ ಓಡಿ ಪಾರಾಗುತ್ತಾನೆ ಅನ್ನುವುದೇ ಸಂಪೂರ್ಣ ಕಥೆ.

ಇಲ್ಲಿ ಕ್ರೂರ ಪ್ರಾಣಿಗಳಿಗಿಂತಲೂ ಕ್ರೌರ್ಯ ಅರ್ಬಾಬ್‌ನಲ್ಲಿ ಕಾಣುತ್ತೇವೆ. ಆಡುಗಳೊಂದಿಗೆ ಬೆಳೆಯುತ್ತಾ ನಜೀಬನೂ ಒಂದು ಆಡಾಗಿ ರೂಪಾಂತರಗೊಳ್ಳುತ್ತಾನೆ. ತನ್ನ ಊರಿನ ಅನೇಕರ ಹೆಸರನ್ನು ಆಡುಗಳಿಗಿಟ್ಟು ಸಂತೋಷಪಡುತ್ತಾನೆ. ಅರ್ಬಾಬ್‌ನಿಂದ ತಪ್ಪಿಸಿಕೊಳ್ಳಲು ನಜೀಬ್ ಒಂದೆರಡು ಸಲ ವಿಫಲಯತ್ನ ನಡೆಸುತ್ತಾನೆ. ಆದರೆ, ಕೊನೆಗೂ ಅಲ್ಲಿಂದ ತಪ್ಪಿಸಿಕೊಳ್ಳುವ ಶುಭದಿನ ಬರುತ್ತದೆ. ಪಕ್ಕದ ಮಝರದ ಹಕೀಮ್ ಹಾಗೂ ಸೊಮಾಲಿಯಾದ ಇಬ್ರಾಹೀಂ ಖಾದಿರಿ ನಜೀಬನಿಗೆ ಜೊತೆಯಾಗುತ್ತಾರೆ. ಅಲ್ಲಿಂದ ಮುಂದೆ ಮರುಭೂಮಿಯ ಭೀಕರ ಪರಿಚಯವಾಗುತ್ತದೆ. ಮರುಭೂಮಿಯ ಓಟದ ನಡುವೆ ನಡೆಯುವ ಘಟನೆಗಳು, ಸೂಚನೆಯೇ ನೀಡದೆ ಬರುವ ಬಿರುಗಾಳಿ, ವಿಷಕಾರಿ ಹಾವುಗಳ ಓಡಾಟ, ದಾಹದಿಂದ ಕಂಗಾಲಾಗಿ ಹೋಗುವ ಅನುಭವಗಳು ಪ್ರೇಕ್ಷಕರನ್ನು ಉಸಿರು ಬಿಗಿ ಹಿಡಿಯುವಂತೆ ಮಾಡುತ್ತವೆ.

ದಾರಿ ಮಧ್ಯೆ ಹಕೀಮ್ ನೀರು ಸಿಗದೆ ರಕ್ತಕಾರಿ ಅಸುನೀಗುತ್ತಾನೆ. ಹಿರಿಯನಾದ ಇಬ್ರಾಹೀಂ ಖಾದಿರಿ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾನೆ. ನಜೀಬ್ ಒಬ್ಬನೇ ನೀರುಗಟ್ಟಿದ ಪಾದಗಳನ್ನು ಎಳೆದುಕೊಂಡೇ ದಾರಿಯನ್ನು ತಲುಪುತ್ತಾನೆ. ಅಲ್ಲಿಂದ ಅರಬಿಯೊಬ್ಬ ತನ್ನ ಕಾರಿನಲ್ಲಿ ಹತ್ತಿಸಿ ನಜೀಬನನ್ನು ಬತ ಪಟ್ಟಣದಲ್ಲಿ ಇಳಿಸುತ್ತಾನೆ. ಅಲ್ಲಿ ಕೇರಳದ ಕುಂಜಿಕ್ಕನೆಂಬ ಹೊಟೇಲ್ ಮಾಲಕ ನಜೀಬನ ಮುಂದೆ ದೇವರಂತೆ ಪ್ರತ್ಯಕ್ಷರಾಗುತ್ತಾರೆ. ನಜೀಬನ ಕಥೆ ಕೇಳಿ ಕುಂಜಿಕ್ಕ, ಅವನನ್ನು ಕೇರಳಕ್ಕೆ ಕಳುಹಿಸುವ ಏರ್ಪಾಡು ಮಾಡುತ್ತಾರೆ.

ಕಾದಂಬರಿ ಮತ್ತು ಸಿನೆಮಾ: ಒಂದು ನೋಟ

ಆಡು ಜೀವನ ಕೃತಿಯಲ್ಲಿ ಕಥೆ ಆರಂಭದ ನಾಲ್ಕು ಭಾಗಗಳಲ್ಲಿ ನಜೀಬ್ ಸೌದಿ ಜೈಲು ತಲುಪಿದ್ದು ಹೇಗೆ ಮತ್ತು ಜೈಲಿನ ದಿನಗಳು ಹೇಗಿತ್ತು ಎಂಬುದನ್ನು ಕಟ್ಟಿಕೊಡಲಾಗಿದೆ. ಹೊರಗಿನ ಬದುಕಿಗಿಂತ ಸದ್ಯಕ್ಕೆ ಆತನಿಗೆ ಜೈಲೇ ಏಕೆ ಮುಖ್ಯವಾಗಿ ಕಂಡಿತ್ತು ಮತ್ತು ಅದಕ್ಕೂ ಹಿಂದಿನ ಆ ಜೀವನದಲ್ಲಿ ಆತ ಜೈಲನ್ನೂ ಮೀರಿಸುವ ಅದ್ಯಾವ ಪರಿಯ ಶಿಕ್ಷೆಗೆ ಒಳಗಾಗಿದ್ದ, ಅದೆಷ್ಟು ಸಂಕಷ್ಟಗಳ ಬೆಂಕಿಯುಂಡೆಗಳನ್ನು ನುಂಗಿ ಬದುಕಿದ್ದ ಎನ್ನುವುದನ್ನು ಆರಂಭದಲ್ಲಿ ಹೇಳಲಾಗಿದೆ. ಬಹುಶಃ ಓದುಗರ ಕುತೂಹಲಕ್ಕಾಗಿ ಆ ರೀತಿ ಕ್ಲೈಮ್ಯಾಕ್ಸ್‌ನ ಭಾಗ ಮೊದಲೇ ಸೇರಿಸಿರಬಹುದು.

ಸಿನೆಮಾ ಕ್ಲೈಮ್ಯಾಕ್ಸ್‌ನಲ್ಲಿ ಅದನ್ನು ಕಿರಿದಾಗಿಸಿ ತೋರಿಸಲಾಗಿದೆ. ಜೈಲಿನ ಆ ದಿನಗಳನ್ನು ಅಲ್ಲಿ ತೋರಿಸಲಾಗಿಲ್ಲ. ಸಿನೆಮಾದ ಕಥೆ ನಜೀಬ್ ಮತ್ತು ಹಕೀಮ್ ಇಬ್ಬರೂ ಊರಿನಿಂದ ಸೌದಿಗೆ ಬಂದು ತಲುಪುವ ದೃಶ್ಯದಿಂದ ಆರಂಭವಾಗುತ್ತದೆ. ಅಲ್ಲಿಂದ ಮಝರ ತಲುಪುವುದು, ಅಲ್ಲಿನ ವ್ಯಥೆ, ಸಂಕಷ್ಟಗಳ ಸರಮಾಲೆ ಎಲ್ಲದರಲ್ಲಿಯೂ ನಟ ಪೃಥ್ವಿರಾಜ್ ಪ್ರತಿಯೊಂದು ದೃಶ್ಯಗಳಲ್ಲಿಯೂ ನಜೀಬ್ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಮಧ್ಯಂತರದ ನಂತರ ಬರುವ ನಜೀಬ್ ಸೊರಗಿ ಹೋದ ದೇಹ, ಬಳಲಿ ಬೆಂಡಾದ ಬೆನ್ನು, ಜಡೆಗಟ್ಟಿದ ಕೂದಲು, ಉದ್ದನೆಯ ಗಡ್ಡ, ಎಲುಬುಗಳಷ್ಟೇ ಕಾಣಿಸುವಂತಹ ನಜೀಬ್‌ನನ್ನು ತೆರೆಯ ಮೇಲೆ ನೋಡಿದಾಗ, ಮರುಭೂಮಿಯ ಭೀಕರತೆ ಕಣ್ಣಿಗೆ ಕಟ್ಟುತ್ತದೆ. ಆ ಪಾತ್ರಕ್ಕಾಗಿ ಪೃಥ್ವಿರಾಜ್ ಮಾಡಿರುವ ರೂಪಾಂತರ ಮೈಜುಮ್ಮೆನಿಸುವಂತೆ ಮಾಡುತ್ತದೆ.

ಹಕೀಮ್ ಕೂಡಾ ಇಂತಹುದೇ ಯಾತನೆ, ನೋವು ಅನುಭವಿಸಿದ್ದರೂ, ಹಕೀಮ್ ಇದ್ದ ಮಝರದ ದೃಶ್ಯಗಳಿಲ್ಲ. ಮಧ್ಯಂತರದ ಬಳಿಕ ಹಕೀಮ್, ಇಬ್ರಾಹೀಂ ಖಾದಿರಿ ಸೇರಿದಂತೆ ಮೂವರೂ ಮರಳುಗಾಡಿನಲ್ಲಿ ನಡೆದಾಡುವ ದೃಶ್ಯಗಳು, ಯಾವುದೇ ಸಮಯದಲ್ಲೂ ಬದಲಾಗಬಹುದಾದ ಅಲ್ಲಿನ ವಾತಾವರಣ, ವಿಷಜಂತುಗಳ ಆಕ್ರಮಣ, ಧೂಳಿನ ಅಬ್ಬರದೊಂದಿಗೆ ಬೀಸುವ ಬಿರುಗಾಳಿ, ರಾತ್ರಿ ವೇಳೆಯ ಮೈಕೊರೆಯುವ ಚಳಿ, ಮಧ್ಯಾಹ್ನದ ರಣಬಿಸಿಲು, ಒಂದು ಹನಿ ನೀರೂ ಸಿಗದ ಪರಿಸ್ಥಿತಿಯಲ್ಲಿ ನೀರುಗಟ್ಟಿದ ಪಾದವನ್ನು ಮರಳಿನಲ್ಲಿ ಎಳೆಯುತ್ತಲೇ ಮೂವರೂ ಗುರಿ ತಲುಪಲು ಹೆಜ್ಜೆ ಹಾಕುವ ದೃಶ್ಯಗಳು ಭಯಾನಕವೆನಿಸುವಂತಹದ್ದು.

ಇಲ್ಲಿ ಸಮಸ್ಯೆ ಏನೆಂದರೆ, ಬಹುತೇಕರು ಈ ಕೃತಿ ಓದಿದವರೇ ಚಿತ್ರ ನೋಡುವುದರಿಂದ ಕೃತಿ ಓದುವಾಗ ಓದುಗರ ಕಲ್ಪನೆಯಲ್ಲಿ ಮೂಡಿದ ನಜೀಬ್, ಹಕೀಮ್, ಇಬ್ರಾಹೀಂ ಖಾದಿರಿ ಅವರ ಯಾತನೆಗಳನ್ನು ಮೀರಿ ಚಿತ್ರ ಬಂದಿರಬಹುದು. ಕೆಲವೊಮ್ಮೆ ಓದುಗರ ಕಲ್ಪನೆಯಷ್ಟು ಮೂಡಿ ಬಂದಿರದೆ ಇರಲೂಬಹುದು. ಅಲ್ಲಿ ಕೃತಿ ಮತ್ತು ಸಿನೆಮಾ ನಡುವೆ ಸಂಘರ್ಷ ಏರ್ಪಡುವ ಸಾಧ್ಯತೆಗಳಿವೆ.

ಲೇಖಕ ಹೇಳುವಂತೆ, ಮರುಭೂಮಿಯಿಂದ ಮೂವರು ಹೊರಟರೂ ಕೊನೆಗೆ ಊರಿಗೆ ತಲುಪುವುದು ನಜೀಬ್ ಮಾತ್ರ. ಹಕೀಮ್ ಎಂಬ ಕಥಾಪಾತ್ರವನ್ನು ಅರ್ಧದಿಂದಲೇ ಕೊನೆಗೊಳಿಸಬೇಕೆಂದು ನಿರ್ಧರಿಸಿದ್ದಕ್ಕೂ ಒಂದು ಕಾರಣವಿದೆ. ಊರಿನಿಂದ ಕನಸುಗಳ ಮೂಟೆ ಹೊತ್ತು ವಿದೇಶಕ್ಕೆ ಹಾರಿ ಬರುವವರ ಪೈಕಿ ನಜೀಬ್, ಹಕೀಮ್‌ನಂತಹ ಅದೆಷ್ಟೋ ಮಂದಿ ಇರಬಹುದು. ಅವರಲ್ಲಿ ಕೆಲವರು ಅದೃಷ್ಟದಿಂದ ಪಾರಾಗಿ ಊರು ತಲುಪಿರಬಹುದು. ಆದರೆ ಹೆಚ್ಚಿನವರು ಹಕೀಮ್‌ನಂತೆ ಅರ್ಧದಲ್ಲೇ ಪ್ರಾಣಕಳಕೊಂಡವರಿರಬಹುದು. ಹಾಗಾಗಿ, ಎರಡು ಆಯಾಮಗಳಲ್ಲಿ ಕಥೆ ತಿರುವು ಪಡೆಯಲಿ ಎಂಬ ಕಾರಣಕ್ಕಾಗಿ ಆ ಕಥಾಪಾತ್ರವನ್ನು ಸಾಯಿಸಬೇಕಾಯಿತು ಎಂದು ಲೇಖಕ ಬೆನ್ಯಾಮೀನ್ ಹೇಳುತ್ತಾರೆ.

ನಜೀಬ್ ಊರಿನಲ್ಲಿದ್ದಾಗ ಮದುವೆಯಾದ ಹೊಸತಲ್ಲಿ ಪತ್ನಿ ಸೈನುರೊಂದಿಗೆ ಕಳೆಯುವ ಲವಲವಿಕೆಯ ರೋಮಾಂಚಕ ಪ್ರೀತಿಯ ಕ್ಷಣಗಳನ್ನು ಚಿತ್ರದಲ್ಲಿ ವಿಶೇಷವಾಗಿ ಕಟ್ಟಿಕೊಡಲಾಗಿದೆ. ನಜೀಬ್ ಪತ್ನಿ ಸೈನು ಪಾತ್ರದಲ್ಲಿ ಅಮಲಾ ಪೌಲ್ ಹಾಗೂ ಹಕೀಮ್ ಪಾತ್ರದಲ್ಲಿ ಕೆ.ಆರ್. ಗೋಕುಲ್, ಇಬ್ರಾಹೀಂ ಖಾದಿರಿ ಪಾತ್ರದಲ್ಲಿ ಹಾಲಿವುಡ್ ಸ್ಟಾರ್ ಜಿಮ್ಮಿ ಜೀನ್ ಲೂಯಿಸ್ ನಟಿಸಿದ್ದಾರೆ. ಚಿತ್ರವನ್ನು ಖ್ಯಾತ ಚಿತ್ರ ನಿರ್ದೇಶಕ ಬ್ಲೆಸ್ಸಿ ನಿರ್ದೇಶಿಸಿದ್ದಾರೆ. ವಿಶೇಷ ಅಂದರೆ ಹಕೀಮ್ ಪಾತ್ರಧಾರಿ ಗೋಕುಲ್ ಕೂಡಾ ತನ್ನ ಪಾತ್ರಕ್ಕಾಗಿ ಬದಲಾಗಿರುವುದು. ಈ ಬಗ್ಗೆ ಪೃಥ್ವಿರಾಜ್ ಅವರೇ ಕೊಂಡಾಡಿದ್ದಾರೆ.

ಒಟ್ಟಿನಲ್ಲಿ, ಕೃತಿಯಲ್ಲಿ ಇರುವುದೆಲ್ಲವೂ ಸಿನೆಮಾದಲ್ಲಿ ಇದೆಯೇ ಎಂದು ಕೇಳಿದರೆ ಇಲ್ಲ. ಹಾಗೆಯೇ ಸಿನೆಮಾದಲ್ಲಿ ಇರುವುದೆಲ್ಲವೂ ಕೃತಿಯಲ್ಲಿದೆಯೇ ಎಂದು ಕೇಳಿದರೂ ಅದೇ ಉತ್ತರ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನಿಝಾಮ್ ಅನ್ಸಾರಿ, ಕಲ್ಲಡ್ಕ

contributor

Similar News