ಉದ್ಯಮಿಗಳ ಮನೆಗಳಲ್ಲಿಯೇ ಸರಕಾರ ರಚನೆಯ ವ್ಯೂಹ!?

Update: 2024-11-17 04:25 GMT

ಮೋದಿ ಸರಕಾರ ಅದಾನಿ ಸರಕಾರವಾಗಿದೆ, ಮೋದಿ ಅದಾನಿಗಾಗಿ ಕೆಲಸ ಮಾಡುತ್ತಾರೆ ಎಂಬ ಆರೋಪವನ್ನು ಕಾಂಗ್ರೆಸ್ ಹಿಂದಿನಿಂದಲೂ ಮಾಡುತ್ತಲೇ ಬಂದಿದೆ. ಆದರೆ ಮೋದಿ ಮಾತ್ರವೇ ಅದಾನಿಗಾಗಿ ಕೆಲಸ ಮಾಡುತ್ತಿಲ್ಲ. ಅದಾನಿ ಕೂಡ ಮೋದಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಈಗ ಖಚಿತವಾಗಿದೆ.

ಬಿಜೆಪಿ ಸಭೆಯಲ್ಲಿ ಅದಾನಿ ಪಾಲ್ಗೊಂಡಿದ್ದರು ಎಂಬುದು ಈಗ ಬಯಲಾಗಿದೆ.

ಅವರೇಕೆ ಬಿಜೆಪಿ ಸಭೆಯಲ್ಲಿ ಇದ್ದರು ಎಂಬ ಪ್ರಶ್ನೆಯನ್ನು ರಾಹುಲ್ ಗಾಂಧಿ ಎತ್ತಿದ್ದಾರೆ. ಮುಂಬೈನ ಧಾರಾವಿಯ ಒಂದು ಲಕ್ಷ ಕೋಟಿ ರೂ. ಬೆಲೆಯ ಭೂಮಿಯನ್ನು ಈ ಸರಕಾರ ಅದಾನಿಗೆ ಕೊಡಲು ಮುಂದಾಗಿದೆ ಎಂದು ರಾಹುಲ್ ಆರೋಪಿಸಿದ್ದಾರೆ.

ಯಾಕೆ ಬಿಜೆಪಿ ಸಭೆಯಲ್ಲಿ ಅದಾನಿ ಇದ್ದರು ಎಂಬುದು ನಿಜಕ್ಕೂ ಕಳವಳಕಾರಿ.

2019ರ ಚುನಾವಣೆಯಲ್ಲಿ ಮಹಾರಾಷ್ಟ್ರ ಜನತೆ ದೇವೇಂದ್ರ ಫಡ್ನವೀಸ್ ವಿರುದ್ಧ ತಮ್ಮ ತೀರ್ಮಾನ ಕೊಟ್ಟಿದ್ದರು. ಅವರ ಸರಕಾರ ರಚನೆಯಾಗುವಂತಿರಲಿಲ್ಲ. ಆದರೆ ಅದೇ ನವೆಂಬರ್‌ನಲ್ಲಿ ಒಂದು ದಿನ ಬೆಳಗಿನ ಜಾವವೇ ರಾಜಭವನದಲ್ಲಿ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದ್ದರು.

ಅದಾದ 80 ಗಂಟೆಗಳಲ್ಲೇ ಅಜಿತ್ ಪವಾರ್ ಕೈಕೊಟ್ಟ ಪರಿಣಾಮ ಫಡ್ನವೀಸ್ ಸರಕಾರ ಬಿದ್ದುಹೋಗಿತ್ತು. ಅದಾದ ಬೆನ್ನಲ್ಲೇ ಉದ್ಧವ್ ಠಾಕ್ರೆ ಸರಕಾರ ರಚನೆಯಾಗಿತ್ತು. ಕಾಂಗ್ರೆಸ್ ಮತ್ತು ಎನ್‌ಸಿಪಿ ಅವರನ್ನು ಬೆಂಬಲಿಸಿದ್ದವು.

ಅದಾದ ಬಳಿಕ ಶಿವಸೇನೆಯಿಂದ ಏಕನಾಥ್ ಶಿಂದೆ ತಮ್ಮ ಬೆಂಬಲಿಗರ ಜೊತೆ ಹೊರಹೋಗಿ ಬಿಜೆಪಿಯೊಡನೆ ನಿಂತರು. ಮತ್ತೊಂದೆಡೆಯಿಂದ ಅಜಿತ್ ಪವಾರ್ ಜೊತೆಯಾದರು. ಶಿಂದೆ ಸರಕಾರ ರಚನೆಯಾಯಿತು ಮತ್ತು ಹಾಗೆ ಆಗುವಾಗ ಶಿವಸೇನೆ ಮತ್ತು ಎನ್‌ಸಿಪಿ ಎರಡು ಹೋಳಾಗಿದ್ದವು.

ಈಗ ನ್ಯೂಸ್ ಲಾಂಡ್ರಿಗೆ ಕೊಟ್ಟಿರುವ ಸಂದರ್ಶನದಲ್ಲಿ ಅಜಿತ್ ಪವಾರ್ ಬಯಲು ಮಾಡಿರುವ ಸಂಗತಿ ಬಹಳ ಗಂಭೀರವಾದದ್ದಾಗಿದೆ

ಆ ಸಂದರ್ಭದಲ್ಲಿ ರಾತ್ರೋ ರಾತ್ರಿ ಮಹಾರಾಷ್ಟ್ರದ ಶಾಸಕರು ಗುವಾಹಟಿ ಫೈವ್ ಸ್ಟಾರ್ ಹೊಟೇಲ್ ಮುಟ್ಟಿದ್ದರು. ಅಲ್ಲಿಂದ ಗೋವಾಕ್ಕೆ ಹೋಗಿದ್ದರು. ಅಲ್ಲಿ ಮೇಜಿನ ಮೇಲೆ ಹತ್ತಿ ಶಿವಸೇನೆ ಶಾಸಕರು ಕುಣಿದಿದ್ದರು.

ಯಾರ ದುಡ್ಡಿನಲ್ಲಿ ಅವತ್ತು ಇದೆಲ್ಲವೂ ಆಯಿತು ಮತ್ತು ಮೇಜು ಹತ್ತಿ ಕುಣಿಯುವುದಕ್ಕೆ ಎಷ್ಟು ಹಣ ಕೊಡಲಾಗಿತ್ತು ಎಂಬ ಪ್ರಶ್ನೆಗಳು ಆಗ ಮೂಡಿದ್ದವು. ಮಹಾರಾಷ್ಟ್ರ ರಾಜಕಾರಣದ ಈ ಕೊಳಕನ್ನಂತೂ ರಾಜ್ಯದ ಜನತೆ ನೋಡುವ ಹಾಗಾಗಿತ್ತು.

ಹೀಗೆ ಅವರೆಲ್ಲ ಕುಣಿದಾಡುವ ಮೊದಲು ಸರಕಾರ ರಚನೆ ವಿಚಾರವಾಗಿ ಒಂದು ಸಭೆ ನಡೆದಿತ್ತು. ಮತ್ತದು ನಡೆದದ್ದು ಅದಾನಿ ಮನೆಯಲ್ಲಿ.

2019ರ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿಯೊಂದಿಗೆ ಸರಕಾರ ರಚಿಸಲು ಬಿಜೆಪಿ ಮತ್ತು ಶರದ್ ಪವಾರ್ ನಡುವೆ ಸಭೆ ನಡೆದಿತ್ತು ಮತ್ತು ಆ ಸಭೆಯಲ್ಲಿ ಗೌತಮ್ ಅದಾನಿ ಕೂಡ ಇದ್ದರು ಎಂದು ಅಜಿತ್ ಪವಾರ್ ಹೇಳಿದ್ದಾರೆ.

ಎನ್‌ಡಿಎ ಜೊತೆ ಸೇರಿ ಸರಕಾರ ರಚಿಸುವ ಸಂಬಂಧ ನಡೆದಿದ್ದ ಆ ಸಭೆಯಲ್ಲಿ ಅಮಿತ್ ಶಾ, ದೇವೇಂದ್ರ ಫಡ್ನವೀಸ್, ಶರದ್ ಪವಾರ್, ಅಜಿತ್ ಪವಾರ್ ಇದ್ದರು.

ಈಗ ಶರದ್ ಪವಾರ್ ಅವರೂ ಅಂತಹ ಸಭೆ ನಡೆದಿದ್ದು ಹೌದು ಎಂದು ಖಚಿತಪಡಿಸಿದ್ದಾರೆ.

ಎನ್‌ಡಿಎಗೆ ಸೇರಿದರೆ, ತಮ್ಮ ಮತ್ತು ತಮ್ಮ ಪಕ್ಷದ ನಾಯಕರ ವಿರುದ್ಧ ನಡೆಯುತ್ತಿರುವ ಕೇಂದ್ರ ತನಿಖಾ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಕರಣಗಳು ಕೊನೆಗೊಳ್ಳುತ್ತವೆ ಎಂದು ಬಿಜೆಪಿ ಹೇಳಿತ್ತು.

ಆದರೆ ಬಿಜೆಪಿ ತನ್ನ ಭರವಸೆಯನ್ನು ಈಡೇರಿಸುತ್ತದೆ ಎಂಬ ವಿಶ್ವಾಸವಿರಲಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ.

ಆದರೆ ಅವರು ಏನು ಹೇಳುತ್ತಾರೆ ಎಂಬುದನ್ನು ಕೇಳೋಣ ಎಂದು ನಾಯಕರು ಹೇಳಿದಾಗ ಸಭೆಯಲ್ಲಿ ಭಾಗವಹಿಸಿದೆ ಎಂದು ಶರದ್ ಪವಾರ್ ಹೇಳುತ್ತಾರೆ.

ಸರಕಾರ ರಚನೆ ಸಂಬಂಧದ ರಾಜಕೀಯ ಸಭೆಯೊಂದು ಉದ್ಯಮಿಯ ಮನೆಯಲ್ಲಿ ನಡೆಯುತ್ತದೆ ಎನ್ನುವುದಾದರೆ ಚುನಾವಣೆಗೆ ಯಾವ ಅರ್ಥವಿದೆ?

ನಾಲ್ಕು ಜನರ ನಡುವೆ ನಡೆದ ಈ ರಹಸ್ಯ ಸಭೆಯ ವಿಚಾರ, ಈಗ 5 ವರ್ಷಗಳ ಬಳಿಕ ಬಯಲಿಗೆ ಬಂದಿದೆ. ಶಿವಸೇನೆ ಮತ್ತು ಎನ್‌ಸಿಪಿ ಎರಡು ಹೋಳಾಗಿದ್ದು, ಅವೆರಡೂ ಪಕ್ಷಗಳ ಒಂದು ಭಾಗ ಬಿಜೆಪಿ ಜೊತೆಗೂ, ಇನ್ನೆರಡು ಭಾಗ ಬಿಜೆಪಿಯ ವಿರುದ್ಧವೂ ಚುನಾವಣೆಯಲ್ಲಿವೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಅಮಿತ್ ಶಾ ಮತ್ತು ಶರದ್ ಪವಾರ್ ಆಟ ಸಾಗಿಯೇ ಬಂದಿದ್ದರ ಸುಳಿವನ್ನೂ ಇದು ನೀಡುತ್ತದೆ. ಬಹುಶಃ ಇಷ್ಟೆಲ್ಲ ಗೋಜಲು ಸೃಷ್ಟಿಯಾಗುವುದರ ಹಿಂದೆ ಈ.ಡಿ. ಅಸ್ತ್ರವಿತ್ತು. ಶರದ್ ಪವಾರ್ ಅವರ ಹೇಳಿಕೆ ಇದನ್ನು ಸ್ಪಷ್ಟಪಡಿಸಿದೆ.

ಮಹಾ ವಿಕಾಸ್ ಅಘಾಡಿಯ ಬಲವನ್ನು ಮುರಿಯುವುದು ಬಿಜೆಪಿಗೆ ಅಗತ್ಯವಾಗಿತ್ತು. ಆನಂತರದ ಆಟ ಒಂದೆರಡಲ್ಲ.

ಬಿಜೆಪಿ ತನಿಖಾ ಏಜನ್ಸಿಗಳನ್ನು ಸದಾ ತನ್ನ ರಾಜಕೀಯಕ್ಕಾಗಿ ಬಳಸುತ್ತಿದೆ. ತನಿಖೆಯ ತೂಗುಗತ್ತಿಯಿಂದ ಪಾರಾಗಲು ಅಜಿತ್ ಪವಾರ್ ಥರದ ನಾಯಕರು ಹೋಗಿ ಬಿಜೆಪಿ ಜೊತೆಗೆ ನಿಂತುಬಿಡುತ್ತಾರೆ.

ದುಡ್ಡು ಸುರಿದು ಶಾಸಕರನ್ನು ಖರೀದಿಸುವ ಅಡ್ಡದಾರಿಯಲ್ಲೇ ದೇಶದ ಶ್ರೀಮಂತ ಪಕ್ಷ ಸಾಗಿಬಂದಿದೆ.

ಕರ್ನಾಟಕ ಸಿಎಂ ಸಿದ್ದರಾಮಯ್ಯ ಕೂಡಾ ಈಚೆಗೆ ಬಿಜೆಪಿ ವಿರುದ್ಧ 2,500 ಕೋಟಿ ರೂ.ಆಮಿಷದ ಆರೋಪ ಮಾಡಿದ್ದಾರೆ.

‘‘ಕಳೆದ ಚುನಾವಣೆಯಲ್ಲಿ ಯಾರೂ ನಿರೀಕ್ಷಿಸದ ಮಟ್ಟದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿತ್ತು. ಇದನ್ನು ಸಹಿಸದ ಬಿಜೆಪಿಗರು, ಈ ಬಾರಿ ಹೇಗಾದರೂ ಸರಿ ನಮ್ಮ ಸರಕಾರ ಕೆಡವಲು 50 ಶಾಸಕರಿಗೆ ತಲಾ 50 ಕೋಟಿ ರೂ. ಆಫರ್ ನೀಡಲು ಮುಂದಾಗಿದ್ದರು. ಇದಕ್ಕೆ ನಮ್ಮ ಶಾಸಕರು ಒಪ್ಪಿರಲಿಲ್ಲ. ಹೀಗಾಗಿ ಬಿಜೆಪಿಯವರು ನನ್ನ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ’’ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸಿದ್ದರಾಮಯ್ಯನವರ ಹೇಳಿಕೆಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರುಗಳಾದ ಅನಿಲ್ ಲಾಡ್, ಜಿ. ಪರಮೇಶ್ವರ್ ಮೊದಲಾದವರು ಸಮರ್ಥಿಸಿಕೊಂಡಿದ್ದಾರೆ.

ಆದರೆ ಅವರು ಈ ಬಗ್ಗೆ ದೂರು ದಾಖಲಿಸಿಲ್ಲ, ತಮ್ಮದೇ ಸರಕಾರವಿದ್ದರೂ ತನಿಖೆಗೂ ಆದೇಶಿಸಿಲ್ಲ ಎಂಬುದು ಗಮನಾರ್ಹ.

ಬಿಜೆಪಿ ಅಧಿಕಾರ ಹಿಡಿಯುತ್ತ ಬಂದಿರುವುದೇ ಹಿಂಬಾಗಿಲ ಮೂಲಕ ಎನ್ನುವುದು ಜನರಿಗೂ ಗೊತ್ತಿದೆ.

ಜನರ ಬಳಿ ಬಂದು ವೋಟಿಗಾಗಿ ಕೇಳುವ ಬಿಜೆಪಿ, ಕಡೆಗೆ ಸರಕಾರ ರಚಿಸುವಾಗ ಹೋಗಿ ಅದಾನಿ ಮನೆಯಲ್ಲಿ ಸಭೆ ಮಾಡುತ್ತದೆ ಎನ್ನುವುದೂ ಕೂಡ ಈಗ ಜನರಿಗೆ ಗೊತ್ತಾಗಿದೆ.

ಈ.ಡಿ., ಐಟಿಯಂತಹ ಕೇಂದ್ರ ತನಿಖಾ ಸಂಸ್ಥೆಗಳೇ ಯಾವ ರಾಜ್ಯದಲ್ಲಿ ಯಾವ ಸರಕಾರ ರಚನೆಯಾಗಬೇಕು ಎಂಬುದನ್ನು ನಿರ್ಧರಿಸುವ ಪರಿಸ್ಥಿತಿ ಬಂದಿದೆ ಎಂಬುದೂ ಈಗ ಬಯಲಾಗಿದೆ.

ವಿಪಕ್ಷಗಳನ್ನು ಭ್ರಷ್ಟರು ಎಂದು ಪ್ರಚಾರ ಮಾಡುತ್ತಲೇ ಸ್ವತಃ ಹೇಗೆ ಬಿಜೆಪಿ ದೇಶದ ರಾಜಕೀಯವನ್ನು ಭ್ರಷ್ಟಗೊಳಿಸುತ್ತಾ ಬಂದಿದೆ, ಅದರಲ್ಲಿ ವಿಪಕ್ಷಗಳೂ ಸೇರಿದಂತೆ ಭ್ರಷ್ಟ ಪಕ್ಷಗಳು ಹೇಗೆ ತಮ್ಮ ಕೊಡುಗೆ ಕೊಡುತ್ತಾ ಬಂದಿವೆ ಎಂಬುದು ಈಗ ಎಲ್ಲರೆದುರು ಬಯಲಾಗಿದೆ.

ಇದೆಲ್ಲದರ ನಡುವೆಯೇ ಮತ್ತೊಂದು ಚುನಾವಣೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಿ.ಎನ್. ಉಮೇಶ್

contributor

Similar News