ಶಿಥಿಲಾವಸ್ಥೆಯಲ್ಲಿರುವ ಸರಗೂರಿನ ಸರಕಾರಿ ಪ್ರೌಢಶಾಲೆ

Update: 2024-03-20 08:17 GMT
Editor : jafar sadik | Byline : ಜಶೀಲಕೋಟೆ

 ಎಚ್.ಡಿ.ಕೋಟೆ: ಸರಗೂರು ತಾಲೂಕು ಕೇಂದ್ರ ಸ್ಥಾನದಲ್ಲಿರುವ ಸರಕಾರಿ ಪ್ರೌಢಶಾಲೆ ದುರಸ್ಥಿ ಕಾಣದೆ ಶಿಥಿಲಗೊಂಡಿದ್ದರೂ ಜೀವದ ಹಂಗು ತೊರೆದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯಲ್ಲಿ ದಿನ ಕಳೆಯಬೇಕಾದ ಸ್ಥಿತಿಯಿದೆ.

ತಾಲೂಕು ಕೇಂದ್ರ ಸ್ಥಾನದಲ್ಲಿ ಬಹುವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದ ಒಂದು ಕಡೆ ಸರಕಾರಿ ಪ್ರೌಢಶಾಲೆಯಿದ್ದು, ಶಾಲೆಯ ಕಟ್ಟಡ ಶಿಥಿಲಾವಸ್ಥೆಯಿಂದ ಕೂಡಿದೆ. 1978-79ರ ಸಾಲಿನಿಂದ ಸರಗೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳ ಕಲಿಕೆಯ ತಾಣವಾಗಿದ್ದ ಶಾಲೆ ಇಂದು ಶುಚಿತ್ವ ಕಾಣದೆ, ದುರಸ್ಥಿ ಕಾಣದೆ ದಿನದಿಂದ ದಿನಕ್ಕೆ ಶಿಥಿಲಾವಸ್ಥೆ ತಲುಪುತ್ತಿದೆ. ಶಾಲೆಯ ಹೊರಾಂಗಣದ ಮೇಲ್ಚಾವಣಿ ಸೀಲಿಂಗ್ ಕಳಚಿ ಬಿದ್ದು ಕಬ್ಬಿಣದ ಸಲಾಖೆಗಳು ತುಕ್ಕುಹಿಡಿಯುತ್ತಿವೆ.

ಸೀಲಿಂಗ್ ಎಲ್ಲಿ ಯಾವಾಗ ಕಳಚಿ ತಲೆಯ ಮೇಲೆ ಬೀಳುವುದೊ ಎನ್ನುವ ಆತಂಕದಲ್ಲಿ ವಿದ್ಯಾರ್ಥಿಗಳು ಜೀವ ಕೈಯಲ್ಲಿಡಿದುಕೊಂಡು ಕಲಿಯಬೇಕಾದ ದುಸ್ಥಿತಿ ಇದೆ. ಇಡೀ ಶಾಲೆ ಸುಣ್ಣಬಣ್ಣ ಕಾಣದೇ ಶವಾಗಾರದಂತಿದೆಯಾದರೂ ಶಾಲೆಯ ಕಡೆ ಸ್ಥಳೀಯ ಪ್ರತಿನಿಧಿಗಳಾಗಲಿ, ತಾಲೂಕಿನ ಶಾಸಕರಾಗಲಿ, ಸಚಿವರಾಗಲಿ ಶಾಲೆಯ ಕಡೆ ಗಮನ ಹರಿಸಿಲ್ಲ ಎನ್ನುವುದಕ್ಕೆ ಅವಸಾನದ ಅಂಚು ತಲುಪುತ್ತಿರುವ ಶಾಲೆಯ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಸ್ಥಳೀಯರ ಆರೋಪವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಸರಕಾರ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಸರಕಾರ ಘೋಷಣೆ ಮಾಡಿದೆ. ಆದರೆ ಸರಗೂರು ತಾಲೂಕು ಕೇಂದ್ರ ಸ್ಥಾನದ ಸರಕಾರಿ ಶಾಲೆಯ ಸ್ಥಿತಿಯೇ ಹೀಗಾದರೆ ಇನ್ನು ಗ್ರಾಮೀಣ ಪ್ರದೇಶಗಳಲ್ಲಿರುವ ಶಾಲೆಗಳ ಪಾಡೇನು ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡಲಾರಂಭಿಸಿದೆ.

ಅವಘಡ ಸಂಭವಿಸಿ ಜೀವಹಾನಿಯಾಗುವ ಮೊದಲು ಅಧಿಕಾರಿಗಳು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಶಾಲೆಯ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಶಿಥಿಲಾವಸ್ಥೆಯಲ್ಲಿರುವ ಸರಕಾರಿ ಶಾಲೆಯ ನವೀಕರಣಕ್ಕೆ ಮುಂದಾಗುವಂತೆ ವಿದ್ಯಾರ್ಥಿಗಳು, ಪೋಷಕರು, ತಾಲೂಕಿನ ಜನತೆ ಮನವಿ ಮಾಡಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಶೀಲಕೋಟೆ

contributor

Similar News