ದ.ಕ.-ಉಡುಪಿಗೆ ಸರಕಾರಿ ಮೆಡಿಕಲ್ ಕಾಲೇಜು ತಡೆಯುತ್ತಿರುವ ಶಕ್ತಿ ಯಾವುದು?

Update: 2024-10-08 07:10 GMT

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಬೇಕು ಎಂಬುದು ಬಹು ವರ್ಷಗಳಿಂದ ಕೇಳಿಬರುತ್ತಿರುವ ಬೇಡಿಕೆ. ಜಿಲ್ಲೆಯಲ್ಲೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾದರೆ ವೈದ್ಯಕೀಯ ಶಿಕ್ಷಣ ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುಲಭವಾಗಿ ಕೈಗೆಟುಕಲಿದೆ ಎನ್ನುವುದು ಹಲವರ ಆಶಯ.

ವಿದ್ಯಾರ್ಥಿಗಳ ಹಾಗೂ ಬಡ ರೋಗಿಗಳ ಅನುಕೂಲಕ್ಕಾಗಿ ಸರಕಾರಿ ಮೆಡಿಕಲ್ ಕಾಲೇಜು ಬೇಕೆಂಬ ಬಲವಾದ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಈ ಆಗ್ರಹದೊಂದಿಗೆ ಹಲವಾರು ಸಂಘ ಸಂಸ್ಥೆಗಳು ಭಿತ್ತಿಪತ್ರ ಪ್ರದರ್ಶನ, ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ, ಗ್ರಾಮ ಮಟ್ಟದ ಸಭೆಯಲ್ಲಿ ನಿರ್ಣಯದಂತಹ ನಡೆಗಳ ಮೂಲಕ ಸರಕಾರವನ್ನು ಎಚ್ಚರಿಸುವ, ಗಮನ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ.

ಕರ್ನಾಟಕ ರಾಜ್ಯದ 22 ಜಿಲ್ಲೆಯಲ್ಲಿ ಈಗಾಗಲೇ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಿದೆ. ದ.ಕ., ಉಡುಪಿ, ದಾವಣಗೆರೆ, ಕೋಲಾರ, ಬಾಗಲಕೋಟೆ, ವಿಜಯಪುರ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ವಿಜಯನಗರ ಜಿಲ್ಲೆಗಳಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಇನ್ನೂ ಸ್ಥಾಪನೆಯಾಗಿಲ್ಲ.

ಪ್ರತಿ ಬಾರಿಯೂ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡುವ, ರಾಜ್ಯಕ್ಕೆ ಪ್ರಥಮ ಅಥವಾ ದ್ವಿತೀಯ ಸ್ಥಾನಿಯಾಗಿ ಗುರುತಿಸಿಕೊಳ್ಳುವ ದ.ಕ., ಉಡುಪಿ ಜಿಲ್ಲೆಯಲ್ಲಿ ಇದುವರೆಗೂ ಒಂದೇ ಒಂದು ಸರಕಾರಿ ಮೆಡಿಕಲ್ ಕಾಲೇಜು ಇಲ್ಲದಿರುವುದು ಜಿಲ್ಲೆಯ ಜನರಿಗೆ ಆಡಳಿತ ನಡೆಸುವ ಸರಕಾರಗಳು ಮಾಡಿರುವ ಮಹಾ ದ್ರೋಹವಾಗಿದೆ. ಖಾಸಗಿ ಮೆಡಿಕಲ್ ಮಾಫಿಯಾ ಹಾಗೂ ರಾಜಕಾರಣಿಗಳ ಹಸ್ತಕ್ಷೇಪ ದ.ಕ. ದಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗದಂತೆ ತಡೆಯುತ್ತಿದೆ ಎನ್ನುವುದು ಇಲ್ಲಿನ ಜನಸಾಮಾನ್ಯರ ಆರೋಪವಾಗಿದೆ.

ದ.ಕ. ಜಿಲ್ಲೆಯಲ್ಲಿ ಅದೆಷ್ಟೋ ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ಆದರೆ ಒಂದೇ ಒಂದು ಸರಕಾರಿ ಮೆಡಿಕಲ್ ಕಾಲೇಜು ಯಾಕಿಲ್ಲ? ನಮ್ಮ ಜಿಲ್ಲೆಯ ರಾಜಕಾರಣಿಗಳು ಇದರ ಬಗ್ಗೆ ಪ್ರಾಮಾಣಿಕ ಪ್ರಯತ್ನ ಯಾಕೆ ಮಾಡುತ್ತಿಲ್ಲ? ಇವರ ಲಗಾಮು ಖಾಸಗಿ ಮೆಡಿಕಲ್ ಕಾಲೇಜುಗಳ ಕೈಯಲ್ಲಿ ಇದೆಯೇ? ಇವರಿಂದಲೇ ಡೊನೇಶನ್ ಪಡೆದು ರಾಜಕೀಯ ನಡೆಸುತ್ತಿದ್ದಾರೆಯೇ? ಎಂಬುದು ಜನರ ಪ್ರಶ್ನೆಯಾಗಿದೆ.

2024-25ನೇ ಸಾಲಿಗೆ 113 ಹೊಸ ಪದವಿಪೂರ್ವ ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಅನುಮೋದನೆ ನೀಡಿದೆ. ಎನ್‌ಎಂಸಿ ಅನುಮೋದನೆ ನೀಡಿರುವ ಪಟ್ಟಿಯಲ್ಲಿ ಕರ್ನಾಟಕಕ್ಕೆ 3 ಹೆಚ್ಚುವರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗಿದೆ. ಬೆಂಗಳೂರು ಉತ್ತರ ವ್ಯಾಪ್ತಿಯ ಬಿಜಿಎಸ್ ವೈದ್ಯಕೀಯ ಕಾಲೇಜು, ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ ರಿಸರ್ಚ್ ಸೆಂಟರ್ ಹಾಗೂ ಬಾಗಲಕೋಟೆಯ ಎಸ್‌ಆರ್ ವೈದ್ಯಕೀಯ ಕಾಲೇಜು ಸ್ಥಾಪನೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಒಪ್ಪಿಗೆ ನೀಡಿದೆ.

ಕನಕಪುರ ಹಾಗೂ ರಾಮನಗರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ವಿಚಾರವಾಗಿ ಸಲ್ಲಿಸಲಾಗಿದ್ದ ಪ್ರಸ್ತಾವವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ತಿರಸ್ಕರಿಸಿದೆ. ಆದರೆ ಕನಕಪುರಕ್ಕೆ ಸರಕಾರಿ ಮೆಡಿಕಲ್ ಕಾಲೇಜು ಬೇಕೇ ಬೇಕು ಎನ್ನುವ ಹಠಕ್ಕೆ ಬಿದ್ದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಮನಗರ ಹಾಗೂ ಕನಕಪುರ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಹಾಗೂ ಕಾರ್ಯಾರಂಭ ಕುರಿತು ಸಭೆ ನಡೆಸಿದ್ದಾರೆ.

ಆದರೆ ದ.ಕ., ಉಡುಪಿ ಜಿಲ್ಲೆಗಳ ಶಾಸಕರು, ಸಂಸದರು ಹಾಗೂ ರಾಜಕಾರಣಿಗಳು ಏನು ಮಾಡುತ್ತಿದ್ದಾರೆ? ಜಿಲ್ಲೆಯನ್ನು ಖಾಸಗಿ ಮೆಡಿಕಲ್ ಕಾಲೇಜುಗಳ ಸುಪರ್ದಿಗೆ ಬಿಟ್ಟುಕೊಟ್ಟಿದ್ದಾರೆಯೇ? ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅವಕಾಶ ನಿರಾಕರಿಸಿ, ಮೆಡಿಕಲ್ ಮಾಫಿಯಾದ ಲಾಭ ಪಡೆಯುತ್ತಿರುವ ಕಾಣದ ಕೈಗಳು ಯಾವುದು? ಇವೆಲ್ಲವೂ ಜಿಲ್ಲೆಯ ಜನರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

ಇನ್ನು ಜಿಲ್ಲೆಯ ಖಾಸಗಿ ಮೆಡಿಕಲ್ ಕಾಲೇಜುಗಳು ಫೀಸ್ ಹೆಸರಲ್ಲಿ ಹಗಲು ದರೋಡೆ ನಡೆಸುತ್ತಿರುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ವೈದ್ಯಕೀಯ ಸೀಟು ಪಡೆಯಲು ಲಕ್ಷಗಟ್ಟಲೆ ಹಣವನ್ನು ಖಾಸಗಿ ಕುಲಗಳ ಜೇಬಿಗೆ ಸುರಿಯಬೇಕಿದೆ. ಮಧ್ಯವರ್ತಿಗಳ ಮೂಲಕ ಹಣದ ಬೇಡಿಕೆ ಇಟ್ಟು ಜನರನ್ನು ದೋಚುವ ದಂದೆಯೂ ಎಗ್ಗಿಲ್ಲದೆ ನಡೆಯುತ್ತಿದೆ. ಉಳ್ಳವರಿಗೆ ಮಾತ್ರ ಮೆಡಿಕಲ್ ಸೀಟು, ಬಡವರಿಗಿಲ್ಲ ಎನ್ನುವುದು ಇವರ ಪಾಲಿಸಿಯಾಗಿ ಬಿಟ್ಟಿದೆ.

ಮೆಡಿಕಲ್ ಮಾಫಿಯಾದ ಇನ್ನೊಂದು ಕರಾಳ ಮುಖ ಜನರನ್ನು ಲೂಟಿ ಮಾಡುವ ಖಾಸಗಿ ಆಸ್ಪತ್ರೆಗಳು. ಪ್ರತಿನಿತ್ಯ ಈ ರೀತಿಯ ಘಟನೆಗಳು ನಡೆಯುತ್ತಾದರೂ, ಕೆಲವೊಂದು ಸುದ್ದಿಗಳಾಗಿ ಜನರ ಮಧ್ಯೆ ಚರ್ಚೆ ನಡೆಯುತ್ತದೆ. ಇಂತಹ ಹಲವು ಘಟನೆಗಳನ್ನು ಮಾಧ್ಯಮಗಳು ವರದಿ ಮಾಡಿವೆ.

ಮಂಗಳೂರು ನಗರದ ಆಸ್ಪತ್ರೆಯೊಂದಕ್ಕೆ ಜ್ವರದ ತಪಾಸಣೆಗೆಂದು 4 ತಿಂಗಳ ಮಗುವನ್ನು ಕರೆದುಕೊಂಡು ಹೋಗಿದ್ದು, ವೈದ್ಯರು ಥೈರಾಯ್ಡ್ ತಪಾಸಣೆಗೆ ಶಿಫಾರಸು ಮಾಡಿದ್ದರು. ಲ್ಯಾಬ್ ಸಿಬ್ಬಂದಿ ತಪಾಸಣೆ ನಡೆಸಿ ಥೈರಾಯ್ಡ್ ಪಾಸಿಟಿವ್ ವರದಿ ನೀಡುತ್ತಾರೆ. ಬಳಿಕ ವೈದ್ಯರು ಮಗುವಿಗೆ ಮೂರು ವರ್ಷ ಟ್ಯಾಬ್ಲೆಟ್ ತೆಗೆದುಕೊಳ್ಳಬೇಕು ಎಂದು ಚೀಟಿ(ಪ್ರಿಸ್ಕ್ರಿಪ್ಪನ್) ಬರೆದು ಕೊಡುತ್ತಾರೆ. ಇದರಿಂದ ಗಾಬರಿಗೊಂಡ ಪೋಷಕರು ಮತ್ತೊಂದು ಆಸ್ಪತ್ರೆಗೆ ಹೋಗಿ ಮಗುವನ್ನು ಪರೀಕ್ಷಿಸಿದಾಗ ಮಗುವಿಗೆ ಯಾವುದೇ ಸಮಸ್ಯೆ ಇಲ್ಲ. ನಾರ್ಮಲ್ ಆಗಿದೆ ಎಂದು ವರದಿ ನೀಡಿದ್ದ ಘಟನೆ ಸುದ್ದಿಯಾಗಿತ್ತು.

ಇದೇ ರೀತಿ ನಗರದ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ 65 ವರ್ಷದ ವ್ಯಕ್ತಿಯೊಬ್ಬರನ್ನು ಪರೀಕ್ಷಿಸಿದ ಡ್ಯೂಟಿ ಡಾಕ್ಟರ್, ನರ್ಸ್ ಹಿರಿಯ ವ್ಯಕ್ತಿಗೆ ಹೃದಯಾಘಾತವಾಗಿದೆ ಅಂಜಿಯೋಗ್ರಾಂ ಮಾಡಬೇಕೆಂದು ಸಲಹೆ ನೀಡಿದ್ದರು. ಮರುದಿನ ರೋಗಿ ಸ್ವಲ್ಪ ಚೇತರಿಕೆ ಕಂಡಾಗ ರೋಗಿಯ ಬಂಧುಗಳು ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಿಸಿ, ವೈದ್ಯರೊಬ್ಬರ ಕ್ಲಿನಿಕ್‌ಗೆ ಕರೆದೊಯ್ಯುತ್ತಾರೆ. ಅಲ್ಲಿ ವೈದ್ಯರು ಪರೀಕ್ಷಿಸಿ ಹೃದಯಾಘಾತವಾದ ಲಕ್ಷಣ ಕಾಣುತ್ತಿಲ್ಲ ಎಂದು ಹೇಳಿ ಮಾತ್ರೆ ಬರೆದುಕೊಡುತ್ತಾರೆ. ಒಂದೆರಡು ದಿನದಲ್ಲಿ ರೋಗಿಯ ಆರೋಗ್ಯ ಮತ್ತೆ ಹಿಂದಿನ ಸ್ಥಿತಿಗೆ ತಲುಪುತ್ತದೆ.

ಇಂತಹ ಘಟನೆಗಳು ಜನರಲ್ಲಿ ಭಯವನ್ನು ಹುಟ್ಟಿಸಿದೆ. ಹೀಗೆ ಎಗ್ಗಿಲ್ಲದಂತೆ ಪ್ರತಿದಿನ, ಪ್ರತಿಕ್ಷಣ ಬಡ ಜನರನ್ನು ಲೂಟಿ ಮಾಡುವ ಖಾಸಗಿ ಮೆಡಿಕಲ್ ಆಸ್ಪತ್ರೆಗಳ ಮಾಫಿಯಾದ ಜಾಲ ವ್ಯಾಪಕವಾಗಿ ಹರಡಿದೆ. ಹೀಗಾಗಿ ಜಿಲ್ಲೆಯಲ್ಲೊಂದು ಸರಕಾರಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ನಿರ್ಮಾಣ ಅಗತ್ಯ ಎನ್ನುವುದು ಜನರ ಆಗ್ರಹವಾಗಿದೆ.

ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಸರಕಾರಿ ಕಾಲೇಜು ಅಭಿಯಾನ ರಾಜಕೀಯವಾಗಿಯೂ ಸದ್ದು ಮಾಡಿದೆ. ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯ ಮಂಜುನಾಥ ಭಂಡಾರಿ ಕೇಳಿದ ಪ್ರಶ್ನೆಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಉತ್ತರಿಸಿದ್ದು, ಸದ್ಯ 22 ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಆಗಿದೆ. ಹಣಕಾಸು ಇಲಾಖೆ ಅನುಮತಿ ಸಿಕ್ಕಿದರೆ ಹಂತ ಹಂತವಾಗಿ ಹೊಸ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಾಗುತ್ತದೆ ಎಂದು ಅವರು ಪಾಟೀಲ್ ಉತ್ತರಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ.ಕ.ದ ಪುತ್ತೂರಿನಲ್ಲಿ ಹಾಗೂ ಉಡುಪಿಯ ಕುಂದಾಪುರ ಅಥವಾ ಬೈಂದೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರ ಮಾತನ್ನು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ರಿಯಾಝ್ ಪುತ್ತೂರು

contributor

Similar News