ಮಾರ್ಗದರ್ಶಕ, ಸ್ಫೂರ್ತಿದಾಯಕ ಮಹಿಳೆ ಕಾಫಿ ಪುಡಿ ಸಾಕಮ್ಮ

Update: 2024-10-08 08:14 GMT

ಮಡಿಕೇರಿ: ಭಾರತೀಯ ಅಂಚೆ ಇಲಾಖೆಯ ವತಿಯಿಂದ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಂಚೆ ಚೀಟಿಗಳ ಹಬ್ಬ ಕಾರ್ಯಕ್ರಮದಲ್ಲಿ ಕರ್ನಾಟಕದ ಮೊದಲ ಮಹಿಳಾ ಉದ್ಯಮಿ ‘ಕಾಫಿ ಪುಡಿ ಸಾಕಮ್ಮ’ ಅವರ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿ ಸಾಧಕಿಗೆ ಗೌರವ ಸಲ್ಲಿಸಿದೆ.

ಮಹಿಳೆಯರೆಂದರೆ ಮೂಗು ಮುರಿಯುತ್ತಿದ್ದ ಕಾಲ ಘಟ್ಟದಲ್ಲೇ, ಸಮಾಜದ ಕಟ್ಟುಪಾಡುಗಳಿಗೆ ಅಂಜದೆ ‘ಕಾಫಿ ಉದ್ಯಮ’ಕ್ಕೆ ಹೊಸ ದಿಕ್ಕನ್ನು ತೋರಿದ ಮಹಿಳೆಯೇ ‘ಕಾಫಿ ಪುಡಿ ಸಾಕಮ್ಮ’.

ಕೊಡಗಿನ ಸೋಮವಾರಪೇಟೆ ತಾಲೂಕಿನ ಸಾಕಮ್ಮ ಅವರು ಶತಮಾನಗಳ ಹಿಂದೆಯೇ, ಅತ್ಯಂತ ಎಳೆೆಯ ವಯಸ್ಸಿನಲ್ಲೇ ಕಾಫಿ ಪುಡಿಯ ಉತ್ಪಾದನಾ ಘಟಕವನ್ನು ಆರಂಭಿಸುವ ಮೂಲಕ ಅಂದಿನ ‘ಮೈಸೂರು ಪ್ರಾಂತ’ ಮತ್ತು ಮದ್ರಾಸ್ ಪ್ರಾಂತದ ಹಲವೆಡೆಗಳಲ್ಲಿ ಕಾಫಿಯ ಸುಗಂಧವನ್ನು ಪಸರಿಸಿದ ದಿಟ್ಟ ಮಹಿಳೆ.

ಆಗರ್ಭ ಶ್ರೀಮಂತ ‘ದೊಡ್ಡ ಮನೆ’ ಕುಟುಂಬದ ಹೆಣ್ಣು ಮಗಳು ಡಿ.ಸಾಕಮ್ಮ, ಬದುಕಿನಲ್ಲಿ ಆಯ್ಕೆ ಮಾಡಿದ್ದು ಸುಖ ಲೋಲುಪತೆಯ ಹಾದಿಯನ್ನಲ್ಲ, ಬದಲಾಗಿ ಮಹತ್ತರ ಜವಾಬ್ದಾರಿಗಳ ನಡುವೆ ‘ಕಾಫಿ ಉದ್ಯಮ’ ಮತ್ತು ಪ್ಲಾಂಟೇಷನ್ ಕ್ಷೇತ್ರದಲ್ಲಿ ಮಹತ್ತರವಾದುದನ್ನು ಸಾಧಿಸಬೇಕೆನ್ನುವ ಗುರಿ ಸಾಧಿಸುವ ಪಥವನ್ನು. ಅವರ ಸಾಧನೆಗೆ ಯಾವುದೂ ತೊಡಕಾಗಲಿಲ್ಲ. ಅವರಲ್ಲಿನ ಆತ್ಮವಿಶ್ವಾಸ, ಧೀಶಕ್ತಿ ಇಂದಿಗೂ ಮಹಿಳೆಯರಿಗೆ ಸ್ಫೂರ್ತಿ ದಾಯಕ.

ಹಾಸನ ಮೂಲದ ದೊಡ್ಡಮನೆ ಕುಟುಂಬ 1840ರ ಸುಮಾರಿಗೆ ಕಾಫಿ ಉದ್ಯಮಿಗಳಾಗಿ ಕೊಡಗನ್ನು ಪ್ರವೇಶಿಸಿತು. 1868 ರಲ್ಲಿ ತಮ್ಮದೇ ಆದ ಕಾಫಿ ತೋಟಗಳನ್ನು ಹೊಂದಿದ್ದ ಈ ಕುಟುಂಬ 19 ನೇ ಶತಮಾನದ ಅಂತ್ಯದ ವೇಳೆಗೆ ಸರಿ ಸುಮಾರು ಮೂರು ಸಾವಿರ ಎಕರೆ ಕಾಫಿ ತೋಟದ ಒಡೆತನವನ್ನು ಹೊಂದಿತ್ತು. ಇಂತಹ ಕುಟುಂಬದ ಸಾಕಮ್ಮ ಅವರು ತಮ್ಮ ಪತಿಯನ್ನು ಬೇಗನೆ ಕಳೆದುಕೊಂಡರು. ಈ ಒಂದು ಘಟನೆಯ ನೋವನ್ನು ತಮ್ಮ ನಿರಂತರವಾದ ಕರ್ತವ್ಯಪರತೆಯ ಮೂಲಕ ಹಿಂದಿಕ್ಕಿದ ಸಾಕಮ್ಮ, 20ನೇ ಶತಮಾನದ ಆರಂಭಿಕ ಹಂತದಲ್ಲಿ ತಮ್ಮ ಕಾಫಿ ತೋಟಗಳಲ್ಲಿ ‘ಬಾಳೆ ಹೊನ್ನೂರಿನ ಮೈಸೂರು ಎಕ್ಸ್‌ಪರಿಮೆಂಟಲ್ ಸ್ಟೇಷನ್’ ಮಾರ್ಗದರ್ಶನದಲ್ಲಿ ವೈಜ್ಞಾನಿಕ ಕೃಷಿಗೆ ಒತ್ತು ನೀಡಿ ಗಮನ ಸೆಳೆದವರು.

ತಮ್ಮ ಯೋಚನೆ, ಕ್ರಿಯಾಶೀಲತೆಗೆ ಮಿತಿ ಇಲ್ಲವೆನ್ನುವಂತೆ ಡಿ. ಸಾಕಮ್ಮ ಅವರು 1920ರ ಸುಮಾರಿಗೆ ಬೆಂಗಳೂರಿನ ಬಸವನಗುಡಿಯಲ್ಲಿ ‘ಸಾಕಮ್ಮ ಕಾಫಿ ಕ್ಯೂರಿಂಗ್ ವರ್ಕ್ಸ್’ ಆರಂಭಿಸಿ, ಕಾಫಿ ಬೇಳೆಯನ್ನು ಜರ್ಮನಿಯಿಂದ ತರಿಸಲಾದ ಅಂದಿನ ಕಾಲದ ಆಧುನಿಕ ಯಂತ್ರಗಳ ನೆರವಿನಿಂದ ಹದವಾಗಿ ಹುರಿದು, ಪುಡಿ ಮಾಡಿ ಮಾರಾಟ ಮಾಡುವ ಉದ್ಯಮಕ್ಕೆ ಕೈ ಹಾಕಿದ್ದರು. ನಂತರ ಅವರು ತಿರುಗಿ ನೋಡಿದ್ದೇ ಇಲ್ಲವೆನ್ನುವಂತೆ, ಇವರ ಕಾಫಿ ವರ್ಕ್ಸ್‌ನಿಂದ ಸಿದ್ಧವಾದ ಘಮ ಘಮಿಸುವ ಕಾಫಿ ಹುಡಿ ಮೈಸೂರು ಪ್ರಾಂತದ ಉದ್ದಗಲಕ್ಕೂ ಅವರದೇ ಉಪ ಘಟಕಗಳ ಮೂಲಕ ಸಾರ್ವಜನಿಕರಿಗೆ ತಲುಪಿತಾದರೆ, ಈ ಕಾಫಿ ಪುಡಿ ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯ ಕೆಲ ಜಿಲ್ಲೆಗಳಿಗೂ ಸರಬರಾಜಾಗುತ್ತಿದ್ದುದು ವಿಶೇಷ. ಇವೆಲ್ಲವುಗಳ ಹಿಂದಿನ ಸಾಕಮ್ಮ ಅವರ ನಿರಂತರ ಪರಿಶ್ರಮಕ್ಕೆ ಎಣೆ ಇಲ್ಲ.

ಬಿಡುವಿಲ್ಲದ ಕಾರ್ಯಚಟುವಟಿಕೆಗಳ ನಡುವೆಯೂ ಇವರೊಬ್ಬ ಸಮಾಜ ಸೇವಕಿಯಾಗಿ ಮಹಿಳಾ ಕಲ್ಯಾಣಕ್ಕಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದರು. ಇವರ ಪರಿಶ್ರಮವನ್ನು ಪರಿಗಣಿಸಿ ಅಂದಿನ ಮೈಸೂರು ದರ್ಬಾರ್ ಇವರಿಗೆ ‘ಲೋಕ ಸೇವಾ ಪಾರಾಯಣೆ’ ಬಿರುದನ್ನು ನೀಡಿದ್ದು ಉಲ್ಲೇಖನೀಯ.

ಶತಮಾನಗಳ ಹಿಂದಿನ ಕಾಫಿ ಉದ್ಯಮದಲ್ಲಿನ ಅವರ ಸಾಧನೆ ಸಾಕಮ್ಮ ಅವರನ್ನು ‘ಕಾಫಿ ಪುಡಿ ಸಾಕಮ್ಮ’ನಾಗಿ ಜನಪ್ರಿಯಗೊಳಿಸಿದೆ. ಸಾಧನೆಯ ಹಾದಿಯಲ್ಲಿನ ಅವರ ದೂರದೃಷ್ಟಿ, ಕರ್ತವ್ಯಪರತೆ, ಸಾಧಿಸುವ ಛಲ ಮಹಿಳಾ ಸಮೂಹಕ್ಕೆ ಇಂದಿಗೂ ಮಾರ್ಗದರ್ಶಕ ಮತ್ತು ಸ್ಫೂರ್ತಿದಾಯಕವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಎಸ್.ಕೆ. ಲಕ್ಷ್ಮೀಶ್

contributor

Similar News