ಹರ್ಯಾಣ: ಬಿಜೆಪಿಗೆ ಯಾವೆಲ್ಲ ಸವಾಲುಗಳು?

Update: 2024-09-12 07:04 GMT
Editor : Thouheed | Byline : ಎನ್. ಕೇಶವ್

ಹರ್ಯಾಣದಲ್ಲಿ ಈಗ ಒಂದೆಡೆ ಮಹಿಳೆಯರು ಮತ್ತೊಂದೆಡೆ ರೈತರು ಈ ಚುನಾವಣೆಯಲ್ಲಿ ಮೋದಿ ವಿರುದ್ಧ ನಿಲ್ಲುವುದು ಸ್ಪಷ್ಟವಾಗಿದೆ.

ಜಂತರ್ ಮಂತರ್‌ನಲ್ಲಿ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆಗೆ ಕಣ್ಮುಚ್ಚಿಕೊಂಡಿದ್ದ ಮೋದಿ ಈಗ ಅದರ ನಿಜವಾದ ಫಲ ಉಣ್ಣಬೇಕಾಗಿ ಬಂದಿದೆ. ಇಂಥ ವಿರೋಧವನ್ನು ಎದುರಿಸುವ ಕಾಲ ಬಂದೀತೆಂಬ ಕಲ್ಪನೆ ಕೂಡ ಬಹುಮತದ ಮದದಲ್ಲಿದ್ದ ಮೋದಿಯವರಿಗೆ ಬಹುಶಃ ಇದ್ದಿರಲಿಕ್ಕಿಲ್ಲ.

ಅಲ್ಲದೆ, ರೈತರ ಕಲ್ಯಾಣದ ಹೆಸರಿನಲ್ಲಿ ಕಾರ್ಪೊರೇಟ್ ಮಿತ್ರರನ್ನು ಸಾಕಲು ಕಾಯ್ದೆ ತರಲು ಮುಂದಾಗಿದ್ದವರು, ರೈತರನ್ನು ಅವರ ಹೋರಾಟದ ಕಾರಣಕ್ಕಾಗಿ ಅವಮಾನಿಸಿದವರು ಈಗ ಅದೇ ರೈತರ ಸಿಟ್ಟನ್ನು, ವಿರೋಧವನ್ನು ರಾಜಕೀಯ ಕಣದಲ್ಲಿ ಎದುರಿಸಲೇ ಬೇಕಾಗಿದೆ.

ಈ ವಿರೋಧದ ಸಣ್ಣ ಸ್ಯಾಂಪಲ್ ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಕಂಡಿದೆ. 2019ರ ಚುನಾವಣೆಯ ಮತ ಪ್ರಮಾಣ ಗಮನಿಸಿದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ರೈತರು ಮತ್ತು ಮಹಿಳೆಯರ ಮತಗಳಲ್ಲಿನ ಬಿಜೆಪಿ ಪಾಲು ಹೆಚ್ಚಾಗಿ ಕಾಂಗ್ರೆಸ್‌ಗೆ ಹೋಗಿರುವುದು ಕೂಡ ಸ್ಪಷ್ಟ.

2019ರ ಚುನಾವಣೆ ನಂತರ ನಡೆದ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಸುಳಿವು ಸಿಕ್ಕಿತ್ತು. ಆಗ ಅದರ ಯಾವ ನಾಯಕನೂ ಮತ ಕೇಳಲು ಜನರ ಬಳಿಗೆ ಹೋಗಲಿಲ್ಲ. ಇನ್ನೊಂದು ಪಕ್ಷದ ನಾಯಕರುಗಳನ್ನು ಸೆಳೆದು ಅವರನ್ನು ಕಣಕ್ಕಿಳಿಸಲಾಯಿತು. ಜನ ತಮ್ಮನ್ನು ನೋಡಲು ಬಯಸುವುದಿಲ್ಲ ಮತ್ತು ತಾವು ಗೆಲ್ಲುವುದು ಸಾಧ್ಯವಿಲ್ಲ ಎಂಬುದು ಬಿಜೆಪಿಗೆ ತಿಳಿದುಬಿಟ್ಟಿತ್ತು.

ಈ ಸಲವೂ ಅಂಥದೇ ಸ್ಥಿತಿಯನ್ನು ಬಿಜೆಪಿ ಎದುರಿಸುತ್ತಿದೆ.

ಖಟ್ಟರ್ ಸರಕಾರ ಮತ್ತು ಜನಸಾಮಾನ್ಯರ ನಡುವೆ ಗೋಡೆಯಂತೆ ಇದ್ದದ್ದು ಅಧಿಕಾರಶಾಹಿ. ಅಧಿಕಾರಶಾಹಿಯನ್ನೇ ಖಟ್ಟರ್ ಸರಕಾರ ನೆಚ್ಚಿಕೊಂಡು ಕೂತಿತ್ತು. ಯಾವಾಗ ಖಟ್ಟರ್ ಅವರನ್ನು ಹೊರಗೆ ಅಟ್ಟಲು ಆರೆಸ್ಸೆಸ್ ಹುಕುಂ ಮಾಡಿತೋ ಆಗ ದಿಲ್ಲಿಯಲ್ಲಿ ಸಭೆ ನಡೆದು, ಲೋಕಸಭೆ ಚುನಾವಣೆ ಮುಗಿಯುವವರೆಗೂ ಸುಮ್ಮನಿರುವ ನಿರ್ಧಾರಕ್ಕೆ ಬರಲಾಗಿತ್ತು. ಜನರೆದುರು ಹೋಗಬೇಕಿರುವ ಬಿಜೆಪಿ ನಾಯಕರು ತಲೆ ತಗ್ಗಿಸಿ ನಿಲ್ಲಬೇಕಾದ ಸ್ಥಿತಿಯಿದೆ. ಜನರ ಬಳಿ ಕ್ಷಮೆ ಕೇಳಬೇಕಾದ ಸ್ಥಿತಿಯಿದೆ.

ಹರ್ಯಾಣದ ಸನ್ನಿವೇಶ ಮಹಿಳೆಯರು ಮತ್ತು ರೈತರೊಂದಿಗೆ ಸಂಬಂಧಿಸಿರುವುದು ಮಾತ್ರವಲ್ಲದೆ, ನಿರುದ್ಯೋಗವೂ ಅಲ್ಲಿ ನಿಜವಾದ ವಿಷಯವಾಗಿ ಚುನಾವಣೆಯಲ್ಲಿ ಬಿಜೆಪಿಗೆ ಎದುರಾಗಲಿದೆ.

ಮಹಿಳಾ ಕುಸ್ತಿಪಟುಗಳಿಗಾದ ಅನ್ಯಾಯದ ವಿಚಾರದಲ್ಲಿ ಅವರದೇ ಪಕ್ಷದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮೋದಿ ಮಾತಾಡಲಿಲ್ಲ.

ರೈತರನ್ನು ಮತ್ತೆ ಮತ್ತೆ ಅವಮಾನಿಸುವ ಅವರದೇ ಪಕ್ಷದ ಕಂಗನಾ ರಣಾವತ್ ವಿರುದ್ಧವೂ ಮೋದಿ ಮಾತಾಡಲಿಲ್ಲ.

ಒಂದೆಡೆ ಮಹಿಳೆಯರು, ರೈತರು ಮತ್ತು ಇನ್ನೊಂದೆಡೆ ಜಾಟ್ ಸಮುದಾಯದ ಮತಬ್ಯಾಂಕ್ ಈ ಸ್ಥಿತಿ ಹೇಗಿದೆಯೆಂದರೆ, ಬಿಜೆಪಿಗೆ 90ರಲ್ಲಿ 10 ಸೀಟುಗಳಾದರೂ ತನಗೆ ಬರುವುದರ ಬಗ್ಗೆ ವಿಶ್ವಾಸ ಇದ್ದ ಹಾಗಿಲ್ಲ.

ಮೂರು ಕೃಷಿ ಕಾಯ್ದೆಗಳನ್ನು ತರಲು ಮುಂದಾಗಿ ರೈತರನ್ನು ಕಾರ್ಪೊರೇಟ್ ಕೈಗೊಂಬೆಯಾಗಿಸಲು ತಯಾರಾಗಿದ್ದ ಮೋದಿ ಅದಕ್ಕಾಗಿ ಹರ್ಯಾಣದಲ್ಲಿ ಕ್ಷಮೆ ಕೇಳುವರೆ?

ಮತದಾರರ ಮುಂದೆ ತಲೆಬಾಗದೆ ಹೋದರೆ, ಅವರ ಕ್ಷಮೆ ಯಾಚಿಸದೇ ಹೋದರೆ ಬಿಜೆಪಿ ಪಾಲಿಗೆ ಪರಿಸ್ಥಿತಿ ಬಹಳ ಕಷ್ಟದ್ದಾಗಲಿದೆ.

ಹರ್ಯಾಣದಲ್ಲಿ ನಯಾಬ್ ಸಿಂಗ್ ಸೈನಿ ಚಹರೆ ಕೂಡ ಮುಖ್ಯಮಂತ್ರಿ ಯದ್ದಾಗಿ ಕಾಣಿಸುತ್ತಿಲ್ಲ. ಅಲ್ಲಿ ಬಿಜೆಪಿ ಮತ್ತೊಮ್ಮೆ ಮೋದಿಯನ್ನೇ ಮುಂದಿಟ್ಟುಕೊಂಡು ಹೋಗುತ್ತಿದೆ.

2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಸೀಟುಗಳನ್ನೂ ಬಿಜೆಪಿಯೇ ಗೆದ್ದುಕೊಂಡಿತ್ತು. ಆದರೆ 2024ರಲ್ಲಿ ಪರಿಸ್ಥಿತಿ ಪೂರ್ತಿ ಬದಲಾಗಿ ಹೋಗಿತ್ತು. ಈಗ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅದೆಷ್ಟು ಕೆಟ್ಟ ಸೋಲನ್ನು ಕಾಣಲಿದೆ ಎಂಬುದು ಮೋದಿಯೆದುರು ಗೋಡೆಯ ಮೇಲೆ ಬರೆದಿಟ್ಟಷ್ಟೇ ಸ್ಪಷ್ಟವಾಗಿದೆ.

2019ರಲ್ಲಿ ಜಾಟ್ ಮತಗಳು ಬಿಜೆಪಿಗೆ ಶೇ.50ರಷ್ಟು ಸಿಕ್ಕಿದ್ದವು. ಅದು 2024ರಲ್ಲಿ ಕುಸಿದು ಶೇ.27ಕ್ಕೆ ಬಂದಿತ್ತು.

2019ರಲ್ಲಿ ಒಬಿಸಿ ಮತಗಳು ಶೇ.73ರಷ್ಟು ಬಿಜೆಪಿಗೆ ಹೋಗಿದ್ದವು. ಅದು 2024ರಲ್ಲಿ ಶೇ.44ಕ್ಕೆ ಕುಸಿಯಿತು.

ದಲಿತ ಮತಗಳು 2019ರಲ್ಲಿ ಶೇ.58ರಷ್ಟು ಬಿಜೆಪಿಗೆ ಹೋಗಿದ್ದವು. 2024ರಲ್ಲಿ ಅದು ಶೇ.24ಕ್ಕೆ ಕುಸಿದಿತ್ತು.

ಮೇಲ್ಜಾತಿಯ ಮತಗಳು ಶೇ.74ರಷ್ಟು ಬಿಜೆಪಿಗೆ ಹೋಗಿದ್ದವು. ಅದು ಕುಸಿದು ಶೇ.66ಕ್ಕೆ ಬಂದು ನಿಂತಿತು.

ಹರ್ಯಾಣದಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳ ಮಹತ್ವ ಇರುವಾಗ ಬಿಜೆಪಿಗೆ ತನ್ನ ಪಾಲಿನ ಮತಗಳನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ.

ವಿನೇಶ್ ಫೋಗಟ್ ಒಂದು ಕ್ಷೇತ್ರದಲ್ಲಿ ಬಿಜೆಪಿಗೆ ಎದುರಾಳಿಯಾಗಿರ ಬಹುದು. ಆದರೆ ಅವರ ಮೇಲೆ ಇಡೀ ಜಗತ್ತಿನ, ದೇಶದ ಮತ್ತು ಹರ್ಯಾಣದ ಜನರ ಕಣ್ಣು ನೆಟ್ಟಿದೆ. ಚುನಾವಣೆಯಲ್ಲಿನ ಅವರ ಈ ಲಡಾಯಿ ಒಂದು ಸಂಕೇತದ ರೂಪದಿಂದಲೂ ಬಹಳ ಮುಖ್ಯವಾಗಲಿದೆ.

ಅದೇ ರೀತಿಯಲ್ಲಿ, ರೈತರ ವಿರುದ್ಧದ ಬಿಜೆಪಿ ಸರಕಾರದ ನಡವಳಿಕೆಯ ವಿರುದ್ಧವಾಗಿ ರೂಪುಗೊಳ್ಳಲಿರುವ ಮತದಾರರ ನಿರ್ಧಾರ ಹೇಗಿರಬಹುದು ಎನ್ನುವುದು ಬಿಜೆಪಿ ಪಾಲಿನ ಭಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎನ್. ಕೇಶವ್

contributor

Similar News