ನ್ಯಾ.ಭಕ್ತವತ್ಸಲ ಸಮಿತಿ ವರದಿಯನ್ನು ಸರಕಾರ ತಿರಸ್ಕರಿಸಿದೆಯೇ?

ಕರ್ನಾಟಕ ಸರಕಾರ, ಬಸವರಾಜ ಬೊಮ್ಮಾಯಿ ಅವರ ಮುಖ್ಯಮಂತ್ರಿ ಅವಧಿಯಲ್ಲಿ, ಸರ್ವೋಚ್ಚ ನ್ಯಾಯಾಲಯದ ಕಟ್ಟಾಜ್ಞೆಗೆ ಮಣಿದು, ನ್ಯಾ. ಭಕ್ತವತ್ಸಲ ಅವರ ಅಧ್ಯಕ್ಷತೆ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಒಬ್ಬರು ಸದಸ್ಯರಾಗಿರುವ ಸಮಿತಿಯೊಂದನ್ನು ರಚಿಸಿ ಮೇ 8, 2022ರಂದು ಆದೇಶ ಹೊರಡಿಸುತ್ತದೆ. ಹಾಗೆಯೇ, ಮೂರು ತಿಂಗಳ ಅವಧಿಯಲ್ಲಿ ವರದಿ ನೀಡಲೂ ಸಹ ಸೂಚಿಸುತ್ತದೆ. ಸಮಿತಿಯೇನೋ ಮೂರು ತಿಂಗಳಲ್ಲೇ ತನಗೆ ವಹಿಸಿದ ಕೆಲಸವನ್ನು ಪೂರೈಸಿ ಜುಲೈ 26, 2022ರಂದು ವರದಿಯನ್ನು ಅಂದಿನ ಸರಕಾರಕ್ಕೆ ಸಲ್ಲಿಸುತ್ತದೆ. ಆದರೆ ಸರಕಾರ ಮಾತ್ರ ಜನಪ್ರತಿನಿಧಿಗಳ ಸದನಗಳಲ್ಲಿ ಮಂಡಿಸದೆ ಅಥವಾ ಸಾರ್ವಜನಿಕ ಅಭಿಪ್ರಾಯವನ್ನೂ ಪಡೆಯದೆ ದಿವ್ಯ ಮೌನಕ್ಕೆ ಶರಣಾಗಿ, ಎಲ್ಲವೂ ಗಪ್ ಚುಪ್ ಎನ್ನುವಂತಾಯಿತು.

Update: 2024-11-06 06:24 GMT

ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧದಲ್ಲಿ ಡಾ.ಜಸ್ಟಿಸ್ ಕೆ.ಭಕ್ತವತ್ಸಲ ಸಮಿತಿಯು ಮಾಡಿರುವ ಶಿಫಾರಸು ಕೈ ಬಿಟ್ಟು, ನಗರಾಭಿವೃದ್ಧಿ ಇಲಾಖೆ ಹಾಗೂ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಚುನಾವಣಾ ಘಟಕಗಳನ್ನು ಆಯಾ ಇಲಾಖೆಗಳ ನಿಯಂತ್ರಣದಲ್ಲಿ ಉಳಿಸಿ, ಪ್ರಸಕ್ತ ಚಾಲ್ತಿಯಲ್ಲಿರುವ ವ್ಯವಸ್ಥೆಯನ್ನು ಮುಂದುವರಿಸಲು ಜುಲೈ 4, 2024ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ (ಕೆಲವು ಪತ್ರಿಕೆಗಳು). ಸರಕಾರಗಳಿಗೆ ಯಾವುದೇ ಆಯೋಗ ಅಥವಾ ಸಮಿತಿಗಳ ವರದಿಯನ್ನು ತಿರಸ್ಕರಿಸಲು ಅವಕಾಶವಿದೆ. ಆದರೆ, ತಿರಸ್ಕರಿಸಿರುವ ಕಾರಣವನ್ನು ಮಾತ್ರ ಸಾರ್ವಜನಿಕಗೊಳಿಸಬೇಕು. ಈ ಪ್ರಕರಣದಲ್ಲಿ ಯಾವುದೇ ಕಾರಣವಿಲ್ಲದೆ ಸರಕಾರ ತಿರಸ್ಕರಿಸಿದೆ ಎಂದು ಕೆಲವು ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿವೆ. ಇದು ನಿಜವಾಗಿದ್ದಲ್ಲಿ ಪ್ರಜಾತಂತ್ರ ಪ್ರೇಮಿಗಳನ್ನು ಕತ್ತಲೆಯಲ್ಲಿಟ್ಟು ತೆಗೆದುಕೊಂಡ ತೀರ್ಮಾನವಾಗುವುದಿಲ್ಲವೇ? ಪಾರದರ್ಶಕತೆ ಇಲ್ಲದ ತೀರ್ಮಾನವನ್ನು ಏನೆಂದು ಕರೆಯಬಹುದು?. ಇದು ಸರಕಾರದ ಉಡಾಫೆ ಮನೋಭಾವವೋ ಅಥವಾ ಅವಗತಿಯ ಕೊರತೆಯೋ.

ಇಷ್ಟಕ್ಕೂ, ಸರಕಾರ ಡಾ. ಭಕ್ತವತ್ಸಲ ಸಮಿತಿಯನ್ನು ರಚಿಸಿದ್ದಾದರೂ ಏಕೆ? ಎಂಬುದು ಮುಖ್ಯ ಸಂಗತಿಯಾಗುತ್ತದೆ. ಹಿಂದಿನ ಬಸವರಾಜ ಬೊಮ್ಮಾಯಿ ಸರಕಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯೋಚಿತ ಒತ್ತಡದ ಮೇರೆಗೆ ಸಮಿತಿ ರಚಿಸಿ ಕೈ ತೊಳೆದು ಕೊಂಡಿತೇನೋ ಸರಿ. ಆದರೆ, ಸರ್ವೋಚ್ಚ ನ್ಯಾಯಾಲಯ ವಿಧಿಸಿದ್ದ ಯಾವ ಷರತ್ತನ್ನೂ (ತ್ರಿಸ್ತರ) ಪಾಲಿಸದೆ ಸಿದ್ಧಪಡಿಸಿದ ವರದಿಯನ್ನು ಬಸವರಾಜ ಬೊಮ್ಮಾಯಿ ಸರಕಾರಕ್ಕೆ ಕೊಟ್ಟಿತು. ವರದಿಯ ಸತ್ಯಾಂಶ ಸಾರ್ವಜನಿಕರಿಗೆ ಗೊತ್ತು ಪಡಿಸುವ ಪ್ರಜಾಸತ್ತಾತ್ಮಕ ರೀತಿಯನ್ನು ಸರಕಾರ ಅನುಸರಿಸದಿರುವುದು ವ್ಯಥೆ ತರುವ ಸಂಗತಿ.

ಸರಕಾರ ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿಯನ್ನು ರಚಿಸಲು ಇದ್ದ ತುರ್ತಾದರೂ ಏನಿತ್ತು ಎಂಬುದರ ಬಗ್ಗೆ ಗಮನವೀಯೋಣ.

ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳನ್ನು ಜನೋಪಯೋಗಿಯಾಗಿ ಮತ್ತು ಆರ್ಥಿಕವಾಗಿ ಸದೃಢಗೊಳಿಸುವ ಮಹೋದ್ದೇಶದಿಂದ ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು. ಅವೇ 73 ಮತ್ತು 74ನೇ ತಿದ್ದುಪಡಿಗಳು. ತಿದ್ದುಪಡಿ ತಂದ ಪ್ರಮುಖ ಉದ್ದೇಶ- ಹಿಂದುಳಿದವರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಸ್ಪರ್ಧಿಸಲು ಸ್ಥಾನಗಳ ಹಂಚಿಕೆಯಲ್ಲಿ ರಾಜಕೀಯ ಮೀಸಲಾತಿ ಕಲ್ಪಿಸುವುದಾಗಿತ್ತು. ಈ ದಿಸೆಯಲ್ಲಿ ರಾಜ್ಯ ಸರಕಾರ ಮಾಡಿದ ವಿಲಕ್ಷಣ ಕೃತ್ಯವೆಂದರೆ, ಸಂವಿಧಾನದ ವಿಧಿ15 (4)ರ ಅನ್ವಯ, ವಿಧಿ 16(4)ರ ಉದ್ದೇಶಕ್ಕಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಗುರುತಿಸಲಾಗಿದ್ದ ಹಿಂದುಳಿದ ವರ್ಗಗಳ ಪಟ್ಟಿಯನ್ನೇ ಸ್ಥಳೀಯ ಸಂಸ್ಥೆಗಳ ರಾಜಕೀಯ ಸ್ಥಾನಗಳನ್ನು ಮೀಸಲಿಡುವ ಉದ್ದೇಶಕ್ಕೂ ಅಳವಡಿಸಿಕೊಂಡಿದ್ದು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನೂ ಒಳಗೊಂಡಂತೆ ಹಿಂದುಳಿದ ವರ್ಗಗಳಿಗೂ ಮೀಸಲಾತಿ ಕೋಟಾ ನಿಗದಿ ಪಡಿಸಿದ್ದು. ಅದು ಸಹಜವಾಗಿ ಶೇ.50ರ ಮಿತಿ ಮೀರಿ ಹೋಗಿತ್ತು. ಇದೇ ಮಾನದಂಡವನ್ನು ಅನುಸರಿಸಿ ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸಿಕೊಂಡು ಬರಲಾಯಿತು.

ಡಾ. ಕೆ.ಕೃಷ್ಣಮೂರ್ತಿ ಎಂಬ ನಾಗರಿಕರೊಬ್ಬರು, ರಾಜಕೀಯ ಮೀಸಲಾತಿ ಕೋಟಾ ಶೇ.50ನ್ನು ಮೀರಿ ಹೋಗಿದೆ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಾರೆ. ಸರ್ವೋಚ್ಚ ನ್ಯಾಯಾಲಯದ ಮುಂದೆ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ದಿ. ರಾಮಜೋಯಿಸ ಅವರೇ ಅರ್ಜಿದಾರರ ಪರವಾಗಿ ಸರ್ವೋಚ್ಚ ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು. ಸರ್ವೋಚ್ಚ ನ್ಯಾಯಾಲಯ ಅರ್ಜಿದಾರರ ವಾದವನ್ನು ಮನ್ನಿಸಿ ಎರಡು ಗಮನೀಯ ಆದೇಶಗಳನ್ನು ನೀಡಿತು. ಆ ಪ್ರಕಾರ- ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ಸ್ಥಾನಗಳು ಯಾವುದೇ ಕಾರಣಕ್ಕೂ ಶೇ. 50ರಷ್ಟನ್ನು ಮೀರ ಕೂಡದು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳು ಸ್ಪರ್ಧಿಸಲು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರೆಂದು ಪರಿಗಣಿಸಿರುವ ಪಟ್ಟಿಯನ್ನು ರಾಜಕೀಯ ಉದ್ದೇಶಕ್ಕೂ ಅಳವಡಿಕೆ ಮಾಡಿಕೊಂಡಿರುವುದು ನ್ಯಾಯಯುತವಾದ ಕ್ರಮವಲ್ಲ. ಶಿಕ್ಷಣ ಮತ್ತು ಉದ್ಯೋಗಗಳ ಉದ್ದೇಶಕ್ಕಾಗಿ ಗುರುತಿಸಿರುವ ಹಿಂದುಳಿದ ವರ್ಗಗಳೇ ಬೇರೆ; ರಾಜಕೀಯ ಸ್ಥಾನಗಳಿಗೆ ಸ್ಪರ್ಧಿಸಲು ಗುರುತಿಸಬೇಕಾಗಿರುವ ಹಿಂದುಳಿದ ವರ್ಗಗಳೇ ಬೇರೆ ಆಗಿವೆ. ಎರಡೂ ಏಕಾತ್ಮಕತೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿ, ‘ತ್ರಿಸ್ತರ’ (triple test) ಸೂತ್ರ ಒಂದನ್ನು ಮುಂದಿಟ್ಟು, ಕೂಡಲೇ ಸೂತ್ರ ಅನುಸರಿಸಿ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಿ ಮುಂದಿನ ಚುನಾವಣೆಗಳನ್ನು ನಡೆಸಲು ನಿರ್ದೇಶಿಸಿತು.

‘ತ್ರಿಸ್ತರ’ವೆಂದರೆ 1. ರಾಜ್ಯದೊಳಗಿನ ಸ್ಥಳೀಯ ಸಂಸ್ಥೆಗಳಿಗೆ ಅನ್ವಯಿಸುವಂತೆ ಕಟ್ಟುನಿಟ್ಟಿನ ಪ್ರಾಯೋಗಿಕ ದತ್ತಾಂಶವನ್ನಿಟ್ಟುಕೊಂಡು ವಿಚಾರಣೆ ನಡೆಸಿ ಹಿಂದುಳಿದಿರುವಿಕೆಯ ಲಕ್ಷಣ ಮತ್ತು ಪರಿಣಾಮಗಳನ್ನು ಕಂಡುಕೊಳ್ಳಲು ಸಮರ್ಪಿತ ಆಯೋಗವೊಂದನ್ನು ಸ್ಥಾಪಿಸುವುದು; 2. ಆಯೋಗದ ಶಿಫಾರಸಿನ ಬೆಳಕಿನಲ್ಲಿ ಸ್ಥಳೀಯ ಸಂಸ್ಥೆಗಳ ಪ್ರಕಾರ ಒದಗಿಸಬೇಕಾದ ಮೀಸಲಾತಿಯ ಭಾಗವನ್ನು ನಿರ್ದಿಷ್ಟ ಪಡಿಸುವುದು; 3. ಯಾವುದೇ ಸಂದರ್ಭದಲ್ಲಿ ಅಂತಹ ಮೀಸಲಾತಿಯು ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಮತ್ತು ಹಿಂದುಳಿದ ವರ್ಗಗಳ ಪರವಾಗಿ ನಿಗದಿ ಪಡಿಸಿದ ಮೀಸಲಾತಿಯ ಒಟ್ಟು ಸ್ಥಾನಗಳ ಸಂಖ್ಯೆ ಶೇ.50ರಷ್ಟನ್ನು ಮೀರಬಾರದು. ಈ ತೀರ್ಪನ್ನು ಮೇ 11, 2010ರಂದು ನ್ಯಾ.ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಪಂಚ ನ್ಯಾಯಮೂರ್ತಿಗಳ ಪೀಠ ಘೋಷಿಸಿತು.

ಸರ್ವೋಚ್ಚ ನ್ಯಾಯಾಲಯದ ತೀರ್ಪು ಸ್ಪಷ್ಟವಾಗಿದ್ದರೂ, ಸಮರ್ಪಿತ ಆಯೋಗವೊಂದನ್ನು ರಚಿಸಿ ರಾಜಕೀಯವಾಗಿ ಹಿಂದುಳಿದ ಜಾತಿ-ವರ್ಗಗಳನ್ನು ಗುರುತಿಸುವ ಉಸಾಬರಿಯನ್ನು ತೆಗೆದುಕೊಳ್ಳದೆ, ಅಂದಿನ ಭಾಜಪ ಸರಕಾರ ಶೇ. 50ಕ್ಕಿಂತ ಮೀರಿ ಹೋಗಿದ್ದ ಮೀಸಲಾತಿ ಕೋಟಾವನ್ನು ಮಾತ್ರ ಕಡಿಮೆಗೊಳಿಸಿ ಕೈ ತೊಳೆದುಕೊಂಡು ಸುಮ್ಮನಾಯಿತು. ಈ ಸಂದರ್ಭದಲ್ಲಿ, ಅರ್ಹ ಹಿಂದುಳಿದ ವರ್ಗಗಳ ಹಿತ ಕಾಪಾಡುವಲ್ಲಿ ಸರಕಾರ ವಿಫಲವಾಯಿತು.

ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಅನ್ವಯಿಸುವಂತೆ ಮೀಸಲಾತಿ ಸ್ಥಾನಗಳನ್ನು ಕಡಿಮೆಗೊಳಿಸಿದ ಸರಕಾರದ ಉದ್ದೇಶ ಮತ್ತು ರಾಜ್ಯ ಚುನಾವಣಾ ಆಯೋಗ ಗ್ರಾಮಾಂತರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಹೊರಡಿಸಿದ ಅಧಿಸೂಚನೆಯನ್ನು ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ನ್ಯಾಯಾಲಯ ಮಧ್ಯ ಪ್ರವೇಶಿಸಿ, ಚುನಾವಣೆಗೆ ತಡೆ ನೀಡಿತು. ಇದರಿಂದ ಪೀಡಿತವಾದ ರಾಜ್ಯ ಚುನಾವಣಾ ಆಯೋಗವು ವಿಭಾಗಿಯ ಪೀಠಕ್ಕೆ (ರಿಟ್)ಮೇಲ್ಮನವಿ ಸಲ್ಲಿಸಿತು. ವಿಭಾಗೀಯ ಪೀಠ ವಿಚಾರಣೆಗೊಳಪಡಿಸಿ ಚುನಾವಣೆ ನಡೆಸಲು ಅನುಮತಿ ನೀಡಿದರೂ ರಾಜಕೀಯವಾಗಿ ಪ್ರಬಲವಾಗಿವೆ ಎಂದು ಪರಿಗಣಿಸಿರುವ ಕೆಲ ಸಮುದಾಯಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗೆ ಇಡುವ ಬಗ್ಗೆ ಪರಿಶೀಲಿಸುವುದು ನ್ಯಾಯ ಸಮ್ಮತ ಎಂದು ಸರಕಾರಕ್ಕೆ ಸೂಚಿಸಿತು (ರಾಜ್ಯ ಚುನಾವಣಾ ಆಯೋಗ vs ರಾಜ್ಯ ಸರಕಾರ ಮತ್ತು ಇತರರು). ನ್ಯಾ. ಜೆ.ಎಸ್. ಖೇಹರ್ ನೇತೃತ್ವದ ವಿಭಾಗೀಯ ಪೀಠ, ನವೆಂಬರ್ 25, 2010ರ ತೀರ್ಪಿನಲ್ಲಿ ಕೆಲವು ಪ್ರಮುಖ ಅಂಶಗಳನ್ನು ನಮೂದಿಸಿದೆ. ಪಂಚಾಯತ್ ರಾಜ್ ಕಾಯ್ದೆ ಕಲಂ 2(2)ನ್ನಾಗಲಿ ಅಥವಾ ರಾಜ್ಯ ಸರಕಾರ ಸಿದ್ಧಪಡಿಸಿರುವ ಹಿಂದುಳಿದ ವರ್ಗಗಳ ಪಟ್ಟಿಯನ್ನೇ ಆಗಲಿ ಯಾರೂ ಪ್ರಶ್ನಿಸಿರುವುದಿಲ್ಲ. ಹಾಗೆಯೇ ರಾಜಕೀಯವಾಗಿ ಹಿಂದುಳಿದ ವರ್ಗಗಳೆಂದು ಪಟ್ಟಿಯಲ್ಲಿ ಕರ್ನಾಟಕದ ಎರಡೂ ಬಲಿಷ್ಠ ಸಮುದಾಯಗಳನ್ನು ಸೇರಿಸಿರುವ ಹಿನ್ನೆಲೆಯಲ್ಲಿ ಆ ಸಮುದಾಯಗಳು 2010ರಲ್ಲಿ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ತು ಮತ್ತು ಜಿಲ್ಲಾ ಪಂಚಾಯತ್‌ಗಳಲ್ಲಿ ಅವುಗಳು ಹೊಂದಿರುವ ರಾಜಕೀಯ ಪ್ರಾತಿನಿಧ್ಯಗಳ ದತ್ತಾಂಶಗಳನ್ನೂ ದಾಖಲಿಸಿದೆ. ಅಲ್ಲದೆ, ಈ ಕೆಳಕಂಡಂತೆ ಅಭಿಪ್ರಾಯ ಪಟ್ಟಿದೆ ಕೂಡ.

‘‘..... ಮುಂಬರುವ ಚುನಾವಣೆಗಳಲ್ಲಿ ಮೀಸಲಾತಿಯ ಉದ್ದೇಶಕ್ಕಾಗಿ ರಾಜ್ಯ ಸರಕಾರವು ತಿಳಿದು ಅಂಗೀಕರಿಸಿರುವ ಮತ್ತು ಘೋಷಿಸಿರುವ ‘ರಾಜಕೀಯವಾಗಿ ಮುಂದುವರಿದ’ ಎಲ್ಲಾ ಜಾತಿಗಳನ್ನೂ ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗಿಡುವುದು ನ್ಯಾಯ ಸಮ್ಮತವಾಗಿರುತ್ತದೆ’’.

ಇಷ್ಟಾದರೂ ರಾಜ್ಯ ಸರಕಾರ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗದೆ ಯಥಾಪ್ರಕಾರ ಎರಡು ಚುನಾವಣೆಗಳನ್ನು ನಡೆಸಿರುವುದು, ಅದು ನ್ಯಾಯಾಂಗದ ಬಗ್ಗೆ ತಳೆದಿರುವ ದ್ಯೋತಕದ ಸಂಕೇತ!

2021ರ ಮಾರ್ಚ್ ತಿಂಗಳಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರಕಾರದ ನಿಲುವನ್ನು ಸರ್ವೋಚ್ಚ ನ್ಯಾಯಾಲಯ ಒಪ್ಪದೆ, 2010ರಲ್ಲಿ ಅದೇ ನ್ಯಾಯಾಲಯ ಆಜ್ಞಾಪಿಸಿರುವ ಮೂರು ಹಂತದ ಪರಿಶೀಲನಾ ಕಾರ್ಯ ತ್ರಿಸ್ತರ ಕೈಗೊಂಡು ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡಬೇಕು ಎಂದು ಆದೇಶಿಸಿತು. ಮತ್ತೂ ಮುಂದುವರಿದು, ಒಂದೋ ಮೂರು ಹಂತದ ಪರಿಶೀಲನಾ ಕಾರ್ಯ ಕೈಗೆತ್ತಿಕೊಳ್ಳಿ ಅಥವಾ ಎಲ್ಲಾ ಹಿಂದುಳಿದ ವರ್ಗಗಳ ಸ್ಥಾನಗಳನ್ನು ‘ಸಾಮಾನ್ಯ’ ಎಂದು ಪರಿಗಣಿಸಿ ಚುನಾವಣೆ ನಡೆಸಿ ಎಂದು ಮಹಾರಾಷ್ಟ್ರ ಸರಕಾರಕ್ಕೆ ಕಟ್ಟಾಜ್ಞೆ ವಿಧಿಸಿತು. ಈ ಮಧ್ಯೆ ಮಧ್ಯಪ್ರದೇಶದ ಇಂತಹದೇ ಪ್ರಕರಣದಲ್ಲಿ ಮೇ 10, 2022ರಂದು ಸರ್ವೋಚ್ಚ ನ್ಯಾಯಾಲಯದ ಅದೇ ತ್ರಿಸದಸ್ಯ ಪೀಠ ಪಂಚಾಯತ್ ಕ್ಷೇತ್ರಗಳ ಪುನರ್ ವಿಂಗಡಣೆ ಕಾರ್ಯ ಪೂರ್ಣವಾಗಿಲ್ಲ ಎನ್ನುವುದಾಗಲಿ ಅಥವಾ ತ್ರಿಸ್ತರ ಪರಿಶೀಲನಾ ಕಾರ್ಯನಿಮಿತ್ತ ಹಿಂದುಳಿದ ವರ್ಗಗಳಿಗೆ ಕ್ಷೇತ್ರ ಮೀಸಲಿರಿಸುವ ಕೆಲಸವಾಗಿಲ್ಲ ಎಂಬುದನ್ನೇ ಆಗಲಿ ಮುಂದಿಟ್ಟುಕೊಂಡು ಅವಧಿ ಮೀರಿರುವ ಪಂಚಾಯತ್‌ಗಳಿಗೆ ಚುನಾವಣೆ ನಡೆಸದಿರುವುದು ಸಂವಿಧಾನ ವಿರೋಧಿ ಎಂಬ ಖಚಿತ ನಿಲುವನ್ನು ತಳೆದು ತಕ್ಷಣವೇ ಚುನಾವಣಾ ಅಧಿಸೂಚನೆ ಹೊರಡಿಸಲು ಮಧ್ಯ ಪ್ರದೇಶವು ಸೇರಿದಂತೆ ಅವಧಿ ಮೀರಿರುವ ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ಬಾಕಿ ಇರುವ ಅಂತಹ ರಾಜ್ಯಗಳ ಚುನಾವಣಾ ಆಯೋಗಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿತು(ಸುರೇಶ್ ಮಹಾಜನ್ vs ಮಧ್ಯ ಪ್ರದೇಶ).

ಕಡೆಗೂ, ಕರ್ನಾಟಕ ಸರಕಾರ, ಬಸವರಾಜ ಬೊಮ್ಮಾಯಿ ಅವರ ಮುಖ್ಯಮಂತ್ರಿ ಅವಧಿಯಲ್ಲಿ, ಸರ್ವೋಚ್ಚ ನ್ಯಾಯಾಲಯದ ಕಟ್ಟಾಜ್ಞೆಗೆ ಮಣಿದು, ನ್ಯಾ. ಭಕ್ತವತ್ಸಲ ಅವರ ಅಧ್ಯಕ್ಷತೆ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಒಬ್ಬರು ಸದಸ್ಯರಾಗಿರುವ ಸಮಿತಿಯೊಂದನ್ನು ರಚಿಸಿ ಮೇ 8, 2022ರಂದು ಆದೇಶ ಹೊರಡಿಸುತ್ತದೆ. ಹಾಗೆಯೇ, ಮೂರು ತಿಂಗಳ ಅವಧಿಯಲ್ಲಿ ವರದಿ ನೀಡಲೂ ಸಹ ಸೂಚಿಸುತ್ತದೆ. ಸಮಿತಿಯೇನೋ ಮೂರು ತಿಂಗಳಲ್ಲೇ ತನಗೆ ವಹಿಸಿದ ಕೆಲಸವನ್ನು ಪೂರೈಸಿ ಜುಲೈ 26, 2022ರಂದು ವರದಿಯನ್ನು ಅಂದಿನ ಸರಕಾರಕ್ಕೆ ಸಲ್ಲಿಸುತ್ತದೆ. ಆದರೆ ಸರಕಾರ ಮಾತ್ರ ಜನಪ್ರತಿನಿಧಿಗಳ ಸದನಗಳಲ್ಲಿ ಮಂಡಿಸದೆ ಅಥವಾ ಸಾರ್ವಜನಿಕ ಅಭಿಪ್ರಾಯವನ್ನೂ ಪಡೆಯದೆ ದಿವ್ಯ ಮೌನಕ್ಕೆ ಶರಣಾಗಿ, ಎಲ್ಲವೂ ಗಪ್ ಚುಪ್ ಎನ್ನುವಂತಾಯಿತು.

ಕೊನೆಗೂ ಯಾವ ನಾಗರಿಕರೂ ವರದಿಯಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಳಿರುವ ಅಂಶಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ತಿಳಿಯಲಾಗಲಿಲ್ಲ. ಜೊತೆಗೆ ಉಚ್ಚ ನ್ಯಾಯಾಲಯದ ವಿಭಾಗಿಯ ಪೀಠ ರಾಜಕೀಯವಾಗಿ ಬಲಿಷ್ಠರಾಗಿರುವ ಕೋಮುಗಳನ್ನು ಹೊರಗಿಡುವುದು ಅತ್ಯವಶ್ಯಕ ಎಂದು ಹೇಳಿರುವ ಅಂಶವನ್ನು ನ್ಯಾ.ಭಕ್ತವತ್ಸಲ ಸಮಿತಿ ಪಾಲಿಸಿದೆಯೇ? ಎಂಬುದೂ ಬಹಿರಂಗಗೊಳ್ಳಲಿಲ್ಲ. ಹಾಗೊಂದು ವೇಳೆ, ಉಚ್ಚ ನ್ಯಾಯಾಲಯದ ಅಭಿಪ್ರಾಯವನ್ನು ಗೌರವಿಸಿ ಮನ್ನಿಸಿದ್ದೇ ಆಗಿದ್ದಲ್ಲಿ, ರಾಜಕೀಯ ಕಾರಣಕ್ಕಾಗಿ ವಿಭಾಗಿಸಿರುವ ಎರಡು ಗುಂಪುಗಳಲ್ಲಿದ್ದ ಎ ಮತ್ತು ಬಿಗಳಲ್ಲಿ ರಾಜಕೀಯವಾಗಿ ಪ್ರಬಲವಾಗಿರುವ ಬಿ ಗುಂಪನ್ನು ಕೈಬಿಡಬೇಕಾಗಿತ್ತು. ಅದೂ ಕೂಡ ನಿಗೂಢವಾಗಿಯೇ, ರಹಸ್ಯವಾಗಿಯೇ ಉಳಿದು ಹೋಯಿತು. ಬಿ ಗುಂಪನ್ನು ಸಮಿತಿ ಕೈಬಿಟ್ಟಿದ್ದಲ್ಲಿ, ಎ ಗುಂಪಿನಲ್ಲಿರುವ ಅತ್ಯಂತ ಹಿಂದುಳಿದ ಜಾತಿ-ಸಮುದಾಯಗಳಿಗೆ ರಾಜಕೀಯವಾಗಿ ಆಗಿರುವ ಐತಿಹಾಸಿಕ ಅನ್ಯಾಯವನ್ನು ಹೋಗಲಾಡಿಸಿ ನ್ಯಾಯ ದೊರಕಿಸಿ ಕೊಡುವ ಅವಕಾಶವಿತ್ತು.

ಸರಕಾರ ಸರ್ವೋಚ್ಚ ನ್ಯಾಯಾಲಯ ಹೇಳಿದ ತ್ರಿಸ್ತರ ಷರತ್ತನ್ನು ಪಾಲಿಸಿಲ್ಲ ಎಂದೇನಾದರೂ ನ್ಯಾ. ಭಕ್ತವತ್ಸಲ ಸಮಿತಿಯ ವರದಿಯನ್ನು ತಿರಸ್ಕರಿಸಿದೆಯೇ? ಎಂಬುದೆಲ್ಲವನ್ನು ಸಾರ್ವಜನಿಕರು ತಿಳಿದುಕೊಳ್ಳುವ ಎಲ್ಲಾ ಹಕ್ಕುಗಳಿವೆ. ಇಷ್ಟಾದರೂ ಸರಕಾರ ಮಾತ್ರ ಬಾಯಿ ಹೊಲಿದುಕೊಂಡಿದೆ. ಪದೇ ಪದೇ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗಲೆಲ್ಲ, ಏನಾದರೂ ಒಂದು ಸಬೂಬು ನೀಡುತ್ತಲೇ ಬಂದಿದೆ ಸರಕಾರ. ಸರ್ವೋಚ್ಚ ನ್ಯಾಯಾಲಯದ ಷರತ್ತನ್ನು ಸಮಿತಿ ಪಾಲಿಸದಿದ್ದಲ್ಲಿ, ಸಮಿತಿಯ ವರದಿಯನ್ನು ತಿರಸ್ಕರಿಸುವುದು ಉಚಿತವಾದ ಮಾರ್ಗವಾಗಿದೆ. ಸರಕಾರ ಯಾವುದೊಂದನ್ನೂ ಹೇಳದೆ ನ್ಯಾಯಾಲಯದಲ್ಲಿ ಸಬೂಬುಗಳನ್ನು ಹೇಳಿಕೊಂಡು ಬರುತ್ತಿರುವುದರಿಂದ ನ್ಯಾಯಾಲಯಗಳೂ ಬೇಸತ್ತು ಹೋಗಿವೆ! ಏನಾದರೊಂದು ಕುಂಟುನೆಪ ಹೇಳಿ ನ್ಯಾಯಾಲಯದಿಂದ ತಪ್ಪಿಸಿಕೊಳ್ಳುವ ಚಾಳಿಯನ್ನು ಸರಕಾರ ಮುಂದುವರಿಸಿದೆ.

ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿ ವರ್ಷಗಳೇ ಕಳೆದಿದ್ದರೂ, ಸರಕಾರ(ಗಳು) ಮಾತ್ರ ಈ ದಿಸೆಯಲ್ಲಿ ನ್ಯಾಯೋಚಿತವಾಗಿ ಯೋಚಿಸುವ ಗೊಡವೆಗೆ ಹೋಗಿಲ್ಲದಿರುವುದು ಸಾಂವಿಧಾನಿಕವಾಗಿ ನೈಜ ಹಿಂದುಳಿದ ವರ್ಗಗಳಿಗೆ ಸಿಕ್ಕ ಹಕ್ಕುಗಳ ಗೋಣು ಮುರಿದಂತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎನ್. ಲಿಂಗಪ್ಪ

contributor

Similar News