ಚುನಾವಣಾ ಆಯೋಗ ತನ್ನ ಹೊಣೆಗಾರಿಕೆ ಮರೆತಿದೆಯೇ?

Update: 2024-10-18 06:18 GMT

ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ನವೆಂಬರ್ 26ರೊಳಗೆ ಅಲ್ಲಿ ಸರಕಾರ ರಚನೆಯಾಗಬೇಕು. ನವೆಂಬರ್ 23ರಂದು ಫಲಿತಾಂಶ ಬರಲಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇಲ್ಲೇನೋ ಮರ್ಮವಿರುವ ಹಾಗಿದೆ.

ನವೆಂಬರ್ 26ರೊಳಗೆ ಯಾರಿಗೂ ಬಹುಮತ ಬರದಿದ್ದರೆ ಮತ್ತು ಸರಕಾರ ರಚನೆಯಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆಯೇ?

ಮಹಾರಾಷ್ಟ್ರದ ರಾಜಕೀಯ ಇಬ್ಭಾಗವಾಗಿರುವ ರೀತಿ ನೋಡಿದರೆ, ಹೇಗೆಲ್ಲ ಆಟ ಇದ್ದೀತು ಎಂಬ ಅನುಮಾನ ಮೂಡದೇ ಇರುವುದಿಲ್ಲ.

ಫಲಿತಾಂಶದಲ್ಲಿ ಕೊಂಚವಾದರೂ ಬದಲಾವಣೆಯಾದರೆ ಶಾಸಕರನ್ನು ಗುವಾಹಟಿ, ಗೋವಾಕ್ಕೆ ಕರೆದೊಯ್ದು ರಾಷ್ಟ್ರಪತಿ ಆಳ್ವಿಕೆಯ ಸ್ಥಿತಿಯೂ ಬರಬಹುದು.

ಮಹಾರಾಷ್ಟ್ರ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 29 ಆಗಿದ್ದು, ನಾಮಪತ್ರಗಳ ಪರಿಶೀಲನೆ ಅಕ್ಟೋಬರ್ 30ರಂದು ನಡೆಯಲಿದೆ. ನಾಮಪತ್ರ ಹಿಂಪಡೆಯಲು ನವೆಂಬರ್ 4 ಕೊನೆಯ ದಿನವಾಗಿದೆ.

ಜಾರ್ಖಂಡ್‌ನಲ್ಲಿ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನವಾಗಿದ್ದರೆ, ಅಕ್ಟೋಬರ್ 30 ನಾಮಪತ್ರ ಹಿಂಪಡೆಯಲು ಕಡೇ ದಿನಾಂಕ. ಎರಡನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನ ಅಕ್ಟೋಬರ್ 29 ಆಗಿದ್ದರೆ, ನವೆಂಬರ್ 1 ನಾಮಪತ್ರ ಹಿಂಪಡೆಯಲು ಕಡೇ ದಿನ.

ಸಣ್ಣ ರಾಜ್ಯ ಜಾರ್ಖಂಡ್‌ನಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದರೆ, ದೇಶದ ಮೂರನೇ ಅತಿ ದೊಡ್ಡ ರಾಜ್ಯ ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಹಿಂದೆಯೂ ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ.

ಜಾರ್ಖಂಡ್‌ನಲ್ಲಿ ಹಿಂದೆ 5 ಹಂತದಲ್ಲಿ ಘೋಷಣೆ ನಡೆದಿತ್ತು. ಈ ಬಾರಿ ಎರಡು ಹಂತಗಳಲ್ಲಿ ಮಾತ್ರ ನಡೆಯಲಿದೆ.

ಈಗ ಮಹಾರಾಷ್ಟ್ರದಲ್ಲಿ ಎನ್‌ಸಿಪಿಯ ಎರಡೂ ಬಣಗಳ ಚುನಾವಣೆ ಚಿಹ್ನೆಯ ವಿಷಯವೂ ಮುನ್ನೆಲೆಗೆ ಬಂದಿದೆ.

ಸೆಪ್ಟಂಬರ್‌ನಲ್ಲಿ ಶರದ್ ಪವಾರ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಮೊದಲಿದ್ದ ಚಿಹ್ನೆಯನ್ನು ಯಾವುದೇ ಒಂದು ಬಣಕ್ಕೆ ನೀಡುವುದು ಆ ಬಣಕ್ಕೆ ಲಾಭದಾಯಕವಾಗಲಿದೆ ಮತ್ತು ಲೆವೆಲ್ ಪ್ಲೇಯಿಂಗ್ ಫೀಲ್ಡ್‌ಗೆ ವಿರುದ್ಧ ವಾಗಿದೆ. ಹಾಗಾಗಿ, ಎನ್‌ಸಿಪಿಯ ಎರಡೂ ಬಣಗಳಿಗೂ ಹೊಸ ಚಿಹ್ನೆ ನೀಡಲಾಗಿದೆ.

ಹರ್ಯಾಣ ಮತ್ತು ಜಮ್ಮು-ಕಾಶ್ಮೀರ ಚುನಾವಣೆ ಘೋಷಣೆಯಾದಾಗ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗಳನ್ನೂ ಜೊತೆಯಲ್ಲೇ ಯಾಕೆ ನಡೆಸಲಾಗುತ್ತಿಲ್ಲ ಎಂಬ ಪ್ರಶ್ನೆಗಳು ಎದ್ದಿದ್ದವು.

ಆದರೆ ಗಮನಿಸಿ, ಸೆಪ್ಟಂಬರ್ 5ರ ನಂತರ ಆರು ಬಾರಿ ಮಹಾರಾಷ್ಟ್ರ ಸರಕಾರದ ಕ್ಯಾಬಿನೆಟ್ ಸಭೆಗಳು ನಡೆದವು.

ಅವುಗಳಲ್ಲಿ ತೆಗೆದುಕೊಳ್ಳಲಾದ ನಿರ್ಣಯಗಳು ಸರಕಾರವನ್ನು ಉಳಿಸಿಕೊಳ್ಳುವ ಉದ್ದೇಶದವು ಎಂದು ಶಿವಸೇನೆ ಯುಬಿಟಿ ಬಣದ ನಾಯಕಿ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.

ಇದಲ್ಲದೆ ಮಹಾರಾಷ್ಟ್ರದಲ್ಲಿ ವಿವಿಧ ಶ್ರೇಣಿಯ ಸರಪಂಚರ ವೇತನದಲ್ಲೂ ಹೆಚ್ಚಳವಾಗಿದೆ. ಅದು ಈಗ 10 ಸಾವಿರ ರೂ. ವರೆಗೂ ಹೆಚ್ಚಿದೆ.

ಮದ್ರಸಾ ಶಿಕ್ಷಕರ ವೇತನ 6 ಸಾವಿರದಿಂದ 16 ಸಾವಿರ ರೂ. ಆಗಿದೆ.

ಉತ್ತರ ಪ್ರದೇಶದಲ್ಲಿ ಮದ್ರಸಾ ಶಿಕ್ಷಕರ ಸ್ಥಿತಿ ಯಾವ ಮಟ್ಟದಲ್ಲಿದೆ ಎಂದು ನೋಡಿಕೊಂಡರೆ, ಇಲ್ಲಿನ ರಾಜಕೀಯ ಏನೆಂಬುದನ್ನು ಗ್ರಹಿಸಬಹುದಾಗಿದೆ.

ಸಿಎಂ ಏಕನಾಥ್ ಶಿಂದೆ ಕ್ಷೇತ್ರಕ್ಕಾಗಿ ರೂ. 30 ಸಾವಿರ ಕೋಟಿಗೂ ಹೆಚ್ಚಿನ ಮೌಲ್ಯದ ಯೋಜನೆಗಳು ಮಂಜೂರಾಗಿವೆ.

ಅಂದರೆ, ಮಹಾರಾಷ್ಟ್ರದ ಚುನಾವಣೆ ಹರ್ಯಾಣ ಮತ್ತು ಜಮ್ಮು-ಕಾಶ್ಮೀರ ಚುನಾವಣೆ ಜೊತೆಯಲ್ಲೇ ಯಾಕೆ ನಡೆದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ಇನ್ನು ವಾರದ ಮಧ್ಯದಲ್ಲಿ ಬುಧವಾರ ಮತದಾನ ನಿಗದಿಪಡಿಸಲಾಗಿದೆ. ಹೀಗಾಗಿ ನಗರಗಳಲ್ಲಿ ಕೆಲಸದಲ್ಲಿರುವವರು ಹಳ್ಳಿಗೆ ಹೋಗಿ ಮತ ಚಲಾಯಿಸುವುದು ಕಷ್ಟವಾಗುತ್ತದೆ.

ಇನ್ನು ಉತ್ತರ ಪ್ರದೇಶದ 10 ವಿಧಾನಸಭೆ ಸ್ಥಾನಗಳಿಗೆ ಉಪ ಚುಣಾವಣೆ ದಿನಾಂಕ ಪ್ರಕಟಿಸಬೇಕಿತ್ತು. ಆದರೆ 9 ಕ್ಷೇತ್ರಗಳಿಗೆ ಮಾತ್ರವೇ ದಿನಾಂಕ ಘೋಷಿಸಲಾಗಿದೆ

ಉಳಿದ ಒಂದು ಕ್ಷೇತ್ರ ಮಿಲ್ಕಿಪುರ. ಅದರಲ್ಲಿ ಅಯೋಧ್ಯೆಯ ಈಗಿನ ಸಂಸದ ಅವಧೇಶ್ ಪ್ರಸಾದ್ ಶಾಸಕರಾಗಿದ್ದರು.

ಆದರೆ ಚುನಾವಣೆಯನ್ನೇ ಘೋಷಿಸಲು ಆಗದಂಥದ್ದು ಮಿಲ್ಕಿಪುರ ಕ್ಷೇತ್ರದಲ್ಲಿ ಏನಿದೆ?

ಅಲ್ಲಿ ಕೋರ್ಟ್ ಕೇಸ್ ನಡೆದಿದೆ ಮತ್ತದನ್ನು ಅವಧೇಶ್ ಪ್ರಸಾದ್ ಅವರೇ ಹಾಕಿದ್ದು.

ಈ ಕಾರಣದಿಂದ ಇತರ ಕ್ಷೇತ್ರಗಳೊಂದಿಗೆ ಇದರ ಚುನಾವಣೆ ದಿನಾಂಕ ನಿಗದಿಪಡಿಸಲು ಆಗಲಿಲ್ಲ ಎಂಬುದು ಚುನಾವಣಾ ಆಯೋಗದ ಹೇಳಿಕೆ.

ಮಿಲ್ಕಿಪುರ ಕ್ಷೇತ್ರದಲ್ಲಿ ಗೆಲ್ಲುವುದಕ್ಕಾಗಿ ಭಾರೀ ತಯಾರಿಯೇ ನಡೆದಿದೆ. ಆದರೆ ಅದರ ಚುನಾವಣೆಗೆ ದಿನಾಂಕ ಘೋಷಣೆಯಾಗದೇ ಉಳಿದಿದೆ.

ಈ ಒಂದು ಕ್ಷೇತ್ರದ ರಾಜಕೀಯ ಎರಡು ರಾಜ್ಯಗಳ ಅಸೆಂಬ್ಲಿ ಚುನಾವಣೆಗಿಂತ ಯಾವ ರೀತಿಯಲ್ಲೂ ಕಡಿಮೆಯಿಲ್ಲ.

ಚುನಾವಣಾ ಆಯೋಗ ಎಕ್ಸಿಟ್ ಪೋಲ್ ಬಗ್ಗೆ ಮಾತಾಡಿತು ಎಂಬುದು ಮತ್ತೊಂದು ವಿಚಾರ. ಎಕ್ಸಿಟ್ ಪೋಲ್‌ನಿಂದ ಯಡವಟ್ಟು ಗಳೇ ಆಗುತ್ತಿರುವುದರ ಬಗ್ಗೆ ಆಯೋಗ ಹೇಳಿದೆ.

ಇಲೆಕ್ಟ್ರಾನಿಕ್ ಮೀಡಿಯಾಗಳು ಆತ್ಮಾವ ಲೋಕನ ಮಾಡಿಕೊಳ್ಳಬೇಕಾಗಿದೆ ಮತ್ತು ವಿಶ್ವಾಸಾರ್ಹತೆ ಕಾಯ್ದುಕೊಳ್ಳಬೇಕಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ.

8.30ಕ್ಕೆ ಮತ ಎಣಿಕೆ ಶುರುವಾಗುವಾಗ 8 ಗಂಟೆಯಿಂದಲೇ ಹೇಗೆ ಟ್ರೆಂಡಿಂಗ್ ಕೊಡಲು ಸಾಧ್ಯವಾಗುತ್ತದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಆದರೆ ಇದನ್ನು ಹರ್ಯಾಣದ ಮತ ಎಣಿಕೆ ದಿನ ಹೇಳಲು ಅವರಿಗೇಕೆ ಸಾಧ್ಯವಾಗಲಿಲ್ಲ?

ಮತ ಎಣಿಕೆ ವೇಳೆ ಡೇಟಾ ಅಪ್ಲೋಡ್ ಆಗುವ ಬಗೆ ಹೇಗಿರುತ್ತದೆ ಎಂಬುದರ ಬಗ್ಗೆಯೂ ವಿವರಿಸಿದ್ದಾರೆ.

ಇವಿಎಂ ಕುರಿತ ಪ್ರಶ್ನೆಯಂತೂ ಚುನಾವಣಾ ಆಯೋಗಕ್ಕೆ ಸುದ್ದಿಗೋಷ್ಠಿಯಲ್ಲೂ ಎದುರಾಗುತ್ತದೆ.

ಅದಕ್ಕೆ ಉತ್ತರಿಸಿದ್ದಾರೆ. ಆದರೆ ಇವಿಎಂ ಕುರಿತ ಪ್ರಶ್ನೆಗಳಿಂದಾಗಿ ಸುಸ್ತಾಗಿರುವ ಅವರು ಸಮರ್ಪಕವಾಗಿ ಉತ್ತರಿಸುವಲ್ಲಿ ಸೋತಿದ್ದಾರೆ ಎಂದೇ ಅನಿಸುತ್ತದೆ.

ದೇಶದಲ್ಲಿ ಎರಡು ಚುನಾವಣಾ ಆಯೋಗಗಳಿಲ್ಲ, ಹಾಗಾಗಿ ಚುನಾವಣಾ ಆಯುಕ್ತರೇ ಇವಿಎಂ ಕುರಿತ ಎಲ್ಲ ಪ್ರಶ್ನೆಗಳಿಗೆ, ಅನುಮಾನಗಳಿಗೆ ಉತ್ತರಿಸಬೇಕು.

ಯಾವಾಗೆಲ್ಲ ಚುನಾವಣೆ ನಡೆಯು ತ್ತದೆಯೋ ಅವಾಗೆಲ್ಲ ಜನರ ಪ್ರಶ್ನೆಗಳಿಗೆ ಉತ್ತರ ನೀಡಿ ಜನರಲ್ಲಿರುವಂತಹ ಸಂಶಯಗಳನ್ನು ನಿವಾರಿಸಬೇಕು.

ಇದು ಅವರ ಜವಾಬ್ದಾರಿ. ಆದ್ದರಿಂದಲೇ ದೇಶದ ಅತ್ಯುನ್ನತ ಹುದ್ದೆಯನ್ನು ಅವರಿಗೆ ನೀಡಲಾಗಿದೆ.

ಅವರ ಕಾರ್ಯವೈಖರಿಯಲ್ಲಿ ಯಾರಿಗೂ ಹಸ್ತಕ್ಷೇಪದ ಅಧಿಕಾರವಿಲ್ಲ. ಜನರು ಅವರ ಮೇಲೆ ಮತ್ತು ದೇಶದ ಚುನಾವಣಾ ವ್ಯವಸ್ಥೆಯ ಮೇಲೆ ಭರವಸೆ ಇಡಬೇಕಿದ್ದರೆ ಅವರು ಈ ರೀತಿ ವಿಚಲಿತಗೊಳ್ಳದೆ ಪ್ರಶ್ನೆ ಬಂದಾಗೆಲ್ಲ ಸಮರ್ಥವಾಗಿ ಉತ್ತರಿಸಬೇಕು.

ವೆಬ್‌ಸೈಟ್‌ನಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ಅಪ್ಲೋಡ್ ಮಾಡಿಬಿಟ್ಟು ನಾವು ಇದಕ್ಕೆ ಪ್ರತಿಕ್ರಿಯೆ ನೀಡಿದ್ದೇವೆ ಅಂತ ಹೇಳಿದರೆ ಸಾಲದು.

ದೇಶದ ಗ್ರಾಮೀಣ ಭಾಗದ ಜನರಲ್ಲೂ ಚುನಾವಣೆಯ ಕುರಿತು ಭರವಸೆ ಮೂಡಿಸು ವುದು ಚುನಾವಣಾ ಆಯೋಗದ ಜವಾಬ್ದಾರಿ.

ದೇಶದಲ್ಲಿ ಪ್ರಜಾಪ್ರಭುತ್ವ ಇದೆ ಅಂತ ಹೇಳಿದರೆ ಸಾಲದು, ಪ್ರಜಾಪ್ರಭುತ್ವ ಇರುವ ಹಾಗೆ ಜನಸಾಮಾನ್ಯರಿಗೆ ಕಾಣಬೇಕು. ಹಾಗೆ ಮಾಡುವುದು ಚುನಾವಣಾ ಆಯೋಗದ್ದೇ ಹೊಣೆಗಾರಿಕೆ. ಅದರಿಂದ ಅದು ಹಿಂದೆ ಸರಿಯಬಾರದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪ್ರವೀಣ್ ಎನ್.

contributor

Similar News