ಮಲಯಾಳಂ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ ನ್ಯಾ.ಕೆ.ಹೇಮಾ ಸಮಿತಿ ವರದಿ

Update: 2024-08-27 08:32 GMT

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿರುವ ಜಸ್ಟಿಸ್ ಹೇಮಾ ಸಮಿತಿ ವರದಿ ಅಲ್ಲಿನ ಕರಾಳ ಮುಖವನ್ನು ಬಿಚ್ಚಿಟ್ಟಿದೆ. ಅದು ತೆರೆದಿಟ್ಟಿರುವ ಸತ್ಯಗಳು ಬೆಚ್ಚಿಬೀಳಿಸುವಂತಿವೆ.

2017ರಲ್ಲಿ ನಟಿಯೊಬ್ಬರ ಮೇಲೆ ಸ್ಟಾರ್ ನಟನೊಬ್ಬನ ಸಹಚರರು ಅತ್ಯಾಚಾರ ಯತ್ನ ನಡೆಸಿದ ಬಳಿಕ ಹೇಮಾ ಸಮಿತಿ ರಚಿಸಲಾಗಿತ್ತು. 2017ರಲ್ಲಿ ನಟಿಯೊಬ್ಬರ ಅಪಹರಣ ಮತ್ತು ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ಖ್ಯಾತ ನಟ ದಿಲೀಪ್ ಬಂಧನವಾಗಿತ್ತು. ಆ ಪ್ರಕರಣದ ಸಂಬಂಧ ಮಲಯಾಳಂ ಚಿತ್ರರಂಗದ ಕಲಾವಿದೆಯರ ಸಂಘ ‘ವಿಮೆನ್ ಇನ್ ಸಿನೆಮಾ ಕಲೆಕ್ಟಿವ್’ ಒತ್ತಾಯದ ಮೇರೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರಕಾರ ನ್ಯಾ. ಕೆ. ಹೇಮಾ ನೇತೃತ್ವದ ಸಮಿತಿ ರಚಿಸಿತ್ತು. ಹಿರಿಯ ನಟಿ ಶಾರದಾ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಕೆ.ಬಿ. ವತ್ಸಲಾ ಕುಮಾರಿ ಅವರಿದ್ದ ಈ ಸಮಿತಿ ವರದಿಯನ್ನು 2019ರಲ್ಲಿಯೇ ಸರಕಾರಕ್ಕೆ ಸಲ್ಲಿಸಿತ್ತು. ಆದರೆ, ಸರಕಾರ ಆ ವರದಿಯನ್ನು ಬಹಿರಂಗಪಡಿಸಿರಲಿಲ್ಲ. ಈಗ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಯಿಂದಾಗಿ ಹಾಗೂ ನ್ಯಾಯಾಲಯದ ಸೂಚನೆ ಮೇರೆಗೆ ವರದಿ ಬಹಿರಂಗಪಡಿಸಲಾಗಿದೆ.

ಕಳೆದ ವಾರ ಕೇರಳ ಹೈಕೋರ್ಟ್ ವರದಿ ಬಿಡುಗಡೆ ಮಾಡಲು ಅನುಮತಿ ನೀಡಿತ್ತು. ವರದಿಯಲ್ಲಿ ಉಲ್ಲೇಖಿಸಲ್ಪಟ್ಟವರ ಗುರುತುಗಳನ್ನು ರಕ್ಷಿಸಲು ಹೆಸರುಗಳು ಮತ್ತು ಸೂಕ್ಷ್ಮ ಮಾಹಿತಿಯನ್ನು ಮರುಹೊಂದಿಸಬೇಕು ಎಂದೂ ಕೋರ್ಟ್ ಸೂಚಿಸಿತ್ತು. 295 ಪುಟಗಳ ವರದಿಯ 63 ಪುಟಗಳನ್ನು ಆರ್‌ಟಿಐ ಕಾಯ್ದೆಯಡಿ ಬಿಡುಗಡೆ ಮಾಡುವ ಮೊದಲು ಮರು ರೂಪಿಸಲಾಗಿದೆ. ಚಿತ್ರರಂಗ ಮಾಫಿಯಾ ನಿಯಂತ್ರಣದಲ್ಲಿ ಇರುವುದರ ಬಗ್ಗೆ ವರದಿ ವಿವರಿಸುತ್ತದೆ. ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರೋದ್ಯಮದಲ್ಲಿ ಅಲ್ಲೋಲ ಕಲ್ಲೋಲವನ್ನೇ ಎಬ್ಬಿಸಿದೆ.

ಮಲಯಾಳಂ ಸಿನೆಮಾ ಇಂಡಸ್ಟ್ರಿಯನ್ನು ನಿಯಂತ್ರಿಸುವ ಪವರ್ ಗ್ರೂಪ್ ಇದೆ ಎಂಬ ಆರೋಪಗಳು ಕೇಳಿಬಂದಿವೆ. ಕಲಾವಿದರು ಜೀವಭಯ ಮತ್ತು ಚಿತ್ರರಂಗದಲ್ಲಿ ನೆಲೆಯನ್ನೇ ಕಳೆದುಕೊಳ್ಳುವ ಭಯದಿಂದಾಗಿ ದೌರ್ಜನ್ಯದ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಚಿತ್ರದಲ್ಲಿ ನಟಿಸುವ ಮಹಿಳೆಯರು ನಿರ್ದೇಶಕರ ವಿರುದ್ಧ ದೂರು ನೀಡಲು ಸಹ ಸಾಧ್ಯವಿಲ್ಲದ ಸ್ಥಿತಿ ಇದೆ ಎಂಬ ಅಂಶವೂ ವರದಿಯಲ್ಲಿದೆ.

ಈ ವರದಿ ಕೇರಳ ಚಿತ್ರರಂಗದ ದಿಗ್ಗಜರೇ ತಾವು ಹೊಂದಿದ್ದ ಹುದ್ದೆಗಳಿಗೆ ರಾಜೀನಾಮೆ ನೀಡುವಂತಾಗಲು ಕಾರಣವಾಗಿದೆ.ಅಷ್ಟರ ಮಟ್ಟಿಗೆ ಮಲಯಾಳಂ ಚಿತ್ರರಂಗದಲ್ಲಿ ಈ ವರದಿ ಮೂಲಕ ಬಿರುಗಾಳಿಯೇ ಎದ್ದಿದೆ.

ಈ ಪ್ರಮುಖರ ರಾಜೀನಾಮೆಗಳು ನಿಧಾನವಾಗಿಯಾದರೂ ಚಿತ್ರರಂಗದಲ್ಲಿನ ಸ್ಥಿತಿ ಬದಲಾದೀತೇ ಎಂಬ ನಿರೀಕ್ಷೆಯನ್ನೂ ಮೂಡಿಸದೇ ಇಲ್ಲ.

ಮೊನ್ನೆ ಆಗಸ್ಟ್ 19ರಂದು ಹೇಮಾ ವರದಿಯನ್ನು ಬಹಿರಂಗಗೊಳಿಸಲಾಯಿತು. ಆಗಸ್ಟ್ 23ರಂದು ಮಲಯಾಳಂ ನಟ ಸಿದ್ದೀಕ್ ವರದಿಯನ್ನು ಸ್ವಾಗತಿಸಿದ್ದರು ಮತ್ತು ಅದರ ಶಿಫಾರಸುಗಳ ಕುರಿತು ತ್ವರಿತ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಿದ್ದರು.

ಆದರೆ ವರದಿಯಲ್ಲಿ ಉಲ್ಲೇಖವಾಗಿರುವಂಥ ಪವರ್ ಲಾಬಿ ಇಲ್ಲ ಎಂದೂ ಅವರು ಹೇಳಿದ್ದು ಇನ್ನೊಂದೆಡೆ ವರದಿಯಾಗಿತ್ತು.

ಅದಾದ ಮೇಲೆ ಆಗಸ್ಟ್ 25ರಂದು ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವರದಿಯಲ್ಲಿ ಉಲ್ಲೇಖವಾಗಿರುವಂತೆ ಯಾವೆಲ್ಲ ನಟಿಯರು ಚಿತ್ರರಂಗದಲ್ಲಿ ಕಿರುಕುಳದ ಕಹಿ ಅನುಭವ ಹೊಂದಿದ್ದಾರೋ ಅವರಿಗೆ ತನ್ನ ಬೆಂಬಲ ಇರುವುದಾಗಿ ಸಿದ್ದೀಕ್ ಹೇಳಿದ್ದ ದಿನವೇ ಚಿತ್ರ ನಿರ್ಮಾಪಕನೊಬ್ಬನ ವಿರುದ್ಧ ಬಂಗಾಳಿ ಚಿತ್ರನಟಿ ಶ್ರೀಲೇಖಾ ಮಿತ್ರಾ ಗಂಭೀರ ಆರೋಪ ಮಾಡಿದ್ದರು.

2009ರ ಚಲನಚಿತ್ರಕ್ಕಾಗಿ ಆಡಿಷನ್‌ನಲ್ಲಿ ಮಲಯಾಳಂ ಚಲನಚಿತ್ರ ನಿರ್ಮಾಪಕ ರಂಜಿತ್ ದುರ್ವರ್ತನೆ ಬಗ್ಗೆ ಆಕೆ ದೂರಿದ್ದರು. ಅದಾದ ಬಳಿಕ ರಂಜಿತ್ ಕೂಡ ಕೇರಳ ಚಲನಚಿತ್ರ ಅಕಾಡಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಹೇಮಾ ಸಮಿತಿ ಮುಂದೆ ಹಲವು ಸಿನೆಮಾ ನಟಿಯರು ತಾವು ಅನುಭವಿಸಿರುವ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ.

1. ಹಿಂದಿನ ರಾತ್ರಿ ಯಾವ ನಟನಿಂದ ಲೈಂಗಿಕ ದೌರ್ಜನ್ಯ ಎದುರಾಗಿತ್ತೋ ಅದೇ ನಟನ ಜೊತೆಗೆ ಬೆಳಗ್ಗೆ ಪತ್ನಿಯಾಗಿ ನಟಿಸಬೇಕಿತ್ತು. ನಟಿಸಲು ಸಾಧ್ಯವಾಗದೆ 17 ಟೇಕ್ ತೆಗೆದುಕೊಂಡೆ. ಕೊನೆಗೆ ನಿರ್ದೇಶಕ ಹಾಗೂ ನಟನಿಂದ ಬೈಸಿಕೊಂಡೆ ಎಂದು ನಟಿಯೊಬ್ಬರು ಹೇಮಾ ಸಮಿತಿಯ ಮುಂದೆ ಹೇಳಿಕೊಂಡಿದ್ದಾರೆ.

2. ಶೂಟಿಂಗ್ ಗೆ ಹೋದಾಗ ನಟಿಯರು ಇರುವ ಹೋಟೆಲ್ ಕೊಠಡಿಗಳ ಬಾಗಿಲುಗಳನ್ನು ಪುರುಷರು ಬಡಿಯುತ್ತಾರೆ. ಆ ವೇಳೆಗೆ ಅವರೆಲ್ಲ ಚೆನ್ನಾಗಿ ಕುಡಿದಿರುತ್ತಾರೆ.

ಒಮ್ಮೊಮ್ಮೆಯಂತೂ ಬಾಗಿಲು ಕಿತ್ತು ಬರುತ್ತದೇನೋ ಎಂಬಂತೆ ಬಾಗಿಲು ಬಡಿಯುತ್ತಾರೆ. ಇದೇ ಕಾರಣಕ್ಕೆ ನಾವು ಹೊರಗಡೆ ಶೂಟಿಂಗ್‌ಗೆ ಹೋಗುವುದಿಲ್ಲ. ಹೋದರೂ ನಮ್ಮ ಕುಟುಂಬದವರನ್ನು ಜೊತೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಕೆಲ ನಟಿಯರು ಹೇಳಿದ್ದಾರೆ.

3. ಮಲಯಾಳಂ ಚಿತ್ರರಂಗ ಕ್ರಿಮಿನಲ್ ಗ್ಯಾಂಗ್‌ನ ಹಿಡಿತದಲ್ಲಿದೆ.

4. ಹೊಂದಾಣಿಕೆ ಮತ್ತು ರಾಜಿ ಮಾಡಿಕೊಂಡು ತಮ್ಮ ಲೈಂಗಿಕ ಆಸೆ ಪೂರೈಸಲು ನಟಿಯರು ಒಪ್ಪಬೇಕೆಂದು ಬಯಸುತ್ತಾರೆ.

5. ಪ್ರಾಣ ಭಯ ಮತ್ತು ವೃತ್ತಿಯ ಅನಿವಾರ್ಯತೆಯಿಂದಾಗಿ ಹೆಚ್ಚಿನವರು ದೂರು ನೀಡಲು ಹಿಂಜರಿಯುತ್ತಿದ್ದಾರೆ.

ವರದಿಯಲ್ಲಿ ನಟಿಯರ ಲೈಂಗಿಕ ಶೋಷಣೆ ಬಗ್ಗೆ ಮಾತ್ರವಲ್ಲದೆ, ಶೂಟಿಂಗ್ ನಡೆಯುವ ಜಾಗಗಳಲ್ಲಿ ನಟಿಯರಿಗೆ ಕನಿಷ್ಠ ಶೌಚಾಲಯ ವ್ಯವಸ್ಥೆಯನ್ನೂ ಮಾಡದೆ ಇರುವ ಅಮಾನವೀಯ ನಡವಳಿಕೆಯ ಬಗ್ಗೆಯೂ ಉಲ್ಲೇಖವಿದೆ ಎನ್ನಲಾಗಿದೆ.

ವರದಿಯಲ್ಲಿನ ಶಿಫಾರಸುಗಳು ಏನೆಂದರೆ,

ಶೂಟಿಂಗ್ ಸೆಟ್‌ಗಳಲ್ಲಿ ಮದ್ಯ ಮತ್ತು ಮಾದಕ ದ್ರವ್ಯಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು.

ಚಿತ್ರದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷಿತ ವಸತಿ ಮತ್ತು ಪ್ರಯಾಣದ ಸೌಕರ್ಯವನ್ನು ನಿರ್ಮಾಪಕರು ಒದಗಿಸಬೇಕು.

ಅಪರಾಧ ಹಿನ್ನೆಲೆಯುಳ್ಳವರನ್ನು ಚಾಲಕರನ್ನಾಗಿ ನೇಮಿಸಬಾರದು.

ಮಹಿಳೆಯರಿಗೆ ಪುರುಷರಿಗೆ ಸರಿಸಮಾನವಾಗಿ ವೇತನ ನೀಡಬೇಕು.

ಸಮಸ್ಯೆಗಳನ್ನು ಪರಿಹರಿಸಲು ಬಲವಾದ ಕಾನೂನು ಮತ್ತು ನ್ಯಾಯಮಂಡಳಿ ಸ್ಥಾಪನೆಯ ಅಗತ್ಯವಿದೆ.

ಮಲಯಾಳಂ ಚಲನಚಿತ್ರೋದ್ಯಮದಲ್ಲಿನ ಪ್ರಭಾವಿಗಳ ವಿರುದ್ಧದ ಲೈಂಗಿಕ ದುರ್ನಡತೆ ಬಗೆಗಿನ ಸ್ಫೋಟಕ ಆರೋಪಗಳ ಬಳಿಕ ಕೇರಳದ ಎಲ್‌ಡಿಎಫ್ ಸರಕಾರ ಸಂದಿಗ್ಧ ಎದುರಿಸುತ್ತಿರುವ ಹಾಗಿದೆ. ಚಿತ್ರರಂಗದ ಆ ಪ್ರಭಾವಿಗಳು ಸರಕಾರದ ಮಟ್ಟದಲ್ಲಿಯೂ ಪ್ರಭಾವಿಗಳಾಗಿರುವವರೇ ಆಗಿರುತ್ತಾರೆ. ಹಾಗಾಗಿ, ಸರಕಾರ ತಾನು ತೆಗೆದುಕೊಳ್ಳಬೇಕಾದ ನಿರ್ಧಾರಗಳ ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕಿದ್ದರೂ ಅಚ್ಚರಿಯಿಲ್ಲ. ವರದಿ ಬಳಿಕ ಈಗಾಗಲೇ ಇಬ್ಬರ ತಲೆದಂಡವಾಗಿದೆ. ಇಬ್ಬರೂ ಚಿತ್ರರಂಗದಲ್ಲಿ ತಾವು ಹೊಂದಿದ್ದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಇನ್ನೊಂದೆಡೆ, ಸರಕಾರ ಮಹಿಳಾ ಹಕ್ಕುಗಳು, ಲಿಂಗ ಮತ್ತು ಕೆಲಸದ ಸ್ಥಳದ ಸಮಾನತೆಯನ್ನು ಗೌರವಿಸುವುದಕ್ಕಿಂತ ಸಿನೆಮಾ ಉದ್ಯಮದ ಶ್ರೀಮಂತರು ಮತ್ತು ಶಕ್ತಿಶಾಲಿಗಳನ್ನು ರಕ್ಷಿಸುವ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದೆ ಎಂಬ ಟೀಕೆಗಳೂ ಕೇಳಿಬಂದಿವೆ.

ವಿಪಕ್ಷ ನಾಯಕ ವಿ.ಡಿ. ಸತೀಶನ್, ಸಂಸ್ಕೃತಿ ಸಚಿವ ಸಾಜಿ ಚೆರಿಯನ್ ರಾಜೀನಾಮೆಗೂ ಒತ್ತಾಯಿಸಿದ್ದಾರೆ. ಚೆರಿಯನ್ ಅವರು ಹೇಮಾ ಸಮಿತಿ ವರದಿ ಬಿಡುಗಡೆ ಮಾಡಲು ಅಡ್ಡಿಪಡಿಸಿದ್ದಾರೆ ಎಂಬ ಆರೋಪವನ್ನೂ ಸತೀಶನ್ ಮಾಡಿದರು.

ಚಿತ್ರರಂಗದಲ್ಲಿನ ಇಂಥ ಕರಾಳತೆ ಬಗ್ಗೆ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆದಿದ್ದು, ಸರಕಾರದ ಮೇಲಿನ ಅಸಮಾಧಾನ ತೀವ್ರ ರೀತಿಯಲ್ಲಿ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಿರಿಯ ಪೊಲೀಸ್ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಸರಕಾರ ದೌರ್ಜನ್ಯದ ಬಗ್ಗೆ ತನಿಖೆ ನಡೆಸಲು ರವಿವಾರ ಏಳು ಸದಸ್ಯರ ತಂಡವನ್ನು ರಚಿಸಿದೆ.

ಐಜಿ ಸ್ಪರ್ಜನ್ ಕುಮಾರ್ ನೇತೃತ್ವದ ವಿಶೇಷ ತಂಡದಲ್ಲಿ ನಾಲ್ವರು ಹಿರಿಯ ಮಹಿಳಾ ಐಪಿಎಸ್ ಅಧಿಕಾರಿಗಳು ಇರಲಿದ್ದಾರೆ.

ಈ ನಡುವೆ, ಮನರಂಜನಾ ಉದ್ಯಮಕ್ಕಾಗಿ ನಿಯಂತ್ರಣ ನೀತಿಗಳನ್ನು ರೂಪಿಸಲು ನವೆಂಬರ್‌ನಲ್ಲಿ ಸರಕಾರ ನಡೆಸಲಿರುವ ಸಿನೆಮಾ ಸಮಾವೇಶ ವ್ಯಾಪಕ ಪ್ರಚಾರ ಪಡೆದಿದ್ದು, ಅದು ಕೂಡ ಸರಕಾರಕ್ಕೆ ತಲೆನೋವು ತಂದಿದೆ.

ಮಹಿಳೆಯರ ಮೇಲೆ ದೌರ್ಜನ್ಯವೆಸಗಿರುವ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಮೊದಲು ಸಿನೆಮಾ ಸಮಾವೇಶ ನಡೆಸುವ ಮೂಲಕ ಸಂತ್ರಸ್ತರನ್ನೂ, ಆರೋಪಿಗಳನ್ನೂ ಒಂದೇ ವೇದಿಕೆಯಲ್ಲಿ ತರಲು ಸರಕಾರ ಯತ್ನಿಸುತ್ತಿದೆ ಎಂದು, ಮಹಿಳಾ ಹಕ್ಕುಗಳನ್ನು ಪ್ರತಿಪಾದಿಸುವ ವಕೀಲರ ಗುಂಪು, ವಿಮೆನ್ ಇನ್ ಸಿನೆಮಾ ಕಲೆಕ್ಟಿವ್ ಮತ್ತು ವಿರೋಧ ಪಕ್ಷಗಳು ಆರೋಪಿಸಿವೆ.

ನಟಿಯರ ಮೇಲಿನ ದೌರ್ಜನ್ಯ ಮಲಯಾಳಂ ಚಿತ್ರರಂಗಕ್ಕೆ ಮಾತ್ರ ಅಂಟಿರುವ ಕಳಂಕವೇನೂ ಅಲ್ಲ. ಎಲ್ಲಾ ಭಾಷೆಗಳ ಚಿತ್ರರಂಗದಲ್ಲಿಯೂ ನಟಿಯರು ಎದುರಿಸುತ್ತಲೇ ಇರುವ, ದೂರುತ್ತಲೇ ಇರುವ ದೊಡ್ಡ ಸಮಸ್ಯೆ ಇದು. ನಟಿಯರು ದೂರಿದರೂ ಅದನ್ನು ನಂಬುವವರಿಲ್ಲ, ಸಾವಧಾನದಿಂದ ಕೇಳುವವರಿಲ್ಲ. ಬದಲಾಗಿ, ದೂರು ಕೊಟ್ಟ ನಟಿಯನ್ನೇ ಅನುಮಾನದ ಮತ್ತು ಆಕ್ಷೇಪದ ದೃಷ್ಟಿಯಿಂದ ನೋಡುವ ನಡವಳಿಕೆಯೇ ಇದೆ.

ಅತಿ ಪ್ರಭಾವಿಗಳಾಗಿರುವವರ ಎದುರಲ್ಲಿ ದೂರು ಕೊಡುವ ನಟಿ ಒಬ್ಬಂಟಿಯಾಗುವುದು, ಎಲ್ಲರ ದ್ವೇಷ ಕಟ್ಟಿಕೊಳ್ಳುವುದು, ಕಡೆಗೆ ಅವಕಾಶಗಳೇ ಇಲ್ಲದಂತಾಗುವುದು ಕಟು ವಾಸ್ತವ.

ಎಲ್ಲ ಅನ್ಯಾಯಗಳನ್ನೂ ಮಾಡಿದವರು ಸಾಚಾಗಳಂತೆಯೇ ಇರುತ್ತಾರೆ, ಹೀರೋಗಳಾಗಿಯೇ ಮೆರೆಯುತ್ತಾರೆ, ಸೂಪರ್ ಸ್ಟಾರ್‌ಗಳಾಗಿಯೇ ಉಳಿದುಬಿಡುತ್ತಾರೆ ಎಂಬುದು ಬಹು ದೊಡ್ಡ ವ್ಯಂಗ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎ.ಎನ್. ಯಾದವ್

contributor

Similar News