ಚಾಮರಾಜನಗರದಲ್ಲಿ ಹಾರ್ನ್ ಬಿಲ್ ಹಾರಾಟ

Update: 2024-05-27 06:42 GMT

ಚಾಮರಾಜನಗರ: ಜಿಲ್ಲೆಯ ಆರ್‌ಟಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಪರೂಪದ ಪಕ್ಷಿಯೊಂದು ಕಾಣಿಸಿದೆ. ಅಳಿವಿನಂಚಿನಲ್ಲಿರುವ ಪ್ರಬೇಧವೆಂದು ಗುರುತಿಸಿರುವ ಮಂಗಟ್ಟೆ(ಹಾರ್ನ್ ಬಿಲ್) ಕೆ.ಗುಡಿ ವಲಯದಲ್ಲಿ ಪತ್ತೆಯಾಗಿದೆ.

ಕೆಲವು ದಿನಗಳ ಹಿಂದೆ ಇಲ್ಲಿಗೆ ಬಂದಿದ್ದ ಪ್ರವಾಸಿಗರೊಬ್ಬರು ಮರದ ಮೇಲೆ ಕುಳಿತಿದ್ದ ಹಾರ್ನ್‌ಬಿಲ್ ಪೋಟೋವನ್ನು ಸೆರೆ ಹಿಡಿದ್ದಾರೆ. ಅರಣ್ಯಾಧಿಕಾರಿಗಳು ಇದನ್ನು ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್ ಎಂದು ಗುರುತಿಸಿದ್ದಾರೆ. ಈ ಅರಣ್ಯದಲ್ಲಿ ಎರಡೋ-ಮೂರೋ ಹಾರ್ನ್ ಬಿಲ್ ಪಕ್ಷಿಗಳು ಇವೆ ಎನ್ನಲಾಗುತ್ತಿದ್ದು, ಅಪರೂಪಕ್ಕೊಮ್ಮೆ ಕಾಣಿಸುತ್ತವೆ ಎಂದಿದ್ದಾರೆ.

ವಿಶ್ವದಾದ್ಯಂತ ಸುಮಾರು 53 ವಿವಿಧ ರೀತಿಯ ಹಾರ್ನ್‌ಬಿಲ್‌ಗಳಿವೆ. ಭಾರತವು ಅಂದಾಜು 9 ಜಾತಿಯ ಹಾರ್ನ್‌ಬಿಲ್‌ಗಳ ನೆಲೆಯಾಗಿದೆ. ಕಾಳಿ ನದಿಯ ದಡದಲ್ಲಿರುವ ದಾಂಡೇಲಿಯಲ್ಲಿ ಮಲಬಾರ ಗ್ರೇ ಹಾರ್ನ್ ಬಿಲ್, ಇಂಡಿಯನ್ ಗ್ರೇ ಹಾರ್ನ್ ಬಿಲ್, ಮಲಬಾರ್ ಪೈಡ್ ಹಾರ್ನ್‌ಬಿಲ್ ಮತ್ತು ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್ ಎಂಬ 4 ಬಗೆಯ ಹಾರ್ನ್‌ಬಿಲ್‌ಗಳು ಕಂಡುಬರುತ್ತವೆ. ಕೆಲ ತಿಂಗಳ ಹಿಂದೆ ದಾಂಡೇಲಿಯಲ್ಲಿ ಹಾರ್ನ್‌ಬಿಲ್ ಫೆಸ್ಟ್ ಆಯೋಜನೆ ಮಾಡಲಾಗಿತ್ತು.

ಪಕ್ಷಿಗಳ ಸ್ವರ್ಗ ಬಿಆರ್‌ಟಿ: ಜೀವವೈವಿಧ್ಯತೆಗೆ ಸಾಕ್ಷಿಯಾಗಿರುವ ಬಿಆರ್‌ಟಿ ಕೇವಲ ಹುಲಿಯ ಆವಾಸ ಸ್ಥಾನ ಮಾತ್ರವಲ್ಲ ಪಕ್ಷಿಗಳ ಪಾಲಿನ ಸ್ವರ್ಗವೂ ಹೌದು.

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟ ಪೂರ್ವ ಮತ್ತು ಪಶ್ಚಿಮ ಘಟ್ಟಗಳನ್ನು ಸಂದಿಸುತ್ತದೆ. ವಿವಿಧ ಬಗೆಯ ಸಸ್ಯ ಪ್ರಬೇಧಗಳು, ಔಷಧ ಸಸ್ಯಗಳು, ಸಸ್ತನಿಗಳು, ಸರೀಸೃಪಗಳು, ಬಗೆಬಗೆಯ ಚಿಟ್ಟೆಗಳು, 270ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳಿವೆ. ಅಳಿವಿನಂಚಿನಲ್ಲಿರುವ ಪಕ್ಷಿಗಳು ಇಲ್ಲಿ ಆಗಾಗ ಪತ್ತೆಯಾಗುತ್ತಲೇ ಇರುತ್ತವೆ. ಕೆಲವು ವರ್ಷಗಳ ಹಿಂದೆ ಅಳಿವಿನಂಚಿನಲ್ಲಿರುವ ಕೆಂಪು ತಲೆ ರಣಹದ್ದು ಗುಂಡಾಲ್ ಜಲಾಶಯದ ಸಮೀಪದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇಂತಹ ಹಲವು ಬಗೆಯ ಪಕ್ಷಿಗಳು ಆಗಾಗ ತಮ್ಮ ಆವಾಸ ಸ್ಥಾನವನ್ನು ಬಿಆರ್‌ಟಿಯಲ್ಲಿ ಖಚಿತಪಡಿಸುತ್ತಿವೆ. ಅರಣ್ಯ ಇಲಾಖೆಯಿಂದ ಪ್ರತೀ ವರ್ಷ ರಾಜ್ಯಮಟ್ಟದ ಪಕ್ಷಿ ಹಬ್ಬ ಹಮ್ಮಿಕೊಳ್ಳಲಾಗುತ್ತಿದೆ. ಇವುಗಳ ಕುರಿತ ಅರಿವು, ಸಂತತಿ ಉಳಿವಿನ ಉದ್ದೇಶಕ್ಕಾಗಿ ಹಕ್ಕಿ ಹಬ್ಬ ನಡೆಯುತ್ತಿದೆ.

ಬಂಡೀಪುರದಲ್ಲೂ ಪತ್ತೆಯಾಗಿದ್ದ ಹಾರ್ನ್‌ಬಿಲ್

ಭಾಗಶಃ ಅರಣ್ಯ ಪ್ರದೇಶಗಳಿಂದ ಕೂಡಿರುವ ಚಾಮರಾಜನಗರ ಜಿಲ್ಲೆಯ ಹುಲಿ ಸಂರಕ್ಷಿತಾರಣ್ಯ ಪ್ರದೇಶ ಬಂಡೀಪುರದಲ್ಲೂ ಹಿಂದೊಮ್ಮೆ ಹಾರ್ನ್‌ಬಿಲ್ ಪತ್ತೆಯಾಗಿತ್ತು. 2021ರಲ್ಲಿ ಪಕ್ಷಿ ಗಣತಿಯಲ್ಲಿ ಎರಡು ಬಗೆಯ ಅಪರೂಪದ ಪಕ್ಷಿಗಳು ಪತ್ತೆಯಾಗಿದ್ದವು. ಮೊದಲ ಬಾರಿಗೆ ಗ್ರೇಟ್ ಹಾರ್ನ್‌ಬಿಲ್ ಪಕ್ಷಿ ಕಾಣಿಸಿಕೊಂಡಿತ್ತು. ಇದೊಂದು ಸುಂದರ ಪಕ್ಷಿಯಾಗಿದೆ. ಹಳದಿ ಬಣ್ಣದ ವಿಶಿಷ್ಟ ಆಕಾರದ ಕೊಕ್ಕನ್ನು ಹೊಂದಿ ಬೇರೆ ಪಕ್ಷಿಗಳಿಗಿಂತ ಭಿನ್ನವಾಗಿದೆ.

ದಾಂಡೇಲಿ ಅರಣ್ಯದಲ್ಲಿ ಹಾರ್ನ್‌ಬಿಲ್‌ಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಬಿಆರ್‌ಟಿ ವ್ಯಾಪ್ತಿಯ ಅರಣ್ಯದಲ್ಲಿ ಹಾರ್ನ್‌ಬಿಲ್‌ಗಳು ಇರುವುದು ಬಹಳ ಕಡಿಮೆ. ಕೆ.ಗುಡಿಯಲ್ಲಿ ಬೆರಳೆಣಿಕೆಷ್ಟು ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್‌ಗಳಿವೆ.

-ವಿನೋದ್, ಆರ್‌ಎಫ್‌ಒ, ಕೆ.ಗುಡಿ ವಲಯ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಾ.ಅಶ್ವಥ್ ಕುಮಾರ್

contributor

Similar News