ಹೊಸಕೋಟೆ: ನಂದಗುಡಿಯ ಕೆಪಿಎಸ್ ಶಾಲೆಯಲ್ಲಿ ಸೌಲಭ್ಯಗಳ ಕೊರತೆ

Update: 2024-01-28 04:30 GMT

ಹೊಸಕೋಟೆ, ಜ.27: ಸರಕಾರ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಶಾಲಾಭಿವೃದ್ಧಿಗೆ ಎಷ್ಟೇ ಅನುದಾನ ನೀಡಿದರೂ, ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಇಚ್ಛಾಶಕ್ತಿಯ ಕೊರತೆ ಕಾಡುತ್ತಿದೆ. ಇದಕ್ಕೆ ನಿದರ್ಶನದಂತಿದೆ ನಂದಗುಡಿಯ ಕೆಪಿಎಸ್ ಶಾಲೆ.

ನಂದಗುಡಿಯ ಕೆಪಿಎಸ್ ಶಾಲೆಯಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು 3 ವಿಭಾಗವು ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹಿರಿಯ ಪ್ರಾಥಮಿಕ 420 ಮಕ್ಕಳು, ಪ್ರೌಢಶಾಲೆಯಲ್ಲಿ 382 ಮಂದಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ 180 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರೌಢಶಾಲೆಯಲ್ಲಿ ಒಟ್ಟು 10 ಕಾಯಂ ಶಿಕ್ಷಕರಿದ್ದು, ಕನ್ನಡ-3, ಸಮಾಜ-3, ಆಂಗ್ಲ ಭಾಷೆ-2, ಉರ್ದು-1, ದೈಹಿಕ ಶಿಕ್ಷಣ ಶಿಕ್ಷಕ-1, ಕರಕುಶಲ-1 ಸೇರಿದಂತೆ ಒಟ್ಟು 13 ಹುದ್ದೆ ಖಾಲಿಯಿದ್ದು, 8 ಮಂದಿ ಅತಿಥಿ ಶಿಕ್ಷಕರಿದ್ದಾರೆ. ಸದ್ಯಕ್ಕೆ 5 ಶಿಕ್ಷಕರ ಕೊರತೆಯಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗದಿರುವುದು ಶೋಚನೀಯ ಸಂಗತಿಯಾಗಿದೆ.

ಸತ್ವವಿಲ್ಲದ ಬಿಸಿಯೂಟ: ತರಕಾರಿಯಿಲ್ಲದ ನೀರಿನಂತಹ ಸಾಂಬಾರು, ಬೇಳೆ ಸಾರು ಅನ್ನ ಅಷ್ಟೇ ಮಕ್ಕಳ ಹೊಟ್ಟೆಗೆ ಸೇರುತ್ತಿದೆ. ಬಿಸಿಯೂಟಕ್ಕೆ ಬಳಸಬೇಕಾದ ಪದಾರ್ಥಗಳು ಪ್ರಾಂಶುಪಾಲರ ಕೊಠಡಿಯಿಂದ ಬೇರೆಡೆಗೆ ರವಾನೆಯಾಗುತ್ತಿವೆ ಎಂಬ ಕೇಳಿ ಬಂದಿದೆ.

ವಿದ್ಯಾರ್ಥಿಗಳಿಗೆ ವಾರಕ್ಕೆರಡು ಮೊಟ್ಟೆ ಸಿಗುವುದೇ ಅಪರೂಪ ಎನ್ನಲಾಗಿದೆ. ಬಿಸಿಯೂಟದಲ್ಲಿ ಕಡ್ಡಾಯವಾಗಿ ನಾನಾ ಬಗೆಯ ಕಾಳು, ತರಕಾರಿ, ಸೊಪ್ಪುಬಳಕೆಯಾಗಬೇಕು ಎಂಬುದು ಇಲಾಖೆಯ ಕಡತಕ್ಕೆ ಸೀಮಿತವಾಗಿದೆ. ಸೂಕ್ತ ಹಣ ಬಿಡುಗಡೆಯಾದರೂ ಪೋಷಕಾಂಶ ಭರಿತ ಬಿಸಿಯೂಟ ಯಾಕೆ ಕೊಡ್ತಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಆಂಗ್ಲ ಭಾಷಾ ಶಿಕ್ಷಕಿ 2020ರಿಂದ 2023 ಅವಧಿಯಲ್ಲಿ 618 ದಿನ ಗಳಿಕೆ ರಜೆ, ವೇತನ ರಹಿತ ರಜೆ, ಹೆರಿಗೆ ಹಾಗೂ ಶಿಶುಪಾಲನಾ ರಜೆಯನ್ನು ಮೇಲಧಿಕಾರಿಗಳ ಅನುಮತಿ ಇಲ್ಲದೇ ಪಡೆದಿದ್ದಾರೆ. ಬದಲಿ ಶಿಕ್ಷಕರನ್ನು ನೇಮಿಸದೆ ಮಕ್ಕಳ ಪಾಠಕ್ಕೆ ಹಿನ್ನಡೆಯಾಗಿದೆ ಎಂಬುದು ಶಾಲಾಭಿವೃದ್ಧಿ ಸಮಿತಿಯ ಆರೋಪವಾಗಿದೆ.

ಶಿಕ್ಷಕಿಯ ದೀರ್ಘ ರಜೆಯಿಂದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆ ಕಬ್ಬಿಣದ ಕಡಲೆಯಾಗಿದ್ದು 8, 9ನೇ ತರಗತಿಯಲ್ಲಿ ಪಾಠವಿಲ್ಲದೇ ಎಸೆಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳು ಎದುರಿಸುವಂತಾಗಿದೆ. ಸರಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿದ್ದರೂ ಇಚ್ಛಾ ಶಕ್ತಿಯ ಕೊರತೆಯಿಂದ ಸರಿಯಾಗಿ ಬೋಧಿಸುತ್ತಿಲ್ಲ ಎನ್ನುತ್ತಾರೆ ಪೋಷಕರು. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರು ಹೆಚ್ಚಿನ ಆದ್ಯತೆ ನೀಡಬೇಕು. ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಸಮುದಾಯ ಹಾಗೂ ಸರಕಾರ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

45 ನಿಮಿಷದಲ್ಲಿ 3 ಪಾಠ

ಉಪ ಪ್ರಾಂಶುಪಾಲೆ ಸಕಾಲಕ್ಕೆ ಶಾಲೆಗೆ ಹಾಜರಾಗುತ್ತಿಲ್ಲ. ಸಮಾಜ ವಿಜ್ಞಾನ ಪಾಠ ಅರ್ಧದಲ್ಲೇ ನಿಂತಿದೆ. ವಾರಕ್ಕೊಮ್ಮೆ ತರಗತಿಗೆ ಬರುತ್ತಾರೆ. 45 ನಿಮಿಷದಲ್ಲಿ 3 ಪಾಠ ಓದಿ ಮುಗಿಸುತ್ತಾರೆ. ಪಾಠ ಆರ್ಥವೇ ಆಗುವುದಿಲ್ಲ. ಟೆಸ್ಟ್ ಪೇಪರ್ ಕೊಟ್ಟಿಲ್ಲ. ವಾರ್ಷಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎನ್ನುತ್ತಾರೆ 10ನೇ ತರಗತಿಯ ವಿದ್ಯಾರ್ಥಿಗಳು.

ಕೆಪಿಎಸ್ ಶಾಲೆಯಲ್ಲಿ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಇಲ್ಲದಂತಾಗಿದೆ. ಉಚಿತ ಶಿಕ್ಷಣ ನೀಡುತ್ತಿರುವ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಏಕೆ ಸೇರಿಸುತ್ತಿಲ್ಲ ಎಂದರೆ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವಿಲ್ಲ ಎಂಬುದು ಪೋಷಕರ ಆರೋಪವಾಗಿದೆ. ಇನ್ನಾದರೂ ಮೇಲಾಧಿ ಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.

-ಮಂಜುನಾಥ್, ಪೋಷಕರು (ಹೆಸರು ಬದಲಿಸಲಾಗಿದೆ)

ಶಾಲೆಯಲ್ಲಿ ಮೊಟ್ಟೆ ಬಿಸಿಯೂಟ ವಿತರಣೆಯಲ್ಲಿ ಲೋಪ ಎಸಗುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಶಾಲೆಗೆ ಭೇಟಿ ಕೊಟ್ಟು ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಶೈಕ್ಷಣಿಕ ಪ್ರಗತಿ ಕುಂಠಿತಕ್ಕೆ ದೀರ್ಘ ಕಾಲ ರಜೆ ಪಡೆದಿರುವ ಶಿಕ್ಷಕಿಯ ವರದಿ ನೀಡುವಂತೆ ಆದೇಶಿಸಿದ್ದು, ಮೇಲಧಿಕಾರಿಗಳಿಗೆ ಕ್ರಮಕ್ಕೆ ರವಾನಿಸಲಾಗುವುದು.

-ಪದ್ಮನಾಭ, ಕ್ಷೇತ್ರ ಶಿಕ್ಷಣಾಧಿಕಾರಿ, ಹೊಸಕೋಟೆ

ಪಕ್ಕದ ಶಾಲೆಯ ವಿದ್ಯಾರ್ಥಿಗಳು ಮೊಟ್ಟೆ ತಿಂದು ಇತ್ತೀಚೆಗೆ ಅಸ್ವಸ್ಥರಾಗಿದ್ದ ಹಿನ್ನೆಲೆ ಕಳೆದೆರಡು ವಾರಗಳಿಂದ ಮೊಟ್ಟೆವಿತರಿಸಿಲ್ಲ. ಸರಕಾರ ನಿಗದಿಪಡಿಸಿದ ಮಾನದಂಡದಲ್ಲಿ ಬಿಸಿಯೂಟ ತಯಾರಿಸಲು ಅಗತ್ಯ ವಸ್ತು ಪೂರೈಸಲಾಗುತ್ತಿದೆ. ಆಂಗ್ಲ ಶಿಕ್ಷಕಿ ಅನಾರೋಗ್ಯ ಕಾರಣಕ್ಕೆ ದೀರ್ಘ ರಜೆ ಪಡೆದಿದ್ದಾರೆ. ನನ್ನ ಅವಧಿಯಲ್ಲಿ ಮಕ್ಕಳಿಗೆ ಉತ್ತಮ ಪ್ರವಚನ ನೀಡುತ್ತಿದ್ದು, ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದುದು.

-ಶುಭಾ, ಉಪ ಪ್ರಾಂಶುಪಾಲೆ, ಕೆಪಿಎಸ್ ಶಾಲೆ, ನಂದಗುಡಿ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಾರಾಯಣಸ್ವಾಮಿ ಸಿ.ಎಸ್.

contributor

Similar News