ಈ ನಡೆ ಎಲ್ಲಿಯವರೆಗೆ ಮುಂದುವರಿಯಬಹುದು?

ಈಗ ಬಿಜೆಪಿ 240ಕ್ಕೇ ನಿಂತುಬಿಟ್ಟಿರುವಾಗ, ತಮ್ಮ ಮೈತ್ರಿಕೂಟದ ಪಾಲುದಾರರನ್ನು ಮತ್ತು ಮೈತ್ರಿಯ ಇತಿಹಾಸವನ್ನು ನೆನಪಿಸಿಕೊಳ್ಳಲು ಮೋದಿ ಪ್ರಾರಂಭಿಸಿದ್ದಾರೆ. ಹೇಗಿರುತ್ತದೆ ನೋಡಿ ಕಾಲದ ಏಟು. ಈಗ ಮೋದಿ ಸರಕಾರವಿಲ್ಲ, ಬಿಜೆಪಿ ಸರಕಾರವಿಲ್ಲ. ಬದಲಿಗೆ ಮೈತ್ರಿ ಸರಕಾರ ರಚನೆಯಾಗುತ್ತಿದೆ. ಮೋದಿಗೆ ಕೂಡ ತಮ್ಮ ಜೊತೆಗೇ ಇದ್ದೂ ಇಲ್ಲದಂತಾಗಿದ್ದ ಮೈತ್ರಿಕೂಟದ ನೆನಪಾಗಿದೆ.

Update: 2024-06-09 06:01 GMT

ಲೋಕಸಭಾ ಚುನಾವಣಾ ಪ್ರಚಾರದುದ್ದಕ್ಕೂ ಕಂಡು ಬಂದ ಮೋದಿಗೂ ಮೊನ್ನೆ ಸಂಸತ್ತಿನಲ್ಲಿ ಕಂಡುಬಂದ ಮೋದಿಗೂ ಅದೆಷ್ಟು ದೊಡ್ಡ ವ್ಯತ್ಯಾಸ?

ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಮಾಡುತ್ತಾ ಬಂದಿದ್ದ ಭಾಷಣ ಗಳಿಗೂ, ಮೊನ್ನೆ ಸಂಸತ್ತಿನಲ್ಲಿ ಮಾಡಿರುವ ಭಾಷಣಕ್ಕೂ ಅದೆಷ್ಟು ಅಜಗಜಾಂತರ?

ಮೋದಿ ಚುನಾವಣಾ ಭಾಷಣಗಳಂತೂ ಸ್ವತಃ ಮೈತ್ರಿಕೂಟದ ಭಾಗವಾಗಿಯೂ ಮೈತ್ರಿ ರಾಜಕಾರಣವನ್ನೇ ತಿರಸ್ಕರಿಸುವ ರೀತಿಯಲ್ಲಿದ್ದವು. ಚುನಾವಣೆಯುದ್ದಕ್ಕೂ ಮೋದಿ ಹೇಳುತ್ತ ಬಂದದ್ದು ಮೋದಿ ಹಾಗೂ ಮೋದಿ ಸರಕಾರ ಎಂದು ಮಾತ್ರ. ಮೈತ್ರಿಪಕ್ಷಗಳ ಗರಜೇ ಇಲ್ಲದ ಸರಕಾರ ತಮ್ಮದೆಂಬ ಅಹಂಕಾರವೂ ಆ ಮಾತುಗಳಲ್ಲಿ ಇತ್ತು.

ಆದರೆ ಈಗ ಬಿಜೆಪಿ 240ಕ್ಕೇ ನಿಂತುಬಿಟ್ಟಿರುವಾಗ, ತಮ್ಮ ಮೈತ್ರಿಕೂಟದ ಪಾಲುದಾರರನ್ನು ಮತ್ತು ಮೈತ್ರಿಯ ಇತಿಹಾಸವನ್ನು ನೆನಪಿಸಿಕೊಳ್ಳಲು ಮೋದಿ ಪ್ರಾರಂಭಿಸಿದ್ದಾರೆ.

ಹೇಗಿರುತ್ತದೆ ನೋಡಿ ಕಾಲದ ಏಟು.

ಈಗ ಮೋದಿ ಸರಕಾರವಿಲ್ಲ, ಬಿಜೆಪಿ ಸರಕಾರವಿಲ್ಲ. ಬದಲಿಗೆ ಮೈತ್ರಿ ಸರಕಾರ ರಚನೆಯಾಗುತ್ತಿದೆ. ಮೋದಿಗೆ ಕೂಡ ತಮ್ಮ ಜೊತೆಗೇ ಇದ್ದೂ ಇಲ್ಲದಂತಾಗಿದ್ದ ಮೈತ್ರಿಕೂಟದ ನೆನಪಾಗಿದೆ.

2024ರ ಚುನಾವಣೆಯಲ್ಲಿ ಬಿಜೆಪಿಯ ಪ್ರಚಾರದ ಹೋರ್ಡಿಂಗ್‌ಗಳಲ್ಲಿ ಎಲ್ಲದರಲ್ಲೂ ಕಂಡದ್ದು ಮೋದಿ, ಮೋದಿ, ಮೋದಿ ಮಾತ್ರ. ಬಿಜೆಪಿಯ ಮತ್ತೊಬ್ಬ ನಾಯಕನಾಗಲೀ, ಮೈತ್ರಿಕೂಟದ ಯಾವುದೇ ನಾಯಕರಾಗಲೀ ಅಲ್ಲಿರಲಿಲ್ಲ. ಕಡೇಪಕ್ಷ ಆಯಾ ಕ್ಷೇತ್ರದ ಅಭ್ಯರ್ಥಿಯ ಚಿತ್ರವನ್ನೂ ಕಾಣುವುದು ಸಾಧ್ಯವಿರಲಿಲ್ಲ.

ಪ್ರಣಾಳಿಕೆ ಬಿಡುಗಡೆ ಹೊತ್ತಿನಲ್ಲೂ ಮೈತ್ರಿಯ ನಾಯಕರಾರೂ ಇರಲಿಲ್ಲ. ವೇದಿಕೆಯಲ್ಲಿ ಕಂಡದ್ದು ಕೇವಲ ಬಿಜೆಪಿ ನಾಯಕರು. ಮೋದಿ, ಶಾ, ನಡ್ಡಾ, ರಾಜನಾಥ್ ಸಿಂಗ್ ಮತ್ತು ನಿರ್ಮಲಾ ಸೀತಾರಾಮನ್ ಇದ್ದರು. ಎನ್‌ಡಿಎಯ ಯಾರೊಬ್ಬರೂ ಇರಲಿಲ್ಲ.

ವೇದಿಕೆಯಲ್ಲಿ ಹಿನ್ನೆಲೆಯಲ್ಲಿ ಇದ್ದದ್ದು ಕೂಡ ಬಿಜೆಪಿ ಹೆಸರು ಮಾತ್ರ ಮತ್ತು ಅದಕ್ಕಿಂತ ದೊಡ್ಡದಾಗಿ ‘ಮೋದಿ ಕಿ ಗ್ಯಾರಂಟಿ’ ಎಂಬುದನ್ನು ಬರೆಯಲಾಗಿತ್ತು. ಆದರೆ ಎನ್‌ಡಿಎ ಗ್ಯಾರಂಟಿ ಇರಲಿಲ್ಲ. ‘ಫಿರ್ ಏಕ್ ಬಾರ್ ಮೋದಿ ಸರಕಾರ್’ ಎಂದು ಬರೆಯಲಾಗಿತ್ತೇ ಹೊರತು, ಎನ್‌ಡಿಎ ಸರಕಾರ ಎಂಬುದು ಎಲ್ಲೂ ಇರಲೇ ಇಲ್ಲ.

ಪ್ರಣಾಳಿಕೆಯ ಮುಖಪುಟದಲ್ಲೂ ಬಿಜೆಪಿ ಹೆಸರು ಸಣ್ಣದಾಗಿ ಹಾಕಿ, ‘ಮೋದಿ ಕಿ ಗ್ಯಾರಂಟಿ’ ಎಂದೇ ದೊಡ್ಡದಾಗಿ ಬರೆಯಲಾಗಿತ್ತು. ಕೆಳಗೆ ಮತ್ತೆ ‘ಫಿರ್ ಏಕ್ ಬಾರ್ ಮೋದಿ ಸರಕಾರ್’ ಅಂತ ಬರೆದಿತ್ತು.

2014ರ ಪ್ರಣಾಳಿಕೆಯಲ್ಲಿ ಮೋದಿ ಹೆಸರು ಮೂರು ಬಾರಿ ಇದ್ದಿದ್ದರೆ, 2024 ರ ಪ್ರಣಾಳಿಕೆಯಲ್ಲಿ ಮೋದಿಯ ಹೆಸರು 64 ಬಾರಿ, ಎಷ್ಟು... 64 ಬಾರಿ ಇತ್ತು.

‘‘69 ಪುಟಗಳ ಪ್ರಣಾಳಿಕೆಯಲ್ಲಿ ಕ್ಯಾಮರಾ ಜೀವಿಯ 53 ಫೋಟೊಗಳಿವೆ’’ ಎಂದು ಆಗಲೇ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಕಾಲೆಳೆದಿದ್ದರು.

ಅಂತಹ ಮೋದಿಗೆ ಇವತ್ತು ಬಂದಿರುವ ಸ್ಥಿತಿ ಎಂತಹದ್ದು? ತಮ್ಮ ಭಾಷಣದಿಂದಲೇ ಸತ್ಯ ಬದಲಿಸಿಬಿಡಬಹುದೆಂಬ ಮೋದಿ ಭ್ರಮೆ ಕಳಚಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾ ಯಿತು. ಸಮಾರಂಭದ ವೇದಿಕೆಯಲ್ಲಿ ಎನ್‌ಡಿಎಯ ಯಾವ ನಾಯಕರೂ ಇರಲಿಲ್ಲ. ಕ್ಯಾಮರಾದಲ್ಲಿ ಮಿಂಚಿದ್ದು ಮೋದಿ, ಆದಿತ್ಯನಾಥ್ ಹಾಗೂ ಮೋಹನ್ ಭಾಗವತ್.

ಹೀಗಿರುವಾಗ 2024ರ ಚುನಾವಣಾ ಫಲಿತಾಂಶ ಮೋದಿಗೆ ತಾನು ಎನ್‌ಡಿಎ ಭಾಗ ಎಂಬುದನ್ನು ನೆನಪಿಸಿಕೊಟ್ಟಿದೆ.

ಇದು ಬರೀ ಎನ್‌ಡಿಎ ಕಥೆಯಲ್ಲ. ಬಿಜೆಪಿಯ ದುರ ವಸ್ಥೆಯೂ ಹೌದು. ಬಿಜೆಪಿಯ ಯಾವ ನಾಯಕನೂ ಮೋದಿ ಜೊತೆ ಚಿತ್ರದಲ್ಲಿ ಕಾಣಿಸಿಯೇ ಇರಲಿಲ್ಲ.

ಉತ್ತರ ಪ್ರದೇಶದಲ್ಲಿ ‘‘ಡಬಲ್ ಇಂಜಿನ್ ಸರಕಾರದಲ್ಲಿ ಇನ್ನೊಂದು ಇಂಜಿನ್ ಎಲ್ಲಿ?’’ ಎಂದು ಅಖಿಲೇಶ್ ಯಾದವ್ ಲೇವಡಿ ಮಾಡಿದ್ದರು. ಪ್ರಚಾರ ಭಾಷಣಗಳಲ್ಲಿ ಅಖಿಲೇಶ್ ಹಾಗೆ ಹೇಳತೊಡಗಿದ ಬಳಿಕವೇ ಉತ್ತರ ಪ್ರದೇಶದ ಬಿಜೆಪಿ ಚುನಾವಣಾ ಪೋಸ್ಟರ್‌ಗಳಲ್ಲಿ ಮೋದಿ ಜೊತೆ ಆದಿತ್ಯನಾಥ್ ಚಿತ್ರ ಕಾಣಿಸಿಕೊಳ್ಳುವುದು ಶುರುವಾಗಿತ್ತು.

ಆದರೆ ಈಗ ಮೋದಿ ವರಸೆಯೇ ಬದಲಾಗಿದೆ.

ಹಿಂದೆಯೂ ಎನ್‌ಡಿಎ ಇತ್ತು, ಈಗಲೂ ಎನ್‌ಡಿಎ ಇದೆ, ನಾಳೆಯೂ ಎನ್‌ಡಿಎ ಇರುತ್ತದೆ ಎನ್ನುತ್ತಿದ್ದಾರೆ ಮೋದಿ.

ಇವತ್ತು ಹೀಗೆ ಮಾತುಮಾತಿಗೆ ಎನ್‌ಡಿಎ ಎನ್ನುತ್ತಿರುವ ಮೋದಿ ಹಿಂದೆ ಎಷ್ಟು ಸಲ ಮೈತ್ರಿಯ ನೆನಪು ಮಾಡಿಕೊಂಡದ್ದಿತ್ತು?

ಮೊನ್ನೆಯ ಭಾಷಣ ಪೂರ್ತಿಯಾಗಿ ಮೈತ್ರಿಗೇ ಸಮರ್ಪಣೆಯಾದ ರೀತಿಯಲ್ಲಿ ಇರುವುದಕ್ಕೂ, ಎನ್‌ಡಿಎ ಹೆಸರನ್ನೇ ಎತ್ತಿರದ ಅವರ ಈ ಹಿಂದಿನ ಭಾಷಣಗಳಿಗೂ ಅದೆಷ್ಟು ವ್ಯತ್ಯಾಸ ನೋಡಿ.

ಕಳೆದ 10 ವರ್ಷಗಳಲ್ಲಿ ಬಿಜೆಪಿ ಜೊತೆಗಿನ ಪಾಲುದಾರ ಪಕ್ಷಗಳ ಜೊತೆ ಏನೇನಾಯಿತು? ಯಾಕೆ ಜೊತೆಗಿದ್ದ ಪಕ್ಷಗಳು ಮೈತ್ರಿ ಮುರಿದುಕೊಂಡು ಹೋಗುತ್ತಿದ್ದವು?

ಶಿವಸೇನೆಯ ಜೊತೆಯಾಗಿಯೇ ಚುನಾವಣೆ ಎದುರಿಸುತ್ತಿದ್ದವರು ಅದನ್ನು ಬಿಟ್ಟು ಬಿಟ್ಟಿದ್ದರು.

ಲೋಕ ಜನಶಕ್ತಿ ಪಕ್ಷ ಹೊರಹೋಯಿತು.

ನಿತೀಶ್ ಕುಮಾರ್ ಅವರಿಗೂ ಕೆಟ್ಟ ಅನುಭವ ಆಗಿತ್ತು.

ಸುದೀರ್ಘ ಕಾಲ ಜೊತೆಗಿದ್ದ ಅಕಾಲಿ ದಳ ಹೊರಹೋಯಿತು.

ಇವತ್ತು ಎನ್‌ಡಿಎಗೆ ಮರಳಿರುವ ಚಂದ್ರಬಾಬು ನಾಯ್ಡು ಹಿಂದಿನ ಎರಡು ಚುನಾವಣೆಗಳಲ್ಲಿ ಜೊತೆಗಿರಲಿಲ್ಲ. 2018ರಲ್ಲಿ ನಾಯ್ಡು ಎನ್‌ಡಿಎ ಯಿಂದ ಹೊರಹೋದ ಬಳಿಕ ಮೋದಿ ಯಾವ ಮೈತ್ರಿಧರ್ಮ ಪಾಲಿಸಿದ್ದರು?

ಬಿಜೆಪಿಗೆ ಬಹುಮತ ಇದ್ದಾಗ ಯಾವ ಪಾಲುದಾರ ಪಕ್ಷ ಹೊರಟುಹೋದರೂ ನಡೆಯುತ್ತಿತ್ತು. ಅವನ್ನು ಗೌರವದಿಂದ ಉಳಿಸಿಕೊಳ್ಳುವ ಯಾವ ಪ್ರಯತ್ನವನ್ನೂ ಮೋದಿ ಮಾಡಿದ್ದೇ ಇಲ್ಲ.

ಆದರೆ ಈಗ ಪಕ್ಷಕ್ಕೆ ಬಹುಮತವೇ ಇಲ್ಲದಿರುವಾಗ, ಎನ್‌ಡಿಎ ಗುಣಗಾನ ಮತ್ತು ಎನ್‌ಡಿಎ ತಮ್ಮೊಂದಿಗೆ ಯಾವಾಗಲೂ ಇತ್ತೆಂಬ ಮತ್ತೊಂದು ಹಸೀ ಸುಳ್ಳು.

ಈಗ ನಿಜವಾದ ಮೈತ್ರಿ ಸರಕಾರ ರಚನೆಯಾದ ಬಳಿಕ ಮೈತ್ರಿಕೂಟದ ದನಿಯೂ ಕೇಳಿಬರಲಿದೆ.

ಮುಸಲ್ಮಾನರ ಮೀಸಲಾತಿ ಉಳಿಸುವ ವಾಗ್ದಾನವನ್ನು ಟಿಡಿಪಿ ಆಂಧ್ರ ಪ್ರದೇಶದಲ್ಲಿ ಈಗಾಗಲೇ ಕೊಟ್ಟಿದೆ. ಚುನಾವಣಾ ಪ್ರಚಾರದಲ್ಲಿ ಮೋದಿ ಮುಸ್ಲಿಮ್ ಮೀಸಲಾತಿ ವಿರುದ್ಧವೇ ಮಾತನಾಡಿದ್ದರು. ಅದೂ ಕೂಡ ಬಿಜೆಪಿಗಾಗಲಿ, ಮೋದಿಗಾಗಲಿ ಎನ್‌ಡಿಎ ಬಗ್ಗೆ ಯಾವ ಪರಿವೆಯೂ ಇರಲಿಲ್ಲ ಎಂಬುದಕ್ಕೆ ಸಾಕ್ಷಿಯಾಗಿತ್ತು.

ಕರ್ನಾಟಕದಲ್ಲಿ ಜೆಡಿಎಸ್, ಆಂಧ್ರದಲ್ಲಿ ಟಿಡಿಪಿ ಮತ್ತು ಬಿಹಾರದಲ್ಲಿ ಜೆಡಿಯು ಮುಸ್ಲಿಮ್ ಮೀಸಲಾತಿಯ ಪರವಾಗಿದ್ದವು. ಆದರೆ ಅವುಗಳ ಜೊತೆ ಮೈತ್ರಿ ಇರುವ ಬಿಜೆಪಿ ಮಾತ್ರ ವಿರುದ್ಧವಿತ್ತು.

ಈಗ ಆ ವಿಚಾರವಾಗಿ ಒಕ್ಕೂಟದ ನಿಲುವೇನು ಎಂಬುದನ್ನು ಈವರೆಗೂ ದೇಶದೆದುರು ಸ್ಪಷ್ಟಪಡಿಸಿಲ್ಲ.

ಈ ಹಿಂದೆ ಮೋದಿ ಬಂಗಾಳದೊಂದಿಗಿನ ತಮ್ಮ ಸಂಬಂಧ, ಪಂಜಾಬ್ ಜೊತೆಗಿನ ಸಂಬಂಧ ಪುರಾತನ ಎಂದೆಲ್ಲ ಹೇಳಿದ್ದನ್ನು ಕೇಳಿದ್ದೆವು. ಈಗ ಮೈತ್ರಿಕೂಟದ ಜೊತೆಗಿನ ಸಂಬಂಧವನ್ನೂ ಅವರೇ ಬಿಂಬಿಸಿಕೊಳ್ಳುತ್ತಿದ್ದಾರೆ. ಅಧಿಕಾರ ಬೇಕು ಎಂದರೆ ಹೇಗೂ ಸಂಬಂಧವನ್ನು ಜೋಡಿಸಿಕೊಳ್ಳುವುದರಲ್ಲಿ ಪಳಗಿದವರು ಇನ್ನೇನು ಮಾಡುತ್ತಾರೆ?

ಈ 10 ವರ್ಷಗಳಲ್ಲಿ ಇವರದೇ ರಾಜ್ಯಪಾಲರುಗಳು ವಿಪಕ್ಷಗಳ ಸರಕಾರಗಳಲ್ಲಿ ಮೂಗು ತೂರಿಸುತ್ತಲೇ ಬಂದರು. ಸುಪ್ರೀಂ ಕೋರ್ಟ್ ಹಲವು ಬಾರಿ ಅದರ ಬಗ್ಗೆ ಎಚ್ಚರಿಸಬೇಕಾಯಿತು. ಹೀಗೆ ಒಕ್ಕೂಟ ವ್ಯವಸ್ಥೆಗೆ ಬಾಧಕವಾಗುವ ರೀತಿಯಲ್ಲಿಯೇ ನಡೆದುಕೊಂಡಿತ್ತು ಮೋದಿ ಸರಕಾರ. ಆದರೆ ಈಗ ಅದೇ ಮೋದಿ ಪ್ರಾದೇಶಿಕ ಹೆಚ್ಚುಗಾರಿಕೆಯ ವಿಚಾರವಾಗಿ ಮಾತನಾಡುತ್ತಾರೆ. ಎಂಥ ನಾಟಕ?... !

ಯಾವುದೇ ಪಕ್ಷದ ಸಂಸದರು ಸದನದಲ್ಲಿದ್ದರೂ ನನಗೆ ಎಲ್ಲರೂ ಒಂದೇ. ಪ್ರಾದೇಶಿಕ ಆಕಾಂಕ್ಷೆ ಮತ್ತು ರಾಷ್ಟ್ರೀಯ ಆಕಾಂಕ್ಷೆ ಎರಡೂ ಜೊತೆಯಾಗಬೇಕು ಎಂದು ಈ ಭಾಷಣದಲ್ಲಿ ಮೋದಿ ಹೇಳಿದ್ದೂ ಆಯಿತು.

ಈ ಭಾಷಣ, ಬಿಜೆಪಿ 400 ಸೀಟುಗಳನ್ನು ಗೆದ್ದಿದೆ ಎಂಬ ರೀತಿಯಲ್ಲಿಯೇ ಸಿದ್ಧಪಡಿಸಲಾದ ಭಾಷಣವಾಗಿತ್ತು. ವಿಪಕ್ಷ ಒಕ್ಕೂಟದ ಎದುರಿನ ತಮ್ಮ ದೊಡ್ಡ ಸೋಲನ್ನು ಮರೆಮಾಚುವ ಬಹು ದೊಡ್ಡ ನಾಟಕ ಕೂಡ ಅಲ್ಲಿತ್ತು.

ಚುನಾವಣೆ ಹೊತ್ತಿನಲ್ಲಿ ಮೋದಿ ಸರಕಾರ ಏನೇನು ಮಾಡಿತೆಂಬುದು ಜನರಿಗೆ ಗೊತ್ತಿದೆ.

ವಿಪಕ್ಷಗಳನ್ನು ನಿರಂತರವಾಗಿ ಜರೆಯಲಾಯಿತು. ಅವುಗಳ ನಾಯಕರನ್ನು ಜೈಲಿನಲ್ಲಿಡಲಾಯಿತು. ಅವುಗಳ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿ, ಅವುಗಳ ಬಳಿ ಹಣವೇ ಇರದಂತೆ ಮಾಡಲಾಯಿತು. ಖಾಲಿ ಕೈಯಲ್ಲಿಯೇ ಚುನಾವಣೆ ಎದುರಿಸಬೇಕಾದ ಸಂಕಷ್ಟದಲ್ಲಿಯೂ ವಿಪಕ್ಷಗಳು ನಡೆಸಿದ ಹೋರಾಟ ಮತ್ತು ಕಂಡ ಗೆಲುವು ಅಸಾಮಾನ್ಯವಾದುದು. ತೀರಾ ಪ್ರತಿಕೂಲ ಸ್ಥಿತಿಯಲ್ಲಿಯೇ ವಿಪಕ್ಷ ಒಕ್ಕೂಟ ಇಂತಹದೊಂದು ಗೆಲುವನ್ನು ದಾಖಲಿಸಿದೆ.

ಗಮನಿಸಿ. ಕಾಂಗ್ರೆಸ್‌ಗೆ ರಾಹುಲ್ ಗಾಂಧಿಯ ವಯಸ್ಸಿಗಿಂತ ಕಡಿಮೆ ಸೀಟುಗಳು ಬರುತ್ತವೆ ಎಂದು ಚುನಾವಣೆಯ ಉದ್ದಕ್ಕೂ ಮೋದಿ ಲೇವಡಿ ಮಾಡುತ್ತ ಬಂದರು. ಆದರೆ ಕಾಂಗ್ರೆಸ್‌ಗೆ 99 ಸೀಟುಗಳು ಬಂದವು. ಕಳೆದೆರಡು ಚುನಾವಣೆಗಳಲ್ಲಿ ಆಗದ್ದು ಈ ಚುನಾವಣೆಯಲ್ಲಿ ಸಾಧ್ಯವಾಯಿತು.

ನಿಜವಾಗಿಯೂ ಈ ಚುನಾವಣೆಯಲ್ಲಿ ಚುನಾವಣಾ ಆಯೋಗ ಹೇಳಿದ ಹಾಗೆ ‘ಲೆವೆಲ್ ಪ್ಲೇಯಿಂಗ್ ಫೀಲ್ಡ್’ ಇದ್ದುದೇ ಆಗಿದ್ದರೆ ವಿಪಕ್ಷಗಳ ಸಾಧನೆ ಹೇಗಿರುತ್ತಿತ್ತು?

ಸಂವಿಧಾನವನ್ನು, ಪ್ರಜಾಸತ್ತೆಯ ತತ್ವವನ್ನು ಎಂದೂ ಗೌರವಿಸಿ ಗೊತ್ತಿರದ ಮೋದಿ ಈ ಭಾಷಣದಲ್ಲಿ ತಮ್ಮ ಮೈತ್ರಿಕೂಟದ ಗುಣಗಾನ ಮಾಡಿದರು, ಅದರೆ ವಿಪಕ್ಷಗಳ ಮೈತ್ರಿಕೂಟದ ಬಗ್ಗೆ ದ್ವೇಷವನ್ನೇ ಮುಂದುವರಿಸಿದರು.

ಇದು ಹೀಗೇ ಎಲ್ಲಿಯವರೆಗೆ ಮುಂದುವರಿಯ ಬಹುದು?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಚ್. ವೇಣುಪ್ರಸಾದ್

contributor

Similar News