ನೆಹರೂ ಮೇಲಿನ ಆರೋಪಗಳು ಎಷ್ಟು ನಿಜ?

ನೆಹರೂ ಧರ್ಮವಿರೋಧಿಯಾಗಿರಲಿಲ್ಲ, ಅಧ್ಯಾತ್ಮವಿಲ್ಲದೆ ಧರ್ಮ ಇರಲಾರದು ಎಂದು ನೆಹರೂ ನಂಬಿದ್ದರೆಂಬುದನ್ನು ದಿನಕರ್ ಹೇಳುತ್ತಾರೆ. ಧರ್ಮದ ಸಹಾಯದಿಂದ ಯಾರೂ ಜನಪ್ರಿಯರಾಗಲು ಆಗದು. ನೆಹರೂ ಕೇವಲ ತಮ್ಮ ಕೆಲಸದಿಂದಾಗಿ ಧರ್ಮದ ನೆರವಿಲ್ಲದೆ ಭಾರತದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು ಎಂಬುದನ್ನು ದಿನಕರ್ ಹೇಳುತ್ತಾರೆ.

Update: 2024-02-14 05:12 GMT

ನೆಹರೂ ವಿರುದ್ಧ ಸುಳ್ಳುಗಳನ್ನೇ ಹರಡುವ ಬಿಜೆಪಿಯವರು ದಿನಕರ್ ಅವರ ‘ಲೋಕದೇವ್ ನೆಹರೂ’ ಪುಸ್ತಕವನ್ನು ಓದಲೇಬೇಕಿದೆ.

ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿಯವರು ತಮ್ಮ ಭಾಷಣಗಳಲ್ಲಿ ನೆಹರೂ ಅವರನ್ನು ಹಲವು ಬಾರಿ ಪ್ರಸ್ತಾಪಿಸಿದ್ದಾರೆ. ಸಂಸತ್ತಿನಲ್ಲಿ ಮತ್ತು ಸಂಸತ್ತಿನ ಹೊರಗೆ ಎರಡೂ ಕಡೆ ಅವರು ತಮ್ಮ ಭಾಷಣದಲ್ಲಿ ನೆಹರೂ ಅವರನ್ನು ಎಳೆದು ತಂದಿದ್ದಿದೆ.

ತಮ್ಮ ಸರಕಾರದ ಹತ್ತು ವರ್ಷಗಳ ಅಧಿಕಾರಾವಧಿಯ ಕೊನೆಯ ಸಂಸತ್ ಭಾಷಣದಲ್ಲೂ ಮತ್ತೊಮ್ಮೆ ಮೋದಿ, ನೆಹರೂ ಅವರ ಪ್ರಸ್ತಾಪ ಮಾಡಿದ್ದಾರೆ.

ಸತತವಾಗಿ ನೆಹರೂ ಅವರನ್ನು ಟೀಕಿಸುತ್ತಲೇ ಬರಲಾಗಿದೆ. ಅವರ ಕಾಲದಲ್ಲಿ ದೇಶ ಹಾಳಾಯಿತು ಎನ್ನುವ ಮಟ್ಟಕ್ಕೆ ಇವರ ಸುಳ್ಳುಗಳು ಹಬ್ಬಿವೆ ಮತ್ತು ಅವನ್ನೇ ಸತ್ಯವೆಂದು ಬಿಂಬಿಸಲಾಗುತ್ತಿದೆ. ಬಹಳ ದೊಡ್ಡ ಸಂಖ್ಯೆಯ ಜನರು ಆ ಹಸಿ ಹಸಿ ಸುಳ್ಳುಗಳನ್ನು ನಂಬಿದ್ದಾರೆ ಕೂಡ.

ನೆಹರೂ ಅವರ ಬಗ್ಗೆ ಹತ್ತು ವರ್ಷಗಳಿಂದ ವಾಟ್ಸ್‌ಆ್ಯಪ್ ಯೂನಿವರ್ಸಿಟಿ ಯಾವ ಸುಳ್ಳುಗಳನ್ನು ಹರಡುತ್ತಾ ಬಂದಿದೆಯೋ ಅದರಿಂದ ಮೋದಿ ಪ್ರತ್ಯೇಕವಾಗಿ ನಿಲ್ಲಲು ಸಾಧ್ಯವಿಲ್ಲ. ಮೊನ್ನೆಯ ತಮ್ಮ ಭಾಷಣದಲ್ಲಿ ಕೂಡ ಮೋದಿ ಮತ್ತೊಮ್ಮೆ ಅಂಥದೇ ಆರೋಪಗಳನ್ನು ನೆಹರೂ ಬಗ್ಗೆ ಮಾಡಿದ್ದಾರೆ.

ಭಾರತೀಯರು ಸೋಮಾರಿಗಳು ಮತ್ತು ಕಡಿಮೆ ಬುದ್ಧಿವಂತರು ಎಂಬ ಭಾವನೆ ನೆಹರೂ ಅವರದಾಗಿತ್ತು ಎಂದು ಮೋದಿ ಟೀಕಿಸಿದ್ದಾರೆ.

ಯೂರೋಪಿಯನ್ನರು, ಜಪಾನೀಯರು, ಚೀನಿಯರು, ರಶ್ಯನ್ನರು, ಅಮೆರಿಕನ್ನರ ಹಾಗೆ ನಾವು ಕಷ್ಟಪಟ್ಟು ಕೆಲಸ ಮಾಡುವುದಿಲ್ಲ. ಅವರೆಲ್ಲ ಕಠಿಣ ಪರಿಶ್ರಮ ಮತ್ತು ಬುದ್ಧಿವಂತಿಕೆಯಿಂದ ಸಮೃದ್ಧಿ ಸಾಧಿಸಿದ್ದಾರೆ ಎಂದು ನೆಹರೂ ಹೇಳಿದ್ದರು ಎಂದು ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದವರಿಗೆ ಪರಿಶ್ರಮಿಗಳು ಎಂದು ನೆಹರೂ ಪ್ರಮಾಣಪತ್ರ ನೀಡುತ್ತಿದ್ದರು. ತಮ್ಮ ದೇಶದ ಸಾಮರ್ಥ್ಯದ ಮೇಲೆ ನೆಹರೂ ನಂಬಿಕೆಯಿಟ್ಟಿರಲಿಲ್ಲ ಎಂಬುದು ಮೋದಿ ಟೀಕೆ.

ಆದರೆ ಮೋದಿ, ವಾಟ್ಸ್‌ಆ್ಯಪ್ ಯೂನಿವರ್ಸಿಟಿ ನೆಹರೂ ಅವರ ಬಗ್ಗೆ ಹರಡುತ್ತಿರುವ ಸತತ ಸುಳ್ಳುಗಳಿಗೂ ವಾಸ್ತವದಲ್ಲಿ ನೆಹರೂ ಇದ್ದುದಕ್ಕೂ ಅಗಾಧ ವ್ಯತ್ಯಾಸವಿದೆ. ನೆಹರೂ ಕುರಿತ ಈ ಮಂದಿಯ ಸುಳ್ಳುಗಳು ಎಂಥವು ಮತ್ತು ವಾಸ್ತವ ಏನು ಎನ್ನುವುದನ್ನು ತಿಳಿಯಲು ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರು ನೆಹರೂ ಬಗ್ಗೆ ಬರೆದ ಪುಸ್ತಕದಲ್ಲಿನ ವಿವರಗಳನ್ನು ಗಮನಿಸಬೇಕು. ಲೋಕದೇವ್ ನೆಹರೂ ಎನ್ನುವ ಆ ಪುಟ್ಟ ಪುಸ್ತಕದಲ್ಲಿ ತಾವು ಕಂಡ ನೆಹರೂ ಅವರ ಚಿತ್ರಣವನ್ನು ದಿನಕರ್ ಕಟ್ಟಿಕೊಟ್ಟಿದ್ದಾರೆ.

ದಿನಕರ್ ಹಿಂದಿ ಭಾಷೆಯ ಅತ್ಯಂತ ಪ್ರಮುಖ ಕವಿ. ರಾಷ್ಟ್ರಕವಿ ಎಂಬ ಗೌರವವಲ್ಲದೆ, ಜ್ಞಾನಪೀಠ ಪ್ರಶಸ್ತಿಯನ್ನೂ ಪಡೆದವರು. ಅವರನ್ನು ನೆಹರೂ ರಾಜ್ಯಸಭಾ ಸದಸ್ಯರನ್ನಾಗಿ ನಾಮಕರಣ ಮಾಡಿದ್ದರು. ನೆಹರೂ ಅವರನ್ನು ಹತ್ತಿರದಿಂದ ಕಂಡು, ಅವರ ಕಾರ್ಯವೈಖರಿ, ನಡೆಯನ್ನೆಲ್ಲ ಕಣ್ಣಾರೆ ಕಂಡವರಾಗಿ ದಿನಕರ್ ಆ ಪುಸ್ತಕದಲ್ಲಿ ನೆಹರೂ ಅವರನ್ನು ಚಿತ್ರಿಸಿದ್ದಾರೆ. ನೆಹರೂ ಜೊತೆ ಕೆಲಸ ಮಾಡಿದ ಅನುಭವದಿಂದ ಬರೆದ ನೆಹರೂ ಕುರಿತ ಕಥನ ಅದಾಗಿದೆ.

ನೆಹರೂ ಎಂಥ ಜನತಾಂತ್ರಿಕರಾಗಿದ್ದರು, ಅವರು ಜನರ ಮನಸ್ಸಿನಲ್ಲಿ ನಾಯಕನಾಗಿ ಬೆಳೆದದ್ದು ಹೇಗೆ, ಅವರ ಹೃದಯ ಸಾಮ್ರಾಟನಾದದ್ದು ಹೇಗೆ ಎಂಬ ಎಲ್ಲ ವಿವರಗಳನ್ನು ದಿನಕರ್ ಆ ಪುಸ್ತಕದಲ್ಲಿ ಚಿತ್ರಿಸಿದ್ದಾರೆ.

ಮೊನ್ನೆ ಮತ್ತೊಮ್ಮೆ ನೆಹರೂ ಕುರಿತು ಟೀಕಿಸಿ ಮಾತನಾಡಿದ ಮೋದಿಯ ಹಾಗೆ ನೆಹರೂ ಬರೆದುಕೊಂಡು ಭಾಷಣ ಮಾಡಿದವರಾಗಿರಲಿಲ್ಲ. ನೆಹರೂ ಗಂಟೆಗಟ್ಟಲೆ ಭಾಷಣ ಮಾಡಬಲ್ಲವರಾಗಿದ್ದರು ಮತ್ತು ಜನರೊಡನೆ ಮುಕ್ತವಾಗಿ ಬೆರೆತು ಮಾತನಾಡಬಲ್ಲವರಾಗಿದ್ದರು.

ನೆಹರೂ ಕಾಲದಲ್ಲಿ ಟೆಲಿಪ್ರಾಂಪ್ಟರ್ ಇದ್ದಿರಲಿಲ್ಲ. ಆದರೆ ಈಗ ಮೋದಿ ಅದನ್ನು ಬಳಸದೆ ಭಾಷಣ ಮಾಡಲಾರರು.

ದಿನಕರ್ ಅವರು ಬರೆಯುವ ಹಾಗೆ, ಏಕಲವ್ಯನಿಗೆ ದ್ರೋಣಾಚಾರ್ಯನಿಂದ ಆದ ಅನ್ಯಾಯದ ಬಗ್ಗೆ ನೆಹರೂ ಅವರಿಗೆ ಸಿಟ್ಟಿತ್ತು. ಅಂದರೆ ಅನ್ಯಾಯ ಯಾವ ಕಾಲಘಟ್ಟದಲ್ಲಿಯೇ ಜರುಗಿದ್ದಾಗಿರಲಿ, ಅದನ್ನು ನೆಹರೂ ಖಂಡಿಸಬಲ್ಲವರಾಗಿದ್ದರು.

ಆದರೆ, ಇದನ್ನೇ ತಿರುಚಿ, ನೆಹರೂ ದ್ರೋಣಾಚಾರ್ಯರಿಗೆ ಅಪಮಾನ ಮಾಡಿದ್ಧಾರೆ ಎಂದು ಸುಳ್ಳು ಹರಡುವುದಕ್ಕೆ ಇವತ್ತಿನ ರಾಜಕಾರಣ ಹಿಂದೆ ಮುಂದೆ ನೋಡುವುದಿಲ್ಲ. ಇಡೀ ಸಂದರ್ಭದಿಂದ ಬಿಡಿಸಿ ಒಂದು ಹೇಳಿಕೆಯನ್ನು ತಪ್ಪು ಅರ್ಥ ಬರುವಂತೆ ತಿರುಚಿ ಹರಡುವುದಕ್ಕೆಂದೇ ಇವತ್ತು ವಾಟ್ಸ್‌ಆ್ಯಪ್ ಯೂನಿವರ್ಸಿಟಿ ಇದೆ. ಅದು ನೆಹರೂ ಅವರ ವಿರುದ್ಧ ಎಡೆ ಬಿಡದೆ ಸುಳ್ಳುಗಳನ್ನು ಹಬ್ಬಿಸುತ್ತಲೇ ಬಂದಿದೆ.

ದಿನಕರ್ ಅವರು ಪ್ರಸ್ತಾಪಿಸುವಂತೆ, ಭಾರತವನ್ನು ಆಧುನೀಕರಣಗೊಳಿಸುವ ನಿಟ್ಟಿನ ನೆಹರೂ ಆಲೋಚನೆಗಳು ವಿಸ್ಮಯಕಾರಿಯಾಗಿದ್ದವು.

ನೆಹರೂಗೆ ಪಾರ್ಸಿ ಬರುತ್ತಿರಲಿಲ್ಲ. ಅವರಿಗೆ ಇಂಗ್ಲಿಷ್, ಹಿಂದಿ, ಫ್ರೆಂಚ್ ಬರುತ್ತಿತ್ತು. ಸಂಸ್ಕೃತವನ್ನು ಓದುತ್ತಿದ್ದರು. ಓದಿದ್ದನ್ನು ನೆನಪಿಟ್ಟುಕೊಳ್ಳಬಲ್ಲವರಾಗಿದ್ದರು. ಗೀತೆಯ ಸಾರ ಎಂದೇ ಹೇಳಲಾಗುವ, ಸಾಂಖ್ಯಯೋಗ ಕುರಿತ ಭಗವದ್ಗೀತೆಯ 2ನೇ ಅಧ್ಯಾಯವನ್ನು ನೆಹರೂ ಮತ್ತೆ ಮತ್ತೆ ಓದುತ್ತಿದ್ದರು. ನೆಹರೂ ಹಠಯೋಗ ಮಾಡುತ್ತಿದರು. ಶೀರ್ಷಾಸನ ಮಾಡುತ್ತಿದ್ದರು. ಪಂಜಾಬ್, ದಿಲ್ಲಿಯಲ್ಲಿ ನೆಹರೂ ಉರ್ದು ಮಾತನಾಡುತ್ತಿದ್ದರು. ಬಿಹಾರ, ಮಧ್ಯಪ್ರದೇಶದಲ್ಲಿ ಸಂಸ್ಕೃತ ಮಿಶ್ರಿತ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಆದರೆ ಹಿಂದೂಸ್ತಾನಿ ಅವರಿಗೆ ಬಹಳ ಇಷ್ಟವಿತ್ತು.

ನಾವು ಕಳೆದೊಂದು ದಶಕದಲ್ಲಿ ಗಮನಿಸುತ್ತಲೇ ಬಂದಿದ್ದೇವೆ. ಮೋದಿ ಅಷ್ಟು ಗಂಟೆ ಕೆಲಸ ಮಾಡುತ್ತಾರೆ, ಇಷ್ಟು ಗಂಟೆ ಕೆಲಸ ಮಾಡುತ್ತಾರೆ ಎಂದು ಡಂಗುರ ಬಾರಿಸುತ್ತಲೇ ಬರಲಾಗಿದೆ. ಮಡಿಲ ಮೀಡಿಯಾಗಳಲ್ಲಿ ಬೇರೆ ಏನೂ ಇಲ್ಲದಿದ್ದರೂ ಮೋದಿ ಕುರಿತ ಇಂಥ ಅಬ್ಬರದ ಪ್ರಚಾರ ಮಾತ್ರ ಢಾಳಾಗಿಯೇ ಇರುತ್ತದೆ.

ಒಂದು ವಿಚಾರ ಗಮನಿಸಬೇಕು.

ಭಾರತದ ಯಾವ ಪ್ರಧಾನಿಯೂ ಮೋದಿಯಷ್ಟು ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಿರಲಿಲ್ಲ. ಇಷ್ಟೊಂದು ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಿರಲಿಲ್ಲ. ಪ್ರಧಾನಿಯಾದವರು ತೀರಾ ಕಡಿಮೆ ರ್ಯಾಲಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಯಾಕೆಂದರೆ ಅವರಿಗೆ ಅವರದೇ ಆದ ಮಹತ್ವದ ಹೊಣೆಗಾರಿಕೆಗಳು, ಕೆಲಸಗಳು ಬೇಕಾದಷ್ಟಿರುತ್ತವೆ.

ಆದರೆ ಮೋದಿ ಕಾಲದಲ್ಲಿ ಹೀಗಿಲ್ಲ. ಮೋದಿ ಅಷ್ಟೊಂದು ಕೆಲಸ ಮಾಡುತ್ತಾರೆ ಎನ್ನಲಾಗುತ್ತದೆ. ಅಂಥವರು ಒಂದೊಂದು ವಿಧಾನಸಭೆ ಚುನಾವಣೆ ಹೊತ್ತಲ್ಲಿಯೂ 20ರಿಂದ 30 ರ್ಯಾಲಿಗಳಲ್ಲಿ ಅದು ಹೇಗೆ ಪಾಲ್ಗೊಳ್ಳುತ್ತಾರೆ ಹಾಗಾದರೆ?

ದಿನಕರ್ ಅವರು ಬರೆಯುವಂತೆ, ನೆಹರೂ ಅವರ ಕಾರ್ಯಕ್ಷಮತೆ ಅಪಾರವಾಗಿತ್ತು. ನೆಹರೂ ಮೇಧಾವಿಯಾಗಿದ್ದರು. ಬೆಳಗ್ಗೆ 8 ಇಲ್ಲವೇ ಎಂಟೂವರೆಗೆಲ್ಲ ಅವರು ಕೆಲಸಕ್ಕೆ ತಯಾರಾಗಿಬಿಡುತ್ತಿದ್ದರು. ನಿತ್ಯವೂ ಎರಡು ಬಗೆಯ ಜನರನ್ನು ನೆಹರೂ ಭೇಟಿಯಾಗುವುದು ಇರುತ್ತಿತ್ತು. ಗಣ್ಯರು ಮಾತ್ರವಲ್ಲದೆ, ಹಳ್ಳಿಗಳಿಂದ ಬಂದಿರುತ್ತಿದ್ದ ಜನರೂ ನೆಹರೂ ಅವರನ್ನು ಕಾಣಲು ಕಾದಿರುತ್ತಿದ್ದರು. ಅದಾದ ಬಳಿಕ ನೆಹರೂ ಫೈಲುಗಳನ್ನು ನೋಡುವುದು ಇರುತ್ತಿತ್ತು. ನಂತರ ಸಂಸತ್ತಿಗೆ ಹೋಗುತ್ತಿದ್ದರು. ರಾತ್ರಿಯ ಭೋಜನ 8 ಗಂಟೆಗೆ ಆಗುತ್ತಿತ್ತು. ಬಳಿಕ 9ರಿಂದ ಮತ್ತೆ ಕೆಲಸಕ್ಕೆ ಕೂರುತ್ತಿದ್ದರು. ಅವರು ಮಲಗುತ್ತಿದ್ದುದು ಮಧ್ಯರಾತ್ರಿಯ ನಂತರ 1 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ.

8 ಗಂಟೆಗೆಲ್ಲ ಕೆಲಸಕ್ಕೆ ತಯಾರಾಗಿ, ರಾತ್ರಿ 1ರವರೆಗೆ ಕೆಲಸ ಮಾಡುತ್ತಿದ್ದರೂ, ನೆಹರೂ ವಿಚಾರದಲ್ಲಿ ಅದರ ಬಗ್ಗೆ ಆ ದಿನಗಳಲ್ಲಿ ಯಾವ ಪ್ರಚಾರವೂ ಇದ್ದಿರಲಿಲ್ಲ.

ನೆಹರೂ ಅವರು 5 ಗಂಟೆ ಮಾತ್ರವೇ ನಿದ್ದೆ ಮಾಡುತ್ತಾರೆ, ಅವರ ಉಳಿದ ಸಮಯವೆಲ್ಲ ದೇಶದ ಕೆಲಸಕ್ಕಾಗಿ ಮೀಸಲು ಎಂದು ಇವತ್ತಿನಂತೆ ಅವತ್ತು ಯಾರೂ ಹೇಳುತ್ತಿರಲಿಲ್ಲ.

ಇಂದಿನ ಭಾರತ ಬದಲಾಗಿದೆ. ಇಂಥದ್ದೆಲ್ಲವೂ ಭಾರೀ ಬಣ್ಣದೊಂದಿಗೆ ಪ್ರಚಾರವಾಗುತ್ತದೆ.

ಆ ಕಾಲದಲ್ಲಿ ನೆಹರೂ ಸಂಸತ್ತಿನ ಎರಡೂ ಸದನಗಳಲ್ಲಿ ಇರುತ್ತಿದ್ದರು. ಅಷ್ಟೊಂದು ಕ್ಷಮತೆಯಿಂದ ಅವರು ಕೆಲಸ ಮಾಡುತ್ತಿದ್ದುದು ಅಚ್ಚರಿಯ ವಿಷಯವಾಗಿತ್ತು.

ಯಾವ ಮಂತ್ರಿಯೂ ಮಾಡದಷ್ಟು ಕೆಲಸವನ್ನು ನೆಹರೂ ಮಾಡುತ್ತಿದ್ದರು. ಅವೆೆಲ್ಲದರ ನಡುವೆಯೂ ಅವರು ಬಹಳಷ್ಟು ಜನರನ್ನು ಭೇಟಿಯಾಗುತ್ತಿದ್ದರು. ಇತರ ಮಂತ್ರಿಗಳಾರೂ ಕಾಣದಷ್ಟು ಜನರನ್ನು ನೆಹರೂ ಭೇಟಿ ಮಾಡುವುದಿತ್ತು.

ಆದರೆ ವಿಪಕ್ಷಗಳು ಆರೋಪಿಸುವ ಹಾಗೆ, ಮೋದಿ ಸಂಸತ್ತಿನಲ್ಲಿ ಬಂದು ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ.

ನೆಹರೂ ವಿರುದ್ಧ ಸುಳ್ಳುಗಳನ್ನೇ ಹರಡುವ ಬಿಜೆಪಿಯವರು ದಿನಕರ್ ಅವರ ಲೋಕದೇವ್ ನೆಹರೂ ಪುಸ್ತಕವನ್ನು ಓದಲೇಬೇಕಿದೆ.

ನೆಹರೂ ಧರ್ಮವಿರೋಧಿಯಾಗಿರಲಿಲ್ಲ, ಅಧ್ಯಾತ್ಮವಿಲ್ಲದೆ ಧರ್ಮ ಇರಲಾರದು ಎಂದು ನೆಹರೂ ನಂಬಿದ್ದರೆಂಬುದನ್ನು ದಿನಕರ್ ಹೇಳುತ್ತಾರೆ.

ಧರ್ಮದ ಸಹಾಯದಿಂದ ಯಾರೂ ಜನಪ್ರಿಯರಾಗಲು ಆಗದು. ನೆಹರೂ ಕೇವಲ ತಮ್ಮ ಕೆಲಸದಿಂದಾಗಿ ಧರ್ಮದ ನೆರವಿಲ್ಲದೆ ಭಾರತದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು ಎಂಬುದನ್ನು ದಿನಕರ್ ಹೇಳುತ್ತಾರೆ.

ಆದರೆ ಮೋದಿ ಅವರ ಜನಪ್ರಿಯತೆ ಧಾರ್ಮಿಕ ಕಾರ್ಯಕ್ರಮವಿಲ್ಲದೆ ಸಾಧ್ಯವಿದೆಯೇ? ಪ್ರಧಾನಿ ಮೋದಿ ಈಗ ರಾಷ್ಟ್ರೀಯ ಪುರೋಹಿತನಂತೆ ಆಗಿಬಿಟ್ಟಿದ್ದಾರೆ. ನೆಹರೂ ಎಂದೂ ಹೀಗೆ ಧರ್ಮವನ್ನು ಬಳಸಿಕೊಂಡಿರಲಿಲ್ಲ. ಇಂಥ ಪುರೋಹಿತನ ರೀತಿಯಲ್ಲೂ ಎಂದೂ ನೆಹರೂ ತೋರಿಸಿಕೊಂಡಿರಲಿಲ್ಲ.

ಮೋದಿ ಈಗ ಕಾಣಿಸಿಕೊಳ್ಳುತ್ತಿರುವ ಪುರೋಹಿತನ ರೂಪವನ್ನು ಬದಿಗೆ ತೆಗೆದಿಟ್ಟರೆ, ಕೇವಲ ತನ್ನ ಕೆಲಸದ ಮೂಲಕವೇ ನೆಹರೂ ಗಳಿಸಿದ್ದಷ್ಟು ಜನಪ್ರಿಯತೆ ಗಳಿಸುವುದು ಅವರಿಗೆ ಸಾಧ್ಯವಿದೆಯೆ?

ದಿನಕರ್ ಬರೆಯುತ್ತಾರೆ

ನೆಹರೂ ಒಮ್ಮೆ ಕವಿ ಸಮ್ಮೆಳನದಲ್ಲಿ ದಿನಕರ್ ಅವರ ಕವಿತೆಯೊಂದರ ಸಾಲುಗಳಿಗೆ ವಾಹ್ ವಾಹ್ ಎಂದು ಉದ್ಗರಿಸಿದ್ದರಂತೆ.

ಆ ಸಾಲುಗಳು ಹೀಗಿದ್ದವು:

‘‘ಏಕ್ ಹಾಥ್ ಮೆ ಕಮಲ್

ಏಕ್ ಮೆ ಧರ್ಮದೀಪ್ತ್ ವಿಜ್ಞಾನ್

ಲೇಕರ್ ಉಠನೇವಾಲಾ ಹೈ

ಧರತಿ ಪರ್ ಹಿಂದೂಸ್ತಾನ್’’

ಇಲ್ಲಿ ಅವರು ವಾಹ್ ಎಂದಿದ್ದು ಕವಿತ್ವಕ್ಕಾಗಿತ್ತೋ ಆಥವಾ ಭಾರತದ ಅಂಥ ಭವಿಷ್ಯದ ಕಲ್ಪನೆಗಾಗಿತ್ತೊ ಗೊತ್ತಾಗಲಿಲ್ಲ ಎಂದು ದಿನಕರ್ ಹೇಳಿದ್ದಾರೆ.

ಧರ್ಮದೀಪ್ತ ವಿಜ್ಞಾನಕ್ಕಾಗಿ ವಾಹ್ ಎನ್ನುವ ಮನೋಭಾವ ನೆಹರೂ ಅವರದ್ದಾಗಿತ್ತು. ಅಲ್ಲಿ ಧರ್ಮದ ಹೆಸರಿನ ವಂಚನೆ ಇರಲಿಲ್ಲ. ಧರ್ಮದ ಅರ್ಥ ನೆಹರೂ ಅವರಲ್ಲಿ ಬೇರೆಯೇ ಇತ್ತು.

ಅಂದು ಜನತಾ ಹೃದಯ ಸಾಮ್ರಾಟನಾಗಿದ್ದ ಘನ ನಾಯಕ ನೆಹರೂ ಅವರನ್ನು ಅವಮಾನಿಸುವುದು ಇಂದಿನ ರಾಜಕೀಯದ ಮುಖ್ಯ ಭಾಗವೇ ಆಗಿಬಿಟ್ಟಿದೆ.

ನೆಹರೂ ಕಟ್ಟಿದ ಐಐಟಿ, ಏಮ್ಸ್‌ನಂತಹ ಸಂಸ್ಥೆಗಳನ್ನು ಈಗಿನ ಸರಕಾರದಿಂದ ನಿರೀಕ್ಷಿಸಲು ಸಾಧ್ಯವೇ? ನೆಹರೂ ದೂರದೃಷ್ಟಿಯಿಂದ ಕಟ್ಟಿದ್ದ ಅಮೂಲ್ಯ ಸಾರ್ವಜನಿಕ ಸಂಸ್ಥೆಗಳು ಈಗ ಹಂತಹಂತವಾಗಿ ಮಾರಿಕೊಳ್ಳುವ ಸ್ಥಿತಿಯನ್ನು ತಂದಿಡಲಾಗಿದೆ. ತಮ್ಮ ತಪ್ಪುಗಳನ್ನೆಲ್ಲ ಮುಚ್ಚಿಹಾಕಲು ನೆಹರೂ ಅವರನ್ನು ತೆಗಳಲಾಗುತ್ತದೆ. ನೆಹರೂ ಏನನ್ನೂ ಮಾಡಲಿಲ್ಲ ಎಂದು ಹೇಳುವುದು ಬಿಜೆಪಿಯವರ ಚಾಳಿಯೇ ಆಗಿಹೋಗಿದೆ.

ಮೊದಲ ಬಾರಿ ಅಧಿಕಾರಕ್ಕೆ ಏರುವಾಗ ಶುರುವಾದ ಈ ಅಪಪ್ರಚಾರ ಅಭಿಯಾನ ಎರಡನೇ ಅವಧಿಯ ಅಧಿಕಾರ ಮುಗಿಸುವಾಗಲೂ ಮುಂದುವರಿದಿದೆ. ಇನ್ನು ಚುನಾವಣಾ ಪ್ರಚಾರದಲ್ಲೂ ಅದು ಮುಂದುವರಿಯಲಿದೆ ಎಂಬುದರಲ್ಲಿ ಸಂಶಯ ಬೇಡ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎನ್. ಪ್ರಸಾದ್

contributor

Similar News