ಸಕಲೇಶಪುರದ ಮಣ್ಣಿನ ಇಟ್ಟಿಗೆಗೆ ಭಾರೀ ಬೇಡಿಕೆ
ಸಕಲೇಶಪುರ: ಸಕಲೇಶಪುರ ತಾಲೂಕಿನಲ್ಲಿ ಕಾಫಿ, ಏಲಕ್ಕಿ, ಕರಿಮೆಣಸು, ಸಾಂಬಾರ ಪದಾರ್ಥಗಳು ಹಾಗೂ ಇತರ ಉದ್ಯಮಗಳಿಗೆ ಮಾತ್ರವಲ್ಲದೆ, ಇಲ್ಲಿಯ ಮಣ್ಣಿನ ಇಟ್ಟಿಗೆಗಳಿಗೂ ಭಾರೀ ಬೇಡಿಕೆ ಇವೆ.
ಪರಿಸರ ಪ್ರೇಮಿ ಹಾಗೂ ಗುಡಿ ಕೈಗಾರಿಕೆ ವ್ಯಾಪ್ತಿಯ ಈ ಇಟ್ಟಿಗೆಗಳ ಆಯಸ್ಸು ಸುಮಾರು ೧೨೦ ವರ್ಷಗಳು. ಇಟ್ಟಿಗೆ ಉದ್ದಿಮೆಯಲ್ಲಿ ಸಕಲೇಶಪುರ ತನ್ನದೇ ಚಾಪು ಮೂಡಿಸಿಕೊಂಡಿದೆ. ಇದಕ್ಕೆ ಇಲ್ಲಿನ ಮಣ್ಣಿನ ಅಂಶವೇ ಕಾರಣವಾಗಿದೆ.
ಹಾಸನದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಇಲ್ಲಿ ತಯಾರಾಗುವ ಇಟ್ಟಿಗೆಗಳನ್ನು ಸಂಪೂರ್ಣವಾಗಿ ಬಳಸಲಾಗುತ್ತಿದೆ. ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು ಭಾಗಗಳಿಗೂ ಇಲ್ಲಿಯ ಇಟ್ಟಿಗೆಗೆ ಬಹಳ ಬೇಡಿಕೆಯಿದೆ. ಈ ಹಿಂದೆ ಕಾಸರಗೋಡು, ಬೆಂಗಳೂರು ಕಡೆಗೂ ಸಕಲೇಶಪುರದ ಇಟ್ಟಿಗೆ ರವಾನೆಯಾಗುತ್ತಿತ್ತು.
ಇಟ್ಟಿಗೆಯನ್ನು ಈ ಹಿಂದೆ ಕೈಯಿಂದ ಮಾತ್ರ ತಯಾರು ಮಾಡಲಾಗುತ್ತಿತ್ತು. ಈಗ ಯಂತ್ರಗಳನ್ನು ಬಳಸಲಾಗುತ್ತದೆ. ಟೇಬಲ್ ಇಟ್ಟಿಗೆ, ಬಾಕ್ಸ್ ಇಟ್ಟಿಗೆ, ವೈರ್ ಕಟಿಂಗ್ ಇಟ್ಟಿಗೆ ಹಾಗೂ ಜಲ್ಲಿ ಇಟ್ಟಿಗೆ ಹೀಗೆ ಹಲವು ವಿಧಾನಗಳಲ್ಲಿ ಇಟ್ಟಿಗೆಗಳನ್ನು ತಯಾರು ಮಾಡಲಾಗುತ್ತದೆ.
ಇಟ್ಟಿಗೆ ತಯಾರಿಕೆಗೆ ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ, ಉತ್ತರ ಪ್ರದೇಶ, ಅಸ್ಸಾಂ ಕಾರ್ಮಿಕರು ಬರುತ್ತಾರೆ. ಇದಲ್ಲದೆ ಉತ್ತರ ಕರ್ನಾಟಕದ ಚಿತ್ರದುರ್ಗ, ಹೊಸಪೇಟೆ, ಬಳ್ಳಾರಿ, ಹೊಸದುರ್ಗ, ವಿಜಯಪುರ ಪ್ರದೇಶದಿಂದಲೂ ಸಹ ಕಾರ್ಮಿಕರು ಬರುತ್ತಾರೆ. ಮೂರರಿಂದ ನಾಲ್ಕು ತಿಂಗಳವರೆಗೆ ನಡೆಯುವ ಈ ಉದ್ದಿಮೆ ಜನವರಿಯಲ್ಲಿ ಪ್ರಾರಂಭವಾಗಿ ಎಪ್ರಿಲ್ ತಿಂಗಳ ಕೊನೆಯಲ್ಲಿ ಮುಗಿದುಹೋಗುತ್ತದೆ.
ಇಟ್ಟಿಗೆ ಸುಡಲು ಮರದ ಅಗತ್ಯ ಇದ್ದು, ಮರ ಸಾಗಣೆ ಪರವಾನಿಗೆ ರದ್ದು ಮಾಡಿರುವುದರಿಂದ ಸೌದೆಗಾಗಿ ಬಹಳ ತೊಂದರೆಯಾಗಿದೆ. ಕೆಲವೊಮ್ಮೆ ಕಾನೂನು ತೊಡಕು ಮುಂದಾಗುತ್ತದೆ.
ಈ ಇಟ್ಟಿಗೆಗಳು ಮಳೆಗಾಲದಲ್ಲಿ ಮನೆಯೊಳಗೆ ಬೆಚ್ಚಗಿನ ವಾತಾವರಣ ನಿರ್ಮಿಸಿದರೆ, ಬೇಸಿಗೆಯಲ್ಲಿ ತಂಪನೆಯ ವಾತಾವರಣ ನಿರ್ಮಿಸುತ್ತವೆ.