ಆರೆಸ್ಸೆಸ್‌ನ ಕೆಲಸಗಳಿಗೆ ನನ್ನ ಬೆಂಬಲ ಸದಾ ಇರುತ್ತದೆ : ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ಸಂಘ ಪರಿವಾರ ನಮಗೆ ಹೊಸದಲ್ಲ. ನಮ್ಮ ತಾತನವರು ವಿಎಚ್‌ಪಿಯಲ್ಲಿದ್ದರು. ಆರೆಸ್ಸೆಸ್ ಬಹಳ ಸಮಾಜಮುಖಿ ಕೆಲಸಗಳನ್ನು ಮಾಡುತ್ತದೆ. ನಾನದರ ಸದಸ್ಯನಲ್ಲದಿದ್ದರೂ ಎಷ್ಟೋ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದಿದೆ. ದೇಶ ಮೊದಲು ಎನ್ನುತ್ತದೆ ಸಂಘ ಪರಿವಾರ. ಅದು ಮಾಡುವ ಕೆಲಸ ಸ್ಫೂರ್ತಿದಾಯಕ. ಅದರ ಕೆಲಸಗಳಿಗೆ ಬೆಂಬಲವಾಗಿ ಯಾವಾಗಲೂ ಇರುತ್ತೇನೆ.

Update: 2024-04-06 06:24 GMT

► ಚುನಾವಣೆ ಕಾವು ಏರುತ್ತಿದೆ. ನೀವು ಜನರೊಂದಿಗೆ ಸಂಪರ್ಕದಲ್ಲಿದ್ದೀರಿ. ಸಾರ್ವಜನಿಕ ಜೀವನದಲ್ಲಿದ್ದರೂ ಖಾಸಗಿತನಕ್ಕೆ ಹೆಚ್ಚು ಒತ್ತು ಕೊಟ್ಟ ನಿಮಗೆ ಜನರೊಡನೆ ನೇರ ಮುಖಾಮುಖಿಯಾಗುವ, ಮಾತುಕತೆ ನಡೆಸುವ ಈ ಸಂದರ್ಭದಲ್ಲಿ ಹೇಗೆನ್ನಿಸುತ್ತದೆ?

ಯ.ಒ.: ಒಂದು ಒಳ್ಳೆಯ ಅನುಭವ. ಜನರು ಒಳ್ಳೆಯ ಪ್ರತಿಕ್ರಿಯೆ ಕೊಟ್ಟಿದ್ಧಾರೆ. ಶಕ್ತಿ ತುಂಬುತ್ತಿದ್ದಾರೆ. ಮುಂಬರುವ ಕೆಲಸ ಸುಲಭವಲ್ಲ.

► ಒಂದು ವರ್ಷದ ಹಿಂದೆ ನಿಮ್ಮ ಆಲೋಚನೆಗಳು ಬೇರೆಯಾಗಿದ್ದವು. ರಾಜಕೀಯ ನಿಮ್ಮ ಆಸಕ್ತಿಯ ಕ್ಷೇತ್ರ ಅಲ್ಲ ಎಂದಿದ್ದೀರಿ. ಈಗ ರಾಜಕೀಯಕ್ಕೆ ಬಂದಿದ್ದೀರಿ ಎಂದರೆ ಪ್ರಬಲವಾದ ಕಾರಣಗಳಿರುತ್ತವೆ. ಆ ಕಾರಣಗಳು ಏನು?

ಯ.ಒ.: ಈಗಿನ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎಂದರೆ ರಾಜಕೀಯದ ಮೂಲಕ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿದೆ. ಜನರು ಆರಿಸುವುದರೊಂದಿಗೆ ಅಧಿಕಾರ ಬರಬೇಕಿದೆ.

► ಯಾಕೆ ಬಿಜೆಪಿ?

ಯ.ಒ.: ಸಿದ್ಧಾಂತದಲ್ಲಿ, ನಂಬಿಕೆಯಲ್ಲಿ ಹೊಂದಾಣಿಕೆ ಇರಬೇಕು. ನನಗೆ ಅಂಥ ಹೊಂದಾಣಿಕೆ ಬಹುತೇಕ ಇರುವುದು ಬಿಜೆಪಿಯೊಂದಿಗೆ.

► ನೀವು ವಿದೇಶದಲ್ಲಿ ಓದಿದವರು. ಬೇರೆ ಬೇರೆ ವ್ಯವಸ್ಥೆ ನೋಡಿದ್ದೀರಿ. ಬಿಜೆಪಿಯ ಸಿದ್ಧಾಂತವನ್ನು ಒಪ್ಪಿಯೇ ಸೇರಿದ್ದೀರೋ ಅಥವಾ ಇದೊಂದು ಸಂದರ್ಭದ ಅವಕಾಶ ಎಂದು ಬಂದಿದ್ದೀರೋ?

ಯ.ಒ.: ಎರಡೂ. ಧರ್ಮದ ರಕ್ಷಣೆಯೊಂದಿಗೇ ಎಲ್ಲವೂ ಸಾಧ್ಯ. ಜೊತೆಗೆ ಪ್ರಧಾನಿಯವರು ದೇಶದ ಪ್ರಗತಿಗೋಸ್ಕರ ಮಾಡುತ್ತಿರುವ ಕೆಲಸಗಳು. ಅದೊಂದು ಹೈಬ್ರಿಡ್ ಮಾಡೆಲ್. ಪ್ರಾಚೀನ ಸಂಸ್ಕೃತಿ ಉಳಿದಿರೋದು ನಮ್ಮಲ್ಲಿ ಮಾತ್ರ. ಆಧುನಿಕತೆಯೊಂದಿಗೇ ಅದನ್ನೂ ಉಳಿಸಬೇಕಿದೆ.

► ಹಸಿವು ಸೂಚ್ಯಂಕ, ಪತ್ರಿಕಾ ಸ್ವಾತಂತ್ರ್ಯ, ನಿರುದ್ಯೋಗ ಇದೆಲ್ಲದರಲ್ಲೂ ಭಾರತ ಕುಸಿಯುತ್ತಿದೆ. ಹಾಗಾದರೆ ಅಭಿವೃದ್ಧಿ ಎಂದರೇನು?

ಯ.ಒ.: ಸೂಚ್ಯಂಕಗಳಲ್ಲಿ ಬೇರೆ ರೀತಿಯದೇನೋ ನಡೆಯುತ್ತದೆ. ಅದು ವಿಶ್ವಮಟ್ಟದಲ್ಲಿ ನಡೆಯುತ್ತಿರುವ ರಾಜಕೀಯ. ನಮ್ಮ ಮುಂದಿರುವುದು, ನಾವೇ ಕಾಣುತ್ತಿರುವುದು ಮೋದಿಯವರು ಮಾಡಿರುವ ಕೆಲಸ. ಅನೇಕ ಯೋಜನೆಗಳ ಫಲಾನುಭವಿಗಳು ಹಿಂದುಳಿದ ವರ್ಗದವರಾಗಿದ್ದಾರೆ. ಸ್ಟ್ಯಾಂಡಪ್ ಇಂಡಿಯಾ ಮೂಲಕ ಉದ್ಯೋಗಾಕಾಂಕ್ಷಿಗಳಲ್ಲ, ಉದ್ಯೋಗ ಸೃಷ್ಟಿಕರ್ತರೂ ಆಗಬೇಕೆಂಬುದು ಅವರ ಉದ್ದೇಶ. ನಮ್ಮ ಕಣ್ಣೆದುರಿನ ಅನುಭವವನ್ನು ಸಾಕ್ಷಿಯಾಗಿ ತೆಗೆದುಕೊಳ್ಳಬೇಕಿದೆ.

► ನೀವು ಸೇರಿರುವ ಸಂಸ್ಥಾನದ ಹಿನ್ನೆಲೆಗೂ ಈಗ ನೀವು ಪ್ರತಿನಿಧಿಸುತ್ತಿರುವ ಪಕ್ಷಕ್ಕೂ ಎಲ್ಲಿಯ ಸಾಮ್ಯತೆ?

ಯ.ಒ.: ನಮಗೆ ಇಂದು ಏನು ಬೇಕಿದೆಯೋ ಅದನ್ನು ಅಭಿವೃದ್ಧಿಪಡಿಸಿಕೊಳ್ಳುವುದರ ಜೊತೆಗೇ ನಮ್ಮ ಪ್ರಾಚೀನ ಪರಂಪರೆಯನ್ನೂ ರಕ್ಷಣೆ ಮಾಡಬೇಕಿದೆ. ನಮ್ಮ ಸಂಸ್ಥಾನದಲ್ಲೂ ಹಿಂದೆ ಇದೇ ಮಾದರಿಯನ್ನು ಅನುಸರಿಸಲಾಗಿತ್ತು. ಈಗ ನಮ್ಮ ಪ್ರಧಾನಿಯವರೂ ಅದನ್ನೇ ಮಾಡುತ್ತಿದ್ದಾರೆ. ಬಿಜೆಪಿ ಕೂಡ ಮಾಡುತ್ತಿದೆ.

► ಇಲ್ಲಿಯವರೆಗೆ ಪರಂಪರೆ ರಕ್ಷಣೆಯ ಕೆಲಸ ಆಗಿರಲಿಲ್ಲ ಎಂದು ನಿಮ್ಮ ಭಾವನೆಯೇ?

ಯ.ಒ.: ಯಾವ ಮಟ್ಟದಲ್ಲಿ ಆಗಬೇಕಿತ್ತೋ ಅಷ್ಟರ ಮಟ್ಟಿಗೆ ಆಗಿರಲಿಲ್ಲ.

► ಯಾವ ಥರದ ಪರಂಪರೆ ರಕ್ಷಣೆ ಆಗಬೇಕಿದೆ?

ಯ.ಒ.: ಆಧುನಿಕ ಯೋಗ ಮೈಸೂರಿನಲ್ಲಿಯೇ ಸೃಷ್ಟಿಯಾದದ್ದು. ಯಾವ ಸದ್ದಿಲ್ಲದೆಯೇ ಅದು ಇಲ್ಲಿ ನಡೆಯಿತು. ಅದನ್ನು ವಿಶ್ವಮಟ್ಟದಲ್ಲಿ ನಮ್ಮ ಸಾಫ್ಟ್ ಪವರ್ ಎಂದು ಬಳಸಿದವರು ನಮ್ಮ ಪ್ರಧಾನಿ. ಯೋಗ ದೈಹಿಕ ಸಾಮರ್ಥ್ಯಕ್ಕೆ ಮಾತ್ರವಲ್ಲ, ಮಾನಸಿಕ ಸಾಮರ್ಥ್ಯಕ್ಕೆ ಕೂಡ ಬಹಳ ಸಹಾಯಕ. ಯೋಗ ಮೂಲತಃ ಒಂದು ತತ್ವ. ತತ್ವಶಾಸ್ತ್ರದೊಂದಿಗೇ ಯೋಗ ಬರುತ್ತದೆ.

► ವಾಸ್ತವದಲ್ಲಿ ನೋಡಿದರೆ, 2022-2023 ಬಜೆಟ್ ಗಮನಿಸಿದರೆ ಯೋಗಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಗಲಿಲ್ಲ. ಮಾನಸಿಕ ಆರೋಗ್ಯ ಕೇಂದ್ರಗಳನ್ನು ಹೆಚ್ಚಿಸುವುದಕ್ಕೆ ನಿರ್ಮಲಾ ಸೀತಾರಾಮನ್ ಗಮನ ಕೊಟ್ಟರು. ನೀವು ಹೇಳುವುದೇ ನಿಜವಾಗಿದ್ದಲ್ಲಿ ಅದಕ್ಕೆ ಹೆಚ್ಚು ಹಣ ಮೀಸಲಿಡಬೇಕಿರಲಿಲ್ಲ. ಯಾಕೆ ಹಾಗಾಯಿತು ಹಾಗಾದರೆ?

ಯ.ಒ.: ಯೋಗ ಅದರ ಪಾಡಿಗೆ ಅದು ವಿಶ್ವಮಟ್ಟದಲ್ಲಿ ಅಭಿವೃದ್ಧಿಯಾಗುತ್ತಿದೆ. ಬೇರೆ ವಲಯಗಳಿಗೆ ಸರಕಾರದ ಪ್ರೋತ್ಸಾಹ ಬೇಕಾಗಿದೆ. ಮಾನಸಿಕ ಆರೋಗ್ಯಕ್ಕೆ ವಿಶ್ವಮಟ್ಟದಲ್ಲಿ ಗಮನ ಕೊಡಲಾಗುತ್ತಿದೆ. ಅದಕ್ಕೆ ಸಂಬಂಧಪಟ್ಟಿರುವ ಸಮಸ್ಯೆಗಳನ್ನು ಪರಿಹರಿಸುವುದು ಕೂಡ ಬಹಳ ಮುಖ್ಯ. ಹಾಗಾಗಿ ಅವರು ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ. ಯೋಗಕ್ಕೂ ಈಗಾಗಲೇ ದೊಡ್ಡ ಪ್ರೋತ್ಸಾಹ ಸಿಕ್ಕಿದೆ.

► ವಿಶ್ವ ಮಟ್ಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಕೃತಿ, ಪರಂಪರೆ ಎಲ್ಲವನ್ನೂ ಮೀರಿದ್ದಲ್ಲವೇ?

ಭಾರತದಲ್ಲಿ ಸನಾತನ ಧರ್ಮ ಕೂಡ ವೈಜ್ಞಾನಿಕವೇ.

► ನೀವು ಪ್ರತಿನಿಧಿಸುತ್ತಿರುವ ಪಕ್ಷ ಪ್ರತಿಪಾದಿಸುತ್ತಿರುವುದು ಒಂದು ದೇಶ, ಒಂದು ಭಾಷೆ, ಒಂದು ಧರ್ಮ, ಒಂದು ಚುನಾವಣೆ.

ಒಂದೇ ಭಾಷೆ ಎಂದು ಎಲ್ಲೂ ಹೇಳಿಲ್ಲ. ಎಲ್ಲರಿಗೂ ತಮ್ಮ ಸ್ಥಳೀಯ ಭಾಷೆಗೆ ಉತ್ತಮವಾದ ಪ್ರೋತ್ಸಾಹ ಇದೆ. ಕನ್ನಡಿಗರಿಗೆ ಕನ್ನಡ ಎಂಬುದು ನಮ್ಮ ಪ್ರಥಮ ಕರ್ತವ್ಯ. ಅದು ಪ್ರಥಮವಾಗಿಯೇ ಇರುತ್ತದೆ. ಹಾಗೆಯೇ ಎಲ್ಲ ಧರ್ಮಗಳಿಗೂ ಮರ್ಯಾದೆ, ಗೌರವ ಕೊಡುತ್ತೇವೆ. ಎಲ್ಲರನ್ನೂ ಸಮಾನ ದೃಷ್ಟಿಕೋನದಿಂದಲೇ ನೋಡುತ್ತೇವೆ.

► ನಿಮ್ಮ ಕ್ಷೇತ್ರದ ವಿಚಾರಕ್ಕೆ ಬರುವುದಾದರೆ, ನಿಮ್ಮೆದುರು ಇರುವವರು ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತರು. ಮುಖ್ಯಮಂತ್ರಿಗಳ ಸ್ವಕ್ಷೇತ್ರ ಆಗಿರುವುದರಿಂದ ಎಲ್ಲ ಶಕ್ತಿಯನ್ನೂ ಹಾಕುತ್ತಾರೆ. ಏನು ಸವಾಲುಗಳಿವೆ?

ಯ.ಒ.: ಎದುರಾಳಿ ಅಭ್ಯರ್ಥಿ ತಮ್ಮದೇ ತಂತ್ರ ಹೊಂದಿರುತ್ತಾರೆ. ಅವರದೇ ಆದ ಪ್ರತಿಪಾದನೆಗಳಿರುತ್ತವೆ. ಅವರು ಅದನ್ನು ಮುಂದುವರಿಸುತ್ತಾರೆ. ನಮ್ಮ ಧ್ಯಾನ ಇರುವುದು ನಮ್ಮ ಕೆಲಸದ ಮೇಲೆ. ನಾವು ಅದಕ್ಕೆ ತಕ್ಕಂತೆ ಮುಂದುವರಿಯುತ್ತೇವೆ.

► ನಿಮ್ಮ ಹಿಂದಿನ ಸಂಸದರು ಈ ಕ್ಷೇತ್ರಕ್ಕೆ ಬಹಳ ಭರವಸೆಗಳನ್ನು ಕೊಟ್ಟಿದ್ದರು. ಅದರಲ್ಲೂ ಇಲ್ಲಿನ ಪ್ರವಾಸೋದ್ಯಮಕ್ಕಾಗಿ ಬಹಳಷ್ಟು ಯೋಜನೆಗಳ ಬಗ್ಗೆ ಹೇಳಿದ್ದರು. ಆದರೆ ಆಗಲಿಲ್ಲ. ಇವರು ಮಾಡುತ್ತಾರೆಯೇ ಎಂಬ ಅಪನಂಬಿಕೆ ಜನರಲ್ಲಿದೆ.

ಯ.ಒ.: ಪ್ರತಿಯೊಬ್ಬರ ಕೆಲಸದ ರೀತಿಯಲ್ಲಿಯೂ ವ್ಯತ್ಯಾಸ ಇದ್ದೇ ಇರುತ್ತದೆ. ಪ್ರತಿಯೊಬ್ಬರ ನಡವಳಿಕೆಯಲ್ಲಿ, ವ್ಯಕ್ತಿತ್ವದಲ್ಲಿ ವ್ಯತ್ಯಾಸವಿರುತ್ತದೆ. ನಾವು ಮಾಡುವ ರೀತಿ ಬೇರೆ ಬಗೆಯಿರಬಹುದು. ಆದರೆ ಮೈಸೂರು-ಕೊಡಗು ಭಾಗದ ಅಭಿವೃದ್ಧಿಗಾಗಿ ನಿಂತಿದ್ದೇವೆ.

► ಏನು ಯೋಜನೆ ಹಮ್ಮಿಕೊಳ್ಳುತ್ತೀರಿ?

ಯ.ಒ.: ಈ ಭಾಗದ ಜನ ಮೈಸೂರು ಮೈಸೂರಾಗಿಯೇ ಇರಬೇಕು, ಕೊಡಗು ಕೊಡಗಾಗಿಯೇ ಇರಬೇಕೆಂದು ಬಲವಾಗಿ ಹೇಳುವವರಾಗಿದ್ದಾರೆ. ಮೈಸೂರಿನಲ್ಲಿ ನಮ್ಮ ಪರಂಪರೆ, ಪ್ರಕೃತಿ ಬಹಳ ಮುಖ್ಯ. ಕೊಡಗಿನಲ್ಲಿ ಅವರ ವೀರಪರಂಪರೆ, ಪ್ರಕೃತಿ ಬಹಳ ಮುಖ್ಯ. ಈ ಬಗೆಯ ಹೊಂದಾಣಿಕೆ ಇರುವುದರಿಂದ ಕೆಲಸ ಸುಲಭ. ಅವರಿಗೆ ಕೃಷಿ ಕ್ಷೇತ್ರ ಇದೆ. ಅದನ್ನು ಸಾವಯವ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕಿದೆ. ನಾನು ಓದಿದ್ದೇ ಪರಿಸರ ಅರ್ಥಶಾಸ್ತ್ರ. ಯಾವುದೇ ಕೆಲಸವಾದರೂ ಅದರ ಪರಿಸರ ವೆಚ್ಚ ಏನು, ಪ್ರಕೃತಿ ಮೇಲೆ ಪರಿಣಾಮ ಏನು ಎಂಬುದನ್ನು ಹಣಕಾಸಿನ ನೆಲೆಯಲ್ಲಿ ಲೆಕ್ಕ ಹಾಕುವುದು. ಕೆಲಸದಿಂದ ಇಲ್ಲಿ ಪ್ರಕೃತಿಗೆ ಹಾನಿಯಾದರೆ ಅದನ್ನು ಮತ್ತೊಂದೆಡೆ ಸರಿತೂಗಿಸಬೇಕಾಗುತ್ತದೆ. ಆ ರೀತಿಯಲ್ಲಿಯೇ ಸಾವಯವ ಅಭಿವೃದ್ಧಿ ಮಾಡುತ್ತೇವೆ. ಅರಮನೆ ಪರಂಪರೆಯೂ ಸೇರಿದಂತೆ ಎರಡೂ ಕಡೆಯ ಪರಂಪರೆ ರಕ್ಷಣೆ ಮಾಡಲಾಗುವುದು.

► ಜಾಗತಿಕ ತಾಪಮಾನದ ಬಗ್ಗೆ ಹೆಚ್ಚು ಚರ್ಚೆಯಾಗುವುದಿಲ್ಲ. ಇಲ್ಲಿಯೂ ಅದರ ಬಗ್ಗೆ ಹೆಚ್ಚು ಚಿಂತನೆ ಆಗಬೇಕು ಎನ್ನಿಸುತ್ತದೆಯೇ?

ಯ.ಒ.: ಆಗಬೇಕಿದೆ. ಅದರ ಬಗ್ಗೆ ಜಾಗೃತಿ, ಜೊತೆಗೇ ನಮ್ಮ ಮುಂದೆ ಇರುವ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ರಸ್ತೆಯಲ್ಲಿ ಹೋಗುತ್ತಿದ್ದರೆ ಎರಡೂ ಕಡೆ ಪ್ಲಾಸ್ಟಿಕ್ ನೋಡುತ್ತೇವೆ. ಮೊದಲು ನಮ್ಮ ಮನೆಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಿದೆ. ನಮ್ಮ ಕೆರೆಗಳು, ನದಿಗಳು, ಭೂಮಿ ಎಲ್ಲವೂ ಮಲಿನವಾಗುತ್ತಿದೆ. ಮೈಕ್ರೋಪ್ಲಾಸ್ಟಿಕ್ ಮಣ್ಣಿನೊಳಗೆ, ನೀರಿನೊಳಗೆ ಸೇರಿ, ಈಗ ನಮ್ಮ ದೇಹವನ್ನೂ ಸೇರಿದೆ. ಸ್ವಚ್ಛ ಭಾರತ ಅಂಥ ಅಭಿಯಾನ ಇದೆ. ಮೊದಲು ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಗಮನ ಕೊಡಬೇಕಿದೆ.

► ಇವತ್ತು ರಾಜಕೀಯ ಎಂದರೆ ಜಾತಿ ಮತ್ತು ಹಣ. ನಿಮ್ಮ ಕ್ಷೇತ್ರದಲ್ಲಿ ಒಕ್ಕಲಿಗರು ಸುಮಾರು 4 ಲಕ್ಷ 30 ಸಾವಿರದಷ್ಟಿದ್ದಾರೆ. ಆ ಮತಗಳು ನಿಮಗೆ ಬರುತ್ತವೆ ಎನ್ನಿಸುತ್ತದೆಯಾ?

ನಾವು ಭಾರತೀಯರಾಗಿಯೇ ಮತ ಚಲಾಯಿಸಬೇಕು. ನಾವೆಲ್ಲರೂ ಭಾರತೀಯರು. ಕನ್ನಡಿಗರು ಭಾರತೀಯ ಪರಂಪರೆಯ ರಕ್ಷಕರಾಗಿದ್ದಾರೆ. ಕುವೆಂಪು ಹೇಳಿದಂತೆ ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ.

► ಜಾತಿ, ಧರ್ಮವನ್ನು ಮೀರಿ ಜನ ನೀವು ಹೇಳುವ ರೀತಿಯಲ್ಲಿಯೇ ಮತ ಚಲಾಯಿಸುತ್ತಾರಾ?

ಯ.ಒ.: ಅದಕ್ಕೆ ಕಳೆದ 10 ವರ್ಷಗಳೇ ಸಾಕ್ಷಿ.

► ಸರ್ವಾಧಿಕಾರ ಇದೆ, ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡುವ ಯತ್ನವಾಗುತ್ತಿದೆ ಎನ್ನಲಾಗುತ್ತಿದೆ. ಇದಕ್ಕೆ ಏನು ಹೇಳುತ್ತೀರಿ?

ಯ.ಒ.: ನಮ್ಮ ವ್ಯವಸ್ಥೆಗೆ ತಕ್ಕಂತೆ ಕೆಲಸ ಮಾಡುತ್ತೇವೆ. ಮೊದಲು ಕ್ಷೇತ್ರದ ಕೆಲಸ.

► ನೀವು ಸಂಸದರಾದರೆ ಅಲ್ಲಿ ನೀತಿಗಳು ರೂಪುಗೊಂಡರಷ್ಟೇ ನೀವು ಇಲ್ಲಿ ತರಲು ಸಾಧ್ಯ. ಹಾಗಾಗಿ ಅಲ್ಲಿಯ ಆಲೋಚನೆಗಳು ಕೂಡ ಮುಖ್ಯ. ಒಕ್ಕೂಟ ವ್ಯವಸ್ಥೆ ಹಾಳಾಗುತ್ತಿದೆ ಎಂದು ನಿಮಗೆ ಅನ್ನಿಸುತ್ತಿದೆಯಾ?

ಯ.ಒ.: ಯಾವುದೇ ವ್ಯವಸ್ಥೆಯಲ್ಲಿ ಬದಲಾವಣೆಗಳು ಇರುತ್ತವೆ. ಒಂದು ಕಾಲದ ರಾಜಪ್ರಭುತ್ವದ ನಂತರ ಪ್ರಜಾಪ್ರಭುತ್ವ ಬಂತು. ಸಂವಿಧಾನದಲ್ಲಿಯೂ ತಿದ್ದುಪಡಿಗಳಾಗಿವೆ. ರಾಜವಂಶಸ್ಥರ ಹಕ್ಕುಗಳನ್ನು ಬದಲಿಸಿದರು. ಎಲ್ಲವೂ ಬದಲಾವಣೆಯಾಗುತ್ತವೆ. ಕಾಲ ಬದಲಾದಂತೆ, ಜನರ ಆಕಾಂಕ್ಷೆಗಳಲ್ಲಿ ಬದಲಾವಣೆ ಆದಂತೆ, ಜನರ ಅಭಿಪ್ರಾಯಗಳಲ್ಲಿ ಬದಲಾವಣೆ ಆದಂತೆ, ತಂತ್ರಜ್ಞಾನ ಮುಂದುವರಿದಂತೆ ಹೀಗಾಗುತ್ತದೆ. ಆದರೆ ಭಾರತೀಯ ಪರಂಪರೆ, ಮೂಲ ಆಕಾಂಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುತ್ತೇವೆ.

► ನಿಮ್ಮ ಪಕ್ಷದಲ್ಲಿ ಸಂವಿಧಾನ ಬದಲಾವಣೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿರುತ್ತದೆ. ಕೆಲವು ಸಂಸದರು ಅದನ್ನು ಹೇಳಿದ್ದಾರೆ.

ಯ.ಒ.: ಅದು ಪಕ್ಷದ ಅಧಿಕೃತ ನಿಲುವು ಅಲ್ಲವೇ ಅಲ್ಲ. ಕೆಲವು ಸಂಸದರು ಹೇಳಿದ್ದರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ನಮ್ಮ ಪಕ್ಷ ಸಂವಿಧಾನಕ್ಕೆ ತಕ್ಕಂತೆ ಕೆಲಸ ಮಾಡಲಿದೆ.

► ಬಿಜೆಪಿಯ ಹಿಂದೆ ಆರೆಸ್ಸೆಸ್ ಇದೆ. ನೀವು ಅದರ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ರಾಜಕೀಯ ಪಕ್ಷದ ಭಾಗವಾಗಿದ್ದೀರೋ ಅಥವಾ ಈ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರುತ್ತೀರೋ?

ಯ.ಒ.: ಸಂಘ ಪರಿವಾರ ನಮಗೆ ಹೊಸದಲ್ಲ. ನಮ್ಮ ತಾತನವರು ವಿಎಚ್‌ಪಿಯಲ್ಲಿದ್ದರು. ಆರೆಸ್ಸೆಸ್ ಬಹಳ ಸಮಾಜಮುಖಿ ಕೆಲಸಗಳನ್ನು ಮಾಡುತ್ತದೆ. ನಾನದರ ಸದಸ್ಯನಲ್ಲದಿದ್ದರೂ ಎಷ್ಟೋ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದಿದೆ. ದೇಶ ಮೊದಲು ಎನ್ನುತ್ತದೆ ಸಂಘ ಪರಿವಾರ. ಅದು ಮಾಡುವ ಕೆಲಸ ಸ್ಫೂರ್ತಿದಾಯಕ. ಅದರ ಕೆಲಸಗಳಿಗೆ ಬೆಂಬಲವಾಗಿ ಯಾವಾಗಲೂ ಇರುತ್ತೇನೆ.

► ಬಿಜೆಪಿ ಆಡಳಿತಕ್ಕೂ ಮುಂಚೆ ದೇಶ, ಒಕ್ಕೂಟ ವ್ಯವಸ್ಥೆ, ಸಂಸ್ಕೃತಿ, ಪರಂಪರೆ ಎಲ್ಲವೂ ಇತ್ತಲ್ಲವೇ? ಬಿಜೆಪಿ ಬಂದ ಮೇಲೆ ಇದೆಲ್ಲವೂ ಆಯಿತು ಎಂಬ ರೀತಿಯಲ್ಲಿ ಹೇಳಲಾಗುತ್ತಿದೆ?

ಯ.ಒ.: ಬಿಜೆಪಿಯಿಂದಾಗಿ ರಾಷ್ಟ್ರೀಯತೆಯ ಭಾವನೆ ಬಂದಿದೆ. ವಿಶ್ವಗುರು ಎಂದು ಗುರುತಿಸಲಾಗುತ್ತಿರುವುದು ಶ್ಲಾಘನೀಯ. ಹಿಂದೆ ಯಾರೂ ಮಾಡಿರಲಿಲ್ಲ ಎಂದಲ್ಲ. ದಿಲ್ಲಿಯಲ್ಲಿನ ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯದಲ್ಲಿ ಪ್ರತಿಯೊಬ್ಬ ಪ್ರಧಾನಿಯ ಸಾಧನೆಗಳನ್ನೂ ಮಂಡಿಸಲಾಗಿದೆ. ಎಲ್ಲರ ಕೊಡುಗೆಯೂ ಇದೆ. ಅನೇಕರು ಭಾರತದ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನು ಕೊಟ್ಟಿದ್ದಾರೆ. ತಮ್ಮ ಕೆಲಸವನ್ನು ಮಾಡಿದ್ದಾರೆ.

► ಈಗಿರುವ ಸಂದರ್ಭದಲ್ಲಿ, ರಾಷ್ಟ್ರೀಯತೆ ಭಾವನೆ ಈ 10 ವರ್ಷಗಳಲ್ಲಿ ಹೆಚ್ಚಾಗಿದೆ ಎನ್ನುವುದು ಅವತ್ತಿನ ಸ್ಯಾತಂತ್ರ್ಯ ಹೋರಾಟದ ಸಂದರ್ಭ ಮತ್ತು ಆ ಹೋರಾಟಗಾರರನ್ನು ಅಪಮಾನ ಮಾಡಿದಂತಾಗುವುದಿಲ್ಲವೆ? ಅಷ್ಟು ದೊಡ್ಡ ಸಂಗ್ರಾಮ ರೂಪುಗೊಳ್ಳುವಾಗಿನ ರಾಷ್ಟ್ರೀಯತೆ ಭಾವನೆ ಸಣ್ಣದಾಗಿರಲಿಲ್ಲವಲ್ಲ?

ಯ.ಒ.: ಅವತ್ತಿನ ಭಾವನೆಗಳೇ ಇವತ್ತು ಕೂಡ ಇವೆ.

► ಹಾಗಾದರೆ ಹೊಸದಾಗಿ ಬಿಜೆಪಿ ಕೊಟ್ಟಿರುವುದೇನು?

ಯ.ಒ.: ರಾಮಜನ್ಮಭೂಮಿ ವಿಚಾರ ಪರಿಹರಿಸಿ ಮಂದಿರವನ್ನೂ ನಿರ್ಮಿಸಲಾಯಿತು. ಸ್ವಾತಂತ್ರ್ಯ ಕಾಲದಿಂದ ಇದ್ದ 370ನೇ ವಿಧಿ ವಿಚಾರವನ್ನೂ ಪರಿಹರಿಸಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಶಾಂತಿ ಬಂದಿದೆ. ಇವೆಲ್ಲವೂ ಸಾಧ್ಯವಾಗಿರುವುದು ಬಿಜೆಪಿಯಿಂದ.

► ನಿಮ್ಮನ್ನು ಜನ ಯಾಕಾಗಿ ಗೆಲ್ಲಿಸಬೇಕು?

ಯ.ಒ.: ಪ್ರಧಾನಿ ಈಗಾಗಲೇ ಮಾಡುತ್ತಿರುವ ಕೆಲಸಗಳಿಗೆ ಸೇತುವೆಯಾಗಿ ನಾನು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಇಲ್ಲಿನ ಪರಂಪರೆ ಪ್ರಕೃತಿ ಎರಡನ್ನೂ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ. ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಕೃಷಿಗೆ ಪ್ರೋತ್ಸಾಹ ಕೊಡುವ ಕೆಲಸ ಆಗಬೇಕಿದೆ. ಇವೆಲ್ಲ ಕೆಲಸಗಳಿಗೂ ನಾನು ಸಿದ್ಧವಾಗಿದ್ದೇನೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸಂದರ್ಶನ: ಮಂಜುಳಾ ಮಾಸ್ತಿಕಟ್ಟೆ

contributor

Contributor - ನೇರಳೆ ಸತೀಶ್ ಕುಮಾರ್

contributor

Similar News