ಸರಕಾರಿ ಗೋಮಾಳದಲ್ಲಿ ನಿಲ್ಲದ ಮಣ್ಣು ಲೂಟಿ: ಅಕ್ರಮ ತಡೆಯಲು ತಾಲೂಕು ಆಡಳಿತದಿಂದ ನಿರಂತರ ದಾಳಿ

Update: 2024-07-06 05:06 GMT

ಚಾಮರಾಜನಗರ: ಜಿಲ್ಲೆಯಲ್ಲಿ ಸರಕಾರಿ ಗೋಳಮಾಳದಿಂದ ಕೆಂಪು, ಕಪ್ಪುಮಣ್ಣು ಸಾಗಿಸುವ ಜಾಲ ಹೆಚ್ಚಾಗುತ್ತಿದ್ದು, ಅಕ್ರಮ ತಡೆಗೆ ಇದೀಗ ನಿರಂತರ ದಾಳಿಗಳು ನಡೆಯುತ್ತಿವೆ.

ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಗಡಿ ಚಾಮರಾಜನಗರ ಜಿಲ್ಲೆಯ ಎಲ್ಲ ತಾಲೂಕಿನ ಸರಕಾರಿ ಭೂಮಿಯಿಂದ ಮಣ್ಣು ತೆಗೆದು ಅಕ್ರಮ ಸಾಗಣೆ ಪ್ರಕರಣ ಬೆಳಕಿಗೆ ಬರುತ್ತಿದ್ದು, ಚಾಮರಾಜನಗರ ತಾಲೂಕಿನಲ್ಲಿ ತಹಶೀಲ್ದಾರ್ ಬಸವರಾಜು ಅಕ್ರಮ ಮಣ್ಣು ದಂಧೆ ನಡೆಯುತ್ತಿರುವ ಸ್ಥಳಕ್ಕೆ ದಾಳಿ ಮಾಡಿದ್ದಲ್ಲದೇ, ಅವರ ವಿರುದ್ಧ ಕ್ರಮ ಕೈಗೊಂಡು ದಂಧೆಕೋರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

2024ರ ಜನವರಿಂದ ಇಲ್ಲಿಯವರೆಗೆ ಚಾಮರಾಜನಗರ ತಾಲೂಕಿನ ಕೆಲ್ಲಂಬಳ್ಳಿ, ಜ್ಯೋತಿಗೌಡನಪುರ, ಹರದನಹಳ್ಳಿ, ಶಿವಪುರ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಕೆಲ್ಲಂಬಳ್ಳಿ ಗ್ರಾಮದ ಸರ್ವೇ ನಂ.135/1 ಮತ್ತು 134/1ರ ಜಮೀನಿನಲ್ಲಿ ಜೆಸಿಬಿ ಸಹಾಯದಿಂದ ಟಿಪ್ಪರ್‌ಗಳನ್ನು ಬಳಸಿಕೊಂಡು ಕೆಂಪು ಮಣ್ಣನ್ನು ತುಂಬುತ್ತಿರುವ ವೇಳೆ ದಾಳಿ ನಡೆಸಿ ಮೂರು ಟಿಪ್ಪರ್ ಮತ್ತು ಜೆಸಿಬಿಯನ್ನು ವಶಕ್ಕೆ ಪಡೆಯಲಾಗಿದೆ.

ಅಲ್ಲದೇ ಕೆಲ್ಲಂಬಳ್ಳಿಯಲ್ಲಿ ಕೆಐಎಡಿಬಿ ವಶದಲ್ಲಿರುವ ಜಾಗದಲ್ಲಿ ಅಕ್ರಮವಾಗಿ ಮಣ್ಣು ಲೂಟಿ ಮಾಡಲಾಗುತ್ತಿತ್ತು. ಈ ವಿಷಯ ತಿಳಿದು ದಾಳಿ ನಡೆಸಿ ಒಂದು ಹಿಟಾಚಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಶಿವಪುರ ಗ್ರಾಮದಲ್ಲಿ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ಒಂದು ಟಿಪ್ಪರ್, ಮೂಡ್ಲಹೊಸಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ಒಂದು ಟಿಪ್ಪರ್ ಅನ್ನು ವಶಕ್ಕೆ ಪಡೆಯಲಾಗಿತ್ತು.

ಹಣ ಸಂಪಾದನೆ ಮಾಡುವ ಮಾರ್ಗ: ಮಣ್ಣು ಕದಿಯುತ್ತಿರುವವರಿಗೆ ಸರಕಾರಿ ಜಮೀನುಗಳೇ ಟಾರ್ಗೆಟ್ ಆಗಿದೆ. ಖಾಸಗಿ ಜಮೀನುಗಳಲ್ಲಿ ಮಣ್ಣು ಕದ್ದರೆ ಸಿಕ್ಕಿ ಬೀಳುತ್ತಾರೆ. ಆದರೆ ಸರಕಾರಿ ಜಮೀನುಗಳಲ್ಲಿ ಮಣ್ಣು ಲೂಟಿ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿರುವ ದಂಧೆಕೋರರು ನಿರ್ಭಯವಾಗಿ ಮಣ್ಣು ಕದಿಯುತ್ತಿದ್ದಾರೆ. ಕದ್ದ ಮಣ್ಣನ್ನು ಇಟ್ಟಿಗೆ ಕಾರ್ಖಾನೆ ಮತ್ತು ವಿವಿಧ ಕೆಲಸಗಳಿಗೆ ಸಾಗಣೆ ಮಾಡಿ ಹಣ ಸಂಪಾದನೆ ಮಾಡುವ ಮಾರ್ಗ ಕಂಡುಕೊಂಡಿದ್ದಾರೆ.

ಜ್ಯೋತಿಗೌಡನಪುರದಲ್ಲಿ ನಡೆಯುತ್ತಿದೆ ದಂಧೆ: ಚಾಮರಾಜನಗರ ತಾಲೂಕಿನ ಚಂದಕವಾಡಿ ಹೋಬಳಿಯ ಜ್ಯೋತಿ ಗೌಡನಪುರ ಗ್ರಾಮದ ಸರ್ವೇ ನಂ.185ರ ಸರಕಾರಿ ಗೋಮಾಳದಲ್ಲಿ ಅನಧಿಕೃತವಾಗಿ ಮಣ್ಣು ತೆಗೆಯುತ್ತಿದ್ದಾಗ ದಾಳಿ ಮಾಡಲಾಗಿದ್ದು, ಈ ವೇಳೆ 7 ಟ್ರ್ಯಾಕ್ಟರ್ ಮತ್ತು 1 ಜೆಸಿಬಿಯನ್ನು ವಶ ಪಡಿಸಿಕೊಳ್ಳಲಾಗಿತ್ತು. ಹರದನಹಳ್ಳಿ ಹೋಬಳಿಯ ಎಚ್.ಡಿ.ಫಾರೆಸ್ಟ್ ಸರ್ವೇ ನಂ.3ರಲ್ಲಿ ಅನಧಿಕೃತ ಕಟ್ಟಡ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ವೇಳೆ ದಾಳಿ ಮಾಡಿದಾಗ ಕಲ್ಲು ತುಂಬಿದ್ದ ಲಾರಿಯನ್ನೂ ಸೆರೆ ಹಿಡಿಯಲಾಗಿತ್ತು.

ಹಳ್ಳಿಗಳಲ್ಲಿನ ಕೆರೆಗಳಲ್ಲಿ ರೈತರಿಗೆ ಮಣ್ಣು ತೆಗೆಯಲು ಅವಕಾಶವಿದೆ. ಈ ಅವಕಾಶವನ್ನೇ ಮಣ್ಣು ಲೂಟಿಕೋರರು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ನಿಜವಾದ ರೈತರು ಹಳ್ಳ ಬಿದ್ದ ಜಮೀನುಗಳಲ್ಲಿ ನಡುಬಗ್ಗಿಸಿ ಕೃಷಿ ಮಾಡುತ್ತಿದ್ದಾರೆ. ಆದರೆ ರೈತರ ಹೆಸರನ್ನು ಹೇಳಿಕೊಂಡು ಮಣ್ಣು ತೆಗೆಯುತ್ತಿರುವವರು ಆ ಮಣ್ಣನ್ನು ತಮ್ಮ ಜಮೀನಿಗೆ ಹಾಕಿಕೊಳ್ಳುತ್ತೇನೆ ಎಂದು ಹೇಳಿ ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಪ್ರಾಕೃತಿಕ ಸಂಪತ್ತು ಲೂಟಿಯಾಗುತ್ತಿರುವಲ್ಲಿಗೆ ದಾಳಿ ಮಾಡಿ ಕಡಿವಾಣ ಹಾಕುತ್ತಿದ್ದೇವೆ. ಇಂತಹ ಪ್ರಕರಣಗಳನ್ನು ನಾವು ಸಹಿಸುವುದಿಲ್ಲ. ಒತ್ತಡಕ್ಕೆ ಮಣಿಯುವುದೂ ಇಲ್ಲ. ಹಾಗಾಗಿ ಅಕ್ರಮ ಎಂದು ಕಂಡುಬರುವುದರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ.

ಬಸವರಾಜು - ತಹಶೀಲ್ದಾರ್, ಚಾಮರಾಜನಗರ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಾ.ಅಶ್ವಥ್ ಕುಮಾರ್

contributor

Similar News