ಜೀತ ಮಾಡುತ್ತಲೇ ಹಾಡಿಕೆಗೆ ಒಲಿದ ಇಮಾಮ್ ಸಾಬ್ ವಲ್ಲೆಪ್ಪನವರ್
ನೀವು ಅಂತರ್ಜಾಲದಲ್ಲಿ ಯೂಟ್ಯೂಬ್ ತೆರೆದು ಇಮಾಮ್ ಸಾಬ್ ವಲ್ಲೆಪ್ಪನವರ್ ಎಂದು ಟೈಪಿಸಿದರೆ ನೂರಾರು ಹಾಡಿನ ಲಿಂಕುಗಳು ತೆರೆದುಕೊಳ್ಳುತ್ತವೆ. ಕುತೂಹಲಕ್ಕೆ ಒಂದು ಹಾಡನ್ನು ಎಷ್ಟುಜನ ಕೇಳಿದ್ದಾರೆ ಎಂದು ಗಮನಿಸಿದರೆ, ಲಕ್ಷಗಟ್ಟಲೆ ಕೇಳುವಿಕೆಯ ಸಂಖ್ಯೆ ಕಾಣುತ್ತದೆ. ಮೇಲೆ ಉಲ್ಲೇಖಿಸಿದ ‘ಜಾತಿ ಜಾತಿ’ ಅಂತ ಪದ ಉತ್ತರಕರ್ನಾಟಕದ ರಾಷ್ಟ್ರಗೀತೆಯಂತೆ ಜನಪ್ರಿಯ. ಹೀಗೆ ಎರಡು ದಶಕದಿಂದ ಅಂತರ್ಜಾಲದಲ್ಲೂ ಸ್ಟಾರ್ ಗಿರಿ ಕಾಯ್ದುಕೊಂಡ ಇಮಾಮ್‌ಸಾಬ್ ಅವರ ಬದುಕಿನ ಪುಟಗಳು ಕುತೂಹಲಕಾರಿಯಾಗಿವೆ.
ಮುಟ್ಟೀನ ಒಲೆಯಲಿ ಹುಟ್ಟೂದು ಜಗವೆಲ್ಲಾ
ಮಟ್ಟಬ್ಯಾಡ ಅನ್ನಾವನು ಎಲ್ಲಿ ಹುಟ್ಯಾನಾ
ಜಾತಿ ಜಾತಿ ಅಂತ ನಾವು ಜಗಳ ಮಾಡತೇವ್ರಿ ತಮ್ಮಾ
ಜಾತಿ ಒಳಗ ನೀತಿ ಮಾರ್ಗ ಮರತ ನಿಂತವ್ರೀ ॥2॥
ಸುಣ್ಣಗಾರ ಮನೆಯ ಸುಣ್ಣ ತಂದು ಮನಿ ಸಾರಿಸೇವ್ರೀ
ತಮ್ಮಾ, ವಡ್ಡರ ಮನೆಯ ಒಳ್ಳ ತಂದು ಇಂಡಿ ಅರದೇವ್ರೀ ॥2॥
ತಮ್ಮಾ, ಮತ್ತೂ ನಾವು ದೊಡ್ಡವರೆಂದು ಶೀಲ ಮಾಡೆವ್ರೀ
ಕುಂಬಾರ ಮಾಡಿದ ಗಡಿಗಿ ತಂದು ಅಡಿಗಿ ಮಾಡೇವ್ರೀ
ಬಡಿಗೇರ ಮಾಡಿದ ಕೊಮಣಿಗ್ಯಾಗ ರೊಟ್ಟಿ ಮಾಡೇವ್ರೀ ॥2॥
ತಮ್ಮಾ, ಕಮ್ಮಾರ ಮಾಡಿದ ಹೆಂಚಿನ ಮ್ಯಾಲ ರೊಟ್ಟಿ ಸುಡತೇವ್ರೀ
ಮ್ಯಾದರ ಮಾಡಿದ ಬುಟ್ಟಿಯೊಳಗ ರೊಟ್ಟಿ ಹಾಕ್ತೇವ್ರೀ ॥2॥
ತಮ್ಮಾ, ಮತ್ತೂ ನಾವು ಹೆಚ್ಚಿನವರೆಂದು ಶೀಲ ಮಾಡೇವ್ರೀ
ಪಿಂಜಾರ ಮಾಡಿದ ಗಾದಿ ಮೇಲೆ ನಿದ್ದಿ ಹೊಡಿತೀವ್ರೀ
ತಮ್ಮಾ, ಕುರುಬರು ಮನೇನ ಕಂಬಳಿ ತಂದು ಗದ್ದಿಗಿ ಮಾಡೇವ್ರೀ ॥2॥
ಗದ್ದಿಗಿ ಮ್ಯಾಲೆ ಸಿದ್ದಾರೂಢರ ಪೂಜೆ ಮಾಡೆವ್ರೀ
ಕ್ಯಲ್ಸೆರ್ ಮುಂದೆ ಡೊಗ್ಗಿ ನಾವು ತೆಲಿ ಬೊಳಿಸೇವ್ರೀ
ತಮ್ಮಾ, ಚಿಮಿಗ್ಯಾರ ಹೊಲದ ಅಂಗಿ ತೊಟ್ಟು ದೇವರಿಗೋಗ್ತೇವ್ರೀ..
ಹೂಗಾರ ಮನೆಯ ಹೂವ ತಂದು ದೇವರಿಗಿಡತೇವ್ರೀ ॥2॥
ತಮ್ಮಾ, ಮತ್ತೂ ನಾವು ಹೆಚ್ಚಿನವರೆಂದು ಶೀಲ ಮಾಡೇವ್ರೀ
ಸಮಗಾರ ಮಾಡಿದ ಚಪ್ಪಲ್ ತೊಟ್ಟು ಲಗ್ಗನ್ ಆಗೇವ್ರೀ
ಮುತ್ತಗಾರ ಮಾಡಿದ ಮೂಗಬಟ್ಟು ತಂದು ಹೆಂಡರಿಗಿಟ್ಟಿವ್ರೀ ॥2॥
ಬಳಿಗಾರ ಮಾಡಿದ ಬಳಿ ತಂದು ಕೈಯಾಗ್ ಇಡತೇವ್ರೀ
ತಮ್ಮಾ, ಮತ್ತೂ ನಾವು ಹೆಚ್ಚಿನವರೆಂದು ಶೀಲ ಮಾಡೇವ್ರೀ
ಮುಲ್ಲಾಸಾಬರ ಕರದು ಬ್ಯಾಟಿ ಚೂರಿ ಹಾಕೇವ್ರೀ
ತಮ್ಮಾ, ಚೂರಿಹಾಕಿದ ಬ್ಯಾಟಿ ನಾವ ಊಟ ಮಾಡೇವ್ರೀ
ತಮ್ಮಾ, ಮತ್ತೂ ನಾವು ಹೆಚ್ಚಿನವರೆಂದು ಶೀಲ ಮಾಡೇವ್ರೀ
ಕುಂಚಿಕೊರವರು ಮಾಡಿದ ನಲುವು ಅಡಿಗೆ ಮನಿಯಾಗರೀ
ತಮ್ಮಾ, ನಲಿವಿನ ಮೇಲೆ ಹಾಲಿನ ಗಡಗಿ ಇಡಾಕತ್ತೇವ್ರೀ ॥2॥
ತಮ್ಮಾ, ಹೆಪ್ಪ ಹಾಕಿ ಬೆಣ್ಣಿ ಕಡದು ತೆಗಿಯಾಕತ್ತೇವ್ರೀ
ತಮ್ಮಾ, ಬೆಣ್ಣಿ ಕಾಯಿಸಿ ಎಣ್ಣಿ ಬತ್ತಿ ಹಚ್ಚಾಕಚ್ಚೀವ್ರೀ ॥2॥
ತಮ್ಮಾ ಜಾತಿ ಜಾತಿ ಅಂತ ನಾವು ಜಗಳ ಮಾಡತೇವ್ರಿ
ತಮ್ಮಾ ಜಾತಿ ಒಳಗ ನೀತಿ ಮಾರ್ಗ ಮರತ ನಿಂತೇವ್ರೀ
ಈ ಪದ ಯೂಟ್ಯೂಬ್‌ನಲ್ಲಿ ತುಂಬಾ ಜನಪ್ರಿಯ. ಕೋಟ್ಯಂತರ ಜನ ಕೇಳಿದ್ದಾರೆ, ಅನುಕರಿಸಿ ಹಾಡಿದ್ದಾರೆ. ಕವಿಯು ಮನುಷ್ಯನ ಮೂಲಭೂತ ಅಗತ್ಯಗಳ ಪೂರೈಕೆಯಲ್ಲಿ ಎಷ್ಟು ಸಮುದಾಯಗಳ ಶ್ರಮ ಬೆರೆತಿದೆ ಎನ್ನುವ ಸೋಷಿಯಲ್ ಇಂಜಿನಿಯರಿಂಗ್ ಬಗ್ಗೆ ಮಾತನಾಡುತ್ತಿದ್ದಾರೆ. ದಿನನಿತ್ಯದ ಬದುಕಿನೊಳಗಿಂದ ಹೆಕ್ಕಿ ಪದ ಕಟ್ಟಿದ್ದಾರೆ. ಬೆಳಗ್ಗೆ ರೊಟ್ಟಿ ಮಾಡುವುದರಿಂದ ಮೊದಲುಗೊಂಡು ಮಲಗುವ ತನಕ ಮನುಷ್ಯ ಬಳಸುವ ವಸ್ತುಸಂಗತಿಗಳನ್ನು ಬೇರೆ ಬೇರೆ ಸಮುದಾಯಗಳು ತಯಾರಿಸುತ್ತವೆ. ಹೀಗೆ ಕುಲಕಸುಬಿನ ಸಮುದಾಯಗಳನ್ನು ಕೆಳಜಾತಿಗಳೆಂದು ಹೀಗಳೆದು ದೊಡ್ಡ ಜಾತಿಯವರೆಂದು ಬೀಗುವಿಕೆಯನ್ನು ಟೀಕಿಸುತ್ತಾರೆ. ಈ ಕಟು ಸತ್ಯವನ್ನು ಹಾಡಿದವರು ಹುಬ್ಬಳ್ಳಿಯ ಇಮಾಮ್ ಸಾಬ್ ಮುಹಮ್ಮದ್ ಸಾಬ್ ವಲ್ಲೆಪ್ಪನವರ್.
ನೀವು ಅಂತರ್ಜಾಲದಲ್ಲಿ ಯೂಟ್ಯೂಬ್ ತೆರೆದು ಇಮಾಮ್ ಸಾಬ್ ವಲ್ಲೆಪ್ಪನವರ್ ಎಂದು ಟೈಪಿಸಿದರೆ ನೂರಾರು ಹಾಡಿನ ಲಿಂಕುಗಳು ತೆರೆದುಕೊಳ್ಳುತ್ತವೆ. ಕುತೂಹಲಕ್ಕೆ ಒಂದು ಹಾಡನ್ನು ಎಷ್ಟುಜನ ಕೇಳಿದ್ದಾರೆ ಎಂದು ಗಮನಿಸಿದರೆ, ಲಕ್ಷಗಟ್ಟಲೆ ಕೇಳುವಿಕೆಯ ಸಂಖ್ಯೆ ಕಾಣುತ್ತದೆ. ಮೇಲೆ ಉಲ್ಲೇಖಿಸಿದ ‘ಜಾತಿ ಜಾತಿ’ ಅಂತ ಪದ ಉತ್ತರಕರ್ನಾಟಕದ ರಾಷ್ಟ್ರಗೀತೆಯಂತೆ ಜನಪ್ರಿಯ. ಹೀಗೆ ಎರಡು ದಶಕದಿಂದ ಅಂತರ್ಜಾಲದಲ್ಲೂ ಸ್ಟಾರ್ ಗಿರಿ ಕಾಯ್ದುಕೊಂಡ ಇಮಾಮ್‌ಸಾಬ್ ಅವರ ಬದುಕಿನ ಪುಟಗಳು ಕುತೂಹಲಕಾರಿಯಾಗಿವೆ.
ನವಲಗುಂದ ತಾಲೂಕಿನ ನಾಗನೂರು ಎನ್ನುವ ಪುಟ್ಟ ಊರಿನಲ್ಲಿ ಸೈದಮ್ಮ ಮತ್ತು ಮುಹಮ್ಮದ್ ಸಾಬ್‌ರ ಮಗನಾಗಿ ಇಮಾಮ್ ಹುಟ್ಟುತ್ತಾರೆ. ಮಗುವಾಗಿದ್ದಾಗ ಜನಪದ ಹಾಡಿಕೆಯೇ ಇಮಾಮರಿಗೆ ಲಾಲಿ ಪದಗಳಾಗಿದ್ದವು. ಅವ್ವ ಸೈದಮ್ಮ ಅಡುಗೋಡಿ ಅವರು ತತ್ವಪದಗಳನ್ನು ಹಾಡುತ್ತಿದ್ದರು. ತಂದೆಯ ತಂದೆ ಮುತ್ತಜ್ಜ ದೌಲ್‌ಸಾಬರೂ ಹಾಡುತ್ತಿದ್ದರಂತೆ. ಹಾಗಾಗಿ ಇಮಾಮರು ಹಾಡಿಕೆ ಪರಂಪರೆಯ ಮನೆಯಲ್ಲಿ ಹುಟ್ಟಿ ಬೆಳೆಯುತ್ತಾರೆ. ಮನೆಯಲ್ಲಿ ಕಲೆಯೇನೋ ಶ್ರೀಮಂತವಾಗಿತ್ತು, ಆದರೆ ಮಕ್ಕಳನ್ನು ಸಾಕಲು ಆಗದ ಕಿತ್ತು ತಿನ್ನುವ ಬಡತನ. ಹಾಗಾಗಿ ಸೈದಮ್ಮ ಇಮಾಮರನ್ನು ಶಾಲೆಗೆ ಸೇರಿಸಲಾಗದೆ ನರಗುಂದದಲ್ಲಿ ಹಾಲುಮತದ ಸಿಂಗಾಡೆರ ಮನೆತನದ ಸಿದ್ಲಿಂಗಪ್ಪ ಸಿಂಗಾಡಿ ಅವರ ಮನೆಯಲ್ಲಿ ಕುರಿ ಕಾಯಲು ಜೀತಕ್ಕಿಡುತ್ತಾರೆ. ಮುಂದೆ ವೆಂಕಪ್ಪ ಕರ‌್ಲಪ್ಪನವರ ಮೊದಲಾದ ಮೂರು ಮನೆತನಗಳಲ್ಲಿ ಇಮಾಮರು ತನ್ನ ತಮ್ಮ ದೌಲಸಾಬರೊಂದಿಗೆ ಹನ್ನೊಂದು ವರ್ಷ ಜೀತ ಮಾಡುತ್ತಾರೆ. ಮುಂದೆ ಇಮಾಮರಿಗೆ ಕುರಿ ಕಾಯುವ ಬಯಲ ಆಲಯವೇ ಹಾಡಿಕೆ ಕಲಿಯುವ ಶಾಲೆಯೂ ಆಯಿತು. ನರಗುಂದದ ಸುತ್ತಮುತ್ತಣ ಹಳ್ಳಿಗಳ ರಾತ್ರಿಗಳಲ್ಲಿ ರಂಗೇರುತ್ತಿದ್ದ ಡೊಳ್ಳಿನ ಹಾಡಿಕೆಯ ಸೆಳೆತಕ್ಕೆ ಇಮಾಮರು ಒಳಗಾಗುತ್ತಾರೆ. ಅಂಬರಗೊಳ್ಳದ ನಿಂಗಪ್ಪ ಪೂಜಾರ ಮೊದಲಗುರುವಾಗಿ ಹಾಡಿಕೆಯ ಲಯಗಾರಿಕೆಯನ್ನು ಕಲಿಸುತ್ತಾರೆ. ಇಮಾಮರ ಅಕ್ಕ ದಾವುಲಬಿ ಕೂಡ ಸೋಬಾನೆ ಪದಗಳನ್ನು ಹಾಡುತ್ತಾರೆ.
ಜೀತದಿಂದ ಮುಕ್ತಿ ಪಡೆದು ಧಾರವಾಡದಲ್ಲಿ ಆರಂಭವಾದ ಟೈವಾಕ್ ಕಂಪೆನಿಯಲ್ಲಿ ಕಸ ಹೊಡೆಯುವ ಕೆಲಸಕ್ಕೆ ಸೇರಿದರು. ಇಲ್ಲಿ ಕೆಲಸ ಮಾಡುತ್ತಲೇ ನಾಲ್ಕು ಅಕ್ಷರ ಕಲಿತರು. ಮುಂದೆ ಟೈಲರಿಂಗ್ ಕಲಿತು ಸ್ವಂತ ದುಡಿಮೆಗೆ ಅಣಿಯಾದರು. ಈ ಹೊತ್ತಿಗೆ ಬಾಲ್ಯದಿಂದಲೂ ತನ್ನೂರಿನ ಶರಣ ಆತ್ಮಾನಂದರ ಒಡನಾಟಕ್ಕೆ ಬಂದರು. ಇವರ ಪ್ರವಚನ ಕೇಳುತ್ತಾ ತನ್ನ ಹಾಡಿಕೆಗೆ ಅದ್ಯಾತ್ಮದ ಸ್ಪರ್ಶ ಪಡೆದರು. ನಾಗನೂರಲ್ಲಿಯೇ ಸೋದರ ಮಾವನ ಮಗಳಾದ ಅಲೀನಳನ್ನು ಮದುವೆಯಾಗಿ ಹಾಡಿಕೆಯನ್ನು ನಿಧಾನಕ್ಕೆ ಬದುಕಿನ ಭಾಗವಾಗಿಸಿಕೊಳ್ಳುತ್ತಾರೆ. ಹೀಗಾಗಿ ತಮ್ಮದೇ ಒಂದು ಭಜನಾ ಸಂಘವನ್ನು ಕಟ್ಟಿಕೊಳ್ಳುತ್ತಾರೆ. ಇದಕ್ಕೆ ‘ಆತ್ಮಾನಂದ ಜಾನಪದ ಕಲಾವಿದರ ಸಂಘ’ ಎಂದು ಹೆಸರಿಡುತ್ತಾರೆ. ಹೀಗೆ ಹಾಡಿಕೆಯ ಪಯಣವನ್ನು ಆರಂಭವಾಗುತ್ತದೆ.
ಈ ಹಾಡಿಕೆ ಪಯಣದಲ್ಲಿ ಮಹಾಲಿಂಗಪುರದ ಇಬ್ರಾಹೀಂ ಸುತಾರರ ಭೇಟಿ ಇಮಾಮ್ ಸಾಹೇಬರ ಹಾಡಿಕೆಯ ಮತ್ತೊಂದು ಜಿಗಿತಕ್ಕೆ ಕಾರಣವಾಗುತ್ತದೆ. ಇಮಾಮರ ಅಧ್ಯಾತ್ಮ ಲೋಕದ ಪರಿಚಯ ಮತ್ತಷ್ಟು ಆಳವಾಗುತ್ತದೆ. ಸುತಾರರ ಮಾರ್ಗದರ್ಶನ ಮತ್ತು ಪ್ರಭಾವ ಇಮಾಮರನ್ನು ಆಳವಾಗಿ ತಟ್ಟುತ್ತದೆ. ಹೀಗಾಗಿ ಸುತಾರರ ಹಾಡಿಕೆ ಮತ್ತು ಸಂವಾದದ ಮಾದರಿಯನ್ನು ಅನುಕರಿಸುತ್ತಾರೆ. ಒಂದೇ ವೇದಿಕೆಯಲ್ಲಿ ಹಾಡುವುದು, ಸುತಾರರ ಮನೆಯಲ್ಲೇ ತಿಂಗಳುಗಟ್ಟಲೆ ಉಳಿದು ಅವರ ಮಾತುಗಳನ್ನು ಆಲಿಸುವುದು ಇಮಾಮರ ಹಾಡಿಕೆಯ ದೃಷ್ಟಿಕೋನವನ್ನು ಬದಲಿಸುತ್ತದೆ. ಈತನಕ ನಿರ್ದಿಷ್ಟ ಗೊತ್ತುಗುರಿ ಇಲ್ಲದೆ ಹಾಡುತ್ತಿದ್ದ ಇಮಾಮರು ಸಮಾಜದ ಧಾರ್ಮಿಕ ಸೌಹಾರ್ದಕ್ಕಾಗಿ, ಜಾತಿ ತಾರತಮ್ಯ ಮೀರುವುದಕ್ಕಾಗಿ ಹಾಡತೊಡಗುತ್ತಾರೆ. ಪರಿಣಾಮವಾಗಿ ‘ಇಬ್ರಾಹೀಂ ಸುತಾರ ಸಾಮರಸ್ಯ ಸಂಸ್ಕೃತಿ ಸಂಸ್ಥೆ’ ಕಟ್ಟುತ್ತಾರೆ.
ಇದೀಗ ಉತ್ತರಕರ್ನಾಟಕದ ಸಾವಿರಾರು ಹಳ್ಳಿಗಳಿಗೆ ಪ್ರತಿವರ್ಷವೂ ಹಾಡಿಕೆಗಾಗಿ ತಂಡಕಟ್ಟಿಕೊಂಡು ಅಲೆಯುತ್ತಾರೆ. ಯೂಟ್ಯೂಬ್‌ನ ಹಲವು ಚಾನೆಲ್‌ಗಳಲ್ಲಿ ದಿನವೂ ಸಾವಿರಾರು ಜನರು ಇಮಾಮರ ಪದಗಳನ್ನು ಕೇಳುತ್ತಾರೆ. ಡೊಳ್ಳಿನ ಪದಗಳ ಮೂಲಕ ಹಾಡಿಕೆ ಆರಂಭಿಸಿ ರಿವಾಯ್ತ್ ಪದ, ಹಂತಿ ಪದ, ಸೋಬಾನೆ ಪದವನ್ನೂ ಹಾಡುತ್ತಾರೆ. ಇದೀಗ ಇಮಾಮರ ಹಾಡಿಕೆ ತಂಡದಲ್ಲಿ ಡೊಳ್ಳು ಬಾರಿಸುವ ಕುರುಬ ಸಮುದಾಯದ ದ್ಯಾಮಪ್ಪ ಕರಿಯಪ್ಪ ಪೂಜಾರ, ಕಂಜರ, ತಾಳ ಹಾಕುವ ವಕ್ಕಲಿಗರ ನಿಂಗಪ್ಪ ದೊಡ್ಡ ಪೂಜಾರ, ಇಮಾಮರ ತಮ್ಮನಾದ ದವಲಸಾಬ ವಲ್ಲೆಪ್ಪನವರ್, ಮಗ ಮುಹಮ್ಮದ್ ಗೌಸ್, ಅಳಿಯ ಹುಸೇನಸಾಬ್ ಅಂಗಡಿ ತಂಡದಲ್ಲಿದ್ದಾರೆ.
ಇಮಾಮರು ಶಿಶುನಾಳ ಶರೀಫರ ಸೌಹಾದರ್ದ ಪದಗಳನ್ನೂ ಒಳಗೊಂಡಂತೆ ತತ್ವಪದ, ವಚನ, ದಾಸರ ಪದಗಳನ್ನೂ ಪ್ರಾಸಂಗಿಕವಾಗಿ ಹಾಡುತ್ತಾರೆ. ಇಮಾಮರ ಹಾಡಿಕೆಯ ಶಕ್ತಿಯೆಂದರೆ ಬದಲಾದ ಕಾಲಮಾನಕ್ಕೆ ತಕ್ಕನಾದ ಪದ ಕಟ್ಟಿ ಅವುಗಳನ್ನು ಜನಪದವನ್ನಾಗಿಸುವುದು. ಹೀಗಾಗಿ ಜಾತಿಯ ತಾರತಮ್ಯದ ಬಗ್ಗೆ, ಕನ್ನಡ ನಾಡು ನುಡಿ, ರೈತರ ಸಮಸ್ಯೆ, ಪರಿಸರ, ದಿನನಿತ್ಯದ ಜನರ ಕಷ್ಟಸುಖಗಳ ಬಗ್ಗೆ ಇಮಾಮರು ಪದಕಟ್ಟಿದ್ದಾರೆ. ಈಚೆಗೆ ಐದಾರು ವರ್ಷದಿಂದ ಸಂವಿಧಾನದ ಬಗ್ಗೆ ಪದ ಕಟ್ಟಿ ಹಾಡುತ್ತಿದ್ದಾರೆ. ಬಿ.ಕೆ. ಬಸವರಾಜ ಸೋದರ ಅವರು ಪದಗಳ ಲಿಪಿಕಾರರಾಗಿದ್ದಾರೆ. ಇಮಾಮರು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದಾರೆ. ‘‘ಹಾಡಿಕೆಲಿ ಭಯಂಕರ ಬ್ಯುಜಿ ಅಲ್ರೀ ಹಂಗಾಗಿ ಯುನಿವರ್ಸಿಟಿಗೆ ಹೋಗೋಕಾಗ್ತಿಲ್ಲ’’ ಎನ್ನುತ್ತಾರೆ. ಐದು ಮಕ್ಕಳಾದ ನಂತರ ಸಂಗಾತಿ ಅಲೀನ ಅಗಲುತ್ತಾರೆ. ನಂತರ ಸಂಸಾರ ತೂಗಿಸಲು ಶಾಹೀನ ಅವರನ್ನು ಮದುವೆಯಾಗುತ್ತಾರೆ. ಒಟ್ಟು ನಾಲ್ಕುಜನ ಹೆಣ್ಣುಮಕ್ಕಳು, ಇಬ್ಬರು ಗಂಡು ಮಕ್ಕಳ ತುಂಬು ಸಂಸಾರವನ್ನು ಹಾಡಿಕೆಯ ಮೂಲಕವೇ ಸಲಹಿದ್ದಾರೆ.
ಹುಬ್ಬಳ್ಳಿಯ ಮಂಟೂರು ರೋಡ್ ಬ್ಯಾಳಿ ಪ್ಲಾಟಲ್ಲಿ ಪುಟ್ಟ ಮನೆಯಿರುವ ಇಮಾಮರು ಆಂಧ್ರ, ತಮಿಳುನಾಡು, ಅಸ್ಸಾಂ ಮೊದಲಾದ ರಾಜ್ಯಗಳ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಹಾಡಿದ್ದಾರೆ. ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಕೃಷಿಮೇಳದಲ್ಲಿ ಕಳೆದ 21 ವರ್ಷಗಳಿಂದ ರೈತರ ಬಗ್ಗೆ ಸಾವಯವ ಕೃಷಿಯ ಬಗ್ಗೆ ಪದ ಕಟ್ಟಿ ಹಾಡಿದ್ದಾರೆ. ರೇಡಿಯೊ ಮತ್ತು ದೂರದರ್ಶನದ ಮೂಲಕ ಇಮಾಮರು ಲಕ್ಷಾಂತರ ಜನರನ್ನು ತಲುಪಿದ್ದಾರೆ. ಕೃಷಿ, ಪರಿಸರ, ಆರೋಗ್ಯ, ಶಿಕ್ಷಣದ ಬಗ್ಗೆ ಇಮಾಮರು ಪದ ಕಟ್ಟಿದ್ದಾರೆ. ಜಾನಪದ ಅಕಾಡಮಿ, ಜಾನಪದ ಲೋಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮೂಲತಃ ಪಿಂಜಾರ ಸಮುದಾಯದ ಬಟ್ಟೆ ಹೊಲಿಯುವ ಟೈಲರಿಂಗ್ ಕಾಯಕದ ಇಮಾಮರು ಸಮಾಜವನ್ನು ಹರಿದ ಧರ್ಮ ಮತ್ತು ಜಾತಿಯ ಭೇದಗಳನ್ನು ಜೋಡಿಸಿ ಹಾಡಿಕೆಯಲ್ಲಿ ಹೊಲಿಯುವ ಪ್ರಯತ್ನ ಮಾಡುತ್ತಿದ್ದಾರೆ. ಈಗಲೂ ಪಾದರಸದಂತಿರುವ ಎಪ್ಪತ್ತರ ಹರೆಯದ ಇಮಾಮ್ ಸಾಬ್ ವಲ್ಲೆಪ್ಪನವರಿಗೆ ಕರ್ನಾಟಕ ಸರಕಾರ ಈ ಬಾರಿಯಾದರೂ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕಿದೆ. ಕನ್ನಡ ವಿಶ್ವವಿದ್ಯಾನಿಲಯ ನೀಡುವ ನಾಡೋಜ ಪ್ರಶಸ್ತಿಗೂ ಅರ್ಹರಾಗಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯವು ವಲ್ಲೆಪ್ಪನವರಿಗೆ ಗೌರವ ಡಾಕ್ಟರೇಟ್ ನೀಡಿ ತನ್ನ ಗೌರವವನ್ನು ಹೆಚ್ಚಿಸಿಕೊಳ್ಳಬೇಕಿದೆ. ಇಮಾಮ್ ಸಾಹೇಬರು ಸದಾ ಹೆಗಲಿಗೆ ಹಳದಿ, ಕೆಂಪು ಮತ್ತು ಹಸಿರು ಬಣ್ಣದ ಶಲ್ಯೆಗಳನ್ನು ಹಾಕುತ್ತಾರೆ. ಈ ಮೂಲಕ ಕನ್ನಡಾಭಿಮಾನವೆಂದರೆ ಅದು ರೈತಪರ ಕಾಳಜಿ ಎನ್ನುವುದನ್ನು ಸಾಂಕೇತಿಸುವಂತೆ ಕಾಣುತ್ತಿದೆ.