ಒಳ ಮೀಸಲಾತಿ ಜಾರಿ: ಯಾಕಿಷ್ಟು ವಿಳಂಬ?

ಎಡಗೈ ಮತ್ತು ಬಲಗೈ ಸಮುದಾಯದವರು ಮುಖಾಮುಖಿಯಾಗಿ ಇರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ರೀತಿಯಲ್ಲಿ ಚರ್ಚಿಸುವುದು ಅಗತ್ಯ. ಅಷ್ಟೇ ಅಲ್ಲ, ಸರಕಾರದೊಡನೆ ಕೈಜೋಡಿಸಿ ಈ ದಿಸೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸರಕಾರವನ್ನು ಸಂಭಾಳಿಸಬೇಕು ಮತ್ತು ಯಾವುದೇ ತೊಡಕಿಲ್ಲದೆ ಜಾರಿಗೊಳಿಸಲು ಸಹಾಯ ಹಸ್ತ ಚಾಚಬೇಕು. ಈ ಪ್ರಕ್ರಿಯೆಯಿಂದ ನಾಲ್ಕನೇ ಗುಂಪಿನಲ್ಲಿ ಬರುವ ಅನೇಕ ಅತೀ ಸಣ್ಣ ಸಮುದಾಯಗಳಿಗೆ ಕಡೆಯ ಪಕ್ಷ ಪ್ರತೀ 17 ನೇಮಕಗಳಲ್ಲಿ 1 ಹುದ್ದೆಯಾದರೂ ಲಭ್ಯವಾಗುತ್ತದೆ.

Update: 2024-10-25 05:24 GMT

ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದಂತೆ ಒಳ ಮೀಸಲಾತಿ(ಉಪ ವರ್ಗೀಕರಣ)ಜಾರಿ ಕುರಿತು ಹೋರಾಟ ಆರಂಭವಾಗಿ ಸುಮಾರು ಐದು ದಶಕಗಳೇ ಸಂದಿವೆ. ಪಂಜಾಬ್ ರಾಜ್ಯದಲ್ಲಿ ಪ್ರಾರಂಭವಾಗಿ, ಹರ್ಯಾಣದಲ್ಲೂ ಅದರ ಕಾವು ತಾಗಿ ಅಂತಿಮವಾಗಿ ಆಂಧ್ರಪ್ರದೇಶದಲ್ಲಿ ಹೋರಾಟಗಾರ ಮಾದಿಗ ಸಮುದಾಯದ ಮಂದಕೃಷ್ಣ ಮುಖಂಡತ್ವದಲ್ಲಿ ತಾರ್ಕಿಕ ಅಂತ್ಯದ ಕಡೆ ಸಾಗುತ್ತದೆ. ಇದು ಒಳ ಮೀಸಲಾತಿ ಅನುಷ್ಠಾನದ ಸಂಕ್ಷಿಪ್ತ ಇತಿಹಾಸ.

ಆಂಧ್ರಪ್ರದೇಶದಲ್ಲಿ ಮಾದಿಗ ಸಮುದಾಯದ ಚಳವಳಿ ತೀಕ್ಷ್ಣತೆ ಪಡೆದುಕೊಂಡದ್ದನ್ನು ಅರಿತ ಅಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸರಕಾರ 1996ರಲ್ಲಿ ನ್ಯಾ.ರಾಮಚಂದ್ರ ರಾಜು ಆಯೋಗ ನೇಮಿಸುತ್ತದೆ. ಆಯೋಗ ಕೂಲಂಕಷ ಅಧ್ಯಯನ ನಡೆಸಿ ಪರಿಶಿಷ್ಟ ಜಾತಿಗಳಲ್ಲಿಯೇ ಇರುವ ಸಣ್ಣ- ಪುಟ್ಟ ಜಾತಿಗಳು ಶಿಕ್ಷಣ ಮತ್ತು ಉದ್ಯೋಗ ಪಡೆಯುವುದರಲ್ಲಿ ಐತಿಹಾಸಿಕ ಹಿನ್ನಡೆ ಅನುಭವಿಸಿವೆ ಎಂದೂ ಶಿಕ್ಷಣ ಮತ್ತು ಸರಕಾರಿ ಉದ್ಯೋಗದಲ್ಲಿ ಸಾಕಷ್ಟು ಮತ್ತು ಸಮಾನ ಪ್ರಾತಿನಿಧ್ಯಗಳಿಸಲು ಸಮರ್ಥವಾಗುವ ರೀತಿಯಲ್ಲಿ ಅವುಗಳನ್ನು 1.ಮಾದಿಗ 2.ಮಾಲ 3. ಆದಿ ಆಂಧ್ರ ಮತ್ತು 4. ರೆಲ್ಲಿ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಿ ಕ್ರಮವಾಗಿ ಶೇ. 7, 6, 1 ಮತ್ತು 1ರಷ್ಟು ಮೀಸಲಾತಿ ಕೋಟಾ ನಿರ್ದಿಷ್ಟಗೊಳಿಸಿ ವರದಿಯನ್ನು ಸರಕಾರಕ್ಕೆ 1997ರಲ್ಲಿ ಸಲ್ಲಿಸುತ್ತದೆ.

ಸದರಿ ವರದಿಯನ್ನು ಅನುಸರಿಸಿ ಆಂಧ್ರ ಸರಕಾರ ಪರಿಶಿಷ್ಟ ಜಾತಿಗಳನ್ನು ಒಳ ಮೀಸಲಾತಿಗೊಳಪಡಿಸಿ ಆದೇಶ ಹೊರಡಿಸಿತಾದರೂ, ‘ಮಾಲಾ ಮಹಾನಾಡು’ ಎಂಬ ವಿರೋಧಿ ಸಂಸ್ಥೆಯೊಂದು ಸರಕಾರದ ಸುಗ್ರೀವಾಜ್ಞೆ ಸಂವಿಧಾನದ ವಿಧಿಗಳಾದ 15 (4), 16(4),162, 246, 341(1), 46, 338(7), 335 ಮತ್ತು 213ರ ಉಲ್ಲಂಘನೆ ಎಂದು ಉಚ್ಚ ನ್ಯಾಯಾಲಯದಲ್ಲಿ ರಿಟ್ ಸಲ್ಲಿಸುತ್ತದೆ. ವಿಚಾರಣೆಗೆ ರಿಟ್ ಬಾಕಿ ಇರುವಾಗಲೇ ಸರಕಾರ ಕಾಯ್ದೆಯೊಂದನ್ನೂ ಹೊರಡಿಸುತ್ತದೆ. ಉಚ್ಚ ನ್ಯಾಯಾಲಯದ ಪೀಠ ಒಳ ಮೀಸಲಾತಿ ವಿರೋಧಿ ಸಂಸ್ಥೆ ಸಲ್ಲಿಸಿದ್ದ ರಿಟ್ಟನ್ನು ವಜಾಗೊಳಿಸಿ ಆದೇಶಿಸುತ್ತದೆ. ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅದೇ ಸಂಸ್ಥೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸುತ್ತದೆ.

ನ್ಯಾ. ಸಂತೋಷ್ ಹೆಗ್ಡೆ ನೇತೃತ್ವದ ಐದು ಮಂದಿ ನ್ಯಾಯಾಧೀಶರ ಸಂವಿಧಾನ ಪೀಠ ನವೆಂಬರ್, 2004ರ ತನ್ನ ತೀರ್ಪಿನಲ್ಲಿ, ಇಂದ್ರಾ ಸಹಾನಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಇತ್ತ ಕೆಲವು ಅಂಶಗಳನ್ನು ಪರಿಗಣಿಸಿ, ಪರಿಶಿಷ್ಟ ಜಾತಿಗಳನ್ನು ಒಳ ವರ್ಗೀಕರಿಸಿ ಪ್ರತ್ಯೇಕ ಮೀಸಲಾತಿ ನೀಡಲು ಅವಕಾಶವಿಲ್ಲ ಎಂದು ಆದೇಶಿಸುತ್ತದೆ. ತೀರ್ಪಿನಲ್ಲಿ ನೀಡಿರುವ ಕಾರಣ- ಪರಿಶಿಷ್ಟ ಜಾತಿಗಳು ಏಕರೂಪ(homogeneous) ಜಾತಿಗಳ ಸಮೂಹದಿಂದ ರೂಪುಗೊಂಡಿವೆ. ಆದುದರಿಂದ ಅವುಗಳನ್ನು ಯಾವುದೇ ರೀತಿಯಲ್ಲಿ ಉಪ ವರ್ಗೀಕರಣಕ್ಕೆ ಒಳಪಡಿಸಿದಲ್ಲಿ ಅದು ಸಂವಿಧಾನದ ವಿಧಿ 14ರ ಉಲ್ಲಂಘನೆ (ಇ.ವಿ. ಚಿನ್ನಯ್ಯ vs ಆಂಧ್ರ ಪ್ರದೇಶ, ಎಐಆರ್ 2005 ಎಸ್‌ಸಿ 162) ಎಂದಿದೆ.

ಇತ್ತ ಕರ್ನಾಟಕದಲ್ಲಿಯೂ, ನಿಧಾನ ಗತಿಯಲ್ಲಿ ಆರಂಭಗೊಂಡ ಚಳವಳಿಯು ತೀಕ್ಷ್ಣತೆ ಪಡೆದುಕೊಂಡಿತು. ಇದನ್ನು ಮನಗಂಡ ಸರಕಾರ ಗತ್ಯಂತರವಿಲ್ಲದೆ 2005ರಲ್ಲಿ ನ್ಯಾ. ಎ.ಜೆ. ಸದಾಶಿವ ಆಯೋಗವನ್ನು ರಚಿಸುತ್ತದೆ. ವಿಳಂಬಕ್ಕೆ ಕಾರಣ ಏನಾದರೂ ಇರಲಿ ಸಮೀಕ್ಷೆ ಮತ್ತು ಅಧ್ಯಯನ ಕಾರ್ಯ ಕೈಗೊಂಡು ಜೂನ್ 6, 2012ರಲ್ಲಿ ವರದಿಯನ್ನು ಸರಕಾರಕ್ಕೆ ಸಲ್ಲಿಸುತ್ತದೆ. ವರದಿ ಬಹಿರಂಗಗೊಳ್ಳದ ಕಾರಣ, ವರದಿಯಲ್ಲಿ ಏನಿದೆ ಎಂಬುದು ತಿಳಿದಿಲ್ಲ. ಅಜಮಾಸು 12 ವರ್ಷಗಳು ಕಳೆದರೂ ವರದಿಗೆ ಮುಕ್ತಿಯಂತೂ ಸಿಗಲಿಲ್ಲ. ಅಷ್ಟರಲ್ಲಿ 5 ಮಂದಿ ಮುಖ್ಯಮಂತ್ರಿಗಳು ಆಗಿ ಹೋದರು. ಸರಕಾರದ ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎಂಬ ಧೋರಣೆಯಿಂದ ವರದಿ ಅನುಷ್ಠಾನ ಸಾಧ್ಯಗೊಳ್ಳುವ ಸಂಭವ ಇಲ್ಲವೇ ಇಲ್ಲ ಎಂಬಂತಾಯಿತು. ಬಹುಶಃ ಇದಕ್ಕಿದ್ದ ಬಲವಾದ ಕಾರಣವೆಂದರೆ 2004ರ ಸರ್ವೋಚ್ಚ ನ್ಯಾಯಾಲಯದ ತೀರ್ಪು.

ಈ ಮಧ್ಯೆ ಕೇಂದ್ರ ಸರಕಾರ ಉಷಾ ಮೆಹ್ರ ಆಯೋಗ ರಚಿಸಿ ವರದಿ ಕೇಳಿತು. ಆಯೋಗ ತನ್ನ ವರದಿಯಲ್ಲಿ, ಬಹುತೇಕ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಸಮ್ಮತಿ ನೀಡುವ ಸಲುವಾಗಿ, ಸಂವಿಧಾನ ತಿದ್ದುಪಡಿಗೆ ಶಿಫಾರಸು ಮಾಡಿತು. ಶಿಫಾರಸಿನ ಅನುಸಾರ ವಿಧಿ 341ಕ್ಕೆ ತಿದ್ದುಪಡಿ ಮಾಡಿ ಉಪವಿಧಿ 3ರಲ್ಲಿ ಉಪವರ್ಗೀಕರಣಕ್ಕೆ ಅವಕಾಶ ಕಲ್ಪಿಸಬೇಕಾಗಿತ್ತು. ಆದರೆ ಕೇಂದ್ರ ಸರಕಾರ ಈ ದಿಸೆಯಲ್ಲಿ ತುರ್ತು ಕಾರ್ಯಮಗ್ನವಾಗಲಿಲ್ಲ. (ಆದರೆ ಯಾವುದೇ ಆಯೋಗದ ವರದಿಯಿಲ್ಲದೆ ಕೇವಲ ಎರಡು ದಿನಗಳಲ್ಲಿ ವಿಧಿ 46ರನ್ನು ಅನುಸರಿಸಿ 103ನೇ ತಿದ್ದುಪಡಿಯನ್ನು ಸಂವಿಧಾನಕ್ಕೆ ತಂದು, ಆರ್ಥಿಕ ದುರ್ಬಲ ವರ್ಗದವರಿಗೆ ಸಾಕಷ್ಟು ಪ್ರಾತಿನಿಧ್ಯ ಇದೆಯೇ ಅಥವಾ ಇಲ್ಲವೇ ಎಂಬುದನ್ನೂ ಪರಿಶೀಲಿಸದೆ ಮೀಸಲಾತಿ ಕೊಟ್ಟ ಧಾವಂತ ಅಲ್ಲಿರಲಿಲ್ಲ. ಆ ಮಾತು ಬೇರೆ).

ಅಷ್ಟರಲ್ಲಿ, ಕರ್ನಾಟಕ ಸರಕಾರ ಮಾದಿಗ ಸಮುದಾಯದ ಒತ್ತಡಕ್ಕೆ ತಲೆಬಾಗಿ ಮಾರ್ಚ್ 27, 2023ರ ತನ್ನ ಆದೇಶದಲ್ಲಿ, ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿಯನ್ನು ನೀಡಲು ಶಕ್ತವಾಗುವಂತೆ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ತರಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತು. ಸರಕಾರದ ಈ ಶಿಫಾರಸು ನ್ಯಾ. ಎ.ಜೆ. ಸದಾಶಿವ ವರದಿಗೆ ಅನುಗುಣವಾಗಿಲ್ಲ; ಬದಲಾಗಿ ಸಚಿವ ಸಂಪುಟದ ಉಪಸಮಿತಿ ಕೊಟ್ಟ ವರದಿ ಅನುಸರಿಸಿ, ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ ಎಂದು ಹೇಳಿಕೊಂಡಿತು. ತಕ್ಷಣಕ್ಕೆ ಕೇಂದ್ರ ಸರಕಾರವೂ ಕೂಡ ಸಂವಿಧಾನ ತಿದ್ದುಪಡಿಗೆ ಮುಂದಾಗಲಿಲ್ಲ(ಆದರೆ ಭಾಜಪ ವಕ್ತಾರರು ಹೇಳುವಂತೆ- ಕೇಂದ್ರ ಸರಕಾರ ಪಂಜಾಬ್ vs ದೇವಿಂದರ್ ಸಿಂಗ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಲಿರುವ ತೀರ್ಪಿಗಾಗಿ ಕಾಯುತ್ತಿತ್ತು ಎಂಬುದು).

ಪಂಜಾಬ್ vs ದೇವಿಂದರ್ ಸಿಂಗ್ ಪ್ರಕರಣ- ಪಂಜಾಬ್ ಸರಕಾರ ಕಾಯ್ದೆಯೊಂದನ್ನು ಜಾರಿಗೊಳಿಸಿ ಪರಿಶಿಷ್ಟ ಜಾತಿಗಳಾದ ಬಾಲ್ಮೀಕಿ ಮತ್ತು ಮಜಬೀ ಸಿಖ್ಖರಿಗೆ ಪ್ರತ್ಯೇಕ ಮೀಸಲಾತಿ ನೀಡುತ್ತದೆ. ಕಾಯ್ದೆಯನ್ನು ಪ್ರಶ್ನಿಸಲಾಗಿ ಪಂಜಾಬ್ ಉಚ್ಚ ನ್ಯಾಯಾಲಯ ಕಾಯ್ದೆಯ ಸೆಕ್ಷನ್ 4(5) ಅನ್ನು ಸಂವಿಧಾನ ಬಾಹಿರ ಎಂದು ಘೋಷಿಸುತ್ತದೆ. ಪಂಜಾಬ್ ಸರಕಾರ ಉಚ್ಚ ನ್ಯಾಯಾಲಯದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿ ಪ್ರಶ್ನಿಸುತ್ತದೆ. ಸರ್ವೋಚ್ಚ ನ್ಯಾಯಾಲಯದ ನ್ಯಾ. ಮಿಶ್ರಾ ಅವರ ನೇತೃತ್ವದ ಪಂಚ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ರಾಜ್ಯಗಳಿಗೆ ಪರಿಶಿಷ್ಟ ಜಾತಿಗಳನ್ನು ಉಪ ವರ್ಗೀಕರಿಸಿ ಮೀಸಲಾತಿ ನೀಡುವ ಅಧಿಕಾರದ ಬಗ್ಗೆ ಆಗಸ್ಟ್, 2020ರ ತನ್ನ ತೀರ್ಪಿನಲ್ಲಿ ಇ.ವಿ. ಚಿನ್ನಯ್ಯ ಪ್ರಕರಣದ ತೀರ್ಪಿನ ಪುನರ್ ಪರಿಶೀಲನೆ ಸಪ್ತ ನ್ಯಾಯಾಧೀಶರ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆಯಾಗಬೇಕು ಮತ್ತು ಇಂದ್ರಾ ಸಹಾನಿ ಪ್ರಕರಣದ ತೀರ್ಪನ್ನು ಅನುಸರಿದ್ದ ಕೆಲವು ಅಂಶಗಳನ್ನು ಪುನರ್ ಪರೀಕ್ಷೆಗೆ ಒಳಪಡಿಸಬೇಕೆಂದು ಹೇಳಿತು.

ಸಪ್ತ ನ್ಯಾಯಾಧೀಶರುಗಳ ಪೀಠ, ವಿಚಾರಣೆ ನಡೆಸಿ ಇದೇ ಆಗಸ್ಟ್ ಒಂದರಂದು ಪರಿಶಿಷ್ಟ ಜಾತಿಯ ಉಪ ವರ್ಗೀಕರಣಕ್ಕೆ ಸಂವಿಧಾನದ ಯಾವುದೇ ವಿಧಿಗಳು ಅಡ್ಡಿ ಬರುವುದಿಲ್ಲ ಎಂದು ತೀರ್ಪು ನೀಡಿರುವುದು ಸರ್ವೋಚ್ಚ ನ್ಯಾಯಾಲಯದ ಚಾರಿತ್ರಿಕ ದಾಖಲೆ.

ಸರ್ವೋಚ್ಚ ನ್ಯಾಯಾಲಯದ ಈ ತೀರ್ಪಿನಿಂದಾಗಿ ಪರಿಶಿಷ್ಟ ಜಾತಿಯ ಉಪ ವರ್ಗೀಕರಣಕ್ಕೆ ಇದ್ದ ಎಲ್ಲಾ ಅಡಚಣೆಗಳು ತಂತಾನೇ ಇಲ್ಲವಾದವು. ಈ ತೀರ್ಪು ಒಳ ಮೀಸಲಾತಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಸಮುದಾಯಗಳಿಗೆ ಹಾಲು- ಅನ್ನ ಉಂಡಷ್ಟೇ ಖುಷಿ ಕೊಟ್ಟಿತು ಎಂದು ಬೇರೆ ಹೇಳಬೇಕಿಲ್ಲ.

ರಾಜಕಾರಣಿಗಳಲ್ಲಿ ಕೆಲವರು ಮುಕ್ತ ಮನಸ್ಸಿನಿಂದ ತೀರ್ಪನ್ನು ಸ್ವಾಗತಿಸಿದರೆ ಮತ್ತೆ ಕೆಲವರು ವಿರೋಧಿಸಿದರು. ವಿರೋಧಿಸಿದ ವರಲ್ಲಿ ಪ್ರಮುಖರೆಂದರೆ ಮಾಜಿ ಮುಖ್ಯಮಂತ್ರಿ ಮಾಯಾವತಿ. ಪಕ್ಷಗಳಲ್ಲೂ ಅಷ್ಟೇ ಪರ-ವಿರೋಧ ಇರುವುದು ಕಂಡುಬಂದಿದೆ.

ತೀರ್ಪನ್ನು ಅನುಸರಿಸಿ ಹರ್ಯಾಣ ರಾಜ್ಯವು ಈಗಾಗಲೇ ಒಳ ಮೀಸಲಾತಿಯನ್ನು ಜಾರಿಗೊಳಿಸಿದೆ. ಹಾಗೆಯೇ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೂ ಕೂಡ ಅನುಷ್ಠಾನಗೊಳಿಸುವುದಾಗಿ ಆಶ್ವಾಸನೆ ಇತ್ತಿವೆ. ಕರ್ನಾಟಕ ಸರಕಾರವು ಒಳ ಮೀಸಲಾತಿ ಪರ ಮತ್ತು ವಿರೋಧಿಗಳ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದೆ; ಹಾಗೂ ಪರಿಶಿಷ್ಟ ಜಾತಿ ಮಂತ್ರಿಗಳ ಸಭೆ ಕರೆದು ಚರ್ಚಿಸಿದೆ ಕೂಡ. ಆದರೆ ಈವರೆಗೂ ಯಾವುದೇ ಖಚಿತ ನಿಲುವನ್ನು ತಳೆದಿಲ್ಲ. ಹೀಗಾಗಿ ಒಳಮೀಸಲಾತಿ ಅನುಷ್ಠಾನಕ್ಕಾಗಿ ಮುಖ್ಯವಾಗಿ ಎಡಗೈ ಸಮುದಾಯದವರು ಕರ್ನಾಟಕದ ಕೆಲವು ಪಟ್ಟಣ -ನಗರಗಳಲ್ಲಿ ಹೋರಾಟಕ್ಕಿಳಿದಿದ್ದಾರೆ.

ಕರ್ನಾಟಕದ ಪ್ರಮುಖ ಪತ್ರಿಕೆಯೊಂದರಲ್ಲಿ ಬೆಳಕು ಕಂಡ ಲೇಖನ ಒಂದರಂತೆ, ಕೆಲವು ತಾಂತ್ರಿಕ ಸಮಸ್ಯೆಗಳಿವೆ ಎಂದು ತಿಳಿದು ಬಂದಿದೆ. ಅದರಂತೆ, ಆದಿ ಕರ್ನಾಟಕ- ಆದಿ ದ್ರಾವಿಡ- ಆದಿ ಆಂಧ್ರ ಈ ನುಡಿಗಟ್ಟುಗಳು ಜಿಲ್ಲೆಯಿಂದ ಜಿಲ್ಲೆಗೆ ಎಡಗೈ ಮತ್ತು ಬಲಗೈ ಸಮುದಾಯಗಳಲ್ಲಿ ಅದಲು-ಬದಲಾಗಿವೆ. ಹೀಗಾಗಿ ಎಡಗೈ ಮತ್ತು ಬಲಗೈ ಸಮುದಾಯದ ಜನಸಂಖ್ಯೆಯನ್ನು ನಿಖರವಾಗಿ ಹೇಳಲು ಸಾಧ್ಯವಾಗುವುದಿಲ್ಲ ಎಂಬುದು ವಿರೋಧಿಗಳ ಅನಿಸಿಕೆ. ಇದನ್ನು ತಿಳಿದು ಹಿಂದಿನ ಬಸವರಾಜ ಬೊಮ್ಮಾಯಿ ಸರಕಾರ, ಅಂದಿನ ಕಾನೂನು ಸಚಿವರ ನೇತೃತ್ವದಲ್ಲಿ ಸಂಪುಟದ ಉಪಸಮಿತಿ ರಚಿಸಿತ್ತು. ಸಮಿತಿಯು ನ್ಯಾ. ಎ.ಜೆ. ಸದಾಶಿವ ವರದಿಯನ್ನು ಬದಿಗಿಟ್ಟು, ತನ್ನದೇ ಆದ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು, ಪರಿಶಿಷ್ಟ ಜಾತಿಯ 101 ಸಮುದಾಯಗಳ ಜನಸಂಖ್ಯೆಯನ್ನು ಅಂದಾಜಿಸಿ, ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿ, ಶೇ. 17ರಷ್ಟಿರುವ ಮೀಸಲಾತಿ ಕೋಟಾವನ್ನು ಹಂಚಿಕೆ ಮಾಡಿತ್ತು. ಅದರಂತೆ ಎಡಗೈ ಸಮುದಾಯಕ್ಕೆ ಶೇ. 6 ,ಬಲಗೈ ಸಮುದಾಯಕ್ಕೆ ಶೇ. 5.5, ಸ್ಪಶ್ಯ ಸಮುದಾಯಗಳಿಗೆ ಶೇ.4.5 ಮತ್ತು ಉಳಿದ ಎಲ್ಲಾ ಜಾತಿಗಳಿಗೂ ಅನ್ವಯಿಸುವಂತೆ ಶೇ.1ರಷ್ಟನ್ನು ಗೊತ್ತುಪಡಿಸಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿತು. ಈ ಬಗ್ಗೆ ಮೇಲೆ ಹೇಳಲಾಗಿದೆ. ಮೊದಲನೇ ಮೂರು ಗುಂಪುಗಳಲ್ಲಿ ಎಡಗೈ ಸಮುದಾಯವನ್ನು ಹೊರತುಪಡಿಸಿ ಉಳಿದ ಎರಡು ಗುಂಪುಗಳಲ್ಲಿ ಬರುವ ಜಾತಿಗಳು ನಿಖರವಾದ ಜನಸಂಖ್ಯೆ ಇಲ್ಲದಿರುವ ಕಾರಣ ಅವರು ಒಪ್ಪಲು ಸಿದ್ಧರಿಲ್ಲದಿರುವುದು ಅವರ ಹೇಳಿಕೆಗಳಿಂದಲೇ ತಿಳಿದು ಬರುತ್ತದೆ. ಆದರೆ ನಾಲ್ಕನೇ ಗುಂಪಿನಲ್ಲಿ ಬರುವ ಅತೀ ಸಣ್ಣ ಸಮುದಾಯಗಳು ಯಾವುದೇ ಪರ-ವಿರೋಧವನ್ನು ವ್ಯಕ್ತಪಡಿಸದೆ ಹತಾಶ ಮೌನ ಯಾತನೆ ಅನುಭವಿಸುತ್ತಿವೆ. ಅದಕ್ಕೆ ಕಾರಣ-ಈವರೆಗೂ ಸರಕಾರದ ನೇಮಕಾತಿಯಲ್ಲಿ ಯಾವುದೇ ಪ್ರಾತಿನಿಧ್ಯವನ್ನು ಪಡೆಯದೆ ಅಸಹಾಯಕತನದಿಂದ ಅಕ್ಷರಶಃ ತಬ್ಬಲಿಗಳಾಗಿವೆ. ಅವುಗಳಲ್ಲಿ ಕೆಲ ವೊಂದನ್ನು ಹೆಸರಿಸಬಹುದಾದರೆ: ಅದಿಯಾ, ಅಗೇರಾ, ಅಜಿಲಾ, ಅನಾಮುಕ್, ಬೈರ, ಬಖಡ್, ಬುಕುಡಾ, ಬಾಂದಿ, ಭಂಗಿ, ಹಲಾಲ್ ಕೋರ್, ದಕ್ಕಲ್, ಗೋಸಂಗಿ, ಜಗ್ಗಲಿ, ಕೂಸ, ಮುಕ್ರಿ, ಮುಂಡಾಳ ಮುಂತಾದ 75ಕ್ಕೂ ಹೆಚ್ಚಿವೆ. ಅವುಗಳಲ್ಲಿ ಬಹುತೇಕ ಹೆಚ್ಚಿನವು ಅಲೆಮಾರಿ - ಅರೆ ಅಲೆಮಾರಿ ಜಾತಿಗಳಾಗಿವೆ.

ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಪ್ರಾಯೋಗಿಕ(empirical) ಅಂಕಿ ಅಂಶಗಳನ್ನು ಇರಿಸಿಕೊಂಡು ಜಾತಿಗಳನ್ನು ವಿಂಗಡಿಸಬೇಕು ಎಂಬ ಷರತ್ತು ವಿಧಿಸಿ ಹೇಳಿರುವುದು ಸ್ಪಷ್ಟವಾಗಿದೆ. ಈ ದಿಸೆಯಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಹಿಂದಿನ ಬಸವರಾಜ ಬೊಮ್ಮಾಯಿ ಸರಕಾರದ ಸಚಿವ ಸಂಪುಟದ ಉಪಸಮಿತಿ ತನ್ನದೇ ಆದ ಮಾನದಂಡಗಳ ಮೂಲಕ ಅಂದಾಜಿಸಿರುವ ಜನಸಂಖ್ಯೆಯನ್ನು ಇಂದಿನ ಸರಕಾರ ಪಕ್ಷ ರಾಜಕಾರಣದ ನಿಮಿತ್ತ ಒಪ್ಪುವ ಸಂಭವವಿಲ್ಲ! ಇದನ್ನೇ ನೆಪವಾಗಿಟ್ಟುಕೊಂಡು ಕಾಲವ್ಯಯ ಮಾಡದೇ ಯಾವ ಗುಂಪಿಗೂ ಅನ್ಯಾಯವಾಗದ ರೀತಿಯಲ್ಲಿ ಪರ್ಯಾಯವಾಗಿ ಚಿಂತಿಸುವ ಅವಶ್ಯಕತೆ ಇದೆ. ಸರಕಾರ ತನ್ನ ಬಳಿಯಲ್ಲೇ ಇರಿಸಿಕೊಂಡಿರುವ 2015ರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಗಳನ್ನು ವಿಂಗಡಿಸಿ, ಪ್ರತ್ಯೇಕವಾಗಿ ಸಮೀಕ್ಷೆ ಮಾಡಿದೆ. ಪರಿಣಿತರ ಸಹಾಯದಿಂದ ಇವುಗಳ ನಡುವೆ ಇರುವ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಲೂ ಸಾಧ್ಯವಿದೆ.

ಇವೆಲ್ಲಕ್ಕೂ ಮಿಗಿಲಾಗಿ, ಎಡಗೈ ಮತ್ತು ಬಲಗೈ ಸಮುದಾಯ ದವರು ಮುಖಾಮುಖಿಯಾಗಿ ಇರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ರೀತಿಯಲ್ಲಿ ಚರ್ಚಿಸುವುದು ಅಗತ್ಯ. ಅಷ್ಟೇ ಅಲ್ಲ, ಸರಕಾರದೊಡನೆ ಕೈಜೋಡಿಸಿ ಈ ದಿಸೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸರಕಾರವನ್ನು ಸಂಭಾಳಿಸಬೇಕು ಮತ್ತು ಯಾವುದೇ ತೊಡಕಿಲ್ಲದೆ ಜಾರಿಗೊಳಿಸಲು ಸಹಾಯ ಹಸ್ತ ಚಾಚಬೇಕು. ಈ ಪ್ರಕ್ರಿಯೆಯಿಂದ ನಾಲ್ಕನೇ ಗುಂಪಿನಲ್ಲಿ ಬರುವ ಅನೇಕ ಅತೀ ಸಣ್ಣ ಸಮುದಾಯಗಳಿಗೆ ಕಡೆಯ ಪಕ್ಷ ಪ್ರತೀ 17 ನೇಮಕಗಳಲ್ಲಿ 1 ಹುದ್ದೆಯಾದರೂ ಲಭ್ಯವಾಗುತ್ತದೆ. ಒಳ ಮೀಸಲಾತಿ ನಿರ್ದಿಷ್ಟ ಅವಧಿಯಲ್ಲಿ ಅನುಷ್ಠಾನಗೊಳ್ಳದಿದ್ದಲ್ಲಿ ಈ ಹತಭಾಗ್ಯರು ನೋವು ಅಥವಾ ಯಾತನೆಯಲ್ಲೇ ಜೀವ ಸವೆದು ಹಣ್ಣಾಗಿ ಹೋಗುವರು. ಈ ನತದೃಷ್ಟರ ಬೆಂಬಲಕ್ಕೆ ಸರಕಾರವಲ್ಲದೆ ಬೇರಾರೂ ಬರಲು ಸಾಧ್ಯವಿಲ್ಲ ಎಂಬುದನ್ನು ಸರಕಾರ ಅರಿತು ಈ ಸಂದರ್ಭದಲ್ಲಿ ಅವರೊಡನೆ ಆಪದ್ಬಾಂಧವನಾಗಿ ನಿಲ್ಲಬೇಕು ಹಾಗೂ ಅನಾಥೋ ದೈವ ರಕ್ಷಕನೂ ಆಗಬೇಕು!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎನ್. ಲಿಂಗಪ್ಪ

contributor

Similar News