ಸುಮಲತಾ-ಕುಮಾರಸ್ವಾಮಿ ಹಗ್ಗಜಗ್ಗಾಟದಲ್ಲಿ ಮಂಡ್ಯ ಯಾರಿಗೆ ಒಲಿಯಲಿದೆ?
ಮಂಡ್ಯ ರಾಜಕಾರಣ ಯಾವಾಗಲೂ ಕುತೂಹಲಕಾರಿ. ಕಾಂಗ್ರೆಸ್ ನೆಲೆಯಾಗಿದ್ದ ಕ್ಷೇತ್ರವನ್ನು ಜೆಡಿಎಸ್ ಭದ್ರನೆಲೆ ಮಾಡಿಕೊಂಡ ಬಳಿಕ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದು ಇಲ್ಲಿನ ರಾಜಕಾರಣವನ್ನು ಇನ್ನೂ ಕುತೂಹಲಕಾರಿಯಾಗಿಸಿದೆ. ಈ ಬಾರಿ ಮತ್ತೆ ಸುಮಲತಾ ಸ್ಪರ್ಧಿಸುತ್ತಾರೆಯೇ ಅಥವಾ ಅವರು ಕಾಂಗ್ರೆಸ್ ಸೇರಲಿದ್ದಾರೆಯೇ ಎಂಬ ಪ್ರಶ್ನೆಗಳ ನಡುವೆಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ತಯಾರಿ ನಡೆಸಿವೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ತಾನೇ ಗೆಲ್ಲುವ ವಿಶ್ವಾಸದಲ್ಲಿದೆ.
ಸರಣಿ- 21
ಮಂಡ್ಯ ಲೋಕಸಭಾ ಕ್ಷೇತ್ರದ
ಪ್ರಾಥಮಿಕ ಮಾಹಿತಿಗಳು
ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಾಕ್ಷರತೆ ಪ್ರಮಾಣ ಶೇ.63.89. ಈ ಕ್ಷೇತ್ರ ವ್ಯಾಪ್ತಿಯಲ್ಲಿನ ವಿಧಾನಸಭೆ ಕ್ಷೇತ್ರಗಳು 8. ಅವೆಂದರೆ, ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೃಷ್ಣರಾಜಪೇಟೆ ಹಾಗೂ ಕೃಷ್ಣರಾಜನಗರ. 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು, ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ಹಾಗೂ ಒಂದರಲ್ಲಿ ಜೆಡಿಎಸ್ ಶಾಸಕರಿದ್ದಾರೆ.
ಈ ಕ್ಷೇತ್ರದ ಒಟ್ಟು ಮತದಾರರು -17,51,586
ಪುರುಷರು -8,67,113
ಮಹಿಳೆಯರು -8,84,300
ಇತರರು -173
ಇದು ಒಕ್ಕಲಿಗ ಮತದಾರರ ಬಾಹುಳ್ಯದ ಕ್ಷೇತ್ರ.
ಈ ಹಿಂದಿನ ಚುನಾವಣೆಗಳ ಫಲಿತಾಂಶ
2014ರಲ್ಲಿ ಜೆಡಿಎಸ್‌ನ ಸಿ.ಎಸ್. ಪುಟ್ಟರಾಜು ಗೆಲುವು ಸಾಧಿಸಿದ್ದರೆ 2018ರ ಉಪಚುನಾವಣೆ ಜೆಡಿಎಸ್‌ನ ಎಲ್.ಆರ್. ಶಿವರಾಮೇಗೌಡ ಜಯ ಸಾಧಿಸಿದ್ದಾರೆ.
2019ರಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಜಯಗಳಿಸಿದ್ದಾರೆ.
ಮಂಡ್ಯ ಕ್ಷೇತ್ರದಲ್ಲಿ 4 ಉಪಚುನಾವಣೆಗಳೂ ಸೇರಿ 1952ರಿಂದ 21 ಚುನಾವಣೆಗಳು ನಡೆದಿವೆ. 13 ಚುನಾವಣೆಗಳನ್ನು ಕಾಂಗ್ರೆಸ್ ಗೆದ್ದಿದೆ. ಉಳಿದಂತೆ ಒಮ್ಮೆ ಪ್ರಜಾ ಸೋಷಲಿಸ್ಟ್ ಪಾರ್ಟಿ, ಒಮ್ಮೆ ಜನತಾ ಪಕ್ಷ, ಎರಡು ಬಾರಿ ಜನತಾ ದಳ, 3 ಬಾರಿ ಜೆಡಿಎಸ್ ಹಾಗೂ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಲೋಕಸಭಾ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಕೇಂದ್ರದ ಆಡಳಿತಾರೂಢ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ತಯಾರಿ ನಡೆಸುತ್ತಿರುವ ಈ ಹೊತ್ತಿನಲ್ಲಿ ಮಂಡ್ಯದಲ್ಲೂ ಅಭ್ಯರ್ಥಿ ಆಯ್ಕೆ ಕುರಿತಂತೆ ತೀವ್ರ ಚರ್ಚೆ ಆರಂಭವಾಗಿದೆ.
ರಾಜ್ಯ ರಾಜಕಾರಣದಲ್ಲಿ ಮಂಡ್ಯದ ರಾಜಕಾರಣ ತೀವ್ರ ಕುತೂಹಲ ಕೆರಳಿಸುವ ವಿಷಯ. ಮಂಡ್ಯ ಜನತಾ ಪರಿವಾರದ ಭದ್ರನೆಲೆ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ.
ಆದರೆ ಇದು ಕಾಂಗ್ರೆಸ್ ನೆಲೆಯೂ ಹೌದು ಎನ್ನುವುದು ಹಿಂದಿನ ಚುನಾವಣಾ ಫಲಿತಾಂಶಗಳಿಂದ ಸಾಬೀತಾಗಿದೆ.
ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಡುವ ಕ್ಷೇತ್ರ ಇದು. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಮಾಡಿದರು.
ಮತ್ತೆ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಭಾರೀ ಕಸರತ್ತಿನಲ್ಲಿ ತೊಡಗಿವೆ. ಹಾಗಾಗಿ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿ ತೊಡಗಿವೆ. ಈ ವಿಚಾರ ಈಗಾಗಲೇ ಕ್ಷೇತ್ರದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಲೆಕ್ಕಾಚಾರ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಎಂಟರಲ್ಲಿ ಏಳು ಕ್ಷೇತ್ರಗಳನ್ನು ಗೆದ್ದಿರುವ ಹಾಗೂ ಎರಡು ಪರಿಷತ್ ಚುನಾವಣೆಯನ್ನು ಗೆದ್ದುಕೊಂಡಿರುವ ಕಾಂಗ್ರೆಸ್, ಲೋಕಸಭಾ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಸಮರ್ಥ ಅಭ್ಯರ್ಥಿಗಾಗಿ ಶೋಧ ನಡೆಸುತ್ತಿದೆ.
ಏಳು ಕ್ಷೇತ್ರಗಳಲ್ಲಿ ತಮ್ಮ ಶಾಸಕರು ಇರುವುದು, ಅಧಿಕಾರದಲ್ಲಿ ತನ್ನ ಸರಕಾರ ಇರುವುದು ಗೆಲುವಿಗೆ ಸುಗಮವಾಗಲಿದೆ ಎಂಬುದು ಕಾಂಗ್ರೆಸ್ ವಿಶ್ವಾಸ.
ಸಚಿವ ಎನ್.ಚಲುವರಾಯಸ್ವಾಮಿ ಅವರೇ ಸೂಕ್ತ ಅಭ್ಯರ್ಥಿ ಎಂದು ಪಕ್ಷದ ಒಂದು ಗುಂಪು ಹೇಳುತ್ತಿದ್ದರೆ, ಮಾಜಿ ಸಂಸದೆ ರಮ್ಯಾ ಸೂಕ್ತವೆಂದು ಮತ್ತೊಂದು ಗುಂಪು ಹೇಳುತ್ತಿದೆ.
ಈ ನಡುವೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಪರಿಷತ್ ಸದಸ್ಯ ಮಧು ಮಾದೇಗೌಡ, ಮುಖಂಡರಾದ ಡಾ.ರವೀಂದ್ರ, ಕೀಲಾರ ರಾಧಾಕೃಷ್ಣ, ಡಾ.ಕೃಷ್ಣ ಇನ್ನೂ ಹಲವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ.
ಜೆಡಿಎಸ್‌ಗೆ ಸಿಗಲಿದೆಯೇ ಮಂಡ್ಯ ಕ್ಷೇತ್ರ?
ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಸೋತಿದ್ದರು.
ಈ ಬಾರಿ ಅದೇ ಕ್ಷೇತ್ರದಲ್ಲಿ ಜೆಡಿಎಸ್ ವಿಜಯ ಪತಾಕೆ ಹಾರಿಸಬೇಕು ಎಂಬ ಹಠದಲ್ಲಿದ್ದಾರೆ ಕುಮಾರಸ್ವಾಮಿ.
ಆದರೆ ಹಾಲಿ ಸಂಸದೆ ಸುಮಲತಾ ಅವರೇ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಲು ಬಯಸಿದ್ದಾರೆ. ಜೆಡಿಎಸ್‌ಗೆ ಬಿಟ್ಟುಕೊಡಬಾರದು ಎಂದು ಆಗ್ರಹಿಸುತ್ತಿದ್ದಾರೆ.
ಜೆಡಿಎಸ್ ಮಿತ್ರ ಪಕ್ಷ ಬಿಜೆಪಿ ಬಳಿ ಕ್ಷೇತ್ರವನ್ನು ತನಗೆ ಬಿಟ್ಟು ಕೊಡಿ ಎಂದು ಕೇಳುತ್ತಿದೆ.
ನಿಖಿಲ್ ಮತ್ತು ಕುಮಾರಸ್ವಾಮಿ ತಾವು ಕಣಕ್ಕಿಳಿಯುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಅದು ಅಂತಿಮವಲ್ಲ ಎಂದು ಎಲ್ಲರಿಗೂ ಗೊತ್ತು. ಕೊನೆಗಳಿಗೆಯಲ್ಲಿ ಇಬ್ಬರ ಪೈಕಿ ಯಾರಾದರೊಬ್ಬರು ಕಣಕ್ಕಿಳಿದರೂ ಆಶ್ಚರ್ಯವಿಲ್ಲ. ಸಿ.ಎಸ್. ಪುಟ್ಟರಾಜು ಅಥವಾ ಡಿ.ಸಿ. ತಮ್ಮಣ್ಣ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇದೆ.
ರಾಷ್ಟ್ರಮಟ್ಟದಲ್ಲಿ ಪ್ರಧಾನಿ ಮೋದಿ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಗೆಲುವಿಗೆ ಪೂರಕವಾಗುತ್ತದೆ ಎಂಬುದು ಜೆಡಿಎಸ್ ವಿಶ್ವಾಸ.
ಜತೆಗೆ, ಕ್ಷೇತ್ರದಲ್ಲಿ ಸಾಂಪ್ರದಾಯಿಕವಾಗಿ ಹೆಚ್ಚಿನ ಸಂಖ್ಯೆಯ ಒಕ್ಕಲಿಗ ಮತದಾರರ ಬೆಂಬಲ ತಮಗೆ ಇದೆ ಎಂಬುದು ಜೆಡಿಎಸ್ ನಾಯಕರ ದೃಢ ನಂಬಿಕೆಯಾಗಿದೆ.
ಆದರೆ ಯಾವುದಕ್ಕೂ ಜೆಡಿಎಸ್‌ಗೆ ಬಿಜೆಪಿ ಕ್ಷೇತ್ರ ಬಿಟ್ಟು ಕೊಡುತ್ತಾ ಎಂದು ಕಾದು ನೋಡಬೇಕಿದೆ.
ಸುಮಲತಾ ಮತ್ತೆ ಸ್ಪರ್ಧೆ!
ಇದುವರೆಗೂ ಗುಟ್ಟುಬಿಟ್ಟುಕೊಡದೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯಿಸುತ್ತಿದ್ದ ಹಾಲಿ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್, ಮತ್ತೆ ಮಂಡ್ಯದಿಂದಲೇ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಸುಮಲತಾ ಬಿಜೆಪಿಯತ್ತ ವಾಲಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿಯುವುದು ನಿಶ್ಚಯವಾಗಿತ್ತು. ಆದರೆ, ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಕ್ಷೇತ್ರ ಜೆಡಿಎಸ್ ಪಾಲಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸುಮಲತಾ ಮತ್ತೆ ಸ್ಪರ್ಧೆಯ ಸುಳಿವು ನೀಡಿ ಕುತೂಹಲ ಮೂಡಿಸಿದ್ದಾರೆ.
‘‘ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಬಿಜೆಪಿಗೇ ಉಳಿಸಿಕೊಳ್ಳಲು ಕಡೇ ಕ್ಷಣದವರೆಗೂ ಹೋರಾಡುತ್ತೇನೆ. ಈಗ ಹರಿದಾಡುತ್ತಿರುವ ಅಂತೆಕಂತೆಗಳು ಅಂತಿಮವಲ್ಲ; ನಾನು ಸ್ಪರ್ಧಿಸುವುದು ಖಚಿತ’’ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.
‘‘ಜಿಲ್ಲೆಯಲ್ಲಿ ಬಿಜೆಪಿ ಸಂಘಟಿಸಲು ಸಾಕಷ್ಟು ಹೋರಾಟ ಮಾಡಿದ್ದೇನೆ. ಟಿಕೆಟ್ ಅಂತಿಮವಾಗುವವರೆಗೂ ಕಾದು ನೋಡುತ್ತೇನೆ. ನಂತರವಷ್ಟೇ ಆ ಬಗ್ಗೆ ಮಾತನಾಡುತ್ತೇನೆ. ಕ್ಷೇತ್ರವು ಬಿಜೆಪಿಗೇ ದೊರೆಯಲಿದೆ ಎಂಬ ವಿಶ್ವಾಸ ನನಗಿದೆ. ನನಗಾಗಿ ಟಿಕೆಟ್ ಕೇಳುತ್ತಿಲ್ಲ, ನನ್ನ ಮಂಡ್ಯ ಜನರಿಗಾಗಿ ಹೋರಾಡುತ್ತಿದ್ದೇನೆ’’ ಎಂದರು.
‘‘ನಾನು ಟಿಕೆಟ್ ಪಡೆಯಲೇಬೇಕು ಎಂಬ ಉದ್ದೇಶವಿದ್ದರೆ ಎಲ್ಲಾದರೂ ಅವಕಾಶ ಸಿಗುತ್ತಿತ್ತು. ಆದರೆ ಮಂಡ್ಯ ಜನರು ನನಗೆ ಮುಖ್ಯ. ಜೆಡಿಎಸ್‌ನವರು ಏನಾದರೂ ಹೇಳಿಕೊಳ್ಳಲಿ, ಟಿಕೆಟ್ ಅಧಿಕೃತವಾಗುವವರೆಗೂ ಕಾಯುತ್ತೇನೆ, ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ’’ ಎಂದು ಪ್ರತಿಕ್ರಿಯಿಸಿದರು.
ಒಂದು ವೇಳೆ ಕ್ಷೇತ್ರವನ್ನು ಬಿಜೆಪಿ ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಸುಮಲತಾ ನಡೆ ಏನಿರಲಿದೆ ಎಂದು ಕಾದು ನೋಡಬೇಕು. ಅವರು ಕಾಂಗ್ರೆಸ್ ಸೇರುವ ಸಾಧ್ಯತೆಯೂ ಇದೆ, ಇಲ್ಲವೇ ಪಕ್ಷೇತರರಾಗಿಯೇ ಮತ್ತೊಮ್ಮೆ ಕಣಕ್ಕಿಳಿದರೂ ಇಳಿಯಬಹುದು. ಹಾಗಾದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.
ಕ್ಷೇತ್ರದಲ್ಲಿನ ಸಮಸ್ಯೆಗಳು
ಕ್ಷೇತ್ರದ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರಾವರಿ ಸೌಲಭ್ಯ ಇಲ್ಲ. ಬೆಳೆದ ಉತ್ಪನ್ನಗಳಿಗೆ ಸೂಕ್ತ ದರ ಸಿಗುತ್ತಿಲ್ಲ. ಸೂಕ್ತ ಮಾರುಕಟ್ಟೆಯಿಲ್ಲದೆ ಮಧ್ಯವರ್ತಿಗಳಿಂದ ರೈತರ ಶೋಷಣೆ. ಕೆರೆಗಳ ಅಭಿವೃದ್ಧಿಯಾಗಿಲ್ಲ. ಕೃಷಿಗೆ ಪೂರಕವಾದ ಕಾರ್ಖಾನೆಗಳು ಇಲ್ಲ. ಸರಕಾರಿ ಸ್ವಾಮ್ಯದ ಮೈಷುಗರ್ ಕಾರ್ಖಾನೆ ನಷ್ಟದಲ್ಲಿ ನರಳುತ್ತಿದೆ, ರೈತರ ಶೋಷಣೆ ನಿರಂತರವಾಗಿದೆ. ಮಳೆಯಾಶ್ರಿತ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ಬರಪರಿಸ್ಥಿತಿಯಿಂದಾಗಿ ರೈತರು, ಕೃಷಿ ಕಾರ್ಮಿಕರ ಬದುಕು ಸಂಕಷ್ಟದಲ್ಲಿದೆ. ಫೈನಾನ್ಸ್ ಸಂಸ್ಥೆಗಳಿಂದ ಸಾಮಾನ್ಯ ಜನರ ಸುಲಿಗೆಯಾಗುತ್ತಿದೆ ಎಂಬುದು ಕೃಷಿ ಸಂಬಂಧಿತ ಸಮಸ್ಯೆಗಳು.
ಯುವಜನರಿಗೆ ಉದ್ಯೋಗಾವಕಾಶಕ್ಕೆ ಪೂರಕ ಕಾರ್ಖಾನೆಗಳು ಇಲ್ಲದೆ, ವಲಸೆ ಹೋಗುತ್ತಿದ್ದಾರೆ. ಹಲವು ಹಳೆಯ ಶಾಲಾ ಕಟ್ಟಡಗಳು ಶಿಥಿಲವಾಗಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆ. ಸರಕಾರಿ ಕಚೇರಿಗಳಲ್ಲಿ ಮುಖ್ಯವಾಗಿ ತಾಲೂಕು ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದೆ, ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿದ್ದರೂ ಪ್ರವಾಸಿತಾಣಗಳ ಅಭಿವೃದ್ಧಿಗೆ ಗಮನ ನೀಡಿಲ್ಲ ಎಂಬ ಅಸಮಾಧಾನವೂ ಜನರಲ್ಲಿದೆ.