ರಾಮ ಮಂದಿರದ ಗರ್ಭದಲ್ಲಿ

Update: 2024-01-17 04:29 GMT

Photo:PTI

ಮಾನ್ಯರೇ,

ನನ್ನ ಹೆಸರಿನಲ್ಲೇ ರಾಮ ಇದ್ದಾನೆ. ಹೃದಯದಲ್ಲೂ.

ಸಂಸ್ಕೃತ ಪದವೀಧರನಾಗಿರುವ ನಾನು ವಿವಿಧ ಧರ್ಮಗಳ ಬಗ್ಗೆ ತಕ್ಕಮಟ್ಟಿಗೆ ಅರಿತಿದ್ದೇನೆ. ಜೊತೆಗೆ, ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ರಂಗಗಳಲ್ಲಿ ದಶಕಗಳ ಕಾಲ ದೇಶದ ವಿವಿಧೆಡೆ, ವಿವಿಧ ಮತ-ಸ್ತರ-ವರ್ಗಗಳ ಜನರೊಡನೆ ಒಡನಾಡಿದ ಜೀವನಾನುಭವ ನನಗಿದೆ.

ಜೀವನಧರ್ಮವಾದ ಹಿಂದೂ ಧರ್ಮವನ್ನು ಜಾತಿ-ವಿಧಿ ಪ್ರಧಾನ ಮತಧರ್ಮವನ್ನಾಗಿ ಎಂದಿನಿಂದಲೋ ರೂಪಾಂತರಗೊಳಿಸಲಾಗುತ್ತಿದ್ದು ಆ ಕ್ರಿಯೆಯೀಗ ಹೊಸ ಮಜಲಿನತ್ತ ಸಾಗಿದೆ.ಅಯೋಧ್ಯೆಯ ‘ಅಲ್ಲೇ’ ರಾಮಮಂದಿರ ನಿರ್ಮಾಣದ ಗುರಿ ಚರ್ಚಾರ್ಹವಾದರೆ ಆ ಗುರಿಸಾಧನೆಗೆ ಅನುಸರಿಸಲಾದ ಮಾರ್ಗ ಆಕ್ಷೇಪಾರ್ಹ. ರಾಮ ಈ ವಾಮಮಾರ್ಗವನ್ನು ಒಪ್ಪಲಾರನೇನೋ. ಇರಲಿ.

ಇದೀಗ ಮೂರ್ತಿ ಪ್ರತಿಷ್ಠಾಪನೆಯ ಹೆಸರಲ್ಲಿ ರಾಜಕೀಯ ಪಕ್ಷವೊಂದು ತನ್ನ ಆತ್ಮಸಖ ಸಂಘಟನೆಗಳನ್ನು ಸುತ್ತ ಇಟ್ಟುಕೊಂಡು ನಡೆಸುತ್ತಿರುವ ಅಬ್ಬರ ಮಾತ್ರ ಸರ್ವಜನ ಹಿತಾಯ ಆಗಲಾರದು. ಮುಖ್ಯ ಕಾರಣಗಳು ಇಂತಿವೆ:

- ಮಂದಿರ ನಿರ್ಮಾಣದ ಶ್ರೇಯಸ್ಸನ್ನು ಒಂದು ರಾಜಕೀಯ ಪಕ್ಷಕ್ಕೆ, ಅದರಲ್ಲೂ ಆ ಪಕ್ಷದ ಓರ್ವ ನಾಯಕನಿಗೆ ಸಲ್ಲಿಸಲಾಗುತ್ತಿದೆ. ಜೊತೆಗೆ, ಆ ರಾಮಮಂದಿರವೇ ಈ ದೇಶದ ಸರ್ವಸ್ವ ಎಂಬಂತಹ ಭ್ರಮೆಯನ್ನು ಹುಟ್ಟುಹಾಕಲಾಗುತ್ತಿದೆ. ಈ ಭ್ರಮೆಯು ಸಮಾಜದ ಸೌಹಾರ್ದ, ಶ್ರಮಭಾವ ಮತ್ತು ವೈಚಾರಿಕತೆಗಳಿಗೆ ಮಾರಕ.

ಓರ್ವ ವ್ಯಕ್ತಿಯ ವೈಭವೀಕರಣವು ಈ ಪ್ರಜಾಪ್ರಭುತ್ವ ರಾಷ್ಟ್ರವನ್ನು ದೀರ್ಘಕಾಲ ಆತನ ಹಿಡಿತಕ್ಕೆ ಒಳಪಡಿಸುವ ಅಪಾಯವಿದೆ. ಆಗ ದೇಶದ ಸಮಸ್ತವೂ ಆತನ ಇಚ್ಛಾನುಸಾರ, ಒಂದಿಲ್ಲೊಂದು ಬಗೆಯಲ್ಲಿ ಆತನ ಆಣತಿಯಂತೆಯೇ ನಡೆಯಬೇಕಾದೀತು.

- ಜಾತ್ಯತೀತವಾಗಿಯೇ ಮುಂದುವರಿಯಬೇಕಾದ ಅನಿವಾರ್ಯ ಘಟ್ಟದಲ್ಲಿರುವ ಭಾರತವು, ಕಾಲಕ್ರಮದಲ್ಲಿ, ಒಂದು ಧರ್ಮದ ಮತ್ತೇರಿಸಿಕೊಂಡವರ ಮತ್ತು ಆ ಧರ್ಮದ ಬಗೆಗಿನ ಶ್ರೇಷ್ಠತೆಯ ವ್ಯಸನಿಗಳ ಅಟಾಟೋಪಕ್ಕೆ ಪಕ್ಕಾಗಿ ಮತೀಯ ಘರ್ಷಣೆಗಳನ್ನು ಅನುಭವಿಸಬೇಕಾದ ಸಂಭವ ಅಧಿಕವಾಗುತ್ತದೆ.

- ವೈದಿಕರ ದೇವರುಗಳು ಅವೈದಿಕರ, ಮುಖ್ಯವಾಗಿ ದಲಿತರ, ದೇವರುಗಳನ್ನು ಮೂಲೆಗುಂಪು ಮಾಡಿ ಮೆರೆಯುವ ಚೋದ್ಯ ಉಲ್ಬಣಿಸುತ್ತದೆ. ಇದರಿಂದಾಗಿ ಒಂದು ಸಂಸ್ಕೃತಿಗುಚ್ಛವೇ ಕಣ್ಮರೆಯಾದೀತು.

- ಸೂಚ್ಯವಾಗಿ ಹೇಳಬೇಕೆಂದರೆ, ಉತ್ತರದ ರಾಮಾದಿಗಳು ದಕ್ಷಿಣದ ಆಂಜನೇಯಾದಿಗಳ ಮೇಲೆ ಸವಾರಿ ಮಾಡತೊಡಗುತ್ತಾರೆ.

- ಹಿಂದೂ (ಮತ)ಧರ್ಮವೇ ರಾಷ್ಟ್ರೀಯತೆ ಎಂದು, ವೈದಿಕ ಆಚರಣೆಯೇ ಶ್ರೇಷ್ಠವೆಂದು, ಹಿಂದಿಯೇ ಸಾರ್ವಭೌಮ ಭಾಷೆಯೆಂದು ಬಿಂಬಿಸಲಾಗುತ್ತಿರುವ ನಡೆಯು ತೀವ್ರಗೊಳ್ಳುತ್ತದೆ. (ಮತಧರ್ಮಕ್ಕೆ ಜೋತುಬಿದ್ದ ದೇಶಗಳು ಕ್ಷೋಭೆ, ಸಂಘರ್ಷಗಳಿಂದ ನಲುಗುತ್ತಿರುವುದನ್ನು ನಾವಿಂದು ಕಾಣುತ್ತಿದ್ದೇವೆ.)

ಈ ಎಲ್ಲ ಸಾಧ್ಯತೆಗಳೂ ಭಾರತದ ಸಂಸ್ಕೃತಿವೈವಿಧ್ಯವನ್ನು ಕ್ಷೀಣಗೊಳಿಸುತ್ತವೆ, ಸಮಾಜದಲ್ಲಿ ತರತಮ ಭಾವವನ್ನು ಪೋಷಿಸುತ್ತವೆ, ಸೌಹಾರ್ದವನ್ನು ನಾಶಗೊಳಿಸುತ್ತವೆ, ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತವೆ, ನೆಮ್ಮದಿಯನ್ನು ಹಾಳುಗೆಡವುತ್ತವೆ.

ರಾಮನಿಗೆ ಪಬ್ಲಿಸಿಟಿಯ ಅವಶ್ಯಕತೆ ಇದೆಯೇ? ದೇಶದ ಉಳಿದೆಲ್ಲ ದೇವಾಲಯಗಳಂತೆಯೇ ಅಯೋಧ್ಯೆಯ ರಾಮಮಂದಿರದ (ಮೂರ್ತಿ ಪ್ರತಿಷ್ಠಾಪನಾಸಹಿತ) ಉದ್ಘಾಟನೆಯನ್ನೂ ಸಂಬಂಧಿತ ವಿಶ್ವಸ್ಥ ಮಂಡಳಿಯು ಸೂಕ್ತ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸುವುದಕ್ಕೆ ಸೀಮಿತಗೊಂಡಿದ್ದರೆ ಜನರಲ್ಲಿ ರಾಮನ ಮೇಲಣ ಭಕ್ತಿಯೇನು ಕಡಿಮೆಯಾಗಿಬಿಡುತ್ತಿತ್ತೇ? ಭಕ್ತಿಯೆಂಬುದು ಸಮರ್ಪಣೆಯ ಆತ್ಮಾನುಭೂತಿಯೇ ಹೊರತು ರೋಡ್ ಶೋ ಅಲ್ಲ.

- ಎಚ್. ಆನಂದರಾಮ ಶಾಸ್ತ್ರೀ

ವಿದ್ಯಾರಣ್ಯಪುರ, ಬೆಂಗಳೂರು

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News