ಅಖಿಲ ಭಾರತ ಸಹಕಾರ ಸಪ್ತಾಹದ ಒಂದು ಅವಲೋಕನ

Update: 2024-11-17 04:32 GMT

ಪ್ರತಿವರ್ಷ ಭಾರತದಾದ್ಯಂತ ನವೆಂಬರ್ 14ರಿಂದ 20 ರವರೆಗೆ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆ ನಡೆದು ಬಂದಿದೆ. ಏಳು ದಿನಗಳ ಕಾಲ ಸಹಕಾರ ಕ್ಷೇತ್ರದಲ್ಲಿರುವವರೆಲ್ಲರೂ ಒಂದೆಡೆ ಸೇರಿ ಚಳವಳಿಯ ಸಾಧನೆ, ಪ್ರಗತಿಯ ಅವಲೋಕನ ನಡೆಸುತ್ತಾರೆ. ಸಾಧನೆ ಬಗ್ಗೆ ಹೆಮ್ಮೆ ಪಟ್ಟುಕೊಂಡು ಮುಂದಿನ ಬೆಳವಣಿಗೆ ಬಗ್ಗೆ ಚಿಂತನೆ ನಡೆಸುತ್ತಾರೆ. ಹಾಗೆಯೇ, ವೈಫಲ್ಯಗಳಿದ್ದಲ್ಲಿ ಅದನ್ನು ಸರಿಪಡಿಸುವ ಬಗ್ಗೆಯೂ ಪರಸ್ಪರ ಸಮಾಲೋಚನೆಗಳು ನಡೆಯುತ್ತವೆ.

ಭಾರತದ ಸಹಕಾರ ಚಳವಳಿ ಆರಂಭವಾಗಿ 118 ವರ್ಷಗಳು ಕಳೆದಿವೆ. ಜನತೆಯ ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಚಳವಳಿ ಶ್ರಮಿಸುತ್ತಾ ಬಂದಿದೆ. ಗಾತ್ರದಲ್ಲಿ, ವ್ಯಾಪ್ತಿಯಲ್ಲಿ, ಸಾಧನೆಯಲ್ಲಿ ವಿಶ್ವದಲ್ಲೇ ಬೃಹತ್ತಾದುದು, ಮಹತ್ತಾದುದೂ ಆಗಿದೆ ಹಾಗೂ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಬಡವರ ಮಹಿಳೆಯರ ಆಧಾರಸ್ತಂಭವಾಗಿದೆ.

ಭಾರತದ ಸಹಕಾರ ಚಳವಳಿಯ ಆರೋಗ್ಯಕರ ಬೆಳವಣಿಗೆಗೆ ಹಲವಾರು ನಾಯಕರು ಶ್ರಮಿಸಿದ್ದಾರೆ. ತಮ್ಮ ತನು, ಮನವನ್ನು ಸಮರ್ಪಿಸಿದ್ದಾರೆ. ಅಂತಹವರಲ್ಲಿ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಪಂಡಿತ ಜವಹರಲಾಲ್ ನೆಹರೂ ಅವರು ಅಗ್ರಗಣ್ಯರೆನಿಸಿಕೊಂಡಿದ್ದಾರೆ. ಸಹಕಾರ ತತ್ವ, ಆಚರಣೆಯಲ್ಲಿ ನೆಹರೂ ಅವರಿಗೆ ಅಪಾರವಾದ ನಂಬಿಕೆ ಮತ್ತು ನಿಷ್ಠೆ ಇದ್ದಿತು. ಆದ್ದರಿಂದ ಅವರು ಭಾರತವನ್ನು ಆರ್ಥಿಕವಾಗಿ ಸದೃಢಗೊಳಿಸಲು ಸಹಕಾರ ತತ್ವದ ಮೊರೆ ಹೋದರು. ರಾಷ್ಟ್ರದಲ್ಲಿ ಸಹಕಾರ ಚಳವಳಿ ಪ್ರಗತಿಪಥದಲ್ಲಿ ಸಾಗಲು ಕ್ರಮಗಳನ್ನು ಕೈಗೊಂಡರು. ಅವರ ದೂರದೃಷ್ಟಿಯ ಫಲದಿಂದ ಇಂದು ಸಹಕಾರ ಚಳವಳಿ ವೈಶಿಷ್ಟ್ಯಪೂರ್ಣವಾಗಿ ಬೆಳೆದಿದೆ.

1952ರಲ್ಲಿ ಎಂ.ವಿ. ಕೃಷ್ಣಪ್ಪನವರು ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ, ಲೋಕಸಭೆಯಲ್ಲಿ ಸಹಕಾರ ಕ್ಷೇತ್ರದ ಮಹತ್ವ, ದೇಶದ ರೈತರ ಸಮಸ್ಯೆಗಳು, ಅವರ ಮೇಲಿನ ಶೋಷಣೆಗಳ ಕುರಿತು ಹಾಗೂ ಸಹಕಾರ ಕ್ಷೇತ್ರದ ಮೂಲಕ ಗ್ರಾಮೀಣ ಪ್ರದೇಶದ ರೈತರ, ಮಹಿಳೆಯರ ಹಾಗೂ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿ ಸಾಧ್ಯವೆಂದು ತಮ್ಮ ಭಾಷಣದಲ್ಲಿ ತಿಳಿಸುತ್ತಾರೆ. ಕೃಷ್ಣಪ್ಪನವರ ಭಾಷಣವನ್ನು ಆಲಿಸಿದ ನೆಹರೂರವರು ಸಭೆ ಮುಗಿದ ತಕ್ಷಣ ಕೃಷ್ಣಪ್ಪರವರನ್ನು ತಮ್ಮ ಕಚೇರಿಗೆ ಕರೆಸಿ, ಸಹಕಾರ ಕ್ಷೇತ್ರದ ಬಗ್ಗೆ ಅವರಿಗಿರುವ ಜ್ಞಾನ, ಕಳಕಳಿ ತಿಳಿದು ಮರುದಿನವೇ ಅವರನ್ನು ಕೃಷಿ ಖಾತೆ ಸಚಿವರನ್ನಾಗಿ ನೇಮಕ ಮಾಡುತ್ತಾರೆ.

ನಂತರ ಎಂ.ವಿ. ಕೃಷ್ಣಪ್ಪನವರು ಹಾಲೆಂಡ್ ಮತ್ತು ನೆದರ್‌ಲ್ಯಾಂಡ್ಸ್ ದೇಶಗಳಿಗೆ ಅಧ್ಯಯನ ಪ್ರವಾಸ ಮಾಡಿ, ಅಲ್ಲಿರುವ ಹಸುಗಳನ್ನು ಭಾರತಕ್ಕೆ ತಂದು, ಭಾರತದಲ್ಲಿ ಹೈನುಗಾರಿಕೆಗೆ ಹೊಸ ಆಯಾಮವನ್ನು ದೊರಕಿಸಿಕೊಡುತ್ತಾರೆ. ಅದರ ಫಲವಾಗಿ ಕೆ.ಎಂ.ಎಫ್. 1965ರಲ್ಲಿ ಸ್ಥಾಪನೆ ಮಾಡುತ್ತಾರೆ.

ಕೃಷ್ಣಪ್ಪನವರ ಸಹಕಾರ ಕ್ಷೇತ್ರದ ಪ್ರೇರಣೆಯಿಂದಾಗಿ ಜವಾಹರಲಾಲ್ ನೆಹರೂ ಪಂಚವಾರ್ಷಿಕ ಯೋಜನೆಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡಿದರು. ನವೆಂಬರ್ 14 ಪಂಡಿತ್ ನೆಹರೂ ಅವರ ಹುಟ್ಟು ಹಬ್ಬವಾಗಿದ್ದು, ನೆಹರೂ ಅವರು ಸಹಕಾರ ಚಳವಳಿಯ ಬೆಳವಣಿಗೆಗೆ ನೀಡಿದ ಕೊಡುಗೆಯಿಂದ ಅವರ ಹುಟ್ಟುಹಬ್ಬದಂದೇ ಸಹಕಾರ ಸಪ್ತಾಹ ಆಚರಣೆ ಮಾಡಲಾಗುತ್ತಿದೆ.

ಪ್ರತಿವರ್ಷ ಭಾರತದಾದ್ಯಂತ ನವೆಂಬರ್ 14ರಿಂದ 20 ರವರೆಗೆ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆ ನಡೆದು ಬಂದಿದೆ. ಏಳು ದಿನಗಳ ಕಾಲ ಸಹಕಾರ ಕ್ಷೇತ್ರದಲ್ಲಿರುವವರೆಲ್ಲರೂ ಒಂದೆಡೆ ಸೇರಿ ಚಳವಳಿಯ ಸಾಧನೆ, ಪ್ರಗತಿಯ ಅವಲೋಕನ ನಡೆಸುತ್ತಾರೆ. ಸಾಧನೆ ಬಗ್ಗೆ ಹೆಮ್ಮೆ ಪಟ್ಟುಕೊಂಡು ಮುಂದಿನ ಬೆಳವಣಿಗೆ ಬಗ್ಗೆ ಚಿಂತನೆ ನಡೆಸುತ್ತಾರೆ. ಹಾಗೆಯೇ, ವೈಫಲ್ಯಗಳಿದ್ದಲ್ಲಿ ಅದನ್ನು ಸರಿಪಡಿಸುವ ಬಗ್ಗೆಯೂ ಪರಸ್ಪರ ಸಮಾಲೋಚನೆಗಳು ನಡೆಯುತ್ತವೆ. ಹಿಂದಿನಿಂದಲೂ ನವೆಂಬರ್ 14ರಿಂದ 20ರವರೆಗೆ ರಾಜ್ಯದಾದ್ಯಂತ ಅಖಿಲ ಭಾರತ ಸಹಕಾರ ಸಪ್ತಾಹದಾಚರಣೆ ನಡೆಯುತ್ತಿತ್ತು. ಸಪ್ತಾಹದ ಆಚರಣೆ ಬಹುತೇಕ ಪಟ್ಟಣ ಪ್ರದೇಶಗಳಲ್ಲಿ ವ್ಯವಸ್ಥೆಯಾಗುತ್ತಿತ್ತು. ಕೆಲವೇ ಜನರು ಪಾಲ್ಗೊಳ್ಳುತ್ತಿದ್ದರು. ಸಹಕಾರಿ ಕ್ಷೇತ್ರದ ಮಹತ್ವ ಪ್ರತಿಯೊಬ್ಬರೂ ತಿಳಿಯಬೇಕಾದರೆ, ಈ ವ್ಯವಸ್ಥೆಯನ್ನು ಸಂಪೂರ್ಣ ಬದಲಿಸಿದ ಕೀರ್ತಿ ಜಿ.ಟಿ. ದೇವೇಗೌಡರಿಗೆ ಸಲ್ಲುತ್ತದೆ. ಈ ಹಿನ್ನೆಲೆಯಲ್ಲಿ ಈ ವರ್ಷವೂ ಈ ಸಪ್ತಹ 14.11.2024ರಂದು ಆರಂಭಗೊಂಡಿದ್ದು 20.11.2024ರವರೆಗೆ ನಡೆಯುತ್ತಿದೆ.

ಸಹಕಾರ ಸಪ್ತಾಹಕ್ಕೆ ಹೆಚ್ಚಿನ ಮಹತ್ವ ಸಿಗಬೇಕು, ಸಾವಿರಾರು ಜನರು ಪಾಲ್ಗೊಳ್ಳಬೇಕು, ಸಪ್ತಾಹದ ವ್ಯವಸ್ಥೆ ಗ್ರಾಮಾಂತರ ಪ್ರದೇಶಗಳಲ್ಲಿ ಆಗಬೇಕು, ಅದಕ್ಕೆ ಮೌಲ್ಯ ತುಂಬಬೇಕಾದರೆ ರಾಜ್ಯದ ಮುಖ್ಯಮಂತ್ರಿಯವರು ಸಪ್ತಾಹವನ್ನು ಉದ್ಘಾಟಿಸಬೇಕು ಎಂಬ ಕಲ್ಪನೆಗೆ ಸಾಕಾರ ರೂಪಕೊಟ್ಟರು.

ಬೆಂಗಳೂರು ಜಿಲ್ಲೆ ರಾಮನಗರ ಸಮೀಪದ ಅಂಕನಹಳ್ಳಿಯಲ್ಲಿ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ವ್ಯವಸ್ಥೆ ಮಾಡಿದರು. ಗ್ರಾಮೀಣ ಭಾಗದ ಸಾವಿರಾರು ಜನರು ಸೇರುವಂತೆ ಮಾಡಿದರು. ಅಂದಿನ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡರು ಸಹಕಾರ ಸಪ್ತಾಹದ ಉದ್ಘಾಟನೆ ಮಾಡುವಂತೆ ವ್ಯವಸ್ಥೆ ಮಾಡಿದರು. ಅಂದಿನಿಂದ ಪ್ರತಿವರ್ಷ ನವೆಂಬರ್ 14ರಿಂದ 20ರವರೆಗೆ ಅಖಿಲ ಭಾರತ ಸಹಕಾರ ಸಪ್ತಾಹವನ್ನು ರಾಜ್ಯದ ಮುಖ್ಯಮಂತ್ರಿಯವರೇ ಉದ್ಘಾಟಿಸುತ್ತಾ ಬಂದಿದ್ದಾರೆ. ಆದ್ದರಿಂದ ಸಪ್ತಾಹದ ಮಹತ್ವ, ಉದ್ದೇಶ, ಭಾಗವಹಿಸುವಿಕೆ ಪ್ರತಿಯೊಬ್ಬ ಸಹಕಾರಿಗಳಿಗೂ ದೊರಕಿದಂತಾಗುತ್ತದೆ.

ಈ ಬಾರಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯುತ್ತಿದ್ದು ಸಪ್ತಾಹದ ಧ್ಯೇಯ ‘ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಎಂಬುದಾಗಿದೆ. 7 ದಿನಗಳಲ್ಲಿ ಪ್ರತಿದಿವಸ, ಒಂದೊಂದು ವಿಷಯದ ಬಗ್ಗೆ ಚರ್ಚೆ ಹಾಗೂ ಸಪ್ತಾಹದ ದಿನಾಚರಣೆಯನ್ನು ಆಚರಿಸಲಾಗುತ್ತದೆ. ನವೆಂಬರ್ 14ರಂದು ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳವಳಿಯನ್ನು ಬಲಪಡಿಸುವುದು ಎಂಬ ದಿನದ ವಿಷಯದ ಬಗ್ಗೆ ಚರ್ಚಿಸಲಾಗಿದೆ. ನವೆಂಬರ್ 15ರಂದು ‘ಸಹಕಾರ ಸಂಸ್ಥೆಗಳಲ್ಲಿ ಅನ್ವೇಷಣೆ, ತಾಂತ್ರಿಕತೆ ಮತ್ತು ಉತ್ತಮ ಆಡಳಿತ’, ನವೆಂಬರ್ 16ರಂದು ‘ಉದ್ಯಮಶೀಲತೆ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’, ನವೆಂಬರ್ 17ರಂದು ‘ಸಹಕಾರಿ ಉದ್ಯಮಗಳಲ್ಲಿ ಪರಿವರ್ತನೆ’, ನವೆಂಬರ್ 18ರಂದು ‘ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವುದು’, ನವೆಂಬರ್ 19ರಂದು ‘ಮಹಿಳೆಯರು, ಯುವಕರು ಮತ್ತು ಅಬಲವರ್ಗಗಳಿಗಾಗಿ ಸಹಕಾರ ಸಂಸ್ಥೆಗಳು’, ನವೆಂಬರ್ 20ರಂದು ‘ಉತ್ತಮ ವಿಶ್ವ ನಿರ್ಮಾಣ ಹಾದಿಗಾಗಿ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಎಂಬ ವಿಷಯಗಳ ಬಗ್ಗೆ ಚರ್ಚೆ ಹಾಗೂ ದಿನದ ಸಪ್ತಾಹದ ಆಚರಣೆಯನ್ನು ಆಚರಿಸಲಾಗುತ್ತದೆ.

ದಿನಾಂಕ: 17.11.2024ರಂದು ಬಾಗಲಕೋಟೆಯಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಉದ್ಘಾಟಿಸಿ, ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿಯನ್ನು ವಿತರಣೆ ಮಾಡಲಿದ್ದಾರೆ.

ಸಪ್ತಾಹದ ಅವಧಿಯಲ್ಲಿ ಧ್ಯೇಯದ ಬಗ್ಗೆ ಚಿಂತನೆ, ಸಮಾಲೋಚನೆಗಳು ನಡೆಯಬೇಕಾಗಿದೆ. ಸಪ್ತಾಹದ ಆಚರಣೆ ಅರ್ಥಪೂರ್ಣವಾಗಿ, ಪರಿಣಾಮಕಾರಿಯಾಗಿ ಇರಲಿ, ಸಪ್ತಾಹದ ಯಶಸ್ಸು ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪ್ರೇರಣಾಶಕ್ತಿಯಾಗಲಿ ಎಂಬುದು ಪ್ರತಿಯೊಬ್ಬ ಸಹಕಾರಿಗಳ ಆಶಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ಲಕ್ಷ್ಮೀಪತಯ್ಯ, ಕೆ.ಸಿ.ಎಸ್.

contributor

Similar News