‘ಕರ್ನಾಟಕ’ದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಸಾಗಿ ಬಂದ ಹಾದಿ
ಭಾಗ- 2
ನ್ಯಾ. ಒ. ಚಿನ್ನಪ್ಪರೆಡ್ಡಿ ಆಯೋಗ:
ಸರಕಾರ ಮೂರನೇ ಹಿಂದುಳಿದ ವರ್ಗಗಳ ಆಯೋಗವನ್ನು 1988ರಲ್ಲಿ ರಚಿಸಿತು. ಆಯೋಗದ ಅಧ್ಯಕ್ಷರನ್ನಾಗಿ ನ್ಯಾ.ಒ.ಚಿನ್ನಪ್ಪ ರೆಡ್ಡಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿತು. ಇದು ಏಕವ್ಯಕ್ತಿ ಆಯೋಗ. ಈ ಆಯೋಗವು ಹಾವನೂರ್ ಮತ್ತು ವೆಂಕಟ ಸ್ವಾಮಿ ಆಯೋಗಗಳು ಅನುಸರಿಸಿರುವ ಪದ್ಧತಿಗಳನ್ನು ಅವಲೋಕಿಸಿ ಮಾಹಿತಿಗಳನ್ನು ಪಡೆದುಕೊಂಡಿರುವುದು ವಿಶೇಷ. ಹಾವನೂರ್ ವರದಿ 1901, 1911, 1921 ಮತ್ತು 1931ರಲ್ಲಿ ನಡೆದ ಜನಗಣತಿಯ ದಶಕಗಳ ಅಂತರದ ಯೋಜಿತ ಜನಸಂಖ್ಯೆಯನ್ನು ಆಧರಿಸಿದ್ದು ಎಂದು ಚಿನ್ನಪ್ಪ ರೆಡ್ಡಿ ಆಯೋಗ ಎತ್ತಿ ತೋರಿಸಿದೆ. ಹಾಗೆಯೇ ಟಿ. ವೆಂಕಟಸ್ವಾಮಿ ಆಯೋಗವು ರಾಜ್ಯಾದ್ಯಂತ ನಡೆಸಿದ ಸಮೀಕ್ಷೆ ಕರಾರುವಕ್ಕಾಗಿರುವುದನ್ನೂ ಕೂಡ ಆಯೋಗ ಪ್ರಶಂಶಿಸಿದೆ.
ಹಿಂದುಳಿದಿರುವವರನ್ನು ಗುರುತಿಸುವಿಕೆ:
1. ಸಾಮಾಜಿಕ ಅಮಾನ್ಯತೆಯ ಆರ್ಥಿಕ ಮತ್ತು ಸಾಂಸ್ಕೃತಿಕ ದಾರಿದ್ರ್ಯ, 2. ಜಾತಿಯ ಪ್ರಸಕ್ತತೆ, 3. ಜಾತಿ: ಒಂದು ವಸ್ತು ಸ್ಥಿತಿ (ವಾಸ್ತವಿಕತೆ), 4. ಜಾತಿ, ಬಡತನ ಮತ್ತು ಅನಕ್ಷರತೆ, 5. ಜಾತಿ ಅಂತಸ್ತು: ಸಾಮಾನ್ಯ ತತ್ವ, 6. ಮೀಸಲಾತಿಯ ಧ್ಯೇಯ, 7. ಜಾತಿ/ ಕೋಮುಗಳ ಗುರುತಿಸುವಿಕೆ.
ಈ ಮೇಲಿನ ಎಲ್ಲಾ ಅಂಶಗಳ ಮೇಲೆ ಆಯೋಗ ಸೋದಾಹರಣ ವಾಗಿ ವಿಮರ್ಶೆ ಮಾಡಿದೆ. ಮೀಸಲಾತಿ ಧ್ಯೇಯದ ಬಗ್ಗೆ ಆಯೋಗ ಗಮನಾರ್ಹವಾಗಿ ದಾಖಲಿಸಿದೆ.
ರಾಜ್ಯದ ಯೋಜಿತ ಜಾತಿವಾರು ಜನಸಂಖ್ಯೆ:
ರಾಜ್ಯದ ಯೋಜಿತ ಜನಸಂಖ್ಯೆಯನ್ನು 1988ರಲ್ಲಿ ಇದ್ದಂತೆ 7 ವಿಭಾಗಗಳಾಗಿ ವಿಂಗಡಿಸಿ, ಅವುಗಳ ಶೇಕಡಾವಾರು ಮಾಹಿತಿಯನ್ನು ಸಹ ನೀಡಿದೆ. 10 ಲಕ್ಷಕ್ಕಿಂತ ಹೆಚ್ಚಿರುವ 11 ಪ್ರಮುಖ ಜಾತಿ/ಕೋಮುಗಳು 3 ಲಕ್ಷದಿಂದ 10 ಲಕ್ಷದವರೆಗಿನ 9 ಪ್ರಮುಖ ಜಾತಿಗಳು, 1ರಿಂದ 3 ಲಕ್ಷದವರೆಗಿನ 10 ಜಾತಿಗಳು ಮತ್ತು 1ಲಕ್ಷಕ್ಕಿಂತ ಕಡಿಮೆ ಇರುವ 37 ಜಾತಿಗಳನ್ನು ಗುರುತಿಸಿದೆ ಹಾಗೂ 34 ಜಾತಿಗಳ ಜನಸಂಖ್ಯೆ ಸದ್ಯ ದೊರಕದಿರುವುದನ್ನು ಹೇಳಿ, ಜಾತಿ ತಿಳಿಯದಿರುವ ಇತರರ ಸಂಖ್ಯೆಯನ್ನು ಸಹ ಆಯೋಗ ವರದಿಯಲ್ಲಿ ಪ್ರಸ್ತುತ ಪಡಿಸಿದೆ. ಆಯೋಗ ಸಂಗ್ರಹಿಸಿರುವ ವಿಷಯಗಳಲ್ಲಿ ಪ್ರಮುಖವಾದುದೆಂದರೆ ಜಾತಿಗಳ ರಾಜಕೀಯ ಪ್ರಾತಿನಿಧ್ಯ ಗಮನಾರ್ಹವಾಗಿದೆ.
ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಜಾತಿಗಳನ್ನು ಮೂರು ವಿಭಾಗಗಳನ್ನಾಗಿ ಆಯೋಗ ವಿಂಗಡಿಸಿದೆ. ಪ್ರವರ್ಗ-1 ಮತ್ತು ಪ್ರವರ್ಗ-2 ಇವನ್ನು ಹಿಂದುಳಿದ ಮತ್ತು ಅತಿ ಹಿಂದುಳಿದವುಗಳೆಂದು ಪರಿಗಣಿಸಿ ಅವುಗಳ ಸಂಖ್ಯಾ ಬಲಗಳನ್ನು ಆಧರಿಸಿ ವಿಂಗಡಿಸಿದೆ. ಹಾಗೆಯೇ, ಪ್ರವರ್ಗ-3ನ್ನು ವೃತ್ತಿಪರ ಗುಂಪು ಎಂದು ವಿಂಗಡಿಸಲಾಗಿದೆ. ಪ್ರವರ್ಗ-1ಕ್ಕೆ ಶೇ.5, ಪ್ರವರ್ಗ- 2ಕ್ಕೆ ಶೇ.28 ಮತ್ತು ಪ್ರವರ್ಗ-3 ಶೇ.5 ರಷ್ಟು ಮೀಸಲಾತಿ ನಿಗದಿಪಡಿಸಿ ಆಯೋಗ ಶಿಫಾರಸು ಮಾಡಿದೆ.
ವರದಿ ಮಂಡನೆ:
ಎಪ್ರಿಲ್ 7, 1990ರಂದು ಸರಕಾರಕ್ಕೆ ನ್ಯಾ. ಚಿನ್ನಪ್ಪ ರೆಡ್ಡಿ ಅವರು ವರದಿಯನ್ನು ಸಲ್ಲಿಸಿದರು. ವರದಿಯನ್ನು 1990ರ ಜೂನ್‌ನಲ್ಲಿ ವಿಧಾನಸಭೆಯಲ್ಲಿ ಮಂಡಿಸಲಾಯಿತು. 1992ರ ತನಕ ವರದಿ ಅನುಷ್ಠಾನದ ಬಗ್ಗೆ ಚರ್ಚೆ ನಡೆಯಿತೇ ವಿನಾ ವರದಿಗೆ ಪೂರಕವಾದ ಸರಕಾರ ಯಾವುದೇ ಆದೇಶ ಹೊರಡಿಸಲಿಲ್ಲ. ಆಗ ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದರು. ವೀರೇಂದ್ರ ಪಾಟೀಲ್ ಅವರು ಪದಚ್ಯುತಗೊಂಡ ನಂತರ, ಸಾರೆಕೊಪ್ಪ ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗುತ್ತಾರೆ. ಅವರ ಎರಡು ವರ್ಷಗಳ ಕಾಲಾವಧಿಯಲ್ಲಿ ವರದಿಯ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗದಿದ್ದುದು ಹಿಂದುಳಿದ ವರ್ಗಗಳ ‘ಚಾಂಪಿಯನ್’ ಎಂದು ಕರೆಸಿಕೊಂಡಿದ್ದ ಬಂಗಾರಪ್ಪನವರಿಗೆ ಸಲ್ಲತಕ್ಕ ನಡೆಯಾಗಿರಲಿಲ್ಲ. ಸುಮಾರು ಎರಡು ವರ್ಷಗಳ ಕಾಲಮಾನದಲ್ಲಿ ಅವರೂ ಅಧಿಕಾರ ಕಳೆದುಕೊಂಡರು. ಆನಂತರ 1992 ನವೆಂಬರ್ ತಿಂಗಳಲ್ಲಿ ವೀರಪ್ಪ ಮೊಯ್ಲಿ ಅವರು ಅಧಿಕಾರಕ್ಕೆ ಬರುತ್ತಾರೆ. ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲಿ ವರದಿಯ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದೆ, 1994ರ ಪ್ರಾರಂಭದ ತಿಂಗಳುಗಳಲ್ಲಿ ವರದಿ ಅನುಷ್ಠಾನಕ್ಕೆ ಮುಂದಾದರು. ಆಗ ವರದಿಯಲ್ಲಿ ಸೇರದ ಬಲಿಷ್ಠ ಸಮುದಾಯವೊಂದು, ಪ್ರತಿಭಟನೆಗೆ ಮುಂದಾಯಿತು. ಪ್ರತಿಭಟನೆಯ ಕಾವು ತೀವ್ರ ಸ್ವರೂಪದ ಹಂತಕ್ಕೆ ತಲುಪಿತು. ಮುಖ್ಯವಾಗಿ ಆ ಸಮಾಜದ ಮುಖಂಡ ನಟ ಎಂ.ಎಚ್. ಅಂಬರೀಶ್, ಸಮುದಾಯದ ಕುಲ ಗುರುಗಳು ಮತ್ತು ಪ್ರಮುಖ ರಾಜಕೀಯ ಮುಖಂಡರೊಬ್ಬರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್ ಹರತಾಳ ನಡೆಸುವುದರ ಮೂಲಕ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಆ ಜಾತಿ ಮತ್ತು ಅದರ ಉಪಜಾತಿಗಳನ್ನು ಸೇರಿಸಲು ಪ್ರಬಲ ಹಕ್ಕೊತ್ತಾಯ ಮಂಡಿಸಿತು. ಹಾಗೆಯೇ ವರದಿಯಲ್ಲಿ ಸೇರಿರದ ಇನ್ನೂ ಹಲವಾರು ಜಾತಿಗಳು ಪ್ರತಿಭಟನೆಗಿಳಿದವು. ಪ್ರತಿಭಟನೆಗೆ ತಲ್ಲಣಗೊಂಡ ವೀರಪ್ಪ ಮೊಯ್ಲಿ ಸರಕಾರವು ವರದಿಯನ್ನು ಒಪ್ಪಿಕೊಂಡು ಅದರಲ್ಲಿ ಸೇರಿರದ ಮುಖ್ಯವಾಗಿ ಲಿಂಗಾಯತ ಮತ್ತು ಒಕ್ಕಲಿಗರನ್ನು ಒಳಗೊಂಡಂತೆ ಇನ್ನೂ ಕೆಲವು ಜಾತಿಗಳನ್ನು ಸೇರಿಸಿ ಎಪ್ರಿಲ್ 20, 1994ರಂದು ಮೀಸಲಾತಿ ಆದೇಶ ಹೊರಡಿಸಿತು. ಮೀಸಲಾತಿ ಪ್ರಮಾಣವನ್ನು ಕಾಯ್ದೆ ಮೂಲಕ ಶೇ.73ಕ್ಕೆ ಹೆಚ್ಚಿಸಿತು. ಈ ಸಂಕಷ್ಟ ಸಂದರ್ಭದಲ್ಲಿ ಸರಕಾರ ಚಳವಳಿಗಾರರಿಗೆ, ಒಂದು ವೇಳೆ ಸರ್ವೋಚ್ಚ ನ್ಯಾಯಾಲಯ ರಾಜ್ಯದ ಮೀಸಲಾತಿ ಕೋಟಾ ಶೇ. 73ನ್ನು ಒಪ್ಪದ ಪಕ್ಷದಲ್ಲಿ ಚಳವಳಿಕಾರರ ಬೇಡಿಕೆಯನ್ನು ಈಡೇರಿಸುವುದು ಕಷ್ಟ ಎಂಬ ಷರತ್ತನಾದರೂ ವಿಧಿಸಬಹುದಿತ್ತು. ವೀರಪ್ಪ ಮೊಯ್ಲಿ ಮುಂಬರುವ ಚುನಾವಣೆಯ ಏಕೈಕ ದೃಷ್ಟಿಯಿಂದ ಮಾಡಿದ ಇಂತಹ ಅನಿಷ್ಟ ಕಾರಕ ತೀರ್ಮಾನದಿಂದ ತೀಕ್ಷ್ಣವಾದ ಅನ್ಯಾಯವಾದುದು ಮಾತ್ರ ಹಿಂದುಳಿದ ವರ್ಗಗಳಿಗೆ. ಈ ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯವನ್ನು ಅವರಲ್ಲದೆ ಮತ್ಯಾರು ಹೊರಬೇಕಾಗಿದೆ? ಅವರು ಅಧಿಕಾರ ಲಾಲಸೆಗೆ ಮಾಡಿದ ಕರಾಳ ಸ್ವರೂಪದ ಅನ್ಯಾಯದ ನಡೆಯನ್ನು ಇಂದಿಗೂ ಅಮಾಯಕ ಹಿಂದುಳಿದ ವರ್ಗ ಅತ್ಯಂತ ಖೇದದಿಂದ ಅನುಭವಿಸಬೇಕಾಗಿದೆ. ಕ್ರೂರ ವ್ಯಂಗ್ಯವೆಂದರೆ ಈ ಮೀಸಲಾತಿ ಪಟ್ಟಿ ಬಿಡುಗಡೆಯ ನಂತರ ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತು ಗಳಿಸಿದ ವಿಧಾನಸಭಾ ಸದಸ್ಯರ ಸಂಖ್ಯೆ ಕೇವಲ 34!. ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಮಹದಾಸೆಯಿಂದ ವೀರಪ್ಪ ಮೊಯ್ಲಿಯವರು ಯಥಾರ್ಥ ಹಿಂದುಳಿದ ವರ್ಗಗಳನ್ನು ಆಳ ಕಮರಿಗೆ ತಳ್ಳಿದರು!
ನವೆಂಬರ್ 16,1992ರಲ್ಲಿ ಇಂದಿರಾ ಸಹಾನಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮೀಸಲಾತಿ ಕೋಟಾ ಶೇ.50 ರಷ್ಟನ್ನು ಮೀರಬಾರದೆಂದು ಸರಕಾರಗಳಿಗೆ ನಿರ್ದೇಶನ ನೀಡಿತ್ತು. ವಸ್ತುಸ್ಥಿತಿ ಹೀಗಿದ್ದರೂ, ಕಾಯ್ದೆ ತರುವುದರ ಮೂಲಕ ಒಟ್ಟಾರೆ ಮೀಸಲಾತಿಯನ್ನು ಶೇ.73ಕ್ಕೆ ಹೆಚ್ಚಿಸಿದ್ದು ಬಲಿಷ್ಠರ ಬೆದರಿಕೆಗೆ ಮಣಿದು ಅರ್ಹ ಹಿಂದುಳಿದವರಿಗೆ ಘನ ಘೋರ ಅನ್ಯಾಯವೆಸಗಲಾಯಿತು.
ಮೀಸಲಾತಿ ಕೋಟಾ ಶೇ.50ಕ್ಕಿಂತ ಹೆಚ್ಚು ಮಾಡಿರುವುದನ್ನು, ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ನ್ಯಾಯಾಲಯ ಮೀಸಲಾತಿ ಕೋಟಾವನ್ನು ಶೇ.50ಕ್ಕೆ ಇಳಿಸಿ ಅಥವಾ ನ್ಯಾಯಾಲಯದ ವ್ಯತಿರಿಕ್ತ ಆಜ್ಞೆಯನ್ನು ಎದುರಿಸಿ ಎಂದಾಗ, ಅವಸರದಲ್ಲಿ, ಎಲ್ಲಾ ಐದು ಪ್ರವರ್ಗಗಳ ಮೀಸಲಾತಿ ಕೋಟಾವನ್ನು ಶೇ. 50ಕ್ಕೆ ಇಳಿಸಿ ಮೀಸಲಾತಿಗೆ ಅರ್ಹರು ಮತ್ತು ಅನರ್ಹರನ್ನು ಸಮಾಧಾನಿಸುವ ದಿಸೆಯಲ್ಲಿ ಕ್ರಮ ಕೈಗೊಂಡು ಸೆಪ್ಟಂಬರ್ 17, 1994ರಂದು ಸರಕಾರ ಮರು ಆದೇಶ ಹೊರಡಿಸಿತು. ಇದರಿಂದಾಗಿ, ಕರ್ನಾಟಕದ ಒಟ್ಟು ನಾಗರಿಕರಲ್ಲಿ ಮೀಸಲಾತಿಗೊಳಪಟ್ಟವರು ಸಂಖ್ಯೆ ಶೇ.95 ಕ್ಕಿಂತ ಹೆಚ್ಚು. ಸರಕಾರದ ಓಲೈಕೆ ರಾಜಕಾರಣದ ಫಲದಿಂದ ಇಂದಿಗೂ ನ್ಯಾಯೋಚಿತವಾಗಿ ಸಿಗಬೇಕಾದ ಮೀಸಲಾತಿ ಕೋಟಾ ಸಿಗದೇ ನೋವು ಅನುಭವಿಸುತ್ತಿರುವವರು ಮಾತ್ರ ಹಿಂದುಳಿದ ವರ್ಗದವರು. ಸರಕಾರದ ಈ ಪರಮ ಅನ್ಯಾಯವನ್ನು ಇಂದಿಗೂ ಯಾವ ಹಿಂದುಳಿದ ವರ್ಗದವರೂ ಪ್ರಶ್ನಿಸುವ ಗೊಡವೆಗೆ ಹೋಗದಿರುವುದು ಮಾತ್ರ ಅವರ ಅಮಾಯಕತನವೋ ಅಥವಾ ಬಲಿಷ್ಠರಿಂದ ಬರಬಹುದಾದ ಭಯವೋ ತಿಳಿಯದು!
ಸರ್ವೋಚ್ಚ ನ್ಯಾಯಾಲಯ ಇಂದ್ರಾ ಸಹಾನಿ ಪ್ರಕರಣದಲ್ಲಿ ನೀಡಿರುವ ನಿರ್ದೇಶನದಂತೆ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಶಾಶ್ವತವಾಗಿ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿ ಕೊಂಡಿವೆ. ಆದರೆ, ಆಯೋಗದ ರಚನೆಗೆ ಕಾರಣವಾದ ಕಾಯ್ದೆಯಲ್ಲಿ ಹೇಳಲಾಗಿರುವ ಅಂಶಗಳನ್ವಯ ನಡೆದುಕೊಳ್ಳದಿರುವುದೂ ಕೂಡ ಹಿಂದುಳಿದ ವರ್ಗಗಳಿಗೆ ಮೇಲೇಳಲಾಗದಂತಹ ಬಲವಾದ ಪೆಟ್ಟು ಬಿದ್ದಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆಯಂತೆ ಪ್ರತೀ ಹತ್ತು ವರ್ಷಗಳಿಗೊಮ್ಮೆ ಪಟ್ಟಿಯನ್ನು ಪರಿಶೀಲನೆಗೊಳಪಡಿಸಬೇಕು.
ಅದನ್ನು ಕೂಡ ಸರಕಾರ ಮಾಡಲು ಮೀನಾ-ಮೇಷ ಎಣಿಸುತ್ತಿದೆ. ಅದರ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರವಿದೆ ಎಂಬುದು ಸರ್ವವಿಧಿತ.
ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ವರದಿ ಆಧಾರಿತ ಮೀಸಲಾತಿಯನ್ನು ಹೊರಡಿಸಿದ ಮೇಲೆ, ಶಾಶ್ವತವಾಗಿ ರಚಿಸಲಾದ ಹಿಂದುಳಿದ ವರ್ಗಗಳ ಆಯೋಗಗಳ ಸಲಹೆ ಮೇರೆಗೆ, ಕಾಲಕಾಲಕ್ಕೆ, ಕೆಲವು ಹಿಂದುಳಿದ ಜಾತಿಗಳನ್ನು ಪಟ್ಟಿಗೆ ಸೇರಿಸಿಕೊಂಡು ಬರಲಾಗುತ್ತಿದೆ. ಪ್ರೊ. ರವಿವರ್ಮ ಕುಮಾರ್ ಆಯೋಗದ ವರದಿ ಆಧರಿಸಿ ಸರಕಾರ 2002ರಲ್ಲಿ ತೆಲಗು ಗೌಡ, ಕುರ್ನಿ, ಬಾರ್ಕಿ, ನಾಥಪಂತಿ, ಉಪ್ಪಿನ ಕೊಳಗ/ಉತ್ತಮ ಕೊಳಗ, ದಾಸ ಬಣಜಿಗ, ಹಣಬ, ಮುತ್ರಾಸಿ/ಮುಟ್ರಾಚ, ಸುಗಂಧಿ ಲಾಡ್ ಮತ್ತು ಕ್ಷತ್ರಿಯ ಲಾಡ್, ಮೆಸ್ತ, ನಾಯಿಂದ/ಭಂಡಾರಿ/ಸವಿತಾ, ಕುಳವಾಡಿ ಮರಾಠಿ, ಕುಂಬ್ರಿ ಮರಾಠಿ, ಬಣ್ಣ, ನಾಯಿರಿ, ಬಗ್ಗರು, ಕುಣಬಿ, ನಾಮಧಾರಿ ಗೌಡ, ತೊಗಟ, ಕೊಂಕಣ್ ಮರಾಠ, ಗುಣಗಿ, ಉಷ್ಟಮ ಮುಂತಾದವು. ಡಾ.ಸಿ.ಎಸ್. ದ್ವಾರಕಾನಾಥ್ ಆಯೋಗದ ಶಿಫಾರಸಿನ ಮೇರೆಗೆ ಅರಸು ಮತ್ತು ಕಾಡುಗೊಲ್ಲ/ಹಟ್ಟಿಗೊಲ್ಲ ಜಾತಿಗಳನ್ನು ಪಟ್ಟಿಗೆ ಸೇರಿಸಲಾಯಿತು. ಈ ಜಾತಿ-ಉಪ ಜಾತಿಗಳು ಹಿಂದುಳಿದ ವರ್ಗಗಳಾಗಿ ಸೇರಲು ಅರ್ಹತೆ ಪಡೆದಿವೆ ಎಂದು ಆಯೋಗವೇ ಸಲಹೆ ನೀಡಿದೆ. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ 2009ರಲ್ಲಿ ಲಿಂಗಾಯತರ ಉಪಜಾತಿ ಪಂಚಮಸಾಲಿಯೂ ಸೇರಿದಂತೆ 9 ಲಿಂಗಾಯತ ಉಪಜಾತಿಗಳನ್ನು ಪಟ್ಟಿಗೆ ಸೇರಿಸಿದರು. ಬಲಿಜ ಜಾತಿಯು ಪ್ರವರ್ಗ- 3ಎನಲ್ಲಿ ಸ್ಥಾನ ಪಡೆದುಕೊಂಡಿದೆ. ಆ ಸಮುದಾಯದವರು ಪ್ರವರ್ಗ- 2ಎಗೆ ಸೇರಿಸಲು, ಕೈಗೊಂಡ ಹೋರಾಟಕ್ಕೆ ಓಗೊಟ್ಟ ಯಡಿಯೂರಪ್ಪ ಸರಕಾರ ಕೋರಿಕೆಯಂತೆ ಶಿಕ್ಷಣ ಮತ್ತು ಉದ್ಯೋಗ ಎರಡಕ್ಕೂ ಅನ್ವಯಿಸುವ ಹಾಗೆ ಪ್ರವರ್ಗ- 2ಎಗೆ ಸೇರಿಸಿತು. ಪ್ರವರ್ಗ-2ಎ ಯಲ್ಲಿರುವ ಜಾತಿ ಸಮುದಾಯಗಳ ವಿರೋಧದಿಂದಾಗಿ ಶಿಕ್ಷಣಕ್ಕೆ ಅನ್ವಯಿಸುವಂತೆ ಮಾತ್ರ ಪ್ರವರ್ಗ-2ಎಯಲ್ಲಿ ಉಳಿಸಿ ಉದ್ಯೋಗಕ್ಕೆ ಅನ್ವಯಿಸುವಂತೆ ಮತ್ತೆ ಪ್ರವರ್ಗ-3 ಎಗೆ ಸೇರಿಸಿ ಸರಕಾರ ಕೈ ತೊಳೆದುಕೊಂಡಿತು. ಈ ಆದೇಶವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ ಅದು ಸರಕಾರದ ಮಟ್ಟದಲ್ಲಿ ಇತ್ಯರ್ಥಪಡಿಸಿಕೊಳ್ಳಲು ನಿರ್ಣಯ ನೀಡಿತು. ಆ ಬಗ್ಗೆ ಸರಕಾರ ಯಾವುದೇ ತೀರ್ಮಾನ ತೆಗೆದುಕೊಂಡ ಹಾಗೆ ಕಾಣುತ್ತಿಲ್ಲ. ಇನ್ನೂ ಕೆಲವು ಜಾತಿ ಉಪಜಾತಿಗಳನ್ನು ಆಯೋಗದ ಸಲಹೆಯಂತೆ ಸರಕಾರ ಸೇರಿಸಲು ತನ್ನ ಚಾಂದಸಿಕೆಯಿಂದ ಕ್ರಮ ಕೈಗೊಂಡಿಲ್ಲ. ಆದರೆ ಅಂಥ ನಿರ್ಭಾಗ್ಯರಿಗೆ ಆ ಭಾಗ್ಯ ಇನ್ನೂ ಕೂಡಿಬಂದಿಲ್ಲ. ಅಂತಹ ಒಂದು ಸಮುದಾಯವೆಂದರೆ -ಶೆಟ್ಟಿಗಾರ/ಸೆಟ್ಟಿಗಾರ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇರುವ ಈ ಸಮುದಾಯ ಪದ್ಮಶಾಲಿಯ ಉಪಜಾತಿಯಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಕ್ಷಿಪ್ರಗತಿಯ ಪ್ರಯತ್ನದ ನಡುವೆಯೂ ಮೀಸಲಾತಿ ಪಟ್ಟಿಗೆ ಸರಕಾರ ಸೇರಿಸಿಲ್ಲದಿರುವುದರ ಉಮ್ಮಳವನ್ನು ಅವರು ಯಾರ ಬಳಿ ಹೇಳಿಕೊಳ್ಳಬೇಕು?
ಪಂಚಮಸಾಲಿ ಪ್ರಯತ್ನ:
ಲಿಂಗಾಯತರ ಉಪ ಜಾತಿಯಾದ ಪಂಚಮಸಾಲಿಯನ್ನು ಪ್ರವರ್ಗ-3ಬಿಯಿಂದ ಪ್ರವರ್ಗ-2ಎಗೆ ಸೇರಿಸಲು, ಆ ಸಮುದಾಯದವರು, ಕುಲಗುರುಗಳ ನೇತೃತ್ವದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ತೀವ್ರ ರೀತಿಯ ಹೋರಾಟ ಹಮ್ಮಿಕೊಂಡು ಬರುತ್ತಿದ್ದಾರೆ. ಬಿಜೆಪಿಯ ಬಸವರಾಜ ಬೊಮ್ಮಾಯಿ ಸರಕಾರ ಅವರ ಕೋರಿಕೆಯನ್ನು ಮನ್ನಿಸುವ ಪ್ರಹಸನ ನಡೆಸಿ ಬೇರೊಂದು ನಿರ್ಣಯವನ್ನು ಕೈಗೊಂಡಿತು. ಆ ಪ್ರಕಾರ ಪ್ರವರ್ಗ-3ಎಯನ್ನು ಪ್ರವರ್ಗ -2ಸಿ ಎಂದು ಹಾಗೆಯೇ ಪ್ರವರ್ಗ -3 ಬಿಯನ್ನು ಪ್ರವರ್ಗ ಡಿ ಎಂದು, ವರ್ಗ ಬದಲಾಯಿಸಿದ್ದೇ ಅಲ್ಲದೆ, ಪ್ರವರ್ಗ-2 ಬಿಯಲ್ಲಿದ್ದ ಮುಸ್ಲಿಮ್ ಸಮುದಾಯವನ್ನು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಿಂದಲೇ ಕೈಬಿಟ್ಟಿತು. ಮೀಸಲಾತಿಯಿಂದ ಕೈ ಬಿಟ್ಟ ಈ ಉಪದ್ವಾಪವನ್ನು ಮುಸ್ಲಿಮ್ ಸಮುದಾಯ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ, ಬೊಮ್ಮಾಯಿ ಸರಕಾರ ಶಪಥ ಪತ್ರವನ್ನು ಸಲ್ಲಿಸಿ, ಮುಸ್ಲಿಮ್ ಸಮುದಾಯ ಪ್ರವರ್ಗ -2ಬಿಯಲ್ಲೇ ಮುಂದುವರಿಯುತ್ತದೆ ಎಂದು ಹೇಳಿತು. ಸರಕಾರದ ಈ ಚದುರಂಗದಾಟವನ್ನು ಅರಿತ ಪಂಚಮಸಾಲಿ ಸಮುದಾಯವು ಸಿಟ್ಟಿಗೆದ್ದಿತೇ ವಿನಾ ಮತ್ತೇನನ್ನೂ ಮಾಡಲು ಸಾಧ್ಯವಾಗಲಿಲ್ಲ!
ರಾಜಕೀಯ ಮೀಸಲಾತಿ:
ಕೆ. ಕೃಷ್ಣಮೂರ್ತಿ ಪ್ರಕರಣದಲ್ಲಿ ಎರಡು ಷರತ್ತನ್ನು ಸರ್ವೋಚ್ಚ ನ್ಯಾಯಾಲಯ ವಿಧಿಸಿತ್ತು. ಅದರಂತೆ ಶೇ. 50 ರಷ್ಟಕ್ಕೆ ಮೀಸಲಾತಿಯನ್ನು ಇಳಿಸಬೇಕು ಮತ್ತು ತ್ರಿಸ್ತರ( triple test) ಪರೀಕ್ಷೆಗೂ ಒಳಪಡಿಸಬೇಕು ಎಂದು. ಆದರೆ ಈತನಕವೂ ಸರಕಾರಗಳು ಕುಂಟು ನೆಪಗಳನ್ನು ಹೇಳುತ್ತಾ ನ್ಯಾಯಾಲಯದಿಂದ ತಪ್ಪಿಸಿಕೊಂಡು ಬರುತ್ತಿವೆ. ಈ ನಡುವೆ ನ್ಯಾ. ಭಕ್ತವತ್ಸಲ ಸಮಿತಿ ಏರ್ಪಡಿಸಿ ವರದಿ ತೆಗೆದುಕೊಂಡಿದೆ. ವರದಿಯಲ್ಲಿ ಏನಿದೆ ಮತ್ತು ಏನಾಗಿದೆ ಎಂಬುದು ಯಾವ ಸಾರ್ವಜನಿಕನಿಗೂ ತಿಳಿದಿಲ್ಲ.
ಪ್ರಮುಖವಾಗಿ ‘ಕರ್ನಾಟಕ’ದಲ್ಲಿ(1973ರ ನಂತರ) ಮೀಸಲಾತಿ ಬಗ್ಗೆ ಸರಕಾರಗಳು ಕಾಲಕಾಲಕ್ಕೆ ತೆಗೆದುಕೊಂಡ ತೀರ್ಮಾನಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಈ ಮೀಸಲಾತಿ ಕೇವಲ ರಾಜ್ಯ ಸರಕಾರಕ್ಕೆ ಮಾತ್ರ ಅನ್ವಯಿಸುತ್ತದೆ. ಒಟ್ಟಿನಲ್ಲಿ ಸರಕಾರಗಳು ತೆಗೆದುಕೊಂಡಿರುವ ತೀರ್ಮಾನಗಳಿಂದ ಹಿಂದುಳಿದ- ಅತಿ ಹಿಂದುಳಿದ ಮತ್ತು ಅಲೆಮಾರಿ ಅರೆ ಅಲೆಮಾರಿಗಳಿಗೆ ಸಂವಿಧಾನಬದ್ಧ ನ್ಯಾಯ ದೊರಕದಿರುವುದಂತೂ ಅವರ ಪಾಲಿನ ವ್ಯಸನ ವ್ಯಸನವಾಗಿಯೇ ಉಳಿದಿದೆ. ಸರಕಾರವೇ ಈ ದೆಸೆಯಲ್ಲಿ ಉದಾಸೀನ ತೋರಿಸಿದರೆ ಅವರು ವ್ಯಸನ ಮುಕ್ತರಾಗುವುದು ಹೇಗೆ? ಇವುಗಳ ಅನಾಥ ರಾಜಕೀಯ-ಆರ್ಥಿಕ-ಸಾಮಾಜಿಕ ತುಚ್ಛ ಅವಸ್ಥೆಗೆ ಯಾವ ರಾಜಕೀಯ ಪಕ್ಷವೂ ಹೊರತಲ್ಲ ಎಂಬುದು ಖರೆ.