ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಮತೀಯ ರಾಜಕಾರಣ ಎಳೆದು ತರುತ್ತಿರುವ ಬಿಜೆಪಿ

Update: 2024-11-13 09:29 GMT

ಸರ್ಕಾರಿ ಕಾಮಗಾರಿ ಗುತ್ತಿಗೆಯಲ್ಲಿ ಅತಿಹಿಂದುಳಿದ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ಕಲ್ಪಿಸುವ ವಿಚಾರವನ್ನು ಬಿಜೆಪಿ ಎಂದಿನಂತೆ ಮತೀಯ ರಾಜಕಾರಣಕ್ಕೆ ಎಳೆದು ತಂದು ವಿವಾದವಲ್ಲದ ವಿಷಯವನ್ನು ವಿವಾದವಾಗಿಸುವ ಕುತಂತ್ರ ಹೆಣೆದಿದೆ.

ಕಳೆದ ಆಗಸ್ಟ್‌ನಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸಚಿವರಾದ ಝಮೀರ್ ಆಹ್ಮದ್ ಖಾನ್, ಶಾಸಕರಾದ ಸಲೀಂ ಅಹ್ಮದ್, ತನ್ವೀರ್ ಸೇಠ್, ಬಲ್ಕೀಶ್ ಬಾನು, ರಹೀಂ‌ ಖಾನ್, ಎ ಎನ್ ಹಾರೀಸ್ ಮುಂತಾದವರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಓಬಿಸಿ ಕೆಟಗರಿ 2 ಅಡಿಯಲ್ಲಿ ಮುಸ್ಲಿಮರಿಗೆ ಸರ್ಕಾರಿ ಕಾಮಗಾರಿ ಗುತ್ತಿಗೆಯಲ್ಲಿ 4% ಮೀಸಲಾತಿ ಕಲ್ಪಿಸುವಂತೆ ಮನವಿ ಮಾಡಿಕೊಂಡಿತು.

ಈ ಬಗ್ಗೆ ಪರಿಶೀಲನೆ ನಡೆಸಿ 1999 ರ ಕೆಟಿಟಿಪಿ‌ ಕಾಯ್ದೆ 6 ನೇ ಪ್ರಕರಣಕ್ಕೆ ತಿದ್ದುಪಡಿ ತರುವ ಬಗ್ಗೆ ಮುಖ್ಯಮಂತ್ರಿ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದರೆನ್ನಲಾಗಿದೆ.

ಇದೀಗ ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ವಿಧಾನಸಭಾಕ್ಚೇತ್ರಗಳ ಉಪಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರಿಗೆ 4% ಗುತ್ತಿಗೆ ಮೀಸಲಾತಿ‌ ನೀಡಲಾಗಿದೆ ಎಂಬ ವಿಷಯ ಮುನ್ನಲೆಗೆ ಬಂದಿದ್ದು ಮತರಾಜಕಾರಣದ ಅಸ್ತ್ರವನ್ನಾಗಿಸಿಕೊಳ್ಳಲು ಬಿಜೆಪಿ ಪ್ರಯತ್ನ ನಡೆಸಿದೆ.

ಕಾಂಗ್ರೆಸ್ ಮುಸ್ಲಿಂ ತುಷ್ಠೀಕರಣ ಮಾಡುತ್ತಿದೆ ಎಂಬ ಯಥಾ ಆರೋಪಕ್ಕಿಳಿದಿರುವ ಬಿಜೆಪಿ ಈ ಚುನಾವಣೆಗಳಲ್ಲಿ ಧರ್ಮಾಧಾರಿತವಾಗಿ ಮತಕ್ರೂಢೀಕರಣಕ್ಕೆ ಮುಂದಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯಕ್ಕೆ ಸ್ವಾತಂತ್ರ್ಯ ಪೂರ್ವದಿಂದಲೂ ಆರ್ಥಿಕ‌ಸ್ಥಿತಿ ಆಧಾರಿತ ಮೀಸಲಾತಿ ನೀಡುತ್ತಾ ಬರಲಾಗಿದೆ. ಸ್ವಾತಂತ್ರ್ಯ ನಂತರವೂ ಮುಸ್ಲಿಂ ಸಮುದಾಯದ ಆರ್ಥಿಕ, ಶೈಕ್ಷಣಿಕ ಸ್ಥಿತಿಗಳನ್ನು ಆಧರಿಸಿ ಮೀಸಲಾತಿ‌ ಮ್ಯಾಟ್ರಿಕ್ಸ್ ವಿಭಜಿಸಿದ್ದು, ಅತಿ ಹಿಂದುಳಿದ ಮುಸ್ಲಿಮರಿಗೆ ಕೆಟರಿಗೆ 2 ನಲ್ಲಿ ಮೀಸಲಾತಿ ನೀಡುತ್ತಾ ಬರಲಾಗಿದೆ.

ನಾಗನಗೌಡ ವರದಿ, ಮಿಲ್ಲರ್ ವರದಿ, ಚಿನ್ನಪ್ಪ ರೆಡ್ಡಿ ವರದಿ, ಎಲ್ ಜಿ ಹಾವನೂರು ವರದಿ, ಪ್ರೋ.ರವಿವರ್ಮ ಕುಮಾರ್ ವರದಿಗಳಲ್ಲಿ ಮುಸ್ಲಿಮರಿಗೆ ಹಿಂದುಳಿದ ವರ್ಗಗಳ ಖೋಟಾದಲ್ಲಿ ಮೀಸಲಾತಿ ಕೊಡುವುದನ್ನು ಸ್ಪಷ್ಟವಾಗಿ ಗುರುತಿಸಿವೆ.

ಆದರೆ ಮುಸ್ಲಿಮರಿಗೆ ಧರ್ಮಾಧಾರಿತವಾಗಿ ಮೀಸಲಾತಿ ನೀಡಲಾಗುತ್ತಿದೆ, ಇತರೆ ಹಿಂದೂಗಳ ಮೀಸಲಾತಿ ಕಸಿದು ಮುಸ್ಲಿಂರಿಗೆ ಕೊಡಲಾಗುತ್ತಿದೆ ಎಂಬ ಸುಳ್ಳನ್ನು ಬಿಜೆಪಿ ಮತ್ತು‌ ಅದರ ಸಹ ಸಂಘಟನೆಗಳು ಬಿತ್ತತೊಡಗಿವೆ. ಇದರ ಹಿಂದೆ ಹಿಂದೂ ಮತ ಧ್ರುವೀಕರಣದ ರಾಜಕಾರಣ ಅಡಗಿದೆ.

ಅಷ್ಟಕ್ಕೂ ಯಾವುದೇ ಜಾತಿ,ಧರ್ಮ,ವರ್ಗಗಳ ಜನಸಮುದಾಯ ಸರ್ಕಾರಗಳ ಮುಂದೆ ಸವಲತ್ತು ಕೇಳುವುದು ಅವರ ಹಕ್ಕಾಗಿದೆ.

ಕಾನೂನು ವ್ಯಾಪ್ತಿಯೊಳಗೆ ಅವುಗಳನ್ನು ಈಡೇರಿಸುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಮುಸ್ಲಿಂ ಸಮುದಾಯ ಗುತ್ತಿಗೆಯಲ್ಲಿ 4% ರಷ್ಟು ಮೀಸಲಾತಿ ಕೇಳಿದ್ದರಲ್ಲಿ ತಪ್ಪಾದರೂ ಏನಿದೆ? ಹಾಗೊಮ್ಮೆ ಇದನ್ನು ಸರ್ಕಾರ ತಿದ್ದುಪಡಿ ತಂದು ಜಾರಿಗೊಳಿಸಿದರೆ ಆಗುವ ನಷ್ಟವಾದರೂ ಏನು? ಇತರೆ ಎಲ್ಲಾ ಧರ್ಮ, ಜಾತಿಗಳಿಗಿರುವಂತೆ ಈ ದೇಶದಲ್ಲಿ ಮುಸ್ಲಿಮರಿಗೂ ಸಮಪಾಲನ್ನು ಕೇಳುವ ಹಕ್ಕಿದೆ.

ಈ ದೇಶದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಮತೀಯ ರಾಜಕಾರಣ ಮಾಡುವ ವಿಕೃತ ಸಂಪ್ರದಾಯ ದೇಶದ ಐಕ್ಯತೆ ಮತ್ತು ಸಂವಿಧಾನದ ಆಶಯವನ್ನು ಬುಡಮೇಲು ಮಾಡುವುದಾಗಿದೆ.

ಮೀಸಲಾತಿ ವಿಚಾರ ಬಂದಾಗ ಮುಸ್ಲಿಮರನ್ನು ವಿರೋಧಿಸುವವರು, ಮುಂದುವರೆದ ಜಾತಿಗಳಿಗೆ ಶೇ 10 ಮೀಸಲಾತಿಯನ್ನು ರಾತ್ರೋರಾತ್ರಿ ಜಾರಿಗೊಳಿಸಿ ಮೀಸಲಾತಿಯ ಮೌಲ್ಯವನ್ನು ದಿವಾಳಿ ಎಬ್ಬಿಸಿದ ಬಗ್ಗೆ ತುಟಿಬಿಚ್ಚದಿರುವುದು ವಿಪರ್ಯಾಸ.

2023 ರಲ್ಲಿ ವಿಧಾನ ಸಭಾ ಚುನಾವಣೆಗೆ 1ತಿಂಗಳಿರುವಾಗಲೆ ಮುಸ್ಲಿಮರಿಗಿದ್ದ ಶೇ 4 ರಷ್ಟು ಮೀಸಲಾತಿಯನ್ನು ರದ್ದುಪಡಿಸಿ ಲಿಂಗಾಯಿತ, ಒಕ್ಕಲಿಗರಿಗೆ ಹಂಚಿದ ಅಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನಂತರ ಸುಪ್ರೀಂ ಕೋರ್ಟ್ ನಲ್ಲಿ ಮೀಸಲಾತಿ ರದ್ದುಪಡಿಸುವುದಿಲ್ಲ ಎಂದು ಬರೆದುಕೊಟ್ಟು ನ್ಯಾಯಾಲಯದ ಛೀಮಾರಿಯಿಂದ ಪಾರಾಯಿತು.

ಕೆಟಿಟಿಪಿ ಕಾಯ್ದೆಯಡಿ ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ4 ರಷ್ಟು ಮೀಸಲಾತಿ ಕಲ್ಪಿಸುವುದು ನ್ಯಾಯಬದ್ದವಾಹಿರುವಾಗ ಈ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಬಿಜೆಪಿಗರ ಅಪಪ್ರಚಾರಕ್ಕೆ ಬೆದರಿ ಹಿಂದೆ ಸರಿದಂತೆ ಮಾತಾಡುತ್ತಿದೆ. ಇದು ಸರಿಯಲ್ಲ. ಕಾಂಗ್ರೇಸ್ ಸರ್ಕಾರ ಈ ಮೀಸಲಾತಿ ವಿಚಾರದಲ್ಲಿ ಸ್ಪಷ್ಟ ನಿಲುವು ಪ್ರಕಟಿಸಬೇಕು. ಕಾಂಗ್ರೆಸ್ ತನ್ನ ಸೈದ್ಧಾಂತಿಕ ದಿಟ್ಟತನವನ್ನು ಪ್ರದರ್ಶಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರವಿ ಕುಮಾರ್ ಟೆಲೆಕ್ಸ್

contributor

Similar News