ಅರಣ್ಯ ಅಳಿದರೆ ಜೀವಸಂಕುಲ ಉಳಿದೀತೇ?

ಅರಣ್ಯವೆಂದರೆ ಬರೀ ಮರ, ಗಿಡಗಳಷ್ಟೇ ಅಲ್ಲ. ಬದಲಿಗೆ ಅವು ಹೊರ ಸೂಸುವ ಗಾಳಿ, ಹಿಡಿದಿಟ್ಟ ಮಣ್ಣು, ಘನೀಕರಿಸಿದ ಮೋಡ, ಸುರಿವ ಮಳೆ, ಹರಿವ ನೀರು ಎಲ್ಲವೂ ಹೌದು. ಮಿಗಿಲಾಗಿ ಅವನ್ನು ಆಶ್ರಯಿಸಿರುವ ರಾಶಿ ರಾಶಿ ಪ್ರಾಣಿ-ಪಕ್ಷಿಗಳೂ ಹುಳ-ಹುಪ್ಪಟೆಗಳೂ ಸೂಕ್ಷ್ಮ ಜೀವಿಗಳೂ ಹೌದು. ಜೊತೆಗೆ ಇವನ್ನೆಲ್ಲಾ ಯಾವ ಇಂಜಿನಿಯರನೂ, ನೇತಾರನೂ ಅದೆಷ್ಟು ಕೋಟಿ ಹಣವಿದ್ದರೂ ಏಕಾಏಕಿ ನಿರ್ಮಿಸಿ ಕೊಡಲಾರ. ಒಳಹೊಕ್ಕಷ್ಟೂ ನಿಗೂಢಗೊಳ್ಳುತ್ತಲೇ ಸಾಗುವ ಈ ಸಂಕೀರ್ಣ ಜೀವ ವ್ಯವಸ್ಥೆಯ ಆಗರ ರೂಪುಗೊಳ್ಳಲು ನೂರಾರು, ಸಾವಿರಾರು ವರುಷಗಳಾಗಲೇ ಬೇಕು ಎಂಬ ಅರಿವು ನಮ್ಮೆಲ್ಲರಲ್ಲಿ ಮೂಡಬೇಕಿದೆ.;

Update: 2025-03-21 11:48 IST
ಅರಣ್ಯ ಅಳಿದರೆ ಜೀವಸಂಕುಲ ಉಳಿದೀತೇ?
  • whatsapp icon

ಪ್ರತೀ ವರ್ಷ ಮಾರ್ಚ್ 21ನ್ನು ಪ್ರಪಂಚದಾದ್ಯಂತ ಆಂತರ್‌ರಾಷ್ಟ್ರೀಯ ಅರಣ್ಯ ದಿನವನ್ನಾಗಿ ಆಚರಿಸಲಾಗುತ್ತದೆ.

ಈ ಆಚರಣೆಯ ಉದ್ದೇಶ ಅರಣ್ಯಗಳ ಮಹತ್ವವನ್ನು ಜನರಿಗೆ ತಿಳಿ ಹೇಳುವುದು ಮತ್ತು ಅರಣ್ಯಗಳ ಸಂರಕ್ಷಣೆಗಾಗಿ ಕ್ರಮಗಳನ್ನು ಕೈಗೊಳ್ಳಲು ಜನರನ್ನು ಪ್ರೇರೇಪಿಸುವುದೇ ಆಗಿದೆ.

ಈ ದಿನವನ್ನು ನಮ್ಮ ಕರ್ನಾಟಕದಲ್ಲಿಯೂ ಪ್ರತೀ ವರ್ಷ ಆಚರಿಸಲಾಗುತ್ತದೆ.

ಹಾಗೆ ನೋಡಿದರೆ ನಮ್ಮ ಕರ್ನಾಟಕವು ಸಮೃದ್ಧ ಅರಣ್ಯ ಭೂಮಿಯನ್ನು ಹೊಂದಿದ ರಾಜ್ಯವಾಗಿದ್ದು, ಪ್ರಾಕೃತಿಕವಾಗಿ ಶ್ರೀಮಂತವಾಗಿದೆ. ಇಲ್ಲಿನ ಸುಂದರ ಪಶ್ಚಿಮ ಘಟ್ಟ ಪ್ರದೇಶಗಳು, ಉಷ್ಣವಲಯದ ಮಳೆ ಕಾಡುಗಳು, ನಿತ್ಯಹರಿದ್ವರ್ಣದ ಕಾಡುಗಳು ಲಕ್ಷಾಂತರ ಜೀವರಾಶಿಗಳಿಗೆ ಆಧಾರವಾಗಿವೆ. ಅಲ್ಲದೆ ಬಂಡೀಪುರ, ನಾಗರ ಹೊಳೆ, ಕುದುರೆಮುಖದಂತಹ ಹತ್ತು ಹಲವು ಸಂರಕ್ಷಿತ ಪ್ರದೇಶಗಳು, ರಾಷ್ಟ್ರೀಯ ಉದ್ಯಾನ ವನಗಳು ಹುಲಿ, ಆನೆ, ಕಪ್ಪು ಚಿರತೆ, ಸಿಂಗಳೀಕ, ಕೆಂದಳಿಲು ಮುಂತಾದ ಅಪರೂಪದ ಜೀವಿಗಳ, ನೂರಾರು ಬಗೆಯ ಪಕ್ಷಿಗಳ, ಚಿಟ್ಟೆಗಳ, ಅಪರೂಪದ ಕೀಟಗಳ ಆಶ್ರಯತಾಣವಾಗಿದ್ದು ಜೀವವೈವಿಧ್ಯತೆಯನ್ನು ಪೋಷಿಸುತ್ತಿವೆ.

ಈ ಮೂಲಕ ಹಿಮಾಲಯ ಹೊರತುಪಡಿಸಿ ಭಾರತದ ಅತೀ ಹೆಚ್ಚು ಜೀವವೈವಿಧ್ಯತೆಯನ್ನು ಹೊಂದಿದ ರಾಜ್ಯಗಳಲ್ಲಿ ಕರ್ನಾಟಕವೂ ಒಂದೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಅಲ್ಲದೆ ಇಲ್ಲಿನ ಅರಣ್ಯಗಳು ತೇಗ, ಬೀಟೆ, ಹೊನ್ನೆ, ಶ್ರೀಗಂಧದಂತಹ ಮರಗಳನ್ನೂ ಅಪಾರ ಸಂಖ್ಯೆಯಲ್ಲಿ ಒಳಗೊಂಡಿದ್ದು ಕರ್ನಾಟಕಕ್ಕೆ ಗಂಧದ ಗುಡಿ ಎಂಬ ಹೆಸರು ಬರಲೂ ಕಾರಣವಾಗಿವೆ.

ಇನ್ನು ಶರಾವತಿ, ತುಂಗಭದ್ರಾ, ಕಾವೇರಿ, ನೇತ್ರಾವತಿ, ಮಹಾದಾಯಿ ನದಿಗಳು ಕರ್ನಾಟಕದ ಅರಣ್ಯ ಪ್ರದೇಶಗಳಿಂದಲೇ ಹುಟ್ಟಿಕೊಂಡು ಲಕ್ಷಾಂತರ ಜನರಿಗೆ ನೀರಿನ ಆಸರೆಯಾಗಿವೆ.

ಜೊತೆಗೆ, ವನ್ಯಜೀವಿ ಪ್ರವಾಸೋದ್ಯಮ, ಕೃಷಿ ಮತ್ತು ವನ್ಯೋತ್ಪನ್ನಗಳ ಸಂಗ್ರಹಣೆಯ ಮೂಲಕ ಲಕ್ಷಾಂತರ ಜನರು ಜೀವನೋಪಾಯ ನಡೆಸಲೂ ಇಲ್ಲಿನ ಅರಣ್ಯಗಳು ಸಹಕಾರಿಯಾಗಿವೆ.

ಹಾಗೆಂದು ನಾವು ಇಷ್ಟಕ್ಕೆ ಖುಷಿ ಪಡಬೇಕಿಲ್ಲ. ಕರ್ನಾಟಕದಲ್ಲಿ ಅರಣ್ಯಗಳ ಮೇಲಾಗುತ್ತಿರುವ ದಾಳಿ, ಉಂಟಾಗುತ್ತಿರುವ ಜೀವವೈವಿಧ್ಯತೆಯ ಹಾನಿಯನ್ನೂ ನಾವು ಗಮನಿಸ ಬೇಕಿದೆ.

ಈ ಹಾನಿಯನ್ನು ಗಮನಿಸಲು ತಜ್ಞರ ವರದಿಗಳೇ ಬೇಕೆಂದೇನೂ ಇಲ್ಲ. ಪಂಪನ ಕಾಲಘಟ್ಟದ ಬನವಾಸಿಯ ವರ್ಣನೆ, ಕುವೆಂಪುರವರ ಕಾಲಘಟ್ಟದ ಮಲೆನಾಡಿನ ವರ್ಣನೆಯನ್ನು ಈಗಿನ ಅರಣ್ಯ ದಟ್ಟನೆಗೆ ಹೋಲಿಸಿದರೂ ಸಾಕು. ವ್ಯತ್ಯಾಸಗಳನ್ನು ಗುರುತಿಸಿ ಬಿಡಬಹುದಾಗಿದೆ. ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಕಾಲಘಟ್ಟದಲ್ಲಿ ಅರಣ್ಯ ಮನುಷ್ಯನನ್ನು ನಿಯಂತ್ರಿಸುವ ಅಗಾಧ ಶಕ್ತಿಯಾಗಿ ಕಂಡು ಬಂದರೆ ತೇಜಸ್ವಿಯವರ ‘ಜುಗಾರಿ ಕ್ರಾಸ್’ ಕಾಲಕ್ಕೆ ಅದು ಮನುಷ್ಯರ ನಿಯಂತ್ರಣಕ್ಕೆ ಒಳಪಟ್ಟ ವಿಷಯವಾಗಿ ಬಿಡುತ್ತದೆ.

ಅಂದರೆ ಮಿತಿ ಮೀರಿದ ಮರ ಕಡಿತ, ಗಣಿಗಾರಿಕೆ, ಕೃಷಿ ಭೂಮಿ ವಿಸ್ತರಣೆ, ನಗರಗಳ ಬೆಳವಣಿಗೆ ಸೇರಿದಂತೆ ಹಲವಾರು ಅಪಾಯಗಳು ಈ ಜೀವಪೋಷಕ ಅರಣ್ಯಗಳನ್ನು ನಾಶ ಮಾಡುತ್ತಲಿವೆ.

ಸಾಲದ್ದಕ್ಕೆ ಶರಾವತಿ ಕಣಿವೆ ಜಲವಿದ್ಯುತ್ ಯೋಜನೆ, ಎತ್ತಿನಹೊಳೆ ಯೋಜನೆಯಂತಹ ಅಭಿವೃದ್ಧಿ ಹೆಸರಿನ ಬೃಹತ್ ಯೋಜನೆಗಳು ದೊಡ್ಡ ಪ್ರಮಾಣದ ಅರಣ್ಯ ನಾಶಕ್ಕೆ ಕಾರಣವಾಗುತ್ತಿರುವುದಲ್ಲದೇ ಇಲ್ಲಿನ ಅನನ್ಯ ಜೀವಸಂಕುಲವನ್ನೂ ನಾಶಗೊಳಿಸುತ್ತಿವೆ.

ಒಮ್ಮೆ ಈ ಅರಣ್ಯ ನಾಶ ಅತಿಯಾಯಿತೆಂದರೆ ಜೀವವೈವಿಧ್ಯತೆಯ ನಾಶದ ಜೊತೆಗೆ ಉಸಿರಾಡಲು ಶುದ್ಧ ಗಾಳಿಯ ಕೊರತೆ, ಮಳೆಯ ಪ್ರಮಾಣದ ಕುಸಿತ, ಭೂಮಿಯ ಬರಡಾಗುವಿಕೆ, ಆಹಾರದ ಕೊರತೆ, ಭೂ ತಾಪಮಾನದ ಏರಿಕೆ ಇಂತಹವೇ ಹತ್ತು ಹಲವು ಬಗೆಯ ಸಮಸ್ಯೆಗಳು ತಲೆದೋರಿ ನಮ್ಮ ನಾಶಕ್ಕೂ ಮುನ್ನುಡಿ ಬರೆದಂತಾಗುತ್ತದೆ.

ಅದಕ್ಕೆಂದೇ ಅರಣ್ಯ ರಕ್ಷಣೆಯ, ಪರಿಸರ ಸೂಕ್ಷ್ಮತೆಯ ಅರಿವನ್ನು ನಾವು ಮೂಡಿಸಿ ಕೊಳ್ಳ ಬೇಕಿದೆ ಮತ್ತು ಇತರರಿಗೂ ಮೂಡಿಸಬೇಕಿದೆ.

ವಿಶೇಷವಾಗಿ ಇಂದು ಅಭಿವೃದ್ಧಿ ಹೆಸರಲ್ಲಿ ಅರಣ್ಯ ಕಡಿದು, ಯೋಜನೆ ಮಾಡ ಹೊರಟು ‘‘ಕಡಿದ ಒಂದು ಮರಕ್ಕೆ ಬದಲಾಗಿ ಹತ್ತು ಗಿಡ ನೆಡುತ್ತೇವೆ’’ ಎಂದು ಹೇಳುವವರಿಗೆಲ್ಲಾ ಬೇಕಾದರೆ ಒಂದೆರಡು ವರುಷಗಳಲ್ಲಿ ಕಟ್ಟಡವೊಂದನ್ನು ಕೆಡವಿ ಅಂತಹ ಹತ್ತು ಕಟ್ಟಡಗಳನ್ನು ನಿರ್ಮಿಸಬಹುದು. ಹೆಚ್ಚೆಂದರೆ ಉದ್ಯಾನವೊಂದನ್ನು ಬೆಳೆಸಬಹುದು. ಆದರೆ ಅರಣ್ಯವನ್ನಲ್ಲ ಎಂಬ ಅರಿವು ಮೂಡಿಸ ಬೇಕಿದೆ.

ಅರಣ್ಯವೆಂದರೆ ಬರೀ ಮರ, ಗಿಡಗಳಷ್ಟೇ ಅಲ್ಲ. ಬದಲಿಗೆ ಅವು ಹೊರ ಸೂಸುವ ಗಾಳಿ, ಹಿಡಿದಿಟ್ಟ ಮಣ್ಣು, ಘನೀಕರಿಸಿದ ಮೋಡ, ಸುರಿವ ಮಳೆ, ಹರಿವ ನೀರು ಎಲ್ಲವೂ ಹೌದು. ಮಿಗಿಲಾಗಿ ಅವನ್ನು ಆಶ್ರಯಿಸಿರುವ ರಾಶಿ ರಾಶಿ ಪ್ರಾಣಿ-ಪಕ್ಷಿಗಳೂ ಹುಳ-ಹುಪ್ಪಟೆಗಳೂ ಸೂಕ್ಷ್ಮ ಜೀವಿಗಳೂ ಹೌದು

ಜೊತೆಗೆ ಇವನ್ನೆಲ್ಲಾ ಯಾವ ಇಂಜಿನಿಯರನೂ, ನೇತಾರನೂ ಅದೆಷ್ಟು ಕೋಟಿ ಹಣವಿದ್ದರೂ ಏಕಾಏಕಿ ನಿರ್ಮಿಸಿ ಕೊಡಲಾರ. ಒಳಹೊಕ್ಕಷ್ಟೂ ನಿಗೂಢಗೊಳ್ಳುತ್ತಲೇ ಸಾಗುವ ಈ ಸಂಕೀರ್ಣ ಜೀವ ವ್ಯವಸ್ಥೆಯ ಆಗರ ರೂಪುಗೊಳ್ಳಲು ನೂರಾರು, ಸಾವಿರಾರು ವರುಷಗಳಾಗಲೇ ಬೇಕು ಎಂಬ ಅರಿವು ನಮ್ಮೆಲ್ಲರಲ್ಲಿ ಮೂಡಬೇಕಿದೆ.

ಈ ಅರಿವು ಬಹುಶಃ ಅರಣ್ಯ ಸಂರಕ್ಷಣೆಯ ಬಗೆಗೆ ಎಲ್ಲರೂ ಚಿಂತಿಸುವಂತೆ ಮಾಡ ಬಲ್ಲದೇನೋ!

ಅದಕ್ಕಾಗಿಯೇ ನಾವು ವಿಶ್ವ ಅರಣ್ಯ ದಿನ ಸೇರಿದಂತೆ ದಿನ ನಿತ್ಯವೂ ಜನಸಾಮಾನ್ಯರಿಗೆ, ವಿಶೇಷವಾಗಿ ಮಕ್ಕಳಿಗೆ ಅರಣ್ಯ ಸಂರಕ್ಷಣೆಯ ಅರಿವನ್ನು ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕಿದೆ. ಜೊತೆಗೆ, ಅರಣ್ಯ ಸಂರಕ್ಷಣೆಗಾಗಿ ನಮ್ಮಿಂದ ಸಾಧ್ಯವಿರುವ ಕೆಲಸಗಳನ್ನು ಮಾಡಬೇಕಿದೆ.

ಈ ನಿಟ್ಟಿನಲ್ಲಿ ಗಿಡ ನೆಡುವ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದು, ಪರಿಸರ ಸ್ನೇಹಿ ಜೀವನ ಶೈಲಿ ಅನುಸರಿಸಿ ಜಾಗತಿಕ ಶಾಖ ಹೆಚ್ಚಳ ತಗ್ಗಿಸಲು ಕೈಜೋಡಿಸುವುದು, ಅರಣ್ಯೋತ್ಪನ್ನಗಳ ದುರುಪಯೋಗ ತಪ್ಪಿಸುವುದು, ಮರುಬಳಕೆಯಾಗುವ ವಸ್ತುಗಳ ಬಳಕೆಯನ್ನು ಹೆಚ್ಚಿಸುವುದು, ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಇತ್ಯಾದಿ ಕಾರ್ಯಗಳನ್ನು ಮಾಡಬಹುದಾಗಿದೆ.

ಅಲ್ಲದೆ ಅರಣ್ಯಗಳ ಮಹತ್ವದ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡುವುದು, ಪರಿಸರ ಪ್ರೇಮ ಬೆಳೆಸುವ ಪುಸ್ತಕಗಳನ್ನು ಪರಿಚಯಿಸುವುದು, ಪರಿಸರ ಜ್ಞಾನ ಹೆಚ್ಚಿಸುವ ವೀಡಿಯೊಗಳನ್ನು ತೋರಿಸುವುದು, ಚಾರಣಗಳನ್ನು ಆಯೋಜಿಸಿ ಸುತ್ತಲ ಪರಿಸರವನ್ನು ಪರಿಚಯಿಸುವುದು, ಇತ್ಯಾದಿ ಕಾರ್ಯಗಳನ್ನು ಮಾಡಬಹುದಾಗಿದೆ.

ಈ ಮೂಲಕ ಕರ್ನಾಟಕದ ಸಮೃದ್ಧ ಅರಣ್ಯಗಳನ್ನು ಮುಂದಿನ ಪೀಳಿಗೆಗೆ ಉಳಿಸಬಹುದಾಗಿದೆ.

ಈ ಆಂತರ್‌ರಾಷ್ಟ್ರೀಯ ಅರಣ್ಯ ದಿನದಂದು ನಾವು ಪ್ರತಿಯೊಬ್ಬರೂ ಅರಣ್ಯ ಉಳಿಸಿ, ಪರಿಸರವನ್ನು ಕಾಪಾಡಿ, ಭವಿಷ್ಯವನ್ನು ಸುರಕ್ಷಿತಗೊಳಿಸುವ ಪ್ರತಿಜ್ಞೆ ಮಾಡೋಣ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಪೂರ್ಣೇಶ್ ಮತ್ತಾವರ

contributor

ಶಿಕ್ಷಕರು

Similar News