ಶೇ.16ರಷ್ಟು ಇರುವ ಜನರಿಗೆ ಶೇ.1 ಅನುದಾನ ಕೊಟ್ಟರೆ ಹಲಾಲ್ ಬಜೆಟ್ ಆಗುತ್ತಾ?: ನಸೀರ್ ಅಹ್ಮದ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮಂಡಿಸಿರುವ 16ನೇ ಬಜೆಟನ್ನು ವಿಪಕ್ಷಗಳು ಹಲಾಲ್ ಬಜೆಟ್, ಮುಸ್ಲಿಮ್ ಬಜೆಟ್ ಎಂದು ಅಪಪ್ರಚಾರ ಮಾಡುತ್ತಿದೆ. ಅಂಕಿ-ಅಂಶಗಳೊಂದಿಗೆ ಚರ್ಚೆ ಮಾಡುವ ಬದಲು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸವಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ‘ವಾರ್ತಾಭಾರತಿ’ ಜೊತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ವಾರ್ತಾಭಾರತಿ: ರಾಜ್ಯ ಬಜೆಟ್ ಅನ್ನು ಬಿಜೆಪಿ ನಾಯಕರು ಹಲಾಲ್ ಬಜೆಟ್ ಎಂದು ಆರೋಪಿಸುತ್ತಿರುವುದು ಏಕೆ? ಯಾವ ಕಾರಣಕ್ಕಾಗಿ ಅವರು ಹಾಗೆ ಹೇಳುತ್ತಿದ್ದಾರೆ? ನಿಮ್ಮ ಸಮರ್ಥನೆ ಏನು?
ನಸೀರ್ ಅಹ್ಮದ್: ಪ್ರತಿಯೊಂದನ್ನೂ ರಾಜಕೀಯವಾಗಿ ನೋಡುವುದು ದೊಡ್ಡ ತಪ್ಪು. ಬಜೆಟ್ ಬಗ್ಗೆ ಗಂಭೀರವಾಗಿ ಚರ್ಚೆ ಮಾಡಬೇಕು. 16 ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಅವರ ಅನುಭವವನ್ನು ನೋಡಬೇಕು. ಬಜೆಟ್‌ನಲ್ಲಿ ಆದಾಯ ಎಷ್ಟಿದೆ ಮತ್ತು ಖರ್ಚು ಎಷ್ಟಿದೆ ಎನ್ನುವುದು ಮುಖ್ಯ ವಿಷಯ. 2024-25ರ ಬಜೆಟ್ ನಲ್ಲಿ ನಮ್ಮ ರಾಜ್ಯದ ವಿತ್ತೀಯ ಕೊರತೆ ಸುಮಾರು 28 ಸಾವಿರ ಕೋಟಿ ರೂ. ಇತ್ತು. 2025-26ರ ಬಜೆಟ್‌ನಲ್ಲಿ ಅದು 19 ಸಾವಿರ ಕೋಟಿ ರೂ. ಆಗಿದೆ. ಇದನ್ನು ನೋಡಿದರೆ ರಾಜ್ಯದ ಹಣಕಾಸು ಸ್ಥಿತಿ ಆರೋಗ್ಯಕರವಾಗಿದೆ ಎಂಬುದು ತಿಳಿಯುತ್ತದೆ.
ವಾರ್ತಾಭಾರತಿ: ಇದು ಬೇರೆ ವಿಷಯ. ಆದರೆ ಬಿಜೆಪಿಯ ವಾದ ಈ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚು ಅನುದಾನ ಕೊಟ್ಟಿದ್ದಾರೆ ಎನ್ನುವುದು. ಈ ಬಗ್ಗೆ ಏನು ಹೇಳುತ್ತೀರಿ?
ನಸೀರ್ ಅಹ್ಮದ್: ಅದಕ್ಕೂ ಮುನ್ನ ಬಜೆಟ್ ಅನ್ನು ಯಾವ ದೃಷ್ಟಿಯಿಂದ ನೋಡಬೇಕೆಂದು ಹೇಳುತ್ತಿದ್ದೇನೆ. ಬಂಡವಾಳ ವೆಚ್ಚದ ವಿಷಯಕ್ಕೆ ಬರುವುದಾದರೆ 2024-25ರಲ್ಲಿ 53 ಸಾವಿರ ಕೋಟಿ ರೂ. ಇತ್ತು. 2025-26ರಲ್ಲಿ ಅದು 85 ಸಾವಿರ ಕೋಟಿ ರೂ. ಆಗಿದೆ. ಶೇ.47ರಷ್ಟು ಬೆಳವಣಿಗೆಯಾಗಿದೆ. ಇದಲ್ಲದೆ 4,08,647 ಕೋಟಿ ರೂ.ಗಳ ಬಜೆಟ್‌ನಲ್ಲಿ 1 ಲಕ್ಷ ಕೋಟಿ ರೂ. ಗ್ಯಾರಂಟಿ ಯೋಜನೆಗಳು ಸೇರಿದಂತೆ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಹೋಗಲಿದೆ. ಹಣ ನೇರವಾಗಿ ಜನರನ್ನು ತಲುಪುತ್ತಿರುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಈಗ ಅಲ್ಪಸಂಖ್ಯಾತರ ಬಗ್ಗೆ ನಡೆಯುತ್ತಿರುವ ಚರ್ಚೆ ಕುರಿತು ಹೇಳುತ್ತೇನೆ. ನ್ಯಾ.ಸಾಚಾರ್ ಕಮಿಟಿ ಮತ್ತು ನ್ಯಾ.ರಂಗನಾಥ ಮಿಶ್ರಾ ಕಮಿಟಿ ವರದಿಗಳಲ್ಲಿ ಮುಸ್ಲಿಮರ ಶಿಕ್ಷಣಕ್ಕೆ ಹೆಚ್ಚಿನ
ಒತ್ತುಕೊಡಬೇಕು ಎಂದು ಹೇಳಲಾಗಿದೆ. ರಾಜ್ಯದಲ್ಲಿ ಚಿನ್ನಪ್ಪರೆಡ್ಡಿ ಆಯೋಗ 2ಬಿ ಪ್ರವರ್ಗ ಸೃಷ್ಟಿಸಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕೊಡಬೇಕು ಎಂದು ಶಿಫಾರಸು ಮಾಡಿದೆ. ಈ ದೃಷ್ಟಿಯಿಂದ ಸಿದ್ದರಾಮಯ್ಯ ಅವರು ಪ್ರಸಕ್ತ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಅಲ್ಪಸಂಖ್ಯಾತರಿಗೆ ಕೊಟ್ಟಿರುವ ಹಣದ ಪೈಕಿ ಶೇ 75ರಷ್ಟು ಶಿಕ್ಷಣಕ್ಕೆ ನೀಡಿದ್ದಾರೆ.
ವಾರ್ತಾಭಾರತಿ: ಆದರೂ ಹಲಾಲ್ ಬಜೆಟ್ ಎನ್ನುವ ಅಪಪ್ರಚಾರ ನಡೆಯುತ್ತಿದೆಯಲ್ಲ, ಅದರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
ನಸೀರ್ ಅಹ್ಮದ್: ಜನರಿಗೂ ಗೊತ್ತು. 4,08,647 ಕೋಟಿ ರೂ.ಗಳ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಕೊಟ್ಟಿರುವುದು ಕೇವಲ 4,360 ಕೋಟಿ ರೂ. ಅಂದರೆ ಶೇ.1ಕ್ಕಿಂತ ಒಂಚೂರು ಜಾಸ್ತಿ ಅಷ್ಟೇ. ರಾಜ್ಯದಲ್ಲಿ ಶೇ.16ರಷ್ಟು ಅಲ್ಪಸಂಖ್ಯಾತರಿದ್ದರೂ ಹಣ ಕೊಟ್ಟಿರುವುದು ಶೇ.1ರಷ್ಟು ಮಾತ್ರ.
ವಾರ್ತಾಭಾರತಿ: ಮುಸ್ಲಿಮ್ ಗುತ್ತಿಗೆದಾರರಿಗೆ 2 ಕೋಟಿ ರೂಪಾಯಿವರೆಗಿನ ಸಿವಿಲ್ ಕಾಮಗಾರಿಗಳಲ್ಲಿ ಶೇ.4 ಮೀಸಲಾತಿ ಕೊಟ್ಟಿರುವುದು ಧರ್ಮಾಧಾರಿತವಾಗಿದೆ ಎನ್ನುವ ವಾದದ ಬಗ್ಗೆ ಏನು ಹೇಳುತ್ತೀರಿ?
ನಸೀರ್ ಅಹ್ಮದ್: ಅದು 2ಬಿ ಪ್ರಕಾರ ಕೊಟ್ಟಿರುವ ಮೀಸಲಾತಿ. 2ಬಿ 1994ರಿಂದಲೂ ಇದೆ. ಹಿಂದೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಇತ್ತು. ಈಗ ಕಾಮಗಾರಿಗಳಲ್ಲಿ ತರಲಾಗುತ್ತಿದೆ ಅಷ್ಟೇ. ಇದನ್ನು ಬಿಜೆಪಿಯವರು ರಾಜಕೀಯ ದೃಷ್ಟಿಯಿಂದ ನೋಡುತ್ತಿದ್ದಾರೆ. ಮುಸ್ಲಿಮರು ಸಾರಾಸಗಟಾಗಿ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಾರೆ ಎನ್ನುವ ಹೊಟ್ಟೆಕಿಚ್ಚಿನಿಂದ ಬಿಜೆಪಿಯವರು ಇಂಥ ಆರೋಪ ಮಾಡುತ್ತಿದ್ದಾರೆ.
ವಾರ್ತಾಭಾರತಿ: ನೀವು ಹೇಳಿದಂತೆ ಮುಸ್ಲಿಮರು ಸಾರಾಸಗಟಾಗಿ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಮುಸ್ಲಿಮರಿಗೆ ಏನನ್ನಾದರೂ ಕೊಡುವಾಗ ಮೀನ ಮೇಷ ಎಣಿಸುತ್ತದೆ. ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಕೊಡದೆ ಶೇ.1ರಷ್ಟು ಅನುದಾನ ಮಾತ್ರ ಕೊಟ್ಟಿದೆ. ಆದರೂ ಅಲ್ಪಸಂಖ್ಯಾತ ನಾಯಕರು ಏಕೆ ಇದರ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ?
ನಸೀರ್ ಅಹ್ಮದ್: ನಾವು ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯ ಮತ್ತು ಪಕ್ಷದ ವರಿಷ್ಠರ ಜೊತೆ ನಮಗಾಗುತ್ತಿರುವ ಅನ್ಯಾಯದ ಬಗ್ಗೆ ಚರ್ಚಿಸುತ್ತಿದ್ದೇವೆ. ಪ್ರತೀ ಸಭೆಯಲ್ಲೂ ಕೇಳುತ್ತಿದ್ದೇವೆ. ನಮಗೆ ಮುಖ್ಯವಾಗಿ ಬೇಕಾಗಿರುವುದು ಭದ್ರತೆ ಮತ್ತು ಶಿಕ್ಷಣ. ಇದರ ಬಗ್ಗೆ ಸ್ವಲ್ಪ ಸುಧಾರಣೆಯಾಗಿದೆ. ನಮಗೂ ಸ್ವಲ್ಪ ಸಮಾಧಾನ ಆಗಿದೆ.
ವಾರ್ತಾಭಾರತಿ: ಹಿಂದಿನ ಬಿಜೆಪಿ ಸರಕಾರ ಮುಸ್ಲಿಮರಿಗೆ 2ಬಿಯಲ್ಲಿ ಕೊಡುತ್ತಿದ್ದ ಮೀಸಲಾತಿಯನ್ನು ತೆಗೆದುಹಾಕಿತ್ತು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ ಮೇಲೆ 2ಬಿ ಮೀಸಲಾತಿಯನ್ನು ಮರು ಸ್ಥಾಪಿಸುವುದಾಗಿ ಹೇಳಿತ್ತು. ಈವರೆಗೆ ಕಾಂಗ್ರೆಸ್ ಏನು ಮಾಡಿದೆ?
ನಸೀರ್ ಅಹ್ಮದ್: ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಹಿಂದಿನ ಬಿಜೆಪಿ ಸರಕಾರವೇ ‘ನ್ಯಾಯಾಲಯದ ತೀರ್ಪು ಬರುವವರೆಗೂ 2ಬಿ ಪ್ರವರ್ಗವನ್ನು ತೆಗೆಯುವುದಿಲ್ಲ. ಮುಸ್ಲಿಮರಿಗೆ ಕೊಡಲಾಗುತ್ತಿರುವ ಮೀಸಲಾತಿಯನ್ನು ಮುಂದುವರಿಸುತ್ತೇವೆ’ ಎಂದು ಪ್ರಮಾಣಪತ್ರ ಸಲ್ಲಿಸಿದೆ. ಹಾಗಾಗಿ 2ಬಿ ಈಗಲೂ ಜಾರಿಯಲ್ಲಿದೆ. ತೀರ್ಪು ಬಂದ ಬಳಿಕ ನಮ್ಮ ಸರಕಾರ ಪೂರ್ಣ ಪ್ರಮಾಣದಲ್ಲಿ ಮರು ಸ್ಥಾಪನೆ ಮಾಡುತ್ತದೆ.
ವಾರ್ತಾಭಾರತಿ: 2014ರಲ್ಲಿ ಅಂದಿನ ಕೇಂದ್ರ ಸರಕಾರ ಇಡೀ ದೇಶಕ್ಕೆ 4, ಕರ್ನಾಟಕಕ್ಕೇ 1 ಮುಸ್ಲಿಮ್ ವಿಶ್ವವಿದ್ಯಾನಿಲಯ ಘೋಷಣೆ ಮಾಡಿತ್ತು. ಕರ್ನಾಟಕದಲ್ಲಿ ಟಿಪ್ಪು ಹೆಸರಿನಲ್ಲಿ ವಿಶ್ವವಿದ್ಯಾನಿಲಯ ಮಾಡಬೇಕು ಎಂದು ನಿರ್ಧರಿಸಲಾಯಿತು. ಅದು ವಿವಾದ ಆಗುತ್ತಿದ್ದಂತೆ ಟಿಪ್ಪು ವಿವಿ ಕೈಬಿಟ್ಟು ಟಿಪ್ಪು ಜಯಂತಿ ಮಾಡಿದ್ದೀರಿ. ವಿಶ್ವವಿದ್ಯಾನಿಲಯ ಮಾಡುವುದರಿಂದ ಹೆಚ್ಚು ಲಾಭವೋ ಅಥವಾ ಜಯಂತಿ ಮಾಡುವುದರಿಂದ ಹೆಚ್ಚು ಲಾಭವೋ?
ನಸೀರ್ ಅಹ್ಮದ್: ಟಿಪ್ಪು ವಿಶ್ವವಿದ್ಯಾನಿಲಯ ಮಾಡಲು ಎರಡು-ಮೂರು ಕಡೆ ಜಾಗ ಗುರುತಿಸಲಾಗಿತ್ತು. ಅಷ್ಟರಲ್ಲಿ ವಿವಾದ ಆಯಿತು. ಸರಕಾರದ ಅವಧಿ ಮುಗಿಯಿತು.
ವಾರ್ತಾಭಾರತಿ: ಟಿಪ್ಪು ವಿವಿಯ ಬದಲು ಟಿಪ್ಪು ಜಯಂತಿ ಮಾಡಿದಂತೆ ಮುಸ್ಲಿಮರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸಿಗುವ 2ಬಿ ಪ್ರವರ್ಗವನ್ನು ಮರು ಸ್ಥಾಪನೆ ಮಾಡುವುದರ ಬದಲು ಕಾಮಗಾರಿಗಳಲ್ಲಿ ಶೇ 4 ಮೀಸಲಾತಿ ನೀಡುತ್ತಿದ್ದೀರಾ?
ನಸೀರ್ ಅಹ್ಮದ್: 2ಬಿ ಪ್ರವರ್ಗ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಶುರುವಾದಾಗ ಕಾಂಗ್ರೆಸ್ ಸರಕಾರ ನಮ್ಮ ಪರ ಪ್ರಮಾಣಪತ್ರ ಸಲ್ಲಿಸಲಿದೆ. ತೀರ್ಪು ನಮ್ಮ ಪರ ಬರುವ ವಿಶ್ವಾಸವಿದೆ. ಯಾವುದೇ ಅನುಮಾನ ಇಲ್ಲ.
ವಾರ್ತಾಭಾರತಿ: ಕಾಮಗಾರಿಗಳಲ್ಲಿ ಶೇ.4ರಷ್ಟು ಮೀಸಲಾತಿ ವಿರುದ್ಧ ಬಿಜೆಪಿಯವರು ಕೋರ್ಟ್‌ಗೆ ಹೋಗುತ್ತಾರಂತೆ. ನಿಮ್ಮ ಕಾನೂನು ಹೋರಾಟ ಹೇಗಿರುತ್ತದೆ?
ನಸೀರ್ ಅಹ್ಮದ್: ಕೋರ್ಟ್‌ಗೆ ಹೋಗಲಿ. ಇದನ್ನು ಕೊಟ್ಟಿರುವುದು ಚಿನ್ನಪ್ಪರೆಡ್ಡಿ ಆಯೋಗದ ಶಿಫಾರಸಿನ ಮೇರೆಗೆ. 30 ವರ್ಷಗಳಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಇದ್ದ ಅವಕಾಶವನ್ನು ಕಾಮಗಾರಿಗಳಿಗೆ ವಿಸ್ತರಿಸುವ ಹಕ್ಕು ರಾಜ್ಯ ಸರಕಾರಕ್ಕೆ ಇದೆ. ಇದನ್ನು ಸಮರ್ಥಿಸಿಕೊಳ್ಳುತ್ತೇವೆ.
ವಾರ್ತಾಭಾರತಿ: ಜಾತಿ ಜನಗಣತಿ ವರದಿ ಜಾರಿಯಾದರೆ ಅಲ್ಪಸಂಖ್ಯಾತರಿಗೆ ಮತ್ತು ಮುಸ್ಲಿಮರಿಗೂ ಅನುಕೂಲ ಆಗುತ್ತದೆ. ಆದರೆ ಈ ಬಗ್ಗೆ ನಿಮ್ಮ ಸಮುದಾಯದ ನಾಯಕರು ಏಕೆ ಮಾತನಾಡುತ್ತಿಲ್ಲ?
ನಸೀರ್ ಅಹ್ಮದ್: ಜಾತಿ ಜನಗಣತಿ ವರದಿ ಬಗ್ಗೆ ಮೊದಲು ಸಂಪುಟದಲ್ಲಿ ತೀರ್ಮಾನ ಆಗಬೇಕು. ಇದನ್ನು ಶುರು ಮಾಡಿದ್ದೇ ಕಾಂಗ್ರೆಸ್ ಸರಕಾರ, ಸಿದ್ದರಾಮಯ್ಯ. ಅವರ ಮೇಲೆ ಭಾರೀ ಒತ್ತಡ ಇದೆ. ನಾವೂ ಒತ್ತಡ ಹಾಕುತ್ತಿದ್ದೇವೆ. ಬೇಗ ವರದಿ ಜಾರಿಯಾಗುತ್ತದೆ.
ವಾರ್ತಾಭಾರತಿ: ವರ್ಷದಿಂದ ವರ್ಷಕ್ಕೆ ಎಲ್ಲ ಕಡೆ ಮುಸ್ಲಿಮ್ ಪ್ರಾತಿನಿಧ್ಯ ಕಡಿಮೆಯಾಗುತ್ತಿದೆ. ಏನು ಪರಿಹಾರ?
ನಸೀರ್ ಅಹ್ಮದ್: ಕಳೆದ ಕಾಂಗ್ರೆಸ್ ಸರಕಾರಕ್ಕೂ ಈಗಿನ ಕಾಂಗ್ರೆಸ್ ಸರಕಾರಕ್ಕೂ ಹೋಲಿಸಿದರೆ ಸ್ವಲ್ಪಸುಧಾರಣೆಯಾಗಿದೆ. ಇನ್ನೂ ಹೆಚ್ಚಿನ ಕೆಲಸ ಆಗಬೇಕಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ಮಾಡುತ್ತಿದ್ದೇವೆ. ಅವರು ಭರವಸೆ ನೀಡಿದ್ದಾರೆ.
ವಾರ್ತಾಭಾರತಿ: ವಕ್ಫ್ ಆಸ್ತಿಯನ್ನು ರಕ್ಷಣೆ ಮಾಡ ಬೇಕಾದುದು ಸರಕಾರದ ಕರ್ತವ್ಯ. ಸರಕಾರದ ಮೇಲೆ ಒತ್ತಡ ಹೇರಬೇಕಾದುದು ನಿಮ್ಮ ಕರ್ತವ್ಯ. ಆದರೆ ನೀವು ಏನು ಮಾಡುತ್ತಿದ್ದೀರಿ?
ನಸೀರ್ ಅಹ್ಮದ್: ಹೊಸ ವಕ್ಫ್ ಬೋರ್ಡ್ ಕಾನೂನಿನ ಪ್ರಕಾರ 4 ನ್ಯಾಯಮಂಡಳಿ ಮಾಡಿದ್ದೇವೆ. ಪ್ರಕರಣಗಳನ್ನು ನ್ಯಾಯಮಂಡಳಿಗಳಿಗೆ ಕಳುಹಿಸಿದ್ದೇವೆ. ಅದಲ್ಲದೆ ವಕ್ಫ್ ಬೋರ್ಡ್ ಆಸ್ತಿ ಸಂರಕ್ಷಣೆಗಾಗಿ ಕಾಂಪೌಂಡ್ ಹಾಕಲು ಸರಕಾರ 100 ಕೋಟಿ ರೂ. ಕೊಟ್ಟಿದೆ.
ವಾರ್ತಾಭಾರತಿ: ಕೇಂದ್ರ ಸರಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ಅದರ ವಿರುದ್ಧ ಹೇಗೆ ಹೋರಾಟ ಮಾಡುತ್ತೀರಿ?
ನಸೀರ್ ಅಹ್ಮದ್: ವಕ್ಫ್ ವಿಚಾರ ರಾಜ್ಯಕ್ಕೆ ಸಂಬಂಧಿಸಿದ ವಿಷಯ. ಜೊತೆಗೆ ರಾಜ್ಯದಲ್ಲಿ ಪ್ರತ್ಯೇಕವಾದ ವಕ್ಫ್ ಕಾಯ್ದೆ ಇರುವುದರಿಂದ ಅಷ್ಟೇನೂ ಸಮಸ್ಯೆಯಾಗುವುದಿಲ್ಲ್ಲ ಅನಿಸುತ್ತದೆ. ಇವೆಲ್ಲಕ್ಕೂ ಮೀರಿದಂತೆ ಕೇಂದ್ರ ಸರಕಾರದ ವಕ್ಫ್ ಮಸೂದೆ ಸಂಸತ್‌ನಲ್ಲಿ ಪಾಸಾಗುವ ಸಾಧ್ಯತೆ ತುಂಬಾ ಕಮ್ಮಿ.