ಐಟಿ ವಲಯದಲ್ಲಿ ಲಕ್ಷಗಟ್ಟಲೆ ಉದ್ಯೋಗಗಳು ಇಲ್ಲವಾಗುವ ಅಪಾಯ ಬಂದಿದೆಯೇ?

ಅಮೆರಿಕ ನಮ್ಮ ಐಟಿ ಕಂಪೆನಿಗಳ ಅತಿ ದೊಡ್ಡ ಗ್ರಾಹಕ ಆಗಿದೆ. ಐಟಿ ಸೇವೆಗಳ ಸರಕು ಅಥವಾ ಸೇವೆಗಳಲ್ಲಿ ಶೇ. 60 ರಿಂದ ಶೇ. 70ರಷ್ಟು ಅಲ್ಲಿಗೆ ಹೋಗುತ್ತದೆ. ಇದರೊಂದಿಗೆ, ಭಾರತೀಯ ಐಟಿ ಕಂಪೆನಿಗಳ ಆದಾಯದ ಶೇ. 50ಕ್ಕಿಂತ ಹೆಚ್ಚು ಅಮೆರಿಕನ್ ಮಾರುಕಟ್ಟೆಯಿಂದ ಬರುತ್ತದೆ. ಆದರೆ ಈಗ ಟ್ರಂಪ್ ನೀತಿಯಿಂದಾಗಿ ಅಲ್ಲಿ ಗೊಂದಲ ಶುರುವಾಗಿದೆ.;

Update: 2025-03-20 11:25 IST
Editor : Thouheed | Byline : ಎನ್. ಕೇಶವ್
ಐಟಿ ವಲಯದಲ್ಲಿ ಲಕ್ಷಗಟ್ಟಲೆ ಉದ್ಯೋಗಗಳು ಇಲ್ಲವಾಗುವ ಅಪಾಯ ಬಂದಿದೆಯೇ?
  • whatsapp icon

ಪ್ರತೀ ವರ್ಷ 2 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಒದಗಿಸುವ ಭಾರತದ ಐಟಿ ವಲಯ ಇತ್ತೀಚಿನ ದಿನಗಳಲ್ಲಿ ದೊಡ್ಡ ಅಪಾಯ ಎದುರಿಸುತ್ತಿದೆ.

ವಾಸ್ತವವಾಗಿ, ಭಾರತದ ಐಟಿ ವಲಯ ನಮ್ಮ ಆರ್ಥಿಕತೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದು ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳನ್ನು ಒದಗಿಸುವುದಲ್ಲದೆ, ದೇಶದ ಜಿಡಿಪಿಗೆ ಭಾರೀ ಕೊಡುಗೆಯನ್ನು ನೀಡುತ್ತದೆ.

ದೇಶದ ಜಿಡಿಪಿಗೆ ಐಟಿ ವಲಯದ್ದು ಸುಮಾರು ಶೇ.7ರಷ್ಟು ಕೊಡುಗೆಯಿದೆ. ಭಾರತದ ಐಟಿ ವಲಯ 50 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗಗಳನ್ನು ಒದಗಿಸುತ್ತಿದೆ.

ದೇಶದ ಐಟಿ ಕಂಪೆನಿಗಳು ವರ್ಷಗಳಿಂದ ತಮ್ಮ ಸಾಫ್ಟ್ ವೇರ್ ಅನ್ನು ವಿದೇಶಿ ಕಂಪೆನಿಗಳಿಗೆ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡುತ್ತಿವೆ. ಆದರೆ ಈಗ ಅವುಗಳ ವ್ಯವಹಾರ ಕ್ರಮೇಣ ಕುಸಿಯುತ್ತಿರುವಂತೆ ಕಾಣಿಸುತ್ತಿದೆ.

‘ಇಕನಾಮಿಕ್ ಟೈಮ್ಸ್’ ವರದಿಯ ಪ್ರಕಾರ, ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭಯ ಮತ್ತು ವಿದೇಶಿ ಸರಕುಗಳ ಮೇಲೆ ಸುಂಕ ವಿಧಿಸುವ ಟ್ರಂಪ್ ನಿರ್ಧಾರ ಭಾರತೀಯ ಐಟಿ ಕಂಪೆನಿಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಭಾರತದ ಹೊರಗುತ್ತಿಗೆ ಉದ್ಯಮ ಸುಮಾರು 80 ಬಿಲಿಯನ್ ಡಾಲರ್‌ಗಳಷ್ಟು ಅಂದರೆ 24 ಲಕ್ಷ ಕೋಟಿ ರೂಪಾಯಿಗಳಷ್ಟು ಮೌಲ್ಯದ್ದಾಗಿದೆ.

ಆದರೆ ಅಮೆರಿಕದಲ್ಲಿ ಸಂಭವನೀಯ ಆರ್ಥಿಕ ಹಿಂಜರಿತ ಮತ್ತು ಟ್ರಂಪ್ ಸುಂಕ ನೀತಿಯಿಂದಾಗಿ, ಅದರ ಬೆಳವಣಿಗೆಯ ಬಗ್ಗೆ ಕಳವಳಗಳು ಹೆಚ್ಚುತ್ತಿವೆ.

ಅಮೆರಿಕದಲ್ಲಿನ ಆರ್ಥಿಕ ಹಿಂಜರಿತಕ್ಕೂ ನಮ್ಮ ಐಟಿ ಕಂಪೆನಿಗಳಿಗೂ ಏನು ಸಂಬಂಧ ಎಂಬುದನ್ನು ನೋಡಬೇಕು.

ಅಮೆರಿಕ ನಮ್ಮ ಐಟಿ ಕಂಪೆನಿಗಳ ಅತಿ ದೊಡ್ಡ ಗ್ರಾಹಕ ಆಗಿದೆ. ಐಟಿ ಸೇವೆಗಳ ಸರಕು ಅಥವಾ ಸೇವೆಗಳಲ್ಲಿ ಶೇ. 60 ರಿಂದ ಶೇ. 70ರಷ್ಟು ಅಲ್ಲಿಗೆ ಹೋಗುತ್ತದೆ. ಇದರೊಂದಿಗೆ, ಭಾರತೀಯ ಐಟಿ ಕಂಪೆನಿಗಳ ಆದಾಯದ ಶೇ. 50ಕ್ಕಿಂತ ಹೆಚ್ಚು ಅಮೆರಿಕನ್ ಮಾರುಕಟ್ಟೆಯಿಂದ ಬರುತ್ತದೆ. ಆದರೆ ಈಗ ಟ್ರಂಪ್ ನೀತಿಯಿಂದಾಗಿ ಅಲ್ಲಿ ಗೊಂದಲ ಶುರುವಾಗಿದೆ.

ಅಮೆರಿಕ ಭಾರತದ ಮೇಲೆ ಸುಂಕ ವಿಧಿಸಿದರೆ, ಭಾರತೀಯ ಐಟಿ ಸೇವೆಗಳು ಅಮೆರಿಕನ್ ಕಂಪೆನಿಗಳಿಗೆ ದುಬಾರಿಯಾಗುತ್ತವೆ.

ಆಗ ಅಮೆರಿಕದ ಗ್ರಾಹಕರು ನಮ್ಮ ಐಟಿ ಸೇವೆಗಳನ್ನು ಪಡೆಯಲು ಹಿಂಜರಿಯಬಹುದು. ತಪ್ಪಿಸಲು ಏನಾದರೂ ನೆಪವೊಡ್ಡಬಹುದು.

ಟ್ರಂಪ್ ಅಮೆರಿಕದಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಪರಸ್ಪರ ಸುಂಕವನ್ನು ವಿಧಿಸುವ ಬಗ್ಗೆ ಪದೇ ಪದೇ ಮಾತನಾಡಲಾಗುತ್ತಿದೆ.

ಅಂದರೆ, ಅಮೆರಿಕದ ಸರಕು ಮತ್ತು ಸೇವೆಗಳ ಮೇಲೆ ಯಾವುದೇ ದೇಶ ತೆರಿಗೆ ವಿಧಿಸಿದರೆ, ಅಮೆರಿಕ ಕೂಡ ಆ ದೇಶಗಳ ಮೇಲೆ ಪ್ರತೀಕಾರದ ಸುಂಕ ವಿಧಿಸುತ್ತದೆ.

ಟ್ರಂಪ್ ಚೀನಾ, ಕೆನಡಾ ಮತ್ತು ಮೆಕ್ಸಿಕೊದ ಮೇಲೆ ಹೊಸ ಸುಂಕಗಳನ್ನು ಘೋಷಿಸಿದ್ದಾರೆ. ಭಾರತದ ಮೇಲೂ ಸುಂಕ ವಿಧಿಸುವ ಬಗ್ಗೆ ಚರ್ಚೆ ನಡೆದಿದೆ.

ಟ್ರಂಪ್ ನೀತಿಗೆ ಉತ್ತರವಾಗಿ ಕೆನಡಾ ಮತ್ತು ಚೀನಾ ಕೂಡ ಅಮೆರಿಕದ ಮೇಲೆ ಸುಂಕ ವಿಧಿಸಲು ನಿರ್ಧರಿಸಿವೆ.ಇದರಿಂದಾಗಿ ವ್ಯಾಪಾರ ಯುದ್ಧದ ಅಪಾಯ ಉಂಟಾಗಿದೆ.ಇದು ಹಣದುಬ್ಬರದ ಅಪಾಯವನ್ನು ಮತ್ತಷ್ಟು ಹೆಚ್ಚಿಸಿದೆ.ಇದು ಆರ್ಥಿಕ ಹಿಂಜರಿತದ ಸೂಚನೆ ಎಂದು ತಜ್ಞರು ಹೇಳಲು ಶುರು ಮಾಡಿದ್ದಾರೆ.

ಹೆಚ್ಚುತ್ತಿರುವ ವೆಚ್ಚದ ಒತ್ತಡದಿಂದಾಗಿ ಅಮೆರಿಕನ್ ಸಂಸ್ಥೆಗಳು ಐಟಿ ಮೇಲಿನ ಖರ್ಚು ಕಡಿಮೆ ಮಾಡಬಹುದು ಎಂದು ತಜ್ಞರು ಮತ್ತು ದಲ್ಲಾಳಿ ಸಂಸ್ಥೆಗಳು ತಮ್ಮ ವರದಿಗಳಲ್ಲಿ ಹೇಳುತ್ತಿರುವುದನ್ನು ಗಮನಿಸಬೇಕು. ಈ ಪರಿಸ್ಥಿತಿ ತಲೆದೋರಿದರೆ, ಐಟಿ ಖರ್ಚಿನ ಮಾದರಿಯನ್ನು ಅದು ಬದಲಾಯಿಸಬಹುದು ಎಂದು ಹೇಳಲಾಗುತ್ತಿದೆ.

ರೂಪಾಯಿ ಕುಸಿತ ಮತ್ತು ದೊಡ್ಡ ಒಪ್ಪಂದಗಳಂತಹ ಅನೇಕ ಸಕಾರಾತ್ಮಕ ಅಂಶಗಳಿದ್ದರೂ, ಅವು ಈ ಸವಾಲನ್ನು ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಿಲ್ಲ.

ಅದೇ ಸಮಯದಲ್ಲಿ, ಎಲ್‌ಎನ್‌ಟಿ ಟೆಕ್ನಾಲಜಿ ಸರ್ವೀಸಸ್‌ನ ಸಿಇಒ ಅಮಿತ್ ಚಡ್ಡಾ ಅವರು ‘‘ಅನೇಕ ಭಾರತೀಯ ಐಟಿ ಕಂಪೆನಿಗಳು ತಮ್ಮ ಸಾಫ್ಟ್‌ವೇರ್ ಅನ್ನು ಅಮೆರಿಕದಲ್ಲಿಯೇ ತಯಾರಿಸಿ ಇಲ್ಲಿಂದಲೇ ತಲುಪಿಸುತ್ತಿವೆ. ಡಿಜಿಟಲ್ ಉತ್ಪಾದನೆಯಲ್ಲಿನ ಉತ್ತೇಜನದಿಂದಾಗಿ ಈ ವರ್ಷ ಕಳೆದ ವರ್ಷಕ್ಕಿಂತ ಉತ್ತಮವಾಗಿರುತ್ತದೆ’’ ಎಂದು ಹೇಳಿರುವುದು ವರದಿಯಾಗಿದೆ.

ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ವರದಿ ಪ್ರಕಾರ, ಅಮೆರಿಕದಲ್ಲಿ ಬಡ್ಡಿದರ ಕಡಿತದ ಸಾಧ್ಯತೆ ಕಡಿಮೆ.ಇದರಿಂದಾಗಿ, ಅಲ್ಲಿನ ಕಂಪೆನಿಗಳ ಖರ್ಚಿನ ಮೇಲೆ ಪರಿಣಾಮ ಬೀರಬಹುದು.

ಜನವರಿ ಮತ್ತು ಮಾರ್ಚ್ ಅವಧಿಯಲ್ಲಿ ಕಂಪೆನಿಗಳು ಎಚ್ಚರಿಕೆಯ ನಿಲುವನ್ನು ಅಳವಡಿಸಿಕೊಂಡಿವೆ ಮತ್ತು ಅವು ಕಾದು ನೋಡುವ ವಿಧಾನವನ್ನು ಅನುಸರಿಸಬಹುದು ಎಂದು ವರದಿ ಹೇಳುತ್ತದೆ.

2024ರ ಆರ್ಥಿಕ ವರ್ಷದಲ್ಲಿ ಐಟಿ ಸೇವಾ ಉದ್ಯಮ ಅತ್ಯಂತ ನಿಧಾನಗತಿಯ ಬೆಳವಣಿಗೆಯನ್ನು ಕಂಡಿದೆ. ಆದರೂ ಜನವರಿಯಿಂದ ಸುಧಾರಣೆಯ ಲಕ್ಷಣಗಳು ಕಾಣಲು ಪ್ರಾರಂಭಿಸಿವೆ.

ಭಾರತದ ಮಧ್ಯಮ ವರ್ಗಕ್ಕೆ ಐಟಿ ಉದ್ಯೋಗಗಳು ಈಗ ಸುರಕ್ಷಿತ ಆಯ್ಕೆ ಅಲ್ಲ ಎಂಬುದು ಇದೀಗ ಮತ್ತಷ್ಟು ಸ್ಪಷ್ಟವಾಗಿದೆ.

ಇನ್ಫೋಸಿಸ್ ಕಂಪೆನಿಯು ಸುಮಾರು 400 ತರಬೇತಿ ಪಡೆದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದು ದೊಡ್ಡ ಚರ್ಚೆಗೆ ಕಾರಣವಾಗಿದೆ.

ಎಐ ಬೆಳವಣಿಗೆ ಭಾರತೀಯ ಐಟಿ ಉದ್ಯೋಗಗಳನ್ನು ನಾಶ ಮಾಡಲಿದೆ ಎಂಬ ಆತಂಕವನ್ನು ಮತ್ತಷ್ಟು ದೃಢಪಡಿಸುತ್ತಿದೆ.

ಯುಎಸ್ ಸುಂಕ ನೀತಿಗಳು ವೆಚ್ಚವನ್ನು ಶೇ. 20ರವರೆಗೆ ಹೆಚ್ಚಿಸಬಹುದು ಎಂದು ಎಚ್‌ಎಫ್‌ಎಸ್ ಗ್ರೂಪ್‌ನ ಮುಖ್ಯ ವಿಶ್ಲೇಷಕ ಫಿಲ್ಸ್ ಫಾರ್ಸಾಡ್ ಹೇಳುತ್ತಾರೆ.

ಇದರಿಂದಾಗಿ, ಕಂಪೆನಿಗಳು ಈಗ ಎಐ ಆಧಾರಿತ ಸೇವೆಗಳಿಗೆ ಹೆಚ್ಚಿನ ಗಮನ ನೀಡುತ್ತಿವೆ. ಜನರೇಟಿವ್ ಎಐ ನಂತಹ ಹೊಸ ತಂತ್ರಜ್ಞಾನಗಳ ಬಳಕೆ ಹೆಚ್ಚಾಗಬಹುದು ಎನ್ನಲಾಗುತ್ತಿದೆ. ಭಾರತದ ಐಟಿ ಕಂಪೆನಿಗಳಿಗೆ ಈ ಅಪಾಯ ಎದುರಾಗಿದೆ.

ಭಾರತದ ಐಟಿಯವರ ಹೆಚ್ಚಿನ ಕೆಲಸಗಳಲ್ಲಿ, ವಿದೇಶಿ ಕಂಪೆನಿಗಳಿಗೆ ಸೇವೆಗಳನ್ನು ಸ್ವಯಂಚಾಲಿತಗೊಳಿಸುವುದು, ಅವುಗಳಿಗೆ ಕಸ್ಟಮ್ ಸಾಫ್ಟ್‌ವೇರ್ ರಚಿಸುವುದು, ಅವುಗಳ ಡೇಟಾವನ್ನು ಡಿಜಿಟಲೀಕರಣಗೊಳಿಸುವುದು ಮತ್ತು ನಂತರ ಅವುಗಳ ವ್ಯವಸ್ಥೆಗಳನ್ನು ನಿರ್ವಹಿಸುವುದು ಮುಖ್ಯವಾಗಿವೆ.

ಈಗ, ವಿದೇಶಿ ಕಂಪೆನಿಗಳು ಆ ಕೆಲಸದ ಗಮನಾರ್ಹ ಭಾಗವನ್ನು ಎಐ ಪ್ಲಾಟ್‌ಫಾರ್ಮ್‌ಗಳ ಮೂಲಕ ಆಂತರಿಕವಾಗಿ ಮಾಡಬಹುದು.

ಕೇವಲ 1,700 ರೂಪಾಯಿ ತಿಂಗಳಿಗೆ ಖರ್ಚು ಮಾಡಿದರೆ ತಿಂಗಳಿಗೆ 25,000 ಸಂಬಳ ಪಡೆಯುವ ಎರಡು ಹೊಸ ಇಂಜಿನಿಯರ್‌ಗಳನ್ನು ಬದಲಾಯಿಸುವಷ್ಟು ಸಾಮರ್ಥ್ಯವಿರುವ ಎಐ ಸಾಫ್ಟ್‌ವೇರ್ ಲಭ್ಯವಿದೆ.

17,500 ರೂಪಾಯಿ ತಿಂಗಳಿಗೆ ಖರ್ಚು ಮಾಡಿದರೆ, ಪಿಎಚ್‌ಡಿ ಮಟ್ಟದ ಎಐ ಸಿಸ್ಟಮ್ ಲಭ್ಯವಿದ್ದು, ತಿಂಗಳಿಗೆ 70,000 ಸಂಬಳ ಪಡೆಯುವ ಮಧ್ಯಮ ಮಟ್ಟದ ತಂತ್ರಜ್ಞಾನ ತಜ್ಞರನ್ನು ನೇರವಾಗಿ ಬದಲಾಯಿಸಬಹುದು ಎಂದು ಹೇಳಲಾಗುತ್ತಿದೆ.

ಭಾರತಕ್ಕೆ ಹೊರಗುತ್ತಿಗೆ ನೀಡುವ ಬದಲು, ಅವು ಚಾಟ್ ಜಿಪಿಟಿಗೆ ಹೊರಗುತ್ತಿಗೆ ನೀಡಬಹುದು.

ಈಗಾಗಲೇ ಇಂಥದೊಂದು ಸನ್ನಿವೇಶಕ್ಕೆ ಭಾರತೀಯ ಐಟಿ ವಲಯದ ಪ್ರಮುಖ ಕಂಪೆನಿಗಳು ತಯಾರಿ ನಡೆಸುತ್ತಿವೆ.

ಕಳೆದ ಎರಡು ವರ್ಷಗಳಿಂದ ಅವು ನಿಧಾನವಾಗಿ ಮತ್ತು ಸದ್ದಿಲ್ಲದೆ ಉದ್ಯೋಗದ ಸಂಖ್ಯೆಗಳನ್ನು ಕಡಿಮೆ ಮಾಡುತ್ತಿರುವುದು ಇದೇ ಕಾರಣಕ್ಕೆ.

ವಾಸ್ತವವಾಗಿ, 2023-24ರಲ್ಲಿ ಸುಮಾರು ಎರಡು ದಶಕಗಳಲ್ಲಿ ಮೊದಲ ಬಾರಿಗೆ ಭಾರತದ ಟಾಪ್ ಮೂರು ಐಟಿ ಕಂಪೆನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಇನ್ಫೋಸಿಸ್ ಮತ್ತು ವಿಪ್ರೋ ತಮ್ಮ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡಿವೆ.

ಅವು ವೇತನ ಹೆಚ್ಚಳವನ್ನು ಸಹ ವಿಳಂಬ ಮಾಡಿದವು.

ಉದಾಹರಣೆಗೆ, ಇನ್ಫೋಸಿಸ್ ಬಹಳ ಸಮಯದ ನಂತರ ಈ ತಿಂಗಳು ವೇತನ ಹೆಚ್ಚಳ ಪ್ರಕಟಿಸುವ ನಿರೀಕ್ಷೆ ಇರುವುದಾಗಿ ಹೇಳಲಾಗುತ್ತಿದೆ. ವೇತನ ಹೆಚ್ಚಳ ಎಪ್ರಿಲ್‌ನಿಂದ ಜಾರಿಗೆ ಬಂದರೆ, 2023ರ ನವೆಂಬರ್ ನಂತರದ ಮೊದಲ ಏರಿಕೆ ಅದಾಗಲಿದೆ.

ಭಾರತದ ಐಟಿ ಕಂಪೆನಿಗಳು ಈಗಾಗಲೇ ತಮ್ಮ ಖರ್ಚುಗಳನ್ನು ಕಡಿತಗೊಳಿಸುತ್ತಿವೆ. ಇದು ಭಾರತದ ಐಟಿ ಕಂಪೆನಿಗಳ ತೊಂದರೆಯನ್ನು ಹೆಚ್ಚಿಸಬಹುದು.

ಹೊಸ ಉದ್ಯೋಗಿಗಳಿಗೆ ಕಡಿಮೆ ವೇತನ ನೀಡಲಾಗುತ್ತಿದೆ.

ಈಗ ಮಧ್ಯಮ ಮಟ್ಟದ ಕಾಲೇಜುಗಳಿಂದ ಐಟಿ ಪದವಿ ಪಡೆದವರಿಗೆ ಕೇವಲ ರೂ. 20,000ದಿಂದ 25,000 ಮಾಸಿಕ ವೇತನ ನೀಡಲಾಗುತ್ತಿದೆ. ಹತ್ತೊಂಭತ್ತು ವರ್ಷಗಳ ಹಿಂದೆ ಕೂಡ ಇದೇ ವೇತನ ಇತ್ತು.

ಭಾರತದ 1 ಕೋಟಿ 80 ಲಕ್ಷದಷ್ಟು ಜನರು ವೈಟ್ ಕಾಲರ್ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಐಟಿ ಕ್ಷೇತ್ರದಲ್ಲೇ ಆ ಪೈಕಿ ಶೇ. 8 ಉದ್ಯೋಗಿಗಳು ಇದ್ದಾರೆ. ಈ ಕ್ಷೇತ್ರದಲ್ಲಿ ಅಸ್ಥಿರತೆ ಹೆಚ್ಚಿದಂತೆ ಮಧ್ಯಮ ವರ್ಗದ ಭವಿಷ್ಯವೂ ಅನಿಶ್ಚಿತವಾಗಲಿದೆ. ಹೀಗಾಗಿ, ಮಧ್ಯಮ ವರ್ಗದ ಪೋಷಕರು ಮಕ್ಕಳನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರವೇಶಿಸಲು ಒತ್ತಡ ಹಾಕಬಾರದು.

ಐಟಿಯಲ್ಲಿ ಈಗ ಅತ್ಯುತ್ತಮ ಪ್ರತಿಭೆಗಳಿಗಷ್ಟೇ ಉದ್ಯೋಗ ಲಭಿಸುವ ಸಾಧ್ಯತೆ ಇದೆ. ಅದೂ, ಎಐ ಸಹಾಯದಿಂದ ಒಬ್ಬರೇ ವ್ಯಕ್ತಿ ಐದು ಜನರ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಬರಲಿದೆ.

ಇದು ಕೇವಲ ಐಟಿ ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ. ಹಣಕಾಸು ಕ್ಷೇತ್ರದಲ್ಲೂ ಎಐ ನೇರ ಪರಿಣಾಮ ಬೀರುತ್ತಿದೆ.

ಅಮೆರಿಕದ ವಾಲ್ ಸ್ಟ್ರೀಟ್‌ನಲ್ಲಿ 2 ಲಕ್ಷ ಉದ್ಯೋಗಗಳು ಹೋಗುವ ಸಾಧ್ಯತೆ ಇದೆ ಎಂದು ಬ್ಲೂಂಬರ್ಗ್ ವರದಿ ಹೇಳುತ್ತಿದೆ.

ನಾವು ಭವಿಷ್ಯಕ್ಕಾಗಿ ಹೊಸ ದಾರಿ ಹುಡುಕಬೇಕಾಗಿದೆ. ಐಟಿ ಉದ್ಯೋಗಗಳಿಗೆ ಮಾತ್ರ ಅವಲಂಬಿತರಾಗದೆ, ಹೊಸ ಕ್ಷೇತ್ರಗಳನ್ನು ಪ್ರವೇಶಿಸಬೇಕು. ಸರಕಾರ ಇದಕ್ಕೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎನ್. ಕೇಶವ್

contributor

Similar News