ಗುಬ್ಬಿಗಳು ಎಲ್ಲೆಡೆ ಮತ್ತೆ ಗೂಡು ಕಟ್ಟಲಿ...

Update: 2025-03-20 10:47 IST
ಗುಬ್ಬಿಗಳು ಎಲ್ಲೆಡೆ ಮತ್ತೆ ಗೂಡು ಕಟ್ಟಲಿ...

ಸಾಂದರ್ಭಿಕ ಚಿತ್ರ PC: Meta AI

  • whatsapp icon

ಮನೆಯಂಗಳದಿ ಚಿವ್..ಚೀವ್..ಎಂಬ ಮಧುರ ಸ್ವರದೊಂದಿಗೆ ಸೂರ್ಯೋದಯದ ಸೊಬಗನ್ನು ನೋಡುತ್ತಾ ಮುಂಜಾನೆಯ ಮೋಹಕತೆ ಮೈಗೂಡಿಸಿಕೊಂಡಿದ್ದ ನೆನಪು ಇಂದೂ ಎಲ್ಲಾದರೂ ಗುಬ್ಬಿಯ ಚಿವ್..ಚೀವ್.. ಕೇಳಿದೊಡನೆ ಹಸಿರಾಗಿ ಮನ ಹಾರಾಡುತ್ತದೆ.

ಇಂತಹ ಗುಬ್ಬಿಗಳು ನಿರ್ನಾಮದ ಅಂಚಿನಲ್ಲಿವೆ. ಗುಬ್ಬಿಯ ಇಂದಿನ ಶೋಚನೀಯ ಸ್ಥಿತಿಗೆ ಮನಮಿಡಿಯದೇ ಇರದು. ಬದಲಾದ ಪರಿಸರ, ಆಧುನಿಕತೆ, ಹೆಚ್ಚಾದ ಕ್ರಿಮಿನಾಶಕಗಳ ವಿರುದ್ಧ ಅವಿರತ ಹೋರಾಡುವ ಇವುಗಳ ಆಹಾರವೂ ವಿಷಪೂರಿತ ವಾಗಿರುವುದು ಇವುಗಳ ಅಳಿವಿಗೆ ಕಾರಣವಾಗಿದೆ.

ಇದು ಕೇವಲ ಗುಬ್ಬಚ್ಚಿಯ ಕಥೆಯಲ್ಲ. ಬೇರೆ ಹಕ್ಕಿಗಳ ವ್ಯಥೆಯೂ ಕೂಡ.

ಕಾಡಿಗಿಂತ ನಾಡೇ ಪ್ರಿಯವಿರುವ ಹಲವು ಹಕ್ಕಿಗಳು ನಮ್ಮ ಸುತ್ತ ಮುತ್ತಲೇ ಇವೆ. ಅವುಗಳಲ್ಲಿ ರಾಬಿನ್, ಬುಲ್‌ಬುಲ್, ಸೂರಕ್ಕಿ, ಹೂಕುಕ, ಚಂದ್ರಮುಕುಟ ಹಕ್ಕಿಗಳು ಗುಬ್ಬಿ ಗಾತ್ರದವೇ. ಮನೆಯಂಗಳದ ಗಿಡಗಳಲ್ಲಿ, ಗೂಡು ಕಟ್ಟುವ, ಮಾನವರೊಡನೆ ಬೆರೆಯುವ ಗುಣ ಉಳ್ಳ ಹಕ್ಕಿಗಳಿವು. ಆದರೆ ಇತ್ತೀಚೆಗೆ ಮನೆಯಂಗಳದಲ್ಲಿ ಗಿಡಗಳು ಮಾಯವಾಗಿವೆ, ಸಿಮೆಂಟ್ ತುಂಬುತ್ತಿವೆ.

ಹಾಗೆಯೇ ಕಾಗೆ, ಮೈನಾ, ಹದ್ದುಗಳು ಗೂಡು ಕಟ್ಟಲು ಮರಗಳ ಕೊರತೆ ಅನುಭವಿಸುತ್ತಿವೆ. ಸತ್ತು ಬಿದ್ದ ಜೀವಿಗಳನ್ನು ತಿನ್ನುವುದರಿಂದ ಹಿಡಿದು ಪರಿಸರ ರಕ್ಷಣೆಯ ಹಲವು ಕಾರ್ಯಗಳಲ್ಲಿ ಹಕ್ಕಿಗಳ ಪಾಲು ಬಹುಮುಖ್ಯ. ಇವುಗಳು ನಾಶವಾದರೆ ಪರಿಸರ ಸಮತೋಲನ ತಪ್ಪಿ ನಮಗೆ ಸಾಂಕ್ರಾಮಿಕ ರೋಗ ಕಟ್ಟಿಟ್ಟ ಬುತ್ತಿ.

ಪಕ್ಷಿಜಗತ್ತಿನ ಪ್ರಾಥಮಿಕ ಮೆಟ್ಟಿಲಾದ ಗುಬ್ಬಿಗಳಿಂದ ಬೇರೆ ಹಕ್ಕಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತದೆ. ಪಕ್ಷಿ ವೀಕ್ಷಣೆಗೆ ನಮಗೆ ಗುಬ್ಬಿಯೇ ಆಧಾರ. ಮೊಬೈಲ್ ಟವರ್‌ನಿಂದ ಇವುಗಳಿಗೆ ವಿಕಿರಣವಾಗುತ್ತದೆ ಎಂಬುದು ನಿಜವಲ್ಲ, ಆದರೆ ಗೂಡು ಕಟ್ಟಲು ಅವಕಾಶವನ್ನೇ ಕಳೆದುಕೊಂಡಿರುವ ಇವು ತಮ್ಮ ನೈಜ ನೆಲೆಯಿಂದ ವಂಚಿತವಾಗಿವೆ.

ಭಾರತದಲ್ಲಿ 6 ಬಗೆಯ ಗುಬ್ಬಿಗಳಿದ್ದು ಅವು ಮನೆಗುಬ್ಬಿ, ಸಿಂದ್ ಗುಬ್ಬಿ, ಸ್ಪಾನಿಷ್ ಗುಬ್ಬಿ, ಮರಗುಬ್ಬಿ, ಹಳದಿ ಕತ್ತಿನ ಗುಬ್ಬಿ, ರಸೆಟ್ ಗುಬ್ಬಿಗಳೆಂದು ವಿಂಗಡಿಸಲಾಗಿದೆ. ಪುಟ್ಟಹಕ್ಕಿಗಳಾದ ಇವು ಗುಂಪಿನಲ್ಲಿ ವಾಸಿಸುತ್ತವೆ. ಮಾನವನಿಗೆ ಹೊಂದಿಕೊಂಡು ಜೀವನ ಸಾಗಿಸುವ ಇವುಗಳ ಆಹಾರ ಕ್ರಿಮಿಕೀಟಗಳು ಮತ್ತು ಬೇಳೆಕಾಳುಗಳು. ಎಪ್ರಿಲ್‌ನಿಂದ ಆಗಸ್ಟ್ ಇವುಗಳ ವಂಶಾಭಿವೃದ್ಧಿಯ ಕಾಲ. ಹೆಣ್ಣು ಗುಬ್ಬಿ 1ರಿಂದ 8 ಮೊಟ್ಟೆಗಳನ್ನಿಡುತ್ತವೆ. ಗಂಡು ಹೆಣ್ಣುಗಳೆರಡೂ ಮರಿಗಳ ಆರೈಕೆ ಮಾಡುತ್ತವೆ. ಪಕ್ಷಿ ತಜ್ಞ ಸಲೀಂ ಅಲಿಯವರು ಈ ಗುಬ್ಬಿಯಿಂದಲೇ ಆಕರ್ಷಿತರಾದವರು. ಕರ್ನಾಟಕದ ಅಂತರಸಂತೆ ಕಾಡಿಗೆ ಬಂದು ಆಕಸ್ಮಿಕವಾಗಿ ಕೊಂದ ಗುಬ್ಬಿಯನ್ನು ನೋಡಿ ಅದರ ಬಗ್ಗೆ ಹೆಚ್ಚಿನ ವಿವರ ತಿಳಿಯಲು ಅದನ್ನು ಮುಂಬೈಗೆ ತೆಗೆದುಕೊಂಡು ಹೋಗಿ ಪಕ್ಷಿತಜ್ಞರ ವಿವರದಿಂದ ಅವರು ಪಕ್ಷಿ ಪ್ರೇಮಿಯಾಗಿ ಹೊರಹೊಮ್ಮಿದರು. ಅಂದು ಅವರು ಅಧ್ಯಯನಕ್ಕಾಗಿ ತೆಗೆದುಕೊಂಡು ಹೋದ ಗುಬ್ಬಿಯ ರಕ್ಷಿತ ದೇಹ ಈಗಲೂ ಮೈಸೂರಿನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ಇದೆ.

ನಾನೂ ನಮ್ಮ ಮನೆಯಲ್ಲಿ ಒಂದಿಷ್ಟು ಗುಬ್ಬಿಗಳಿಗೆ ನೆಲೆ ಒದಗಿಸುವ ಸಾಹಸದಲ್ಲಿ ಸಫಲನಾಗಿದ್ದೇನೆ. ನೀವೂ ಮನೆಯ ಸುತ್ತಮುತ್ತ ಕೆಲವು ಗಿಡನೆಟ್ಟು ಮನೆ ಮುಂದೆ ಬಟ್ಟಲಿನಲ್ಲಿ ನೀರು ಹಾಗೂ ಕಾಳಿಟ್ಟರೆ ಗುಬ್ಬಿಗಳು ನಿಮ್ಮ ಮನೆಗೂ ಬಂದು ಚಿವ್‌ಗುಟ್ಟಿಯಾವು. ಹಕ್ಕಿಗಳಿದ್ದರೆ ನಮ್ಮ ಪರಿಸರವೂ ಚೆನ್ನಾಗಿದ್ದೀತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್.ಕೆ. ಮಧು, ಗುಂಡ್ಲುಪೇಟೆ

contributor

Similar News