ಪವರ್ ಪ್ಲಾಂಟ್ ನಿರ್ಮಾಣದಿಂದ ಔರಾದ್‌ನಲ್ಲಿ ನೀರಿನ ಕ್ಷಾಮ

ಬೀದರ್ : ಬೇಸಿಗೆಯ ಸುಡು ಬಿಸಿಲಲ್ಲಿ ನೀರಿಗಾಗಿ ಬಾವಿಗಳನ್ನು ಹುಡುಕುತ್ತಾ ಕಿಲೋಮೀಟರ್‌ವರೆಗೆ ಓಡಾಡುವ ಪರಿಸ್ಥಿತಿ ಔರಾದ್ ತಾಲೂಕಿನ ಮಾಲೆಗಾಂವ್ ಮಾಧವನಗರ ತಾಂಡಾದ ಜನರಿಗೆ ಬಂದೊದಗಿದೆ. ಇದಕ್ಕೆಲ್ಲ ಕಾರಣ ಊರು ಹತ್ತಿರ ನಿರ್ಮಾಣವಾಗುತ್ತಿರುವ ಪವರ್ ಪ್ಲಾಂಟ್ ಮತ್ತು ಬೇಸಿಗೆಯ ಈ ಕೆಂಡದಂತ ಬಿಸಿಲು.
ಪವರ್ ಪ್ಲಾಂಟ್ ನಿರ್ಮಾಣ ಹಂತದಲ್ಲಿದ್ದು, ಭೂಮಿ ಅಗೆಯುವ ಕೆಲಸ ನಡೆಯುತ್ತಿದೆ. ಆ ಪ್ರದೇಶವು ಕಪ್ಪು ಕಲ್ಲಿನಿಂದ ಕೂಡಿದ್ದರಿಂದ ಭೂಮಿಯೊಳಗೆ ಬ್ಲಾಸ್ಟ್ ಮಾಡುವ ಮೂಲಕ ಭೂಮಿ ಅಗೆಯಲಾಗುತ್ತಿದೆ. ಇದರಿಂದಾಗಿ ಸುತ್ತ ಮುತ್ತಲಿನ ಹಳ್ಳಿಗಳಲ್ಲಿರುವ ಬೋರ್‌ವೆಲ್ ಮತ್ತು ಬಾವಿಗಳಲ್ಲಿನ ನೀರು ಸಂಪೂರ್ಣವಾಗಿ ಬತ್ತಿ ಹೋಗಿವೆ. ಪವರ್ ಪ್ಲಾಂಟ್ ಬ್ಲಾಸ್ಟ್ ಮಾಡುವ ಕೆಲಸ ಒಂದು ಕಡೆಯಾದರೆ ಇನ್ನೊಂದು ಕಡೆ ಉರಿ ಬಿಸಿಲಿನ ಕಾರಣವು ಕೂಡ ನೀರಿನ ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಇದರಿಂದಾಗಿ ಮಾಲೆಗಾಂವ್ ಮಾಧವನಗರ ತಾಂಡಾದ ಜನರು ಸುಮಾರು ೧ರಿಂದ ೨ ಕಿಲೋಮೀಟರ್ ದೂರ ಸಾಗಿ ನೀರನ್ನು ಹೊತ್ತು ತರುತ್ತಿದ್ದಾರೆ. ಬೆಳಗ್ಗೆಯಿಂದ ಸಾಯಂಕಾಲದವರೆಗೂ ನೀರು ಹುಡುಕುತ್ತಾ ಕಲ್ಲು, ಮುಳ್ಳು, ಗುಡ್ಡ ಎನ್ನದೇ ಅಲೆಯುತ್ತಿದ್ದಾರೆ. ತಾಂಡಾದ ಕಿಲೋಮೀಟರ್ ದೂರದಲ್ಲಿ ಒಂದು ಪಾಳು ಬಿದ್ದ ಬಾವಿ ಇದ್ದು, ಅದೇ ಅವರ ಬದುಕಿಗೆ ಆಸರೆಯಾಗಿದೆ. ಆ ಬಾವಿಯಲ್ಲೂ ನೀರು ಬತ್ತುವ ಲಕ್ಷಣ ಕಾಣುತ್ತಿದ್ದು, ಬೇಸಿಗೆಯ ಮುಂದಿನ ಎರಡು ತಿಂಗಳು ಆ ಊರಿನ ಜನ ನೀರಿಗಾಗಿ ತುಂಬಾ ಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ಎಲ್ಲಿಯೂ ನೀರು ಸಿಗದ ಕಾರಣ ಅಲ್ಲಿನ ಜನ ಆ ಬಾವಿಯನ್ನೇ ಅವಲಂಬಿಸಿದ್ದಾರೆ. ಆ ಬಾವಿಯಲ್ಲಿ ಸಂಪೂರ್ಣವಾಗಿ ಕಲುಷಿತ ನೀರು ತುಂಬಿದ್ದು, ಅದು ಕುಡಿಯಲು ಯೋಗ್ಯವಲ್ಲದಾಗಿದೆ. ಹೀಗಾಗಿ ಆ ನೀರು ಕುಡಿಯುತ್ತಿರುವ ಜನರ ಆರೋಗ್ಯ ಕೆಡುತ್ತಿದೆ. ಒಂದು ಕಡೆ ನೀರಿನ ಸಮಸ್ಯೆಯಾದರೆ, ಇನ್ನೊಂದು ಕಡೆ ಆರೋಗ್ಯ ಸಮಸ್ಯೆಯೂ ಕಾಡುತ್ತಿದೆ ಎಂದು ಅಲ್ಲಿನ ಜನ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ದಿನಾಲೂ ಕಿಲೋಮೀಟರ್ ದೂರದಿಂದ ನೀರು ತರುತ್ತಿದ್ದೇವೆ. ದಿನವಿಡೀ ನೀರು ತರುವುದೇ ನಮ್ಮ ಕಾಯಕವಾಗಿದೆ. ಕಲುಷಿತ ನೀರು ಕುಡಿಯುವುದರಿಂದ ನಮ್ಮ ಆರೋಗ್ಯ ಕೆಡುತ್ತಿದೆ. ಈಗಷ್ಟೇ ಬೇಸಿಗೆ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ನಮಗೆ ನೀರು ಸಿಗದೇ ತುಂಬಾ ಕಷ್ಟವಾಗಲಿದೆ. ಹಾಗಾಗಿ ನಮಗೆ ಟ್ಯಾಂಕರ್ ವ್ಯವಸ್ಥೆ ಮಾಡಿ ನೀರು ಒದಗಿಸಿ.
- ರೇಣುಕಾ, ತಾಂಡಾದ ಮಹಿಳೆ.
ಹತ್ತಿರವೇ ಪವರ್ ಪ್ಲಾಂಟ್ ಕೆಲಸ ನಡೆಯುತ್ತಿದ್ದು, ಅಲ್ಲಿ ಭೂಮಿಯೊಳಗೆ ಬ್ಲಾಸ್ಟಿಂಗ್ ಮಾಡಲಾಗುತ್ತಿದೆ. ಇದರಿಂದಾಗಿ ಸುತ್ತ ಮುತ್ತಲಿನ ಹಳ್ಳಿಗಳ ಕೊಳವೆಬಾವಿ ಹಾಗೂ ಬಾವಿಗಳಲ್ಲಿನ ನೀರು ಬತ್ತಿ ಹೋಗಿದೆ. ಇದರಿಂದಾಗಿ ಜನರಿಗೆ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ತುಂಬಾ ಆಗುತ್ತಿದೆ. ನಾವು ಆತಂಕದಲ್ಲಿದ್ದೇವೆ.
- ಸೋಪಾನ್ ರಾಠೋಡ್, ತಾಂಡಾದ ರೈತ
ಸರಕಾರಿ ಬಾವಿಯಲ್ಲಿ ನೀರು ಸಂಪೂರ್ಣವಾಗಿ ಬತ್ತಿ ಹೋಗಿದೆ. ನೀರು ಬಿಡದ ಕಾರಣ ಜನ ನನ್ನನ್ನೇ ಬಯ್ಯುತ್ತಿದ್ದಾರೆ. ಬಾವಿಯಲ್ಲಿ ನೀರು ಇಲ್ಲದಿದ್ದರಿಂದ ನನಗೆ ಏನು ಮಾಡಲು ಸಾಧ್ಯವಾಗುತ್ತಿಲ್ಲ. ಪಂಚಾಯತ್‌ನಲ್ಲಿ ಹೇಳಿದರೆ ಅವರು ಈ ಕಡೆ ಗಮನ ಹರಿಸುತ್ತಿಲ್ಲ.
- ಸಂತೋಷ್, ವಾಟರ್ ಮ್ಯಾನ್.