ಕರ್ನಾಟಕದ ಕೆರೆ-ನದಿಗಳು ಅಳಿವು ಉಳಿವಿನ ಲೆಕ್ಕವಿದೆಯೇ?

‘‘ಈಗ ಎಷ್ಟು ಕೆರೆಗಳು ಉಳಿದವು? ಮತ್ತೆಷ್ಟು ನದಿಗಳು ಕೊಳಕಾದವು, ತಿರುಗಿದವು, ಬತ್ತಿ ಹೋದವು’’ ಎಂದು ಪ್ರತೀ ಜಲ ದಿನಾಚರಣೆಗೆ ಲೆಕ್ಕ ಹಾಕುವ ಪರಿಸ್ಥಿತಿಯು ಬದಲಾಗಿ ‘‘ಮತ್ತೆಷ್ಟು ಕೆರೆಗಳು ಪುನಶ್ಚೇತನಗೊಂಡವು, ಯಾವ ನದಿ ಮತ್ತೆ ಹರಿಯಿತು, ಶುದ್ಧವಾಯಿತು’’ ಎಂದು ಲೆಕ್ಕ ಹೇಳುವ ದಿನಗಳು ಯಾವಾಗ ಬರುತ್ತೋ ಆವಾಗಿನಿಂದ ನಮ್ಮ ಭವಿಷ್ಯದ ಬದುಕಿನ ಬಗ್ಗೆ ಸ್ವಲ್ಪ ಭರವಸೆ ಮೂಡಬಹುದು ಅನಿಸುತ್ತದೆ. ಅಂತಹ ವಿಶ್ವ ಜಲ ದಿನಾಚರಣೆಗಳನ್ನು ಎದುರು ನೋಡುತ್ತಾ ಈ ಬರಹ. ನದಿ ಕೆರೆಗಳ ದಾರುಣತೆಯನ್ನು ಬರೆಯಲು ಹೋದರೆ ಪುಟಗಳು ಸಾಲದು. ಸಂರಕ್ಷಣೆಯ ಯಶೋಗಾಥೆಗಳೂ ಇವೆ, ಹುಡುಕಿಕೊಳ್ಳಬೇಕಷ್ಟೇ. ಬರಹದ ಉದ್ದೇಶ ಮಾಹಿತಿ ಕೊಡುವುದು ಅಲ್ಲ, ಒಂದು ಸ್ವಲ್ಪ ನಮ್ಮನ್ನು ನಾವು ಎಚ್ಚರಗೊಳಿಸಿಕೊಳ್ಳುವುದು.
ನಾಲ್ಕು ವರ್ಷಗಳ ಹಿಂದೆ ಕರ್ನಾಟಕದ 13 ನದಿಗಳು ಮಾಲಿನ್ಯಗೊಂಡಿವೆ ಎಂದು ಓದಿದ್ದ ನೆನಪು. ಕೆಲವು ದಿನಗಳ ಹಿಂದಿನ ಅರಣ್ಯ ಮಂತ್ರಿಗಳ ಹೇಳಿಕೆ ಪ್ರಕಾರ ಅದು 16! ಅರ್ಕಾವತಿ ನದಿ ಅತೀ ಮಾಲಿನ್ಯಗೊಂಡ ನದಿಯಂತೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಯಾವ ನದಿಯಲ್ಲಿ ಮಾಲಿನ್ಯ ಪರೀಕ್ಷಿಸುವ ವ್ಯವಸ್ಥೆ ಮಾಡಿದೆಯೋ ಆ ನದಿಗಳು ಮಾತ್ರ ಈ ಲೆಕ್ಕಕ್ಕೆ ಬರುತ್ತವೆ. ವಿಷಕಾರಿ ಕೈಗಾರಿಕಾ ರಾಸಾಯನಿಕ ತ್ಯಾಜ್ಯಗಳ ಸಮೇತ ಸಂಪೂರ್ಣ ಕೊಳಚೆ ನೀರಿನಿಂದ ‘ನಿತ್ಯ ಹರಿಯುವ’ ನದಿಯಾದ ಬೆಂಗಳೂರಿನ ವೃಷಭಾವತಿ ಮಾಲಿನ್ಯಗೊಂಡ ನದಿಗಳ ಪಟ್ಟಿಯಲ್ಲಿ ಇಲ್ಲ! ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್‌ಸೈಟ್‌ನಲ್ಲಿ ಪಟ್ಟಿ ಇದೆ. ಸಾಧ್ಯವಾದರೆ ಇವತ್ತೇ ಓದಿ. ಅಂಕಿ ಅಂಶ ಎಷ್ಟು ಸರಿ ತಿಳಿಯದು. ಆದರೆ ಅಪ್‌ಡೇಟ್ ಮಾಡುತ್ತಾ ಇರುವುದಕ್ಕೆ ಮಂಡಳಿಯನ್ನು ಅಭಿನಂದಿಸಲೇಬೇಕು.
ನೀರಿನ ಬಗೆಗಿನ ಡೇಟಾ ಇಲ್ಲದಿರುವುದು ಅಥವಾ ಸಾರ್ವಜನಿಕವಾಗಿ ಪ್ರಕಟಿಸದಿರುವುದು ಒಂದು ದೊಡ್ಡ ಸಮಸ್ಯೆ ಎಂದು ಹಲವು ಪರಿಸರವಾದಿಗಳ ಅಂಬೋಣ. ಅದಕ್ಕಾಗಿ paani.earth ಅಂತಹ ನಾಗರಿಕ ಗುಂಪುಗಳು ನದಿಗಳ ಕ್ಷೇಮ ಕುರಿತ ಮಾಹಿತಿ ತಾಣಗಳನ್ನು ಆರಂಭಿಸಿವೆ. ನೋಡಿದರೆ ನಿಮಗೆ ಚಿಂತೆ ಕಾಡಬಹುದು. ಉದಾಹರಣೆಗೆ ನೇತ್ರಾವತಿ ನೀರನ್ನು ತುಂಬಿಸಲು ಹೂಳು ತೆಗೆಯುತ್ತಿರುವ ತಿಪ್ಪಗೊಂಡನಹಳ್ಳಿ ಜಲಾಶಯದ ಹೂಳನ್ನು-ಕೈಗಾರಿಕಾ ವಿಷ ರಾಸಾಯನಿಕ ತ್ಯಾಜ್ಯವುಳ್ಳ ಹೂಳನ್ನು ತೆಗೆದು ಅಲ್ಲೇ ಪಕ್ಕದ ಹಳೆಯ ಕಲ್ಲಿನ ಕ್ವಾರಿಗೆ ತುಂಬಿಸಲಾಗುತ್ತಿದೆ! ಸಿವಿಲ್‌ಸೊಸೈಟಿಯು ಕೆರೆ ಹಳ್ಳಗಳ ಹೂಳು ತೆಗೆಯುವುದನ್ನು ಮೀರಿ ತಮ್ಮ ಕಾರ್ಯವ್ಯಾಪ್ತಿಯನ್ನು ತಂತ್ರಜ್ಞಾನ-ಮಾಹಿತಿ ಸಂಗ್ರಹ - ಬಳಕೆಯವರೆಗೂ ವಿಸ್ತರಿಸಿಕೊಂಡು ‘ಜನರಿಗೆ ಏನೂ ಗೊತ್ತಿಲ್ಲ’ ಎಂದು ತಿಳಿದುಕೊಳ್ಳುವ ‘ಮೂರು ಮುಂದಾಳು’ಗಳಿಗೆ (ಅಧಿಕಾರಿ ಇಂಜಿನಿಯರ್-ಕಾಂಟ್ರಾಕ್ಟರ್-ರಾಜಕೀಯ ನಾಯಕರು) ಸೆಡ್ಡು ಹೊಡೆಯುತ್ತಿರುವುದು ಉತ್ತಮ ಬೆಳವಣಿಗೆ.
ಬೆಂಗಳೂರು ನಗರಕ್ಕೆ ಹೊರಗಿನಿಂದ ನೀರು ತಂದು, ಬಳಸಿ ಅರ್ಕಾವತಿ, ವೃಷಭಾವತಿ, ದಕ್ಷಿಣ ಪಿನಾಕಿನಿ ನದಿಗಳಲ್ಲಿ ಕೊಳಚೆಯನ್ನಾಗಿ ಹರಿಸಲಾಗುತ್ತಿದೆ. ಬೇರೆ ನಗರಗಳಲ್ಲೂ ಹೀಗೇನೆ. ಅರ್ಕಾವತಿ-ವೃಷಭಾವತಿ ಮಾಲಿನ್ಯ ಹೆಚ್ಚಾದಂತೆ ಕಾವೇರಿಯೂ ಇನ್ನಷ್ಟು ಮಾಲಿನ್ಯಗೊಳ್ಳುತ್ತದೆ. ಬೆಂಗಳೂರಿಗೆ ಕಾವೇರಿ ನೀರು ಸಾಲದು ಎಂದು ಈಗ ನೇತ್ರಾವತಿ ನೀರು ತರಲು ಸಿದ್ಧತೆ ನಡೆದಿದೆ. ಎತ್ತಿನಹೊಳೆಯಿಂದ 25 ಟಿಎಂಸಿ ನೀರು ಬರುತ್ತದೆ ಎಂದು ಮುಂದಾಳುಗಳು ಹೇಳಿದರೆ ಪರಿಸರ ಪರ ಇರುವ ತಜ್ಞರು 9 ಟಿಎಂಸಿ ಮಾತ್ರ ಲಭ್ಯ ಅನ್ನುತ್ತಿದ್ದಾರೆ. ಎತ್ತಿನ ಹೊಳೆ ಮೂಲ ಯೋಜನೆ ಬದಲಾಗುತ್ತಲೇ ಇದೆ. ಚಿಕ್ಕಬಳ್ಳಾಪುರ, ಕೋಲಾರಗಳಿಗಾಗಿ ಈ ಯೋಜನೆ ಎಂದಿತ್ತು. ಈಗ ಬೆಂಗಳೂರು ನಗರ ಸಹಿತ ಏಳು ಜಿಲ್ಲೆಗಳಿಗೆ ನೀರು ಹಂಚುವ ಪ್ಲ್ಯಾನ್. ಶಾಶ್ವತ ನೀರಾವರಿಗಾಗಿ ಹೋರಾಡುತ್ತಿರುವ ಬಯಲು ಸೀಮೆಯವರೂ ಈ ಯೋಜನೆಯ ಬಗ್ಗೆ ಭರವಸೆ ಹೊಂದಿಲ್ಲ. ಮತ್ತೊಂದು ತಿಳಿದಿರಲಿ. ಬೆಂಗಳೂರಿಗೆ ಎಷ್ಟೇ ನೀರು ತಂದರೂ ನೀರು ಸಿಗಲಾರದವರು, ಕೊಂಡು ಕೊಳ್ಳಲಾರದವರು ಇದ್ದೇ ಇರುತ್ತಾರೆ. ಹಂಚಿಕೆಯ ವ್ಯವಸ್ಥೆ ಹಾಗೆ ಇದೆ!
ಬೆಂಗಳೂರಿಗೆ ಈ ನೀರೂ ಸಾಲದು ಎಂದು ಶರಾವತಿ ನೀರನ್ನು ಬೆಂಗಳೂರು ನಗರಕ್ಕೆ ಬಳಸಿಕೊಳ್ಳುವ ಯೋಜನೆಯ ಕಾರ್ಯ ಸಾಧ್ಯತೆ ಅಧ್ಯಯನ ನಡೆಯುತ್ತಿದೆ. ಪಶ್ಚಿಮಕ್ಕೆ ಹರಿಯುವ ನದಿಗಳಿಗೆ ಕಂಟಕ ಇದ್ದೇ ಇದೆ. ಶರಾವತಿಗೆ ಇನ್ನೊಂದು ಕಷ್ಟ ಎದುರಾಗಿದೆ. ಪಂಪ್ಡ್ ಸೋರೇಜ್ ಯೋಜನೆಯಲ್ಲಿ ವಿದ್ಯುತ್ ಬಳಸಿ ನೀರು ಎತ್ತಿ ಮೇಲಿನ ಅಣೆಕಟ್ಟೆಗೆ ಹಾಕಿ ಮತ್ತೆ ಅದನ್ನು ಹರಿಸಿ ವಿದ್ಯುತ್ ಉತ್ಪಾದಿಸುವ ಯೋಜನೆ ಅದು. ವಿರೋಧಿಸುವವರು ಇದು ಒಂದು ರೂಪಾಯಿ ಖರ್ಚು ಮಾಡಿ ಎಪ್ಪತ್ತು ಪೈಸೆ ಸಂಪಾದಿಸುವ ದಾರಿಯ ಯೋಜನೆ, ಅರಣ್ಯ-ಜೀವ ವೈವಿಧ್ಯ ಕೂಡ ನಾಶವಾಗುತ್ತದೆ ಎಂದು ಹೇಳುತ್ತಾರೆ. ಡೆಮಾಕ್ರಸಿಯಲ್ಲಿ ‘ಬಹುಮತ’ ಎಂಬುದು ಪರಿಸರಕ್ಕೆ ಮತ್ತು ಸುಸ್ಥಿರ ಬದುಕಿಗಂತೂ ಮಾರಕ. ಯಾಕೆಂದರೆ ಬಹುಮಂದಿಗೆ ‘ಅಭಿವೃದ್ಧಿ’ ಹೆಸರಲ್ಲಿ ಹೇಗೆ ವಿನಾಶ ಆಗುತ್ತಿದೆ ಎಂದು ಇನ್ನೂ ಮನವರಿಕೆ ಆಗಿಲ್ಲ.
ಮಹಾದಾಯಿ ಕರ್ನಾಟಕದಲ್ಲಿ ಹುಟ್ಟುವುದರಿಂದ ಕರ್ನಾಟಕದಲ್ಲೇ ಹರಿಯಬೇಕು ಎಂದು ತಿರುಗಿಸುವ ವಿಷಯ ಗೊತ್ತಿರಬಹುದು. ಪಶ್ಚಿಮಕ್ಕೆ ಹರಿಯುವ ಇನ್ನುಳಿದ ಯಾವ ಯಾವ ನದಿಗಳಿಗೆ ‘ತಿರುವು ಭಾಗ್ಯ’ ಬರುತ್ತದೋ ನೋಡಬೇಕು.
ಎಲ್ಲ ನದಿಗಳಂತೆ ತುಂಗ ಭದ್ರಾ ನದಿಗಳಿಗೂ ಮಾಲಿನ್ಯದ ಸಮಸ್ಯೆ ಹೆಚ್ಚಾಗುತ್ತಿದೆ. ಇತರ ನದಿಗಳಂತೆ ಅಲ್ಲೂ ಮರಳು ಗಣಿಗಾರಿಕೆ, ಮಣ್ಣು ಗಣಿಗಾರಿಕೆ ಹೆಚ್ಚಾಗುತ್ತಿದೆ. ತುಂಗ ಭದ್ರಾ ಜಲಾಶಯದಲ್ಲಿ ಹೂಳು ತುಂಬಿಕೊಂಡಿದೆ. ಹೂಳು ಎತ್ತುವುದು ಕಷ್ಟ. ಈ ಜಲಾಶಯಕ್ಕೆ ಸಮಾನಾಂತರವಾಗಿ ಕೊಪ್ಪಳದಲ್ಲಿ ಒಂದು ಅಣೆಕಟ್ಟು ಕಟ್ಟುವ ಪ್ರಸ್ತಾಪ ಇದೆಯಂತೆ. ನದಿಗಳ ಸಾವು ಈ ಭೂಮಿ ಮೇಲಿನ ಹೊಸ ವಿದ್ಯಮಾನ. ಜಲಾನಯನದಲ್ಲಿ ನೀರಿನ ಅತಿ ಬಳಕೆ, ಲೆಕ್ಕವಿಲ್ಲದಷ್ಟು ಕೊಳವೆ ಬಾವಿಗಳ ಕೊರೆತ, ಸರಪಳಿ ಅಣೆಕಟ್ಟೆಗಳು, ನದಿ ತಿರುವುಗಳು ಇವೆಲ್ಲ ನದಿಗಳನ್ನು ನಿಧಾನವಾಗಿ ಸಾಯಿಸುವ ಕ್ರಮಗಳೇ. ಪ್ರಕೃತಿಯನ್ನು ನಮಗೆ ಬೇಕಾದಂತೆ ಬಗ್ಗಿಸಿ, ತಿರುಗಿಸಿ ಸುಖಪಡಬಲ್ಲೆವು ಎಂದು ಬಲವಾಗಿ ನಂಬಿರುವವರಿಗೆ ಇದು ಬೇಗ ಅರ್ಥ ಆಗುವುದಿಲ್ಲ. ಕೆಲವು ದೇಶಗಳಲ್ಲಿ ಅಣೆಕಟ್ಟೆಗಳನ್ನು ಕಟ್ಟುವುದನ್ನು ನಿಲ್ಲಿಸಿದ್ದಾರೆ. ಇರುವ ಅಣೆಕಟ್ಟೆಗಳನ್ನು ಒಡೆದು ಹಾಕುತ್ತಿದ್ದಾರೆ. ಯಾಕಿರಬಹುದು ಎಂದು ಯೋಚಿಸದಷ್ಟು ಮಂಕು ಕವಿಸಿಕೊಂಡರೆ ಕಷ್ಟ. ಕಲ್ಯಾಣ ಕರ್ನಾಟಕದಲ್ಲೂ ಕೃಷಿ-ನೀರಾವರಿ ಪದ್ಧತಿ ಬದಲಾಗುತ್ತಾ ಕೊಳವೆ ಬಾವಿಗಳ ಸಂಖ್ಯೆ ಹೆಚ್ಚಾದಷ್ಟೂ ನೀರು-ನದಿ ಬತ್ತುವ ದಾರಿಯಲ್ಲಿದೆ. ನೀರಿಲ್ಲದೆ ಕೃಷಿಕರು ತೊಂದರೆಯಲ್ಲಿರುವುದು ನಿಜ. ಆದರೆ ಇದಕ್ಕೆ ಪರಿಹಾರ ದೊಡ್ಡ ನೀರಾವರಿ ಯೋಜನೆ ಮಾಡುವುದರಲ್ಲಿ, ಕೊಳವೆ ಬಾವಿಗಳನ್ನು ಕೊರೆಯುವುದರಲ್ಲೇ ಇಲ್ಲ. ಇವು ದೀರ್ಘಾವಧಿಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತವೆ.
ಈಗ ನಗರದ ಕೊಳಚೆ ನೀರನ್ನು ಶುದ್ಧೀಕರಿಸಿ ಹಳ್ಳಿಗಳ ಕೆರೆ ತುಂಬಿಸುವುದು, ಕೃಷಿಗೆ ನೀರು ಕೊಡುವುದು ಹೊಸ ಟ್ರೆಂಡ್. ದೊಡ್ಡ ಮೊತ್ತದ ಯೋಜನೆಗಳಾಗುವುದರಿಂದ ಇಂತಹ ಯೋಜನೆಗಳು ಕೂಡ ‘ಮೂರು ಮುಂದಾಳು’ಗಳಿಗೆ ಬಹಳ ಇಷ್ಟ. ನೀರಿನ ಸಮಗ್ರ ನಿರ್ವಹಣೆಯ ಪರ ಇರುವವರೂ ಈ ಕೊಳಚೆ ಶುದ್ಧೀಕರಣ ಯೋಜನೆಗಳ ಪರ ಇದ್ದಾರೆ. ಆದರೆ ಅರೆಬರೆ ಶುದ್ಧೀಕರಣ ಮಾಡಿದ ನೀರು ನಗರದ ಮಾಲಿನ್ಯವನ್ನು ಹಳ್ಳಿಗಳ ಜೊತೆಗೆ ಹಂಚಿಕೊಳ್ಳುವ, ಅಲ್ಲಿನ ಕೆರೆ, ಬಾವಿ ಅಂತರ್ಜಲವನ್ನು ಕಲುಷಿತಗೊಳಿಸುವ ಯೋಜನೆಗಳಾಗುತ್ತಿವೆ ಎಂಬ ಅಪವಾದವೂ ಇದೆ. ಸಾಕ್ಷಿ ಬೇಕಿದ್ದರೆ ಕೆಸಿ ವ್ಯಾಲಿ ಯೋಜನೆಯಿಂದ ಚಿಕ್ಕಬಳ್ಳಾಪುರ-ಕೋಲಾರಗಳಲ್ಲಿ ತೊಂದರೆ ಆಗಿರುವ ಜನರನ್ನು ಕೇಳಬಹುದು. ಇಂತಹ ಯೋಜನೆಗಳಲ್ಲಿ ಸರಕಾರವೇ ನಿಗದಿ ಪಡಿಸಿದ ಮಾನದಂಡಗಳನ್ನು ಪಾಲಿಸುತ್ತಿಲ್ಲ. ಇಂತಹ ಇನ್ನಷ್ಟು ಯೋಜನೆಗಳು ಯೋಜನಾ ಹಂತದಲ್ಲಿ ಇವೆ. ನಮ್ಮ ಜಿಲ್ಲೆಗೆ ಎಲ್ಲಿನ ಕೊಳಚೆ ನೀರು ಬರಬಹುದು, ಬೇಕೋ ಬೇಡವೋ ಎಂದು ಯೋಚಿಸಿ ತೀರ್ಮಾನಿಸಬೇಕಾದವರು ನಾವೇ. ಕೊಳಚೆ ನೀರು ಶುದ್ಧೀಕರಣದ ವಿಚಾರ ಬಂದಾಗಲೆಲ್ಲಾ ಇಸ್ರೇಲನ್ನು ಬೆಟ್ಟು ಮಾಡಿ ತೋರಿಸಲಾಗುತ್ತಿದೆ. ಇಸ್ರೇಲ್‌ನ ರಾಜಕೀಯ ನಮಗೆ ಒಪ್ಪಿತವಲ್ಲವಾದರೂ ಅಲ್ಲಿನ ಕೃಷಿ-ನೀರಿನ ಸಂರಕ್ಷಣೆ-ಬಳಕೆ ಸ್ವಲ್ಪ ಮಟ್ಟಿಗೆ ಮಾದರಿ ಹೌದು. ಆದರೆ ಅಲ್ಲಿನ ಭೌಗೋಳಿಕ ಪರಿಸ್ಥಿತಿ ಬೇರೆ ಇದೆ. ಯಥಾ ಅನುಕರಣೆ ಬೇಕಾಗಿಲ್ಲ.
ಕೇಂದ್ರ ಅಂತರ್ಜಲ ಮಂಡಳಿಯು ಪ್ರತೀ ವರ್ಷ ನಮ್ಮ ರಾಜ್ಯದಲ್ಲಿ ಅಂತರ್ಜಲ ‘ಬಳಕೆ-ಅತಿ ಬಳಕೆ’ ಪಟ್ಟಿಯಲ್ಲಿ ಸೇರ್ಪಡೆಯಾದ ತಾಲೂಕುಗಳ ಪಟ್ಟಿ ಪ್ರಕಟಿಸುತ್ತದೆ. 2023ರಲ್ಲಿ ಕರ್ನಾಟಕದ ಇಪ್ಪತ್ತೈದು ಶೇಕಡಾ ತಾಲೂಕುಗಳು ಕ್ರಿಟಿಕಲ್ ಮತ್ತು ಓವರ್‌ಎಕ್ಸ್ ಪ್ಲಾಯಿಟೆಡ್ ಪಟ್ಟಿಯಲ್ಲಿವೆ. ನದಿ ಕೆರೆಗಳ ಜೀವ ಇರುವುದು ಅವುಗಳ ಜಲಾನಯನದಲ್ಲಿ. ಜಲಾನಯನದಲ್ಲಿ ಹೆಚ್ಚು ನೀರು ಬೇಡುವ ಬೆಳೆಗಳಿದ್ದರೆ ಅದಕ್ಕಾಗಿ ಕೊಳವೆ ಬಾವಿಗಳಿಂದ ನೀರು ಬಳಕೆಯಾಗುತ್ತಿದ್ದರೆ ಕೆರೆ ಹಳ್ಳಗಳಿಗೆ ಮಳೆ ನೀರು, ಒರೆತದ ನೀರು ಹರಿದು ಬರುವುದಿಲ್ಲ.
ಈಗಲೂ ನಾವು ನೀರು ಸರಬರಾಜು ಮಾಡುವ ನೆಲೆಯಿಂದ ಯೋಜನೆಗಳನ್ನು ರೂಪಿಸುತ್ತಿದ್ದೇವೆಯೇ ಹೊರತು ಡಿಮಾಂಡ್‌ಸೈಡ್ ಮ್ಯಾನೇಜ್‌ಮಂಟ್ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ನೀರಿನ ಸಮಸ್ಯೆ ಇರುವುದು ಇಲ್ಲಿಯೇ. ಕೃಷಿಗೆ ನೀರು ಬೇಕು ಸರಿ. ಆದರೆ ಯಾವ ಕೃಷಿ? ಎಷ್ಟು ಕೃಷಿ? ಎಲ್ಲಾದರೂ ಕ್ರಾಪ್ ಪ್ಲಾನಿಂಗ್‌ಮಾಡುತ್ತಿರುವುದನ್ನು ಕೇಳಿದ್ದೀರಾ? ಇದು ಇಲ್ಲದೆ ಎಷ್ಟು ನೀರು ಬೇಕು ಎಂಬುದನ್ನು ಹೇಗೆ ಅಂದಾಜಿಸುವುದು? ಏನು ಬೆಳೆಯಬೇಕು ಎನ್ನುವುದರಲ್ಲೇ ಸಮಸ್ಯೆ ಇದೆ. ಮಧ್ಯ ಕರ್ನಾಟಕಕ್ಕೆ ಅಡಿಕೆ ಗಿಡ ಹಾಕುವ ಹುಚ್ಚು ಹಿಡಿದಿದೆ. ಎಷ್ಟು ಹುಚ್ಚು ಎಂದರೆ ಇರುವ ಬಾವಿಗಳನ್ನು ಮುಚ್ಚಿ ಅಡಿಕೆ ಗಿಡ ಹಾಕುವಷ್ಟು ಎಂದು ದಾವಣಗೆರೆಯ ಪರಿಸರ ಪರರೊಬ್ಬರ ಅನಿಸಿಕೆ.
ನೀರಿನ ವಿಷಯದಲ್ಲಿ ಒಂದೇ ಕಡೆ ಮಾಹಿತಿ ಲಭ್ಯ ಇಲ್ಲ. ಅಂತರ್ಜಲ, ಬಾವಿ, ಕೆರೆ, ಹಳ್ಳ, ನದಿಗಳು ಒಂದಕ್ಕೊಂದು ಸಂಬಂಧಿಸಿದ್ದವು ಆದರೂ ಇವುಗಳಿಗೆಲ್ಲ ಬೇರೆ ಬೇರೆ ಇಲಾಖೆ ಇದೆ. ಮಾಲಿನ್ಯ ನಿಯಂತ್ರಣ ಇಲಾಖೆ ಬೇರೆ ಇದೆ. ಕೃಷಿ ಪದ್ಧತಿಗೂ ನೀರಿಗೂ ಸಂಬಂಧ ಇದೆ. ಆದರೆ ಇಲಾಖೆಗಳಿಗೆ ಪರಸ್ಪರ ಸಂಬಂಧವಿಲ್ಲವಲ್ಲ!
ಕರ್ನಾಟಕದಲ್ಲಿ 36,000 ಕೆರೆಗಳು ಇವೆ ಎಂದು ಬರೆಯುವುದು ರೂಢಿ. ಆದರೆ ಈಗ ಎಷ್ಟಿದೆಯೋ ಯಾರು ಬಲ್ಲರು? ಸಣ್ಣ ನೀರಾವರಿ ಇಲಾಖೆ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹೀಗೆ ಬೇರೆ ಬೇರೆ ಕೆರೆ ವಾರಸುದಾರರು ಇರುವುದರಿಂದ ಒಟ್ಟು ಮಾಹಿತಿ ಲಭ್ಯ ಇಲ್ಲ. ದಿನದಿಂದ ದಿನಕ್ಕೆ ಕೆರೆಗಳು ಕಾಣೆಯಾಗುತ್ತಿವೆ. ಒತ್ತುವರಿ ಆಗುತ್ತಿವೆ. ಕೆರೆ ಒತ್ತುವರಿ ಸರ್ವೇ ನಡೆಯುತ್ತಿರುತ್ತದೆ. ಒತ್ತುವರಿ ಬಿಡಿಸುವ ಕೆಲಸ ಆಗುತ್ತಿಲ್ಲ.
ಆದರೆ ಕೆರೆಗಳನ್ನು ಉಳಿಸಿಕೊಳ್ಳುವುದು ಅನಿವಾರ್ಯ ಎಂಬ ಸಾರ್ವಜನಿಕ ಎಚ್ಚರವೂ ಮೂಡುತ್ತಿದೆ. ಸಾಕಷ್ಟು ಜನ ಜನ ಒತ್ತುವರಿ ತಡೆಯುತ್ತಿದ್ದಾರೆ ಅಥವಾ ವರದಿ ಮಾಡುತ್ತಿದ್ದಾರೆ. ಬೆಂಗಳೂರು ನಗರದ ಹೆಚ್ಚಿನ ಕೆರೆ ಸ್ಥಳೀಯರ ಕೆರೆ ಸಮಿತಿಗಳಾಗಿವೆ. ಆ ಸಮಿತಿಗಳ ಒಕ್ಕೂಟವೂ ಇದೆ. ಕೆರೆ ಸಂರಕ್ಷಣೆಗಾಗಿ, ಕೆರೆ ಅಭಿವೃದ್ಧಿಗಾಗಿ ಸಿಎಸ್‌ಆರ್, ಇತರ ದಾನಿಗಳ ಜೊತೆಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ. ಕೆರೆಗೆ ಕೊಳಚೆ ನೀರು ಬರದಂತೆ ಅವರು ಇಲಾಖೆಗಳ ಜೊತೆಗೆ ತಕರಾರು ಮಾಡುತ್ತಿದ್ದಾರೆ. ಕೆರೆ ಒತ್ತುವರಿ ತಡೆಗಟ್ಟಲು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಕರ್ನಾಟಕದ ಅನೇಕ ಊರುಗಳಲ್ಲಿ ಕೆರೆ ಸಂರಕ್ಷಣೆಗೆ ಸ್ಥಳೀಯರು ಮುಂದಾಗಿದ್ದಾರೆ. ಆಗಾಗ ಕೆರೆ ಪುನಶ್ಚೇತನದ ವರದಿಗಳು ಬರುತ್ತಿವೆ. ಹಾಸನದ ಹಸಿರು ಭೂಮಿ ಪ್ರತಿಷ್ಠಾನ, ಸಾಗರದ ಸ್ವಾನ್‌ಆಂಡ್‌ಮ್ಯಾನ್, ಶಿರಸಿಯ ಜೀವಜಲ ಕಾರ್ಯಪಡೆ..ಹೀಗೆ ಇನ್ನೂ ರಾಜ್ಯಾದ್ಯಂತ ಸ್ಥಳೀಯ ಪರಿಸರಾಸಕ್ತ ಗುಂಪುಗಳು, ಸ್ವಯಂಸೇವಾ ಸಂಸ್ಥೆಗಳು, ಲಯನ್ಸ್, ರೋಟರಿಯಂತಹ ಸಂಸ್ಥೆಗಳು ಕೆರೆ ಕೆಲಸ ಕೈಗೆತ್ತಿಕೊಂಡಿದ್ದಾವೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲೂ ಶ್ರಮಿಕರು ಕೆರೆ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ.
ಸರಕಾರದ ಕಡೆಯಿಂದ ಜಲ ಪುನಶ್ಚೇತನದ ಕೆಲಸ ಹಿಂದೆ ನಡೆದಷ್ಟು ಈಗ ನಡೆಯುತ್ತಿಲ್ಲ. ಕೆಲವು ಕಡೆ ಸಣ್ಣ ನೀರಾವರಿ ಇಲಾಖೆ, ಮಂಡಳಿಗಳ ಮೂಲಕ ಜಲಕಾಯಗಳ ಪುನಶ್ಚೇತನ ನಡೆಯುತ್ತಿದೆ. ಕರಾವಳಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕಿಂಡಿ ಅಣೆಕಟ್ಟುಗಳನ್ನು ಕಟ್ಟುತ್ತಿರುವುದು ಶ್ಲಾಘನೀಯ ಕೆಲಸ. ನೀರಿನ ಸಮಗ್ರ ನಿರ್ವಹಣೆಗೆ ವಿಕೇಂದ್ರೀಕೃತ, ಸ್ಥಳೀಯ ಭೌಗೋಳಿಕ-ಪರಿಸರ ವ್ಯವಸ್ಥೆ ಆಧಾರಿತ, ಜನರನ್ನು ಒಳಗೊಳ್ಳುವ ಸುಸ್ಥಿರತೆ ಮತ್ತು ಸಾಮಾಜಿಕ ನ್ಯಾಯವನ್ನು ಸಾಧಿಸುವ ನೀತಿ ಮತ್ತು ಯೋಜನೆಗಳು ಆಗಬೇಕು. ಇಂತಹ ಉತ್ತಮ ಜಲನೀತಿಯ ಕರಡೊಂದು ಕರ್ನಾಟಕ ಜ್ಞಾನ ಆಯೋಗದಿಂದ ನಾಲ್ಕು ವರ್ಷಗಳ ಹಿಂದೆ ಸಿದ್ಧವಾಯಿತು. ‘ಮೂರು ಮುಂದಾಳುಗಳಿಗೆ’ ಇಷ್ಟ ಆಗದಿರುವ ಕಾರಣಕ್ಕೆ ಅದನ್ನು ಪಕ್ಕಕ್ಕೆ ಸರಿಸಿ ಹಳೆಯ ನೀತಿಯನ್ನು ಸ್ವಲ್ಪ ತಿದ್ದುಪಡಿ ಮಾಡಿ ಜಾರಿಗೊಳಿಸಲಾಯಿತು. ಆ ಕರಡು ಸಾರ್ವಜನಿಕವಾಗಿ ಲಭ್ಯವೂ ಆಗಲಿಲ್ಲ, ಚರ್ಚೆಗೂ ಒಳಪಡಲಿಲ್ಲ.
ಒಂದು ಸಮಾಜದ ಆರೋಗ್ಯ ಉಳಿಯುವುದು ಅಲ್ಲಿ ತಮ್ಮ ಹಕ್ಕು ಕರ್ತವ್ಯಗಳ ಅರಿವುಳ್ಳ ಪ್ರಜ್ಞಾವಂತ ನಾಗರಿಕ ಸಮಾಜ ಎಷ್ಟು ಸಕ್ರಿಯವಾಗಿದೆ ಎಂಬುದರ ಮೇಲೆ ನಿಂತಿದೆ. ಕರ್ನಾಟಕದ ನೀರು- ಪರಿಸರದ ಸಮಸ್ಯೆಗಳು ಗಂಭೀರ ಪರಿಸ್ಥಿತಿಗೆ ಬಂದಿರುವುದು ಹೌದಾದರೂ ನಾಗರಿಕ ಸಮಾಜದ ಗುಂಪುಗಳು ಸಕ್ರಿಯವಾಗುತ್ತಿರುವುದು ಅಷ್ಟೇ ನಿಜ. ಪರಿಸರ ಪರ ಚಿಂತನೆ ಇರುವ ಗುಂಪುಗಳು ಹೆಚ್ಚಾಗುತ್ತಿವೆ. ಅವುಗಳ ಒಕ್ಕೂಟಗಳೂ, ವೇದಿಕೆಗಳೂ ರೂಪು ಪಡೆಯುತ್ತಿವೆ. ಭರವಸೆ ಕಳೆದುಕೊಳ್ಳವಂತಿಲ್ಲ. ಬದುಕಬೇಡವೇ?