ಎಸೆಸೆಲ್ಸಿ ಪರೀಕ್ಷೆ ಒಂದಿಷ್ಟು ಸಲಹೆಗಳು

Update: 2025-03-20 12:06 IST
ಎಸೆಸೆಲ್ಸಿ ಪರೀಕ್ಷೆ ಒಂದಿಷ್ಟು ಸಲಹೆಗಳು
  • whatsapp icon

ಭಾಗ- 2

ಪರೀಕ್ಷೆ ದಿನ ನೀವು ಮಾಡಬೇಕಾಗಿದ್ದು ಏನು?

ಪರೀಕ್ಷೆ ದಿನ ಬಂದೇ ಬಿಟ್ಟಿತು. ಎಷ್ಟು ಅಭ್ಯಾಸ ಮಾಡಿದೆ ಎನ್ನುವುದಕ್ಕಿಂತ, ಹೇಗೆ ಪರೀಕ್ಷೆ ಬರೆಯಬೇಕು ಎನ್ನುವುದು ಬಹು ಮುಖ್ಯವಾಗುವುದು. ಹೀಗಾಗಿ ಪರೀಕ್ಷೆಯ ದಿನ ಒಂದಿಷ್ಟು ಸಿದ್ಧತೆಯಾಗುವುದು ಅಗತ್ಯ.

ಮೊದಲ ದಿನವಂತೂ ಒಂದಷ್ಟು ನರ್ವಸ್ ಸಹಜ. ಹೇಗೋ ಏನೋ ಎಂಬ ಅಳುಕು ಇರುತ್ತದೆ. ಹೀಗಾಗಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ.

* ಬೆಳಗ್ಗೆ ಆದಷ್ಟು ಬೇಗ ಏಳಬೇಕು. ನಿತ್ಯಕೆಲಸ ಬೇಗ ಮುಗಿಸಿರಿ.

* ಬೇಗ ಸ್ನಾನ ಮುಗಿಸಿರಿ.

* ಶುಚಿಯಾದ, ಬಿಸಿಯಾದ ಹಿತಮಿತವಾದ ಲಘು ಉಪಾಹಾರ ಸೇವಿಸಿರಿ.

* ಶುಭ್ರ ಶಾಲಾ ಸಮವಸ್ತ್ರ ಧರಿಸಿ.

* ಅರ್ಧಗಂಟೆ ಮೊದಲು ಪರೀಕ್ಷಾ ಕೇಂದ್ರ ತಲುಪುವಂತೆ ವ್ಯವಸ್ಥೆ ಮಾಡಿಕೊಳ್ಳಿರಿ.

* ಅಗತ್ಯವಿದ್ದರೆ ನೀರಿನ ಬಾಟಲ್ ಇಟ್ಟುಕೊಳ್ಳಿರಿ.

*ಲೇಖನ ಸಾಮಗ್ರಿಗಳ ಬಗ್ಗೆ ಅಂತಿಮವಾಗಿ ಒಮ್ಮೆ ಗಮನಿಸಿ.

* ಸಣ್ಣ ಕರವಸ್ತ್ರ ಜೊತೆಗೆ ಇಟ್ಟುಕೊಳ್ಳಿರಿ.

* ಪರೀಕ್ಷೆ ಕೊಠಡಿ ಪ್ರವೇಶ ಮುನ್ನ ಒಮ್ಮೆ ಏನಾದರೂ ಸ್ಲಿಪ್, ಬರಹ ಆಕಸ್ಮಿಕವಾಗಿ ಉಳಿದಿದೆಯೇ ಎಂದು ನೋಡಿಕೊಂಡು ಹೊರಗೆ ಹಾಕಿಬಿಡಿ.

*ಪ್ರವೇಶ ಪತ್ರ ಹೊಂದಿಸಿಕೊಳ್ಳಿರಿ.

* ಒತ್ತಡ, ಆತಂಕ ಬೇಡ. ರಿಲ್ಯಾಕ್ಸ್ ಆಗಿರಿ. ಒತ್ತಡ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

*ಪರೀಕ್ಷಾ ಕೊಠಡಿ ಪ್ರವೇಶ ಮಾಡಿದ ಮೇಲೆ ಯಾರೊಂದಿಗೂ ಮಾತಿಗಿಳಿಯಬೇಡಿ.

* ಕುಳಿತ ಆಸನ ಸಂಖ್ಯೆ, ಪ್ರವೇಶ ಪತ್ರ ಸಂಖ್ಯೆ ಎರಡೂ ಸರಿಯಾಗಿವೆಯೇ ಎನ್ನುವುದು ಖಚಿತಪಡಿಸಿಕೊಳ್ಳಿ.

* ನೀವು ಕುಳಿತ ಆಸನದ ಆಸುಪಾಸು ಏನಾದರೂ ಸ್ಲಿಪ್ ಬರಹ, ಕಾಪಿಚೀಟಿ ಇವೆಯೇ ಪರಿಶೀಲಿಸಿಕೊಳ್ಳಿರಿ. ಇದ್ದರೆ ಕೊಠಡಿ ಮೇಲ್ವಿಚಾರಕರಿಗೆ ಅಗತ್ಯ ಮಾಹಿತಿ ನೀಡಿ.

* ಉತ್ತರ ಪತ್ರಿಕೆಯು ಬರೆಯಲು ಯೋಗ್ಯವಾಗಿದೆಯೇ ಎಂದು ಖಚಿತ ಪಡಿಸಿಕೊಳ್ಳಿರಿ.

*ಕೊಠಡಿಯೊಳಗೆ ಬಂದು ಹೋಗುವ ಅಧಿಕಾರಿಗಳತ್ತ ಗಮನ ಹರಿಸುವುದು ಬೇಡ.

*ಪರೀಕ್ಷೆ ಆರಂಭ ನಂತರದ ಅರ್ಧಗಂಟೆ ಶೌಚಕ್ಕೆ ಹೋಗಲು ಅವಕಾಶವಿಲ್ಲ.

* ಪ್ರಶ್ನೆ ಪತ್ರಿಕೆ ಒಮ್ಮೆ ಪೂರ್ಣ ಓದಿಕೊಳ್ಳಿರಿ.

* ಪ್ರತೀ ಉತ್ತರಕ್ಕೂ ಅಂದಾಜು ಸಮಯ ನಿಗದಿ ಪಡಿಸಿಕೊಳ್ಳಿ.

*ಉತ್ತರ ಪತ್ರಿಕೆಯ ಸೂಕ್ತ ಸ್ಥಳದಲ್ಲಿ ನೋಂದಣಿ ಸಂಖ್ಯೆ, ಅಗತ್ಯ ಮಾಹಿತಿ ತುಂಬಿರಿ.

* ಕೊಠಡಿ ಒಳಗೆ ಮೊಬೈಲ್ ಫೋನ್, ಡಿಜಿಟಲ್ ವಾಚ್, ಬ್ಲೂಟೂತ್ ತೆಗೆದುಕೊಂಡು ಹೋಗುವಂತಿಲ್ಲ.

ಪರೀಕ್ಷೆ ಬರೆಯುವಾಗ ಒಂದಿಷ್ಟು ಸಲಹೆಗಳು

ಉತ್ತರ ಬರೆಯುವುದು ಒಂದು ಸ್ಕಿಲ್. ಎಷ್ಟು ಓದಿದ್ದೇವೆ, ಅರ್ಥೈಸಿಕೊಂಡಿದ್ದೇವೆ ಎನ್ನುವುದಕ್ಕಿಂತ ಹೇಗೆ ಉತ್ತರ ಬರೆದಿದ್ದೇವೆ ಎನ್ನುವುದು ಬಹಳ ಮುಖ್ಯ. ನಿಗದಿತ ಮೂರು ಗಂಟೆಯಲ್ಲಿ ವ್ಯವಸ್ಥಿತವಾಗಿ, ಮೌಲ್ಯಮಾಪಕರು ನಿರೀಕ್ಷಿಸುವ ರೀತಿಯಲ್ಲಿ ಉತ್ತರ ಬರೆಯುವುದು ಅತ್ಯಗತ್ಯ. ಆಗಲೇ ಹೆಚ್ಚು ಅಂಕ ಪಡೆಯಲು ಸಾಧ್ಯ. ನಿಮಗೆ ತಿಳಿದಿರುವುದೆಲ್ಲವನ್ನೂ ಬರೆಯಲು ಸಾಧ್ಯವಿಲ್ಲ. ಪ್ರಶ್ನೆಗೆ ನಿಗದಿ ಪಡಿಸಿದ ಅಂಕ, ಉತ್ತರಿಸಲು ಸೂಚಿಸಿದ ಸೂಚನೆ ಆಧರಿಸಿ ಉತ್ತರಿಸಬೇಕು. ಪ್ರಶ್ನೆ ಪತ್ರಿಕೆ ವಿನ್ಯಾಸ ನೀವು ಅಭ್ಯಾಸ ಮಾಡಿರುವುದರಿಂದ ಯಾವ ಪ್ರಶ್ನೆಗೆ ಎಷ್ಟು ಉತ್ತರ ಬರೆಯಬೇಕು ಎಂಬುದು ತಿಳಿದುಕೊಂಡಿರುತ್ತೀರಿ. ಅದರಂತೆ ಉತ್ತರಿಸಲು ಪ್ರಯತ್ನಿಸಿ.

ಅತ್ಯುತ್ತಮ ಉತ್ತರ ಬರೆಯಲು ಒಂದಿಷ್ಟು ಸಲಹೆಗಳು

* ಆದಷ್ಟು ಕ್ರಮವಾಗಿಯೇ ಉತ್ತರ ಬರೆಯಿರಿ.

*ಉತ್ತರವು ಸ್ಪಷ್ಟವಾಗಿರಲಿ.

* ಅಗತ್ಯಕ್ಕಿಂತ ಹೆಚ್ಚು ಉತ್ತರ ಬರೆದು ಸಮಯ ಹಾಳು ಮಾಡಿಕೊಳ್ಳಬೇಡಿ.

*ಬರವಣಿಗೆ ಶುದ್ಧವಾಗಿ ಅಂದವಾಗಿ ಆಕರ್ಷಣೀಯವಾಗಿರಲಿ.

*ಚಿತ್ರ, ನಕ್ಷೆಗೆ ಮಾತ್ರ ಪೆನ್ಸಿಲ್ ಬಳಸಿ.

* ಕಪ್ಪು ಅಥವಾ ನೀಲಿ ಪೆನ್ನು ಮಾತ್ರ ಬರವಣಿಗೆಗೆ ಬಳಸಿ.

*ಪೂರ್ಣ ಪೇಪರ್ ಉತ್ತರಿಸಲು ಒಂದೇ ಬಣ್ಣದ ಪೆನ್ ಬಳಸಿ.

* ಗೊಂದಲಕ್ಕೀಡುಮಾಡುವ ತಿರುಚಿದ ಕ್ಲಿಷ್ಟ ಪ್ರಶ್ನೆಗಳನ್ನು ಎರಡು ಮೂರು ಬಾರಿ ಓದಿ ಅರ್ಥೈಸಿಕೊಂಡು ಆಲೋಚಿಸಿ ನಂತರ ಉತ್ತರಿಸಿ.

* ಉತ್ತರಿಸುವಾಗ ವ್ಯಾಕರಣಾಂಶಗಳತ್ತ ಗಮನ ಹರಿಸಿ.

*ಉತ್ತರ ಪತ್ರಿಕೆಯಲ್ಲಿ ಯಾವುದೇ ಧಾರ್ಮಿಕ ಚಿಹ್ನೆ, ಹೆಸರು ಹಾಕಬೇಡಿ.

* ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ಬರಹ, ಗುರುತು ಮಾಡಬೇಡಿ.

*ಎಡಿಷನಲ್ ಹಾಳೆ ಕಟ್ಟುವಾಗ ಅಗತ್ಯ ಮಾಹಿತಿ ತುಂಬಿರಿ.

*ಹದಿನೈದು ನಿಮಿಷ ಮೊದಲೇ ಎಲ್ಲವೂ ಉತ್ತರಿಸಲು ಪ್ರಯತ್ನಿಸಿ.

*ಕೊನೆಯ ಹದಿನೈದು ನಿಮಿಷ ಉತ್ತರ ಪತ್ರಿಕೆ ಪುನಃ ಪರಿಶೀಲಿಸಿ.

* ಆಸನ ಬಿಟ್ಟು ಕದಲಬೇಡಿ. ಅನಗತ್ಯವಾಗಿ ಎದ್ದು ನಿಲ್ಲಬೇಡಿ.

*ಪ್ರಶ್ನೆ ಪತ್ರಿಕೆಯಲ್ಲಿ ಉತ್ತರಿಸಿದ ಪ್ರಶ್ನೆಗಳನ್ನು ಪೆನ್ಸಿಲ್‌ನಿಂದ ಟಿಕ್ ಮಾಡಿಕೊಳ್ಳಿರಿ.

*ಅಗತ್ಯ ಇರುವ ಕಡೆ ಮೇಲ್ವಿಚಾರಕರ ಸಹಿ ಪಡೆಯಿರಿ.

*ಎಎಂಎಲ್, ನಾಮಿನಲ್ ರೋಲ್‌ಗೆ ಸಹಿ ಮಾಡುವುದು ಮರೆಯದಿರಿ.

* ಪರೀಕ್ಷೆ ಬರೆದ ನಂತರ ಆ ವಿಷಯದ ಬಗ್ಗೆ ಹೆಚ್ಚು ಚರ್ಚೆ ಮಾಡುವುದು ತರವಲ್ಲ.

*ಪರೀಕ್ಷೆ ನಡೆಯುವ ದಿನಗಳಲ್ಲಿ ರಜೆ ಬಂದಾಗ ಆ ದಿನವನ್ನು ಸದ್ಬಳಕೆ ಮಾಡಿಕೊಳ್ಳಿ. ಹೆಚ್ಚು ಪುನಃರಾವರ್ತನೆ ಮಾಡಿ.

ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಫಲ ಯಾವತ್ತೂ ಸಿಕ್ಕೇ ಸಿಗುತ್ತದೆ. ಅರ್ಹತೆ, ಸಾಮರ್ಥ್ಯ ಒರೆಗೆ ಹಚ್ಚಿ ಹೆಚ್ಚಿನ ಶ್ರಮ ವಹಿಸಿ ಅಭ್ಯಾಸ ಮಾಡಿದರೆ, ಖಂಡಿತ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿದೆ. ಉಜ್ವಲ ಭವಿಷ್ಯ ನಿರ್ಮಾಣದ ಮೊದಲ ಘಟ್ಟ ದಾಟಿ, ಉನ್ನತ ಶಿಕ್ಷಣದ ರಹದಾರಿ ಪ್ರವೇಶಿಸಿ ಯಶಸ್ಸು ಸಾಧಿಸಿ. ಸುಂದರ ಬದುಕು ಕಟ್ಟಿಕೊಳ್ಳವ ಪ್ರಯತ್ನ ನಿಮ್ಮದಾಗಲಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪ್ರಹ್ಲಾದ್, ಯಡ್ರಾಮಿ

contributor

Similar News