ದೇಶದಲ್ಲಿ ಉದ್ಯೋಗ ಸಿಗುವ ಭರವಸೆ ಕಳೆದುಕೊಂಡು ಬದುಕಿಗಾಗಿ ಯುದ್ಧೋನ್ಮಾದದ ಇಸ್ರೇಲ್‌ಗೆ ತೆರಳುತ್ತಿರುವ ಭಾರತದ ಕಾರ್ಮಿಕರು

Update: 2024-02-03 04:43 GMT
Editor : jafar sadik | Byline : ವಿನಯ್ ಕೆ.

Photo: twitter.com/TheSiasatDaily

ಫೆಲೆಸ್ತೀನ್‌ನ ಮೇಲೆ ಆಕ್ರಮಣ ಶುರು ಮಾಡಿದ ಬಳಿಕ ಫೆಲೆಸ್ತೀನಿಯರನ್ನು ಒಳಗೆ ಬಿಟ್ಟುಕೊಳ್ಳದ ಇಸ್ರೇಲ್‌ಗೆ ದುಡಿಯುವುದಕ್ಕೆ ಈಗ ಜನರೇ ಇಲ್ಲವಾಗಿದೆ. ಅದಕ್ಕೆ ಸರಿಯಾಗಿ, ‘ವಿಶ್ವಗುರು’ವೆನ್ನುವ ಭಾರತ ದೇಶದಲ್ಲಿ ಕೆಲಸವಿಲ್ಲದೆ, ಹೊತ್ತಿನ ತುತ್ತಿಗೂ ತತ್ವಾರವಾಗಿ ಕಂಗೆಟ್ಟಿರುವ ಲಕ್ಷಾಂತರ ಕಾರ್ಮಿಕರು ಹಸಿವಿನಿಂದ ಬಳಲುತ್ತಿದ್ದಾರೆ.

ಇಸ್ರೇಲ್‌ಗೆ ಹೋಗಲು ಇಲ್ಲಿ ಭಾರೀ ಪೈಪೋಟಿಯೇ ನಡೆದಿದೆ. ಈಗ ಸುಮಾರು 10,000 ಕಾರ್ಮಿಕರು ವಾರಕ್ಕೆ 700ರಿಂದ 1,000 ಸಂಖ್ಯೆಯ ಬ್ಯಾಚ್‌ಗಳಲ್ಲಿ ಇಸ್ರೇಲ್‌ಗೆ ಹೋಗಲಿದ್ದಾರೆ. ಯುಪಿ, ಹರ್ಯಾಣಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆದ ಬೆನ್ನಿಗೆ ಬಿಹಾರ, ರಾಜಸ್ಥಾನ, ಹಿಮಾಚಲ ಪ್ರದೇಶ, ಮಿಜೋರಾಂ ಹಾಗೂ ತೆಲಂಗಾಣಗಳಲ್ಲೂ ಇಸ್ರೇಲ್‌ಗೆ ಹೋಗಲು ಕಾರ್ಮಿಕರು ಸಿದ್ಧವಾಗಿದ್ದಾರೆ.

ಯುದ್ಧ ಸ್ಥಿತಿಯಲ್ಲಿ ಇಸ್ರೇಲ್‌ನಲ್ಲಿ ನಿರ್ಮಾಣ ಉದ್ಯಮಕ್ಕೆ ಯಾವ ಮಟ್ಟದಲ್ಲಿ ಕಾರ್ಮಿಕರು ಇಲ್ಲವಾಗಿದ್ದಾರೆಂದರೆ, 50,000ದಿಂದ 60,000ದಷ್ಟು ವಿದೇಶಿ ಕಾರ್ಮಿಕರನ್ನು ಅಲ್ಲಿಗೆ ಕರೆಸಿಕೊಳ್ಳಲು ಇಸ್ರೇಲ್ ತಯಾರಾಗಿದೆ. ಅದರಲ್ಲಿ ಭಾರತದ 10,000 ಕಾರ್ಮಿಕರನ್ನು ತನ್ನಲ್ಲಿ ಕರೆಸಿಕೊಳ್ಳುವುದಕ್ಕೆ ಕಳೆದ ತಿಂಗಳೇ ಒಪ್ಪಿಗೆ ಕೊಟ್ಟಿದೆ.

ಮೆಕ್ಸಿಕೋ, ಕೀನ್ಯಾ ಮತ್ತು ಮಲಾವಿಯಿಂದಲೂ ಕೆಲಸಗಾರರನ್ನು ನೇಮಿಸಿಕೊಳ್ಳಲು ಅದು ನೋಡುತ್ತಿದೆ. ಭಾರತ, ಶ್ರೀಲಂಕಾ ಮತ್ತು ಉಜ್ಬೇಕಿಸ್ತಾನ್‌ಗಳಲ್ಲಿ ಕಾರ್ಮಿಕರ ಆಯ್ಕೆ ಆಗಲೇ ಶುರುವಾಗಿದೆ. ಇಲ್ಲಿಯವರೆಗೆ ಪರೀಕ್ಷಿಸಲಾದ ಸುಮಾರು 8,000 ಕಾರ್ಮಿಕರಲ್ಲಿ ಸುಮಾರು 5,500 ಕಾರ್ಮಿಕರು ಇಸ್ರೇಲ್‌ನಲ್ಲಿ ಕೆಲಸ ಮಾಡಲು ಸರಿಹೊಂದುತ್ತಾರೆ ಎಂಬುದು ಕಂಡುಬಂದಿದ್ದು, ಅವರಲ್ಲಿ ಹೆಚ್ಚಿನವರು ಭಾರತದ ಕಾರ್ಮಿಕರೇ ಆಗಿದ್ದಾರೆ. ಸುಮಾರು 18,000 ಭಾರತೀಯರು ಇಸ್ರೇಲ್‌ನಲ್ಲಿ ಈಗಾಗಲೇ ಕೆಲಸ ಮಾಡುತ್ತಿದ್ದು, ಹೆಚ್ಚಿನವರು ಯುದ್ಧದ ವೇಳೆಯಲ್ಲಿಯೂ ದೇಶ ಬಿಡದೆ ಇಸ್ರೇಲ್‌ನಲ್ಲಿಯೇ ಇರಲು ನಿರ್ಧರಿಸಿದ್ದಾರೆ. ಹಾಗಾಗಿ ಅವರು ಅಲ್ಲಿ ಸಾಕಷ್ಟು ಸುರಕ್ಷಿತರಾಗಿದ್ಧಾರೆ ಎಂದೆಲ್ಲ ಬಿಂಬಿಸುವುದು ನಡೆದಿದೆ.

ಆದರೆ, ವಾಸ್ತವ ಬೇರೆಯೇ ಇದೆ. ಅಲ್ಲಿಂದ ಬಿಟ್ಟು ಭಾರತಕ್ಕೆ ಮರಳಿದರೆ ಹಸಿದ ಹೊಟ್ಟೆಯಲ್ಲಿಯೇ ಇರಬೇಕಾಗುತ್ತದೆ ಎಂಬುದು ಗೊತ್ತಿರುವುದರಿಂದಲೇ ಯುದ್ಧ ನಡೆಯುತ್ತಿದ್ದರೂ ಅವರು ಅಲ್ಲಿಂದ ಬಿಟ್ಟು ಬರಲು ಮನಸ್ಸು ಮಾಡಿದಂತಿಲ್ಲ. ಈಗ ಇಸ್ರೇಲ್‌ಗೆ ಹೋಗಲು ತುದಿಗಾಲಲ್ಲಿ ನಿಂತಿರುವ ಕಾರ್ಮಿಕರು ಕೂಡಾ ಅಲ್ಲಿ ಹೋಗಿ ಸತ್ತರೂ ಪರವಾಗಿಲ್ಲ, ಇಲ್ಲಿ ಮಾತ್ರ ಹಸಿವಿನಿಂದ ನರಳುವ ಕರ್ಮ ಬೇಡ ಎನ್ನುತ್ತಿರುವುದೇ ಇದಕ್ಕೆ ಸಾಕ್ಷಿ. ಎಂಥ ದಾರುಣ ಸನ್ನಿವೇಶ ಈ ದೇಶದಲ್ಲಿದೆ ಎನ್ನುವುದನ್ನು ಈ ಕಾರ್ಮಿಕರ ಮಾತುಗಳೇ ಹೇಳುತ್ತಿವೆ. ವರದಿಗಳು ದಾಖಲಿಸಿರುವ ಆ ಕಾರ್ಮಿಕರ ಮಾತುಗಳ ಬಗ್ಗೆ ತಿಳಿಯುವಾಗ ಕರುಳು ಚುರ್ ಎನ್ನದೇ ಇರುವುದಿಲ್ಲ. ಅವರಾರಿಗೂ ಬೇರೆಲ್ಲೋ ಹೋಗಿ ದುಡಿಯುವ ಮನಸ್ಸಿಲ್ಲ. ಆದರೆ ಅನಿವಾರ್ಯತೆ ಅವರನ್ನು ಮನೆ ಮಾರು ಬಿಟ್ಟು ಈ ದೇಶದಿಂದ ಹೊರಗೆ ಹೋಗುವಂತೆ ಮಾಡಿದೆ. ಇದೇ ಅಲ್ಲವೆ ಅವರ ಪಾಲಿಗೆ ಈ ಮಹಾನ್ ‘ವಿಶ್ವಗುರು’ವಿನ ದೇಶ ಕೊಟ್ಟಿರುವ ದೊಡ್ಡ ಉಡುಗೊರೆ?

ತನ್ನ ದೇಶದ ಜನರು ಬದುಕಲು ಒಂದು ಉದ್ಯೋಗವನ್ನೂ ಕೊಡಲಾರದ ಮೋದಿ ಸರಕಾರ, ಈಗ ಅವರನ್ನೆಲ್ಲ ಯುದ್ಧ ಆವರಿಸಿರುವ ಇಸ್ರೇಲ್‌ಗೆ ತಳ್ಳುತ್ತಿದೆ ಎನ್ನುವುದೇ ತೀರಾ ನಾಚಿಕೆಗೇಡಿನ ಸಂಗತಿಯಾಗಿದೆ. ಅಲ್ಲದೆ ಸರಕಾರ ಅಲ್ಲಿಗೆ ಹೋಗುತ್ತಿರುವ ಕಾರ್ಮಿಕರ ಭದ್ರತೆ ವಿಚಾರದಲ್ಲಿ ಏನೇನೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬುದು ಅದರ ಹೊಣೆಗೇಡಿತನದ ಪರಮಾವಧಿಯಾಗಿದೆ.

ಉತ್ತರ ಪ್ರದೇಶ, ಹರ್ಯಾಣಗಳಿಂದ ಕಾರ್ಮಿಕರನ್ನು ಹೀಗೆ ಯಾವುದೇ ಸುರಕ್ಷತಾ ಕ್ರಮಗಳ ಪಾಲನೆಯೂ ಇಲ್ಲದೆ ಕಳಿಸಿಕೊಡಲು ಮುಂದಾಗಿರುವುದಕ್ಕೆ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ತಕರಾರು ತೆಗೆದಿದೆ. ಅಲ್ಲಿಗೆ ಕಳಿಸಲಾಗುವ ಈ ಕಾರ್ಮಿಕರಿಗೆ ಆಕರ್ಷಕ ಸಂಬಳದ ಆಮಿಷವಿದೆ ಅಷ್ಟೆ. ಆದರೆ ಸುರಕ್ಷತೆಯ ಭರವಸೆಯೇ ಇಲ್ಲ. ಯಾವುದೇ ವಿಮೆ, ವೈದ್ಯಕೀಯ ವಿಮೆಯಂಥ ಸೌಲಭ್ಯವೂ ಅವರಿಗಿಲ್ಲ, ಉದ್ಯೋಗದ ಖಾತ್ರಿಯೂ ಇಲ್ಲ. ಹೀಗಿರುವಾಗ ಅಲ್ಲಿಗೆ ಹೋದ ಮೇಲಿನ ಅವರ ಸ್ಥಿತಿ ಏನಿರುತ್ತದೆಯೋ ಯಾರಿಗೆ ಗೊತ್ತು? ಇವೆಲ್ಲ ವಿಷಯಗಳ ಬಗ್ಗೆ ಗೊತ್ತಿದ್ದೂ ಅಲ್ಲಿಗೆ ಹೋಗಲು ಕಾರ್ಮಿಕರು ಹಿಂದೆ ಮುಂದೆ ನೋಡುತ್ತಿಲ್ಲವೆಂಬುದು, ಭಾರತದಲ್ಲಿನ ಶೋಚನೀಯ ಸ್ಥಿತಿಯನ್ನು ಸಾಬೀತು ಮಾಡುತ್ತಿದೆ. ಆದರೆ ಸರಕಾರ ಮಾತ್ರ ಸುಳ್ಳು ಕಥೆಗಳನ್ನು ಹೇಳಿಕೊಂಡೇ ಬರುತ್ತಿದೆ.

2017-2018ರಲ್ಲಿ ಶೇ.6ರಷ್ಟಿದ್ದ ನಿರುದ್ಯೋಗ 2021-2022ರಲ್ಲಿ ಶೇ.4ಕ್ಕೆ ಇಳಿದಿದೆ ಎಂದು ಸರಕಾರಿ ಡೇಟಾಗಳು ತೋರಿಸುತ್ತವೆ. ಆದರೆ, ವಾಸ್ತವ ಏನೆಂದರೆ, ಈ ಸರಕಾರಿ ಅಂಕಿ ಅಂಶಗಳಲ್ಲಿ ಸಂಬಳವಿಲ್ಲದ ಕೆಲಸಗಳನ್ನೂ ಉದ್ಯೋಗಗಳು ಎಂದು ಸೇರಿಸಲಾಗುತ್ತಿದೆ ಎಂಬುದನ್ನು ಅರ್ಥಶಾಸ್ತ್ರಜ್ಞರೇ ಹೇಳುತ್ತಿದ್ದಾರೆ. ಹೀಗೆ ದೇಶ ಸುಭಿಕ್ಷವಾಗಿದೆ ಎಂದು ಸುಳ್ಳು ಸುಳ್ಳೇ ಬಿಂಬಿಸಲಾಗುತ್ತಿದೆ.

ಸಂಘಟಿತ ಉದ್ಯೋಗಗಳು ಅಷ್ಟೇನೂ ಬೆಳೆಯುತ್ತಿಲ್ಲ ಮತ್ತು ಅದೇ ಸಮಯದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಯುವಜನರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಈ ಯಾವ ವಾಸ್ತವವನ್ನೂ ಸರಕಾರ ಗಮನಿಸದೆ, ಬರೀ ತನ್ನ ವೈಫಲ್ಯಗಳನ್ನು ಅಡಗಿಸುವುದರಲ್ಲಿಯೇ ತೊಡಗಿದೆ. ಸಂಶೋಧನಾ ವರದಿಗಳ ಪ್ರಕಾರ, 1980ರ ದಶಕದ ಬಳಿಕ ನಿಯಮಿತ ವೇತನ ಅಥವಾ ಸಂಬಳದ ಕೆಲಸವಿರುವ ಕಾರ್ಮಿಕರ ಪಾಲು 2004ರಲ್ಲಿ ಹೆಚ್ಚಾಗಲು ಶುರುವಾಯಿತು. ಆದರೆ, 2019ರಿಂದ ಮತ್ತೆ ಕುಸಿಯತೊಡಗಿದೆ. ನಿಯಮಿತ ವೇತನದ ಉದ್ಯೋಗಗಳ ವೇಗ ಕಡಿಮೆಯಾಗಿದೆ. ಕೋಟಿ ಕೋಟಿ ಉದ್ಯೋಗಗಳು ಬರೀ ಭರವಸೆಯಾಗಿಯೇ ಉಳಿದಿವೆ. ಇಂಥವರು ಮೂರನೇ ಆರ್ಥಿಕತೆಯೆಡೆಗೆ ದೇಶವನ್ನು ಕೊಂಡೊಯ್ಯಲಾಗುತ್ತದೆ ಎಂದು ಹೇಳುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಿನಯ್ ಕೆ.

contributor

Similar News