‘ಅದಾನಿ ವಿದೇಶಾಂಗ ನೀತಿ’ಯಾಗಿ ಬದಲಾದ ಭಾರತದ ವಿದೇಶಾಂಗ ನೀತಿ

ನಮ್ಮ ದೇಶದ ಪ್ರಧಾನಿ ಒಂದು ದೇಶಕ್ಕೆ ರಾಜತಾಂತ್ರಿಕ ಭೇಟಿ ಕೊಟ್ಟ ಬೆನ್ನಲ್ಲೇ ಆ ದೇಶದ ಸರಕಾರದ ಜೊತೆ ಇಲ್ಲಿನ ಒಬ್ಬ ದೊಡ್ಡ ಉದ್ಯಮಿ ಮಾತ್ರ ಯಾವುದಾದರೂ ವ್ಯವಹಾರ ಕುದುರಿಸುವುದು, ಅದಕ್ಕೆ ಅಲ್ಲಿನ ಜನರ ವಿರೋಧ ಇದ್ದರೂ ಅಲ್ಲಿನ ಸರಕಾರ ಸಹಕರಿಸುವುದು - ಇದೆಲ್ಲ ಏನು ಹೇಳುತ್ತದೆ?

Update: 2024-09-26 09:48 GMT

ಅದಾನಿ ಓಟಕ್ಕೆ ಈಗ ಒಂದಿಷ್ಟು ಹಿನ್ನಡೆಯಾಗಿದೆ.

ನೈರೋಬಿ ವಿಮಾನ ನಿಲ್ದಾಣವನ್ನು 30 ವರ್ಷಗಳವರೆಗೆ ನಡೆಸಲು ಅದಾನಿ ಗ್ರೂಪ್‌ಗೆ ನೀಡುವ ಉದ್ದೇಶಿತ ಒಪ್ಪಂದವನ್ನು ಕೀನ್ಯಾದ ಹೈಕೋರ್ಟ್ ಕಳೆದ ವಾರ ಅಮಾನತುಗೊಳಿಸಿದೆ.

ಇದರೊಂದಿಗೆ, ಭಾರತದ ಹೊರಗೆ ಮೊದಲ ವಿಮಾನ ನಿಲ್ದಾಣ ನಿರ್ವಹಣೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹೊರಟಿದ್ದ ಅದಾನಿ ಸಮೂಹಕ್ಕೆ ಹಿನ್ನಡೆಯಾಗಿದೆ.

ಆದರೆ ಒಂದು ವಿಚಾರವನ್ನು ಗಮನಿಸಬೇಕು.

ಅದಾನಿ ಸಮೂಹದ ಎಲ್ಲದರಂತೆ ಈ ವಿಸ್ತರಣೆ ಕೂಡ ಮೋದಿಯವರ ರಾಜತಾಂತ್ರಿಕ ಭೇಟಿಯ ನಂತರವೇ ಸಾಧ್ಯವಾದದ್ದು.

ಭಾರತದ ಹೊರಗಿನ ಹೆಚ್ಚಿನ ಅದಾನಿ ಯೋಜನೆಗಳು, ಆಯಾ ದೇಶಕ್ಕೆ ಮೋದಿ ಪ್ರವಾಸದ ಬೆನ್ನಲ್ಲೇ ಅಥವಾ ರಾಜತಾಂತ್ರಿಕ ಮಟ್ಟದ ಭೇಟಿಗಳ ನಂತರವೇ ಘೋಷಣೆಯಾದವುಗಳು ಎಂಬುದನ್ನು ವಿಶ್ಲೇಷಣೆಗಳು ತೋರಿಸುತ್ತವೆ.

ಉದಾಹರಣೆಗೆ, ಕೀನ್ಯಾ ಅಧ್ಯಕ್ಷರು 2023ರ ಡಿಸೆಂಬರ್‌ನಲ್ಲಿ ಹೊಸದಿಲ್ಲಿಗೆ ಭೇಟಿ ನೀಡಿದರು. ಮೂರು ತಿಂಗಳ ನಂತರ, ಮಾರ್ಚ್‌ನಲ್ಲಿ, ಅದಾನಿ ಗ್ರೂಪ್ ನೈರೋಬಿ ವಿಮಾನ ನಿಲ್ದಾಣ ನವೀಕರಣ ಮತ್ತು ವಿಸ್ತರಣೆ ಪ್ರಸ್ತಾವವನ್ನು ಸಲ್ಲಿಸಿತು.

ಜೂನ್‌ನಲ್ಲಿ, ಕೀನ್ಯಾದ ಅಧಿಕಾರಿಗಳು ರಾಷ್ಟ್ರೀಯ ವಿಮಾನಯಾನ ನೀತಿಯನ್ನು ಬದಲಾಯಿಸಿದರು ಮತ್ತು ವಿಮಾನ ನಿಲ್ದಾಣ ಹೂಡಿಕೆ ಯೋಜನೆಗೆ ಅನುಮತಿ ನೀಡಿದರು.

ಈ ವಿಚಾರ ಬಯಲಾಗುತ್ತಿದ್ದಂತೆಯೇ ಕೀನ್ಯಾದ ಮಾನವ ಹಕ್ಕುಗಳ ಆಯೋಗ ಮತ್ತು ಬಾರ್ ಅಸೋಸಿಯೇಷನ್ ಕೋರ್ಟ್ ಮೆಟ್ಟಿಲೇರಿದವು.

ಲಾಭದಾಯಕ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗಿ ಘಟಕಕ್ಕೆ ಯಾವುದೇ ಸ್ಪರ್ಧಾತ್ಮಕ ಬಿಡ್ಡಿಂಗ್ ಇಲ್ಲದೆ ಗೌಪ್ಯವಾಗಿ ಗುತ್ತಿಗೆ ನೀಡುವುದನ್ನು ಪ್ರಶ್ನಿಸಿದವು.

ಕೀನ್ಯಾ ಹೈಕೋರ್ಟ್ ಸೆಪ್ಟಂಬರ್ 9ರಂದು ಆ ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು.

ಬಾಂಗ್ಲಾದೇಶದಲ್ಲಿ ಕೂಡ ಹಿಂದಿನ ವಿದ್ಯುತ್ ಒಪ್ಪಂದಗಳನ್ನು ಮತ್ತೆ ಮರು ಅವಲೋಕಿಸಿ, ಹೊಸ ಬೆಲೆ ನಿಗದಿ ಮಾಡುವ ಕುರಿತು ಹೊಸ ಸರಕಾರ ಆಲೋಚಿಸುತ್ತಿದೆ ಎಂದು ಹೇಳಲಾದ ಬೆನ್ನಲ್ಲೇ ಕೀನ್ಯಾದಲ್ಲಿ ಅದಾನಿ ಪಾಲಿಗೆ ಹಿನ್ನಡೆಯಾಗಿತ್ತು.

ಬಾಂಗ್ಲಾಕ್ಕೆ ವಿದ್ಯುತ್ ಪೂರೈಕೆ ಯೋಜನೆ ಕೂಡ ಅದಾನಿ ಪಾಲಿಗೆ ಇದೇ ರೀತಿಯಲ್ಲಿ ಸಿಕ್ಕಿತ್ತು.

2015ರ ಜೂನ್‌ನಲ್ಲಿ ಮೋದಿ ಢಾಕಾಗೆ ಭೇಟಿ ನೀಡಿದ್ದ ಹೊತ್ತಲ್ಲಿ ವಿದ್ಯುತ್ ಪೂರೈಕೆ ಪ್ರಸ್ತಾವ ಮಾಡಿದ್ದರು. ಎರಡು ತಿಂಗಳ ನಂತರ, ಜಾರ್ಖಂಡ್‌ನಿಂದ ವಿದ್ಯುತ್ ಪೂರೈಸಲು ಅದಾನಿ ಬಾಂಗ್ಲಾದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಈ ಒಪ್ಪಂದದ ಬಗ್ಗೆ ಹಾಗೂ ಇದಕ್ಕಾಗಿ ಜಾರ್ಖಂಡ್‌ನಲ್ಲಿ ಅದಾನಿ ಗ್ರೂಪ್ ಸ್ಥಾಪಿಸಿದ ವಿದ್ಯುತ್ ಸ್ಥಾವರದ ಬಗ್ಗೆ ‘ವಾಶಿಂಗ್ಟನ್ ಪೋಸ್ಟ್’ ಒಂದು ವಿವರವಾದ ವರದಿ ಮಾಡಿತ್ತು.

ಜಾರ್ಖಂಡ್‌ನ ಗೊಡ್ಡಾದಲ್ಲಿ ಅದಾನಿ ವಿದ್ಯುತ್ ಸ್ಥಾವರ ಸ್ಥಾಪಿಸಲು ಮೋದಿ ಸರಕಾರ ನಿಯಮಗಳನ್ನು ಬದಲಾಯಿಸಿತು, ಅದಾನಿಗೆ ಸಹಕರಿಸದ ಅಧಿಕಾರಿಗಳನ್ನೂ ಬದಲಾಯಿಸಿತು. ಅಷ್ಟೇ ಅಲ್ಲ, ಸ್ಥಾವರಕ್ಕೆ ವಿರೋಧ ವ್ಯಕ್ತಪಡಿಸಿದ ಶಾಸಕನನ್ನೇ ಬಂಧಿಸಿತು.

ಇಲ್ಲಿನ ಸ್ಥಾವರದಲ್ಲಿ ಉತ್ಪಾದನೆಯಾಗುವ ಪೂರ್ತಿ ವಿದ್ಯುತ್ ಅನ್ನು ಬಾಂಗ್ಲಾಕ್ಕೆ ಪೂರೈಸುವ ಒಪ್ಪಂದ ಮಾಡಿಕೊಂಡ ಏಕೈಕ ಕಂಪೆನಿ ಅದಾನಿ ಪವರ್ ಲಿಮಿಟೆಡ್ ಆಗಿತ್ತು. ಇಂಥದೊಂದು ಅಧಿಕಾರ ಭಾರತದಲ್ಲಿ ಇನ್ನಾವುದೇ ವಿದ್ಯುತ್ ಸ್ಥಾವರಕ್ಕೂ ಸಿಕ್ಕಿಲ್ಲ.

ಇನ್ನೂ ವಿಶೇಷವೆಂದರೆ, ಅದಾನಿ ಉತ್ಪಾದಿಸುವ ವಿದ್ಯುತ್ ಬಾಂಗ್ಲಾಕ್ಕೂ ಬೇಕಾಗಿರಲಿಲ್ಲ, ಅದಕ್ಕೆ ಅಲ್ಲಿ ತೀವ್ರ ವಿರೋಧವಿತ್ತು, ಆದರೂ ಶೇಕ್ ಹಸೀನಾ ಹೆಚ್ಚುವರಿ ದರ ಕೊಟ್ಟು ಅದಾನಿಯಿಂದ ವಿದ್ಯುತ್ ಖರೀದಿಸುವ ನಿರ್ಧಾರಕ್ಕೆ ಬಂದರು.

ಅದೇ ಶೇಕ್ ಹಸೀನಾ ಈಗ ಬಾಂಗ್ಲಾದಲ್ಲಿ ದಂಗೆಯಾದ ಮೇಲೆ ಭಾರತಕ್ಕೆ ಬಂದು ಆಶ್ರಯ ಪಡೆದಿದ್ದಾರೆ.

2014ರಲ್ಲಿ ಮೋದಿ ಅಧಿಕಾರಕ್ಕೆ ಬರುವವರೆಗೂ ಅದಾನಿ ಸಮೂಹದ ಭಾರತದ ಹೊರಗಿನ ಯೋಜನೆಗಳು ಇಂಡೋನೇಶ್ಯ ಮತ್ತು ಆಸ್ಟ್ರೇಲಿಯದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಕಾರ್ಯಾಚರಣೆಗಳಿಗೆ ಮಾತ್ರವೇ ಸೀಮಿತವಾಗಿತ್ತು. ಈಗ, ಅದಾನಿ ಏಶ್ಯ ಮತ್ತು ಆಫ್ರಿಕಾದಾದ್ಯಂತ ದೊಡ್ಡ ಮಟ್ಟದಲ್ಲಿ ಮೂಲಸೌಕರ್ಯ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

ದಕ್ಷಿಣ ಏಶ್ಯದಲ್ಲಿ ಅದಾನಿ ಯೋಜನೆಗಳ ಕುರಿತು ವಿವಾದವೆದ್ದಿರುವುದು ಬಾಂಗ್ಲಾದೇಶದಲ್ಲಿ ಮಾತ್ರವಲ್ಲ. ಶ್ರೀಲಂಕಾದಲ್ಲಿ ವಿದ್ಯುತ್ ಇಲಾಖೆ ಅಧಿಕಾರಿಯೊಬ್ಬರು, ಅದಾನಿ ಗ್ರೂಪ್‌ಗೆ ವಿಂಡ್ ಪವರ್ ಯೋಜನೆ ಹಸ್ತಾಂತರಿಸಲು ತನ್ನ ಮೇಲೆ ಮೋದಿ ಒತ್ತಡ ಹೇರುತ್ತಿದ್ದಾರೆ ಎಂದು ಸಂಸದೀಯ ಸಮಿತಿಯ ಮುಂದೆ ದೂರಿದ್ದರು. ಕಡೆಗೆ ಆ ಅಧಿಕಾರಿ ತನ್ನ ಟೀಕೆಗಳನ್ನು ವಾಪಸ್ ಪಡೆದರು ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಭಾರತ, ಶ್ರೀಲಂಕಾ ಮತ್ತು ಜಪಾನ್ ನಡುವಿನ ಒಪ್ಪಂದದ ಭಾಗವಾಗಿ ಕೊಲಂಬೊ ಬಂದರಿನಲ್ಲಿ ಪೂರ್ವ ಕಂಟೈನರ್ ಟರ್ಮಿನಲ್ ಅನ್ನು ನಿರ್ವಹಿಸಲು ಅದಾನಿ ಗ್ರೂಪ್‌ಗೆ ಕೊಡುವ ಬಗ್ಗೆ ಒಲವು ವ್ಯಕ್ತವಾದದ್ದು ವರದಿಯಾಗಿತ್ತು.

ಆದರೆ ಕಡೆಗೆ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಶ್ರೀಲಂಕಾ ಒಪ್ಪಂದವನ್ನು ತಿರಸ್ಕರಿಸಿತು. ಆದರೆ, ಬಂದರಿನಲ್ಲಿಯ ಮತ್ತೊಂದು ಟರ್ಮಿನಲ್ ಅನ್ನು ನಿರ್ವಹಿಸುವ ಗುತ್ತಿಗೆಯ ಹಕ್ಕನ್ನು ಅದಾನಿ ಗ್ರೂಪ್ ಪಡೆದಿತ್ತು.

ಈಗ ಶ್ರೀಲಂಕಾದಲ್ಲಿ ಸರಕಾರ ಬದಲಾಗಿದೆ. ಅಲ್ಲೀಗ ಕಮ್ಯುನಿಸ್ಟ್ ನಾಯಕ ದೇಶದ ರಾಷ್ಟ್ರಪತಿಯಾಗಿದ್ದಾರೆ. ಈಗ ಅಲ್ಲಿನ ಅದಾನಿ ವ್ಯವಹಾರಗಳಿಗೆ ಏನೇನು ಸವಾಲು ಸೃಷ್ಟಿಯಾಗಲಿದೆ, ಅದು ಭಾರತದ ಜೊತೆಗಿನ ಲಂಕಾ ಸಂಬಂಧದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕು.

ಈ ವರ್ಷ, ನೇಪಾಳದಲ್ಲಿರುವ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಗಳ ಸ್ವಾಧೀನಕ್ಕಾಗಿ ಅದಾನಿ ಗ್ರೂಪ್ ನೇಪಾಳದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ.

ನೇಪಾಳದ ಪ್ರಧಾನಿ, ಮೋದಿಯವರೊಂದಿಗೆ ಜೂನ್ 2023ರಲ್ಲಿ ನಡೆದ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾವಿಸಿದ್ದರು. ಅದರ ನಂತರ ಅದಾನಿ ಗ್ರೂಪ್‌ನ ಅಧಿಕಾರಿಗಳು ನೇಪಾಳದ ನಾಗರಿಕ ವಿಮಾನಯಾನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲು ಕಠ್ಮಂಡುಗೆ ಭೇಟಿ ನೀಡಿರುವುದಾಗಿ ವರದಿಯಿದೆ.

ಇನ್ನು ದಕ್ಷಿಣ ಏಶ್ಯದಿಂದ ಆಚೆಗೂ ಅದಾನಿ ಸಾಮ್ರಾಜ್ಯವನ್ನು ವಿಸ್ತರಿಸುವುದಕ್ಕೇ ಮೋದಿ ತನ್ನ ಸಮಯ ಮೀಸಲಿಟ್ಟಂತಿದೆ.

ಮಾರ್ಚ್ 2017ರಲ್ಲಿ, ಮೋದಿ ಆವತ್ತಿನ ಮಲೇಶ್ಯ ಪ್ರಧಾನಿ ನಜೀಬ್ ರಝಾಕ್ ಅವರೊಂದಿಗೆ ಹೊಸದಿಲ್ಲಿಯಲ್ಲಿ ಪರಸ್ಪರ ಆರ್ಥಿಕ ಸಂಬಂಧಗಳು ಮತ್ತು ವ್ಯಾಪಾರ ವಹಿವಾಟು ಕುರಿತು ಚರ್ಚಿಸಿದ್ದರು.

ಒಂದು ತಿಂಗಳ ನಂತರ, ಕ್ಯಾರಿ ದ್ವೀಪದಲ್ಲಿ ಮೆಗಾ ಕಂಟೈನರ್ ಬಂದರು ಯೋಜನೆ ಅಭಿವೃದ್ಧಿಪಡಿಸಲು ಅದಾನಿ ಗ್ರೂಪ್ ಮಲೇಶ್ಯದ ಮೂಲಸೌಕರ್ಯ ಸಂಘಟಿತ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.

ಜೂನ್ 2018ರಲ್ಲಿ, ಮೋದಿ ಸಿಂಗಾಪುರಕ್ಕೆ ಹೋಗಿದ್ದರು. ಪ್ರಧಾನಿ ಲೀ ಸೀನ್ ಲೂಂಗ್ ಅವರನ್ನು ಭೇಟಿಯಾದರು. ಅದೇ ತಿಂಗಳ ಕಡೆಯಲ್ಲಿ ಸಿಂಗಾಪುರದ ಸರಕಾರಿ ಸ್ವಾಮ್ಯದ ಹೂಡಿಕೆ ಸಂಸ್ಥೆ ಟೆಮಾಸೆಕ್ ಅದಾನಿ ಬಂದರುಗಳಲ್ಲಿ 1,000 ಕೋಟಿ ರೂ. ಹೂಡಿಕೆ ಮಾಡಿತು.

ಅಕ್ಟೋಬರ್ 2023ರಲ್ಲಿ ದೆಹಲಿಯಲ್ಲಿ ತಾಂಜಾನಿಯಾದ ಅಧ್ಯಕ್ಷ ಸಮಿಹಾ ಸುಲುಹು ಜೊತೆ ಮೋದಿ ಮಾತುಕತೆ ನಡೆಸಿದರು. 8 ತಿಂಗಳ ನಂತರ, ಮೇ 2024ರಲ್ಲಿ, ಅದಾನಿ ಗ್ರೂಪ್ ದಾರುಸ್ ಸಲಾಮ್ ಬಂದರಿನಲ್ಲಿ ಕಂಟೈನರ್ ಟರ್ಮಿನಲ್ ಅನ್ನು ನಿರ್ವಹಿಸಲು 30 ವರ್ಷಗಳ ಒಪ್ಪಂದ ಮಾಡಿಕೊಂಡಿತು.

ತೀರಾ ಇತ್ತೀಚೆಗೆ, ವಿಯೆಟ್ನಾಂ ಪ್ರಧಾನಿ ಫಾಮ್ ಮಿನ್ಹ್ ಚಿನ್ಹ್ ದಿಲ್ಲಿಗೆ ಬಂದರು. ಅವರು ಮೋದಿಯನ್ನು ಭೇಟಿಯಾದ ದಿನವೇ ಗೌತಮ್ ಅದಾನಿಯನ್ನು ಭೇಟಿ ಮಾಡಿದರು. ವಿಯೆಟ್ನಾಂನ ಎರಡು ವಿಮಾನ ನಿಲ್ದಾಣಗಳಲ್ಲಿ ಹೂಡಿಕೆ ಮಾಡಲು ಅದಾನಿ ಗ್ರೂಪ್ ಅನ್ನು ಪರಿಗಣಿಸಲಾಗುತ್ತಿದೆ ಎಂದು ಘೋಷಿಸಿದರು.

ಜುಲೈ 2017ರಲ್ಲಿ ಮೋದಿ ಇಸ್ರೇಲ್‌ಗೆ ಭೇಟಿ ನೀಡಿದ ಬಳಿಕ ಅದಾನಿ ಗ್ರೂಪ್ ಇಸ್ರೇಲ್‌ನೊಂದಿಗೆ ಮಹತ್ವದ ವ್ಯಾಪಾರ ಸಂಬಂಧಗಳನ್ನು ಏರ್ಪಡಿಸಿಕೊಂಡಿತು.

2018ರ ಡಿಸೆಂಬರ್‌ನಲ್ಲಿ ಅದಾನಿ ಗ್ರೂಪ್, ಇಸ್ರೇಲಿ ಸಂಸ್ಥೆ ಎಲ್ಬಿಟ್ ಸಿಸ್ಟಮ್ಸ್ ಜೊತೆಗೆ ಸಾಹಸೋದ್ಯಮ, ವೈಮಾನಿಕ ಮಿಲಿಟರಿ ಡ್ರೋನ್‌ಗಳ ತಯಾರಿಕೆಯನ್ನು ತೆಲಂಗಾಣದಲ್ಲಿ ಆರಂಭಿಸಿತು.

2022ರಲ್ಲಿ, ಅದಾನಿ ಗ್ರೂಪ್ ಇಸ್ರೇಲ್‌ನ ಹೈಫಾ ಬಂದರನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಯಿತು.

ಅದಾನಿ ಮೋದಿ ಮಿತ್ರ ಎಂದೇ ಎಲ್ಲರಿಗೂ ಗೊತ್ತಿದೆ. ಇಬ್ಬರೂ ಗುಜರಾತಿನವರು.

2014ರಿಂದ ಮೋದಿ ಪ್ರಧಾನಿಯಾದ ಬಳಿಕ ಅದಾನಿ ಸಮೂಹದ ವ್ಯವಹಾರ ಬೆಳೆಯುತ್ತಲೇ ಇದೆ ಮತ್ತು ಬೇರೆ ಬೇರೆ ಕ್ಷೇತ್ರಗಳಿಗೂ ವಿಸ್ತರಿಸಿದೆ. ವಿಮಾನ ನಿಲ್ದಾಣಗಳು, ಬಂದರುಗಳು, ಕಲ್ಲಿದ್ದಲು ಗಣಿಗಳು, ವಿದ್ಯುತ್ ಕೇಂದ್ರಗಳು ಮತ್ತು ಗ್ಯಾಸ್ ಸ್ಟೇಷನ್‌ಗಳು ಹೀಗೆ ಎಲ್ಲವೂ ಈಗ ಅದಾನಿ ತೆಕ್ಕೆಯಲ್ಲಿವೆ.

2014ರಲ್ಲಿ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದಾಗ ಗೌತಮ್ ಅದಾನಿಯ ಒಟ್ಟು ಸಂಪತ್ತು 16,780 ಕೋಟಿ ರೂ. ಇತ್ತು. 2023ರ ಜನವರಿಯಲ್ಲಿ ಅದು 12 ಲಕ್ಷ ಕೋಟಿ ರೂ.ಗೆ ಏರಿತ್ತು. ಅಂದರೆ ಒಂಭತ್ತೇ ವರ್ಷಗಳಲ್ಲಿ ಅದಾನಿ ಸಂಪತ್ತಿನಲ್ಲಿ 14 ಪಟ್ಟು ಏರಿಕೆ!

ಜಗತ್ತಿನ ಅತಿ ಶ್ರೀಮಂತರಲ್ಲಿ 106ನೇ ಸ್ಥಾನದಲ್ಲಿದ್ದ ಅದಾನಿ 11ನೇ ಅತಿ ಶ್ರೀಮಂತ ವ್ಯಕ್ತಿಯಾದದ್ದು ಮೋದಿ ಅಧಿಕಾರದ ಅವಧಿಯಲ್ಲಿ. ಮುಕೇಶ್ ಅಂಬಾನಿಯನ್ನೂ ಹಿಂದಿಕ್ಕಿ ಏಶ್ಯದ ನಂಬರ್ ಒನ್ ಶ್ರೀಮಂತ ವ್ಯಕ್ತಿಯಾಗಿದ್ದೂ ಮೋದಿ ಕಾಲದಲ್ಲೇ.

ಇದು ಕ್ರೋನಿ ಕ್ಯಾಪಿಟಲಿಸಂ ಎಂಬ ಆರೋಪಗಳು ನಿರಂತರ ಕೇಳಿಬಂದಿವೆ.

ಫೆಬ್ರವರಿ 2023ರಲ್ಲಿ ಸಂಸತ್ತಿನಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಂತೂ ‘‘ಇದು ಭಾರತದ ವಿದೇಶಾಂಗ ನೀತಿಯಲ್ಲ. ಇದು ಅದಾನಿ ವಿದೇಶಾಂಗ ನೀತಿ’’ ಎಂದು ಟೀಕಿಸಿದ್ದರು.

ಕಳೆದ ವರ್ಷ ಅಮೆರಿಕದ ಶಾರ್ಟ್-ಸೆಲ್ಲರ್ ಹಿಂಡನ್‌ಬರ್ಗ್ ಅದಾನಿ ಸಮೂಹದ ವಿರುದ್ಧ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪಗಳನ್ನು ಮಾಡಿದ ಬಳಿಕ ಹಲವು ಕುಸಿತಗಳನ್ನು ಅದಾನಿ ಸಮೂಹ ಕಂಡಿದೆ.

ಇತ್ತೀಚೆಗೆ, ಸ್ವಿಸ್ ಬ್ಯಾಂಕ್ ಅದಾನಿಯ ಹಲವು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದೆ.

ಸ್ವಿಸ್ ಬ್ಯಾಂಕ್ 31 ಕೋಟಿ ಡಾಲರ್ ಅಂದರೆ ಸುಮಾರು 2,600 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಫ್ರೀಜ್ ಮಾಡಿದೆ ಎನ್ನಲಾಗಿದೆ.

ಅದಾನಿ ಜೊತೆಗಿನ ವಿಮಾನ ನಿಲ್ದಾಣ ಒಪ್ಪಂದ ಕೈಬಿಡುವಂತೆ ಕೀನ್ಯಾದ ಪ್ರತಿಪಕ್ಷಗಳು ಸರಕಾರವನ್ನು ಒತ್ತಾಯಿಸಿವೆ. ಈ ಹೊತ್ತಲ್ಲಿ, ಅದಾನಿ ಮೋದಿಯವರ ಮಿತ್ರನಾಗಿರುವ ಕಾರಣಕ್ಕೆ ಕೀನ್ಯಾದಲ್ಲಿನ ಪ್ರತಿಭಟನೆಗಳು ಭಾರತದ ವಿರುದ್ಧದ ಆಕ್ರೋಶವಾಗಿಯೂ ಸುಲಭವಾಗಿ ಬದಲಾಗಬಹುದು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಎಚ್ಚರಿಸಿದ್ದಾರೆ.

ಈ ಹಿಂದೆ ನಮ್ಮ ದೇಶದ ಪ್ರಧಾನಿ ವಿದೇಶ ಪ್ರವಾಸಕ್ಕೆ ಹೋಗುವಾಗ ಇಲ್ಲಿನ ಉದ್ಯಮಿಗಳ ನಿಯೋಗ ಕರೆದುಕೊಂಡು ಹೋಗುವ ಪರಿಪಾಠವಿತ್ತು. ಆ ನಿಯೋಗ ಅಲ್ಲಿನ ಸರಕಾರ ಹಾಗೂ ಉದ್ಯಮ ಸಂಸ್ಥೆಗಳ ಜೊತೆ ಅಧಿಕೃತ ಸಭೆ ನಡೆಸುತ್ತದೆ, ವಿಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತದೆ, ಉದ್ಯಮಗಳಿಗೆ ಇರುವ ಅವಕಾಶಗಳ ಬಗ್ಗೆ ತಿಳಿದುಕೊಳ್ಳುತ್ತದೆ.

ಆದರೆ ಇಲ್ಲಿ ಆಗುತ್ತಿರುವುದು ಅದಲ್ಲ.

ನಮ್ಮ ದೇಶದ ಪ್ರಧಾನಿ ಒಂದು ದೇಶಕ್ಕೆ ರಾಜತಾಂತ್ರಿಕ ಭೇಟಿ ಕೊಟ್ಟ ಬೆನ್ನಲ್ಲೇ ಆ ದೇಶದ ಸರಕಾರದ ಜೊತೆ ಇಲ್ಲಿನ ಒಬ್ಬ ದೊಡ್ಡ ಉದ್ಯಮಿ ಮಾತ್ರ ಯಾವುದಾದರೂ ವ್ಯವಹಾರ ಕುದುರಿಸುವುದು, ಅದಕ್ಕೆ ಅಲ್ಲಿನ ಜನರ ವಿರೋಧ ಇದ್ದರೂ ಅಲ್ಲಿನ ಸರಕಾರ ಸಹಕರಿಸುವುದು - ಇದೆಲ್ಲ ಏನು ಹೇಳುತ್ತದೆ?

ಮೇಲೆ ಹೇಳಿದ ಎಲ್ಲ ದೇಶಗಳಲ್ಲೂ ನಮ್ಮ ದೇಶದ ಒಬ್ಬರೇ ಉದ್ಯಮಿ ಪ್ರಧಾನಿ ಮೋದಿ ಭೇಟಿ ಬಳಿಕ ವ್ಯವಹಾರ ನಡೆಸಿದ್ದಾರೆ, ಹೂಡಿಕೆ ಮಾಡಿದ್ದಾರೆ ಅಥವಾ ಹೂಡಿಕೆ ಪಡೆದಿದ್ದಾರೆ. ಹಾಗಾದರೆ ನಮ್ಮ ದೇಶದ ವಿದೇಶಾಂಗ ನೀತಿ ಅದಾನಿ ನೀತಿಯಾಗಿದೆ ಎಂದು ರಾಹುಲ್ ಗಾಂಧಿ ಮಾಡಿರುವ ಆರೋಪ ಎಷ್ಟು ಗಂಭೀರ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪಿ.ಎಚ್. ಅರುಣ್

contributor

Similar News