ಹನೂರು ಪಟ್ಟಣ ಪಂಚಾಯತ್‌ನಲ್ಲಿ ಅಮಾನವೀಯ ಘಟನೆ; ಪೌರಕಾರ್ಮಿಕರಿಂದಲೇ ಮಲ ಹೊರಿಸಿದ ಅಧಿಕಾರಿಗಳು
ಚಾಮರಾಜನಗರ, ಎ.15: ಮಲ ಹೊರುವ ಪದ್ಧತಿ ವಿರುದ್ಧ ಜಾಗೃತಿ ಮೂಡಿಸಿ ಕ್ರಮಕ್ಕೆ ಮುಂದಾಗಬೇಕಾದ ಸ್ಥಳೀಯ ಸಂಸ್ಥೆ ಪಟ್ಟಣ ಪಂಚಾಯತ್ ಅಧಿಕಾರಿಗಳೇ ಪೌರಕಾರ್ಮಿಕರಿಂದ ಮಲ ಹೊರಿಸುವ ಮೂಲಕ ಅಮಾನವೀಯ ಕೃತ್ಯ ಎಸಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ವರದಿಯಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣ ಪಂಚಾಯತ್ ಕಚೇರಿ ಸಮೀಪದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದ ಬೃಹತ್ ಗುಂಡಿಯಲ್ಲಿ ತುಂಬಿದ ಮಲವನ್ನು ಗುರುವಾರ ಮುಂಜಾನೆ ಅವೈಜ್ಞಾನಿಕವಾಗಿ ಪಟ್ಟಣ ಪಂಚಾಯತ್ ಜೆಸಿಬಿ ಯಂತ್ರದಿಂದ ಪಟ್ಟಣದಲ್ಲಿನ ಕಸ ಸಾಗಿಸುವ ಟ್ರ್ಯಾಕ್ಟರ್‌ಗೆ
ತುಂಬಿ ಸಾಗಿಸಲಾಗುತ್ತಿತ್ತು. ಆಗ ಬಹುತೇಕ ಪಾಲು ಮಲ ಪಟ್ಟಣ ಪಂಚಾಯತ್‌ಗೆ ಸೇರಿದ ವಾಣಿಜ್ಯ ಸಂಕೀರ್ಣದ ಅಂಗಡಿ ಮಳಿಗೆಗಳ ಎದುರು ಹಾಗೂ ರಸ್ತೆಯುದ್ದಕ್ಕೂ ಚದುರಿ ಬಿದ್ದಿತ್ತು. ಇದರಿಂದಾಗಿ ಇಡೀ ಪರಿಸರದಲ್ಲಿ ಕೆಟ್ಟ ವಾಸನೆ ಹಬ್ಬಿದ್ದು, ಪ್ರಯಾಣಿಕರು,ಜನಸಾಮಾನ್ಯರು, ಸ್ಥಳೀಯ ಪರಿಸರದ ನಿವಾಸಿಗಳು ಮೂಗುಮುಚ್ಚಿಕೊಂಡೇ ಸಮಯ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆನಂತರ ಪಟ್ಟಣ ಪಂಚಾಯತ್ ಅಧಿಕಾರಿಗಳು, ಹನೂರು ಪಟ್ಟಣ ಪಂಚಾಯತ್‌ನ ಪೌರ ಕಾರ್ಮಿಕರಿಂದ ರಸ್ತೆಯುದ್ದಕ್ಕೂ ರಾಶಿ ರಾಶಿಯಾಗಿ ಬಿದ್ದಿದ್ದ ಮಲವನ್ನು ಪ್ಲಾಸ್ಟಿಕ್ ಬುಟ್ಟಿಗೆ ತುಂಬಿ ತಲೆ ಮೇಲೆ ಹೊತ್ತು ಪಟ್ಟಣದ ಕಸ ಸಾಗಿಸುವ ಟೆಂಪೋದಲ್ಲಿ ತುಂಬಿಸಿದ್ದಾರೆ.
ಈ ಅಮಾನವೀಯ ದೃಶ್ಯವನ್ನು ಬಸ್ ನಿಲ್ದಾಣದಲ್ಲಿದ್ದ ಖಾಸಗಿ ವ್ಯಕ್ತಿಗಳು ಸೆರೆಹಿಡಿದು ವೀಡಿಯೊವನ್ನು ಮಾಧ್ಯಮಗಳಿಗೆ ನೀಡಿದ್ದಾರೆ. ಅಲ್ಲದೆ ಘಟನೆಯ ದೃಶ್ಯಾವಳಿಗಳು ಪ.ಪಂ. ಕಟ್ಟಡದ ಮುಖ್ಯ ದ್ವಾರದಲ್ಲೇ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲೂ ಸೆರೆಯಾಗಿದೆ.
ಹನೂರು ಪಟ್ಟಣ ಪಂಚಾಯತ್‌ನಲ್ಲಿ ಮಲ ಸಾಗಿಸಲೆಂದೇ ಸೈಕಿಂಗ್ ಯಂತ್ರವಿದೆಯಾದರೂ ಅದನ್ನು ಬಳಸದೆ ಪಂಚಾಯತ್ ಅಧಿಕಾರಿಗಳು ಜೆಸಿಬಿ ಹಾಗೂ ಕಸ ಸಾಗಣೆ ಟ್ರ್ಯಾಕ್ಟರ್ ಮತ್ತು ಟೆಂಪೋವನ್ನು ಬಳಸಿಕೊಳ್ಳುವುದರ ಜತೆಗೆ ಪೌರಕಾರ್ಮಿಕರನ್ನು ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದೂ ಸಾಲದೆಂಬಂತೆ ಸಾರ್ವಜನಿಕ ಶೌಚಾಲಯದ ಶೌಚ ಗುಂಡಿಯಿಂದ ಹೊರೆತೆಗೆಯಲಾದ ಮಲವನ್ನು ತೆರೆದ ವಾಹನಗಳಲ್ಲಿ ತುಂಬಿಕೊಂಡು, ಸಾಗಿಸಲಾಗಿತ್ತು. ಈ ಸಂದರ್ಭ ಬಹುಪಾಲು ಮಲವನ್ನು ಸಾರ್ವಜನಿಕ ಪ್ರದೇಶದ ಹಾದಿಯುದ್ದಕ್ಕೂ ಎಲ್ಲೆಂದರಲ್ಲಿ ಚೆಲ್ಲಿಕೊಂಡು ಹೋಗುವುದರ ಜತೆಗೆ ಬಯಲು ಪ್ರದೇಶದಲ್ಲೇ ಸುರಿಯಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡದೆ ಅನೈರ್ಮಲ್ಯಕ್ಕೆ ಮೂಲ ಕಾರಣ ರಾಗುವ ಮೂಲಕ ಸಾಂಕ್ರಾಮಿಕ ರೋಗ ರುಜಿನಗಳಿಗೆ ನಾಂದಿ ಹಾಡಿದ ಹನೂರು ಪ. ಪಂ ಅಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಕಿಯವರು ನಾಗರಿಕರ ಜೀವದ ಜತೆ ಚೆಲ್ಲಾಟ ಆಡಿದ್ದಾರೆ ಎಂದು ಸ್ಥಳೀಯರ ಆರೋಪವಾಗಿದೆ.
ಕಾರ್ಮಿಕರ ದಿನಾಚರಣೆಯಂದು ಪೌರಕಾರ್ಮಿಕರನ್ನು ಸನ್ಮಾನಿಸುವಂತಹ ಬೂಟಾಟಿಕೆ ತೋರುವ ಪಂಚಾಯತ್ ಅಧಿಕಾರಿಗಳು ವಾಸ್ತವದಲ್ಲಿ ಅವರಿಂದಲೇ ಮಲ ಹೊರಿಸುವ ಮೂಲಕ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಈ ಅಮಾನುಷ ಕೃತ್ಯವೆಸಗಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಮುಂದೆಂದೂ ಮಲ ಹೊರುವ ಪದ್ಧತಿ ಮರುಕಳಿಸದಂತೆ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಪ್ರಬುದ್ಧ ನಾಗರಿಕರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.