ಭಾಗವತ್ ಮಾತು ಮೋದಿಗೆ ರುಚಿಸೀತೇ?

ಮಣಿಪುರದಲ್ಲಿ ಹತ್ತು ವರ್ಷಗಳ ಹಿಂದೆ ಶಾಂತಿ ನೆಲೆಸಿತ್ತು. ಬಂದೂಕು ಸಂಸ್ಕೃತಿ ಮುಗಿದಂತೆ ಕಂಡಿತ್ತು. ಆದರೆ ರಾಜ್ಯದಲ್ಲಿ ಇದ್ದಕ್ಕಿದ್ದಂತೆ ಹಿಂಸಾಚಾರ ಉಂಟಾಯಿತು. ಮಣಿಪುರದ ಪರಿಸ್ಥಿತಿಯನ್ನು ಆದ್ಯತೆಯೊಂದಿಗೆ ಪರಿಗಣಿಸಬೇಕು ಎಂದಿದ್ದಾರೆ ಭಾಗವತ್. ಮಣಿಪುರದಲ್ಲಿ ಇರುವುದೂ ಬಿಜೆಪಿ ಸರಕಾರ, ಕೇಂದ್ರದಲ್ಲಿ ಇರುವುದೂ ಬಿಜೆಪಿ ಸರಕಾರ. ಅಲ್ಲಿಗೆ ಮೋದಿ ಮಣಿಪುರ ವಿಚಾರದಲ್ಲಿ ತೋರಿಸಿದ ಕಡೆಗಣನೆ ಬಗ್ಗೆ ಭಾಗವತ್ ಸ್ಪಷ್ಟವಾಗಿ ಟೀಕಿಸಿದಂತಾಗಿದೆ. ಮೋದಿ ವೈಫಲ್ಯವನ್ನು ಭಾಗವತ್ ಎತ್ತಿ ತೋರಿಸಿದಂತಾಗಿದೆ

Update: 2024-06-13 06:44 GMT

ಫಲಿತಾಂಶದಲ್ಲಿ ಹಿನ್ನಡೆ, ಕುಸಿದ ಬಹುಮತ, ಪಕ್ಷದೊಳಗೆ ಗುಸುಗುಸು, ಮಿತ್ರಪಕ್ಷಗಳ ಚೌಕಾಸಿ, ‘ಇಂಡಿಯಾ’ ಕೂಟದ ಸವಾಲು..ಇವೆಲ್ಲವುಗಳ ಜೊತೆಗೆ ಈಗ ಆರೆಸ್ಸೆಸ್‌ನಿಂದ ಖಡಕ್ ಪಾಠ. ಮೋದಿ 3.0 ಅಂತ ಮಡಿಲ ಮಾಧ್ಯಮಗಳು ಪ್ರಚಾರ ಮಾಡುತ್ತಾ ಇರುವ ಈ ಹೊತ್ತಿಗೆ ಪ್ರಧಾನಿ ಮೋದಿ ಎದುರಿರುವ ತೀರಾ ಇಕ್ಕಟ್ಟಿನ ಪರಿಸ್ಥಿತಿ ಇದು.

ಕಳೆದ ಹತ್ತು ವರ್ಷಗಳಿಂದ ತನ್ನ ಮಂತ್ರಿಗಳಿಗೆ, ಪಕ್ಷದ ಮುಖಂಡರಿಗೆ, ಅಧಿಕಾರಿಗಳಿಗೆ, ಶಾಲಾ ಮಕ್ಕಳಿಗೆ, ಕೊನೆಗೆ ಭಟ್ಟಂಗಿ ಆ್ಯಂಕರ್‌ಗಳಿಗೆ ಹೀಗೆ ಎಲ್ಲರಿಗೂ ತನ್ನ ‘ಮನ್ ಕೀ ಬಾತ್’ ಅನ್ನು ಪಾಠ ಮಾಡಿ ಮಾತ್ರ ಅಭ್ಯಾಸ ಇರುವ ಮೋದಿಗೆ ಈಗ ಪಾಠ ಕೇಳುವ ಸಮಯ.

ಆರೆಸ್ಸೆಸ್‌ನ ಮೋಹನ್ ಭಾಗವತ್ ಅವರು ಮೋದಿಯವರಿಗೆ ಸಾರ್ವಜನಿಕವಾಗಿಯೇ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ

ನಾಯಕ ಹೇಗಿರಬೇಕು, ಹೇಗಿರಬಾರದು, ಆಡಳಿತ ಹೇಗಿರಬೇಕು, ಹೇಗಿರಬಾರದು, ಮಾತು ಹೇಗಿರಬೇಕು, ಹೇಗಿರಬಾರದು - ಎಂದು ಎಲ್ಲರೆದುರೇ ಹೇಳಿಬಿಟ್ಟಿದ್ದಾರೆ.

ಹಾಗೆಂದು ಆರೆಸ್ಸೆಸ್ ಹೀಗೆ ಹೇಳಿದ ಕೂಡಲೇ ಅದು ಮೋದಿ ಹಾಗೂ ಬಿಜೆಪಿ ವಿರುದ್ಧ ಹೋಗಿ ಬಿಡುತ್ತದೆ ಅಂತ ಅಲ್ಲ. ಆ ಭ್ರಮೆ ಇಲ್ಲಿ ಯಾರಿಗೂ ಬೇಡ. ಮೋದಿಗೆ ಪಾಠ ಮಾಡುವ ಆರೆಸ್ಸೆಸ್ ಹಾಗೂ ಅದರ ಮುಖಂಡರು ಈವರೆಗೆ ಏನು ಮಾಡುತ್ತಾ ಇದ್ದರು ಎಂಬ ಪ್ರಶ್ನೆಯೂ ಇಲ್ಲಿ ಮುಖ್ಯವೇ. ಆದರೆ ಬಿಜೆಪಿಯ ಮಾತೃ ಸಂಘಟನೆಯಾದ ಆರೆಸ್ಸೆಸ್ ಈಗ ಹೇಳಿರುವ ಮಾತುಗಳು ಹಲವು ಕಾರಣಗಳಿಗೆ ಮಹತ್ವದವು.

ಆರೆಸ್ಸೆಸ್ ಬಹಳ ನೇರವಾಗಿ ಮೋದಿ ವಿರುದ್ಧ ಬಹುಶಃ ಮೊದಲ ಬಾರಿಗೆ ಮಾತಾಡಿದೆ.

ಎಲ್ಲ ಅಸಂಬದ್ಧ ನಡವಳಿಕೆಯನ್ನೂ ಬಿಡುವಂತೆ, ಕೆಲಸದ ಕಡೆ ಗಮನ ಕೊಡುವಂತೆ, ವಿಪಕ್ಷಗಳನ್ನು ಗೌರವಿಸುವಂತೆ ಮೋಹನ್ ಭಾಗವತ್ ಬಹಳ ಖಡಕ್ಕಾದ ಧಾಟಿಯಲ್ಲಿ ಹೇಳಿದ್ದಾರೆ. ಅನುತ್ತೀರ್ಣನಾದ ಪ್ರೈಮರಿ ಶಾಲೆಯ ವಿದ್ಯಾರ್ಥಿಗೆ ಟ್ಯೂಷನ್ ಕೊಡುವ ಹಾಗೆ ಭಾಗವತ್ ಮೋದಿಗೆ ಟ್ಯೂಷನ್ ಕೊಟ್ಟಿದ್ದಾರೆ.

‘‘ನಿಜವಾದ ಸೇವಕ ಅಹಂಕಾರಿಯಾಗಿರುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ಯಾವಾಗಲೂ ಸೌಜನ್ಯವನ್ನು ಕಾಯ್ದುಕೊಳ್ಳುತ್ತಾನೆ. ಅಂಥ ಸಜ್ಜನಿಕೆ ಉಳ್ಳವನು ತನ್ನ ಕೆಲಸ ತಾನು ಮಾಡುತ್ತಾನೆ. ತಾನು ಇದನ್ನು ಮಾಡಿದೆ, ಅದನ್ನು ಮಾಡಿದೆ ಎಂಬ ಅಹಂಕಾರ ಅವನಿಗಿರುವುದಿಲ್ಲ. ಹಾಗೆ ಅಹಂಕಾರ ಇರದವನನ್ನು ಮಾತ್ರ ಸೇವಕ ಎಂದು ಕರೆಯಲು ಸಾಧ್ಯ’’ ಎಂದು ನಾಯಕತ್ವದ ಬಗ್ಗೆ ಭಾಗವತ್ ಹೇಳಿರುವುದು ಸರಿಯಾಗಿಯೇ ಗುರಿಯಿಟ್ಟು ಬಿಟ್ಟ ಬಾಣವಾಗಿದೆ.

ಅಂದರೆ ಹೆಸರು ಹೇಳದಿದ್ದರೂ ಈಗ ಭಾಗವತ್ ಅಹಂಕಾರಿ ಎಂದು ಕರೆದಿದ್ದು ಯಾರನ್ನು ಎಂಬುದು ಬಿಡಿಸಿ ಹೇಳಬೇಕಿಲ್ಲ.

ಜೊತೆಗೆ ಸುಳ್ಳುಕೋರ ಎಂದು ಕರೆದಿದ್ದಾರೆ. ವಿನಯವಿಲ್ಲದ, ಸಜ್ಜನಿಕೆಯಿಲ್ಲದ ವ್ಯಕ್ತಿ ಎಂದು ಕರೆದಿದ್ದಾರೆ.

ಮಣಿಪುರ ವಿಚಾರದಲ್ಲಿ ಮೋದಿ ನಡೆದುಕೊಂಡದ್ದರ ಬಗ್ಗೆಯೂ ಭಾಗವತ್ ಮಾತುಗಳಲ್ಲಿ ಅಸಹನೆ ವ್ಯಕ್ತವಾಗಿದೆ.

‘‘ವರ್ಷದಿಂದಲೂ ಮಣಿಪುರ ಹೊತ್ತಿ ಉರಿಯುತ್ತಿದೆ. ಅಲ್ಲಿ ಶಾಂತಿ ನೆಲೆಸಿಲ್ಲ, ಕಳೆದ ಒಂದು ವರ್ಷದಿಂದ ಮಣಿಪುರ ಶಾಂತಿಗಾಗಿ ಕಾಯುತ್ತಿದೆ. ಯಾರು ಅದರ ಬಗ್ಗೆ ಗಮನ ಕೊಟ್ಟರು?’’ ಎಂದು ಕೇಳಿದ್ದಾರೆ ಭಾಗವತ್.

ಮಣಿಪುರದಲ್ಲಿ ಹತ್ತು ವರ್ಷಗಳ ಹಿಂದೆ ಶಾಂತಿ ನೆಲೆಸಿತ್ತು. ಬಂದೂಕು ಸಂಸ್ಕೃತಿ ಮುಗಿದಂತೆ ಕಂಡಿತ್ತು. ಆದರೆ ರಾಜ್ಯದಲ್ಲಿ ಇದ್ದಕ್ಕಿದ್ದಂತೆ ಹಿಂಸಾಚಾರ ಉಂಟಾಯಿತು. ಮಣಿಪುರದ ಪರಿಸ್ಥಿತಿಯನ್ನು ಆದ್ಯತೆಯೊಂದಿಗೆ ಪರಿಗಣಿಸಬೇಕು ಎಂದಿದ್ದಾರೆ ಭಾಗವತ್. ಮಣಿಪುರದಲ್ಲಿ ಇರುವುದೂ ಬಿಜೆಪಿ ಸರಕಾರ, ಕೇಂದ್ರದಲ್ಲಿ ಇರುವುದೂ ಬಿಜೆಪಿ ಸರಕಾರ. ಅಲ್ಲಿಗೆ ಮೋದಿ ಮಣಿಪುರ ವಿಚಾರದಲ್ಲಿ ತೋರಿಸಿದ ಕಡೆಗಣನೆ ಬಗ್ಗೆ ಭಾಗವತ್ ಸ್ಪಷ್ಟವಾಗಿ ಟೀಕಿಸಿದಂತಾಗಿದೆ. ಮೋದಿ ವೈಫಲ್ಯವನ್ನು ಭಾಗವತ್ ಎತ್ತಿ ತೋರಿಸಿದಂತಾಗಿದೆ.

ಹತ್ತು ವರ್ಷಗಳ ಹಿಂದೆ ಮಣಿಪುರದಲ್ಲಿ ಶಾಂತಿ ನೆಲೆಸಿತ್ತು ಎಂದು ಭಾಗವತ್ ಹೇಳುವಲ್ಲಿ, ಮೋದಿ ಸರಕಾರದ ಕಾರಣದಿಂದಾಗಿಯೇ ಅಲ್ಲಿ ಹಿಂಸೆಯ ಬೆಂಕಿ ಹೊತ್ತಿಕೊಂಡಿತು, ಮೋದಿಯೇ ಮಣಿಪುರ ಉರಿಯಲು ಕಾರಣ ಎಂದಂತಾಗಿದೆ. ಮಣಿಪುರದ ನೆಮ್ಮದಿ ನಾಶ ಮಾಡಿದ್ದು ಮೋದಿ ಎಂದೇ ಭಾಗವತ್ ಹೇಳಿದ ಹಾಗಾಗಿದೆ.

ದೇಶವೇ ಉರಿಯುತ್ತಿದ್ದರೂ ಅದರ ಬಗ್ಗೆ ಏನೇನೂ ತಲೆಕೆಡಿಸಿಕೊಳ್ಳದೆ, ಅಧಿಕಾರ ಅನುಭವಿಸುತ್ತ ರಾಜಕೀಯ ಮಾಡುತ್ತ ಕಳೆದ ನಡವಳಿಕೆ ಬಗ್ಗೆ ಭಾಗವತ್ ಆಕ್ರೋಶ ಸ್ಪಷ್ಟವಾಗಿ ವ್ಯಕ್ತವಾಗಿದೆ.

ಈ ವಿಚಾರವಾಗಿ ವಿಪಕ್ಷಗಳು ಟೀಕಿಸಿದ್ದು ಬೇರೆ. ಆದರೆ ಬಿಜೆಪಿಯ ಮಾತೃಸಂಸ್ಥೆಯಿಂದಲೇ ಈಗ ಇಂತಹದೊಂದು ಟೀಕೆ ಬಂದಿದೆ ಎಂಬುದು ಸಾಧಾರಣ ವಿಚಾರವಲ್ಲ.

ಚುನಾವಣಾ ಪ್ರಚಾರದಲ್ಲಿ ತೋರಿಸಿದ ದ್ವೇಷ, ಅಸಹನೆ ಬಗ್ಗೆಯೂ ಭಾಗವತ್ ಕಟುವಾಗಿ ಟೀಕಿಸಿದ್ದಾರೆ. ಪ್ರಚಾರದ ವೇಳೆ ಸಭ್ಯತೆಯನ್ನು ತೋರಿಸದೆ ಇದ್ದುದರ ಬಗ್ಗೆ ಭಾಗವತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಸಜ್ಜನಿಕೆ ಮೀರಿದ ಆರೋಪಗಳು, ತಂತ್ರಜ್ಞಾನ ಬಳಸಿ ಸುಳ್ಳುಗಳನ್ನು ಹಬ್ಬಿಸಿದ್ದು ಇದೆಲ್ಲದರ ಬಗ್ಗೆಯೂ ಭಾಗವತ್ ಕಿಡಿ ಕಾರಿದ್ದಾರೆ. ವಿರೋಧಪಕ್ಷಗಳ ಬಗ್ಗೆ ಗೌರವಯುತವಾಗಿ ನಡೆದುಕೊಳ್ಳದೇ ಇರುವುದರ ಬಗ್ಗೆಯೂ ಟೀಕಿಸಿದ್ದಾರೆ.

‘‘ಚುನಾವಣೆ ಎಂಬುದು ಯುದ್ಧವಲ್ಲ. ಅದು ಸಮಾನ ಮನಸ್ಸುಗಳ ನಡುವೆ ಸಹಮತ ಮೂಡಿಸುವ ಪ್ರಕ್ರಿಯೆ. ಯಾವುದೇ ವಿಚಾರಕ್ಕೆ ಸಂಬಂಧಿಸಿದ ಎರಡೂ ಆಯಾಮಗಳನ್ನು ಸಂಸತ್ತಿನಲ್ಲಿಯೇ ಪರಿಶೀಲಿಸುವ, ಚರ್ಚಿಸುವ ವಾತಾವರಣ ನಿರ್ಮಾಣವಾಗಬೇಕು’’ ಎಂದಿರುವಲ್ಲಿ ಕೂಡ, ವಿಪಕ್ಷಗಳ ವಿಚಾರದಲ್ಲಿ ಮೋದಿ ನಡೆದುಕೊಂಡ ರೀತಿಯ ವಿರುದ್ಧ ಭಾಗವತ್ ಅಸಹನೆ ವ್ಯಕ್ತವಾಗಿದೆ.

‘‘ಚುನಾವಣಾ ಪ್ರಚಾರದ ವೇಳೆ ಪರಸ್ಪರ ಟೀಕಿಸುವುದು, ತಂತ್ರಜ್ಞಾನ ಬಳಸಿ ಸುಳ್ಳುಗಳನ್ನು ಹಬ್ಬಿಸುವುದು ಸರಿಯಲ್ಲ. ಟೀಕಿಸುವಾಗಲೂ ಒಂದು ಘನತೆಯನ್ನು, ಮರ್ಯಾದೆಯನ್ನು ಪಾಲಿಸಬೇಕಾಗುತ್ತದೆ, ಸುಳ್ಳುಗಳನ್ನು ಹೇಳುವುದಲ್ಲ’’ ಎಂದು ಭಾಗವತ್ ಹೇಳಿದ್ದಾರೆ.

ಚುನಾವಣಾ ಪ್ರಚಾರದ ಉದ್ದಕ್ಕೂ ವಿಪಕ್ಷಗಳ ವಿರುದ್ಧ ಮೋದಿ ಸುಳ್ಳುಗಳನ್ನೇ ಹೇಳುತ್ತ ಹೊರಟಿದ್ದರ ಬಗ್ಗೆ ಇದು ಭಾಗವತ್ ವ್ಯಕ್ತಪಡಿಸಿರುವ ಅಸಮಾಧಾನವಾಗಿದೆ.

ಚುನಾವಣಾ ಪ್ರಚಾರದಲ್ಲಿ ಸಭ್ಯತೆಯನ್ನು ನಿಭಾಯಿಸಲೇ ಇಲ್ಲ. ಅಷ್ಟು ಮಾತ್ರವಲ್ಲ, ಆರೆಸ್ಸೆಸ್ ಅನ್ನೂ ಅದರೊಳಗೆ ಎಳೆದು ತರಲಾಯಿತು ಎಂದು ಭಾಗವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘‘ಸಂಘ ಪ್ರತೀ ಚುನಾವಣೆಯಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಕೆಲಸ ಮಾಡುತ್ತದೆ, ಈ ಬಾರಿಯೂ ಅದನ್ನು ಮಾಡಲಾಗಿದೆ. ಜನರಿಂದ ಆಯ್ಕೆಯಾಗುವುದು ಸಂಸತ್ತಿಗೆ ಹೋಗುವುದಕ್ಕಾಗಿ ಮತ್ತು ವಿವಿಧ ವಿಷಯಗಳಲ್ಲಿ ಒಮ್ಮತವನ್ನು ಮೂಡಿಸುವುದಕ್ಕಾಗಿ. ಎಲ್ಲರ ಸಮ್ಮತಿ ಪಡೆಯುತ್ತ ಮುನ್ನಡೆಯುವುದು, ಸರಕಾರ ನಡೆಸುವುದು ಅಗತ್ಯ. ನಮ್ಮ ಪರಂಪರೆ ಒಮ್ಮತವನ್ನು ಮೂಡಿಸುವುದೇ ಆಗಿದೆ. ಇದು ಯುದ್ಧವಲ್ಲ, ಸ್ಪರ್ಧೆ’’ ಎಂದು ಭಾಗವತ್ ಹೇಳಿದ್ದಾರೆ.

ಒಮ್ಮತ ಮೂಡಿಸುವ ಬಗ್ಗೆ ಭಾಗವತ್ ಹೇಳಿದ್ದು ಯಾರಿಗೆ ಎಂದು ಪ್ರತ್ಯೇಕವಾಗಿ ಹೇಳಬೇಕೇ ?

ಒಮ್ಮತ ಎಂಬುದರ ವಿರುದ್ಧವಾಗಿತ್ತು ಹತ್ತು ವರ್ಷಗಳ ಮೋದಿ ಆಡಳಿತ. ಅಲ್ಲಿ ವಿಪಕ್ಷಗಳು ಹೇಗೂ ಲೆಕ್ಕಕಿಲ್ಲ, ಸ್ವತಃ ಬಿಜೆಪಿಯವರಲ್ಲೇ ಯಾವುದೇ ಚರ್ಚೆ ನಡೆಯುತ್ತಲೇ ಇರಲಿಲ್ಲ. ಅಲ್ಲೇನಿದ್ದರೂ ಮೋದಿ, ಶಾ ಕೂತು ನಿರ್ಣಯ ತೆಗೆದುಕೊಳ್ಳುವುದು, ಅದನ್ನು ಉಳಿದವರು ಜಾರಿ ಮಾಡುವುದು. ಅಷ್ಟೆ. ಈಗ ಭಾಗವತ್ ಅವರಿಗೆ ಒಮ್ಮತ ಮೂಡಿಸುವ ಮಹತ್ವದ ಬಗ್ಗೆ ಹೇಳಿದ್ದಾರೆ.

ವಿಶೇಷವೆಂದರೆ ಈಗ ಮೋದಿಯವರಿಗೂ ಒಮ್ಮತ ಮೂಡಿಸಿಕೊಂಡೇ ಮುಂದುವರಿಯುವ ಅನಿವಾರ್ಯತೆ ಎದುರಾಗಿದೆ. ಇಲ್ಲದಿದ್ದರೆ ಸರಕಾರ ಉಳಿಯುವುದಿಲ್ಲ.

‘‘ಚುನಾವಣೆಯ ಉದ್ವೇಗಗಳಿಂದ ನಮ್ಮನ್ನು ನಾವು ಬಿಡಿಸಿಕೊಳ್ಳಬೇಕಾಗಿದೆ. ದೇಶ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕಾಗಿದೆ’’ ಎಂದು ಭಾಗವತ್ ಹೇಳಿದ್ದಾರೆ. ಬಲ ಇರುವವರು ವಿನಯಶೀಲರಾಗಿರಬೇಕು. ನಮ್ರತೆ ಎಂಬುದು ಯಾರಿಗೇ ಆದರೂ ಯಾವಾಗಲೂ ಧರ್ಮ ಮತ್ತು ಸಂಸ್ಕೃತಿಯಿಂದ ಬರುತ್ತದೆ ಎಂದು ಭಾಗವತ್ ಪ್ರತಿಪಾದಿಸಿದ್ದಾರೆ.

‘‘ನಾವು ಆರ್ಥಿಕತೆ, ರಕ್ಷಣಾ ಕಾರ್ಯತಂತ್ರ, ಕ್ರೀಡೆ, ಸಂಸ್ಕೃತಿ, ತಂತ್ರಜ್ಞಾನ ಮುಂತಾದ ಹಲವು ಕ್ಷೇತ್ರಗಳಲ್ಲಿ ದಾಪುಗಾಲು ಹಾಕಿದ್ದೇವೆ. ಹಾಗೆಂದು ನಾವು ಎಲ್ಲಾ ಸವಾಲುಗಳನ್ನು ಜಯಿಸಿದ್ದೇವೆ’’ ಎಂದರ್ಥವಲ್ಲ ಎಂದೂ ಭಾಗವತ್ ಮೋದಿ ಅಹಮ್ಮಿನ ಬೆಲೂನಿಗೆ ಸೂಜಿ ಚುಚ್ಚಿದ್ದಾರೆ.

ಭಾಗವತ್ ಸಲಹೆಯನ್ನು ಮೋದಿ ಪಾಲಿಸಲೇಬೇಕಿದೆ ಎಂದು ಪ್ರತಿಪಕ್ಷಗಳು ಹೇಳಿವೆ. ಮಣಿಪುರ ಸಂಘರ್ಷವನ್ನು ಆದ್ಯತೆಯ ಮೇಲೆ ಪರಿಹರಿಸಬೇಕೆಂಬ ಭಾಗವತ್ ಸಲಹೆಯನ್ನು ವಿಪಕ್ಷಗಳು ಸ್ವಾಗತಿಸಿವೆ.

ಕಿಂಚಿತ್ ಆತ್ಮಸಾಕ್ಷಿಯನ್ನೂ ಕೇಳದೆ, ಮಣಿಪುರದ ಜನರ ಸತತ ಬೇಡಿಕೆಗೂ ಮಣಿಯದೆ ಮೋದಿ ನಡೆದುಕೊಂಡಿದ್ದರ ಬಗ್ಗೆ ಹೇಳಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ‘‘ನಿಮ್ಮ ರಾಜಧರ್ಮ ಪಾಲಿಸಿ ಎಂದು 22 ವರ್ಷಗಳ ಹಿಂದೆ ವಾಜಪೇಯಿಯವರು ಹೇಳಿದ್ದನ್ನು ಮೋದಿ ನೆನಪಿಸಿಕೊಳ್ಳಬೇಕಿದೆ’’ ಎಂದಿದ್ಧಾರೆ.

‘‘ವಿಪಕ್ಷಗಳ ಮಾತನ್ನಂತೂ ಮೋದಿ ಕೇಳುವುದಿಲ್ಲ. ಆದರೆ ಅವರು ಆರೆಸ್ಸೆಸ್ ಮುಖ್ಯಸ್ಥರ ಮಾತನ್ನು ಪಾಲಿಸಲೇಬೇಕಾಗಿದೆ’’ ಎಂದು ಕಪಿಲ್ ಸಿಬಲ್ ವ್ಯಂಗ್ಯವಾಡಿದ್ದಾರೆ.

‘‘ಮಣಿಪುರ ವಿಚಾರವಾಗಿ ನಾವು ಸರಕಾರವನ್ನು ತಿಂಗಳುಗಟ್ಟಲೆ ಪ್ರಶ್ನಿಸಿದ್ದೇವೆ. ಮಣಿಪುರದ ಪರಿಸ್ಥಿತಿ ಬಗ್ಗೆ ಸಂಸತ್ತಿನಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಮಣಿಪುರ ದೇಶದ ಅವಿಭಾಜ್ಯ ಅಂಗ. ಅಲ್ಲಿನ ಜನರು, ಮಹಿಳೆಯರು, ಮಕ್ಕಳು ಭಾರತೀಯರು’’ ಎಂದು ಎನ್‌ಸಿಪಿ ಶರದ್ ಪವಾರ್ ಬಣದ ಸುಪ್ರಿಯಾ ಸುಳೆ ಹೇಳಿದ್ದಾರೆ.

‘‘ಭಾಗವತ್ ಮಾತುಗಳನ್ನು ಮೋದಿ ಕೇಳುತ್ತಾರೆಂದೇನೂ ಅನ್ನಿಸುವುದಿಲ್ಲ. ಅವರು ಮಣಿಪುರದ ಸುದ್ದಿಗೇ ಹೋಗುವುದಿಲ್ಲ. ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡುತ್ತಾರೆ. ಸಂವಿಧಾನವನ್ನು ಮಣಿಸಲು ನೋಡುತ್ತಾರೆ. ಅದೃಷ್ಟವಶಾತ್ ಜನರು ಸಂವಿಧಾನದ ಪರವಾಗಿ ಮಾತನಾಡಲು ಮತ್ತು ಭಾರತೀಯ ಸಂಸತ್ತು ಮತ್ತು ಸಂವಿಧಾನವನ್ನು ರಕ್ಷಿಸಲು ‘ಇಂಡಿಯಾ’ ಒಕ್ಕೂಟವನ್ನು ಆಯ್ಕೆ ಮಾಡಿದ್ದಾರೆ’’ ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೊಯಿ ಹೇಳಿದ್ದಾರೆ.

ಕಳೆದ ಒಂದು ವರ್ಷದಿಂದ ಉರಿಯುತ್ತಿರುವ ಮಣಿಪುರದ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಭಾಗವತ್ ಹೇಳಿಕೆಗೆ ತೇಜಸ್ವಿ ಯಾದವ್ ಕೂಡ ಪ್ರತಿಕ್ರಿಯಿಸಿದ್ದಾರೆ.

‘‘ಮಣಿಪುರದ ವಿಚಾರವಾಗಿ ಮಾತ್ರವಲ್ಲ, ರೈತರು, ಲೈಂಗಿಕ ಕಿರುಕುಳಕ್ಕೊಳಗಾದ ಕುಸ್ತಿಪಟುಗಳ ಬಗ್ಗೆಯೂ ಪ್ರಧಾನಿ ಮೌನವಾಗಿಯೇ ಇದ್ದಾರೆ. ಭಾಗವತ್ ಈಗ ಮಾತನಾಡಿದ್ದಾರೆ. ಆದರೆ ಅದು ಬಹಳ ತಡವಾಗಿದೆ’’ ಎಂದು ತೇಜಸ್ವಿ ಹೇಳಿದ್ದಾರೆ.

ತಮ್ಮ ಭಾಷಣದಲ್ಲಿ ಭಾಗವತ್ ಎಲ್ಲೂ ಮೋದಿಯ ಹೆಸರು ಎತ್ತದಿದ್ದರೂ, ಅವರು ಮಾತಾಡಿರುವ ಸಮಯ ನೋಡಿದರೆ, ಅವರ ಎಲ್ಲ ಮಾತುಗಳೂ ಮೋದಿಯನ್ನೇ ಗುರಿಯಾಗಿಸಿಕೊಂಡಿವೆ ಎಂಬುದು ಸ್ಪಷ್ಟ.

ಖುದ್ದು ಬಿಜೆಪಿಯೊಳಗಿನ ಮಂದಿಯೇ ಇವತ್ತು ಬಿಜೆಪಿಯ ಈ ದುರ್ಗತಿಗೆ ಅಹಂಕಾರವೇ ಕಾರಣ ಎನ್ನುತ್ತಿದ್ದಾರೆ. ಎಲ್ಲದರಲ್ಲೂ ತನ್ನನ್ನು ಪ್ರದರ್ಶಿಸಿಕೊಳ್ಳುವ, ಎಲ್ಲದನ್ನೂ ತಾನೇ ಮಾಡಿದೆ ಎಂದು ಹೇಳಿಕೊಳ್ಳುವ, ‘ಮೋದಿ ಸರಕಾರ’ ಎನ್ನುವ, ‘ಮೋದಿ ಕಿ ಗ್ಯಾರಂಟಿ’ ಎನ್ನುವ, ‘ಇದು ಮೋದಿ ಭರವಸೆ’ ಎನ್ನುವ ಅಹಂಕಾರದ ನಡವಳಿಕೆ ಪಕ್ಷದೊಳಗೂ, ಸಂಘದೊಳಗೂ ಅನೇಕರ ಅಸಹನೆಗೆ ಕಾರಣ ಎಂಬುದು ಸ್ಪಷ್ಟವಿದೆ.

ಮೋದಿ ನಿಮ್ಮನ್ನು ಬಿಡುವುದಿಲ್ಲ, ಮೋದಿ ಬಯಾಲಾಜಿಕಲ್ ಅಲ್ಲ, ಮೋದಿ ಪರಿವಾರ್, ಮೋದಿ ಜೊತೆ ಬನ್ನಿ ಇತ್ಯಾದಿಯಾಗಿ ಎಲ್ಲವನ್ನೂ ಮೋದಿಯೇ ಮೋದಿಮಯವಾಗಿಸುತ್ತಿದ್ದ ರೀತಿ ಬಿಜೆಪಿಯೊಳಗೇ ದೊಡ್ಡ ಮಟ್ಟದ ಅಸಹನೆ ಮೂಡಿಸಿತ್ತೆಂಬುದು ನಿಧಾನವಾಗಿಯಾದರೂ ಬಯಲಾಗುತ್ತಿದೆ.

ಚುನಾವಣಾ ಪ್ರಚಾರದಲ್ಲಿ ದೇಶದ ಪ್ರಧಾನಿ ನಿರುದ್ಯೋಗದ ಬಗ್ಗೆ ಮಾತಾಡಲೇ ಇಲ್ಲ, ಬೆಲೆಯೇರಿಕೆ ಬಗ್ಗೆ ಮಾತಾಡಲೇ ಇಲ್ಲ. ಜನರನ್ನು ಹೈರಾಣಾಗಿಸಿದ್ದ ಈ ವಿಷಯಗಳ ಬಗ್ಗೆ ದೇಶದ ಪ್ರಧಾನಿ ಮಾತಾಡಲೇ ಇಲ್ಲ. ಮೋದಿ ಮಾತಾಡಿದ್ದು ನಾನು, ನನ್ನದು, ನನ್ನಿಂದ ಎಂಬ ಮಾತುಗಳನ್ನು ಮಾತ್ರ. ವಿಪಕ್ಷಗಳನ್ನು ಕಡೆಗಣಿಸುವುದಕ್ಕಾಗಿಯೇ, ಹಣಿಯುವುದಕ್ಕಾಗಿಯೇ ಮೋದಿ ಎಲ್ಲ ಶಕ್ತಿಯನ್ನೂ ಬಳಸಿದರು.

ಚುನಾವಣಾ ಪ್ರಚಾರಕ್ಕೆ ಇಡೀ ದೇಶ ಸುತ್ತಿದ ಮೋದಿ ಒಂದೇ ಒಂದು ಬಾರಿ ಮಣಿಪುರಕ್ಕೆ ಹೋಗಲಿಲ್ಲ.

ವಿಪಕ್ಷಗಳ ವಿಚಾರದಲ್ಲಿ ಗೌರವದಿಂದ ನಡೆದುಕೊಳ್ಳದ, ಅವುಗಳ ಸಹಮತ ಮುಖ್ಯವೆಂದು ಭಾವಿಸದೇ ಹೋದ, ವಿಪಕ್ಷಗಳ ಯಾವ ಮಾತನ್ನೂ ಕೇಳಿಸಿಕೊಳ್ಳದ, ಬದಲಾಗಿ ವಿಪಕ್ಷಗಳನ್ನು ಲೇವಡಿ ಮಾಡುವುದರಲ್ಲಿಯೇ ಸತತ ತೊಡಗಿ ತನ್ನ ಬೆನ್ನು ತಾನೇ ತಟ್ಟಿಕೊಂಡ ಮೋದಿಗೆ ಭಾಗವತ್ ಈಗ ಸರಿಯಾಗಿಯೇ ಛಾಟಿ ಬೀಸಿದ್ದಾರೆ. ವಿಪಕ್ಷಗಳ ಬಗೆಗಿನ ಮೋದಿ ಅಸಹನೆ, ಸಂವೇದನಾ ಹೀನ ನಡೆಯೇ ಇವತ್ತಿನ ಸ್ಥಿತಿಗೆ ಕಾರಣವಾಗಿದೆ.

ಇದೆಲ್ಲ ಎಲ್ಲಿಗೆ ಮುಟ್ಟಿತ್ತೆಂದರೆ, ಆರೆಸ್ಸೆಸ್ ಆಸರೆಯ ಅಗತ್ಯ ಇವತ್ತು ಬಿಜೆಪಿಗೆ ಇಲ್ಲ ಎನ್ನುವ ಮಟ್ಟಿಗೆ. ಅದನ್ನೂ ತಣ್ಣಗೆ ಕೇಳಿಸಿಕೊಂಡಿದ್ದ ಸಂಘ ಈಗ ಮೋದಿ ಸ್ವಂತ ಬಲದಿಂದ ಸರಕಾರ ರಚಿಸಲೂ ಆಗದಂತಹ ಸ್ಥಿತಿ ಮುಟ್ಟಿದ ಬಳಿಕ ಗುಡುಗಿದೆ.

ಮೋದಿ ವಿರುದ್ಧ ಈಗ ಗುಡುಗಿರುವುದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾತ್ರವಲ್ಲ. ಭಾಗವತ್ ಹೇಳಿಕೆ ಬೆನ್ನಲ್ಲೇ ಆರೆಸ್ಸೆಸ್ ಮುಖವಾಣಿ ‘ಆರ್ಗನೈಸರ್’ನಲ್ಲಿ ಕೂಡ ಬಿಜೆಪಿ ನಾಯಕರ ಬಗ್ಗೆ ಅಸಹನೆ ವ್ಯಕ್ತವಾಗಿದೆ.

‘ಬಿಜೆಪಿ ನಾಯಕರ ಅತಿಯಾದ ಆತ್ಮವಿಶ್ವಾಸದ ರಿಯಾಲಿಟಿ ಚೆಕ್ ಈ ಚುನಾವಣಾ ಫಲಿತಾಂಶ’ ಎಂದು ಬರೆಯಲಾಗಿದೆ. ಮಾತ್ರವಲ್ಲ, ಬಿಜೆಪಿಯ ಕೆಲ ನಾಯಕರು ತಮ್ಮದೇ ಭ್ರಮೆಯಲ್ಲಿ ಮುಳುಗಿ ಮೈಮರೆತಿದ್ದರು ಎಂದೂ ಟೀಕಿಸಲಾಗಿದೆ.

ಆರೆಸ್ಸೆಸ್‌ನ ಆಜೀವ ಸದಸ್ಯ ರತನ್ ಶಾರ್ದಾ ಬರೆದಿರುವ ಬರಹದಲ್ಲಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕರು ಆರೆಸ್ಸೆಸ್ ಸಹಾಯ ಕೇಳದೇ ಹೋದದ್ದೇ ಕಳಪೆ ಸಾಧನೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

‘ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕುವುದರಲ್ಲಿ ತೊಡಗಿದ್ದರೇ ಹೊರತು ಜನರನ್ನು ನೇರವಾಗಿ ಮುಟ್ಟಲಿಲ್ಲ. ಕೆಲವರಂತೂ ಭ್ರಮೆಯಲ್ಲಿಯೇ ಇದ್ದರು ಮತ್ತು ಅವರು ಜನರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಯುವುದಕ್ಕೇ ಹೋಗಲಿಲ್ಲ’ ಎಂದು ಆ ಬರಹ ಹೇಳುತ್ತದೆ.

ಬಿಜೆಪಿ ನಾಯಕರಿಗೆ ಮಾತ್ರ ವಾಸ್ತವ ರಾಜಕೀಯ ಅರ್ಥವಾಗುತ್ತದೆ ಮತ್ತು ಆರೆಸ್ಸೆಸ್ ಮಂದಿಯೆಲ್ಲ ಹಳ್ಳಿ ಗುಗ್ಗುಗಳು ಎಂಬ ಬಿಜೆಪಿ ನಾಯಕರ ಹುಸಿ ಅಹಂಕಾರ ಹಾಸ್ಯಾಸ್ಪದ ಎಂದು ಆರ್ಗನೈಸರ್‌ನಲ್ಲಿನ ಬರಹದಲ್ಲಿ ಲೇವಡಿ ಮಾಡಲಾಗಿದೆ.

ಸೋಷಿಯಲ್ ಮೀಡಿಯಾಗಳಲ್ಲಿ ಆಟವಾಡುವ ಹೊಸ ಕಾಲದ ಕಾರ್ಯಕರ್ತರು ಪೂರ್ತಿಯಾಗಿ ತೊಡಗಿಸಿಕೊಂಡ ಹಳೆಯ ಕಾರ್ಯಕರ್ತರನ್ನು ನಿರ್ಲಕ್ಷಿಸಿರುವುದು ಬಿಜೆಪಿಗೆ ನಕಾರಾತ್ಮಕವಾಗಿ ಪರಿಣಮಿಸಿತು ಎಂದು ಬರಹದಲ್ಲಿ ಟೀಕಿಸಲಾಗಿದೆ.

ಬಿಜೆಪಿ ಸಂಸದರು ಮತ್ತು ಸಚಿವರು ಜನರ ಕೈಗೇ ಸಿಗದಂತಾಗಿರುವ ಬಗ್ಗೆಯೂ ಬರಹದಲ್ಲಿ ಟೀಕಿಸಲಾಗಿದೆ.

ಯಾವುದೇ ಬಿಜೆಪಿ ಅಥವಾ ಆರೆಸ್ಸೆಸ್ ಕಾರ್ಯಕರ್ತರ ಮತ್ತು ಜನಸಾಮಾನ್ಯರ ದೂರು ಏನೆಂದರೆ, ಬಿಜೆಪಿ ಸಂಸದ ಅಥವಾ ಶಾಸಕರನ್ನು ಭೇಟಿ ಮಾಡುವುದೇ ಕಷ್ಟವಾಗಿದೆ ಎಂಬುದು. ಇನ್ನು ಮಂತ್ರಿಗಳ ವಿಚಾರವಂತೂ ದೂರವೇ ಉಳಿಯಿತು. ಬಿಜೆಪಿ ಚುನಾಯಿತ ಸಂಸದರು ಮತ್ತು ಸಚಿವರು ಯಾವಾಗಲೂ ಬಿಝಿ ಆಗಿರುವುದೇಕೆ? ಅವರು ತಮ್ಮ ಕ್ಷೇತ್ರಗಳಲ್ಲಿ ಏಕೆ ಕಾಣಿಸುವುದಿಲ್ಲ? ಎಂಬ ಪ್ರಶ್ನೆಯನ್ನು ‘ಆರ್ಗನೈಸರ್’ ಬರಹದಲ್ಲಿ ಎತ್ತಲಾಗಿದೆ.

ಮೋದಿ ಮ್ಯಾಜಿಕ್‌ಗೂ ಮಿತಿಗಳಿವೆ ಎಂದು ಹೇಳಿರುವುದು ಆರ್ಗನೈಸರ್ ಬರಹದಲ್ಲಿನ ಮತ್ತೊಂದು ಮುಖ್ಯ ವಿಚಾರ.

ಮೋದಿಯೇ ಎಲ್ಲಾ 543 ಸ್ಥಾನಗಳಲ್ಲಿ ಹೋರಾಡುತ್ತಿದ್ದಾರೆ ಎಂಬಂತೆ ಬಿಂಬಿಸಿದ್ದುದರ ಮಿತಿ ಏನಿತ್ತು ಎಂಬುದನ್ನು ಹೇಳಲಾಗಿದೆ. ಅಭ್ಯರ್ಥಿಗಳನ್ನು ಬದಲಾಯಿಸಿದಾಗ, ಸ್ಥಳೀಯ ನಾಯಕರ ಬದಲಿಗೆ ಪಕ್ಷಾಂತರಿಗಳಿಗೆ ಮಣೆ ಹಾಕಿದಾಗಲಂತೂ ಮೋದಿ ಮುಖ ಇಟ್ಟುಕೊಂಡು ಗೆಲ್ಲುತ್ತೇವೆ ಎಂಬ ಭ್ರಮೆ ಇತ್ತು. ಅದು ಪೂರ್ತಿ ಸೋತಿತು. ಎಲ್ಲಿಂದಲೋ ಬಂದವರಿಗಾಗಿ ತಮ್ಮನ್ನು ಬಲಿ ಕೊಟ್ಟದ್ದು ಪಕ್ಷದೊಳಗೇ ಇದ್ದ ಉತ್ತಮ ಸಂಸದರನ್ನು ಘಾಸಿಗೊಳಿಸಿತ್ತು ಎಂದು ಆ ಬರಹ ವಿಶ್ಲೇಷಿಸಿದೆ.

ಆರೆಸ್ಸೆಸ್ ನಿಯಂತ್ರಣವನ್ನೇ ಮೀರಿ ಮೋದಿ ಬೆಳೆದದ್ದು ಇತ್ತೀಚಿನ ವರ್ಷಗಳಲ್ಲಿ ಆರೆಸ್ಸೆಸ್‌ಗೇ ಕಿರಿಕಿರಿಯಾದ ವಿಚಾರವಾಗಿತ್ತು ಎಂಬುದು ನಿಜ. ಆದರೆ ಆರೆಸ್ಸೆಸ್ ನಿಯಂತ್ರಣ ಮೀರಿ ಬೆಳೆದ ಮೋದಿ ಸಾಮಾಜಿಕ ಸಾಮರಸ್ಯ ಹಾಳುಗೆಡಹುವುದರಲ್ಲಿ ಮತ್ತು ಪ್ರಜಾಪ್ರಭುತ್ವದ ಒಳಿತಿನ ದೃಷ್ಟಿಯಲ್ಲಿ ಆರೆಸ್ಸೆಸ್‌ಗಿಂತಲೂ ಅಪಾಯಕಾರಿಯಾಗಿ ಬೆಳೆದಿದ್ದು ಮಾತ್ರ ದೇಶದ ಸಂವಿಧಾನಕ್ಕೂ, ಪ್ರಜಾಸತ್ತೆಗೂ ದೊಡ್ಡ ಆತಂಕದ ಸಂಗತಿಯಾಗಿತ್ತು.

ಆದರೆ ಅಂತಹ ಎಲ್ಲದಕ್ಕೂ ಮತದಾರ ಪ್ರಭುಗಳು ಕಡಿವಾಣ ಹಾಕಿದ್ದಾರೆ. ಸೋತ ಮೋದಿಯ ಎದುರು ಸಂಘವೂ ಗುಡುಗುತ್ತಿದೆ.

ಇದರಿಂದ ಮುಂಬರುವ ದಿನಗಳಲ್ಲಿ ದೇಶಕ್ಕೇನಾದರೂ ಒಳಿತಾದೀತೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪಿ.ಎಚ್. ಅರುಣ್

contributor

Similar News