ಯುವಜನರು ದೇಶದ ಆಸ್ತಿಯೆಂದರಷ್ಟೇ ಸಾಕೇ?

Update: 2024-01-12 07:25 GMT

ಸ್ವಾಮಿ ವಿವೇಕಾನಂದರ ಜನ್ಮದಿನವಾದ ಇಂದು ‘ರಾಷ್ಟ್ರೀಯ ಯುವದಿನ’ವೆಂದು ಆಚರಿಸುತ್ತೇವೆ. ಅವರ ಆದರ್ಶಗಳು ಯುವಜನರಿಗೆ ಪ್ರೇರಣೆ. ಅಲ್ಲದೆ ಯುವಜನರು ಈ ದೇಶದ ಭವಿಷ್ಯವೆಂದು ನಂಬಿಕೆ ಇಟ್ಟಿದ್ದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದ.

ಹಿಂದಿನಿಂದಲೂ ಹಾಗೂ ಪ್ರಸ್ತುತ ಕಾಲಘಟ್ಟ ದಲ್ಲೂ ಭಾರತ ಯುವಭಾರತ. ಯುವಜನರ ಸಂಖ್ಯೆಯಲ್ಲಿ ವಿಶ್ವದಲ್ಲಿಯೇ ಹೆಚ್ಚಿನ ಸಂಖ್ಯೆ ಭಾರತ ಹೊಂದಿದೆ. 2011ರ ಜನಗಣತಿಯ ಪ್ರಕಾರ ಹಾಗೂ ಪ್ರಸ್ತುತ ಯುವನೀತಿಯ ಯುವಜನ ವ್ಯಾಖ್ಯಾನದಂತೆ ಭಾರತದಲ್ಲಿ 15ರಿಂದ 29 ವರ್ಷದ ವಯಸ್ಸಿನವರ ಜನಸಂಖ್ಯೆ ಶೇ. 27.5 ಅಂದರೆ ಸುಮಾರು 36 ಕೋಟಿ ಯುವಜನರಿದ್ದಾರೆ. ಯೂತ್ ಇನ್ ಇಂಡಿಯಾ 2022 (ಭಾರತ ಸರಕಾರ) ವರದಿಯ ಪ್ರಕಾರ ಕರ್ನಾಟಕದಲ್ಲಿ 1.69 ಕೋಟಿ ಯುವಜನರಿದ್ದಾರೆ. ಇಷ್ಟು ಸಂಖ್ಯೆಯಲ್ಲಿರುವ ಯುವಜನರ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳಾಗಲೀ, ಸರಕಾರವಾಗಲೀ ತುಟಿ ಬಿಚ್ಚುವುದೇ ಇಲ್ಲ. ಕೇವಲ ಮೇಲ್ನೋಟಕ್ಕೆ ಮಾತ್ರ ಉದ್ಯೋಗ ಅವಕಾಶಗಳ ಪಟಾಕಿ ಸಿಡಿಸಿ ಜಾರಿಕೊಳ್ಳುತ್ತಾರೆ. ಇನ್ನು ಯುವಜನರಿಗಾಗಿ ಇರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೇವಲ ಆಟಕ್ಕೆ ಮಾತ್ರ ಸೀಮಿತವಾಗಿದೆ ಬಿಟ್ಟರೆ ಯುವ ಸಬಲೀಕರಣದಲ್ಲಿ ತೊಡಗಿಸಿ ಕೊಂಡಿಲ್ಲ.

ಅಧ್ಯಯನದ ಪ್ರಕಾರ ನಮ್ಮ ದೇಶದ ಯುವಜನರಲ್ಲಿ ಶೇ. 30 ಯುವಜನರಿಗೆ ಮಾನಸಿಕ ಕಾಯಿಲೆ ಮತ್ತು ಒತ್ತಡಗಳಿವೆ. ಕೆಲವು ವರದಿಗಳು ಮತ್ತು ಸರ್ವೇಗಳು ನೀಡಿದ ಮಾಹಿತಿಯತ್ತ ಕಣ್ಣಾಡಿಸಿದರೆ ಎತ್ತ ಸಾಗುತ್ತಿದೆ ಯುವಜನರ ಭವಿಷ್ಯ ಎಂಬ ಪ್ರಶ್ನೆ ಕಾಡುತ್ತದೆ.

ನ್ಯಾಷನಲ್ ಕ್ರೈಂ ಬ್ಯೂರೋ ವರದಿಯ ಪ್ರಕಾರ ಆತ್ಮಹತ್ಯೆ ಮಾಡಿಕೊಂಡಿರುವ ಯುವಜನರಲ್ಲಿ ಶೇ. 40 ಮಂದಿ 15ರಿಂದ 29 ವರ್ಷ ವಯಸ್ಸಿನವರು. 2021ರಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ. 34.5 ಯುವಜನರು.

ಅಲ್ಲದೆ ಯೂತ್ ಇನ್ ಇಂಡಿಯಾ 2022 (ಭಾರತ ಸರಕಾರ) ವರದಿಯ ಪ್ರಕಾರ 2019-2021ರಲ್ಲಿ ಸಹಜ ದೇಹದಾರ್ಢ್ಯ ಹೊಂದಿದ್ದ ಯುವಜನರು ಒಟ್ಟು ಶೇ. 59 ಮಾತ್ರ. ಈ 59ರಲ್ಲೂ ಶೇ. 31 ಯುವಜನರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ ಎಂದು ವರದಿ ಹೇಳುತ್ತದೆ.

ಎನ್.ಎಸ್.ಎಸ್.ಒ.-2021 ಸರ್ವೇ ವರದಿಯು ದೇಶದ ಶೇ. 33 ಯುವಜನರಿಗೆ ಶಿಕ್ಷಣ ಅಥವಾ ಉದ್ಯೋಗ ಮರೀಚಿಕೆಯಾಗಿದೆ ಎನ್ನುತ್ತದೆ.

2020ರಲ್ಲಿ ಅತ್ಯಾಚಾರಕ್ಕೆ ಗುರಿಯಾದ 12 ರಿಂದ 30 ವರ್ಷದವರೆಗಿನ ಯುವತಿಯರ ಸಂಖ್ಯೆ 28,153. ಇದು ಕೇಸು ದಾಖಲಾದ ಅಂಕಿಅಂಶ ಮಾತ್ರ. ಇನ್ನೂ ಕೇಸು ದಾಖಲಾಗದಿರುವ ಸಂಖ್ಯೆ ಕಲ್ಪಿಸಿಕೊಳ್ಳಲು ಅಸಾಧ್ಯ. 2020 ರಲ್ಲಿ ಕೊಲೆಗೀಡಾದ 12 ರಿಂದ 30 ವರ್ಷದ ಯುವಜನರ ಸಂಖ್ಯೆ 30,183.

ಈ ರೀತಿಯ ಸಮಸ್ಯೆಗಳು ಮತ್ತು ದೌರ್ಜನ್ಯಗಳ ಬಗ್ಗೆ ಅಧ್ಯಯನ ಮಾಡಲು ಮತ್ತು ಯುವಜನರ ಬದುಕನ್ನು ಉಳಿಸಿಕೊಳ್ಳಲು ಯಾವ ಪ್ರಯತ್ನಗಳು ನಡೆಯುತ್ತಿಲ್ಲ. ಕನಿಷ್ಠ ಯುವಜನರಿಗೆ ಏನು ಓದಬೇಕು ಎಂದು ಹೇಳಿಕೊಡುವ ಶಿಕ್ಷಣ ಮತ್ತು ವೃತ್ತಿ ಮಾರ್ಗದರ್ಶನ ಮಾಡುವ ವ್ಯವಸ್ಥೆಯೇ ನಮ್ಮಲ್ಲಿಲ್ಲ. ಇನ್ನು ಮಾನಸಿಕವಾಗಿ ಒತ್ತಡಗಳಿಗೆ ಸಿಕ್ಕಿಕೊಂಡು ಒದ್ದಾಡುವವರಿಗೆ ಆಪ್ತ ಸಮಾಲೋಚನೆ ಕೂಡ ಸಿಗುತ್ತಿಲ್ಲ. ಈ ಕಾರಣಕ್ಕಾಗಿಯೇ ಯುವಜನರ ಆತ್ಮಹತ್ಯೆಯ ಸಂಖ್ಯೆಯೂ ಹೆಚ್ಚುತ್ತಿದೆ.

ಇಷ್ಟೆಲ್ಲಾ ಸಮಸ್ಯೆಗಳು ಮತ್ತು ಒತ್ತಡಗಳಲ್ಲಿರುವ ಯುವಜನರ ಭವಿಷ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾದ ಸರಕಾರಗಳು ರಾಜಕೀಯದ ಹಿತಾಸಕ್ತಿಗಾಗಿ ಮತ್ತು ತಮ್ಮ ಲಾಭೋದ್ದೇಶಕ್ಕಾಗಿ ಅವರನ್ನು ಬಳಸಿಕೊಳ್ಳುತ್ತಿವೆ. ಇಂತಹ ನಿದರ್ಶನದ ಕಾರಣಕ್ಕಾಗಿಯೇ ವಿವೇಕಾನಂದರು ‘ಯಾವುದು ನಿಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ದುರ್ಬಲಗೊಳಿಸಿದರೆ ಅದನ್ನು ವಿಷವೆಂದು ತಿರಸ್ಕರಿಸಿ’ ಎಂದು ಹೇಳಿದ್ದಾರೆ.

ಕರ್ನಾಟಕ ಯುವ ಮುನ್ನಡೆಯು, ಯುವಜನ ಆಯೋಗ ಅಸ್ತಿತ್ವಕ್ಕೆ ಬರಲೆಂದು ಆಂದೋಲನ ನಡೆಸುತ್ತಿದೆ. ವಿವೇಕಾನಂದರ ಜನ್ಮದಿನಕ್ಕೆ ಹೊಸ ಮೆರುಗು ತುಂಬುವುದು ಯುವಜನರ ಬಗ್ಗೆ ಚರ್ಚೆಗಳು ಶುರುವಾದಾಗ ಮತ್ತು ಅವರಿಗೆ ದಕ್ಕಬೇಕಾದ ಹಕ್ಕುಗಳು ದಕ್ಕಿದಾಗ ಮಾತ್ರ. ಇಲ್ಲವಾದರೆ ನಾವು ಆಚರಿಸುವ ‘ಯುವದಿನ’ ಕೇವಲ ನಾಮಮಾತ್ರ ಅಷ್ಟೇ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸಂಜೀವ್ ಜಗ್ಲಿ

ಯುವಜನ ಕಾರ್ಯಕರ್ತ

Similar News