ನಿಜ್ಜಾರ್ ಹತ್ಯೆಯಲ್ಲಿ ಅಮಿತ್ ಶಾ ಕೈವಾಡ ಇರುವುದು ನಿಜವೇ?

ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ವಿಚಾರದಲ್ಲಿ ‘ವಾಶಿಂಗ್ಟನ್ ಪೋಸ್ಟ್’ನ ಈ ಹಿಂದಿನ ವರದಿಯಲ್ಲಿ ಅಮಿತ್ ಶಾ ಹೆಸರು ಇರಲಿಲ್ಲ. ಭಾರತದ ಹಿರಿಯ ಸಚಿವರು ಮತ್ತು ಖಂWದ ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಮಾತ್ರ ಹೇಳಲಾಗಿತ್ತು. ಆದರೆ ನಂತರ ಪರಿಷ್ಕರಿಸಿದ ವರದಿಯಲ್ಲಿ ಪತ್ರಿಕೆ ತನ್ನ ಮೂಲಗಳಿಂದ ಲಭ್ಯವಾದ ಹೆಚ್ಚು ವಿವರವಾದ ಮಾಹಿತಿಯ ಆಧಾರದ ಮೇಲೆ ಅಮಿತ್ ಶಾ ಹೆಸರನ್ನು ನೇರವಾಗಿ ಉಲ್ಲೇಖಿಸಿದೆ.

Update: 2024-10-18 05:56 GMT

ಭಾರತ ಕೆನಡಾ ರಾಜತಾಂತ್ರಿಕ ಸಂಬಂಧದಲ್ಲಿ ಕಳೆದ ವರ್ಷದಿಂದ ತಲೆದೋರಿರುವ ಉದ್ವಿಗ್ನತೆ, ಈ ವಾರವಂತೂ ಇನ್ನಷ್ಟು ಗಂಭೀರವಾಗಿದೆ. ಅದೀಗ ತಾರಕಕ್ಕೆ ತಲುಪಿದೆ.

ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತ ಸರಕಾರದ ಕೈವಾಡವಿದೆ, ಕೆನಡಾ ನೆಲದಲ್ಲಿ ಲಾರೆನ್ಸ್ ಬಿಷ್ಣೋಯಿ ಥರದ ಗ್ಯಾಂಗ್‌ಸ್ಟರ್‌ಗಳ ನೆರವಿನಿಂದ ಹತ್ಯೆ, ಹಿಂಸಾಚಾರ ನಡೆಯುತ್ತಿದೆ, ಕೆನಡಾದ ಪ್ರಜಾತಂತ್ರದಲ್ಲಿ ಹಸ್ತಕ್ಷೇಪ ಆಗುತ್ತಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದಾರೆ.

ಕೆನಡಾದ ಆರೋಪಗಳನ್ನು ಮೋದಿ ಸರಕಾರ ನಿರಾಕರಿಸಿದೆ. ಅದು ಮಾಡಿರುವ ಆರೋಪಗಳ ಬಗ್ಗೆ ಪುರಾವೆಗಳನ್ನು ಕೇಳಿದೆ. ಮಾತ್ರವಲ್ಲ, ಕೆನಡಾದ 6 ಮಂದಿ ರಾಜತಾಂತ್ರಿಕ ಅಧಿಕಾರಿಗಳಿಗೆ ದೇಶ ತೊರೆಯುವಂತೆ ಸೂಚಿಸಿದೆ.

ಭಾರತ ಸರಕಾರಕ್ಕೆ ಹಾನಿಕರವಾಗಬಲ್ಲ ಕೆಲವು ಸೂಕ್ಷ್ಮ ಮಾಹಿತಿಗಳನ್ನು ಪತ್ರಿಕೆಗಳ ಮೂಲಕ ಕೆನಡಾ ಬಹಿರಂಗಗೊಳಿಸಿದೆ. ಈ ಒಟ್ಟು ಪ್ರಕರಣದಲ್ಲಿ ಹಲವರ ಹೆಸರುಗಳ ಉಲ್ಲೇಖವಾಗಿದೆ.

ರಾಜತಾಂತ್ರಿಕರು, ರಾಷ್ಟ್ರೀಯ ಭದ್ರತಾ ಸಲಹೆಗಾರ, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಮತ್ತು ಗೃಹ ಸಚಿವ ಅಮಿತ್ ಶಾ ಹೆಸರು ಉಲ್ಲೇಖಿಸಲಾಗಿದೆ.

ಇದೊಂದು ಬಗೆಯಲ್ಲಿ ಭಾರತ ಕೆನಡಾ ನಡುವಿನ ರಾಜತಾಂತ್ರಿಕ ಪರಮಾಣು ಸಮರದಂತಿದೆ.

ಹೇಗೆ ಭಾರತ-ಕೆನಡಾ ಸಂಬಂಧ ಹಳಸುತ್ತ ಬಂತೆಂಬುದನ್ನು ನೋಡಬೇಕು.

ಅಕ್ಟೋಬರ್ 13 ಭಾರತದ ರಾಜತಾಂತ್ರಿಕರು ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯಕ್ಕೆ ಕೆನಡಾ ಅಧಿಕಾರಿಗಳು ಮಾಹಿತಿ ನೀಡಿದರು. ಅಕ್ಟೋಬರ್ 14 ಕೆನಡಾ ಸರಕಾರದ ವಿರುದ್ಧ ಭಾರತದ ವಿದೇಶಾಂಗ ಸಚಿವಾಲಯ ಕಟು ಹೇಳಿಕೆ ಬಿಡುಗಡೆ ಮಾಡಿತು. ಆನಂತರ ಕೆನಡಾ ಆರೋಪಗಳನ್ನು ಸ್ಪಷ್ಟ ನಿರಾಕರಣೆ ಮಾಡಿತು. ಕೆನಡಾ ಈವರೆಗೂ ಪ್ರಕರಣದಲ್ಲಿ ಪ್ರಬಲ ಪುರಾವೆಯನ್ನು ಒದಗಿಸಿಲ್ಲ ಎಂಬುದನ್ನು ಭಾರತ ಎತ್ತಿ ಹೇಳಿತ್ತು. ಟ್ರುಡೊ ಇದನ್ನೆಲ್ಲ ವೋಟ್ ಬ್ಯಾಂಕ್ ರಾಜಕಾರಣದ ಭಾಗವಾಗಿ ಮಾಡುತ್ತಿರುವುದಾಗಿ ಭಾರತ ಟೀಕಿಸಿತ್ತು.

ಭಾರತದ ರಾಜತಾಂತ್ರಿಕರ ಮೇಲೆ ಆರೋಪ ಹೊರಿಸುತ್ತಿದ್ದರೆ ಮತ್ತು ಭಾರತದ ವಿರುದ್ಧದ ತೀವ್ರವಾದಿಗಳು ಮತ್ತು ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಿದ್ದರೆ ಟ್ರುಡೊ ಸರಕಾರದ ವಿರುದ್ಧ ಭಾರತ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿತ್ತು.

ಕೆನಡಾ ಸುಮ್ಮನೇನೂ ಉಳಿಯಲಿಲ್ಲ.

ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಜಾಗತಿಕ ಮಾಧ್ಯಮಗಳೆದುರಿನ ಸುದ್ದಿಗೋಷ್ಠಿಯಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ ರಾಜತಾಂತ್ರಿಕರ ವಿವರ ಬಹಿರಂಗಪಡಿಸಿದರು. ಕೊಲೆ ಸಂಬಂಧ 8 ಮಂದಿಯನ್ನು ಬಂಧಿಸಿರುವ ವಿಚಾರವೂ ಬಂತು ಮತ್ತು ಬಂಧಿತರು ಭಾರತ ಸರಕಾರದೊಂದಿಗೆ ಸಂಬಂಧವಿರುವುದಾಗಿ ಹೇಳಿದರೆಂಬ ಗಂಭೀರ ಆರೋಪವನ್ನು ಕೂಡ ಕೆನಡಾ ಪೊಲೀಸರು ಮಾಡಿದ್ದರು.

ಇದರ ಬೆನ್ನಲ್ಲೇ ಟ್ರುಡೊ ಕೂಡ ಸುದ್ದಿಗೋಷ್ಠಿಯಲ್ಲಿ ಇದೇ ಆರೋಪಗಳನ್ನು ಪುನರುಚ್ಚರಿಸಿದರು. ಭಾರತದ ರಾಜತಾಂತ್ರಿಕರು ಸರಕಾರದ ಸಂಪರ್ಕ ಬಳಸಿ ಖಾಲಿಸ್ತಾನಿ ಪರ ವ್ಯಕ್ತಿಗಳ ಮಾಹಿತಿಗಳನ್ನು ಕಲೆಹಾಕುತ್ತಿರುವುದಾಗಿ ಕೆನಡಾ ಪೊಲೀಸರು ಹೇಳಿದ್ದರು.

ಆ ಮಾಹಿತಿ ಆಧರಿಸಿ ಅಂಥವರ ಅಪಹರಣ, ಬೆದರಿಸುವುದು ಇಲ್ಲವೇ ಹತ್ಯೆ ನಡೆಯುತ್ತದೆಂಬ ವಾದವನ್ನು ಕೆನಡಾ ಇಟ್ಟಿತು.

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಹೆಸರನ್ನು ಕೆನಡಾ ಪೊಲೀಸರು ನೇರವಾಗಿ ತೆಗೆದುಕೊಂಡಿದ್ದರು. ಹತ್ಯೆ ತನಿಖೆಯಲ್ಲಿ ಕೆನಡಾದೊಂದಿಗೆ ಭಾರತ ಸರಕಾರ ಸಹಕರಿಸದೇ ಇದ್ದರೆ ಜಿ 7 ರಾಷ್ಟ್ರಗಳು ಮತ್ತು ಜಿive eಥಿes ದೇಶಗಳ ಜೊತೆಗೆ ಸೇರಿ ಭಾರತದ ವಿರುದ್ಧ ಕ್ರಮ ತೆಗೆದೊಳ್ಳಬೇಕಾದೀತು ಎಂದು ಕೆನಡಾ ಎಚ್ಚರಿಸಿದೆ.

ಕೆನಡಾ ಸುಳ್ಳು ಹೇಳುತ್ತಿದೆಯೇ? ಭಾರತದೊಂದಿಗಿನ ಬಾಂಧವ್ಯ ಹಾಳುಗೆಡವಲು ಮನಸ್ಸು ಮಾಡುವ ಮಟ್ಟಿಗೆ ಟ್ರುಡೊಗೆ ತನ್ನ ದೇಶದೊಳಗಿನ ರಾಜಕೀಯ ಬಲು ಮುಖ್ಯವಾಗಿದೆಯೇ?

ಈ ಹಿಂದೆ, ಖಾಲಿಸ್ತಾನಿ ಪ್ರತ್ಯೇಕತಾವಾದಿ ಪನ್ನೂನ್ ಹತ್ಯೆಗೆ ತನ್ನ ನೆಲದಲ್ಲಿ ಭಾರತೀಯ ಅಧಿಕಾರಿ ಸಂಚುರೂಪಿಸಿದ್ದರ ಬಗ್ಗೆ ಅಮೆರಿಕ ಆರೋಪಿಸಿತ್ತು. ‘ವಾಶಿಂಗ್ಟನ್ ಪೋಸ್ಟ್’ನಲ್ಲಿ ಆ ಅಧಿಕಾರಿಯ ಹೆಸರನ್ನು ವಿಕ್ರಮ್ ಯಾದವ್ ಎಂದು ಉಲ್ಲೇಖಿಸಲಾಗಿತ್ತು. ಆ ಅಧಿಕಾರಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆದಿದೆ ಎಂದು ಭಾರತ ಅಮೆರಿಕಕ್ಕೆ ಹೇಳಿದೆ.

ಅಮೆರಿಕನ್ ನಾಗರಿಕನ ಹತ್ಯೆಗೆ ಭಾರತೀಯ ಏಜೆಂಟ್ ಸಂಚು ರೂಪಿಸಿದ್ದ ಎಂಬ ಸಂಗತಿಯನ್ನು ರಾಜತಾಂತ್ರಿಕರ ಉಚ್ಚಾಟನೆ ವೇಳೆ ಭಾರತ ಸರಕಾರ ಒಪ್ಪಿಕೊಂಡಿತ್ತು.

ಅಮೆರಿಕ ಈ ವಿಚಾರವಾಗಿ ಮಾಹಿತಿಗಳನ್ನು ತಿಂಗಳುಗಳಿಂದ ಗುಪ್ತವಾಗಿ ಹಂಚಿಕೊಂಡಿತ್ತು. ಆದರೆ ಕೆನಡಾ ಆಕ್ರಮಣಕಾರಿ ನಡೆಯನ್ನು ತೋರಿಸಿತ್ತು. ಟ್ರುಡೊ ಮೊದಲು ಈ ಮಾಹಿತಿಯನ್ನು ಸಂಸತ್ತಿನಲ್ಲಿ ಸ್ಫೋಟಿಸಿದ್ದರು. ಪುರಾವೆ ಇರುವುದಾಗಿ ಹೇಳಿದ್ದರು.

ಭಾರತದ ವಾಂಟೆಡ್ ಪಟ್ಟಿಯಲ್ಲಿದ್ದ ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್‌ನನ್ನು ಕೆನಡಾ ನೆಲದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಘಟನೆ ನಡೆದ 3 ತಿಂಗಳ ಬಳಿಕ ಈ ಬಗ್ಗೆ ಟ್ರುಡೊ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು.

ಆಗಲೂ ಆರೋಪಗಳನ್ನು ಭಾರತ ಸರಕಾರ ನಿರಾಕರಿಸಿತ್ತು. ಅದನ್ನು ಸಂಪೂರ್ಣ ಅಸಂಬದ್ಧ ಎಂದಿತ್ತು.

ಟ್ರುಡೊ ಹೇಳಿಕೆಯ ಎರಡೇ ದಿನಗಳ ನಂತರ ಸುಖ್ದೂಲ್ ಸಿಂಗ್ ಎಂಬ ಮತ್ತೊಬ್ಬ ಖಾಲಿಸ್ತಾನಿ ಪ್ರತ್ಯೇಕತಾವಾದಿಯನ್ನು ವಿನ್ನಿಪೆಗ್‌ನಲ್ಲಿ ಕೊಲ್ಲಲಾಗಿತ್ತು.

ಈಗ, ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ ನಿಗೂಢ ಹತ್ಯೆ ಪ್ರಕರಣದಲ್ಲಿ ಅಮಿತ್ ಶಾ ಕೈವಾಡ ಇದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಕೆನಡಾ ಅಧಿಕಾರಿಗಳ ಆರೋಪಗಳನ್ನು ಉಲ್ಲೇಖಿಸಿ ಮಾಡಿರುವ ವರದಿಯಲ್ಲಿ ‘ವಾಶಿಂಗ್ಟನ್ ಪೋಸ್ಟ್’, ಅಮಿತ್ ಶಾ ಕೈವಾಡ ಈ ಪ್ರಕರಣದಲ್ಲಿ ಇದೆಯೆಂಬುದನ್ನು ಹೇಳಿದೆ.ಇದು ಎಷ್ಟು ನಿಜ ಎಂಬುದು ತಿಳಿಯದ ಸಂಗತಿ. ಯಾಕೆಂದರೆ ಕೆನಡಾ ಈ ಮಾಹಿತಿ ಹಂಚಿಕೊಂಡಿರುವುದು ವಾಶಿಂಗ್ಟನ್ ಪೋಸ್ಟ್ ಜೊತೆಗೆ.

ಕೆನಡಾ ಹೀಗೆ ಗಂಭೀರ ಆರೋಪಗಳನ್ನು ಮಾಡುತ್ತಿದ್ದರೆ, ಅದನ್ನು ಭಾರತ ಸ್ಪಷ್ಟವಾಗಿ ನಿರಾಕರಿಸುತ್ತಿದೆ. ಆದರೆ ಪ್ರಶ್ನೆಯಿರುವುದು, ಯಾರನ್ನು ನಂಬಬೇಕು ಎಂಬುದು.

ಕೆನಡಾದ ಉನ್ನತ ಭದ್ರತಾ ಮತ್ತು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಡುವೆ ಅಕ್ಟೋಬರ್ 12 ರಂದು ಸಿಂಗಾಪುರದಲ್ಲಿ ನಡೆದ ರಹಸ್ಯ ಸಭೆಯ ವೇಳೆ ಈ ಮಾಹಿತಿಯನ್ನು ಹಂಚಿಕೊಂಡಿರುವುದಾಗಿ ವರದಿಯಾಗಿದೆ.

ನಿಜ್ಜಾರ್ ಹತ್ಯೆಯಲ್ಲಿ ಭಾರತದ ಕೈವಾಡದ ಕುರಿತು ಕೆನಡಾ ಅಧಿಕಾರಿಗಳು ಹಸ್ತಾಂತರ ಮಾಡಿರುವ ದಾಖಲೆಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ‘ವಾಷಿಂಗ್ಟನ್ ಪೋಸ್ಟ್’, ಭಾರತ ಬಿಷ್ಣೋಯ್ ಗ್ಯಾಂಗ್ ಅನ್ನು ಬಳಸಿ ಕಾರ್ಯಾಚರಣೆ ನಡೆಸಿದ ಕುರಿತ ಮಾಹಿತಿ ಇದೆ ಎಂದು ಹೇಳಿದೆ. ಅದರ ಪ್ರಕಾರ, 6 ರಾಜತಾಂತ್ರಿಕರು, ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಹೆಸರನ್ನು ಉಲ್ಲೇಖಿಸಲಾಗಿದೆ.

ಈಗ ಕೆನಡಾ ಮತ್ತು ಭಾರತ ಎರಡೂ ದೇಶಗಳು ತಮ್ಮಲ್ಲಿನ ಪರಸ್ಪರರ ರಾಜತಾಂತ್ರಿಕರನ್ನು ಉಚ್ಚಾಟಿಸಿವೆ.

ಭಾರತದ ವಿರುದ್ಧ ಟ್ರುಡೊ ಆರೋಪ ಮಾಡುತ್ತಿರುವುದು ಕೆನಡಾದಲ್ಲಿನ ಸಿಖ್ಖರ ಬೆಂಬಲವನ್ನು ಚುನಾವಣೆಯಲ್ಲಿ ಗಟ್ಟಿಗೊಳಿಸುವುದಕ್ಕೆ ಎಂಬ ಮಾತುಗಳು ಕೇಳಿಬರುತ್ತಿವೆ.

ಯಾಕೆ ಈ ವಿಷಯವನ್ನು ಮತ್ತೆ ಮತ್ತೆ ಅದು ಎತ್ತುತ್ತಿದೆ ಎಂಬ ಪ್ರಶ್ನೆಯೂ ಇದೆ.

ಅಮಿತ್ ಶಾರಂತಹ ಕ್ಯಾಬಿನೆಟ್ ಮಂತ್ರಿಯೊಬ್ಬರು ಇಂಥ ಕಾರ್ಯಾಚರಣೆಯಲ್ಲಿ ಅದೂ ಸಾಗರದಾಚೆಗಿನ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ನಿವೃತ್ತ ಭಾರತೀಯ ರಾಜತಾಂತ್ರಿಕ ಅಧಿಕಾರಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕೆನಡಾದ ಅಧಿಕಾರಿಗಳು ಅರೋಪಿಸಿರುವಂಥ ಯಾವುದೇ ರೀತಿಯಲ್ಲಿ ಶಾ ತೊಡಗಿಸಿಕೊಂಡಿಲ್ಲ ಎಂದು ಗುಪ್ತಚರ ಸಂಸ್ಥೆಯ ಮಾಜಿ ಮುಖ್ಯಸ್ಥ ತಿಳಿಸಿರುವುದಾಗಿ ‘ದಿ ವೈರ್’ ವರದಿ ಮಾಡಿದೆ.

‘ವಾಶಿಂಗ್ಟನ್ ಪೋಸ್ಟ್’ನ ಈ ಹಿಂದಿನ ವರದಿಯಲ್ಲಿ ಅಮಿತ್ ಶಾ ಹೆಸರು ಇರಲಿಲ್ಲ. ಭಾರತದ ಹಿರಿಯ ಸಚಿವರು ಮತ್ತು ಖಂWದ ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಮಾತ್ರ ಹೇಳಲಾಗಿತ್ತು. ಆದರೆ ನಂತರ ಪರಿಷ್ಕರಿಸಿದ ವರದಿಯಲ್ಲಿ ಪತ್ರಿಕೆ ತನ್ನ ಮೂಲಗಳಿಂದ ಲಭ್ಯವಾದ ಹೆಚ್ಚು ವಿವರವಾದ ಮಾಹಿತಿಯ ಆಧಾರದ ಮೇಲೆ ಅಮಿತ್ ಶಾ ಹೆಸರನ್ನು ನೇರವಾಗಿ ಉಲ್ಲೇಖಿಸಿದೆ.

ಶಾ ವಿರುದ್ಧ ಇಂಥ ಕೃತ್ಯದ ಆರೋಪ ಬರುತ್ತಿರುವುದು ಇದೇ ಮೊದಲೇನೂ ಆಲ್ಲ. ದಶಕದ ಹಿಂದೆ ಗುಜರಾತ್ ಗೃಹ ಸಚಿವರಾಗಿದ್ದಾಗ ಸೊಹ್ರಾಬುದ್ದೀನ್, ಅವರ ಪತ್ನಿ ಕೌಸರ್ ಬಿ ಮತ್ತು ಸಹಚರ ತುಳಸಿರಾಮ್ ಪ್ರಜಾಪತಿಯನ್ನು ನಕಲಿ ಪೊಲೀಸ್ ಎನ್‌ಕೌಂಟರ್‌ಗಳ ಮೂಲಕ ಕೊಲ್ಲುವ ಸಂಚಿನಲ್ಲಿ ಭಾಗಿಯಾಗಿದ್ದಾಗಿ ಸಿಬಿಐ ಆರೋಪಿಸಿತ್ತು.ಆದರೆ ಮೋದಿ ಪ್ರಧಾನಿಯಾದ ಕೂಡಲೇ ಶಾ ಅವರನ್ನು ವಿಚಾರಣಾ ನ್ಯಾಯಾಲಯದಲ್ಲಿ ಖುಲಾಸೆ ಮಾಡಲಾಯಿತು ಮತ್ತು ಸಿಬಿಐ ಮೇಲ್ಮನವಿ ಸಲ್ಲಿಸಲು ಮುಂದಾಗಿರಲಿಲ್ಲ.

ಈಗ ನಿಜ್ಜಾರ್ ಹತ್ಯೆ ವಿಚಾರದಲ್ಲಿ ತನ್ನ ಆರೋಪ ಕುರಿತು ಕೆನಡಾ ಹಿಂದೆಂದಿಗಿಂತಲೂ ಹೆಚ್ಚು ಖಚಿತವಾಗಿರುವಂತೆ ಕಾಣುತ್ತಿದೆ.

ಪೊಲೀಸರ ಬಳಿಯಿರುವ ಸ್ಪಷ್ಟ ಮತ್ತು ಬಲವಾದ ಪುರಾವೆಗಳನ್ನು ಉಲ್ಲೇಖಸಿ ಕೆನಡಾ ಪಧಾನಿ ಜಸ್ಟಿನ್ ಟ್ರುಡೊ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಏಜೆಂಟ್‌ಗಳ ಪಾತ್ರವಿದೆ ಎಂದು ಆರೋಪಿಸಿದ್ಧಾರೆ.

2023ರ ಸೆಪ್ಟಂಬರ್‌ನಲ್ಲಿ ನಿಜ್ಜಾರ್ ಹತ್ಯೆಯಲ್ಲಿ ಭಾರತ ಭಾಗಿಯಾಗಿರುವ ಆರೋಪವನ್ನು ಮೊದಲ ಸಲ ಮಾಡಿದ್ದಾಗ ಟ್ರೂಡೊ ಮೊದಲು ಗುಪ್ತಚರ ಮಾಹಿತಿಯನ್ನಷ್ಟೇ ಉಲ್ಲೇಖಿಸಿದ್ದರು. ಅದಾದ ಬಳಿಕ ಕೆನಡಾ ಪೊಲೀಸರು ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

ನ್ಯೂಯಾರ್ಕ್ ಮೂಲದ ಖಾಲಿಸ್ತಾನಿ ವಕೀಲರನ್ನು ಗುರಿಯಾಗಿಸಿಕೊಂಡು ಭಾರತದ ಏಜಂಟರು ನಡೆಸಿದ ಹತ್ಯೆ ಸಂಚನ್ನು ಬಹಿರಂಗಪಡಿಸಿರುವುದಾಗಿ ಹೇಳಿದ್ದ ಅಮೆರಿಕ ಕೂಡ ಸಾಕ್ಷ್ಯ ಸಂಗ್ರಹದಲ್ಲಿ ಕೆನಡಾಕ್ಕೆ ಸಹಕರಿಸಿರುವ ಸಾಧ್ಯತೆಯಿದೆ.

ಇನ್ನು, ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿರುವುದರಿಂದ ವಲಸೆ, ಉದ್ಯೋಗ ಮತ್ತು ವಿದ್ಯಾರ್ಥಿ ವೀಸಾಗಳ ಮೇಲೆ ಹೇಗೆಲ್ಲ ಪರಿಣಾಮ ಬೀರಬಹುದು ಎಂಬುದು ಅನೇಕ ಭಾರತೀಯರ ಕಳವಳವಾಗಿದೆ.

ಈ ರಾಜತಾಂತ್ರಿಕ ಬಿಕ್ಕಟ್ಟು ವೀಸಾ ನೀತಿಗಳ ಮೇಲೆ ನೇರವಾಗಿ ಪ್ರಭಾವ ಬೀರುವ ಸಾಧ್ಯತೆಯಿಲ್ಲ ಎಂಬ ನಂಬಿಕೆಯನ್ನೂ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ಕೆನಡಾ ಈ ವಿಷಯವನ್ನು ರಾಜತಾಂತ್ರಿಕ ವೈಮನಸ್ಯದೊಂದಿಗೆ ಬೆರೆಸದೆ ಪ್ರತ್ಯೇಕವಾಗಿ ನಿಭಾಯಿಸಲಿರುವುದು ಸ್ಪಷ್ಟವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಿರುವ ವರದಿಗಳಿವೆ.

ನ್ಯಾಷನಲ್ ಫೌಂಡೇಶನ್ ಫಾರ್ ಅಮೆರಿಕನ್ ಪಾಲಿಸಿ ಈ ವರ್ಷದ ಆರಂಭದಲ್ಲಿ ಪ್ರಕಟಿಸಿದ ವರದಿಯಲ್ಲಿ 2013 ಮತ್ತು 2023ರ ನಡುವೆ ಕೆನಡಾಕ್ಕೆ ವಲಸೆ ಬಂದ ಭಾರತೀಯರ ಸಂಖ್ಯೆ 32,828ರಿಂದ 1,39,715ಕ್ಕೆ ಏರಿದೆ.

ಇನ್ನೊಂದೆಡೆ, ಕಳೆದ ಎರಡು ದಶಕಗಳಲ್ಲಿ ಕೆನಡಾದ ವಿಶ್ವವಿದ್ಯಾನಿಲಯಗಳಿಗೆ ದಾಖಲಾಗುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೂ ಹಲವು ಪಟ್ಟು ಹೆಚ್ಚಾಗಿದೆ. 2000ದಲ್ಲಿ 2,181 ಇದ್ದ ವಿದ್ಯಾರ್ಥಿಗಳ ಸಂಖ್ಯೆ 2021 ರಲ್ಲಿ 1,28,928ಕ್ಕೆ ಏರಿದೆ.

ವಲಸೆ ನೀತಿಗಳಲ್ಲಿ ಯಾವುದೇ ಅಧಿಕೃತ ಬದಲಾವಣೆಗಳಿಲ್ಲದಿ ದ್ದರೂ, ಭಾರತದಲ್ಲಿ ಕೆನಡಾದ ರಾಜತಾಂತ್ರಿಕರ ಸಂಖ್ಯೆ ಕಡಿಮೆಯಾಗಿದ್ದುರಿಂದ ವೀಸಾಗಳಿಗೆ ಅರ್ಜಿ ಸಲ್ಲಿಸುವ ಭಾರತೀಯರು ಈಗಾಗಲೇ ತೀರಾ ಕಾಯುವ ಸ್ಥಿತಿಯಿದೆ.

ಈಗಾಗಲೇ ಕೆನಡಾದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎನ್ನುತ್ತಾರೆ ಪರಿಣಿತರು. ಕೆನಡಾದ ವಿಶ್ವವಿದ್ಯಾನಿಲಯಗಳು ಬಿಕ್ಕಟ್ಟಿನ ಸಮಯದಲ್ಲೂ ಭಾರತೀಯರು ಸೇರಿದಂತೆ ಅಂತರ್‌ರಾಷ್ಟ್ರೀಯ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಲ್ಲುವ ವಿಚಾರದಲ್ಲಿ ಹೆಸರಾಗಿವೆ. ಆದರೆ, ವೀಸಾ ಪ್ರಕ್ರಿಯೆಯಲ್ಲಿನ ವಿಳಂಬಗಳ ಕಾರಣದಿಂದ ಹೊಸ ಅರ್ಜಿದಾರರು ಸಮಸ್ಯೆ ಎದುರಿಸಬೇಕಾಗಬಹುದು.

ಇನ್ನು ಅಲ್ಲಿ ಕೆಲಸದಲ್ಲಿರುವವರು ತಾರತಮ್ಯ ಎದುರಿಸಬೇಕಾಗಬಹುದೇ ಎಂಬ ಪ್ರಶ್ನೆ.

ತಜ್ಞರ ಪ್ರಕಾರ, ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳು ರಾಜಕೀಯ ವಿವಾದಗಳನ್ನು ಲೆಕ್ಕಿಸದೆ ತಮ್ಮ ಆದ್ಯತೆಗಳ ಕಡೆಗಷ್ಟೇ ಗಮನ ಕೊಡುತ್ತವೆ.ಕೆನಡಾದಲ್ಲಿ ವಿಶೇಷವಾಗಿ ದೊಡ್ಡ ಸಂಸ್ಥೆಗಳಲ್ಲಿ ವೃತ್ತಿಪರ ವಾತಾವರಣ ಉತ್ತಮ ವಿರುತ್ತದೆ. ಅಲ್ಲಿ ಅರ್ಹತೆಗೆ ಬೆಲೆಯೇ ಹೊರತು ರಾಷ್ಟ್ರೀಯತೆಯ ಪ್ರಶ್ನೆಯಲ್ಲ.

ಕೆನಡಾದಲ್ಲಿರುವ ಭಾರತೀಯರಿಗೆ, ಕೆಲಸದ ಪರವಾನಿಗೆಗಳನ್ನು ಹೊಂದಿರುವವರಿಗೆ ಅಥವಾ ಖಾಯಂ ರೆಸಿಡೆನ್ಸಿಗೆ ಅರ್ಜಿ ಸಲ್ಲಿಸುವ ವರಿಗೆ ಈ ರಾಜತಾಂತ್ರಿಕ ಬಿಕ್ಕಟ್ಟಿನಿಂದ ತೊಂದರೆ ಇರುವುದಿಲ್ಲ ಎನ್ನಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆಜಿತ್ ಕೆ.ಸಿ.

contributor

Similar News