ಕನ್ನಡ ಜಾಗೃತಿ ನವೆಂಬರ್‌ಗಷ್ಟೇ ಸೀಮಿತವೇ?
ನಮ್ಮೆಲ್ಲರ ಕನ್ನಡ ಪ್ರೇಮ ಬರೀ ನವೆಂಬರ್ ತಿಂಗಳಿನಲ್ಲಿ ಕುಣಿಯದೆ ವರ್ಷದ ಎಲ್ಲಾ ದಿನಗಳಲ್ಲೂ ಅರಳುವಂತಾಗಲಿ. ಏಕೀಕರಣದ ವೇಳೆ ಹುಯಿಲಗೋಳ ನಾರಾಯಣರಾಯರು ಹೇಳಿದ ಹಾಗೆ ನಿಜವಾದ ಅರ್ಥದಲ್ಲಿ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’.
ಪ್ರತೀ ವರ್ಷದಂತೆ ಈ ವರ್ಷವೂ ನವೆಂಬರ್ ನಮ್ಮ ಮುಂದಿದೆ. ನವೆಂಬರ್ ಬಂದರೆ ಸಾಕು, ಕನ್ನಡಿಗರಿಗೆ ಕನ್ನಡ ಪ್ರೇಮದ ಬಾಗಿಲು ತೆರೆದುಕೊಳ್ಳುತ್ತದೆ.
ಸ್ವಾತಂತ್ರ್ಯಕ್ಕೂ ಮೊದಲು ಭಾರತದಲ್ಲಿ ಒಟ್ಟಾರೆ 584 ದೇಶೀಯ ಸಂಸ್ಥಾನಗಳಿದ್ದವು. ಸ್ವಾತಂತ್ರ್ಯ ದೊರಕಿದ ಬಳಿಕ ಈ ಎಲ್ಲಾ ಸಂಸ್ಥಾನಗಳನ್ನು ಭಾರತ ಒಕ್ಕೂಟಕ್ಕೆ ಸೇರಿಸಲು ಆಗಿನ ಕೇಂದ್ರ ಸರಕಾರ ಪ್ರಯತ್ನಿಸಿದ್ದನ್ನು ನಾವೆಲ್ಲರೂ ಇತಿಹಾಸದಲ್ಲಿ ಓದಿದ್ದೇವೆ. ಸ್ವಾತಂತ್ರ್ಯ ಸಿಕ್ಕ ಬಳಿಕ ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾಬಾದ್ ಸಂಸ್ಥಾನವನ್ನು ಹೊರತುಪಡಿಸಿ ಮಿಕ್ಕುಳಿದ ಸಂಸ್ಥಾನಗಳನ್ನು ಅಂದಿನ ಗೃಹಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲರು ತುಂಬ ಶ್ರಮವಹಿಸಿ ಭಾರತ ಒಕ್ಕೂಟದೊಂದಿಗೆ ಒಟ್ಟುಗೂಡಿಸುವಲ್ಲಿ ಸಫಲರಾದರು. ಅದೇ ಸಮಯದಲ್ಲಿ ಪ್ರತ್ಯೇಕ ಆಂಧ್ರಪ್ರದೇಶ ರಾಜ್ಯವನ್ನು ರಚಿಸಬೇಕೆಂಬ ಕೂಗು ತೀವ್ರಗೊಂಡ ಪರಿಣಾಮವಾಗಿ ಡಿಸೆಂಬರ್ 1953 ರಲ್ಲಿ ಕೇಂದ್ರ ಸರಕಾರವು ನ್ಯಾ. ಫಝಲ್ ಅಲಿ ನೇತೃತ್ವದಲ್ಲಿ ಕೆ.ಎಂ. ಪಣಿಕ್ಕರ್ ಹಾಗೂ ಹೃದಯನಾಥ್ ಕುಂಜ್ರುಗಳು ಸದಸ್ಯರಾಗಿದ್ದ ಆಯೋಗವನ್ನು ರಚಿಸಿತು. ಸೆಪ್ಟ್ಟಂಬರ್ 1955ರಲ್ಲಿ ಆಯೋಗ ತನ್ನ ವರದಿಯನ್ನು ಸಲ್ಲಿಸಿತು. ರಾಜ್ಯಗಳ ರಚನೆಯಲ್ಲಿ ಭಾಷೆಗಳ ಪ್ರಾಮುಖ್ಯತೆಯನ್ನು ಆಯೋಗವು ಶಿಫಾರಸು ಮಾಡಿತು. ಆದರೆ ‘ಒಂದು ಭಾಷೆ ಒಂದು ರಾಜ್ಯ’ ಎಂಬ ಕಲ್ಪನೆಯನ್ನು ಆಯೋಗವು ತಿರಸ್ಕರಿಸಿತು. ಆಯೋಗದ ಶಿಫಾರಸಿನ ಮೇಲೆ ಕೇಂದ್ರ ಸರಕಾರವು ಅಂದಿನ ಮೈಸೂರು ರಾಜ್ಯ (ಕರ್ನಾಟಕ) ಸೇರಿದಂತೆ 14 ರಾಜ್ಯಗಳು, 6 ಕೇಂದ್ರಾಡಳಿತ ಪ್ರದೇಶಗಳನ್ನು ಭಾಷಾವಾರು ಪ್ರಾಂತಗಳಾಗಿ 1.11.1956ರಲ್ಲಿ ರಚಿಸಿತು.
ಭಾಷೆಯ ಆಧಾರದ ಮೇಲೆ ರಾಜ್ಯಗಳ ಮರುವಿಂಗಡಣೆ ನಡೆದ ಸಮಯದಲ್ಲಿ ಕನ್ನಡ ಮಾತನಾಡುವವರು ಹಲವು ಪ್ರಾಂತಗಳಲ್ಲಿ ಹರಿದು ಹಂಚಿಹೋಗಿದ್ದರು. ಮೈಸೂರು ಸಂಸ್ಥಾನ, ಮದ್ರಾಸ್ ಪ್ರಾಂತ, ಬಾಂಬೆ ಪ್ರಾಂತ, ಹೈದರಾಬಾದ್ ಪ್ರಾಂತ ಹಾಗೂ ಕೊಡಗು ಸಂಸ್ಥಾನದ ಪ್ರದೇಶಗಳನ್ನು ಒಟ್ಟುಗೂಡಿಸಿ 1956 ನವೆಂಬರ್ 1ರಂದು ವಿಶಾಲ ಮೈಸೂರು ರಾಜ್ಯ ಉದಯವಾಯಿತು. ಆ ಸಮಯದಲ್ಲಿ ಎಸ್. ನಿಜಲಿಂಗಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆದರೆ, ಮೈಸೂರು ರಾಜ್ಯ ಕರ್ನಾಟಕವೆಂಬ ಹೆಸರು ಪಡೆಯಲು 17 ವರ್ಷ ಕಾಯಬೇಕಾಯಿತು. ‘ಕರ್ನಾಟಕ’ ಹೆಸರಿಡುವ ವಿಷಯವು ಜುಲೈ 1972ರಲ್ಲಿ ರಾಜ್ಯ ಸಚಿವ ಸಂಪುಟದ ಒಪ್ಪಿಗೆ ದೊರೆತು ಆಗಸ್ಟ್‌ನಲ್ಲಿ ಸಂಸತ್ತಿನ ಅನುಮೋದನೆಗೆ ರವಾನೆಯಾಯಿತು. ಭಾರತ ಸಂವಿಧಾನದ ಎರಡನೆಯ ವಿಧಿಯಡಿ ಯಾವುದೇ ಪ್ರದೇಶವನ್ನು ಭಾರತ ಒಕ್ಕೂಟಕ್ಕೆ ಸೇರಿಸಿಕೊಳ್ಳುವ, ಹೊಸ ರಾಜ್ಯವನ್ನು ಸ್ಥಾಪಿಸುವ ಪರಮ ಅಧಿಕಾರ ಸಂಸತ್ತಿಗಿದೆ. ಮೂರನೆಯ ವಿಧಿಯಡಿ ರಾಜ್ಯದ ಹೆಸರನ್ನು ಬದಲಾಯಿಸುವ ಅಧಿಕಾರ ಸೇರಿದಂತೆ ಇತರ ಅಧಿಕಾರವೂ ಇದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 1972 ರಲ್ಲಿ ಸಂಸತ್ತಿನಲ್ಲಿ ಮಸೂದೆ ಮಂಡನೆಯಾಗಿ, ಒಪ್ಪಿಗೆ ದೊರೆತು, ರಾಷ್ಟ್ರಪತಿಗಳ ಅಂಕಿತವೂ ದೊರೆಯಿತು. ಕೊನೆಗೆ 1973 ನವೆಂಬರ್ 1ರಂದು ‘ಕರ್ನಾಟಕ’ ಉದಯವಾಯಿತು.
ಡಿ. ದೇವರಾಜ ಅರಸು ಅವರ ನೇತೃತ್ವದಲ್ಲಿ ‘ಕರ್ನಾಟಕ’ ಎಂದು ಮರುನಾಮಕರಣಗೊಂಡ ಮೈಸೂರು ರಾಜ್ಯ ಐವತ್ತು ವರ್ಷ ಪೂರೈಸಿ ಈಗ ಸುವರ್ಣ ಮಹೋತ್ಸವವನ್ನು ಸಂಭ್ರಮಿಸುತ್ತಿದೆ. ಈ ಸಂಭ್ರಮವನ್ನು ಅದ್ದೂರಿಯಾಗಿ ಅರ್ಥಪೂರ್ಣವಾಗಿ ಆಚರಿಸಲು ಕರ್ನಾಟಕ ಸರಕಾರ ನಿರ್ಧರಿಸಿದ್ದು, ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಡೆಸಲು ಈಗಾಗಲೇ ರೂಪುರೇಷೆಗಳನ್ನು ಸಿದ್ಧಪಡಿಸಿದೆ.
ಆದರೆ, ಅನ್ಯಭಾಷಿಕರ ಪ್ರಭಾವ, ಕನ್ನಡಿಗರ ನಿರ್ಲಕ್ಷ್ಯ, ಇಂಗ್ಲಿಷ್ ಮೇಲಿನ ವ್ಯಾಮೋಹ, ಮಾಹಿತಿ ತಂತ್ರಜ್ಞಾನದ ಆಗಮನ, ಇಚ್ಛಾಶಕ್ತಿಯ ಕೊರತೆಗಳಿಂದಾಗಿ ಇಂದು ಕರ್ನಾಟಕ, ಕನ್ನಡ, ಕನ್ನಡಿಗರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದಾರೆ.
ನಮ್ಮ ದೇಶದ ಮಾಹಿತಿ ತಂತ್ರಜ್ಞಾನದ ಪ್ರಮುಖ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಇದರ ಪರಿಣಾಮವಾಗಿ ನಗರ ಅತಿ ವೇಗವಾಗಿ ಬೆಳೆಯುತ್ತಿದೆ. ದೇಶದ ಯಾವುದೇ ಭಾಗದಿಂದ ಜನರು ಬದುಕು ಕಟ್ಟಿಕೊಳ್ಳಲು ಇಲ್ಲಿಗೆ ಬಂದರೆ, ಬೆಂಗಳೂರು ಅವರೆಲ್ಲರಿಗೂ ನೆಲೆ ನೀಡುತ್ತಿದೆ. ಆದರೆ, ಅದೇ ಜನರು ಬದುಕು ಕೊಟ್ಟ ನೆಲ ಹಾಗೂ ಭಾಷೆಯನ್ನು ನಿರ್ಲಕ್ಷಿಸುತ್ತಿದ್ದಾರೆ. ಹೊರಗಿನಿಂದ ಬಂದ ಜನರು ಸ್ಥಳೀಯರೊಂದಿಗೆ ಸಾಧ್ಯವಾದಷ್ಟು ಈ ನೆಲದ ಭಾಷೆಯಲ್ಲಿ ವ್ಯವಹರಿಸಬೇಕು, ಭಾಷೆಯನ್ನು ಕಲಿಯಲು ಪ್ರಯತ್ನಿಸಬೇಕು. ಉದಾಹರಣೆಗೆ, ನೆರೆಯ ತಮಿಳುನಾಡಿಗೋ ಅಥವಾ ಕೇರಳಕ್ಕೋ ಹೋದರೆ ನಾವು ಸ್ಥಳೀಯ ಭಾಷೆಯಲ್ಲೇ ಮಾತನಾಡಬೇಕು. ಆದರೆ ನಾವು ನಮ್ಮ ನೆಲದಲ್ಲೇ ಹೊರಗಿನವರೊಂದಿಗೆ ಅವರ ಭಾಷೆಯಲ್ಲಿ ಸಂವಹನ ನಡೆಸಬೇಕೆನ್ನುವುದು ಯಾವ ನ್ಯಾಯ! ಅದಕ್ಕೇ ಹೇಳುವುದು, ಕನ್ನಡಿಗರು ತುಂಬಾ ಉದಾರಿಗಳು ಎಂದು. ಹೀಗೆ ಮಾಡಿದರೆ ಕನ್ನಡ ಉಳಿಯುವುದಾದರೂ ಹೇಗೆ? ಬೆಂಗಳೂರು ಸೇರಿದಂತೆ ನಾನಾ ಕಡೆಗಳಲ್ಲಿ ಅಂಗಡಿ-ಮುಂಗಟ್ಟುಗಳ ನಾಮಫಲಕ ಕನ್ನಡದಲ್ಲಿ ಇರುವುದಿಲ್ಲ, ಕನ್ನಡದಲ್ಲಿ ವ್ಯವಹಾರಗಳಿಲ್ಲ, ಕನ್ನಡವನ್ನು ನಾವೇ ಮಾತನಾಡುವುದಿಲ್ಲ. ಈ ವಿಚಾರದಲ್ಲಿ ಹೊರಗಿನವರ ಹಾಗೂ ನಮ್ಮವರ ಧೋರಣೆ ಬದಲಾಗಬೇಕು.
ಒಕ್ಕೂಟದ ದೇಶವಾದ ಭಾರತದಲ್ಲಿ ಭಾಷಾವಾರು ಆಧಾರದ ಮೇಲೆ ರಾಜ್ಯಗಳು ರಚಿತವಾಗಿವೆ. 1956ರಲ್ಲಿ ರಾಜ್ಯಗಳ ಪುನರ್‌ವಿಂಗಡಣೆ ಸಮಯದಲ್ಲಿ ಮರಾಠಿ ಭಾಷೆ ಮಾತನಾಡುವ ಹಲವು ಪ್ರದೇಶಗಳು ಅಂದಿನ ಮೈಸೂರು ರಾಜ್ಯಕ್ಕೆ ಸೇರ್ಪಡೆಯಾದವು. ಅಂದಿನಿಂದ ಇಂದಿನವರೆಗೂ ಬೆಳಗಾವಿ ಗಡಿ ವಿಷಯವಾಗಿ ಮಹಾರಾಷ್ಟ್ರದೊಂದಿಗೆ ಕರ್ನಾಟಕ ಸಮಸ್ಯೆಯನ್ನು ಎದುರಿಸುತ್ತಲೇ ಬಂದಿದೆ. ಈ ಸಮಸ್ಯೆ ಒಮ್ಮೊಮ್ಮೆ ತೀವ್ರ ಸ್ವರೂಪ ಪಡೆದು ಅನಾಹುತಗಳಾಗುವುದನ್ನೂ ಓದಿದ್ದೇವೆ. ಈ ಸಮಸ್ಯೆ ಆದಷ್ಟು ಬೇಗ ಬಗೆಹರಿಯಬೇಕು, ಉಭಯ ರಾಜ್ಯಗಳ ಜನಪ್ರತಿನಿಧಿಗಳು ಕುಳಿತು ಸಮಸ್ಯೆಯನ್ನು ಬಗೆಹರಿಸುವ ಇಚ್ಛಾಶಕ್ತಿ ತೋರಬೇಕು.
ಕನ್ನಡಿಗರು ಶತಮಾನಗಳಿಂದಲೂ ಕಾವೇರಿ ಸಮಸ್ಯೆಯನ್ನು ಎದುರಿಸುತ್ತಲೇ ಬಂದಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡಿನೊಂದಿಗಿನ ಸಮಸ್ಯೆ ಇಂದಿಗೂ ಬಗೆಹರಿದಿಲ್ಲ. ಪ್ರತೀ ವರ್ಷವೂ ವಾಡಿಕೆಯಷ್ಟು ಮಳೆಯಾದರೆ ತಮಿಳುನಾಡಿನ ಪಾಲು ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಿಂದ ಸಹಜವಾಗಿ ಹರಿದುಹೋಗುತ್ತದೆ. ಆದರೆ, ಒಂದೊಮ್ಮೆ ಬರ ಉಂಟಾದ ವರ್ಷಗಳಲ್ಲಿ ಕರ್ನಾಟಕ-ತಮಿಳುನಾಡಿನ ನೀರಿಗಾಗಿ ಜಗಳ ಭಾರತ-ಪಾಕಿಸ್ತಾನದ ದ್ವೇಷದಂತೆ ಭುಗಿಲೇಳುತ್ತದೆ. ಆದರೆ ಪ್ರತೀ ಬಾರಿಯೂ ಈ ಜಲಯುದ್ಧದಲ್ಲಿ ಕರ್ನಾಟಕಕ್ಕೆ ಹಿನ್ನಡೆಯೇ! ಇತ್ತೀಚೆಗೆ ಕಾವೇರಿ ವಿಷಯವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುವ ಕಾನೂನು ತಜ್ಞರಿಗೆ ಕರ್ನಾಟಕ ಸರಕಾರ ನೂರು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚ ಮಾಡಿದೆ ಎಂಬ ವರದಿಯನ್ನು ಗಮನಿಸಿದ್ದೇವೆ. ಹೀಗಿದ್ದರೂ ಕಾವೇರಿಯ ವಿಷಯದಲ್ಲಿ ಕರ್ನಾಟಕ ಏಕೆ ಹಿನ್ನಡೆ ಅನುಭವಿಸುತ್ತಲೇ ಬರುತ್ತಿದೆ? ಈ ವಿಚಾರದಲ್ಲಿ ಪಕ್ಷಭೇದ ಮರೆತು ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಸಮಸ್ಯೆಯನ್ನು ಬಗೆಹರಿಸಲು ಇಚ್ಛಾಶಕ್ತಿ ತೋರಬೇಕು.
ಕನ್ನಡ ಭಾಷೆ, ಲಿಪಿಗಳಿಗೆ ಎರಡು ಸಾವಿರ ವರ್ಷಕ್ಕೂ ಮೀರಿದ ಭವ್ಯ ಇತಿಹಾಸವಿದೆ. ‘‘ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್’’ ಎಂದು ರಾಷ್ಟ್ರಕೂಟರ ಕಾಲದ ಕವಿ ಶ್ರೀವಿಜಯನು ರಚಿಸಿರುವ ಕನ್ನಡದಲ್ಲಿ ಉಪಲಬ್ಧವಾಗಿರುವ ಮೊಟ್ಟಮೊದಲ ಗ್ರಂಥ ‘ಕವಿರಾಜಮಾರ್ಗ’ದಲ್ಲಿ ಕನ್ನಡನಾಡನ್ನು ಮನೋಜ್ಞವಾಗಿ ವರ್ಣಿಸಿದ್ದಾನೆ. ಮಾಹಿತಿ ತಂತ್ರಜ್ಞಾನದ ಆಗಮನದಿಂದ ಕನ್ನಡದ ಬಗೆಗಿನ ದಿವ್ಯ ನಿರ್ಲಕ್ಷ್ಯ, ಇಂಗ್ಲಿಷ್ ಬಗೆಗಿನ ಅಂಧ ವ್ಯಾಮೋಹಗಳಿಂದ ಕನ್ನಡ ಭಾಷೆಗೆ ಅಪಾಯ ಎದುರಾಗಿದೆ. ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತಿದೆ. ಕನ್ನಡ ಮಾತನಾಡಿದರೆ ಎಲ್ಲಿ ಅವಮಾನ, ಮುಜುಗರವಾಗುತ್ತದೋ ಎನ್ನುವ ಮನಃಸ್ಥಿತಿಯಲ್ಲಿ ಜನರಿದ್ದಾರೆ. ಕನ್ನಡ ಮಾತನಾಡುವಾಗಲೂ ಅತಿಯಾದ ಇಂಗ್ಲಿಷ್ ಬಳಕೆಯಿಂದ ಭಾಷಾಮಾಲಿನ್ಯ ಉಂಟಾಗುತ್ತಿದೆ. ಭಾಷೆಯ ಮೂಲ ಸೊಗಡೇ ಬದಲಾಗುತ್ತಿದೆ. ಕಾರಣ ಒಂದೇ, ಕನ್ನಡ ತಾನೇ ಎಂಬ ನಿರ್ಲಕ್ಷ್ಯ ಮತ್ತು ಭಾಷಾಭಿಮಾನದ ಕೊರತೆ. ನಮ್ಮ ಸ್ನೇಹಿತರೊಂದಿಗೆ ಮಾತನಾಡುವಾಗಲೂ ‘‘ಏನ್ ಊಟ ಮಾಡ್ದೆ’’ ಎಂದು ಕೇಳಿದರೆ, ‘‘ರೈಸ್ ತಿಂದೆ, ಕರ್ಡ್ ರೈಸ್ ತಿಂದೆ, ಫ್ರೂಟ್ಸ್ ತಿಂತಾಯಿದೀನಿ’’ ಎಂಬ ಉತ್ತರಗಳು ಸಿಗುತ್ತವೆ. ನಮ್ಮ ಧೋರಣೆ ಹೀಗೆಯೇ ಮುಂದುವರಿದರೆ, ಮುಂದೊಂದು ದಿನ ಕನ್ನಡ ಅವನತಿಗೊಳ್ಳುವುದರಲ್ಲಿ ಯಾವುದೇ ಅನುಮಾನ ಬೇಡ.
ಹಿಂದೆ ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿತ್ತು. ಅಲ್ಲಿ ವ್ಯಾಸಂಗ ಮಾಡಿ ಉತ್ತಮ ಅಂಕ ಗಳಿಸಿ, ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೇರಿದವರು ಹಲವಾರು ಜನರಿದ್ದಾರೆ. ಆದರೆ, ಕಾಲ ಬದಲಾಗುತ್ತಾ ಬಂದಂತೆ ಇಂದು ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಲು ಮಕ್ಕಳು ಮತ್ತು ಅವರ ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಗಳ ನೆಪವೊಡ್ಡಿ ದುಬಾರಿ ಶುಲ್ಕ ತೆತ್ತು ಪೋಷಕರು ಮಕ್ಕಳನ್ನು ಖಾಸಗಿ ಇಂಗ್ಲಿಷ್ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಈ ಬೆಳವಣಿಗೆಯಲ್ಲಿ ಸರಕಾರದ ಜಾಣಕುರುಡೂ ಇದೆ. ಸರಕಾರಿ ಶಾಲೆಗಳಿಗೆ ಸರಿಯಾದ ಅನುದಾನ, ಮೂಲಭೂತ ಸೌಲಭ್ಯ, ಗುಣಮಟ್ಟದ ಶಿಕ್ಷಕರು ದೊರಕದಿರುವ ಕಾರಣ, ಸರಕಾರದ ಅಸೀಮ ನಿರ್ಲಕ್ಷ್ಯದಿಂದ ಗ್ರಾಮೀಣ ಮಕ್ಕಳು ಸರಿಯಾಗಿ ಶಿಕ್ಷಣ ಸಿಗದೆ ವಂಚಿತರಾಗುತ್ತಿದ್ದಾರೆ. ಪ್ರಾಥಮಿಕ ಹಂತದವರೆಗೆ ದೇಶದ ಎಲ್ಲಾ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ 2002ರಲ್ಲಿ 86ನೇ ಸಂವಿಧಾನ ತಿದ್ದುಪಡಿಯ ಮೂಲಕ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲಾಯಿತು. ಇಂದಿಗೂ ಎಷ್ಟೋ ಜನ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕನಸಿನ ಮಾತೇ ಆಗಿದೆ. ಈ ಸಮಸ್ಯೆ ಬಗೆಹರಿಯಬೇಕು.
ಇದಕ್ಕೇನು ಪರಿಹಾರ:
1. ಶಿಕ್ಷಣದ ಭಾಷೆಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನ್ಯಾಯಾಲಯ ಜನರಿಗೆ ನೀಡಿದೆ. ಈ ಹಂತದಲ್ಲಿ ಪೋಷಕರ ಪಾತ್ರ ಬಹು ಮುಖ್ಯವಾದದ್ದು. ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರೋತ್ಸಾಹಿಸಬೇಕು. ಕನ್ನಡ ನಮ್ಮ ಮಾತೃಭಾಷೆ, ತಾಯಿ ಬೇರು ಬಿಟ್ಟು ಬೇರೆ ಮರವನ್ನು ಅಪ್ಪಿಕೊಳ್ಳಲಾಗುತ್ತದೆಯೇ..?
2. ಶಿಕ್ಷಣದಲ್ಲಿ ಕಲಿಕೆಯ ಭಾಷೆಯನ್ನಾಗಿ ಕನ್ನಡವನ್ನು ಉಳಿಸಿಕೊಂಡು ಹೋಗುವ ಕೆಲಸ ರಾಜ್ಯ ಸರಕಾರದಿಂದ ತುರ್ತಾಗಿ ಆಗಬೇಕು.
3. ಕನ್ನಡಿಗರಾದ ನಾವು, ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ, ಬದುಕಿನ ಎಲ್ಲಾ ಹಂತಗಳಲ್ಲೂ ಕನ್ನಡವನ್ನು ಬಳಸಬೇಕು. ಅನಗತ್ಯವಾಗಿ ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದ ನಾವು ಮೂರ್ಖರಂತೆ ಇಂಗ್ಲಿಷ್‌ನಲ್ಲಿ ಸಂವಹನ ನಡೆಸುತ್ತೇವೆ. ಎಷ್ಟೋ ಮನೆಗಳಲ್ಲಿ ಪೋಷಕರು ನಮ್ಮ ಮಕ್ಕಳೂ ಇಂಗ್ಲಿಷನ್ನು ಚೆನ್ನಾಗಿ ಕಲಿಯಲಿ, ಮಾತನಾಡಲಿ ಎಂಬ ಉದ್ದೇಶದಿಂದ ಮಕ್ಕಳೊಂದಿಗೆ ಇಂಗ್ಲಿಷಿನಲ್ಲೇ ಮಾತನಾಡುತ್ತಾರೆ. ಈ ಧೋರಣೆ ತಪ್ಪು. ಇತರ ಭಾಷೆಯವರನ್ನು ನೋಡಿಯಾದರೂ ನಮ್ಮನ್ನು ನಾವು ತಿದ್ದಿಕೊಳ್ಳಬೇಕು.
4. ಇಂದು ಮೊಬೈಲ್ ಫೋನ್‌ಗಳ ಹಾವಳಿಯ ಪರಿಣಾಮವಾಗಿ ಓದುವ ಅಭ್ಯಾಸವನ್ನು ಮರೆತಿದ್ದೇವೆ. ಓದುವುದನ್ನು ಮರೆತರೆ ಭಾಷೆ, ಪದಗಳ ಮೇಲೆ ನಮ್ಮ ಹಿಡಿತವೂ ತಪ್ಪುತ್ತದೆ. ಭಾಷೆಯ ಅವನತಿಗೆ ಇದೂ ಒಂದು ಕಾರಣ. ಆದ್ದರಿಂದ ಒಳ್ಳೆಯ ಓದುವ ಹವ್ಯಾಸದಿಂದಲೂ ಕನ್ನಡವನ್ನು ಉಳಿಸಬಹುದು. ಕನ್ನಡ ದಿನಪತ್ರಿಕೆಗಳು, ಗ್ರಂಥಗಳನ್ನು ನಾವು ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಆತ್ಮವಿಮರ್ಶೆ ಮಾಡಿಕೊಂಡು ನಾವು ಈ ಧೋರಣೆಯನ್ನು ಬದಲಾಯಿಸಬೇಕು.
5. ಇತ್ತೀಚೆಗೆ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಕಾರಿ ಶಾಲೆಗಳಿಗೆ ಉಚಿತ ನೀರು ಹಾಗೂ ವಿದ್ಯುತ್ ಸೌಕರ್ಯ ನೀಡುವ ಘೋಷಣೆ ಮಾಡಿದ್ದಾರೆ. ಇಂದು ರಾಜ್ಯದ ಎಷ್ಟೋ ಸರಕಾರಿ ಶಾಲೆಗಳಿಗೆ ಒಳ್ಳೆಯ ಕಟ್ಟಡಗಳಿಲ್ಲ, ಮೂಲಭೂತ ಸೌಕರ್ಯಗಳಿಲ್ಲ, ಎಲ್ಲಕ್ಕಿಂತ ಮಿಗಿಲಾಗಿ ನುರಿತ ಬೋಧಕರಿಲ್ಲ. ಗ್ರಾಮೀಣ ಭಾಗಗಳಲ್ಲಿ ಮಕ್ಕಳು ಶಾಲೆಯನ್ನು ತಲುಪುವುದಕ್ಕೇ ಹರಸಾಹಸ ಪಡಬೇಕು. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸರಕಾರ ಗಮನ ಹರಿಸಿದರೆ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ.
ನಮ್ಮೆಲ್ಲರ ಕನ್ನಡ ಪ್ರೇಮ ಬರೀ ನವೆಂಬರ್ ತಿಂಗಳಿನಲ್ಲಿ ಕುಣಿಯದೆ ವರ್ಷದ ಎಲ್ಲಾ ದಿನಗಳಲ್ಲೂ ಅರಳುವಂತಾಗಲಿ. ಏಕೀಕರಣದ ವೇಳೆ ಹುಯಿಲಗೋಳ ನಾರಾಯಣರಾಯರು ಹೇಳಿದ ಹಾಗೆ ನಿಜವಾದ ಅರ್ಥದಲ್ಲಿ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’. ಅನಂತ ಕಾಲ ಕಳೆದರೂ ಕನ್ನಡ ಇರಲಿ ಜೀವಂತ.