ಹಿಂದುಳಿದ ವರ್ಗಗಳ ಮೀಸಲಾತಿ ಮೂಲಭೂತ ಹಕ್ಕೇ?

ಮೀಸಲಾತಿ ಸರಕಾರಗಳ ವಿವೇಚನೆಗೆ ಬಿಟ್ಟದ್ದು ಎಂಬುದಕ್ಕೆ ಸಂವಿಧಾನವೇ ತಳಹದಿಯಾಗಿದ್ದರೂ ಯಾವುದೇ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿನಾ ಕಾರಣ ನಿಧಾನವಾದರೂ ಜಾರಿಗೆ ತಂದದ್ದು ಮಾತ್ರ ಸಾಮಾಜಿಕ ನ್ಯಾಯದ ಮೇಲೆ ಇಟ್ಟ ನಂಬಿಕೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಎಲ್ಲಾ ಜಾತಿಗಳಿಗೂ ಸರಕಾರದ ನೇಮಕ ಮತ್ತು ಹುದ್ದೆಗಳಿಗೆ ಸಾಕಷ್ಟು ಪ್ರಾತಿನಿಧ್ಯ ಖಾತ್ರಿ ಆಗದ ಹೊರತು ಮೀಸಲಾತಿಗೆ ಕೊನೆ ಎಂಬುದಿಲ್ಲ. ಸಂವಿಧಾನದ ಅಭಿಪ್ರಾಯದ ಪ್ರಕಾರ, ಮೀಸಲಾತಿ ಜಾತಿ ಅಸ್ತಿತ್ವ ಇರುವವರೆಗೆ ಎಂಬ ಕೆಲವರ ಸೋಗಿನ ಮಾತು ಮಾತ್ರ ಅಪ್ರಸ್ತುತ.

Update: 2024-03-12 06:31 GMT

ಮೀಸಲಾತಿ ವಿಷಯದಲ್ಲಿ ವಿರಳವಾಗಿ ಕೆಲವು ರಾಜಕಾರಣಿಗಳು ಬಿಡುಬೀಸಾಗಿ ಹೇಳುವ ಮಾತೆಂದರೆ- ಮೀಸಲಾತಿ ನಮ್ಮ ಸಾಂವಿಧಾನಿಕ ಹಕ್ಕು; ಅದು ದುರ್ಬಲ ವರ್ಗಗಳಿಗೆ ದಕ್ಕಲೇ ಬೇಕು ಮತ್ತು ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿರುವವರೆಗೂ ಮೀಸಲಾತಿ ಇರಬೇಕೆಂಬುದು. ಈ ವಿಷಯವನ್ನು ತಿಳಿದೋ ಅಥವಾ ತಿಳಿಯದೆಯೋ ಹೇಳುವ ರಾಜಕೀಯೇತರ ಕ್ರಿಯಾಶೀಲ ಹೋರಾಟಗಾರರೂ ಇದ್ದಾರೆ. ನಿಜ, ಇತರ ಹಿಂದುಳಿದ ವರ್ಗಗಳಿಗೆ ಸರಕಾರದ ಮತ್ತು ಸರಕಾರದ ಅಂಗಸಂಸ್ಥೆಗಳ ನೇಮಕಗಳಿಗೆ ಮತ್ತು ಹುದ್ದೆಗಳಿಗೆ ಮೀಸಲಾತಿ ನೀಡಲು ಉಪಬಂಧ ರಚಿಸಬಹುದು ಎಂಬುದು ಸಂವಿಧಾನದ ಆಶಯವೂ ಆಗಿದೆ. ನಮ್ಮ ಸಂವಿಧಾನವನ್ನು ನವೆಂಬರ್ 26, 1949ರಂದು ಭಾರತೀಯರಾದ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ ಶಾಸನವಾಗಿ ವಿಧಿಸಿಕೊಂಡಿದ್ದೇವೆ. ಅದು ಜನವರಿ 26,1950ರಲ್ಲಿ ಜಾರಿಗೆ ಬಂದಿತು.

1950ರಲ್ಲಿಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಆದೇಶಗಳನ್ನು ರಾಷ್ಟ್ರಪತಿಗಳು ಹೊರಡಿಸಿದ್ದರು. ಆದರೆ ಹಿಂದುಳಿದ ವರ್ಗಗಳಿಗೆ ಮಾತ್ರ ಅದು ಸುಮಾರು 43 ವರ್ಷಗಳ ನಂತರವಷ್ಟೇ ಕೇಂದ್ರದಲ್ಲಿ ಅನುಷ್ಠಾನಕ್ಕೆ ಬಂದದ್ದು. ಇದರ ವಿವರ ನೋಡೋಣ -

ಮೀಸಲಾತಿ ವಿಷಯದಲ್ಲಿ ಸಂವಿಧಾನ ಪಿತೃಗಳ ಅಂತರಾಳದಲ್ಲೇನಿತ್ತು?

ಕರಡು ಸಂವಿಧಾನದ ಅನುಚ್ಛೇದ 10 (3) ಹಿಂದುಳಿದ ವರ್ಗಗಳ ಮೀಸಲಾತಿ ಕುರಿತು ಸಂವಿಧಾನ ಸಭೆಯಲ್ಲಿ ಚರ್ಚೆಗೆ ಬರುತ್ತದೆ. ಭಾಗವಹಿಸಿದವರಲ್ಲಿ 32 ಮಂದಿ ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಸದಸ್ಯರಾದ ಲೋಕನಾಥ್ ಮಿಶ್ರ ಮತ್ತು ದಾಮೋದರ್ ಸ್ವರೂಪ್ ಸೇಠ್ ಅವರು ಧರ್ಮ ನಿರಪೇಕ್ಷ ಪ್ರಭುತ್ವದಲ್ಲಿ ಇದಕ್ಕೆ ಸ್ಥಾನವಿಲ್ಲ ಎಂದು ಹೇಳಿ ಯಾವುದೇ ಸಮುದಾಯವು ಹಿಂದುಳಿದಿದೆ ಎಂಬ ಕಾರಣಕ್ಕಾಗಿ ಯಾವುದೇ ವಿನಾಯತಿ ನೀಡಬಾರದೆನ್ನುತ್ತಾರೆ. ಅರಿ ಬಹದ್ದೂರ್ ಗುರುಂಗ್, ಆರ್ .ಎಂ. ನಲ್ವಾಡೆ, ಚಂದ್ರಿಕಾ ರಾಮ್, ಟಿ. ಚನ್ನಯ್ಯ ಮುಂತಾದವರು ಎಷ್ಟು ಕಾಲ ಅವರನ್ನು ವಂಚಿಸಲಾಗಿತ್ತೋ ಅಷ್ಟು ಕಾಲವೂ ಮೀಸಲಾತಿ ಮುಂದುವರಿಯಬೇಕೆನ್ನುತ್ತಾರೆ. ಅಂತಿಮವಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ‘ಹಿಂದುಳಿದ’ ಎಂಬ ಪದವನ್ನು ಉಪಯೋಗಿಸಬೇಕಾದ ಅಗತ್ಯ ಮತ್ತದರ ಪರಿಣಾಮವನ್ನು ಮನವರಿಕೆ ಮಾಡಿ ಕೊಡುವುದರ ಮೂಲಕ ಹಿಂದುಳಿದವರಿಗೆ ಮೀಸಲಾತಿಯ ಅವಶ್ಯಕತೆ ಕುರಿತು ಒತ್ತಿ ಹೇಳಿದರು. ಆದರೆ ಸಭೆಯಲ್ಲಿ ಹಿಂದುಳಿದವರು ಅಂದರೆ ಯಾರು? ಎಂಬುದರ ಕುರಿತು ಯಾವುದೇ ನಿಲುವಿಗೆ ಬರಲಿಲ್ಲ.

ಸಂವಿಧಾನ ರಚನಾ ಸಭೆಯ ಚರ್ಚೆಯಲ್ಲಿ ಕರಡು ಸಂವಿಧಾನದ ಅನುಚ್ಛೇದ 10 ಖಂಡ 3ರ ಕುರಿತು ದೀರ್ಘವಾಗಿ ವಿಭಿನ್ನ ದೃಷ್ಟಿಕೋನದಲ್ಲಿ ಚರ್ಚೆ ನಡೆದು ಕಡೆಯದಾಗಿ ಡಾ. ಬಾಬಾ ಸಾಹೇಬರ ಔಚಿತ್ಯ ಮತ್ತು ಪಾಂಡಿತ್ಯ ಪೂರ್ಣ ಮಾತುಗಳಿಂದ ಹಿಂದುಳಿದ ವರ್ಗಗಳಿಗೆ ಮೀಸಲಾತಿ ದಕ್ಕುವಂತಾಗುವುದು. ಪ್ರಸಕ್ತ ಅನುಚ್ಛೇದ 16 ಖಂಡ 4 ಎಂಬ ಹೊಸ ಸಂಖ್ಯೆ ಪಡೆದುಕೊಂಡಿದೆ.

ಅನುಚ್ಛೇದ 16 (4)ರ ರೀತ್ಯ ಯಾವುದೇ ಹಿಂದುಳಿದ ವರ್ಗದ ನಾಗರಿಕರು ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿಲ್ಲವೆಂದು ರಾಜ್ಯವು ಅಭಿಪ್ರಾಯ ಪಟ್ಟಲ್ಲಿ ಅಂಥವರಿಗಾಗಿ ನೇಮಕಗಳನ್ನು ಅಥವಾ ಹುದ್ದೆಗಳನ್ನು ಮೀಸಲಿಡುವುದಕ್ಕಾಗಿ ಯಾವುದೇ ಉಪಬಂಧವನ್ನು ತರಲು ಸಾಧ್ಯವಿದೆ. ಈ ವಿಷಯ ರಾಜ್ಯದ ಅಭಿಪ್ರಾಯಕ್ಕೆ ಬಿಟ್ಟದ್ದು ಅಷ್ಟೇ. ಅದನ್ನು ಕಡ್ಡಾಯ ಎಂದು ಹೇಳಲಾಗುವುದಿಲ್ಲ. ಈ ನಿಟ್ಟಿನಲ್ಲಿ ಕಾಲಕಾಲಕ್ಕೆ ನ್ಯಾಯಾಲಯಗಳು ಏನು ತೀರ್ಪಿತ್ತಿವೆ. ಗಮನವೀಯೋಣ:

ವಾಸ್ತವವಾಗಿ, ಮಂಡಲ್ ಪ್ರಕರಣದಲ್ಲಿ ಒಂಭತ್ತು ಮಂದಿ ಗೌರವಾನ್ವಿತ ನ್ಯಾಯಾಧೀಶರಲ್ಲಿ ನ್ಯಾ. ತೊಮ್ಮನ್ ಒಬ್ಬರೇ ಅನುಚ್ಛೇದ 16ರ ಖಂಡ 4 ಅನ್ನು ಒಂದು ಅಪವಾದ ಎಂದು ಪರಿಗಣಿಸಿದ್ದಾರೆ ಅಥವಾ ಸಮಾನತೆಯ ಸಮಾನ ಕಾನೂನು ನಿಯಮ, ಅನುಚ್ಛೇದ 16 (1) ರಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದಿದ್ದಾರೆ.

ವಿಷಯದ ಮೇಲಿನ ಅಭಿಪ್ರಾಯವೆಂದರೆ ಅನುಚ್ಛೇದ 16 (4) ಸಮಾನತೆಯ ನ್ಯಾಯದ ಭಾಗವಾಗಿದೆ. ಅನುಚ್ಛೇದ 16(1)ಮತ್ತು (4) ಒಂದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತವೆ. ಈಗ ನಿರ್ಣಾಯಕ ಪ್ರಶ್ನೆ ಉದ್ಭವಿಸುತ್ತದೆ: ಅನುಚ್ಛೇದ 16(4)ರ ಅಡಿಯಲ್ಲಿ ಕಲ್ಪಿಸಲಾದ ಹಕ್ಕನ್ನು ಇತರ ಹಿಂದುಳಿದ ವರ್ಗಗಳು ಮೂಲಭೂತ ಹಕ್ಕು ಎಂದು ಪರಿಗಣಿಸಬಹುದೇ?

ಬಹುಮತದ ಈ ಪ್ರಮುಖ ತೀರ್ಪು ಈ ವಿಷಯದಲ್ಲಿ ಮೌನವಾಗಿದೆ. ನ್ಯಾ.ಪಾಂಡಿಯನ್ ಅವರು ಸಹಮತದ ತೀರ್ಪಿನಲ್ಲಿ ಅನುಚ್ಛೇದ 16 (4) ಅನ್ನು ಅವಕಾಶ ಕಲ್ಪಿಸುವ ಮತ್ತು ಬಳಸಲೇ ಬೇಕೆಂಬ ನಿರ್ಬಂಧವಿಲ್ಲದ ವೈಶಿಷ್ಟ ಹೊಂದಿರುವಂತಹದು ಎಂದು ಹೇಳಿದ್ದಾರೆ. ನ್ಯಾ.ತೊಮ್ಮನ್ ಅವರು ತಮ್ಮ ಭಿನ್ನಾಭಿಪ್ರಾಯದ ಅಭಿಪ್ರಾಯದಲ್ಲಿ ರಾಜ್ಯ, ಅನುಚ್ಛೇದ 16(4) ಬಳಸಲೇಬೇಕು ಎಂಬ ನಿರ್ಬಂಧವಿಲ್ಲದ, ಆದರೆ, ವಿವೇಚನಾ ಅಧಿಕಾರವನ್ನು ನೀಡುವ ನಿಬಂಧನೆ ಆಗಿದೆ. ನ್ಯಾ. ಸಹಾಯಿ ಅವರು ಸಮಸ್ಯೆಯನ್ನು ಅತ್ಯಂತ ವ್ಯಾಪಕವಾಗಿ ವ್ಯವಹರಿಸಿದ್ದಾರೆ. ಅವರ ಪ್ರಕಾರ ಅನುಚ್ಛೇದ 16(4) ವೈಶಾಲ್ಯತೆ ಇಲ್ಲದ ಸೀಮಿತ ದೃಷ್ಟಿ ಕೋನವುಳ್ಳದ್ದಾಗಿದೆ.

ನ್ಯಾ. ಸಹಾಯಿ ಅವರು ಎರಡು ಅನುಚ್ಛೇದಗಳ ನಡುವಿನ ವ್ಯತ್ಯಾಸಗಳನ್ನು ವಿವರಿಸಿದ್ದಾರೆ:

ಒಂದು ವಸ್ತುನಿಷ್ಠ ಸಮಾನತೆಯಾದರೆ ಮತ್ತೊಂದು ರಕ್ಷಣಾತ್ಮಕ ಸಮಾನತೆಯಾಗಿದೆ. ಅನುಚ್ಛೇದ 16(1)ನಾಗರಿಕ ಮೂಲಭೂತ ಹಕ್ಕು, ಆದರೆ ಅನುಚ್ಛೇದ 16(4) ರಾಜ್ಯದ ಬಾಧ್ಯತೆಯಾಗಿದೆ. ಮೊದನೆಯದು ನ್ಯಾಯಾಲಯದಲ್ಲಿ ಜಾರಿಗೊಳಿಸುವಂಥದ್ದು, ಆದರೆ ಎರಡನೆಯದು ಸಾಂವಿಧಾನಿಕವಾಗಿ ಒತ್ತಾಯಿಸತಕ್ಕದ್ದಲ್ಲ, ಆದರೆ, ಬಳಸಲೇಬೇಕೆಂಬ ನಿರ್ಬಂಧವೂ ಇಲ್ಲ. ಒಂದು ಕಡ್ಡಾಯವಾಗಿ ಮತ್ತು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವುದು, ಆದರೆ ಮತ್ತೊಂದು ಹಿಂದುಳಿದ ನಾಗರಿಕರನ್ನು ಗುರುತಿಸುವುದು ಮತ್ತು ಸಾಕಷ್ಟು ಪ್ರಾತಿನಿಧ್ಯ ಇಲ್ಲದ ಅವರ ಗುರುತನ್ನು ವಿಶದಿಸುತ್ತದೆ.

ಅನುಚ್ಛೇದ 16 (4) ಮೀಸಲಾತಿಯ ಮೂಲಭೂತ ಹಕ್ಕನ್ನು ಖಾತರಿ ಪಡಿಸುತ್ತದೆಯೇ ಅಥವಾ ಕೇವಲ ಬಳಸಬೇಕೆಂಬ ನಿಬಂಧನೆ ಆಗಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದು ಬಳಸಬೇಕೆಂಬ ನಿಬಂಧನೆಯಾಗಿದೆ ಎಂಬುದು ಮುಖ್ಯ ದೃಷ್ಟಿಕೋನವಾಗಿದೆ. ಆದರೂ ಕಾನೂನಿನ ಮುನ್ನಡೆಯು ಇದಕ್ಕೆ ವಿರುದ್ಧವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಹಲವಾರು ಪ್ರಕರಣಗಳನ್ನು ಒಳಗೊಂಡಿದೆ.

ಎಂ.ಅರ್. ಬಾಲಾಜಿ v/s ಮೈಸೂರು ರಾಜ್ಯ ಪ್ರಕರಣದಲ್ಲಿ ನ್ಯಾಯಮೂರ್ತಿ ಗಜೇಂದ್ರಗಡಕರ್ ಅವರು ಅನುಚ್ಛೇದ 15 (4), ಅನುಚ್ಛೇದ 16(4)ರಂತೆ ಶಕ್ತಗೊಳಿಸುವ(enabling) ನಿಬಂಧನೆಯ ಸ್ವರೂಪದಲ್ಲಿದೆ ಮತ್ತು ರಾಜ್ಯದ ಮೇಲೆ ಯಾವುದೇ ಸಕಾರಾತ್ಮಕ ಹೊಣೆಗಾರಿಕೆಯನ್ನು ವಿಧಿಸಿಲ್ಲ. ಆದರೂ ಇದು ತೀರ್ಪಿನ ಅನುಪಾತ ನಿರ್ಧಾರವನ್ನು ರೂಪಿಸಲಿಲ್ಲ.

ಅಜಿತ್ ಸಿಂಗ್ v/s ಪಂಜಾಬ್ ರಾಜ್ಯ ಪ್ರಕರಣದಲ್ಲಿ ಅನುಚ್ಛೇದ 16(4) ಅಡಿಯಲ್ಲಿ ಅಧಿಕಾರ ನೀಡಿದೆ. ಮ್ಯಾಂಡಮಸ್ ರಿಟ್ ಸಲ್ಲಿಸಲು ಸಾಧ್ಯವಿದೆ ಮತ್ತು ಆ ಮೂಲಕ ಅನುಚ್ಛೇದ ಹೊಂದಿರುವ ಕರ್ತವ್ಯ ಮತ್ತು ಅಧಿಕಾರದ ವ್ಯಾಪ್ತಿಯಲ್ಲಿ ಮೀಸಲಾತಿ ಜಾರಿಗೊಳಿಸಲು ಸಾಧ್ಯ ಎಂದು ವಾದಿಸಲಾಯಿತು. ಆದರೆ ಸರ್ವೋಚ್ಚ ನ್ಯಾಯಾಲಯ ಈ ವಾದವನ್ನು ತಳ್ಳಿಹಾಕಿತು.

ಸರ್ವೋಚ್ಚ ನ್ಯಾಯಾಲಯದ ಈ ಎಲ್ಲಾ ಪ್ರಕರಣಗಳಲ್ಲಿ ತೆಗೆದುಕೊಂಡಿರುವ ನಿಲುವನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಕಂಡುಬರುವ ಅಂಶವೆಂದರೆ- ಸಂವಿಧಾನದ ಅನುಚ್ಛೇದ 16(4)ರ ರೀತ್ಯಾ ಇತರ ಹಿಂದುಳಿದ ವರ್ಗಗಳಿಗೆ ರಾಜ್ಯಗಳು ಕಡ್ಡಾಯವಾಗಿ ಮೀಸಲಾತಿಯನ್ನು ನಾಗರಿಕರಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಸರಕಾರ ಮತ್ತು ಸರಕಾರದ ಅಂಗ ಸಂಸ್ಥೆಗಳಿಗೆ ನೇಮಕವನ್ನು ಮತ್ತು ಹುದ್ದೆಗಳನ್ನು, ಸಾಕಷ್ಟು ಪ್ರಾತಿನಿಧ್ಯವಿಲ್ಲದಿದ್ದಲ್ಲಿ ಉಪಬಂಧವನ್ನು ತರಲೇಬೇಕು ಎಂಬ ಸಕಾರಾತ್ಮಕ ಅಧಿಕಾರ ರಾಜ್ಯಗಳಿಗೆ ಇರುವುದಿಲ್ಲ ಎಂಬುದು ಖಾತ್ರಿಯಾಯಿತು. ಅದೇನಿದ್ದರೂ, ನೇಮಕ ಮತ್ತು ಹುದ್ದೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ಇಲ್ಲದಿರುವುದು ಕಂಡುಬಂದಲ್ಲಿ ರಾಜ್ಯಗಳು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಬಹುದು ಅಥವಾ ನಿರಾಕರಿಸಬಹುದು. ಅದು ರಾಜ್ಯದ ವಿವೇಚನೆಗೆ ಬಿಟ್ಟ ವಿಚಾರ. ಆದ್ದರಿಂದ ಮೀಸಲಾತಿಯನ್ನು ಮೂಲಭೂತ ಹಕ್ಕೆಂದು ಪರಿಗಣಿಸಿ ಪ್ರಶ್ನಿಸಲು ಅವಕಾಶವಿಲ್ಲ. ಅದನ್ನು ಸಂವಿಧಾನ ಪರಿಗಣಿಸಿಲ್ಲ ಎಂಬುದನ್ನು ನಾವು ಗಮನಿಸಬೇಕು.

ಸಂವಿಧಾನ ಜಾರಿಗೊಂಡ ದಶಕಗಳ ನಂತರವಷ್ಟೇ ಇತರ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಸರಕಾರ ಮತ್ತು ಸರಕಾರದ ಅಂಗ ಸಂಸ್ಥೆಗಳ ಹುದ್ದೆಗಳಿಗೆ ಅನ್ವಯಿಸುವಂತೆ ಮೀಸಲಾತಿಯನ್ನು ರಾಜ್ಯ ಸರಕಾರಗಳು ಜಾರಿಗೆ ತಂದವು. ಕೇಂದ್ರ ಸರಕಾರ ಮಾತ್ರ 1993ರಲ್ಲಿ ಜಾರಿಗೆ ತಂದಿತು. ಮೀಸಲಾತಿ ಸರಕಾರಗಳ ವಿವೇಚನೆಗೆ ಬಿಟ್ಟದ್ದು ಎಂಬುದಕ್ಕೆ ಸಂವಿಧಾನವೇ ತಳಹದಿಯಾಗಿದ್ದರೂ ಯಾವುದೇ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿನಾ ಕಾರಣ ನಿಧಾನವಾದರೂ ಜಾರಿಗೆ ತಂದದ್ದು ಮಾತ್ರ ಸಾಮಾಜಿಕ ನ್ಯಾಯದ ಮೇಲೆ ಇಟ್ಟ ನಂಬಿಕೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಎಲ್ಲಾ ಜಾತಿಗಳಿಗೂ ಸರಕಾರದ ನೇಮಕ ಮತ್ತು ಹುದ್ದೆಗಳಿಗೆ ಸಾಕಷ್ಟು ಪ್ರಾತಿನಿಧ್ಯ ಖಾತ್ರಿ ಆಗದ ಹೊರತು ಮೀಸಲಾತಿಗೆ ಕೊನೆ ಎಂಬುದಿಲ್ಲ. ಸಂವಿಧಾನದ ಅಭಿಪ್ರಾಯದ ಪ್ರಕಾರ, ಮೀಸಲಾತಿ ಜಾತಿ ಅಸ್ತಿತ್ವ ಇರುವವರೆಗೆ ಎಂಬ ಕೆಲವರ ಸೋಗಿನ ಮಾತು ಮಾತ್ರ ಅಪ್ರಸ್ತುತ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎನ್. ಲಿಂಗಪ್ಪ

contributor

Similar News