ಜಮ್ಮು-ಕಾಶ್ಮೀರದ ಜನರಲ್ಲಿ ಈಗ ಭರವಸೆಯ ಕಿರಣ ಕಾಣುತ್ತಿದೆಯೇ?

ಮತ್ತೆ ಮತದಾನದ ಅವಕಾಶ ಸಿಕ್ಕಿರುವುದು ಜನರ ಪಾಲಿಗೆ ವಿಶೇಷವೆನ್ನಿಸಿದೆ. ಸೆಪ್ಟಂಬರ್ 18ರ ಚುನಾವಣೆಯಲ್ಲಿ ಶೇ.61ರಷ್ಟು ಮತದಾನ ದಾಖಲಾಗಿದೆ. ಹಿಂದಿನ 7 ವಿಧಾನಸಭೆ ಚುನಾವಣೆಯಲ್ಲಿನ ಮತದಾನ ಪ್ರಮಾಣಕ್ಕಿಂತ ಇದು ಹೆಚ್ಚು. ಯಾರೇ ಗೆಲ್ಲಲಿ, ಜಮ್ಮು-ಕಾಶ್ಮೀರದಲ್ಲಿ ಪ್ರಜಾಸತ್ತೆ ಗೆಲ್ಲುತ್ತಿದೆ ಎಂಬುದು ಸತ್ಯ.

Update: 2024-09-22 10:30 GMT

ರಶೀದ್ 1990ರಲ್ಲಿ ಜಮ್ಮು-ಕಾಶ್ಮೀರ ಪ್ರಾಜೆಕ್ಟ್ ಕನ್‌ಸ್ಟ್ರಕ್ಷನ್ ಕಾರ್ಪೊರೇಷನ್‌ನ ಒಬ್ಬ ತಾತ್ಕಾಲಿಕ ಸೈಟ್ ಮೇಲ್ವಿಚಾರಕರಾಗಿದ್ದವರು. ಅವರೊಂದು ಸೇತುವೆ ನಿರ್ಮಾಣ ಯೋಜನೆ ನಿರ್ವಹಿಸುತ್ತಿದ್ದರು. ಆಗ ಅವರ ಬಳಿ ಶಸ್ತ್ರಾಸ್ತ್ರ ಹೊಂದಿದ್ದ ಕೆಲವರು ಬಂದು ಸಿಮೆಂಟ್ ಚೀಲಗಳನ್ನು ಕೊಡುವಂತೆ ಆಗ್ರಹಿಸಿದ್ದರು.ಆ ಹೊತ್ತಲ್ಲಿ ಕಾಶ್ಮೀರದಲ್ಲಿ ಈ ಹಫ್ತಾ ವಸೂಲಿ ಹಾವಳಿ ಸಾಮಾನ್ಯವಾಗಿತ್ತು. ಆದರೆ ರಶೀದ್ ಸಿಮೆಂಟ್ ಚೀಲಗಳನ್ನು ಕೊಡಲು ಒಪ್ಪಲಿಲ್ಲ. ತಿಂಗಳ ಕೊನೆಗೆ ಬಂದರೆ ನನ್ನ ಒಂದು ವಾರದ ಸಂಬಳ ಕೊಡುತ್ತೇನೆ. ಆದರೆ ಈ ಸಿಮೆಂಟ್ ಚೀಲಗಳನ್ನು ಕೊಡಲಾರೆ ಎಂದುಬಿಟ್ಟರು. ಆದರೆ ಅವರು ಅದನ್ನು ಒಪ್ಪಲಿಲ್ಲ. ಅವರು ರಶೀದ್‌ರನ್ನು ಅಪಹರಣ ಮಾಡಿದರು ಮತ್ತು ಕೆಲ ದಿನಗಳ ಬಳಿಕ ಮೂಳೆ ಮುರಿಸಿಕೊಂಡಿದ್ದ ರಶೀದ್ ಚರಂಡಿ ಬಳಿ ಬಿದ್ದಿದ್ದರು.

ಸರಕಾರದ ಸಿಮೆಂಟ್ ಚೀಲಗಳಿಗೋಸ್ಕರ ತಾತ್ಕಾಲಿಕ ಸೈಟ್ ಸೂಪರ್‌ವೈಸರ್ ತನ್ನ ಪ್ರಾಣವನ್ನೇ ರಿಸ್ಕ್‌ಗೆ ಒಡ್ಡಿದ್ದ ವಿಚಾರ ಆ ಕನ್‌ಸ್ಟ್ರಕ್ಷನ್ ಕಾರ್ಪೊರೇಷನ್‌ನ ಎಂಡಿಗೆ ಗೊತ್ತಾಯಿತು. ಅವರು ರಶೀದ್‌ರ ನೌಕರಿ ಖಾಯಂ ಮಾಡಿದರು.

ರಶೀದ್, ಇಂಜಿನಿಯರ್ ರಶೀದ್ ಆದರು.

ಆದರೆ ಅದು ಅಲ್ಲಿಗೇ ಮುಗಿಯುವ ಕಥೆಯಾಗಲಿಲ್ಲ.

2005ರಲ್ಲಿ ಉಗ್ರರಿಗೆ ಬೆಂಬಲದ ಆರೋಪದ ಮೇಲೆ ವಿಶೇಷ ಕಾರ್ಯಾಚರಣೆ ದಳ ರಶೀದ್ ಅವರನ್ನು ಬಂಧಿಸಿತು. 3 ತಿಂಗಳುಗಳ ಕಾಲ ವಶದಲ್ಲಿಟ್ಟುಕೊಂಡು ಕಿರುಕುಳ ಕೊಡಲಾಯಿತು. ಆದರೆ ಅವರ ವಿರುದ್ಧದ ಆರೋಪಗಳು ಕೋರ್ಟ್‌ನಲ್ಲಿ ನಿಲ್ಲಲಿಲ್ಲ.

ಅದಾದ ಮೇಲೆ ಸರಕಾರದ ಪರ ಗನ್‌ಮ್ಯಾನ್‌ಗಳು ಎನ್ನಲಾದ ಯಾರೋ ಕೆಲವರು ರಶೀದ್ ಅವರನ್ನು ಅಪಹರಿಸಿದರು. ರಶೀದ್‌ರನ್ನು ಬಿಡಿಸಿಕೊಳ್ಳಲು ಅವರ ತಂದೆ ಆಸ್ತಿ ಮಾರಬೇಕಾಯಿತು.

2008ರಲ್ಲಿ ರಶೀದ್ ರಾಜಕೀಯಕ್ಕೆ ಬಂದರು ಮತ್ತು ಶಾಸಕರಾಗಿ ಆಯ್ಕೆಯಾದರು. 2014ರಲ್ಲಿ ಮತ್ತೆ ಗೆದ್ದರು. ಮಾತ್ರವಲ್ಲ, ತಮ್ಮದೇ ಪಕ್ಷವನ್ನೂ ಕಟ್ಟಿದರು.

2024ರ ಲೋಕಸಭಾ ಚುನಾವಣೆಯ ವೇಳೆ ಯುಎಪಿಎ ಕೇಸ್‌ನಲ್ಲಿ ತಿಹಾರ್ ಜೈಲಿನಲ್ಲಿದ್ದರು ಎಂಜಿನಿಯರ್ ರಶೀದ್. ಅಲ್ಲಿಂದಲೇ ಅವರು ಚುನಾವಣೆಗೆ ಸ್ಪರ್ಧಿಸಿದರು. ಅವರು ಕಣದಲ್ಲಿದ್ದ ಕ್ಷೇತ್ರ ಬಾರಾಮುಲ್ಲಾದಲ್ಲಿ ಎದುರಾಳಿಯಾಗಿದ್ದವರು ಜಮ್ಮು-ಕಾಶ್ಮೀರ ಮಾಜಿ ಸಿಎಂ ಉಮರ್ ಅಬ್ದುಲ್ಲಾ. 2 ಲಕ್ಷ ಮತಗಳ ಭಾರೀ ಅಂತರದಿಂದ ರಶೀದ್ ಗೆದ್ದುಬಿಟ್ಟರು.

ಈಗ ಅಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಆಸಕ್ತಿಯ ವಿಚಾರ ರಶೀದ್ ಮಾತ್ರವಲ್ಲ. ಆರೋಪ ಪ್ರತ್ಯಾರೋಪ, ಒಂದೆಡೆ ಏಕತೆಯ ವಿಚಾರ, ಇನ್ನೊಂದೆಡೆ ಸ್ವಾತಂತ್ರ್ಯದ ವಿಚಾರ ಎಲ್ಲವೂ ಇವೆ.

ಅಲ್ಲಿನ ಚುನಾವಣೆಯೆಂದರೆ ಅಷ್ಟು ಸರಳವಲ್ಲ.

3 ಹಂತಗಳಲ್ಲಿ ಜಮ್ಮು-ಕಾಶ್ಮೀರ ಚುನಾವಣೆ ಇದ್ದು, ಮೊದಲ ಹಂತದ ಮತದಾನ ಸೆಪ್ಟಂಬರ್ 18ಕ್ಕೆ ನಡೆದಿದೆ. ಸೆಪ್ಟಂಬರ್ 25ರಂದು 2ನೇ ಹಂತ, ಅಕ್ಟೋಬರ್ 1ರಂದು 3ನೇ ಹಂತದ ಮತದಾನ ನಡೆಯುತ್ತಿದ್ದು, ಅಕ್ಟೋಬರ್ 8ಕ್ಕೆ ಫಲಿತಾಂಶ ಗೊತ್ತಾಗಲಿದೆ. ಜಮ್ಮು-ಕಾಶ್ಮೀರದಲ್ಲಿ 10 ವರ್ಷಗಳ ನಂತರ ನಡೆಯುತ್ತಿರುವ ಚುನಾವಣೆ ಇದು. 370ನೇ ವಿಧಿ ರದ್ದತಿ ಬಳಿಕ ಅಸೆಂಬ್ಲಿ ಚುನಾವಣೆಯಿಂದ ರಾಜ್ಯದ ಒಟ್ಟಾರೆ ಫಲಿತಾಂಶ ಏನಿರಬಹುದು?

2019ರ ಆಗಸ್ಟ್ 5ರಂದು 370ನೇ ವಿಧಿ ರದ್ದತಿ ಜೊತೆಗೇ ಜಮ್ಮು-ಕಾಶ್ಮೀರ ಎರಡು ಹೋಳಾಯಿತು. ಕಾರ್ಗಿಲ್ ಮತ್ತು ಲೇಹ್ ಹೊರತುಪಡಿಸಿ ಲಡಾಖ್ ಕೇಂದ್ರಾಡಳಿತ ಪ್ರದೇಶ ರಚಿಸಲಾಯಿತು. ಕಾಶ್ಮೀರ ಕಣಿವೆ ವಲಯವಾದರೆ, ಜಮ್ಮು ಪರ್ವತ ವಲಯ. ಕಾಶ್ಮೀರದಲ್ಲಿ ಶೇ.60ರಷ್ಟು ಜನರಿದ್ದರೆ, ಜಮ್ಮುವಿನಲ್ಲಿ ಶೇ.40ರಷ್ಟಿದ್ದಾರೆ. ಪ್ರವಾಸೋದ್ಯಮವೇ ಇಲ್ಲಿನ ಪ್ರಮುಖ ಉದ್ಯಮ. ಕೃಷಿ, ತೋಟಗಾರಿಕೆ ನೆಚ್ಚಿದವರೂ ಕೆಲವರಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಜಮ್ಮು-ಕಾಶ್ಮೀರ ಹರಿಸಿಂಗ್ ಎಂಬ ರಾಜನ ಆಳ್ವಿಕೆಯಲ್ಲಿತ್ತು. ಜನಸಂಖ್ಯೆಯಲ್ಲಿ ಮುಸ್ಲಿಮ್ ಬಾಹುಳ್ಯವಿದ್ದರೂ, ವಿಭಿನ್ನ ಸಂಸ್ಕೃತಿಯಿತ್ತು. ಸ್ವಾತಂತ್ರ್ಯ ಬಂದಾಗ ರಾಜ ಭಾರತ ಸೇರುವುದೋ, ಪಾಕಿಸ್ತಾನ ಸೇರುವುದೋ, ಪ್ರತ್ಯೇಕವಾಗಿಯೇ ಇರುವುದೋ ಎಂದುಕೊಳ್ಳುತ್ತಿದ್ದಾಗ, ಪಾಕಿಸ್ತಾನ ಬೆಂಬಲಿತ ದಂಗೆ ಆತನ ವಿರುದ್ಧ ಶುರುವಾಯಿತು. ರಾಜ ಭಾರತದ ಬೆಂಬಲ ಕೇಳಿದ. ಜಮ್ಮು-ಕಾಶ್ಮೀರ ಭಾರತದ ಭಾಗವಾಗಬೇಕು ಎಂಬ ಕರಾರಿನ ಮೇಲೆ ಬೆಂಬಲ ನೀಡಲಾಯಿತು. ಒಪ್ಪಂದಕ್ಕೆ ಸಹಿ ಹಾಕಲಾಯಿತು.

370ನೇ ವಿಧಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿತ್ತು. ಕಡೆಗೆ ಬಿಜೆಪಿ ಸರಕಾರ ಅದನ್ನು ರದ್ದುಗೊಳಿಸಿತು. ಬಳಿಕ ಸುಪ್ರೀಂ ಕೋರ್ಟ್ 370ನೇ ವಿಧಿ ರದ್ದತಿಯನ್ನು ಮಾನ್ಯ ಮಾಡುತ್ತದೆ ಹಾಗೂ ಸೆಪ್ಟಂಬರ್ 30ರೊಳಗೆ ರಾಜ್ಯದಲ್ಲಿ ಚುನಾವಣೆ ನಡೆಸಲು ಆದೇಶಿಸುತ್ತದೆ.

ಮತ್ತೆ ಮತದಾನದ ಅವಕಾಶ ಸಿಕ್ಕಿರುವುದು ಜನರ ಪಾಲಿಗೆ ವಿಶೇಷವೆನ್ನಿಸಿದೆ. ಸೆಪ್ಟಂಬರ್ 18ರ ಚುನಾವಣೆಯಲ್ಲಿ ಶೇ.61ರಷ್ಟು ಮತದಾನ ದಾಖಲಾಗಿದೆ. ಹಿಂದಿನ 7 ವಿಧಾನಸಭೆ ಚುನಾವಣೆಯಲ್ಲಿನ ಮತದಾನ ಪ್ರಮಾಣಕ್ಕಿಂತ ಇದು ಹೆಚ್ಚು. ಯಾರೇ ಗೆಲ್ಲಲಿ, ಜಮ್ಮು-ಕಾಶ್ಮೀರದಲ್ಲಿ ಪ್ರಜಾಸತ್ತೆ ಗೆಲ್ಲುತ್ತಿದೆ ಎಂಬುದು ಸತ್ಯ.

ಜಮ್ಮುವಿನ ಚೆನಾಬ್ ಕಣಿವೆ ಪ್ರದೇಶದಲ್ಲಿ ಕಿಶ್ತ್ವಾರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ.80.14ರಷ್ಟು ಮತದಾನವಾಗಿದೆ. ನಂತರ ದೋಡಾದಲ್ಲಿ ಶೇ.71.34, ರಂಬಾನ್‌ದಲ್ಲಿ ಶೇ.70.55 ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ದಕ್ಷಿಣ ಕಾಶ್ಮೀರದಲ್ಲಿ, ಕುಲ್ಗಾಮ್ ಜಿಲ್ಲೆ ಶೇ.62.46 ಮತದಾನದ ಮೂಲಕ ಅಗ್ರಸ್ಥಾನದಲ್ಲಿದೆ. ಆನಂತರ ಅನಂತನಾಗ್ ಜಿಲ್ಲೆಯಲ್ಲಿ ಶೇ.57.84, ಶೋಪಿಯಾನ್ ಜಿಲ್ಲೆ ಶೇ.55.96 ಮತ್ತು ಪುಲ್ವಾಮಾ ಜಿಲ್ಲೆಯಲ್ಲಿ ಶೇ. 46.65 ಮತದಾನವಾಗಿದೆ.

ಭಯೋತ್ಪಾದಕತೆ ತೀವ್ರವಾಗಿರುವ ಪುಲ್ವಾಮಾ, ಅನಂತ್ ನಾಗ್, ಕುಲ್ಗಾಮ್, ಶೋಪಿಯಾನ್‌ನಲ್ಲೂ ಉತ್ತಮ ಮತದಾನವಾಗಿರುವುದು ವಿಶೇಷ.

2ನೇ ಹಂತದಲ್ಲಿ ಇನ್ನೂ ಹೆಚ್ಚಿನ ಮತದಾನವಾದೀತೇ? ಇಡೀ ದೇಶಕ್ಕೆ ಜಮ್ಮು-ಕಾಶ್ಮೀರ ಮಾದರಿಯಾಗುವುದೇ?

ಚುನಾವಣೆಯಲ್ಲಿ ನಾಲ್ಕು ಪ್ರಮುಖ ಪಕ್ಷಗಳಿವೆ ಕಾಂಗ್ರೆಸ್, ಬಿಜೆಪಿ, ಎನ್‌ಸಿ (ನ್ಯಾಷನಲ್ ಕಾನ್ಫರೆನ್ಸ್) ಮತ್ತು ಪಿಡಿಪಿ (ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ)

ಜಮ್ಮು-ಕಾಶ್ಮೀರದಲ್ಲಿ ಮುಸ್ಲಿಮ್ ಜನಸಂಖ್ಯೆ ಶೇ.68.31, ಹಿಂದೂಗಳು ಶೇ.28.44 ಮತ್ತು ಸಿಖ್ಖರು ಶೇ.2.

ಶೇ.50ರಿಂದ 55ರಷ್ಟು ಮಂದಿ ಕಾಶ್ಮೀರಿ ಮಾತಾಡುವವರು ಮುಸ್ಲಿಮರು, ಪಂಡಿತರು ಇಬ್ಬರೂ ಇದ್ದಾರೆ.

ಕಾಂಗ್ರೆಸ್, ಬಿಜೆಪಿ ಎರಡೂ ಜಮ್ಮುವಿನಲ್ಲಿ ಪ್ರಬಲವಾಗಿವೆ.

ಕಾಶ್ಮೀರದಲ್ಲಿ ಎನ್‌ಸಿ, ಪಿಡಿಪಿ ಪ್ರಭಾವಿಗಳಾಗಿವೆ. ಪಿಡಿಪಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ.

ಈಗ ಸಂಸದ ಇಂಜಿನಿಯರ್ ರಶೀದ್ ಅವರ ಅವಾಮಿ ಇತ್ತಿಹಾದ್ ಪಾರ್ಟಿ 34 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.

ಅಗತ್ಯ ಬಿದ್ದರೆ ಎನ್‌ಸಿ ಮತ್ತು ಕಾಂಗ್ರೆಸ್ ಜೊತೆ ಚುನಾವಣೋತ್ತರ ಮೈತ್ರಿ ಎಂದಿದೆ.

ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡ ಮೇಲೆ ಪಿಡಿಪಿ ದುರ್ಬಲವಾಗಿದೆ. ಅನೇಕ ನಾಯಕರು ಪಕ್ಷ ತೊರೆದಿದ್ದಾರೆ.

ಕಾಶ್ಮೀರದಲ್ಲಿ ಎನ್‌ಸಿ ಮತ್ತು ಕಾಂಗ್ರೆಸ್ ಒಂದೆಡೆ ಹಾಗೂ ಪಿಡಿಪಿ ಇನ್ನೊಂದೆಡೆ.

ಕಾಶ್ಮೀರವನ್ನು ಗೆಲ್ಲಲು ಅವೆರಡೂ ಮೈತ್ರಿ ಮಾಡಿಕೊಂಡಿವೆ.ಅಲ್ಲದೆ ಜಮ್ಮುವಿನಲ್ಲೂ ಕೆಲ ಸೀಟುಗಳನ್ನು ಗಳಿಸಲು ಕಾಂಗ್ರೆಸ್ ಉದ್ದೇಶಿಸಿದೆ.

ಜಮ್ಮು-ಕಾಶ್ಮೀರದಲ್ಲಿ ಅಬ್ದುಲ್ಲಾ ಕುಟುಂಬದ ಎನ್‌ಸಿ ಹಾಗೂ ಮುಫ್ತಿ ಕುಟುಂಬದ ಪಿಡಿಪಿ ಈವರೆಗೂ ಕಾರುಬಾರು ನಡೆಸುತ್ತಾ ಬಂದಿದ್ದವು. ಆದರೆ ಈಗ ಕಾಲ ಬದಲಾದ ಹಾಗೆ ಕಾಣುತ್ತಿದೆ. ಅಲ್ಲಿನ ಯುವಜನ, ಮಹಿಳೆಯರು ಹೊಸ ರಾಜಕೀಯ ನಾಯಕತ್ವದತ್ತ ದೃಷ್ಟಿ ಹರಿಸಿರುವ ಹಾಗೆ ಕಾಣುತ್ತಿದೆ. ಆದರೆ 370ನೇ ವಿಧಿ ರದ್ದತಿ ಹೇಗೆ ಪರಿಣಾಮ ಬೀರಲಿದೆ?

370ನೇ ವಿಧಿ ರದ್ದತಿ ಬಿಜೆಪಿ, ಆರೆಸ್ಸೆಸ್‌ಗೆ ಬೇಕಿತ್ತು. ಕಳೆದ 5-6 ವರ್ಷಗಳಲ್ಲಿ ಜನರು ಉಸಿರುಗಟ್ಟಿದ ವಾತಾವರಣ ಅನುಭವಿಸಿದ್ದಾರೆ. ಭಯೋತ್ಪಾದಕತೆ ಕಡಿಮೆಯಾಗಿದೆ, ಕಲ್ಲು ತೂರಾಟ ನಿಂತಿದೆ ಎಂಬುದು ಬಿಜೆಪಿ ವಾದ.

ನಾಗರಿಕರು ಮತ್ತು ಭದ್ರತಾಪಡೆಗಳಲ್ಲಿ ಸಾವನ್ನಪ್ಪಿದವರು 2018ಕ್ಕಿಂತ 2022ರಲ್ಲಿ ಕಡಿಮೆ. ಆದರೆ 2012, 2013, 2014, 2015 ಹಾಗೂ 2016ರಲ್ಲಿ ಸಾವನ್ನಪ್ಪಿದವರ ಸಂಖ್ಯೆಗೆ ಹೋಲಿಸಿದರೆ 2022ರಲ್ಲಿ ಬಲಿಯಾದವರ ಸಂಖ್ಯೆ ಹೆಚ್ಚು. ಅಂದರೆ ಯುಪಿಎ ಅವಧಿ ಮುಗಿಯುವಾಗ ಅಲ್ಲಿ ಬಲಿಯಾಗುತ್ತಿದ್ದವರ ಸಂಖ್ಯೆಗೆ ಹೋಲಿಸಿದರೆ ಈಗ ಹೆಚ್ಚೇ ಇದೆ.

ಬಿಜೆಪಿಯವರು ಹೇಳಿಕೊಳ್ಳುವಂತೆ ಅಲ್ಲಿ ಭಯೋತ್ಪಾದನೆ ಪೂರ್ತಿ ಹೋಗಿಲ್ಲ. ಕಾಶ್ಮೀರಿ ಪಂಡಿತರು ಕೂಡ ತಮ್ಮ ಸುರಕ್ಷತೆ ಹೆಚ್ಚಿಲ್ಲ ಎಂದು ಭಾವಿಸುತ್ತಾರೆ.

ತಮ್ಮ ಬಗ್ಗೆ ಎಲ್ಲ ಕಡೆ ಮಾತಾಡುವ ಬಿಜೆಪಿ ತಮಗಾಗಿ ಮಾಡಿದ್ದೇನು ಇಲ್ಲ ಎಂದು ಬಿಜೆಪಿ ವಿರುದ್ಧ ಅವರು ಸಿಟ್ಟಾಗಿದ್ದಾರೆ.

ಪ್ರವಾಸೋದ್ಯಮ ಉತ್ತಮಗೊಂಡಿದೆ. ಮೊದಲು 20 ಸಾವಿರ ಜನ ಬರುತ್ತಿದ್ದರು. ಈಗ ಒಂದೂವರೆ ಕೋಟಿಯಾಗಿದ್ದಾರೆ ಎಂಬುದು ಬಿಜೆಪಿಯ ಮತ್ತೊಂದು ವಾದ. ಆದರೆ ಅದರಲ್ಲೂ ಲೆಕ್ಕಾಚಾರದ ಆಟ ಇದೆ.

ಮೊದಲು ವೈಷ್ಣೋದೇವಿ ಹಾಗೂ ಅಮರನಾಥ ಯಾತ್ರೆಗೆ ಬರುವವರನ್ನು ಯಾತ್ರಾರ್ಥಿಗಳು ಎಂದು ಸರಕಾರ ಲೆಕ್ಕ ಹಾಕುತ್ತಿತ್ತು. ಈಗ ಅವರನ್ನೂ ಪ್ರವಾಸಿಗಳ ಲೆಕ್ಕಕ್ಕೆ ಸೇರಿಸಿಕೊಂಡು ಹೇಳಲಾಗುತ್ತಿದೆ. ಆ ಲೆಕ್ಕ ನೋಡಲು ಹೋದರೆ ಯುಪಿಎ ಕೊನೆ ಹಂತದಲ್ಲೂ ಅಲ್ಲಿಗೆ ಒಂದು ಕೋಟಿಗಿಂತ ಹೆಚ್ಚೇ ಜನ ಬರುತ್ತಿದ್ದರು. ಅದರಲ್ಲೇನೂ ದೊಡ್ಡ ಅಭಿವೃದ್ಧಿ ಆಗಿಲ್ಲ.

ಇನ್ನು ಬಿಜೆಪಿ ಪ್ರಚಾರ ಮಾಡುತ್ತಿರುವ ಹಾಗೆ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಇಲ್ಲಿ ಭಾರೀ ಹೂಡಿಕೆ, ಅಭಿವೃದ್ಧಿ ಏನೂ ಆಗಿಲ್ಲ. ಗುತ್ತಿಗೆಗಳೂ ಹೊರಗಿನವರಿಗೇ ಜಾಸ್ತಿ ಸಿಗುತ್ತಿವೆ ಎಂಬ ಅಸಮಾಧಾನ ಇಲ್ಲಿನ ಜನರಲ್ಲಿದೆ.

ಅಲ್ಲೀಗ ವಿದ್ಯುತ್ ಹಾಗೂ ನೀರು ಸರಬರಾಜು ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಯುವಕರ ನಿರುದ್ಯೋಗ ಪ್ರಮಾಣ ಶೇ.18.3 ಇದ್ದು, ಅತಿ ಕಳವಳಕಾರಿ. ಖಾಯಂ ಉದ್ಯೋಗ ಇಲ್ಲವಾಗಿದೆ. ಮಾದಕ ವ್ಯಸನ ಯುವಕರಲ್ಲಿ ಹೆಚ್ಚಿದೆ.

6 ವರ್ಷಗಳಿಂದ ರಾಜ್ಯವನ್ನು ಕೇಂದ್ರವೇ ನಿಯಂತ್ರಿಸುತ್ತಿದೆ. ಚುನಾಯಿತ ಅಸೆಂಬ್ಲಿ ಇಲ್ಲದೆ, ಲೆಫ್ಟಿನೆಂಟ್ ಗವರ್ನರ್ ಅನ್ನೇ ಅವಲಂಬಿಸಿದೆ. ಲೆಫ್ಟಿನೆಂಟ್ ಗವರ್ನರ್‌ಗೆ ಯಾವುದೇ ಉತ್ತರದಾಯಿತ್ವ ಇರುವುದಿಲ್ಲ. ಉತ್ತರದಾಯಿತ್ವ ಇಲ್ಲದ ಅಧಿಕಾರಶಾಹಿ ಇದ್ದು, ಜನರು ಅಸಹಾಯಕರಾಗಿದ್ದಾರೆ, ನಿರುದ್ಯೋಗಿಗಳಾಗಿದ್ದಾರೆ.

ಈ ಕಾಯುವಿಕೆ, ಹತಾಶೆ, ಬಿಕ್ಕಟ್ಟು ಇದೆಲ್ಲ ಕಾರಣದಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ.

ತನ್ನ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರಾಜ್ಯಕ್ಕೆ ರಾಜ್ಯ ಸ್ಥಾನಮಾನ ಕೂಡಲೇ ಕೊಡುವಂತೆ ಬಿಜೆಪಿ ಮೇಲೆ ಒತ್ತಡ ಹಾಕುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಪಿಡಿಪಿ ಪಕ್ಷಗಳು ವಿಶೇಷ ಸ್ಥಾನಮಾನವನ್ನೇ ಮತ್ತೆ ಕೊಡಿಸಲು ಹೋರಾಡುವುದಾಗಿ ಹೇಳಿವೆ. ಸಾವಿರಾರು ಜನರನ್ನು ಜೈಲಿಗೆ ಹಾಕಿರುವ ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಅನ್ನು ರದ್ದು ಪಡಿಸುವುದಾಗಿಯೂ ಈ ಎರಡೂ ಪಕ್ಷಗಳು ಹೇಳಿವೆ.

ಆದರೆ ಇದೇ ಪಿಡಿಪಿ 2014ರಿಂದ 2018ರವರೆಗೆ ಬಿಜೆಪಿ ಜೊತೆಗೇ ಅಧಿಕಾರ ಅನುಭವಿಸಿತ್ತು.

ಹರ್ಯಾಣದಲ್ಲಿ ಮಹಿಳಾ ಸಬಲೀಕರಣದ ಮಾತಾಡಿ ವಿನೇಶ್ ಫೋಗಟ್‌ಗೆ ಟಿಕೆಟ್ ಕೊಟ್ಟಿರುವ ಕಾಂಗ್ರೆಸ್ ಕಾಶ್ಮೀರದಲ್ಲಿ ಕಥುವಾ ಸಾಮೂಹಿಕ ಅತ್ಯಾಚಾರ ಆರೋಪಿಗಳ ಪರ ಮೆರವಣಿಗೆ ಮಾಡಿದ್ದ ಲಾಲ್‌ಸಿಂಗ್‌ಗೆ ಇಲ್ಲಿ ಟಿಕೆಟ್ ಕೊಟ್ಟಿದೆ. ಪ್ರಮುಖ ರಾಜಕೀಯ ಪಕ್ಷಗಳ ಈ ದ್ವಂದ್ವವನ್ನು ಕಾಶ್ಮೀರಿಗಳು ನೋಡಿ ಬೇಸತ್ತಿದ್ದಾರೆ.

ಹಾಗಾಗಿಯೇ ಅವರಿಗೆ ಇಂಜಿನಿಯರ್ ರಶೀದ್‌ರಂತಹ ಹೊಸ, ನಿರ್ಭೀತ ನಾಯಕರು ಇಷ್ಟವಾಗುತ್ತಿದ್ದಾರೆ.

ಇನ್ನೊಂದು ಕಡೆ ಕಳೆದ 35 ವರ್ಷಗಳಿಂದ ಚುನಾವಣೆ ಬಹಿಷ್ಕರಿಸಿದ್ದ ಜಮಾಅತೆ ಇಸ್ಲಾಮಿ ಈಗ ಚುನಾವಣೆಯಲ್ಲಿ ಭಾಗವಹಿಸಿದೆ. ಹದಿನೈದು ಪಕ್ಷೇತರ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದೆ. ಅದರ ನಾಯಕರು ಬಂದು ಮತದಾನ ಮಾಡಿದ್ದಾರೆ.

ಇಂಜಿನಿಯರ್ ರಶೀದ್ ಹಾಗೂ ಜಮಾಅತೆ ಇಸ್ಲಾಮಿಯವರಿಗೆ ಬಿಜೆಪಿ ಪರೋಕ್ಷ ಸಹಾಯ ಮಾಡುತ್ತಿದೆ ಎಂಬುದು ಉಮರ್ ಅಬ್ದುಲ್ಲಾ ಹಾಗೂ ಮೆಹಬೂಬ ಮುಫ್ತಿ ಅವರ ಆರೋಪ. ಆದರೆ ‘‘ಬಿಜೆಪಿ ಜೊತೆ ಹೊಂದಾಣಿಕೆಯಲ್ಲಿರುವುದು ಉಮರ್ ಅಬ್ದುಲ್ಲಾ ಹಾಗೂ ಮುಫ್ತಿ, ನಾನು ಐದು ವರ್ಷ ಜೈಲಿನಲ್ಲಿ ನೀರೂ ಇಲ್ಲದೆ ಪರದಾಡುತ್ತಿದ್ದೆ, ಬಿಜೆಪಿ ಜೊತೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ’’ ಎನ್ನುತ್ತಾರೆ ಇಂಜಿನಿಯರ್ ರಶೀದ್

ರಶೀದ್ ಪಕ್ಷ ಎಲ್ಲಾದರೂ ಕೆಲವು ಸ್ಥಾನಗಳನ್ನು ಗಳಿಸಿಬಿಟ್ಟರೆ ಅದು ಕಾಂಗ್ರೆಸ್, ಎನ್‌ಸಿ ಹಾಗೂ ಪಿಡಿಪಿಗೆ ದೊಡ್ಡ ತಲೆನೋವಾಗಲಿದೆ.

ಸಾಮಾನ್ಯ ಅಂದಾಜಿನ ಪ್ರಕಾರ ಕಾಂಗ್ರೆಸ್ ಎನ್‌ಸಿ ಮೈತ್ರಿ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಆದರೆ ಅದು ಹೀಗೇ ಆಗಲಿದೆ ಎಂದು ಹೇಳೋದು ಅಸಾಧ್ಯ. ಕಾಶ್ಮೀರದ ಜನರ ಮನಸ್ಸಲ್ಲಿ ಏನಿದೆ ಎಂದು ಈಗಲೇ ಊಹಿಸುವುದು ಕಷ್ಟ. ಅಲ್ಲಿರುವ ಪರಿಸ್ಥಿತಿಯಲ್ಲಿ ಅಲ್ಲಿನ ಜನ ಸುಲಭವಾಗಿ ತಮ್ಮ ಆಯ್ಕೆ ಬಗ್ಗೆ ಬಹಿರಂಗವಾಗಿ ಮಾತಾಡುವುದೂ ಇಲ್ಲ.

ಜೈಲಲ್ಲಿದ್ದ ರಶೀದ್ ಅವರು ಉಮರ್ ಅಬ್ದುಲ್ಲಾರಂತಹ ನಾಯಕರನ್ನು ಎರಡು ಲಕ್ಷ ಮತಗಳಿಂದ ಸೋಲಿಸುತ್ತಾರೆ ಎಂದು ಯಾರೂ ಊಹಿಸಿಯೇ ಇರಲಿಲ್ಲ. ಹಾಗಾಗಿ ಕಾಶ್ಮೀರ ಚುನಾವಣೆಯಲ್ಲಿ ಏನೇನು ಅಚ್ಚರಿ ಇದೆ ಎಂಬುದು ಅಕ್ಟೋಬರ್ ಎಂಟಕ್ಕೇ ಗೊತ್ತಾಗಲಿದೆ.

ಹೇಗಾದರೂ ಪ್ರಜಾಪ್ರಭುತ್ವ ಮರಳಿದರೆ ಸಾಕು ಎಂಬ ತಹತಹ ಅಲ್ಲಿನ ಜನತೆಗೆ ಬಂದುಬಿಟ್ಟಿದೆ. ಅಸಲಿ ಅಸೆಂಬ್ಲಿ, ಅಸಲಿ ರಾಜ್ಯ ಸ್ಥಾನಮಾನ ಅವರ ನಿರೀಕ್ಷೆಯಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ಎಚ್. ವೇಣುಪ್ರಸಾದ್

contributor

Similar News