ಕೊರೋನ ಲಸಿಕೆಗಳು ನಿರಪಾಯಕರವೆನ್ನಲು ಆಧಾರಗಳಿದ್ದವೇ?

ನಮ್ಮ 95 ಕೋಟಿ ಜನರಿಗೆ ಸರಿಯಾದ ಮಾಹಿತಿ ನೀಡದೆ, ಬಗೆಬಗೆಯ ಒತ್ತಡ ಹಾಕಿ ಅನಗತ್ಯವಾಗಿದ್ದರೂ ಲಸಿಕೆ ಹಾಕಿಸಿದ ನಮ್ಮ ಸರಕಾರ, ವೈದ್ಯರು ಹಾಗೂ ವೈದ್ಯಕೀಯ ಸಂಘಟನೆಗಳು ಮತ್ತು ಲಸಿಕೆ ತಯಾರಕ ಕಂಪೆನಿಗಳು ಈಗ ಜನರಿಗೆ ಪ್ರಾಮಾಣಿಕವಾದ, ಸಾಕ್ಷ್ಯಾಧಾರಿತವಾದ ಉತ್ತರಗಳನ್ನು ಹೇಳುವ ಕಾಲ ಬಂದಿದೆ.

Update: 2024-05-28 07:28 GMT

PC: PTI

ಕೊರೋನ ಲಸಿಕೆಗಳ ಅಡ್ಡ ಪರಿಣಾಮಗಳನ್ನು ಕಂಪೆನಿಯೇ ನ್ಯಾಯಾಲಯದಲ್ಲಿ ಒಪ್ಪಿಕೊಂಡದ್ದು ಸುದ್ದಿಯಾಗಿ ಈ ವಿಚಾರವು ಈಗ ಮುನ್ನೆಲೆಗೆ ಬಂದಿದೆ. ಆಗ ಲಸಿಕೆ ಹಾಕುವುದು ಅತ್ಯಗತ್ಯವಾಗಿತ್ತು, ಅಡ್ಡ ಪರಿಣಾಮಗಳೆಲ್ಲ ಗೌಣವಾಗಿದ್ದವು ಎಂದು ಲಸಿಕೆ ಹಾಕಿಸಿಕೊಳ್ಳಲು ಉತ್ತೇಜಿಸಿದ್ದ ವೈದ್ಯರು ಈಗ ಸಮರ್ಥನೆಗಿಳಿದಿದ್ದಾರೆ. ಈ ಹೊಸ ಲಸಿಕೆಗಳ ಅಡ್ಡ ಪರಿಣಾಮಗಳು ನಿಜಕ್ಕೂ ಗೌಣವಾಗಿದ್ದವೇ?

ಕೋವಿಶೀಲ್ಡ್ ಲಸಿಕೆಗೆ ಇಲ್ಲಿ ತುರ್ತು ಅನುಮೋದನೆ ಕೊಡುವಾಗಲೇ ಅದರಿಂದಾಗಬಹುದಾದ ಅಡ್ಡ ಪರಿಣಾಮಗಳ ಬಗ್ಗೆ ಆರಂಭಿಕ ವರದಿಗಳಿದ್ದವು. ಜನವರಿ 16, 2021ರಿಂದ ವೈದ್ಯರಿಗೆ ಮತ್ತು ಆರೋಗ್ಯಕರ್ಮಿಗಳಿಗೆ ಲಸಿಕೆಯನ್ನು ಕೊಡಲಾರಂಭಿಸಿದ ಬಳಿಕ ಮೊದಲ ವಾರದಲ್ಲೇ ಲಸಿಕೆ ಪಡೆದಿದ್ದ ಸುಮಾರು 10 ಮಂದಿ ಮೃತರಾದ ವರದಿಗಳಾದವು, ಆಗಲೂ ಈ ಲಸಿಕೆಯ ಸುರಕ್ಷತೆಯ ಬಗ್ಗೆ ಮತ್ತು ಸಾಕಷ್ಟು ಅಧ್ಯಯನಗಳಾಗುವ ಮೊದಲೇ ಅದನ್ನು ಬಳಸುತ್ತಿರುವುದರ ಔಚಿತ್ಯದ ಬಗ್ಗೆ ನಾವು ಕೆಲವರು ಪ್ರಶ್ನೆಗಳನ್ನೆತ್ತಿದ್ದೆವು. ಜನವರಿ 2021ರಲ್ಲಿ ಮಂಗಳೂರು ಟುಡೇ ಪತ್ರಿಕೆಯು ನಡೆಸಿದ್ದ ಸಂದರ್ಶನದಲ್ಲಿ, ಜನವರಿ 16ರಿಂದ ಲಸಿಕೆ ನೀಡಲಾರಂಭಿಸಿದ ಬಳಿಕ ಲಸಿಕೆ ಪಡೆದಿದ್ದವರಲ್ಲಿ ಕನಿಷ್ಠ ಹತ್ತು ಮಂದಿ ಹೃದಯಾಘಾತ ಹಾಗೂ ಪಾರ್ಶ್ವವಾಯುಗಳಾಗಿ ಮೃತಪಟ್ಟದ್ದನ್ನು ಉಲ್ಲೇಖಿಸಿ, ಈ ಸಾವುಗಳಿಗೂ ಲಸಿಕೆಗೂ ಸಂಬಂಧವಿದೆಯೇ ಎನ್ನುವುದನ್ನು ಅಧ್ಯಯನ ಮಾಡಬೇಕಿದೆ, ಲಸಿಕೆಗಳ ಸುರಕ್ಷತೆಯ ಬಗ್ಗೆ ಸಾಕಷ್ಟು ಮಾಹಿತಿಯಿಲ್ಲದೆ ಅದನ್ನು ಎಲ್ಲರಿಗೂ ನೀಡುವುದು ಸರಿಯಾಗದು ಎಂದು ಹೇಳಿದ್ದೆ. ಫೆಬ್ರವರಿ-ಮಾರ್ಚ್ 2021ರ ವೇಳೆಗೆ ಇದೇ ಲಸಿಕೆಯನ್ನು ಆಗಲೇ ಸುಮಾರು 1,30,000 ಜನರಿಗೆ ನೀಡಿದ್ದ ಡೆನ್ಮಾರ್ಕ್‌ನಲ್ಲಿ 5 ಮಂದಿ (26,000ಕ್ಕೆ ಒಬ್ಬರು) ರಕ್ತ ಹೆಪ್ಪುಗಟ್ಟುವುದರ ಜೊತೆಗೆ ಪ್ಲೇಟ್ಲೆಟ್ ಕಣಗಳಲ್ಲಿ ಇಳಿಕೆಯಾಗುವ ಸಮಸ್ಯೆಯಿಂದಾಗಿ ಮೃತಪಟ್ಟರು; ಇದನ್ನು ಪರಿಗಣಿಸಿ ಮಾರ್ಚ್ 11, 2021ರಂದು ಡೆನ್ಮಾರ್ಕ್ ಮತ್ತು ನಾರ್ವೇ ದೇಶಗಳು ಈ ಆಕ್ಸ್‌ಫರ್ಡ್ (ಕೋವಿಶೀಲ್ಡ್) ಲಸಿಕೆಯನ್ನು ಅಲ್ಲಿಗೇ ತಡೆಹಿಡಿದವು, ಆ ಬಳಿಕ ಅಸ್ತ್ರ-ಜೆನೆಕ, ಆಕ್ಸ್‌ಫರ್ಡ್‌ಗಳ ಮೂಲ ದೇಶಗಳಾದ ಸ್ವೀಡನ್ ಮತ್ತು ಇಂಗ್ಲೆಂಡ್‌ಗಳೂ ಸೇರಿದಂತೆ ಯುರೋಪಿನ ಇನ್ನಿತರ ದೇಶಗಳೂ, ಆಸ್ಟ್ರೇಲಿಯದಂತಹ ದೇಶಗಳೂ ಅದರ ಬಳಕೆಯನ್ನು ನಿಲ್ಲಿಸಿದವು ಅಥವಾ ಹಿರಿವಯಸ್ಕರಿಗಷ್ಟೇ ಸೀಮಿತಗೊಳಿಸಿದವು. ಭಾರತದಲ್ಲಿ ಎಪ್ರಿಲ್ 2021ರಲ್ಲಿ ಜನಸಾಮಾನ್ಯರಿಗೆ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾರಂಭಿಸುವ ವೇಳೆಗೆ ಈ ವರದಿಗಳೆಲ್ಲವೂ ಲಭ್ಯವಿದ್ದವು, ನಾವು ಇವನ್ನು ಸರಕಾರದ ಗಮನಕ್ಕೂ ತಂದಿದ್ದೆವು. ಮೇ-ಜೂನ್ 2021ರಲ್ಲಿ ಕರ್ನಾಟಕದಲ್ಲಿ ಕಾಲೇಜು ಪ್ರವೇಶಿಸಲು ಲಸಿಕೆ ಕಡ್ಡಾಯ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದಾಗ, ಅವರಿಗೆ ವಕೀಲರ ಮೂಲಕ ಕಳುಹಿಸಿದ್ದ ನೋಟಿಸ್‌ನಲ್ಲೂ ಅನ್ಯ ದೇಶಗಳಲ್ಲಿ ಈ ಲಸಿಕೆಯನ್ನು ವಿದ್ಯಾರ್ಥಿ-ಯುವಜನರಿಗೆ ಕೊಡದಂತೆ ತಡೆಯಲಾಗಿದೆ ಎಂಬುದನ್ನು ತಿಳಿಸಲಾಗಿತ್ತು, ಬಳಿಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲೂ ಇದನ್ನು ಹೇಳಲಾಗಿತ್ತು. ಆದರೆ ಇವನ್ನೆಲ್ಲ ಕಡೆಗಣಿಸಿ ಮಕ್ಕಳಾದಿಯಾಗಿ ಎಲ್ಲರಿಗೂ ಲಸಿಕೆ ಹಾಕುವುದನ್ನು ಮುಂದುವರಿಸಲಾಯಿತು, ಯಾವುದೇ ಅಗತ್ಯ ಮತ್ತು ಆಧಾರಗಳಿಲ್ಲದೆಯೂ ಮೂರು ಡೋಸುಗಳನ್ನು ಪಡೆಯುವಂತೆ ಉತ್ತೇಜಿಸಲಾಯಿತು, ಇಲ್ಲಿಯೂ ಅಡ್ಡ ಪರಿಣಾಮಗಳಾದ ವರದಿಗಳನ್ನು ನಿರಾಕರಿಸಲಾಯಿತು, ಆ ಬಗ್ಗೆ ಎಚ್ಚರಿಸಿದವರನ್ನು ಹೀಗಳೆಯಲಾಯಿತು, ಅಧಿಕೃತವಾಗಿ ಅದು ಐಚ್ಛಿಕವೆಂದು ಹೇಳಿದ್ದರೂ ಎಲ್ಲರೂ ಹಾಕಿಸಿಕೊಳ್ಳುವಂತೆ ತೆರತೆರನಾಗಿ ಒತ್ತಡ ಹೇರಿ, ರಾಷ್ಟ್ರವಾದ, ಮತೀಯವಾದ, ಪ್ರಧಾನಿ ಹಾಗೂ ಸರಕಾರದ ಆಜ್ಞಾಪಾಲನೆ ಇತ್ಯಾದಿಗಳನ್ನೂ ಹೇಳಿ, ಒಟ್ಟು 95 ಕೋಟಿಗೂ ಹೆಚ್ಚು ಭಾರತೀಯರು ಲಸಿಕೆ ಹಾಕಿಸಿಕೊಳ್ಳುವಂತೆ ಮಾಡಲಾಯಿತು.

ಕೊರೋನ ಲಸಿಕೆಗಳನ್ನು ಕೊಡಲಾರಂಭಿಸಿದಾಗಿನಿಂದಲೇ ಅವುಗಳಿಂದಾದ ಅಡ್ಡ ಪರಿಣಾಮಗಳ ಬಗ್ಗೆ ಅನೇಕ ವರದಿಗಳು ಪ್ರಕಟವಾಗುತ್ತಲೇ ಇವೆ. ಕೋವಿಡ್ ಲಸಿಕೆಗಳ ವಿಶೇಷ ಅಡ್ಡ ಪರಿಣಾಮಗಳ ಬಗ್ಗೆ ಬಹುರಾಷ್ಟ್ರೀಯ ಅಧ್ಯಯನವೊಂದರ ವರದಿಯು ಇದೇ ಎಪ್ರಿಲ್ 2ರಂದು ಪ್ರಕಟವಾಗಿದೆ. (Vaccine, 2 April 2024;42(9):2200) ಯುರೋಪ್ (ಡೆನ್ಮಾರ್ಕ್, ಫಿನ್ಲೆಂಡ್, ಫ್ರಾನ್ಸ್, ಸ್ಕಾಟ್ಲೆಂಡ್), ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್ ಮತ್ತು ಅರ್ಜೆಂಟೀನಾಗಳಲ್ಲಿ 21,97,37,904 ಡೋಸ್ ಎಂಆರ್‌ಎನ್‌ಎ ಲಸಿಕೆ ಹಾಗೂ 2,30,93,399 ಡೋಸ್ ಆಕ್ಸ್‌ಫರ್ಡ್ (ಕೋವಿಶೀಲ್ಡ್) ಲಸಿಕೆಗಳನ್ನು ನೀಡಿದ 42 ದಿನಗಳೊಳಗೆ ಕಂಡುಬಂದ ಅಡ್ಡ ಪರಿಣಾಮಗಳನ್ನು ಈ ವರದಿಯಲ್ಲಿ ವಿಶ್ಲೇಷಿಸಲಾಗಿದೆ. ನಿರೀಕ್ಷಿತ ಅಡ್ಡಪರಿಣಾಮಗಳ ಪ್ರಮಾಣಕ್ಕೆ ಹೋಲಿಸಿದರೆ ಆಕ್ಸ್‌ಫರ್ಡ್ ಲಸಿಕೆಯ ಬಳಿಕ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆಯು 3.23 ಪಟ್ಟು, ನರಗಳ ದೌರ್ಬಲ್ಯವುಂಟಾಗುವ ಗೀಲನ್ ಬಾ ಸಮಸ್ಯೆಯು 2.49 ಪಟ್ಟು ಹೆಚ್ಚಿದ್ದವು, ಹೃದಯದ ಸ್ನಾಯುಗಳ ಉರಿಯೂತವು ಆಕ್ಸ್ ಫರ್ಡ್ ಹಾಗೂ ಎಂಆರ್‌ಎನ್‌ಎ ಲಸಿಕೆಗಳೆರಡರಲ್ಲೂ ಉಂಟಾದರೆ, ಮೆದುಳಿನ ಉರಿಯೂತವು ಎಂಆರ್‌ಎನ್‌ಎ ಲಸಿಕೆಯಲ್ಲಿ ಉಂಟಾಗಿತ್ತು ಎಂದು ಈ ವರದಿಯಲ್ಲಿ ಹೇಳಲಾಗಿದೆ. ಗಮನಾರ್ಹ ಸಂಗತಿಯೆಂದರೆ, ಆಕ್ಸ್‌ಫರ್ಡ್ ಲಸಿಕೆಯ 175 ಕೋಟಿ ಡೋಸ್‌ಗಳನ್ನು ಬಳಸಿದ ಭಾರತದ ಅಂಕಿಅಂಶಗಳನ್ನು ಈ ಅಧ್ಯಯನವು ಒಳಗೊಂಡಿಲ್ಲ, ಮಾತ್ರವಲ್ಲ, ದೀರ್ಘಕಾಲಿಕ ಅಡ್ಡ ಪರಿಣಾಮಗಳ ಬಗ್ಗೆಯೂ ಅದರಲ್ಲಿ ಮಾಹಿತಿಯಿಲ್ಲ.

ಕೊರೋನ ಲಸಿಕೆಯಿಂದಾಗಿ ರಕ್ತ ಹೆಪ್ಪುಗಟ್ಟುವ ವಿಶೇಷ ಸಮಸ್ಯೆಯು ಆಕ್ಸ್‌ಫರ್ಡ್ (ಕೋವಿಶೀಲ್ಡ್) ಮತ್ತು ಅದೇ ತರದ ಜಾನ್ಸನ್ ಲಸಿಕೆಯಲ್ಲಿ ಮಾತ್ರವೇ ವರದಿಯಾಗಿದೆ. ಈ ಲಸಿಕೆಗಳನ್ನು ಪಡೆದವರಲ್ಲಿ ಹತ್ತು ಲಕ್ಷಕ್ಕೆ 2-16 ಮಂದಿ ಈ ಸಮಸ್ಯೆಗೀಡಾಗಿದ್ದರು, ಇದು ಆಕ್ಸ್‌ಫರ್ಡ್ ಲಸಿಕೆ ಪಡೆದವರಲ್ಲೇ ಹೆಚ್ಚಿತ್ತು ಎಂದು ಅನ್ಯ ದೇಶಗಳ ಅಧ್ಯಯನಗಳು ವರದಿ ಮಾಡಿವೆ (npj Vaccines. 2022;7:141). ಇದರಲ್ಲೂ ವಿಶೇಷವೆಂದರೆ, ಲಸಿಕೆ ಪಡೆದವರಲ್ಲಿ ರಕ್ತ ಹೆಪ್ಪುಗಟ್ಟುವ ಮಾರಣಾಂತಿಕ ಸಮಸ್ಯೆಯು 65 ವರ್ಷಕ್ಕೆ ಮೇಲ್ಪಟ್ಟವರಲ್ಲಿ ಹತ್ತು ಲಕ್ಷಕ್ಕೆ ಒಬ್ಬರಲ್ಲಷ್ಟೇ ಉಂಟಾದರೆ, 55-64 ವರ್ಷದವರಲ್ಲಿ 10 ಲಕ್ಷಕ್ಕೆ ಮೂವರಿಗೆ, 55 ವರ್ಷಕ್ಕಿಂತ ಕಿರಿಯರಲ್ಲಿ 20,000ಕ್ಕೆ ಒಬ್ಬರಿಂದ 60,000ಕ್ಕೆ ಒಬ್ಬರಿಗೆ, ಅಂದರೆ ಹತ್ತು ಲಕ್ಷಕ್ಕೆ 17ರಿಂದ 50 ಮಂದಿಗೆ, ಉಂಟಾಗಿರುವ ವರದಿಗಳಾಗಿವೆ ಎಂದು ಈ ಅಧ್ಯಯನಗಳು ಹೇಳಿವೆ. ಅಂದರೆ 55 ವರ್ಷಕ್ಕೆ ಕೆಳಗಿನವರಲ್ಲಿ ಕೊರೋನ ಸೋಂಕಿನಿಂದ ಮಾರಣಾಂತಿಕ ಸಮಸ್ಯೆಯಾಗುವುದು 10 ಲಕ್ಷ ಸೋಂಕಿತರಿಗೆ 3ರಿಂದ 20ರಷ್ಟಾದರೆ, ಕೋವಿಶೀಲ್ಡ್ ಲಸಿಕೆಯಿಂದ ಮಾರಣಾಂತಿಕ ಸಮಸ್ಯೆಯಾಗುವುದು ಹತ್ತು ಲಕ್ಷಕ್ಕೆ 17ರಿಂದ 50 ಮಂದಿಗೆ ಎಂದಾಯಿತು; ಅಂದರೆ 55 ವರ್ಷಕ್ಕೆ ಕೆಳಗಿನವರಲ್ಲಿ ಸೋಂಕಿಗಿಂತ ಲಸಿಕೆಯೇ ಹೆಚ್ಚು ಮಾರಣಾಂತಿಕವೆಂದಾಗುತ್ತದೆ, ಲಸಿಕೆಗಿಂತ ಸೋಂಕೇ ಹೆಚ್ಚು ಸುರಕ್ಷಿತವೆನಿಸುತ್ತದೆ. ಅತ್ತ 60 ವರ್ಷಕ್ಕೆ ಮೇಲ್ಪಟ್ಟವರಲ್ಲಿ ಕೊರೋನದಿಂದ ಸಾವುಂಟಾಗುವ ಸಾಧ್ಯತೆಯು ಹತ್ತು ಲಕ್ಷಕ್ಕೆ 60ಕ್ಕಿಂತ ಹೆಚ್ಚಿದ್ದರೆ, ಲಸಿಕೆಯಿಂದ ಅಂತಹ ಸಮಸ್ಯೆಯಾಗುವ ಸಾಧ್ಯತೆಯು ಕೇವಲ ಒಂದರಷ್ಟೇ ಇರುತ್ತದೆ, ಆ ವಯೋಮಾನದಲ್ಲಿ ಸೋಂಕಿಗಿಂತ ಲಸಿಕೆಯೇ ಹೆಚ್ಚು ಸುರಕ್ಷಿತವಾಗುತ್ತದೆ. ಆಕ್ಸ್ ಫರ್ಡ್ ಲಸಿಕೆಯಿಂದ 26,000ಕ್ಕೊಬ್ಬರು ಮೃತರಾದರೆನ್ನುವುದು ಡೆನ್ಮಾರ್ಕಿನಲ್ಲಿ ಮಾರ್ಚ್ 2021ರಲ್ಲೇ ತಿಳಿದಿತ್ತು, ಅಲ್ಲಿ ಆ ಕೂಡಲೇ ಲಸಿಕೆಯನ್ನು ಹಿಂಪಡೆಯಲಾಗಿತ್ತು ಎಂದ ಮೇಲೆ ನಮ್ಮ ದೇಶದಲ್ಲಿ ಆ ಲಸಿಕೆಯನ್ನು ಎಲ್ಲರಿಗೆ ಹಾಕಿಸುವ ಅಗತ್ಯವೇನಿತ್ತು?

ನಮ್ಮ ದೇಶದಲ್ಲಿ ಕೊರೋನ ಲಸಿಕೆಗಳಿಂದ ಆಗಿರಬಹುದಾದ ಸಮಸ್ಯೆಗಳ ಬಗ್ಗೆ ನಿಖರವಾದ ಮಾಹಿತಿಯೇ ಲಭ್ಯವಿಲ್ಲ, ಅಡ್ಡ ಪರಿಣಾಮಗಳನ್ನು ಪ್ರಾಮಾಣಿಕವಾಗಿ ದಾಖಲಿಸಿರುವ ಬಗ್ಗೆ ಖಾತರಿಯೂ ಇಲ್ಲ. ಯುರೋಪಿನಲ್ಲಿ ಆಕ್ಸ್‌ಫರ್ಡ್ ಲಸಿಕೆಯಿಂದ ಸಮಸ್ಯೆಗಳಾದ ಪ್ರಮಾಣದಲ್ಲೇ ಭಾರತದಲ್ಲೂ ಆಗಿದ್ದರೆ, ಕೋವಿಶೀಲ್ಡ್ ಲಸಿಕೆಯಿಂದ ಸುಮಾರು 22,000 ಜನರಲ್ಲಿ ರಕ್ತ ಹೆಪ್ಪುಗಟ್ಟಿ ಮಾರಣಾಂತಿಕ ಸಮಸ್ಯೆಯಾಗಿರಬಹುದು ಎಂದು ಅಂದಾಜಿಸಬೇಕಾಗುತ್ತದೆ. ಕೊರೋನ ನಿಯಂತ್ರಣ ಕ್ರಮಗಳ ಬಗ್ಗೆ ದನಿಯೆತ್ತುತ್ತಲೇ ಬಂದಿರುವ ಅವೇಕನ್ ಇಂಡಿಯಾ ಮೂವ್‌ಮೆಂಟ್ ಸಂಗ್ರಹಿಸಿ ಪ್ರಕಟಿಸಿರುವ ಮಾಹಿತಿಯಲ್ಲಿ ಲಸಿಕೆಗೆ ಸಂಬಂಧಿಸಿದಂತೆ ದಾಖಲಿಸಿರುವ ಸಾವುಗಳ ಸಂಖ್ಯೆಯು 19,273ರಷ್ಟಿದೆ ಎನ್ನುವುದು ಇದಕ್ಕೆ ತಾಳೆಯಾಗುತ್ತದಾದರೂ ಅದರ ಸತ್ಯಾಸತ್ಯತೆಯನ್ನು ಪ್ರಮಾಣೀಕರಿಸಲು ಸಾಧ್ಯವಾಗದು. ಸರಕಾರವು ಸಂಸತ್ತಿನಲ್ಲಿ, ಸರ್ವೋಚ್ಚ ನ್ಯಾಯಾಲಯದಲ್ಲಿ ಮತ್ತು ಮಾಹಿತಿ ಕಾಯ್ದೆಯಡಿಯಲ್ಲಿ ನೀಡಿರುವ ಅಧಿಕೃತ ಮಾಹಿತಿಯನುಸಾರ ನಮ್ಮ ದೇಶದಲ್ಲಿ ಒಟ್ಟು 219.6 ಕೋಟಿ ಡೋಸ್ ಲಸಿಕೆಗಳನ್ನು ನೀಡಿರುವಲ್ಲಿ, 92,114 (ಶೇ. 0.0042) ಅಡ್ಡ ಪರಿಣಾಮಗಳ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 2,782 ಗಂಭೀರ ಸ್ವರೂಪದವುಗಳಾಗಿದ್ದು, 1,148 ಸಾವುಗಳು ಸಂಭವಿಸಿವೆ, ಶೇ. 90ರಷ್ಟು ಡೋಸ್‌ಗಳೂ, ಶೇ.92ರಷ್ಟು ಸಾವುಗಳೂ ಕೋವಿಶೀಲ್ಡ್‌ನದ್ದೇ ಆಗಿವೆ. ಕೆನಡಾ, ಬ್ರೆಝಿಲ್ ಹಾಗೂ ಅರ್ಜೆಂಟೀನಾಗಳಲ್ಲಿ ಲಸಿಕೆಯನ್ನು ಪಡೆದವರಲ್ಲಿ ಶೇ. 0.06 ಮಂದಿಗೆ ಅಡ್ಡ ಪರಿಣಾಮಗಳು ವರದಿಯಾಗಿರುವಾಗ, ಭಾರತದಲ್ಲಿ ಅದಕ್ಕಿಂತ ಹತ್ತು-ಹದಿನೈದು ಪಟ್ಟು ಕಡಿಮೆ ವರದಿಯಾಗಿರುವುದು ಇಲ್ಲಿ ಅಡ್ಡ ಪರಿಣಾಮಗಳನ್ನು ಸರಿಯಾಗಿ ದಾಖಲಿಸದಿರುವುದನ್ನೇ ಸೂಚಿಸುತ್ತದೆ.

ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಮಾರಣಾಂತಿಕ ಸಮಸ್ಯೆಯಾಗಿರುವುದಷ್ಟೇ ಅಲ್ಲ, ಕರುಳು, ಅಕ್ಷಿಪಟಲ, ಕೈಕಾಲುಗಳು ಮುಂತಾದೆಡೆಗಳ ಅಭಿಧಮನಿಗಳಲ್ಲೂ, ಅಪಧಮನಿಗಳಲ್ಲೂ ರಕ್ತ ಹೆಪ್ಪುಗಟ್ಟಿ ತೀವ್ರ ಸಮಸ್ಯೆಗಳಾಗಿರುವ ವರದಿಗಳಾಗಿವೆ. ಮಾತ್ರವಲ್ಲ, ನರಗಳಿಗೆ, ಹೃದಯದ ಸ್ನಾಯುಗಳಿಗೆ ತೀವ್ರತರದ ಸಮಸ್ಯೆಗಳಾಗಿರುವ ವರದಿಗಳೂ ಆಗಿವೆ. ಆದರೆ ಈ ಎಲ್ಲ ಲಸಿಕೆಗಳನ್ನೂ ದೀರ್ಘಕಾಲಿಕ ಅಧ್ಯಯನಗಳಾಗುವ ಮೊದಲೇ, ಕೇವಲ ಎರಡು-ಮೂರು ತಿಂಗಳುಗಳ ಕಾಲ ಅವಸರವಸರದ ಪರೀಕ್ಷೆಗಳನ್ನಷ್ಟೇ ನಡೆಸಿ, ತುರ್ತು ಅನುಮೋದನೆ ನೀಡಿ ಚುಚ್ಚತೊಡಗಿದ್ದರಿಂದ ವೈದ್ಯರಿಗಾಗಲೀ, ಜನಸಾಮಾನ್ಯರಿಗಾಗಲೀ ಈ ಅಡ್ಡ ಪರಿಣಾಮಗಳ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಿರಲಿಲ್ಲ. ಆದ್ದರಿಂದಲೇ ಲಸಿಕೆಗಳ ಬಳಿಕ ಇಂತಹ ಸಮಸ್ಯೆಗಳು ಉಂಟಾದಾಗಲೂ, ಅವನ್ನು ಲಸಿಕೆಗಳಿಗೆ ತಳಕು ಹಾಕದೆ ಅಥವಾ ಲಸಿಕೆಗಳಿಗೆ ಸಂಬಂಧವಿಲ್ಲವೆಂದು ಉದ್ದೇಶಪೂರ್ವಕವಾಗಿಯೇ ತಿರಸ್ಕರಿಸಿ, ದಾಖಲಿಸಲು ಸಾಧ್ಯವಾಗಲಿಲ್ಲ ಅಥವಾ ದಾಖಲಿಸಲಿಲ್ಲ. ಇದೇ ಕಾರಣಕ್ಕೆ ಕೋವಿಶೀಲ್ಡ್ ಲಸಿಕೆಯಿಂದ ಸಮಸ್ಯೆಗಳಾಗಿರುವವರ ಸಂಖ್ಯೆಯು ಹಲವು ಪಟ್ಟು ಹೆಚ್ಚಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಆಕ್ಸ್‌ಫರ್ಡ್ (ಕೋವಿಶೀಲ್ಡ್) ಲಸಿಕೆಯಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆಯುಂಟಾಗುವುದಕ್ಕೆ ಅದರಿಂದ ಹುಟ್ಟುವ ವಿಶೇಷ ಪ್ರತಿಕಾಯವೇ ಕಾರಣವಿರಬಹುದೆಂದು ಮಾರ್ಚ್ 2021ರಲ್ಲೇ ಡೆನ್ಮಾರ್ಕಿನ ವಿಜ್ಞಾನಿಗಳು ಗುರುತಿಸಿದ್ದರು. ಆಕ್ಸ್‌ಫರ್ಡ್ (ಕೋವಿಶೀಲ್ಡ್) ಮತ್ತು ಜಾನ್ಸನ್ ಲಸಿಕೆಗಳಲ್ಲಿ ಕೊರೋನ ವೈರಸಿನ ಮುಳ್ಳಿನ ಪ್ರೊಟೀನಿನ ಜೀನಿಗೆ ಚಿಂಪಾಂಜಿ ಮತ್ತು ಮನುಷ್ಯರಲ್ಲಿ ಸೋಂಕನ್ನುಂಟು ಮಾಡುವ ಅಡಿನೋ ವೈರಸ್ ಕಣಗಳನ್ನು ವಾಹಕಗಳಾಗಿ ಬಳಸಲಾಗಿದ್ದು, ಈ ಎರಡು ಲಸಿಕೆಗಳಲ್ಲಷ್ಟೇ ಪ್ಲೇಟ್ಲೆಟ್ ಕಣಗಳ ವಿರುದ್ಧವಾಗಿರುವ ಪ್ರತಿಕಾಯಗಳು ಹುಟ್ಟುತ್ತವೆ (ಆ್ಯಂಟಿ ಪ್ಲೇಟ್ಲೆಟ್ ಫ್ಯಾಕ್ಟರ್ 4 ಪ್ರತಿಕಾಯ) ಮತ್ತು ರಕ್ತ ಹೆಪ್ಪುಗಟ್ಟುವುದನ್ನು ಪ್ರಚೋದಿಸುತ್ತವೆ ಎನ್ನುವುದನ್ನು ಅನೇಕ ಅಧ್ಯಯನಗಳೀಗ ದೃಢಪಡಿಸಿವೆ. ಇತ್ತೀಚೆಗೆ ಆಸ್ಟ್ರೇಲಿಯದ ಫ್ಲಿಂಡರ್ಸ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನವು ಕೂಡ ಅದನ್ನು ಪುಷ್ಟೀಕರಿಸಿದೆ. ಲಸಿಕೆಯ ಬಳಿಕ ಹುಟ್ಟುವ ಈ ಪ್ರತಿಕಾಯಗಳು ಹೆಚ್ಚಿನವರಲ್ಲಿ (ಶೇ. ಸುಮಾರು 85) 40-50 ದಿನಗಳಲ್ಲಿ ಇಳಿಕೆಯಾಗಿ ಮರೆಯಾಗುವುದಿದ್ದರೂ, ಕೆಲವರಲ್ಲಿ ಆರು ತಿಂಗಳ ನಂತರವೂ ಉಳಿದುಕೊಳ್ಳಬಹುದು, ಶೇ. 3-9 ಮಂದಿಯಲ್ಲಿ ರಕ್ತ ಹೆಪ್ಪುಗಟ್ಟಿಸುವ ಸಾಧ್ಯತೆಯೂ ದೀರ್ಘ ಕಾಲ ಉಳಿಯಬಹುದು ಎಂದು ಕೆಲವು ಅಧ್ಯಯನಗಳು ತೋರಿಸಿವೆ (Journal of Clinical Medicine. 2024;13(4):1012) ಈಗ ಅಲ್ಲಲ್ಲಿ ವರದಿಯಾಗುತ್ತಿರುವ ಹಠಾತ್ ಹೃದಯ ಸ್ತಂಭನ, ಹೃದಯಾಘಾತ ಹಾಗೂ ಮೆದುಳಿನ ಆಘಾತಗಳ ಪ್ರಕರಣಗಳಿಗೂ, ಈ ಲಸಿಕೆ ಹಾಗೂ ಪ್ರತಿಕಾಯಗಳಿಗೂ ಸಂಬಂಧವಿದೆಯೇ ಇಲ್ಲವೇ ಎನ್ನುವ ಬಗ್ಗೆ ಅಧ್ಯಯನಗಳಾಗದೆ ಏನನ್ನೂ ಹೇಳಲಾಗದು.

ಮೂರನೇ ಹಂತದ ಪರೀಕ್ಷೆಗಳಾಗದೆಯೇ, ಅದನ್ನು ನಡೆಸುವುದಕ್ಕೆಂದೇ ತುರ್ತು ಅನುಮೋದನೆ ನೀಡಲಾಗಿದ್ದ ಕೊವಾಕ್ಸಿನ್ ಲಸಿಕೆಯ ಆ ಮೂರನೇ ಹಂತದ ಅಂತಿಮ ವರದಿಯಾಗಲೀ, ಅಡ್ಡ ಪರಿಣಾಮಗಳ ವರದಿಗಳಾಗಲೀ ಪ್ರಕಟವಾಗಿಲ್ಲ. ಕೆಲದಿನಗಳ ಹಿಂದೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ತಜ್ಞರು ಕೊವ್ಯಾಕ್ಸಿನ್ ಪಡೆದವರಲ್ಲಿ ಶೇ.70ರಷ್ಟು ಮಂದಿ ಅಡ್ಡ ಪರಿಣಾಮಗಳನ್ನು ಅನುಭವಿಸಿದ್ದರು ಎಂಬ ವರದಿಯನ್ನು ಪ್ರಕಟಿಸಿದ್ದರು. ಈ ಅಧ್ಯಯನವೇ ದೋಷಪೂರಿತವಾಗಿದೆ, ಅದರಲ್ಲಿ ತಮ್ಮ ಹೆಸರನ್ನು ಸೇರಿಸುವಂತಿಲ್ಲ ಎಂದು ಐಸಿಎಂಆರ್ ಬನಾರಸ್ ವಿಶ್ವವಿದ್ಯಾನಿಲಯಕ್ಕೆ ಎಚ್ಚರಿಕೆ ನೀಡಿತು. ಆ ಅಧ್ಯಯನ ದೋಷಪೂರಿತವಾಗಿದ್ದರೆ, ಅದಕ್ಕಿಂತ ಒಳ್ಳೆಯದಾದ, ಐಸಿಎಂಆರ್ ಹಾಗೂ ಭಾರತ್ ಬಯೋಟೆಕ್ ನಡೆಸಿದ ಅಧ್ಯಯನ ಇದ್ದರೆ ತೋರಿಸಿ ಎಂದು ಕೇಳಿದ್ದಕ್ಕೆ ಇದುವರೆಗೂ ಉತ್ತರ ಬಂದಿಲ್ಲ!

ಒಟ್ಟಿನಲ್ಲಿ, ನಮ್ಮ 95 ಕೋಟಿ ಜನರಿಗೆ ಸರಿಯಾದ ಮಾಹಿತಿ ನೀಡದೆ, ಬಗೆಬಗೆಯ ಒತ್ತಡ ಹಾಕಿ ಅನಗತ್ಯವಾಗಿದ್ದರೂ ಲಸಿಕೆ ಹಾಕಿಸಿದ ನಮ್ಮ ಸರಕಾರ, ವೈದ್ಯರು ಹಾಗೂ ವೈದ್ಯಕೀಯ ಸಂಘಟನೆಗಳು ಮತ್ತು ಲಸಿಕೆ ತಯಾರಕ ಕಂಪೆನಿಗಳು ಈಗ ಜನರಿಗೆ ಪ್ರಾಮಾಣಿಕವಾದ, ಸಾಕ್ಷ್ಯಾಧಾರಿತವಾದ ಉತ್ತರಗಳನ್ನು ಹೇಳುವ ಕಾಲ ಬಂದಿದೆ. ಅಸ್ತ್ರಜೆನೆಕ ಕಂಪೆನಿಯು ನ್ಯಾಯಾಲಯದಲ್ಲಿ ಅಡ್ಡ ಪರಿಣಾಮಗಳನ್ನು ಒಪ್ಪಿಕೊಂಡ ಮೇಲೆ, ಮಾಧ್ಯಮವೊಂದಕ್ಕೆ ಮಾತಾಡುತ್ತಾ ರಾಜ್ಯದ ವೈದ್ಯರೊಬ್ಬರು ಕೊರೋನ ಲಸಿಕೆ ಹಾಕಿದ್ದನ್ನು ಬಸ್ಸು-ರೈಲುಗಳ ಪ್ರಯಾಣಕ್ಕೆ ಹೋಲಿಸಿದ್ದರು. ಬಸ್ಸು-ರೈಲು-ವಿಮಾನಗಳಲ್ಲಿ ಹೋಗುವವರು ಅವು ಅಪಘಾತಕ್ಕೀಡಾಗಬಹುದೆಂಬ ಅರಿವಿದ್ದೂ ಅವುಗಳಲ್ಲಿ ಹತ್ತಿ ಹೋಗುವಂತೆಯೇ ಲಸಿಕೆ ಪಡೆಯುವಾಗಲೂ ಕೆಲವೊಮ್ಮೆ ಅಪಘಾತವಾಗಬಹುದು, ಅದೇನೂ ದೊಡ್ಡದಲ್ಲ ಎಂದಿದ್ದರು. ಬಸ್ಸು-ರೈಲುಗಳಲ್ಲಿ ಹೋಗುವವರು ಅಪಘಾತದ ಸಾಧ್ಯತೆಗಳ ಬಗ್ಗೆ ಸರಿಯಾದ ಅರಿವಿದ್ದೇ ತಾವೇ ಸ್ವತಃ ಟಿಕೆಟ್ ಪಡೆದು ತಮ್ಮಿಷ್ಟ ದಲ್ಲೇ ಅವುಗಳಲ್ಲಿ ಹೋಗುತ್ತಾರೆ. ಆದರೆ ಕೋವಿಡ್ ಲಸಿಕೆ ಎಂಬ ಬಸ್ಸಿನಲ್ಲಿ ಅಪಘಾತವಾಗುವ ಬಗ್ಗೆ ಹೇಳದೆಯೇ, ಅದರಲ್ಲಿ ಹೋಗ ದಿದ್ದರೆ ಅಪಘಾತವಾಗುತ್ತದೆ ಎಂದು ಹೆದರಿಸಿ, ಉಚಿತವಾಗಿ ಸರಕಾರವೇ ಬಸ್ಸಿನೊಳಕ್ಕೆ ನೂಕಿ, ಅದು ಒಂದಷ್ಟು ದೂರ ಹೋಗು ತ್ತಿದ್ದಾಗ ಅಪಘಾತವಾಗಬಹುದೆಂದು ಹೆದರಿಸಿದಂತಾಗಿದೆ. ಆಗ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸಿ, ಈಗ ಏನೇನೋ ಹೇಳಿ ಅದನ್ನು ಸಮರ್ಥಿಸಬೇಕಾದ ಕಷ್ಟಕ್ಕೀಡಾಗಿರುವ ವೈದ್ಯರು ಈ ಎರಡು ಬಸ್ಸುಗಳ ವ್ಯತ್ಯಾಸವನ್ನು ಅರಿಯಬೇಕಾದ ಅಗತ್ಯವಿದೆ.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಡಾ. ಶ್ರೀನಿವಾಸ ಕಕ್ಕಿಲ್ಲಾಯ

contributor

Similar News