‘‘ಬಡತನ ಶೇ.5ಕ್ಕೆ ಇಳಿದಿದೆ’’ ಎಂಬ ಸರಕಾರಿ ಹೇಳಿಕೆಯಲ್ಲಿ ಸತ್ಯಾಂಶ ಇದೆಯೇ?

ಗೃಹಬಳಕೆ ವೆಚ್ಚ ಸಮೀಕ್ಷೆ ವರದಿ ಉಲ್ಲೇಖಿಸಿ ನೀತಿ ಆಯೋಗ ಯಾವ ಕಾರಣವೂ ಇಲ್ಲದೆ ಮೋದಿ ಸರಕಾರವನ್ನು ಕೊಂಡಾಡಿದೆ. ಯಾವ ಆಧಾರವನ್ನೂ ಕೊಡದೆ, ದೇಶದಲ್ಲಿ ಬಡತನ ಶೇ.5ಕ್ಕಿಂತ ಕಡಿಮೆಯಾಗಿದೆ ಎನ್ನುತ್ತಾ, ಅದಕ್ಕಾಗಿ ಮೋದಿ ಸರಕಾರಕ್ಕೆ ಶಹಬ್ಬಾಸ್ ಹೇಳಿದೆ. 2011-12ಕ್ಕೆ ಹೋಲಿಸಿದರೆ 2022-23ರಲ್ಲಿ ಬಡತನ ಕಡಿಮೆಯಾಗಿದೆ ಎನ್ನುವುದರ ಬಗ್ಗೆ ಗೃಹಬಳಕೆ ವೆಚ್ಚ ಸಮೀಕ್ಷೆಯಲ್ಲಿ ಏನನ್ನೂ ಹೇಳುವುದಿಲ್ಲ. ಆದರೆ ನೀತಿ ಆಯೋಗ ಮಾತ್ರ ವಂದಿಮಾಗಧರ ಕೆಲಸವನ್ನು ಬಹಳ ನಿಯತ್ತಿನಿಂದ ಮಾಡಿದೆ.

Update: 2024-03-01 05:16 GMT

ದೇಶದಲ್ಲೀಗ ಶೇ.5ರಷ್ಟು ಜನ ಮಾತ್ರ ಬಡವರು ಎಂಬ ಹೊಸ ಕಥೆಯೊಂದನ್ನು ಮೋದಿ ಸರಕಾರ ಹೇಳತೊಡಗಿದೆ. ಹೀಗೆ ಹೇಳುವಾಗ ಅದು ಯಾವುದೇ ಆಧಾರವನ್ನು ಕೊಡುತ್ತಿಲ್ಲ. ಆದರೆ ಮೋದಿ ಸರಕಾರ ಏನಾದರೂ ಹೇಳಿಬಿಟ್ಟರೆ ಸಾಕು. ತುತ್ತೂರಿ ಬಾರಿಸುವುದಕ್ಕೆ ಮಡಿಲ ಮೀಡಿಯಾಗಳು ಕಾದಿರುತ್ತವೆ.

ಗೃಹಬಳಕೆ ವೆಚ್ಚ ಸಮೀಕ್ಷೆ ವರದಿ ಉಲ್ಲೇಖಿಸಿ ನೀತಿ ಆಯೋಗ ಯಾವ ಕಾರಣವೂ ಇಲ್ಲದೆ ಮೋದಿ ಸರಕಾರವನ್ನು ಕೊಂಡಾಡಿದೆ. ಯಾವ ಆಧಾರವನ್ನೂ ಕೊಡದೆ, ದೇಶದಲ್ಲಿ ಬಡತನ ಶೇ.5ಕ್ಕಿಂತ ಕಡಿಮೆಯಾಗಿದೆ ಎನ್ನುತ್ತಾ, ಅದಕ್ಕಾಗಿ ಮೋದಿ ಸರಕಾರಕ್ಕೆ ಶಹಬ್ಬಾಸ್ ಹೇಳಿದೆ.

2011-12ಕ್ಕೆ ಹೋಲಿಸಿದರೆ 2022-23ರಲ್ಲಿ ಬಡತನ ಕಡಿಮೆಯಾಗಿದೆ ಎನ್ನುವುದರ ಬಗ್ಗೆ ಗೃಹಬಳಕೆ ವೆಚ್ಚ ಸಮೀಕ್ಷೆಯಲ್ಲಿ ಏನನ್ನೂ ಹೇಳುವುದಿಲ್ಲ. ಆದರೆ ನೀತಿ ಆಯೋಗ ಮಾತ್ರ ವಂದಿಮಾಗಧರ ಕೆಲಸವನ್ನು ಬಹಳ ನಿಯತ್ತಿನಿಂದ ಮಾಡಿದೆ.

ಪರಿಣಿತರೇ ಹೇಳುವಂತೆ, ಬಳಕೆ ವೆಚ್ಚ ಸಮೀಕ್ಷೆಯನ್ನು ಹಿಂದಿನ ಸಮೀಕ್ಷೆಗಳ ಜೊತೆ ಹೋಲಿಸುವ ಕ್ರಮವಿಲ್ಲ. ಅಷ್ಟಕ್ಕೂ ಈ ಸಲದ ಸಮೀಕ್ಷೆ ಹಿಂದಿನ ಸಮೀಕ್ಷೆಗಳಿಗಿಂತಲೂ ಬೇರೆಯದೇ ಆದ ವಿಧಾನಗಳನ್ನು ಆಧರಿಸಿದ್ದು ಎಂದೇ ಅದರಲ್ಲಿ ಸ್ಪಷ್ಟವಿದೆ. ಆದರೆ, ಇದೆಲ್ಲವನ್ನೂ ತಿಳಿದೇ ಇರುವ ನೀತಿ ಆಯೋಗದ ಸಿಇಒ ಮಾತ್ರ ಈ ಸಲದ ಸಮೀಕ್ಷೆಯನ್ನು ಹಿಂದಿನ ಸಮೀಕ್ಷೆಗಳಿಗೆ ಹೋಲಿಸಿ, ಬಡತನ ಕಡಿಮೆಯಾಗಿದೆ ಎಂದು ಮೋದಿ ಸರಕಾರವನ್ನು ಹೊಗಳಲು ಕಸರತ್ತು ಮಾಡಿದ್ದಾರೆ.

ಹಿಂದಿನ ಯೋಜನಾ ಆಯೋಗದಂತೆ ಈ ನೀತಿ ಆಯೋಗದ ಬಳಿ ಈಗಿನ ಬಡತನದ ಮಟ್ಟವನ್ನು ಅಳೆಯುವ ಯಾವ ಮಾನದಂಡಗಳೂ ಇಲ್ಲ. ಅದಕ್ಕಿಂತ ಹೆಚ್ಚಾಗಿ, ನೈಜ ವೇತನಗಳೇ ಕುಸಿದಿರುವಾಗ ಬಳಕೆ ವೆಚ್ಚ ಜಾಸ್ತಿಯಾಗಿದೆ ಎಂದು ವಾದಿಸಲಾಗುತ್ತಿರುವುದು ಕೂಡ ವಿಚಿತ್ರವಾಗಿದೆ.

10 ವರ್ಷಗಳ ಬಳಿಕ ಗೃಹಬಳಕೆ ವೆಚ್ಚ ಸಮೀಕ್ಷೆ (ಎಚ್ ಸಿ ಇಎಸ್) ಬಿಡುಗಡೆ ಮಾಡಲಾಗಿದೆ. ಅದರ ಪ್ರಕಾರ,

2022-23ರಲ್ಲಿ ಗೃಹಬಳಕೆ ವೆಚ್ಚ ಗ್ರಾಮೀಣ ಕುಟುಂಬಗಳಲ್ಲಿ 3,773 ರೂ.ಗೆ ಏರಿಕೆಯಾಗಿದೆ. ನಗರ ಪ್ರದೇಶಗಳಲ್ಲಿನ ಕುಟುಂಬಗಳಲ್ಲಿ 6,459 ರೂ.ಗೆ ಏರಿದೆ.

ದೇಶದಲ್ಲಿ ಬಡತನ ಶೇ.5ಕ್ಕೆ ಇಳಿದಿದೆ ಎಂದು ಹೇಳಲು ಈ ಅಂಕಿ ಅಂಶಗಳನ್ನು ಬಳಸಲಾಗಿದೆ.

ಇದರ ಹೊರತಾಗಿ ಬಡತನ ನಿರ್ಮೂಲನೆಯ ಯಾವುದೇ ಉಲ್ಲೇಖಗಳಿಲ್ಲ ಅಥವಾ ಯಾವ ಲೆಕ್ಕಾಚಾರದಲ್ಲಿ ಬಡತನ ಶೇ.5ಕ್ಕೆ ಇಳಿದಿದೆ ಎಂಬ ಸ್ಪಷ್ಟ ವಿವರಗಳೂ ಇಲ್ಲ. ಅನುಪಾತಗಳ ಆಧಾರದ ತಾಂತ್ರಿಕ ಲೆಕ್ಕಾಚಾರ ಇದೆಯೇ ಹೊರತು ವಾಸ್ತವಿಕ ಅಂಶಗಳೊಡನೆ ಹೋಲಿಕೆ ಮಾಡಲಾಗಿಲ್ಲ. ವಾರ್ಷಿಕವಾಗಿ ಹೋಲಿಕೆ ಮಾಡುವಾಗ ನಿಜವಾದ ಖರ್ಚು ಮತ್ತು ಬಳಕೆಯ ಪ್ರಮಾಣದ ಮಾಹಿತಿಯ ಕೊರತೆಯೂ ಇದೆಯೆನ್ನಲಾಗಿದೆ.

ಆರ್ಥಿಕ ಬೆಳವಣಿಗೆ ಮತ್ತು ಪ್ರಗತಿಯ ಲೆಕ್ಕಾಚಾರ ಹೇಗಿರುತ್ತದೆಂದರೆ, ಕುಟುಂಬದ ಒಟ್ಟು ವೆಚ್ಚದಲ್ಲಿ ಆಹಾರದ ವೆಚ್ಚದ ಪಾಲು ಕಡಿಮೆಯಾಗಿರುತ್ತದೆ. ಆದರೆ ಭಾರತದಲ್ಲಿ ಸದ್ಯದ ಆಹಾರ ವೆಚ್ಚದ ಮಟ್ಟ ಗ್ರಾಮೀಣ ಕುಟುಂಬಗಳಲ್ಲಿ ಶೇ.46.38 ಇದ್ದರೆ, ನಗರ ಪ್ರದೇಶಗಳ ಕುಟುಂಬಗಳಲ್ಲಿ ಶೇ.39.17 ಇದೆ. ಇದು ಇತರ ದೇಶಗಳಿಗೆ ಹೋಲಿಸಿಕೊಂಡರೆ ತುಂಬಾ ಹೆಚ್ಚು.

ಅಮೆರಿಕದಲ್ಲಿ ಆಹಾರ ಬಳಕೆ ವೆಚ್ಚ ಶೇ.6.4 ಮಾತ್ರ. ಸಿಂಗಾಪುರದಲ್ಲಿ ಈ ಪ್ರಮಾಣ ಶೇ.6.9 ಇದೆ.

ಆಹಾರ ವೆಚ್ಚದ ಪಾಲು ಇಷ್ಟೊಂದು ಹೆಚ್ಚಿದ್ದರೆ ಅದನ್ನು ಆರ್ಥಿಕ ಅಭಿವೃದ್ಧಿಯ ಸಂಕೇತವಾಗಿ ಪರಿಗಣಿಸಲಾಗುವುದಿಲ್ಲ.

ಇದಕ್ಕಿಂತಲೂ ಗಮನಿಸಬೇಕಿರುವ ಮತ್ತೊಂದು ಬಹಳ ಮುಖ್ಯ ಸಂಗತಿಯೆಂದರೆ ದೇಶದಲ್ಲಿ ಉದ್ಯೋಗದ ಬೆಳವಣಿಗೆ ಮತ್ತು ವೇತನ ಬಹಳ ಕಡಿಮೆ ಮಟ್ಟದಲ್ಲಿದೆ.

ವಾಸ್ತವ ಹೀಗಿರುವಾಗ ಬಡತನ ಕಡಿಮೆಯಾಗಿದೆ ಎಂದು ಯಾವ ಲೆಕ್ಕದಲ್ಲಿ ಹೇಳಲಾಗುತ್ತಿದೆ?

2004-05ರಿಂದ 2011-12ರವರೆಗೆ ನೈಜ ವೇತನದಲ್ಲಿ ಸ್ಪಷ್ಟವಾದ ಮತ್ತು ನಿರಂತರ ಏರಿಕೆ ಕಂಡುಬಂದಿತ್ತು. ಆದರೆ 2013ರಿಂದ 2017ರ ಅವಧಿಯಲ್ಲಿ ವೇತನಗಳು ಇದ್ದಲ್ಲೇ ಉಳಿದಿವೆ. ಇದೇ ವೇಳೆ, 2011-12ರಲ್ಲಿ 10 ಮಿಲಿಯನ್‌ನಷ್ಟಿದ್ದ ನಿರುದ್ಯೋಗ 2022ರಲ್ಲಿ ಸುಮಾರು 38 ಮಿಲಿಯನ್‌ಗೆ ಏರಿದೆ.

ಇನ್ನೂ ಒಂದು ವಿಚಾರವನ್ನು ಗಮನಿಸಬೇಕು.

ಭಾರತದಲ್ಲಿ 2021-22ರಲ್ಲಿ 19 ಕೋಟಿ ಕಾರ್ಮಿಕರ ಗಳಿಕೆ ದಿನಕ್ಕೆ 100 ರೂ. ಮಾತ್ರ. ಅಂದರೆ ಅವರು ಅತಿ ನಿಕೃಷ್ಟ ಸ್ಥಿತಿಯಲ್ಲಿರುವ ಬಡವರು ಎಂದರ್ಥ. 2011-12ರಲ್ಲಿ ಇಂಥ ಕಾರ್ಮಿಕರ ಪ್ರಮಾಣ ಕೇವಲ 10 ಕೋಟಿ ಇತ್ತು. ಇತ್ತೀಚಿನ ದಿನಗಳಲ್ಲಿ ಬಡ ಕಾರ್ಮಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ.

2021-22ರಲ್ಲಿ ದಿನಕ್ಕೆ 100ರಿಂದ 200 ರೂ. ಒಳಗೆ ಆದಾಯ ಗಳಿಸುವ ಕಾರ್ಮಿಕರ ಪ್ರಮಾಣ 14.4 ಕೋಟಿ. ಇಂಥವರನ್ನು ಬಡವರು ಮತ್ತು ದುರ್ಬಲರೆಂದು ಪರಿಗಣಿಸಲಾಗುತ್ತದೆ. ಇದೇ ಸಮಯದಲ್ಲಿ ಇನ್ನೂ 12.7 ಕೋಟಿ ಕಾರ್ಮಿಕರು ದಿನಕ್ಕೆ 200ರಿಂದ 300 ರೂ. ಒಳಗಿನ ಗಳಿಕೆ ಹೊಂದಿದ್ದಾರೆ. ಇವರು ತೀರಾ ಬಡವರಲ್ಲದಿದ್ದರೂ ದುರ್ಬಲರಂತೂ ಹೌದು.

ಇಷ್ಟೊಂದು ಬಡತನದಲ್ಲಿರುವ ಕಾರ್ಮಿಕರು ಮತ್ತವರ ಕೂಲಿಯಲ್ಲಿನ ಕುಸಿತ ಈ ದೇಶದ ಕಾರ್ಮಿಕ ಮಾರುಕಟ್ಟೆಯ ದಯನೀಯ ಸ್ಥಿತಿಯನ್ನೇ ಸೂಚಿಸುತ್ತದೆ.

ಇದೆಲ್ಲವನ್ನೂ ಮರೆಮಾಚಿ, ಬಡತನ ಕಡಿಮೆಯಾಗಿದೆ ಎಂದು ಹೇಳುವುದು, ಮೋದಿ ಸರಕಾರ ಬಡತನವನ್ನು ನಿರ್ಮೂಲನೆ ಮಾಡಿದೆ ಎಂದು ಅದರ ಹಿಂಬಾಲಕರು ಬಡಾಯಿ ಕೊಚ್ಚುವುದು ಎಂಥ ಭಂಡತನ ಅಲ್ಲವೇ?

ಬರೀ ಮಾತು, ಭಾಷಣಗಳಲ್ಲಿಯೇ ಮೋದಿ ಸರಕಾರ ದಶಕ ಮುಗಿಸಿರುವಾಗ ಇನ್ನೂ ಎಲ್ಲಿಯವರೆಗೆ ಇದೇ ಸುಳ್ಳುಗಳನ್ನು ಹೇಳಿಕೊಂಡು ಹೋಗಲಾಗುತ್ತದೆ?

ಈ ದೇಶದಲ್ಲಿನ ಹಸಿವು, ಬಡತನ, ನಿರುದ್ಯೋಗ, ಆರ್ಥಿಕತೆ ಇವುಗಳೆಲ್ಲದರ ಬಗೆಗಿನ ವಾಸ್ತವವನ್ನು ಹೇಳುವ ವರದಿಗಳನ್ನು ಸುಳ್ಳೆಂದು ತಳ್ಳಿಹಾಕುವ ಮೋದಿ ಸರಕಾರ, ವಾಸ್ತವವನ್ನು ಮರೆಮಾಚಿ ಕೊಡುವ ಚಿತ್ರ ಮಾತ್ರ ಸುಳ್ಳಿನ ಅಂತೆ ಕಂತೆಯೇ ಆಗಿದೆ ಎಂಬುದು ಈಗಾಗಲೇ ಹಲವಾರು ಸಲ ಸಾಬೀತಾಗಿರುವ ಸಂಗತಿ.

ನಿರುದ್ಯೋಗವಂತೂ ಅತ್ಯಂತ ಚಿಂತಾಜನಕ ಎನ್ನುವಷ್ಟು ಪ್ರಮಾಣದಲ್ಲಿದೆ. ದುಡಿದು ಮನೆಗೆ ಆಸರೆ ಆಗಬೇಕಿದ್ದ ಯುವಕರು ಹತಾಶರಾಗಿದ್ದಾರೆ. ಬೇರೆ ದಾರಿ ಕಾಣದೆ ಬೀದಿಗಿಳಿಯುತ್ತಿದ್ದಾರೆ. ಕೆಲಸ ಸಿಗುವುದಾದರೆ ಯುದ್ಧಕ್ಕೆ ಇಳಿದಿರುವ ಇಸ್ರೇಲ್‌ಗೆ ಹೋಗಲೂ ಸಿದ್ಧವಾಗಿದ್ದಾರೆ. ಇನ್ನು ತೀರಾ ಹತಾಶರಾಗಿ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಎಂದು ಸರಕಾರದ ಅಂಕಿ ಅಂಶಗಳೇ ಹೇಳುತ್ತಿವೆ.

ಇಷ್ಟಾದ ಮೇಲೂ ಮತ್ತದೇ ಸುಳ್ಳು, ಅದೇ ಭಂಡತನ. ಯಾಕೆ ಇಂಥ ಗಂಭೀರ ಸತ್ಯಗಳನ್ನು ಮರೆಮಾಚಿ ಜನತೆಯನ್ನು ಕತ್ತಲಲ್ಲಿಡಲಾಗುತ್ತಿದೆ?

ಮತ್ತು ಸುಳ್ಳುಗಳನ್ನೇ ಹೇಳಿಕೊಂಡು, ಈ ದೇಶದ ಜನತೆಗೆ ದ್ರೋಹವನ್ನೇ ಬಗೆದು ಇವರು ಸಾಧಿಸುವುದಾದರೂ ಏನನ್ನು?

ಕೃಪೆ: thewire.in

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸಂತೋಷ್ ಮೆಹ್ರೋತ್ರಾ ಮತ್ತು ರಾಕೇಶ್ ರಂಜನ್ ಕುಮಾರ್ - thewire.in

contributor

Similar News