ವಿವೇಕಾನಂದರನ್ನು ಅಸಹಿಷ್ಣು ಸೈದ್ಧಾಂತಿಕ ಚೌಕಟ್ಟಿನಲ್ಲಿ ತರುವುದು ಸಾಧ್ಯವೇ ಇಲ್ಲ
ವಿವೇಕಾನಂದರನ್ನು ಹಿಂದುತ್ವದ ಪರಧರ್ಮದ್ವೇಷಿ, ಅಸಹಿಷ್ಣು ಸೈದ್ಧಾಂತಿಕ ಚೌಕಟ್ಟಿನಲ್ಲಿ ತರುವುದು ಸಾಧ್ಯವೇ ಇಲ್ಲ. ಹಾಗೆ ಮಾಡಲು ವಿವೇಕಾನಂದರ ಎಲ್ಲಾ ಬರಹ, ಭಾಷಣ ಹಾಗೂ ಪತ್ರಗಳನ್ನು ಬಚ್ಚಿಡಬೇಕಾಗುತ್ತ್ತದೆ ಅಥವಾ ನಾಶ ಮಾಡಬೇಕಾಗುತ್ತದೆ. ಇಂದಿನ ದಿನಗಳಲ್ಲಿ ಇದು ಅಸಾಧ್ಯವೇನೂ ಅಲ್ಲ. ಖಂಡಿತವಾಗಿಯೂ ನನಗೆ ಮತ್ತು ಇಂದಿನ ತಲೆಮಾರಿನವರಿಗೆ ವಿವೇಕಾನಂದರ ಚಿಂತನೆಯ ಕೆಲವು ವೈರುಧ್ಯಗಳ ಬಗ್ಗೆ ಅಸಮ್ಮತಿ ಇದೆ. ಆದರೆ 39ನೇ ವರ್ಷದಲ್ಲಿ ತೀರಿಕೊಂಡ ಅವರು ಜಗತ್ತು ಕಂಡ ಮಹಾನ್ ಪ್ರತಿಭಾವಂತರು. ವೈಚಾರಿಕತೆಯ ಕ್ರಿಯಾಶೀಲರು. ಜನವರಿ 12ರಂದು ಯುವ ಜನತೆ ಆಚರಿಸುವ ಸಂಭ್ರಮ ಇರಲಿ. ನಾನು ಹೇಳಬೇಕಾದದ್ದು ಎರಡೇ ಪದಗಳು. ರೀಡ್ ಹಿಮ್. ಅವರನ್ನು ಓದಿ. ವ್ಯಾಖ್ಯಾನಗಳನ್ನು ಓದಬೇಡಿ. ಸೈದ್ಧಾಂತಿಕ ಅಪಸವ್ಯಗಳನ್ನು ನಂಬಬೇಡಿ. ಆಗ ನಿಮಗೆ ಒಬ್ಬ ಅದ್ಭುತ ಪ್ರತಿಭೆಯ ಸಾಂಗತ್ಯ ದೊರೆಯುತ್ತದೆ.
ಆಧುನಿಕ ರಾಜಕೀಯದ ಬಹು ಸಂಕೀರ್ಣವಾದ ಅಂಶವೆಂದರೆ ಸೈದ್ಧಾಂತಿಕ ಸಮರ್ಥನೆಗಾಗಿ ಗತಕಾಲವನ್ನು ಬಳಸಿಕೊಳ್ಳುವುದಾಗಿದೆ. ಗತ ಕಾಲದ ಐತಿಹ್ಯಗಳನ್ನು, ಚಾರಿತ್ರಿಕ ವಾಸ್ತವಾಂಶಗಳನ್ನು ತಮ್ಮ ರಾಜಕೀಯದ ಹಿಂದಿರುವ ಸಿದ್ಧಾಂತಗಳಿಗೆ ಬಳಸಿಕೊಳ್ಳುವುದು ಇಂದಿನ ಕಾಲದಲ್ಲಿ ಅನಿವಾರ್ಯವಾಗಿ ಬಿಟ್ಟಿದೆ. ಈ ಕೆಲಸದಲ್ಲಿ ಮುಖ್ಯವಾಗಿರುವುದೆಂದರೆ, ಗತಕಾಲದ ವ್ಯಕ್ತಿಗಳನ್ನು, ವ್ಯಕ್ತಿತ್ವಗಳನ್ನು, ಚರಿತ್ರೆಗಳನ್ನು ಸೈದ್ಧಾಂತಿಕ ಅಗತ್ಯಗಳಿಗೆ ತಕ್ಕಹಾಗೆ ಪುನರ್ ಆವಿಷ್ಕಾರ ಮಾಡುವುದು, ಪುನರ್ ನಿರ್ಮಾಣ ಮಾಡುವುದು. ಅವರನ್ನು ಪ್ರಭಾವಿ ಸಂಕೇತಗಳಾಗಿ ಬಳಸಿಕೊಳ್ಳುವುದು. ವಿಶೇಷವೆಂದರೆ ಈ ಪ್ರಕ್ರಿಯೆಯಲ್ಲಿ ಹೆಚ್ಚಾಗಿ ಕಲ್ಪಿತ ಅಥವಾ ಉದ್ದೇಶಪೂರ್ವಕವಾಗಿ ತಿರುಚಿರುವ ಸಂಗತಿಗಳೇ ಹೆಚ್ಚಾಗಿರುತ್ತವೆ. ಕೆಲವು ಸಂದರ್ಭಗಳಲ್ಲಿ ಗೊತ್ತಿರುವ ಅಥವಾ ದಾಖಲೆಯಾಗಿರುವ ವಾಸ್ತವಾಂಶಗಳು ಇರುತ್ತವೆ. ಆದರೆ ಅವುಗಳ ವ್ಯಾಖ್ಯಾನವು ಸಮಸ್ಯಾತ್ಮಕವಾಗಿರುತ್ತದೆ. ಇಂಥ ಒಂದು ಉದಾಹರಣೆಯೆಂದರೆ ವಿವೇಕಾನಂದರದು. ಹಾಗೆ ನೋಡಿದರೆ ಹತ್ತೊಂಬತ್ತನೇ ಶತಮಾನದ ವಿವೇಕಾನಂದರು ತೀರಾ ಗತಕಾಲಕ್ಕೆ ಸೇರಿದವರಲ್ಲ. ಅಲ್ಲದೆ ಅವರ ಬರಹಗಳು, ಭಾಷಣಗಳು ಕೆಲವು ಸಂಭಾಷಣೆಗಳು ಕೂಡ ಮುದ್ರಣ ರೂಪದಲ್ಲಿ ಲಭ್ಯವಿವೆ. ಅನೇಕ ಭಾರತೀಯ ಹಾಗೂ ವಿದೇಶಿ ವಿದ್ವಾಂಸರು ಅವರನ್ನು ಕುರಿತು ಸಂಶೋಧನೆ ಮಾಡಿದ್ದಾರೆ. ವಿಪುಲವಾಗಿ ಬರೆದಿದ್ದಾರೆ. ಅವರ ಕೃತಿಗಳು ಸುಲಭವಾಗಿ ಲಭ್ಯವಾಗುತ್ತಿವೆ. ಸಮಸ್ಯೆ ಇರುವುದು ಅವರ ಬರಹ, ಚಿಂತನೆ ಹಾಗೂ ಕ್ರಿಯೆಗಳು ಅದೆಷ್ಟು ಹೇರಳವಾಗಿದ್ದವು, ಸಾಂದರ್ಭಿಕವಾಗಿದ್ದವು ಸಂಕೀರ್ಣವಾಗಿದ್ದವು ಎಂದರೆ ಪರಸ್ಪರ ವಿರುದ್ಧವಾದ ಸಿದ್ಧಾಂತಗಳು ಹಾಗೂ ಸಂಕಥನಗಳು ಅವರನ್ನು ಪರಸ್ಪರ ವಿರುದ್ಧವಾದ ವ್ಯಾಖ್ಯಾನಗಳಿಗೆ ಬಳಸಿಕೊಳ್ಳಬಲ್ಲವು. ಉದಾಹರಣೆಗೆ ಅವರ ಜೀವಿತ ಕಾಲದಲ್ಲಿಯೇ, ಅವರ ಅತ್ಯಂತ ಕ್ರಿಯಾಶೀಲವಾದ ಅವಧಿಯಲ್ಲಿಯೇ ಈ ವಿದ್ಯಮಾನವನ್ನು ಗುರುತಿಸಬಹುದಾಗಿದೆ. ಶಿಕಾಗೋನಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಮಾಡಿದ ಪ್ರಸಿದ್ಧ ಭಾಷಣದಿಂದಾಗಿ ಅವರು ಒಂದೇ ದಿನದಲ್ಲಿ ಅಮೆರಿಕದ ನಂತರ ಇಡೀ ಪಶ್ಚಿಮದ ಅತ್ಯಂತ ಜನಪ್ರಿಯ ವ್ಯಕ್ತಿತ್ವವಾಗಿ ಮಾರ್ಪಟ್ಟರು. ಇದಕ್ಕೆ ಅನೇಕ ಸಮಕಾಲೀನ ಕಾರಣಗಳಿವೆೆ. ಅವರು ದಾಖಲಿಸಿರುವಂತೆ ಈ ಸಮ್ಮೇಳನವನ್ನು ಆಯೋಜಿಸಿದವರು ಪ್ರೊಟೆಸ್ಟಂಟ್ ಕ್ರೈಸ್ತ ಮತದವರು. ಅವರು ಎಲ್ಲಾ ಧರ್ಮಗಳ ಬಗ್ಗೆ ಉದಾರವಾಗಿ ಇರಲಿಲ್ಲ. ಅಲ್ಲದೆ ಮಾತಾಡುವ ವಿರುದ್ಧವೂ ಇರಲಿಲ್ಲ. ಆದರೆ ಶ್ರೀಲಂಕೆಯ ಬೌದ್ಧ ವಿದ್ವಾಂಸ ಅನಾಗರಿಕ ಧರ್ಮಪಾಲ್‌ರನ್ನು, ಗಾಂಧಿ ಎನ್ನುವ ವ್ಯಕ್ತಿಯನ್ನು ಮತ್ತು ಥಿಯೋಸಫಿ ಸಂಸ್ಥೆಯ ಪ್ರತಿನಿಧಿಯನ್ನು ಭಾರತೀಯ ಧರ್ಮಗಳ ಪರವಾಗಿ ಆಹ್ವಾನಿಸಿರುತ್ತಾರೆ. ವಿವೇಕಾನಂದರು ಅಧಿಕೃತ ಆಹ್ವಾನಿತರು ಅಥವಾ ಪ್ರತಿನಿಧಿಗಳು ಆಗಿರುವುದಿಲ್ಲ. ಅನೇಕ ಅನಿರೀಕ್ಷಿತವಾದ ಘಟನೆಗಳಿಂದಾಗಿ ಅವರಿಗೆ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ‘‘ಮುಂದಿನದು ಇತಿಹಾಸ’’ ಎನ್ನುತ್ತೇವಲ್ಲ ಹಾಗೆ. ತಮ್ಮ ಭಾಷಣದಿಂದ ಅವರು ಅಮೆರಿಕದ ಮಾಧ್ಯಮಗಳ ಐಕಾನ್ ಆಗುತ್ತಾರೆ. ಅಲ್ಲದೇ ಕ್ರೈಸ್ತ ಧರ್ಮ, ವಿಜ್ಞಾನ, ಪಶ್ಚಿಮ ನಾಗರಿಕತೆ ಇವುಗಳನ್ನು ಪ್ರಶ್ನಿಸಿ ಅಧ್ಯಾತ್ಮದ ಕಡೆಗೆ ಒಲವಿದ್ದ ಸಾವಿರಾರು ವ್ಯಕ್ತಿಗಳ ಗುರು ಆಗುತ್ತಾರೆ. ನಾಲ್ಕು ವರ್ಷಗಳ ಕಾಲ ಅಮೆರಿಕ, ಇಂಗ್ಲೆಂಡ್ ಮತ್ತು ಅನೇಕ ದೇಶಗಳಲ್ಲಿ ಹಿಂದೂ ಧರ್ಮದ ಅತ್ಯಂತ ಪ್ರಸಿದ್ಧ ವ್ಯಾಖ್ಯಾನಕಾರರಾಗುತ್ತಾರೆ. ಸಹಜವಾಗಿಯೇ ಅವರ ಈ ಸಾಧನೆ ಪ್ರತಿಷ್ಠೆಗಳಿಂದಾಗಿ ಅವರು ಭಾರತಕ್ಕೆ ಮರಳಿದಾಗ ದೇಶದ ಅತ್ಯಂತ ಪ್ರಭಾವಿ ವ್ಯಕ್ತಿಯಾಗುತ್ತಾರೆ. ಇಲ್ಲಿ ಶುರುವಾಗುತ್ತವೆ ವಿವೇಕಾನಂದರನ್ನು ಒಂದು ಸಂಕೇತವಾಗಿ ಬಳಸುವ ಇಂದಿಗೂ ಮುಗಿದಿರದ ಪ್ರಕ್ರಿಯೆ. ಅದರಲ್ಲಿ ಈ ಎಳೆಗಳಿವೆ. ಪಶ್ಚಿಮದ ವೈಚಾರಿಕ ಸಂಪ್ರದಾಯಗಳ ಆಚೆಗೆ ಅಧ್ಯಾತ್ಮವನ್ನು ಹುಡುಕುತ್ತಿದ್ದ ಪಶ್ಚಿಮದವರಿಗೆ ಅವರು ಆಧುನಿಕ, ವೈಜ್ಞಾನಿಕ ಹಿಂದೂ ಧಾರ್ಮಿಕ ವ್ಯಕ್ತಿಯಾಗಿ ಕಾಣುತ್ತಾರೆ. ಹಿಂದೂ ಧರ್ಮವನ್ನು ಅನಾಧುನಿಕ ಪಳೆಯುಳಿಕೆ ಮಾತ್ರವಲ್ಲ ಕೇವಲ ಅಂಧಶ್ರದ್ಧೆ, ಅತಾರ್ಕಿಕತೆ, ಮೌಢ್ಯದ ಆಕರವನ್ನಾಗಿ ನೋಡುತ್ತಿದ್ದ ಅನೇಕ ಪಾಶ್ಚಿಮಾತ್ಯರಿಗೆ ಅವರು ಮರುಚಿಂತನೆಗೆ ಪ್ರೇರಣೆಯಾಗುತ್ತಾರೆ. ಅಂದರೆ ಪಶ್ಚಿಮವು ಭಾರತದ ಬಗ್ಗೆ ಕಟ್ಟಿಕೊಟ್ಟಿದ್ದ ಪಡಿಯಚ್ಚುಗಳಿಂದ ಹೊರಬರಲು ಪ್ರೇರಣೆಯಾಗುತ್ತಾರೆ. ವಿವೇಕಾನಂದರು ಪಶ್ಚಿಮ ಹಾಗೂ ಅದರ ಧರ್ಮಗಳ ಎದುರಿಗೆ ಶಾಶ್ವತವಾಗಿ ಜಗತ್ತಿನ ಎಲ್ಲಾ ಆಧ್ಯಾತ್ಮಿಕತೆಯ ತಾಯಿಯಾಗಿ ಭಾರತವನ್ನು, ಅದರಲ್ಲೂ ವೇದಾಂತವನ್ನು ಪ್ರತಿಪಾದಿಸುತ್ತಾರೆ. ಈ ಮೂಲಕ ಪಶ್ಚಿಮದ ಯಜಮಾನಿಕೆಯನ್ನು ಪ್ರಶ್ನಿಸುತ್ತಾರೆ. ಅದೇ ಹೊತ್ತಿಗೆ ಭಾರತದ ಆಧ್ಯಾತ್ಮಿಕತೆಯನ್ನು ಪ್ರತಿಷ್ಠಾಪಿಸುತ್ತಾರೆ.
ಇದು ಸಮಸ್ಯಾತ್ಮಕವಾಗಿದೆ. ಒಂದು ಕಡೆಗೆ ಭೌತವಾದಿ ಪಶ್ಚಿಮ, ಅಧ್ಯಾತ್ಮವಾದಿ ಭಾರತ ಎನ್ನುವ ಪರಿಕಲ್ಪನೆಯನ್ನು ಸಮರ್ಥಿಸುತ್ತದೆ. ಇವೆರಡೂ ನಿಜವಲ್ಲ. ಇದನ್ನು ಮೂಲತಃ ಸೃಷ್ಟಿಸಿದ್ದು ಪಶ್ಚಿಮವೇ. ತನ್ನ ಓರಿಯಂಟಲಿಸಂ ಮೂಲಕ. ಆದರೆ ವಸಾಹತುಶಾಹಿಯಿಂದಾಗಿ ಹೀನಾಯ ಅವಮಾನ ಎದುರಿಸಿದ ಶಿಕ್ಷಿತ ಮಧ್ಯಮ ವರ್ಗಕ್ಕೆ ಇದು ಒಂದು ಸುಲಭವಾದ ಅಸ್ತ್ರವಾಗಿ ಬಿಡುತ್ತದೆ. ಆದರೆ ಪಶ್ಚಿಮದಲ್ಲಿ ತಮ್ಮ ಭಾಷಣಗಳಲ್ಲಿ ನಿರ್ದಯವಾಗಿ ಪಶ್ಚಿಮದ ವಸಾಹತು ಶಾಹಿಯನ್ನು, ಧಾರ್ಮಿಕ ಅಹಂಕಾರವನ್ನು ಟೀಕಿಸಿದ್ದ ವಿವೇಕಾನಂದರು ಭಾರತ ಸಮಾಜದ ಜಾತಿ ವ್ಯವಸ್ಥೆ, ಅಸಮಾನತೆ, ದೈನ್ಯ ಇವುಗಳನ್ನು ಅದಕ್ಕಿಂತ ಉಗ್ರವಾಗಿ ಟೀಕಿಸುತ್ತಾರೆ. ಮುಖ್ಯವಾಗಿ ಬ್ರಾಹ್ಮಣ ಪುರೋಹಿತ ಶಾಹಿಯನ್ನು, ಆಚರಣೆಗಳ ಮೌಢ್ಯವನ್ನು. ಆದರೆ ಇವನ್ನೆಲ್ಲ ಬದಿಗಿಟ್ಟು ವಿವೇಕಾನಂದರನ್ನು ಭಾರತವು ವಿಶ್ವಗುರು ಎಂದು ಪ್ರತಿಪಾದಿಸಿದ ವಕ್ತಾರರನ್ನಾಗಿ ನೋಡಲಾಯಿತು. ಇದನ್ನು ಇಂದಿನ ಬಲಪಂಥೀಯ ಸಂಸ್ಥೆಗಳು ಹಾಗೂ ಸರಕಾರಗಳು ಬಹು ರಭಸದಿಂದ ಮಾಡುತ್ತಿವೆ. ವಿವೇಕಾನಂದರ ಶಿಕಾಗೋ ಭಾಷಣವನ್ನು ವೈಭವೀಕರಿಸುವ ಬಲಪಂಥೀಯರು ಮರೆಯುವುದೇನೆಂದರೆ ಆ ದಿನದಲ್ಲಿ ಭಾರತಿಯ ನಾಗರಿಕತೆಯ ಬಗ್ಗೆ ವಿವೇಕಾನಂದರು ಸಮರ್ಥಿಸುವ ಎರಡೇ ಅಂಶಗಳೆಂದರೆ ಸಹಿಷ್ಣುತೆ(ಟಾಲರೆನ್ಸ್) ಮತ್ತು ಒಪ್ಪಿಗೆ(ಅಕ್ಸಪ್ಟೆನ್ಸ್). ಅಂದರೆ ಇತರ ಧರ್ಮಗಳನ್ನು ಮತಗಳನ್ನು ಒಪ್ಪಿಕೊಳ್ಳುವುದೇ ಹಿಂದೂ ಧರ್ಮದ ನಾಗರಿಕತೆಯ ಲಕ್ಷಣವಾಗಿದೆ. ಅಲ್ಲದೆ ಭಾಷಣದ ಕೊನೆಗೆ ಅವರು ಜಗತ್ತಿಗೆ ಅತ್ಯಂತ ದೊಡ್ಡ ಅಪಾಯವೆಂದರೆ ಮತಭೇದ(ಸೆಕ್ಟೇರಿಯನಿಸಂ) ಮತ್ತು ಇವುಗಳ ಶಿಶುವಾಗಿರುವ ಉಗ್ರ ಮತಾಂಧತೆ ಅಂದರೆ ಭಾರತದಲ್ಲಿ ಇಂದು ಪ್ರಭಾವಿಯಾಗಿರುವ ಹಿಂದುತ್ವದ ಅಂಶಗಳನ್ನು ಜಗತ್ತಿನ ಬಹುದೊಡ್ಡ ಅಪಾಯಗಳೆಂದು ವಿವೇಕಾನಂದರು ಹೇಳಿದ್ದರು ಈ ಭಾಷಣದಲ್ಲಿ. ಅವರನ್ನು ಚುನಾವಣೆಗಳ ಸಂದರ್ಭದಲ್ಲಿ ಮಾತ್ರ ನೆನಪುಮಾಡಿಕೊಳ್ಳುವವರು ಈ ಭಾಷಣವನ್ನು ಓದಿಯೇ ಇಲ್ಲ. ಇನ್ನೊಂದು ಸಂದರ್ಭದಲ್ಲಿ ವಿವೇಕಾನಂದರು ಭಾರತವು ಅರಾಜಕತೆ, ಇವುಗಳಿಂದ ಹೊರಬಂದು ತನ್ನ ಹೆಗ್ಗಳಿಕೆಯನ್ನು ಮರು ಸಂಪಾದನೆ ಮಾಡಬೇಕಾದರೆ ಅವಶ್ಯಕವಾಗಿರುವುದು ‘‘ಜಂಕ್ಷನ್ ಆಫ್ ದೀಸ್ ಟೂ ಸ್ಟ್ರೀಮ್ಸ್(ಹಿಂದೂಯಿಸಂ ಆ್ಯಂಡ್ ಇಸ್ಲಾಮ್). ಅಂದರೆ ಹಿಂದೂ ಧರ್ಮ ಮತ್ತು ಇಸ್ಲಾಮ್ ಧರ್ಮಗಳ ಸೇರುವಿಕೆಯಿಂದ ಮಾತ್ರ ಭಾರತವು ತನ್ನ ಹಿಂದಿನ ಉನ್ನತ ಸ್ಥಾನವನ್ನು ಪಡೆಯಬಹುದು. ಅವರು ‘ಪರಧರ್ಮ’ವೆಂದು ಯಾವ ಧರ್ಮವನ್ನೂ ಹೀಯಾಳಿಸಲಿಲ್ಲ. ಎಲ್ಲಾ ಧರ್ಮಗಳ ನ್ಯೂನತೆಗಳನ್ನು ಉಗ್ರವಾಗಿ ಟೀಕಿಸಿದರು. ಇಂಥ ಚಿಂತಕನನ್ನು ಹಿಂದುತ್ವದ ಸಮರ್ಥಕನೆಂದು ಹೇಗೆ ವ್ಯಾಖ್ಯಾನಿಸುವುದು? ಭಾರತವನ್ನು ಅವರು ವಿಶ್ವಗುರುವೆಂದು ನಂಬಿದ್ದು ಆಧ್ಯಾತ್ಮಿಕತೆಯಲ್ಲಿ. ಪಶ್ಚಿಮದ ಬಂಡವಾಳಶಾಹಿಯ ಇಂದಿನ ವಿಶ್ವದ ಏಕಮಾತ್ರ ಅನುಯಾಯಿಯಾದ ಭಾರತವು ವಿಶ್ವಗುರು ಆಗುವುದು ವಿವೇಕಾನಂದರ ಚಿಂತನೆಯ ಚೌಕಟ್ಟಿನಲ್ಲಿ ಸಾಧ್ಯವೇ ಇಲ್ಲ.
ವಿವೇಕಾನಂದರು ಪ್ರತಿಪಾದಿಸಿದ್ದು ಅದ್ವೈತವನ್ನು. ವೇದಾಂತ ವನ್ನು. ಅವರ ಗುರುಗಳಾದ ಪರಮಹಂಸರನ್ನು ಸಾಂಪ್ರದಾಯಿಕ ಹಿಂದೂ ಚೌಕಟ್ಟಿನಲ್ಲಿ ಸೇರಿಸುವುದು ಸಾಧ್ಯವೇ ಇಲ್ಲ.
ವಿವೇಕಾನಂದರನ್ನು ಹಿಂದುತ್ವದ ಪರಧರ್ಮದ್ವೇಷಿ, ಅಸಹಿಷ್ಣು ಸೈದ್ಧಾಂತಿಕ ಚೌಕಟ್ಟಿನಲ್ಲಿ ತರುವುದು ಸಾಧ್ಯವೇ ಇಲ್ಲ. ಹಾಗೆ ಮಾಡಲು ವಿವೇಕಾನಂದರ ಎಲ್ಲಾ ಬರಹ, ಭಾಷಣ ಹಾಗೂ ಪತ್ರಗಳನ್ನು ಬಚ್ಚಿಡಬೇಕಾಗುತ್ತ್ತದೆ ಅಥವಾ ನಾಶ ಮಾಡಬೇಕಾಗುತ್ತದೆ. ಇಂದಿನ ದಿನಗಳಲ್ಲಿ ಇದು ಅಸಾಧ್ಯವೇನೂ ಅಲ್ಲ. ಖಂಡಿತವಾಗಿಯೂ ನನಗೆ ಮತ್ತು ಇಂದಿನ ತಲೆಮಾರಿನವರಿಗೆ ವಿವೇಕಾನಂದರ ಚಿಂತನೆಯ ಕೆಲವು ವೈರುಧ್ಯಗಳ ಬಗ್ಗೆ ಅಸಮ್ಮತಿ ಇದೆ. ಆದರೆ 39ನೇ ವರ್ಷದಲ್ಲಿ ತೀರಿಕೊಂಡ ಅವರು ಜಗತ್ತು ಕಂಡ ಮಹಾನ್ ಪ್ರತಿಭಾವಂತರು. ವೈಚಾರಿಕತೆಯ ಕ್ರಿಯಾಶೀಲರು. ಜನವರಿ 12ರಂದು ಯುವ ಜನತೆ ಆಚರಿಸುವ ಸಂಭ್ರಮ ಇರಲಿ. ನಾನು ಹೇಳಬೇಕಾದದ್ದು ಎರಡೇ ಪದಗಳು. ರೀಡ್ ಹಿಮ್. ಅವರನ್ನು ಓದಿ. ವ್ಯಾಖ್ಯಾನಗಳನ್ನು ಓದಬೇಡಿ. ಸೈದ್ಧಾಂತಿಕ ಅಪಸವ್ಯಗಳನ್ನು ನಂಬಬೇಡಿ. ಆಗ ನಿಮಗೆ ಒಬ್ಬ ಅದ್ಭುತ ಪ್ರತಿಭೆಯ ಸಾಂಗತ್ಯ ದೊರೆಯುತ್ತದೆ. ಆ ಮೇಲೆ ಕೂಡ ನೀವು ಅವರನ್ನು ಪ್ರಶ್ನಿಸಿ. ಅವರು ತಮ್ಮ ಗುರು ಪರಮಹಂಸರನ್ನು ಉಗ್ರವಾಗಿ ಪ್ರಶ್ನಿಸಿದ್ದರು. ಯಾವ ಕಾರಣಕ್ಕೂ ವಿವೇಕಾನಂದರು ಬಲಪಂಥೀಯ ಐಕಾನ್ ಆಗುವುದು ಅಸಂಗತ, ಮೂರ್ಖತನ.