ಬಿಳಿಗಿರಿ ರಂಗನ ಬೆಟ್ಟದಲ್ಲಿ ಆದಿವಾಸಿಗಳ ಅಧ್ಯಯನಕ್ಕೆ ‘ಕಾನು’ ಗ್ರಂಥಾಲಯ

Update: 2024-08-26 08:04 GMT

ಚಾಮರಾಜನಗರ: ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಆದಿವಾಸಿಗಳ ಕುರಿತು ಅಧ್ಯಯನ ಮಾಡಲು ಎದುರಾಗುವ ವಿಷಯ ವಸ್ತು ಕೊರತೆ ನೀಗಿಸಲು, ಆದಿವಾಸಿಗಳಲ್ಲಿ ಸಂಶೋಧನಾತ್ಮಕ ಲೇಖನ ಬರೆಯುವ ಸಂಸ್ಕೃತಿ ಹುಟ್ಟುಹಾಕಲು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದಲ್ಲಿ ‘ಕಾನು’ ಗ್ರಂಥಾಲಯ ಸೃಷ್ಟಿಯಾಗಿದೆ.

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಮಾರಿಗುಡಿ ಪಕ್ಕದ ಆದಿವಾಸಿ ಆರೋಗ್ಯ ಸಂಪನ್ಮೂಲ ಕೇಂದ್ರದ ಆವರಣದಲ್ಲಿ ‘ಕಾನು’ ಹೆಸರಿನಲ್ಲಿ ಗ್ರಂಥಾಲಯ ಸ್ಥಾಪನೆ ಮಾಡಲಾಗಿದೆ. ಆದಿವಾಸಿ ಸಮುದಾಯದ ಸಮಾನ ಮನಸ್ಕರು ಒಗ್ಗೂಡಿ ದಕ್ಷಿಣ ಭಾರತ ಆದಿವಾಸಿ ಜ್ಞಾನ ಕೇಂದ್ರದ ಮೂಲಕ ಈ ಗ್ರಂಥಾಲಯ ಸ್ಥಾಪನೆ ಮಾಡಿದ್ದಾರೆ.

ಆದಿವಾಸಿಗಳು ಸಮಾಜದ ಪ್ರಾಚೀನ ಸಮುದಾಯವಾಗಿದ್ದರೂ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಪ್ರಸ್ತುತ ಸಮಾಜದ ಕಟ್ಟಕಡೆಯ ಜನಾಂಗವಾಗಿ ಉಳಿದುಬಿಟ್ಟಿದ್ದಾರೆ. ಇವರ ಜೀವನ, ಸಂಸ್ಕೃತಿ, ಆಚಾರ, ವಿಚಾರಗಳು ವಿಭಿನ್ನವಾಗಿವೆ. ಅಧ್ಯಯನಕ್ಕೆ ಆಸಕ್ತಿದಾಯಕವಾಗಿರುವ ಆದಿವಾಸಿಗಳ ಕುರಿತು ಸಂಶೋಧಕರಿಗೆ ರಾಜ್ಯದಲ್ಲಿ ಎಲ್ಲೂ ಒಂದೇ ಕಡೆ ವಿಷಯ ವಸ್ತುಗಳು ಸಿಗುವುದಿಲ್ಲ. ದಕ್ಷಿಣ ಭಾರತದಲ್ಲಿ ಆದಿವಾಸಿಗಳ ಕುರಿತು ಅಧ್ಯಯನ ನಡೆದಿರುವುದು ಮತ್ತು ಆದಿವಾಸಿಗಳಲ್ಲಿರುವ ಬೆರಳೆಣಿಕೆಯಷ್ಟು ಬರಹಗಾರರನ್ನು ಪ್ರೋತ್ಸಾಹಿಸಿ ಲೇಖನಗಳನ್ನು ಬರೆಸಿರುವುದೂ ಕಡಿಮೆ. ಈ ಕೊರಗನ್ನು ನೀಗಿಸಲು ಮತ್ತು ಆದಿವಾಸಿಗಳಲ್ಲಿ ಅಕ್ಷರ ಸಂಸ್ಕೃತಿಯನ್ನು ಉತ್ತೇಜಿಸಲು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಕಾನು ಗ್ರಂಥಾಲಯವನ್ನು ಸ್ಥಾಪನೆಯಾಗಿದೆ.

ಕಾನು ಹೆಸರಿನ ಗ್ರಂಥಾಲಯದಲ್ಲಿ ದಕ್ಷಿಣ ಭಾರತದ ಆದಿವಾಸಿಗಳ ಕುರಿತು ಅಧ್ಯಯನ ಮಾಡುವವರಿಗೆ ಸಂಶೋಧನಾತ್ಮಕ, ಲೇಖನಗಳು, ಪುಸ್ತಕಗಳು ಸಿಗಲಿವೆ. ಶಿಕ್ಷಣ, ಆರೋಗ್ಯ, ಅರಣ್ಯ, ಅರಣ್ಯ ಕಾಯ್ದೆ, ಜೀವನ ನಿರ್ವಹಣೆ, ಸಂಸ್ಕೃತಿ, ಭಾಷೆ ಇನ್ನಿತರ ವಿಷಯಗಳ ಕುರಿತು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ಅಲ್ಲದೇ ಬೇರೆ ಕಡೆ ಸಂಗ್ರಹಿಸಿರುವ ಲೇಖನಗಳನ್ನೂ ಆನ್‌ಲೈನ್ ಮೂಲಕ ಇಲ್ಲಿ ಪಡೆಯಬಹುದು.

ತಮಿಳುನಾಡು ಕೇರಳದಲ್ಲಿರುವ ಮತ್ತು ಆದಿವಾಸಿಗಳ ಇತಿಹಾಸ ಮತ್ತು ವಾಸ್ತವವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿದ ವಿಮರ್ಶಾತ್ಮಕ ಟಿಪ್ಪಣಿಗಳು 1,200ಕ್ಕೂ ಹೆಚ್ಚಿನ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಇಡಲಾಗಿದೆ. ಅಲ್ಲದೇ, ಲೇಖನಗಳು, ಬ್ಲಾಗ್‌ಗಳನ್ನು ಸಹ ಗ್ರಂಥಾಲಯದಲ್ಲಿ ನೋಡಬಹುದು. ಇವೆಲ್ಲವೂ ಭಾಗಶಃ ಇಂಗ್ಲೀಷ್‌ನಲ್ಲಿ ಇರಲಿವೆ. ಆದಿವಾಸಿಗಳ ಕುರಿತು ಅಧ್ಯಯನ ಮಾಡುವ ಸಂಶೋಧಕರಿಗೆ ಕಾನು ಗ್ರಂಥಾಲಯ ಜ್ಞಾನದ ಮೂಲವಾಗಲಿದೆ.

ಕಾನು ಗ್ರಂಥಾಲಯವು ಪುಸ್ತಕಗಳ ಸಂಗ್ರಹ ಮಾತ್ರ ಮಾಡುವುದಲ್ಲದೆ ಆದಿವಾಸಿ ಬರಹಗಾರರಿಗೂ ಪ್ರೋತ್ಸಾಹ ನೀಡಲು ನಿರ್ಧರಿಸಿದೆ. ಈ ಜನಾಂಗದಲ್ಲಿ ಸಾಹಿತ್ಯ ಜ್ಞಾನ ಹೊಂದಿರುವವರು ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಇದ್ದಾರೆ. ಇವರಲ್ಲಿರುವ ಬರವಣಿಗೆಯ ಕೌಶಲ್ಯವನ್ನು ವೃದ್ಧಿಸಿ, ಪ್ರೋತ್ಸಾಹ ನೀಡಿ ಆದಿವಾಸಿಗಳ ಕುರಿತ ಲೇಖಗಳನ್ನು ಬರೆಸಲು ಕಾನು ಗ್ರಂಥಾಲಯ ತಂಡ ಮುಂದಾಗಲಿದೆ. ಈವರೆಗೆ ಆದಿವಾಸಿಗಳ ಕುರಿತು ಬೇರೆಯವರು ಬರೆದಿದ್ದಾರೆ. ಆದಿವಾಸಿಗಳೇ ಬರೆದಿರುವುದು ತೀರಾವಿರಳ. ಹೀಗಾಗಿ ಅದಿವಾಸಿ ಬರಹಗಾರರನ್ನು ಗುರುತಿಸುವ ಪ್ರಯತ್ನ ನಡೆಯಲಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಆದಿವಾಸಿ ಜನಾಂಗಕ್ಕೆ ಸೇರಿದ ಮೂವರು ಮಾತ್ರ ಪಿಎಚ್‌ಡಿ ಮಾಡಿದ್ದಾರೆ. ಬಿಳಿಗಿರಿರಂಗನಬೆಟ್ಟದ ಬಂಗ್ಲೆಪೋಡಿನ ಡಾ.ಮಾದೇಗೌಡ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಹೊಸಪೋಡಿನ ಜಡೆಗೌಡ, ಗುಂಡ್ಲುಪೇಟೆಯ ಮದ್ದೂರು ಕಾಲನಿಯ ರತ್ನಮ್ಮ ಕೂಡ ಪಿಎಚ್‌ಡಿ ಮಾಡಿದ್ದಾರೆ. ಇವರೆಲ್ಲರ ಸಂಶೋಧನಾತ್ಮಕ ಪುಸ್ತಕಗಳು ಕಾನು ಗ್ರಂಥಾಲಯಗಳಲ್ಲಿ ಇರಲಿವೆ.

ದಕ್ಷಿಣ ಭಾರತದಲ್ಲಿ ಆದಿವಾಸಿಗಳ ಕುರಿತ ಸಂಶೋಧನಾತ್ಮಕ ಲೇಖನಗಳು ಬಹಳ ಕಡಿಮೆ. ಇವುಗಳನ್ನು ಹೆಚ್ಚು ಮಾಡಲು ಮತ್ತು ಇರುವ ಮಾಹಿತಿಗಳೆಲ್ಲವನ್ನೂ ಒಂದು ಕಡೆ ಸೇರಿಸಲು ಆದಿವಾಸಿ ಸಮಾನ ಮನಸ್ಕರು ಒಗ್ಗೂಡಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ’ ಕಾನು’ ಎಂಬ ಹೆಸರಿನಲ್ಲಿ ಗ್ರಂಥಾಲಯ ಸ್ಥಾಪಿಸಿದ್ದೇವೆ.

-ಡಾ.ಸಿ.ಮಾದೇಗೌಡ, ಬಿಳಿಗಿರಿರಂಗನಬೆಟ್ಟ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಾ.ಅಶ್ವಥ್ ಕುಮಾರ್

contributor

Similar News