ಫೆಲೆಸ್ತೀನಿಯರನ್ನು ಹತ್ಯೆಗೈಯುತ್ತಿರುವುದು ಯುದ್ಧವಲ್ಲ ಇಸ್ರೇಲ್ ಎಸಗುತ್ತಿರುವ ‘ಅಪರಾಧ’: ಅಂತರ್‌ರಾಷ್ಟ್ರೀಯ ನ್ಯಾಯಾಲಯ
ಗಾಝಾ ಪಟ್ಟಿಯಲ್ಲಿನ ನಾಗರಿಕರು ತುಂಬಾ ದುರ್ಬಲ ಪರಿಸ್ಥಿತಿಯಲ್ಲಿದ್ದಾರೆ ಎಂದು ನ್ಯಾಯಾಲಯವು ಪರಿಗಣಿಸಿದೆ. ಅಕ್ಟೋಬರ್ 7, 2023ರ ನಂತರ ಇಸ್ರೇಲ್ ನಡೆಸಿರುವ ಕಾರ್ಯಾಚರಣೆಯ ನಂತರ, ಮನೆಗಳು, ಶಾಲೆಗಳು, ವೈದ್ಯಕೀಯ ಸೌಲಭ್ಯಗಳು ಹಾಗೂ ಇನ್ನಿತರ ಮುಖ್ಯ ಮೂಲಸೌಕರ್ಯಗಳನ್ನು ನಾಶಗೊಳಿಸುವ ಮೂಲಕ ಹತ್ತಾರು ಸಾವಿರ ಜನರ ಸಾವಿಗೆ ಕಾರಣವಾಗಿದೆ. ಇದರೊಂದಿಗೆ ದೊಡ್ಡ ಪ್ರಮಾಣದ ಜನರು ನಿರ್ವಸತಿಗರಾಗಿದ್ದಾರೆ. ಜನವರಿ 18ರಂದು ಇಸ್ರೇಲ್ ಪ್ರಧಾನಿ ಸೇನಾ ಕಾರ್ಯಾಚರಣೆಯು ಮತ್ತಷ್ಟು ತಿಂಗಳುಗಳ ಕಾಲ ಮುಂದುವರಿಯಲಿದೆ ಎಂಬ ಹೇಳಿಕೆಯನ್ನು ನ್ಯಾಯಾಲಯವು ಪರಿಗಣಿಸಿದೆ. ‘‘ಸದ್ಯ ಹಲವಾರು ಗಾಝಾ ನಿವಾಸಿಗಳಿಗೆ ಮೂಲಭೂತ ಆಹಾರ ಪದಾರ್ಥಗಳು, ಶುದ್ಧ ಕುಡಿಯುವ ನೀರು, ವಿದ್ಯುಚ್ಛಕ್ತಿ, ಅತ್ಯಗತ್ಯ ಔಷಧಗಳು ಹಾಗೂ ಬೆಚ್ಚಗಿಡುವ ಸಾಧನಗಳು ದೊರೆಯುತ್ತಿಲ್ಲ’’ ಎಂದು ನ್ಯಾಯಾಲಯ ಹೇಳಿದೆ.
ಗಾಝಾದಲ್ಲಿ ಫೆಲೆಸ್ತೀನ್ ಜನರ ಜನಾಂಗೀಯ ಹತ್ಯೆಯನ್ನು ಸಾಮಾನ್ಯ ಯುದ್ಧದ ಕಾನೂನುಗಳಡಿ ನೋಡುವ ಬದಲು ಜನಾಂಗೀಯ ಹತ್ಯೆಯ ಕಾನೂನಿನಡಿ ನೋಡುವ ಮಹತ್ವದ ನಿರ್ಧಾರವನ್ನು ಶುಕ್ರವಾರ ತನ್ನ ಚಾರಿತ್ರಿಕ ಆದೇಶದಲ್ಲಿ ಅಂತರ್‌ರಾಷ್ಟ್ರೀಯ ನ್ಯಾಯಾಲಯವು ಪ್ರಕಟಿಸಿದೆ. ಇಸ್ರೇಲ್ ವಿರುದ್ಧ ಜನಾಂಗೀಯ ಹತ್ಯೆ ಆರೋಪದ ಮೊಕದ್ದಮೆಯನ್ನು ಅಂತರ್‌ರಾಷ್ಟ್ರೀಯ ನ್ಯಾಯಾಲಯದೆದುರು ದಕ್ಷಿಣ ಆಫ್ರಿಕಾ ಸಲ್ಲಿಸಿತ್ತು.
ಈ ಹಂತವು ಯಾಕೆ ಮಹತ್ವದ್ದೆಂದರೆ, ಅಂತರ್‌ರಾಷ್ಟ್ರೀಯ ನ್ಯಾಯಾಲಯವೇ ತನ್ನ 29 ಪುಟಗಳ ಆದೇಶದ 40ನೇ ಕಂಡಿಕೆಯಲ್ಲಿ ‘‘ಗಾಝಾ ಬಿಕ್ಕಟ್ಟಿನ ಕುರಿತು ಅಂತರ್‌ರಾಷ್ಟ್ರೀಯ ಮಾನವೀಯ ಕಾನೂನಿನ ಅಡಿ ಸೂಕ್ತ ಕಾನೂನು ಚೌಕಟ್ಟು ನಿರ್ಧರಿಸಬೇಕು’’ ಎಂದು ತನ್ನನ್ನು ಮನವಿ ಮಾಡಿಕೊಂಡಿತ್ತೇ ಹೊರತು ಜನಾಂಗೀಯ ಹತ್ಯೆ ಒಪ್ಪಂದದನ್ವಯ ಅಲ್ಲ ಎಂದು ಹೇಳಿದೆ.
ಯಹೂದಿಗಳ ನರಮೇಧ ಹಾಗೂ ಎರಡನೇ ವಿಶ್ವ ಯುದ್ಧದ ನಂತರ ಅಂತರ್‌ರಾಷ್ಟ್ರೀಯ ಸಮುದಾಯವು 1948ರಲ್ಲಿ ಜನಾಂಗೀಯ ಹತ್ಯೆ ಒಪ್ಪಂದವನ್ನು ಮಾಡಿಕೊಂಡಿತ್ತು. ಈ ಕಾನೂನಿನನ್ವಯ, ಪೂರ್ಣಪ್ರಮಾಣ ಅಥವಾ ಭಾಗಶಃ ಯಾವುದೇ ದೇಶದ ಜನಾಂಗೀಯ, ವರ್ಣ ಅಥವಾ ಧಾರ್ಮಿಕ ಗುಂಪನ್ನು ಹತ್ಯೆಗೈಯುವ ಮೂಲಕ, ದೈಹಿಕ ಅಥವಾ ಮಾನಸಿಕ ಹಾನಿಯುಂಟು ಮಾಡುವ ಮೂಲಕ, ಜನನಗಳನ್ನು ತಡೆಯುವ ಮೂಲಕ ಅಥವಾ ‘‘ಉದ್ದೇಶಪೂರ್ವಕವಾಗಿ ಯಾವುದೇ ಗುಂಪಿನ ಸ್ಥಿತಿಯನ್ನು ಪೂರ್ಣ ಪ್ರಮಾಣದಲ್ಲಿ ಅಥವಾ ಭಾಗಶಃ ದೈಹಿಕ ನಾಶ ಮಾಡುವ ಮೂಲಕ ಲೆಕ್ಕಾಚಾರದೊಂದಿಗೆ ಕಡಿಮೆ ಮಾಡುವುದು ಅಪರಾಧ’’ ಎಂದು ಕಾನೂನು ಚೌಕಟ್ಟನ್ನು ವಿಧಿಸಲಾಗಿದೆ.
ಅಕ್ಟೋಬರ್ 7, 2023ರಿಂದ ಇಲ್ಲಿಯವರೆಗೆ 26,000ಕ್ಕೂ ಹೆಚ್ಚು ಫೆಲೆಸ್ತೀನಿಯರು ಇಸ್ರೇಲ್‌ನಿಂದ ಹತ್ಯೆಗೊಳಗಾಗಿದ್ದು, ಈ ಪೈಕಿ 10,000ಕ್ಕೂ ಹೆಚ್ಚು ಮಂದಿ ಮಕ್ಕಳಾಗಿದ್ದಾರೆ. ಈ ಯುದ್ಧದಲ್ಲಿ ಈವರೆಗೆ 20 ಲಕ್ಷಕ್ಕೂ ಹೆಚ್ಚು ಮಂದಿ ನಿರ್ವಸಿತರಾಗಿದ್ದು, ನಿರಂತರ ಬಾಂಬ್ ದಾಳಿಯಿಂದಾಗಿ ಅವರ ಬದುಕು ದುರಂತಮಯವಾಗಿ ಬದಲಾಗಿದೆ.
ಇಸ್ರೇಲ್ ದೇಶವು ಜನಾಂಗೀಯ ಹತ್ಯೆಯ ಒಪ್ಪಂದದ ಬದಲು ಯುದ್ಧ ನಡೆಸುವಾಗ ನಿಯಂತ್ರಿಸುವ ಹಾಗೂ ಯುದ್ಧದಲ್ಲಿ ಭಾಗಿಯಾಗದ ನಾಗರಿಕರಿಗೆ ಉದ್ದೇಶಪೂರ್ವಕವಾಗಿ ಹಾನಿ ಉಂಟು ಮಾಡುವುದನ್ನು ನಿಷೇಧಿಸುವ ‘ಅಂತರ್‌ರಾಷ್ಟ್ರೀಯ ಮಾನವೀಯ ಕಾನೂನಿನ’ ಪ್ರಕಾರ ವಿಚಾರಣೆಯಾಗಬೇಕು ಎಂದು ಬಯಸಿತು. ಯಾಕೆಂದರೆ, ಅದು ಬಳಕೆಯಾಗಿದ್ದರೆ, ಇಸ್ರೇಲ್ ಗೆ ಪಾರಾಗುವ ಅವಕಾಶ ದೊರೆಯುತ್ತಿತ್ತು. ನ್ಯಾಯಾಲಯವು ಉಲ್ಲೇಖಿಸಿರುವಂತೆ, ‘‘ನಗರ ಪ್ರದೇಶಗಳಲ್ಲಿನ ಯುದ್ಧ ಪರಿಸ್ಥಿತಿಯಲ್ಲಿ ಸೇನಾ ಸಾಧನಗಳ ವಿರುದ್ಧ ಸೇನಾಪಡೆಗಳನ್ನು ಬಳಸುವಾಗ ನಾಗರಿಕರು ಉದ್ದೇಶರಹಿತವಾಗಿ ಗಾಯಾಳುಗಳಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇದು ಜನಾಂಗೀಯ ಹತ್ಯೆ ಕಾನೂನು ವ್ಯಾಪ್ತಿಯಡಿ ಬರುವುದಿಲ್ಲ’’ ಎಂದು ವಾದಿಸಿದೆ. ಮೇಲಾಗಿ, ದಕ್ಷಿಣ ಆಫ್ರಿಕಾವು ಅಂತರ್‌ರಾಷ್ಟ್ರೀಯ ನ್ಯಾಯಾಲಯಕ್ಕೆ ತೆರಳಲು ಜನಾಂಗೀಯ ಹತ್ಯೆ ಆರೋಪದಂತೆ ಅಂತರ್‌ರಾಷ್ಟ್ರೀಯ ಮಾನವೀಯ ಕಾನೂನುಗಳ ಉಲ್ಲಂಘನೆ ಆರೋಪವು ಅಷ್ಟು ಸುಗಮ ಮಾರ್ಗವನ್ನು ತೆರೆಯುತ್ತಿರಲಿಲ್ಲ. ಇಸ್ರೇಲ್ ಪಾಲಿಗೆ ಅತ್ಯಂತ ಕೆಟ್ಟ ಸನ್ನಿವೇಶವಾಗಿರುವ ಈಗಿನ ಸಂದರ್ಭದಲ್ಲಿ ಅಂತರ್‌ರಾಷ್ಟ್ರೀಯ ಮಾನವೀಯ ಕಾನೂನುಗಳ ಗಂಭೀರ ಉಲ್ಲಂಘನೆಗಾಗಿ ಒಂದಲ್ಲ ಒಂದು ಅಂತರ್‌ರಾಷ್ಟ್ರೀಯ ನ್ಯಾಯಾಲಯದಲ್ಲಿ ದಂಡನೆಗೊಳಗಾಗಲಿದೆ. ಆದರೆ, ಗಾಝಾದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಇಸ್ರೇಲ್ ಭದ್ರತಾ ಪಡೆಗಳ ಮೇಲೆ ಅದರಿಂದ ಯಾವುದೇ ಪರಿಣಾಮ ಉಂಟಾಗುತ್ತಿರಲಿಲ್ಲ.
ಜನಾಂಗೀಯ ಹತ್ಯೆ ಆರೋಪದ ವಿರುದ್ಧ ರಾಜಕೀಯ ಕಾರಣಗಳಿಗಾಗಿ ಇಸ್ರೇಲ್ ನಾಯಕರು ತೀವ್ರವಾಗಿ ಪ್ರತಿಕ್ರಿಯಿಸಿದ್ದರೂ, ಟೆಲ್ ಅವೀವ್ ಹಾಗೂ ಅದರ ಪಾಶ್ಚಿಮಾತ್ಯ ಮೈತ್ರಿ ರಾಷ್ಟ್ರಗಳು ಇಸ್ರೇಲ್ ಈಗಲೂ ನಿಯಮಗಳನ್ನು ಪಾಲಿಸುವ ದೇಶವೆಂದು ಬಿಂಬಿಸಲು ಬಯಸುತ್ತಾರೆ. ಜನಾಂಗೀಯ ಹತ್ಯೆ ಒಪ್ಪಂದದ ವಿಧಿ ಎರಡರ ಅನ್ವಯ ರಕ್ಷಿತ ಗುಂಪಾಗಿ ಫೆಲೆಸ್ತೀನಿಯರು ಅಂತರ್‌ರಾಷ್ಟ್ರೀಯ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಬಹುದು ಎಂದೂ ಅವು ಆತಂಕಗೊಂಡಿವೆ. ಇದನ್ನೇ ಅಂತರ್‌ರಾಷ್ಟ್ರೀಯ ನ್ಯಾಯಾಲಯವು ತನ್ನ ಆದೇಶದ 45ನೇ ಕಂಡಿಕೆಯಲ್ಲಿ ಮುಖ್ಯವಾಗಿ ಮಾಡಿರುವುದು. ಪ್ರಪ್ರಥಮ ಬಾರಿಗೆ ಬಂದಿರುವ ಇಂತಹ ಆದೇಶವು ಯಾಕೆ ಮಹತ್ವದ್ದೆಂದರೆ, ಅಂತರ್‌ರಾಷ್ಟ್ರೀಯ ನ್ಯಾಯಾಲಯದ 17 ನ್ಯಾಯಾಧೀಶರ ಪೈಕಿ (ಈ ಪೈಕಿ ತಲಾ ಒಬ್ಬರು ಇಸ್ರೇಲ್ ಮತ್ತು ದಕ್ಷಿಣ ಆಫ್ರಿಕಾದ ತಾತ್ಕಾಲಿಕ ನ್ಯಾಯಾಧೀಶರು ಸೇರಿದ್ದರು) ಇಬ್ಬರು ನ್ಯಾಯಾಧೀಶರು ಮಾತ್ರ ತಮ್ಮ ಭಿನ್ನಮತ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಬಗೆಯಲ್ಲಿ ಇಸ್ರೇಲ್‌ನೊಂದಿಗೆ ನಿಕಟವಾಗಿರುವ ಸರಕಾರಗಳೂ ಈ ಆದೇಶಕ್ಕೆ ಸಹಿ ಮಾಡಿವೆ.
ದಕ್ಷಿಣ ಆಫ್ರಿಕಾ ಮನವಿ ಮಾಡಿದ್ದಂತೆ ಕದನ ವಿರಾಮ ಘೋಷಿಸುವಂತೆ ಅಂತರ್‌ರಾಷ್ಟ್ರೀಯ ನ್ಯಾಯಾಲಯವು ಆದೇಶಿಸಿಲ್ಲವಾದರೂ, ಬಹುತೇಕ ಸರ್ವಾನುಮತದ ಈ ತೀರ್ಪಿನಿಂದಾಗಿ ಇಸ್ರೇಲ್ ಹಾಗೂ ಇಸ್ರೇಲ್ ಡಿಫೆನ್ಸ್ ಫೋರ್ಸ್ ಮೇಲೆ ಭಾರೀ ಪ್ರತಿಕೂಲ ಪರಿಣಾಮವಾಗಲಿದೆ ಎಂಬುದು ಖಚಿತ.
ಅಂತರ್‌ರಾಷ್ಟ್ರೀಯ ನ್ಯಾಯಾಲಯದ ತರ್ಕ
ತನ್ನ ವ್ಯಾಪ್ತಿ ಹಾಗೂ ಇಸ್ರೇಲ್ ಅನ್ನು ತನ್ನ ಬಳಿ ತರುವ ದಕ್ಷಿಣ ಆಫ್ರಿಕಾದ ಹಕ್ಕನ್ನು ಖಚಿತಪಡಿಸಿಕೊಂಡಿರುವ ಅಂತರ್‌ರಾಷ್ಟ್ರೀಯ ನ್ಯಾಯಾಲಯವು, ಇಸ್ರೇಲ್ ವಿರುದ್ಧದ ದಕ್ಷಿಣ ಆಫ್ರಿಕಾದ ನಿಲುವಿನ ಕುರಿತು ತನ್ನ ಆದೇಶದ 30 ಕಂಡಿಕೆಯಲ್ಲಿ ನಿರ್ದಿಷ್ಟವಾಗಿ, ‘‘ಕನಿಷ್ಠ ಪಕ್ಷ ದಕ್ಷಿಣ ಆಫ್ರಿಕಾ ಆರೋಪಿಸಿರುವ ಕೆಲವಾದರೂ ನಡೆಗಳು ಹಾಗೂ ತಪ್ಪುಗಳನ್ನು ಗಾಝಾದಲ್ಲಿ ಇಸ್ರೇಲ್ ಎಸಗಿದ್ದು, ಅವು ಜನಾಂಗೀಯ ಹತ್ಯೆ ಒಪ್ಪಂದದಡಿಗೆ ಒಳಪಡುವಷ್ಟು ಸಾಮರ್ಥ್ಯ ಹೊಂದಿವೆ’’ ಎಂದು ಹೇಳಿದೆ.
ಜನಾಂಗೀಯ ಹತ್ಯೆಗೆ ಉದ್ದೇಶವಿರಬೇಕಾಗುತ್ತದಾದ್ದರಿಂದ, ಗಾಝಾದಲ್ಲಿ ಇಸ್ರೇಲ್ ನಡೆಸಿರುವ ಸೇನಾ ದಾಳಿ, ಗಾಝಾ ಪಟ್ಟಿಯಲ್ಲಿ ಸೇನಾ ಕಾರ್ಯಾಚರಣೆಯ ಕುರಿತು ಇಸ್ರೇಲ್ ಅಧಿಕಾರಿಗಳು ನೀಡಿರುವ ಹೇಳಿಕೆಗಳು ಜನಾಂಗೀಯ ಹತ್ಯೆಯ ಉದ್ದೇಶವನ್ನು ಹೊಂದಿವೆ ಎಂದು ದಕ್ಷಿಣ ಆಫ್ರಿಕಾ ವಾದಿಸಿರುವುದನ್ನೂ ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿದೆ.
ಗಾಝಾದಲ್ಲಿನ ಮಾನವೀಯ ಬಿಕ್ಕಟ್ಟು ಕುರಿತು ವಿಶ್ವ ಸಂಸ್ಥೆಯ ವ್ಯಾಪಕ ವರದಿಗಳನ್ನು ಉಲ್ಲೇಖಿಸಿದ ನಂತರ, ಹಿರಿಯ ಇಸ್ರೇಲಿ ಅಧಿಕಾರಿಗಳ ಹಲವಾರು ಹೇಳಿಕೆಗಳನ್ನೂ ಅಂತರ್‌ರಾಷ್ಟ್ರೀಯ ನ್ಯಾಯಾಲಯವು ಪರಿಗಣನೆಗೆ ತೆಗೆದುಕೊಂಡಿದೆ. ವಿಶೇಷವಾಗಿ, ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರ ಗಾಝಾ ನಗರವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಬೇಕು ಹಾಗೂ ಅಲ್ಲಿ ಯಾವುದೇ ವಿದ್ಯುಚ್ಛಕ್ತಿ, ಆಹಾರ, ಇಂಧನ ಇರಬಾರದು. ಎಲ್ಲವೂ ಮುಚ್ಚಲ್ಪಡಬೇಕು ಎಂಬ ಹೇಳಿಕೆ.
ಗಾಝಾ ಗಡಿಯಲ್ಲಿರುವ ಇಸ್ರೇಲಿ ಸೈನ್ಯಕ್ಕೆ ಯೋವ್ ಗ್ಯಾಲಂಟ್ ಏನು ಹೇಳಿದ್ದರು ಎಂಬುದನ್ನು ಗಮನಿಸಬೇಕು. ನಾನು ಎಲ್ಲ ಇತಿಮಿತಿಗಳನ್ನು ಬಿಡುಗಡೆ ಮಾಡಿದ್ದೇನೆ... ನಾವು ಯಾವುದರ ವಿರುದ್ಧ ಹೋರಾಡುತ್ತಿದ್ದೇವೆ ಎಂದು ನೀವು ನೋಡಿದ್ದೀರಿ. ನಾವು ಮನುಷ್ಯ ಮೃಗಗಳ ವಿರುದ್ಧ ಹೋರಾಡುತ್ತಿದ್ದೇವೆ. ಇದು ಗಾಝಾದ ಐಸಿಸ್. ನಾವು ಹೋರಾಡುತ್ತಿರುವುದು ಇದರ ವಿರುದ್ಧ... ಗಾಝಾ ಎಂದೂ ಅದರ ಹಿಂದಿನ ಸ್ಥಿತಿಗೆ ಮರಳದು. ಇನ್ನು ಮುಂದೆ ಹಮಾಸ್ ಇರದು. ನಾವು ಎಲ್ಲವನ್ನೂ ನಿರ್ನಾಮ ಮಾಡಿ ಬಿಡುತ್ತೇವೆ. ಅದು ಒಂದು ದಿನದಲ್ಲಿ ಸಾಧ್ಯವಾಗದಿದ್ದರೆ, ಒಂದು ವಾರದಲ್ಲಿ, ಹಲವು ವಾರಗಳಲ್ಲಿ ಅಥವಾ ಹಲವು ತಿಂಗಳುಗಳಲ್ಲಿ ಆಗಬಹುದು. ನಾವು ಅದಕ್ಕಾಗಿ ಎಲ್ಲೆಡೆ ತಲುಪುತ್ತೇವೆ.
ಈ ವಾಸ್ತವಗಳು ಹಾಗೂ ಸಂದರ್ಭಗಳು ದಕ್ಷಿಣ ಆಫ್ರಿಕಾ ಮಾಡಿರುವ ಕೆಲವಾದರೂ ಆರೋಪಗಳು ಹಾಗೂ ಅದು ಕೇಳುತ್ತಿರುವ ರಕ್ಷಣೆ ಸೂಕ್ತವಾದದ್ದು ಎಂದು ತೀರ್ಮಾನಿಸಲು ಸಾಕಾಗುತ್ತವೆ. ಇದು ಜನಾಂಗೀಯ ಹತ್ಯೆಯ ಒಪ್ಪಂದದ ಆರ್ಟಿಕಲ್ ಮೂರರಡಿ ಗಾಝಾದ ಫೆಲೆಸ್ತೀನಿಯರಿಗೆ ನರಮೇಧದಿಂದ ರಕ್ಷಣೆ ಪಡೆಯುವ ಹಕ್ಕು ಹಾಗೂ ಆ ಒಪ್ಪಂದದ ಪ್ರಕಾರ ಇಸ್ರೇಲ್ ನಡೆಯುವಂತೆ ಮಾಡಲು ಆಗ್ರಹಿಸುವ ದಕ್ಷಿಣ ಆಫ್ರಿಕಾದ ಆಗ್ರಹವನ್ನು ಪರಿಗಣಿಸುವ ಪ್ರಕರಣ ಇದಾಗಿದೆ ಎಂದು ಕೋರ್ಟ್ ಹೇಳಿದೆ.
ಈಗಾಗಲೇ ಗಾಝಾದಲ್ಲಿನ ಫೆಲೆಸ್ತೀನಿಯರ ಪರಿಸ್ಥಿತಿಯು ಹದಗೆಟ್ಟಿದ್ದು, ಅದು ಮತ್ತಷ್ಟು ಹದಗೆಡುವ ಎಲ್ಲ ಸಾಧ್ಯತೆಯೂ ಇದೆ ಎಂದು ನ್ಯಾಯಾಲಯವು ಹೇಳಿದೆ.
ಗಾಝಾ ಪಟ್ಟಿಯಲ್ಲಿನ ನಾಗರಿಕರು ತುಂಬಾ ದುರ್ಬಲ ಪರಿಸ್ಥಿತಿಯಲ್ಲಿದ್ದಾರೆ ಎಂದು ನ್ಯಾಯಾಲಯವು ಪರಿಗಣಿಸಿದೆ. ಅಕ್ಟೋಬರ್ 7, 2023ರ ನಂತರ ಇಸ್ರೇಲ್ ನಡೆಸಿರುವ ಕಾರ್ಯಾಚರಣೆಯ ನಂತರ, ಮನೆಗಳು, ಶಾಲೆಗಳು, ವೈದ್ಯಕೀಯ ಸೌಲಭ್ಯಗಳು ಹಾಗೂ ಇನ್ನಿತರ ಮುಖ್ಯ ಮೂಲಸೌಕರ್ಯಗಳನ್ನು ನಾಶಗೊಳಿಸುವ ಮೂಲಕ ಹತ್ತಾರು ಸಾವಿರ ಜನರ ಸಾವಿಗೆ ಕಾರಣವಾಗಿದೆ. ಇದರೊಂದಿಗೆ ದೊಡ್ಡ ಪ್ರಮಾಣದ ಜನರು ನಿರ್ವಸತಿಗರಾಗಿದ್ದಾರೆ. ಜನವರಿ 18ರಂದು ಇಸ್ರೇಲ್ ಪ್ರಧಾನಿ ಸೇನಾ ಕಾರ್ಯಾಚರಣೆಯು ಮತ್ತಷ್ಟು ತಿಂಗಳುಗಳ ಕಾಲ ಮುಂದುವರಿಯಲಿದೆ ಎಂಬ ಹೇಳಿಕೆಯನ್ನು ನ್ಯಾಯಾಲಯವು ಪರಿಗಣಿಸಿದೆ. ‘‘ಸದ್ಯ ಹಲವಾರು ಗಾಝಾ ನಿವಾಸಿಗಳಿಗೆ ಮೂಲಭೂತ ಆಹಾರ ಪದಾರ್ಥಗಳು, ಶುದ್ಧ ಕುಡಿಯುವ ನೀರು, ವಿದ್ಯುಚ್ಛಕ್ತಿ, ಅತ್ಯಗತ್ಯ ಔಷಧಗಳು ಹಾಗೂ ಬೆಚ್ಚಗಿಡುವ ಸಾಧನಗಳು ದೊರೆಯುತ್ತಿಲ್ಲ’’ ಎಂದು ನ್ಯಾಯಾಲಯ ಹೇಳಿದೆ.
‘‘ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಗಾಝಾ ಪಟ್ಟಿಯಲ್ಲಿ ಶಿಶುಗಳಿಗೆ ಜನ್ಮ ನೀಡುತ್ತಿರುವ ಶೇ. 15ರಷ್ಟು ಮಹಿಳೆಯರು ತೊಂದರೆ ಅನುಭವಿಸುವ ಸಾಧ್ಯತೆಯಿದೆ. ಬಾಣಂತಿ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣವು ವೈದ್ಯಕೀಯ ಆರೈಕೆಯ ಕೊರತೆಯ ಕಾರಣಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ’’ ಎಂದೂ ಆದೇಶದಲ್ಲಿ ನಮೂದಿಸಲಾಗಿದೆ.
‘‘ಇಂತಹ ಸನ್ನಿವೇಶಗಳಲ್ಲಿ, ನ್ಯಾಯಾಲಯವು ತನ್ನ ಅಂತಿಮ ತೀರ್ಪು ಪ್ರಕಟಿಸುವುದಕ್ಕೂ ಮುನ್ನ, ಗಾಝಾ ಪಟ್ಟಿಯಲ್ಲಿನ ದುರಂತಮಯ ಮಾನವೀಯ ಪರಿಸ್ಥಿತಿಯು ಮತ್ತಷ್ಟು ಗಂಭೀರ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ’’ ಎಂದೂ ತೀರ್ಪಿನಲ್ಲಿ ಹೇಳಲಾಗಿದೆ.
ನರಮೇಧ ಒಪ್ಪಂದದಲ್ಲಿ ಸುರಕ್ಷಿತ ಗುಂಪಾಗಿರುವ ಗಾಝಾದ ಫೆಲೆಸ್ತೀನಿಯರು ಎದುರಿಸುತ್ತಿರುವ ಭಾರೀ ಅಪಾಯವನ್ನು ಎತ್ತಿ ತೋರಿಸಿರುವ ಕೋರ್ಟ್, ತಕ್ಷಣದ ತುರ್ತು ಪರಿಹಾರವಾಗಿ ಕದನ ವಿರಾಮಕ್ಕೆ ಆದೇಶ ನೀಡುವುದು ಒಂದು ತಾರ್ಕಿಕ ಹೆಜ್ಜೆಯಾಗುತ್ತಿತ್ತು. ಆದರೆ ಅಂತರ್ ರಾಷ್ಟ್ರೀಯ ರಾಜಕೀಯವನ್ನು ಗಮನಿಸಿದರೆ, ಅಂತಹದೊಂದು ಆದೇಶ ಬಂದಿದ್ದರೆ ಅದನ್ನು ತಕ್ಷಣ ವಿರೋಧಿಸಲಾಗುತ್ತಿತ್ತು. ಒಂದು ಸಣ್ಣ ಬಹುಮತದ ನ್ಯಾಯಾಧೀಶರು ಕದನ ವಿರಾಮ ಘೋಷಿಸಬೇಕು ಎಂದು ತೀರ್ಮಾನಿಸಿದ್ದರೂ, ಇಸ್ರೇಲ್ ಹಾಗೂ ಅದರ ಪಾಶ್ಚಿಮಾತ್ಯ ಬೆಂಬಲಿಗ ದೇಶಗಳು ಅಂತರ್ ರಾಷ್ಟ್ರೀಯ ಕೋರ್ಟ್ ಅನ್ನೇ ಪ್ರಶ್ನಿಸಿ ಅದು ರಾಜಕೀಯ ಹಾಗೂ ಸಿದ್ಧಾಂತ ಪ್ರೇರಿತ ಆದೇಶ ಎಂದು ತಿರಸ್ಕರಿಸಿ ಬಿಡುತ್ತಿದ್ದವು. ಇಸ್ರೇಲ್ ಹೇಗೂ ಯಾವುದೇ ಕದನ ವಿರಾಮ ಆದೇಶವನ್ನು ಪಾಲಿಸುತ್ತಿರಲಿಲ್ಲ. ಅಂತಹ ಆದೇಶ ಬಂದರೂ ಅಮೆರಿಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅದರ ವಿರುದ್ಧ ವಿಟೋ ಚಲಾಯಿಸಿ ಬಿಡುತ್ತಿತ್ತು. ಹಾಗಾಗಿ ಈಗ ಬಂದಿರುವುದು ದಕ್ಷಿಣ ಆಫ್ರಿಕಾ ಹಾಗೂ ಫೆಲೆಸ್ತೀನಿಯರ ಪಾಲಿಗೆ ಧನಾತ್ಮಕ ಫಲಿತಾಂಶವಾಗಿದೆ.
ಮುಂದೇನಾಗಲಿದೆ?
ಆದೇಶದಲ್ಲಿ ಅದೆಷ್ಟೇ ಬಾರಿ ಪ್ರಕರಣದ ಜ್ಯೇಷ್ಠತೆಯನ್ನು ಇನ್ನೂ ಗುರುತಿಸಿಲ್ಲ ಹಾಗೂ ಇದು ಪ್ರಾಥಮಿಕ ಪತ್ತೆ ಮಾತ್ರ ಎಂದು ಹೇಳಲಾಗಿದ್ದರೂ, ದಕ್ಷಿಣ ಆಫ್ರಿಕಾವು ಆರೋಪಿಸಿದ್ದ ಜನಾಂಗೀಯ ಹತ್ಯೆಯ ಆರೋಪವನ್ನು ಮೇಲ್ನೋಟಕ್ಕೆ ಸಮರ್ಥಿಸುವಂತೆ ಜನಾಂಗೀಯ ಹತ್ಯೆ ಒಪ್ಪಂದವನ್ನು ಗಾಝಾ ಬಿಕ್ಕಟ್ಟಿಗೆ ಅಂತರ್‌ರಾಷ್ಟ್ರೀಯ ನ್ಯಾಯಾಲಯವು ಅನ್ವಯಿಸಿರುವುದರಿಂದ, ಅದೇ ಎಲ್ಲ ಕತೆಯನ್ನೂ ಹೇಳುತ್ತಿದೆ.
ಗಾಝಾದಲ್ಲಿನ ಫೆಲೆಸ್ತೀನಿಯರಿಗೆ ಸಂಬಂಧಿಸಿದಂತೆ (ಎ) ಒಂದು ಗುಂಪಿನ ಸದಸ್ಯರನ್ನು ಹತ್ಯೆಗೈಯುವುದು (ಬಿ) ಒಂದು ಗುಂಪಿನ ಸದಸ್ಯರಿಗೆ ಗಂಭೀರ ದೈಹಿಕ ಅಥವಾ ಮಾನಸಿಕ ಹಾನಿಯುಂಟು ಮಾಡುವುದು (ಸಿ) ಸಂಪೂರ್ಣ ಪ್ರಮಾಣದಲ್ಲಿ ಅಥವಾ ಭಾಗಶಃ ಒಂದು ಗುಂಪಿನ ಜೀವನದ ಪರಿಸ್ಥಿತಿಯ ಮೇಲೆ ಲೆಕ್ಕಾಚಾರದ ದೈಹಿಕ ಹಾನಿಯಂಟು ಮಾಡುವುದು ಹಾಗೂ (ಡಿ) ಒಂದು ಗುಂಪಿನೊಳಗೆ ಜನನವನ್ನು ತಡೆಯಲು ಉದ್ದೇಶಪೂರ್ವಕ ಕ್ರಮಗಳನ್ನು ಕೈಗೊಳ್ಳುವುದು ಸೇರಿದಂತೆ ಜನಾಂಗೀಯ ಹತ್ಯೆ ಒಪ್ಪಂದ ವಿಧಿ IIರ ಅಡಿಯ ಎಲ್ಲ ಕ್ರಮಗಳನ್ನು ನಿಯಂತ್ರಿಸಲು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಎಲ್ಲ ಬಗೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಂತರ್‌ರಾಷ್ಟ್ರೀಯ ನ್ಯಾಯಾಲಯವು ಇಸ್ರೇಲ್‌ಗೆ ಸೂಚಿಸಿದೆ.
ಎರಡನೆಯದಾಗಿ, ಇಸ್ರೇಲ್ ಸೇನಾಪಡೆಯು ಇಂತಹ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಇಸ್ರೇಲ್ ಖಾತರಿಪಡಿಸಬೇಕು ಎಂದು ಸೂಚಿಸಲಾಗಿದೆ.
ಈ ಎರಡು ತಾತ್ಕಾಲಿಕ ಕ್ರಮಗಳು ಇನ್ನು ಮುಂದೆ ಅಂತರ್‌ರಾಷ್ಟ್ರೀಯ ನ್ಯಾಯಾಲಯ ಹಾಗೂ ಅಂತರ್‌ರಾಷ್ಟ್ರೀಯ ಸಮುದಾಯವು ಗಾಝಾದಲ್ಲಿ ಇಸ್ರೇಲ್ ಡಿಫೆನ್ಸ್ ಫೋರ್ಸ್ ನಿಂದ ಆಗಲಿರುವ ಯಾವುದೇ ನಾಗರಿಕರ ಮೃತ್ಯು ಅಥವಾ ಗಾಯಾಳುಗಳಾಗುವುದನ್ನು ನ್ಯಾಯಾಲಯದ ಆದೇಶದ ಉಲ್ಲಂಘನೆ ಎಂದೇ ಪರಿಗಣಿತವಾಗಲಿವೆ.
ಮೂರನೆಯದಾಗಿ, ಗಾಝಾ ಪಟ್ಟಿಯಲ್ಲಿನ ಫೆಲೆಸ್ತೀನ್ ಗುಂಪಿನ ಸದಸ್ಯರ ಮೇಲೆ ಜನಾಂಗೀಯ ಹತ್ಯೆಯನ್ನು ಪ್ರತ್ಯಕ್ಷವಾಗಿ ನಡೆಸಿರುವ, ಇಲ್ಲವೇ ಸಾರ್ವಜನಿಕ ಪ್ರಚೋದನೆಯ ಮೂಲಕ ನಡೆಸಿರುವ ಎಲ್ಲ ತಪ್ಪಿತಸ್ಥರನ್ನು ದಂಡಿಸಲು ಹಾಗೂ ಅಂತಹ ನಡೆಗಳನ್ನು ನಿಯಂತ್ರಿಸಲು ತನ್ನ ಅಧಿಕಾರ ವ್ಯಾಪ್ತಿಯೊಳಗೆ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು ಎಂದೂ ಆದೇಶದಲ್ಲಿ ಹೇಳಲಾಗಿದೆ. ಅರ್ಥಾತ್ ಈ ಆದೇಶದನ್ವಯ, ಗ್ಯಾಲಂಟ್ ಹಾಗೂ ಹೆರ್ಗೋಝ್‌ರಂತಹ ನಾಯಕರ ದಂಡನೆಗೆ ದಾರಿಯಾಗುವ ಸಾಧ್ಯತೆ ಇದೆ. ಒಂದು ವೇಳೆ ಇಸ್ರೇಲ್ ಇಂತಹ ಕ್ರಮ ಕೈಗೊಳ್ಳಲು ವಿಫಲವಾದರೆ, ಇಸ್ರೇಲ್ ದೇಶವು ಅಂತರ್‌ರಾಷ್ಟ್ರೀಯ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಂತಾಗಲಿದೆ.
ಇಸ್ರೇಲ್‌ಗೆ ಗಾಝಾ ಪಟ್ಟಿಯಲ್ಲಿ ಫೆಲೆಸ್ತೀನಿಯರು ಎದುರಿಸುತ್ತಿರುವ ಪ್ರತಿಕೂಲ ಪರಿಣಾಮಗಳನ್ನು ಸುಧಾರಿಸಲು ತಕ್ಷಣ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು ಅಲ್ಲಿಗೆ ಮೂಲಭೂತ ಸೇವೆಗಳು ಹಾಗೂ ಮಾನವೀಯ ಸಹಾಯ ತಲುಪುವಂತೆ ಮಾಡಬೇಕು ಎಂದೂ ಹೇಳಲಾಗಿದೆ.
ಇವೆಲ್ಲವನ್ನೂ ಗಮನಿಸಿದರೆ, ಜೊತೆಗೆ ಒಂದು ತಿಂಗಳ ಒಳಗೆ ಇಸ್ರೇಲ್ ಅಂತರ್‌ರಾಷ್ಟ್ರೀಯ ನ್ಯಾಯಾಲಯದ ಸೂಚನೆಗಳನ್ನು ಪಾಲಿಸಿರುವ ಬಗ್ಗೆ ವರದಿಯನ್ನೂ ನೀಡಬೇಕಿರುವುದರಿಂದ ಅದು ಮತ್ತೆ ಫೆಲೆಸ್ತೀನಿಯರನ್ನು ಗುರಿ ಮಾಡುವುದು ತಪ್ಪುವ ಸಾಧ್ಯತೆ ಇದೆ. ಹಾಗಾಗದಿದ್ದರೂ, ಈಗಿನ ಐಸಿಜೆ ಆದೇಶಗಳಿಂದಾಗಿ ನಾಗರಿಕ ಸಮಾಜ ಫೆಲೆಸ್ತೀನಿಯರ ವಿರುದ್ಧದ ಇಸ್ರೇಲ್‌ನ ಆಕ್ರಮಣವನ್ನು ಬೆಂಬಲಿಸುತ್ತಿರುವ ಯುರೋಪ್ ಹಾಗೂ ಉತ್ತರ ಅಮೆರಿಕದ ದೇಶಗಳ ಮೇಲೆ ನಿಲುವು ಬದಲಾಯಿಸುವಂತೆ ಒತ್ತಡ ಹೇರುವ ಸಾಧ್ಯತೆ ಇದೆ.
ಹಾಗಾಗಿ ಐಸಿಜೆಯ ತೀರ್ಪು ಗಾಝಾ ಮಾತ್ರವಲ್ಲ, ಇಸ್ರೇಲ್‌ನಲ್ಲೂ ಒಂದು ಬದಲಾವಣೆಗೆ ಕಾರಣವಾಗಬಹುದು. ಬೆಂಜಮಿನ್ ನೆತನ್ಯಾಹು ಅವರ ನೀತಿಯಿಂದಾಗಿ ಫೆಲೆಸ್ತೀನಿಯರ ವಿರುದ್ಧ ಇಸ್ರೇಲ್ ಸರಕಾರ ನಡೆಸಿರುವ ಐತಿಹಾಸಿಕ ಅನ್ಯಾಯಕ್ಕೆ ಈಗ - ನರಮೇಧ - ಎಂಬ ಹೆಸರು ಬಂದು ಬಿಟ್ಟಿದೆ. ಇದು ಇಸ್ರೇಲಿ ಜನರಿಗೆ ಯಾವುದೇ ರೀತಿಯಲ್ಲೂ ಸಂತಸ ತರುವುದಿಲ್ಲ.
ಕೊನೆಯದಾಗಿ, ವಿಶ್ವ ವೇದಿಕೆಯಲ್ಲಿ ದಕ್ಷಿಣ ಆಫ್ರಿಕಾದ ಘನತೆಯನ್ನು ಸರಿಗಟ್ಟುವ ಮತ್ತೊಂದು ದೇಶವು ಕಂಡು ಬರುತ್ತಿಲ್ಲ. ವಾಸ್ತವವಾಗಿ, ದಕ್ಷಿಣ ಜಗತ್ತಿನ ದೇಶಗಳು ಅದರಿಂದ ಒಂದಿಷ್ಟು ಧೈರ್ಯ ಹಾಗೂ ಸ್ಫೂರ್ತಿಯನ್ನು ಪಡೆಯಲಿವೆ. ಅಲ್ಲದೆ, ರಾಜನೀತಿ ಹಾಗೂ ರಾಜತಾಂತ್ರಿಕತೆ, ರಾಷ್ಟ್ರೀಯ ಹಿತಾಸಕ್ತಿ ಹಾಗೂ ಜಾಗತಿಕ ನ್ಯಾಯಕ್ಕಾಗಿ ಹೋರಾಡುವುದು ಒಂದಕ್ಕೊಂದು ವೈರುಧ್ಯಗಳಲ್ಲ ಎಂಬುದರ ಕುರಿತು ಅವು ಪಾಠ ಕಲಿಯಲಿವೆ.
ಕೃಪೆ: thewire.in