ಕೊಡಗು: ಕಣ್ತೆರೆಯುವ ಮುನ್ನವೇ ಉಸಿರು ನಿಲ್ಲಿಸುವ ಹಸುಗೂಸುಗಳು

Update: 2024-03-11 10:25 GMT

Photo:freepik

ಮಡಿಕೇರಿ, ಮಾ.10: ನರಗೋಗ, ಹೃದಯ ಕಾಯಿಲೆ, ಸೆಪಿಸ್ಸ್ ನ್ಯುಮೋನಿಯಾ, ಅತಿಸಾರ ಕಾಮಾಲೆ, ಜನನ ಸಮಯದಲ್ಲಿ ಉಸಿರು ಗಟ್ಟುವಿಕೆ, ಅವಧಿ ಪೂರ್ಣ ಜನಮ, ಶಿಶುವಿನ ಕಡಿಮೆ ತೂಕದಿಂದ ಉಂಟಾಗುವ ಸಮಸ್ಯೆ ಹೀಗೆ ನಾನಾ ಕಾರಣಗಳಿಂದ ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿಯ ಅಂಕಿ ಅಂಶಗಳ ಪ್ರಕಾರ 2019 ರಿಂದ 2024ರ ಜನವರಿವರೆಗೆ 299 ಶಿಶುಗಳು ಪ್ರಪಂಚ ನೋಡುವ ಮೊದಲೇ ಮರಣ ಹೊಂದಿವೆ.

ಕೊಡಗು ಜಿಲ್ಲೆಯಲ್ಲಿ ವಾರ್ಷಿಕವಾಗಿ ಸರಾಸರಿ 6,500 ಹೆರಿಗೆ ಆಗುತ್ತವೆ. ಇದರಲ್ಲಿ ಪ್ರತೀ ಸಾವಿರ ಹೆರಿಗೆ ಪ್ರಕರಣಗಳಲ್ಲಿ ಕಳೆದ ಐದು ವರ್ಷಗಳಲ್ಲಿ 8 ರಿಂದ 9 ನವಜಾತ ಶಿಶುಗಳು ಸಾವನ್ನಪ್ಪುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿವೆ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ವಾರ್ಷಿಕವಾಗಿ ಆಗುತ್ತಿರುವ ಹೆರಿಗೆಗಳ ಸಂಖ್ಯೆ ಕಡಿಮೆ ಇದೆ. 5 ಲಕ್ಷದ 55 ಸಾವಿರ ಜನಸಂಖ್ಯೆ ಇರುವ ಕೊಡಗು ಜಿಲ್ಲೆಯಲ್ಲಿ ವಾರ್ಷಿಕವಾಗಿ 6 ಸಾವಿರಕ್ಕೂ ಅಧಿಕ ಹೆರಿಗೆಗಳು ಆಗುತ್ತಿದ್ದು, ಶಿಶುಮರಣ ಸಂಖ್ಯೆ ಸರಾಸರಿ 9ರ ಅನುಪಾತದಲ್ಲಿವೆ.

ದೊರಕದ ಸೂಕ್ತ ಚಿಕಿತ್ಸೆ:

ಕೊಡಗು ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರ ಮತ್ತು ಸಿಬ್ಬಂದಿ ಕೊರತೆ ಇದೆ. ವೈದ್ಯರ ಅಲಭ್ಯ ಮತ್ತು ರಾತ್ರಿ ವೇಳೆಯಲ್ಲಿ ಜಿಲ್ಲೆಯ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಾದಿಯರೇ ಹೆರಿಗೆ ಪ್ರಕರಣಗಳು ನಿಭಾಯಿಸುತ್ತಾರೆ.

ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಸಂಭವಿಸಿರುವ ಶಿಶುಮರಣ ಪ್ರಕರಣಗಳಲ್ಲಿ ತಾಯಿಯ ನಿರ್ಲಕ್ಷ್ಯ, ಮಗುವಿನ ತೂಕ ಕಡಿಮೆ, ಉಸಿರಾಟ ಸಮಸ್ಯೆ, ಹೆರಿಗೆ ಸಮಯದಲ್ಲಿ ಸೂಕ್ತ ರೀತಿಯಲ್ಲಿ ದೊರಕದ ಚಿಕಿತ್ಸೆ ಈಗೇ ನಾನಾ ಕಾರಣಗಳಿಂದ ಶಿಶುಮರಣ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸಿವೆ.

ಸರಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಎಮರ್ಜೆನ್ಸಿ ವೇಳೆಯಲ್ಲಿ ಚಿಕಿತ್ಸೆ ನೀಡಲು ಹಿಂದೇಟು ಹಾಕುವ ವೈದ್ಯರು ಜಿಲ್ಲೆಯ ಮಕ್ಕಳ ಸ್ಪೆಷಲಿಸ್ಟ್ ಆಸ್ಪತ್ರೆಗೆ ರವಾನೆ ಮಾಡಿರುವ ಹಲವು ನಿರ್ದೇಶನಗಳಿವೆ. ತಾಯಿಯಲ್ಲಿ ಅತೀ ಹೆಚ್ಚು ರಕ್ತಸ್ರಾವ ಉಂಟಾಗಿರುವ ಪ್ರಕರಣಗಳಲ್ಲಿ ಕೂಡ ಶಿಶಮರಣ ಹೆಚ್ಚಿನ ಸಂಖ್ಯೆಯಲ್ಲಿ ಉಂಟಾಗಿವೆ. ಅದಲ್ಲದೇ ಕೊಡಗಿನ ಕೆಲವೊಂದು ಹಾಡಿಗಳಲ್ಲಿ ತಾವೇ ಸ್ವತಃ ಹೆರಿಗೆ ಮಾಡಿಸಿದ ಪ್ರಕರಣಗಳಲ್ಲಿ ಕೂಡ ಶಿಶುಮರಣಗಳು ಉಂಟಾಗಿವೆ.

ರಾಷ್ಟ್ರೀಯ ಆರೋಗ್ಯ ಮಿಷನ್ ಜಾರಿಯಾದ ಬಳಿಕ ತಾಯಿ-ಶಿಶುವಿನ ಆರೋಗ್ಯ ಸುಧಾರಣೆಗೆ ಮಹತ್ತರ ಯೋಜನೆಗಳನ್ನು ಆರೋಗ್ಯ ಇಲಾಖೆ ಕೈಗೊಳ್ಳಲಾಗಿದೆ.ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗರ್ಭಧರಿಸಿದ ಆರಂಭಿಕ ಹಂತದಲ್ಲಿಯೇ ಹೆಸರು ನೋಂದಾಯಿಸಿಕೊಂಡು ಅವರಿಗೆ ಪೋಷಕಾಂಶಯುಕ್ತ ಆಹಾರ, ಮಾತ್ರೆಗಳನ್ನು ಒದಗಿಸಲಾಗುತ್ತಿದ್ದರು ಕೂಡ, ಕೊಡಗು ಜಿಲ್ಲೆಯಲ್ಲಿ ಶಿಶುಗಳ ಮರಣವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.

ಕೋವಿಡ್ ಸಮಯದಲ್ಲಿ ಅತೀ ಹೆಚ್ಚು ಶಿಶುಮರಣ:

ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಕೋವಿಡ್ ಸಂದರ್ಭದಲ್ಲೇ ಅತೀ ಹೆಚ್ಚು ಶಿಶುಮರಣ ಸಂಭವಿಸಿದ್ದು, ಕೋವಿಡ್ ಸಂದರ್ಭದಲ್ಲಿ ಬಹುತೇಕ ಉಸಿರಾಟ ತೊಂದರೆಯಿಂದಲೇ ಶಿಶುಗಳು ಮೃತಪಟ್ಟಿವೆ. 2019-20ನೇ ಸಾಲಿನಲ್ಲಿ 71 ಮತ್ತು 2020-21ನೇ ಸಾಲಿನಲ್ಲಿ 75 ಶಿಶುಗಳು ಸಾವನ್ನಪ್ಪಿವೆ.

ಐದು ವರ್ಷಗಳಲ್ಲಿ ಹೆರಿಗೆ ವೇಳೆಯಲ್ಲಿ 19 ತಾಯಿಂದಿರು ಕೂಡ ಮೃತಪಟ್ಟಿದ್ದು, 2019-20ರಲ್ಲಿ 2, 2020-21ನೇ ಸಾಲಿನಲ್ಲಿ 4, 2021-22ನೇ ಸಾಲಿನಲ್ಲಿ 4 , 2022-23ನೇ ಸಾಲಿನಲ್ಲಿ 6 ಮತ್ತು 2023 ಎಪ್ರಿಲ್‌ನಿಂದ 2024ರ ಜನವರಿವರೆಗೆ 3 ತಾಯಿಯಂದಿರು ಹೆರಿಗೆ ವೇಳೆಯಲ್ಲಿ ಮೃತಪಟ್ಟಿದ್ದಾರೆ.

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ 2023ರ ಎಪ್ರಿಲ್‌ನಿಂದ 2024ರ ಜನವರಿ ವರೆಗೆ 4,456 ನವಜಾತ ಶಿಶುಗಳು ಮೃತಪಟ್ಟಿದೆ. 2020-21ರಲ್ಲಿ 6,293, 2021-22ರಲ್ಲಿ 6,722 ಹಾಗೂ 2022-23ನೇ ಸಾಲಿನಲ್ಲಿ 7,471 ಶಿಶುಗಳು ಮೃತಪಟ್ಟಿವೆ. ರಾಷ್ಟ್ರೀಯ ಆರೋಗ್ಯ ನೀತಿ 2017ರ ಅನ್ವಯ ಎಲ್ಲಾ ರಾಜ್ಯಗಳಿಗೆ 2025ರ ವೇಳೆಗೆ ನವಜಾತ ಶಿಶುಮರಣ ದರವನ್ನು 16ಕ್ಕಿಂತ (ಪ್ರತೀ ಸಾವಿರ ಜೀವಂತ ಜನನಗಳಿಗೆ) ಕಡಿಮೆ ಸಾಧಿಸಲು ಗುರು ನಿಗದಿಪಡಿಸಿದೆ. ಪ್ರಸಕ್ತ ರಾಜ್ಯದಲ್ಲಿ ಶಿಶುಮರಣ ದರವು 14 (ಪ್ರತೀ 1,000 ಜೀವಂತ ಜನನಗಳಿಗೆ) ಇದೆ.

ಕೊಡಗು ಜಿಲ್ಲೆಯಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಗರ್ಭಿಣಿಯರ ಆರೋಗ್ಯದ ಬಗ್ಗೆ ಹೆಚ್ಚು ಮಾಹಿತಿ ಪಡೆದು ಅವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉತ್ತಮ ಚಿಕಿತ್ಸೆಯನ್ನು ನೀಡಲಾಗುತ್ತಿವೆ. ಗರ್ಭಿಣಿಯರು ಗರ್ಭಧರಿಸಿದ ವೇಳೆಯಲ್ಲಿ ಅತೀ ಹೆಚ್ಚು ಪೌಷ್ಟಿಕಾಂಶ ಆಹಾರವನ್ನು ಸೇವಿಸುವಂತೆ ಅಂಗನವಾಡಿ ಕಾರ್ಯಕರ್ತೆಯರು ಅರಿವು ಮೂಡಿಸುತ್ತಿದ್ದಾರೆ. ಗರ್ಭಿಣಿಯರ ಮನೆಗೆ ಭೇಟಿ ನೀಡಿ ಆಶಾಕಾರ್ಯಕರ್ತೆಯರು ಅವರ ಆರೋಗ್ಯದ ಸ್ಥಿತಿ-ಗತಿ ಬಗ್ಗೆ ವಿಚಾರಿಸುತ್ತಿರುತ್ತಾರೆ ಎಂದು ಡಿಎಚ್‌ಒ ಡಾ.ಕೆ.ಎಂ.ಸತೀಶ್ ಕುಮಾರ್ ಮಾಹಿತಿ ನೀಡಿದರು.

5 ವರ್ಷಗಳಲ್ಲಿ ಮೃತಪಟ್ಟಿರುವ ಶಿಶುಗಳ ಸಂಖ್ಯೆ

2019-20: 71

2020-21: 75

2021-22: 49

2022-23: 67

2023 -24 (ಜನವರಿವರೆಗೆ): 37

ಜೀವಂತ ಜನನಗಳ ಸಂಖ್ಯೆ

2019-20: 6,369

2020-21: 6,632

2021-22: 6,607

2022-23: 6,971

2023-24 (ಜನವರಿವರೆಗೆ): 5,349

ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ನಡುವೆಯೂ ಕೂಡ ಶಿಶುಮರಣ ನಿಯಂತ್ರಣಕ್ಕೆ ಬಂದಿವೆ. ಹೆರಿಗೆ ಪ್ರಕರಣಗಳಲ್ಲಿ ಪಕ್ಕದ ಹಾಸನ ಜಿಲ್ಲೆಯ ಅರಕಲಗೂಡು ಮತ್ತು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಭಾಗದಿಂದಲೂ ಕೂಡ ಮಡಿಕೇರಿ ಜಿಲ್ಲಾಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು,ಇಲ್ಲಿಯೇ ಮಗುವಿಗೆ ಜನ್ಮ ನೀಡುತ್ತಿದ್ದಾರೆ.

-ಡಾ.ಕೆ.ಎಂ.ಸತೀಶ್ ಕುಮಾರ್, ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಅಧಿಕಾರಿ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎಂ. ಇಸ್ಮಾಯಿಲ್ ಕಂಡಕೆರೆ

contributor

Similar News