ಕೊಡವ, ಅರೆಭಾಷೆ ಸಾಹಿತ್ಯ ಅಕಾಡಮಿ ಶೀಘ್ರದಲ್ಲೇ ಅಧ್ಯಕ್ಷರ ನೇಮಕ ಸಾಧ್ಯತೆ

Update: 2024-02-10 09:51 GMT

ಮಡಿಕೇರಿ, ಫೆ.9: ಕಳೆದ ಒಂದೂವರೆ ವರ್ಷದಿಂದ ಯಾವುದೇ ಚಟುವಟಿಕೆಗಳು ನಡೆಯದೆ ಸ್ತಬ್ಧವಾಗಿರುವ ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಗೆ ಫೆ.16ರೊಳಗೆ ಅಧ್ಯಕ್ಷರನ್ನು ನೇಮಕ ಮಾಡುವ ಮೂಲಕ ಮರುಜೀವ ಪಡೆಯುವ ಸಾಧ್ಯತೆಗಳಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಗೆ ಒಳಪಡುವ 14 ಅಕಾಡಮಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ನಿರೀಕ್ಷೆ ಇತ್ತು. ಮೊದಲ ಅಧಿವೇಶನದ ಬೆನ್ನಲ್ಲೇ ನೇಮಕ ಪಟ್ಟಿ ಹೊರಬೀಳಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಅಧ್ಯಕ್ಷರ ನೇಮಕ ವಿಳಂಬವಾಗಿತ್ತು. ಅಂತಿಮವಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಎರಡನೇ ಬಜೆಟ್ ಫೆ. 16ರಂದು ಮಂಡನೆಯಾಗಲಿದ್ದು, ಅದರೊಳಗೆ ಅಧ್ಯಕ್ಷ ಹಾಗೂ ಸದಸ್ಯರ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಅರೆಭಾಷೆ ಸಾಹಿತ್ಯ ಅಕಾಡಮಿ ಅಧ್ಯಕ್ಷ ಸ್ಥಾನ ಯಾವ ಜಿಲ್ಲೆಗೆ?

ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಅರೆಭಾಷೆ ಸಾಹಿತ್ಯ ಅಕಾಡಮಿ ಅಧ್ಯಕ್ಷ ಸ್ಥಾನ ಕೊಡಗು ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೋ ಅಥವಾ ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಒಲಿಯಲಿದೆಯೋ ಎನ್ನುವುದು ಕುತೂಹಲವಾಗಿದೆ.

ಅರೆಭಾಷೆ ಸಾಹಿತ್ಯ ಅಕಾಡಮಿ ಅಧ್ಯಕ್ಷ ಸ್ಥಾನಕ್ಕೆ ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬೇಕಲ್ ರಮಾನಾಥ್, ಎ.ಎಸ್. ಪೊನ್ನಣ್ಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಚಾಲಕ ಸೂರಜ್ ಹೊಸೂರು, ಅರೆಭಾಷೆ ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಹಾಗೂ ಕೊಡಗು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಕೊಡಗು ಜಿಲ್ಲಾ ಸೇವಾದಳದ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪಆಕಾಂಕ್ಷಿಗಳಾಗಿದ್ದಾರೆ.

ಅರೆಭಾಷೆ ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್ ಅವರಿಗೆ ಮತ್ತೊಮ್ಮೆ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಗಳಿದೆ. ಮತ್ತೊಂದೆಡೆ ಮುನೀರ್ ಅಹ್ಮದ್ ಅವರು ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ರಾಜಕೀಯ ರಹಿತವಾಗಿ ಆಯ್ಕೆ ನಡೆಸಲು ಒತ್ತಾಯ

ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಚ್ಚು ಒತ್ತು ನೀಡಬೇಕಾದ ಎಲ್ಲ ಸಾಹಿತ್ಯ ಅಕಾಡಮಿಗಳು ಪ್ರಸಕ್ತ ವರ್ಷಗಳಲ್ಲಿ ರಾಜಕೀಯದ ಬೀಡಾಗಿ ಮಾರ್ಪಟ್ಟಿವೆ. ಪಕ್ಷ ನಿಷ್ಠೆ, ಅಧಿಕಾರದಲ್ಲಿರುವ ಪಕ್ಷದ ಮುಖಂಡರಿಗೆ ಸಾಹಿತ್ಯ ಅಕಾಡಮಿಗಳ ಅಧ್ಯಕ್ಷ ಸ್ಥಾನ ನೀಡಲಾಗುತ್ತಿದೆ. ಆದರೆ, ಸಾಹಿತ್ಯ, ಕಲೆ ಹಾಗೂ ಭಾಷೆಗಳ ಅಭಿವೃದ್ಧಿಗೆ ಶ್ರಮಿಸಿದವರಿಗೆ ಅಧ್ಯಕ್ಷ ಸ್ಥಾನ ನೀಡುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಕೊಡವ ಹಾಗೂ ಅರೆಭಾಷೆ ಸಾಹಿತ್ಯದ ಬೆಳವಣಿಗೆಗೆ ಶ್ರಮಿಸಿದವರಿಗೆ ಅಕಾಡಮಿ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿದೆ.

ಮೂರು ವರ್ಷಗಳ ಅಧಿಕಾರವಧಿಯ ಅಕಾಡಮಿ ಅಧ್ಯಕ್ಷರ ಅವಧಿ 2022 ಅಕ್ಟೋಬರ್ 10ಕ್ಕೆ ಅಂತ್ಯಗೊಂಡಿತ್ತು. ಮತ್ತೊಂದು ಅವಧಿಗೆ ನೇಮಕಕ್ಕೆ ಅವಕಾಶವಿದ್ದರೂ ಚುನಾವಣೆ ಸಮೀಪಿಸುತ್ತಿದ್ದರಿಂದ ಬಿಜೆಪಿ ಸರಕಾರ ಹೊಸ ಅಧ್ಯಕ್ಷ ನೇಮಕಕ್ಕೆ ಮುಂದಾಗಲಿಲ್ಲ. ಇದರಿಂದ ಅಕಾಡಮಿಗಳಿಗೆ ಅಧಿಕಾರಿಗಳೇ ಉಸ್ತುವಾರಿಯಾಗಿದ್ದು, ಯಾವುದೇ ಕಾರ್ಯಕ್ರಮಗಳು ನಡೆಯದೇ ಸಾಹಿತ್ಯ ಅಕಾಡಮಿಗಳು ನಿಂತ ನೀರಾಗಿದೆ. ಇದೀಗ ಸಾಹಿತ್ಯ ಅಕಾಡಮಿಗಳಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದ್ದು, ಕೊಡವ ಹಾಗೂ ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡಮಿಗೆ ಮರುಜೀವ ಸಿಗಲಿದೆ. ಇದೇ ಮೊದಲ ಬಾರಿಗೆ ರಾಜ್ಯ ಸರಕಾರ ಅಕಾಡಮಿ ಹಾಗೂ ಪ್ರಾಧಿಕಾರ ಅಧ್ಯಕ್ಷ ಮತ್ತು ಸದಸ್ಯರ ನೇಮಕಕ್ಕೆ ಸಾಂಸ್ಕೃತಿಕ ಲೋಕದ ತಜ್ಞರ ಸಮಿತಿ ನೇಮಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎಂ. ಇಸ್ಮಾಯಿಲ್ ಕಂಡಕರೆ

contributor

Similar News