ಅಧ್ಯಕ್ಷರ ಜಿದ್ದಿಗೆ ಕೆಪಿಎಸ್ಸಿ ಮೂರಾಬಟ್ಟೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕರ್ನಾಟಕ ಲೋಕಸೇವಾ ಆಯೋಗದ ಎಲ್ಲರೊಂದಿಗೆ ಸಭೆ ನಡೆಸಿ ಗೊಂದಲ ನಿವಾರಿಸಬೇಕು. ಅಷ್ಟು ಮಾತ್ರವಲ್ಲ ಕರ್ನಾಟಕ ಲೋಕಸೇವಾ ಆಯೋಗದ ವಿಶ್ವಾಸಾರ್ಹತೆ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ಮದ್ದು’ ಅರೆಯುವುದು ಇಂದಿನ ಅಗತ್ಯವಾಗಿದೆ. ಕರ್ನಾಟಕ ಲೋಕಸೇವಾ ಆಯೋಗವನ್ನು ಅತ್ಯಂತ ಪಾರದರ್ಶಕ ಸಂಸ್ಥೆಯನ್ನಾಗಿ ರೂಪಾಂತರಿಸಿದರೆ ಕರ್ನಾಟಕದ ಘನತೆ ಗೌರವ ಹೆಚ್ಚುತ್ತದೆ. ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರವಧಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಸುಧಾರಣೆಯಾಗದಿದ್ದರೆ ಇನ್ಯಾವತ್ತೂ ಅದು ವಿಶ್ವಾಸಾರ್ಹ ಸಂಸ್ಥೆಯಾಗುವುದಿಲ್ಲ. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರು ಆತ್ಮಾವಲೋಕನ ಮಾಡಿಕೊಂಡು ಕಾರ್ಯಪ್ರವೃತ್ತರಾಗಬೇಕು.
ಕೇಂದ್ರ ಲೋಕಸೇವಾ ಆಯೋಗ, ಕರ್ನಾಟಕ ಲೋಕಸೇವಾ ಆಯೋಗ ಸೇರಿದಂತೆ ಅಸ್ತಿತ್ವದಲ್ಲಿರುವ ಎಲ್ಲ ನೇಮಕಾತಿ ಆಯೋಗ-ಪ್ರಾಧಿಕಾರ-ಸಮಿತಿಗಳು ಉದ್ಯೋಗಾಕಾಂಕ್ಷಿಗಳಿಗೆ ಕಾಮದೇನು-ಕಲ್ಪವೃಕ್ಷ ಇದ್ದಂತೆ. ಭಾರತದಲ್ಲಿ ಕೇಂದ್ರ ಲೋಕಸೇವಾ ಆಯೋಗ ಮಾತ್ರ ನೇಮಕಾತಿ ಪ್ರಕ್ರಿಯೆಗಳನ್ನು ನಿರಂತರ ನಡೆಸುತ್ತಲಿದೆ. ಮಾತ್ರವಲ್ಲ; ಪಾರದರ್ಶಕ ಆಯ್ಕೆ ಪ್ರಕ್ರಿಯೆಯಿಂದಾಗಿ ಈ ಹೊತ್ತಿಗೂ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ. ಒಂದು ಕಾಲಕ್ಕೆ ಕರ್ನಾಟಕ ಲೋಕಸೇವಾ ಆಯೋಗವು ನಿಯಮಿತವಾಗಿ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುತ್ತಿತ್ತು. ಇಷ್ಟಾಗಿಯೂ ಕರ್ನಾಟಕ ಲೋಕಸೇವಾ ಆಯೋಗ ‘ವಿಶ್ವಾಸಾರ್ಹತೆ’ ಹೆಚ್ಚಿಸಿಕೊಳ್ಳಲು ಕಾಯಕಲ್ಪ ಅಗತ್ಯ ಇದೆ ಎನ್ನುವುದು ಸರಕಾರಗಳು ಮನಗಂಡಿವೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಆಮೂಲಾಗ್ರ ಬದಲಾವಣೆ ತಂದು ‘ಭ್ರಷ್ಟಾಚಾರರಹಿತ’ ವ್ಯವಸ್ಥೆತರಲು ಪ್ರಬಲ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ. ಅಂತಹ ವ್ಯವಸ್ಥೆ ಸಾಧ್ಯವಾದರೆ ಈ ನಾಡಿನ ಪ್ರತಿಭಾವಂತರ ಸೇವೆ ಇಲ್ಲಿಯೇ ಬಳಸಿಕೊಳ್ಳಬಹುದು.
ಸದ್ಯ ಕರ್ನಾಟಕ ಲೋಕಸೇವಾ ಆಯೋಗ ಯಾವುದೇ ಗೊಂದಲ ಇಲ್ಲದೆ ನೇಮಕಾತಿ ಪ್ರಕ್ರಿಯೆ ನಡೆಸಿಕೊಟ್ಟರೆ ‘ಅದೇ ಮಹದುಪಕಾರ’ ಎಂದು ಅಭ್ಯರ್ಥಿಗಳು ಧನ್ಯತಾಭಾವ ಹೊಂದುವಂತಾಗಿದೆ. ಯಾಕೆಂದರೆ ಆಯೋಗವು ಒಂದಲ್ಲ ಒಂದು ವಿವಾದದಲ್ಲಿ ಸುದ್ದಿಯಾಗಿ ನೇಮಕಾತಿ ಪ್ರಕ್ರಿಯೆಗೆ ಅಡ್ಡಿ ಆತಂಕ ಎದುರಾಗುತ್ತಲೇ ಇರುತ್ತದೆ. ನೇಮಕಾತಿ ಅಧಿಸೂಚನೆ ಹೊರಡಿಸಿದ ಮೇಲೆ ನಿಗದಿತ ಸಮಯದಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುವುದೇ ಇಲ್ಲ. ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಆಯೋಗದ ಬಗೆಗಿನ ನಂಬಿಕೆ ಕಡಿಮೆಯಾಗುತ್ತಿದೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿನ ಇತ್ತೀಚಿನ ಒಳಜಗಳ ಗಮನಿಸಿದರೆ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯದರ್ಶಿಗಳ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ತಾಳ-ಮೇಳವಿಲ್ಲದಂತಾಗಿದೆ. ಸ್ವಾರ್ಥ, ಸ್ವಜನ ಪಕ್ಷಪಾತ, ಅಹಂ, ಗುಂಪುಗಾರಿಕೆ ಒಣ ಪ್ರತಿಷ್ಠೆಯೆದುರು ನೀತಿ ನಿಯಮಗಳು ಮೌನಕ್ಕೆ ಶರಣಾಗಿವೆ. ನೇಮಕಾತಿ ಪ್ರಕ್ರಿಯೆ ಕುಂಟುತ್ತಾ ಸಾಗಿದೆೆ.
2019 ಸೆಪ್ಟ್ಟಂಬರ್ 3 ರಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೇಮನಾಳ ಗ್ರಾಮದ ಶಿವಶಂಕರಪ್ಪ ಎಸ್. ಸಾಹುಕಾರ ಅವರು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ನೇಮಕಗೊಂಡಿದ್ದರು. ಆಗ ನಿವೃತ್ತ ಐಎಎಸ್ ಅಧಿಕಾರಿ ಷಡಕ್ಷರಿ ಸ್ವಾಮಿಯವರು ‘ಆಯೋಗದ’ ಅಧ್ಯಕ್ಷರಾಗಿದ್ದರು. 2021ರಲ್ಲಿ ಷಡಕ್ಷರಿ ಸ್ವಾಮಿಯವರ ಅಧಿಕಾರಾವಧಿ ಮುಗಿಯಿತು. ಆಗಿನ ಬಿಜೆಪಿ ಸರಕಾರ ನಿಯಮಗಳನ್ನು ಗಾಳಿಗೆ ತೂರಿ ಸದಸ್ಯರಾಗಿದ್ದ ಶಿವಶಂಕರಪ್ಪ ಎಸ್. ಸಾಹುಕಾರ ಅವರ ಹೆಸರನ್ನು ಆಯೋಗದ ಅಧ್ಯಕ್ಷರ ಸ್ಥಾನಕ್ಕೆ ರಾಜ್ಯಪಾಲರಿಗೆ ಶಿಫಾರಸು ಮಾಡಿತು. ಅಂದಿನ ರಾಜ್ಯಪಾಲರಾಗಿದ್ದ ವಜುಬಾಯಿ ವಾಲಾ ಅವರು ನಿಯಮಗಳನ್ನು ಗಂಭೀರವಾಗಿ ಪರಿಶೀಲಿಸದೆ ಸರಕಾರದ ಶಿಫಾರಸನ್ನು ಒಪ್ಪಿಕೊಂಡು ಶಿವಶಂಕರಪ್ಪ ಎಸ್. ಸಾಹುಕಾರ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದರು. ಆಯೋಗದಲ್ಲಿ 8 ಜನ ಹಿರಿಯ ಸದಸ್ಯರಿದ್ದರು. ಅವರ ಹಿರಿತನವನ್ನು ಕಡೆಗಣಿಸಲಾಗಿತ್ತು. ಶಿವಶಂಕರಪ್ಪ ಎಸ್. ಸಾಹುಕಾರ ಅವರು ಕೃಷಿ ಇಂಜಿನಿಯರಿಂಗ್ ಪದವೀಧರ. ಆಡಳಿತ ನಡೆಸಿದ ಅನುಭವ ಇರಲಿಲ್ಲ.
ಕರ್ನಾಟಕ ಲೋಕಸೇವಾ ಆಯೋಗಕ್ಕೆ ಶಿವಶಂಕರಪ್ಪ ಎಸ್. ಸಾಹುಕಾರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದು ನಿಯಮಬಾಹಿರ ಎಂದು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದರು. ಪ್ರಕರಣ ಮುಂದುವರಿಯಿತು. ಆಯೋಗದ ಅಧ್ಯಕ್ಷರಾದ ಶಿವಶಂಕರಪ್ಪ ಎಸ್.ಸಾಹುಕಾರ ಅವರು ತಮ್ಮ ಪರ ನ್ಯಾಯಾಲಯದಲ್ಲಿ ವಾದ ಮಾಡುತ್ತಿದ್ದ ವಕೀಲರ ಸಂಭಾವನೆಯನ್ನು ಕರ್ನಾಟಕ ಲೋಕಸೇವಾ ಆಯೋಗವೇ ಭರಿಸಬೇಕೆಂದು ಆಪೇಕ್ಷಿಸಿದ್ದರು. ವಕೀಲರ ಶುಲ್ಕವೇ ಅಂದಾಜು ರೂ. 17 ಲಕ್ಷದಷ್ಟಿತ್ತು. ಆಗ ಕಾನೂನು ಕೋಶದ ಮುಖ್ಯಸ್ಥರಾಗಿದ್ದ ಎಚ್.ಎಸ್. ಹೊಸಗೌಡರ ಅಭಿಪ್ರಾಯ ಕೇಳಿ ಪತ್ರ ಬರೆಯಲಾಯಿತು. ಕಾನೂನು ಕೋಶದ ಮುಖ್ಯಸ್ಥರು ಸ್ಪಷ್ಟವಾಗಿ ‘ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರ ವೈಯಕ್ತಿಕ ಪ್ರಕರಣದ ವಕೀಲರ ಶುಲ್ಕವನ್ನು ‘ಆಯೋಗ’ ಭರಿಸಬಾರದೆಂದು, ಅಧ್ಯಕ್ಷರೇ ಸ್ವತಃ ಭರಿಸಬೇಕೆಂದು’ ಅಭಿಪ್ರಾಯ ನೀಡಿದರು.
ಕಾನೂನು ಕೋಶದ ಅಧ್ಯಕ್ಷರನ್ನು ಎರಡು ವರ್ಗ ಅವಧಿಗೆ ಕೆಪಿಎಸ್‌ಸಿ ನೇಮಕ ಮಾಡಿಕೊಳ್ಳುತ್ತದೆ. ಎಚ್.ಎಸ್. ಹೊಸಗೌಡರು ಒಂದು ಅವಧಿ ಪೂರೈಸಿ ಎರಡನೇ ಅವಧಿಗೆ ನೇಮಕಗೊಂಡು ಕಾರ್ಯ ನಿರ್ವಹಿಸುತ್ತಿದ್ದರು. ಅವರ ಅವಧಿ 2024ಕ್ಕೆ ಮುಗಿಯುವುದಿತ್ತು. ಆಯೋಗದ ಅಧ್ಯಕ್ಷರು ತಮ್ಮ ವಕೀಲರ ಶುಲ್ಕ ಕರ್ನಾಟಕ ಲೋಕಸೇವಾ ಆಯೋಗದಿಂದಲೇ ಭರಿಸಬಹುದೆಂದು ಅಭಿಪ್ರಾಯ ನೀಡುವಂತೆ ಎಚ್.ಎಸ್. ಹೊಸಗೌಡರ ಮೇಲೆ ಒತ್ತಡ ಹಾಕುತ್ತಲೇ ಇದ್ದರು. ಎಚ್.ಎಸ್. ಹೊಸಗೌಡರು ಅಧ್ಯಕ್ಷರ ಒತ್ತಡಕ್ಕೆ ಮಣಿಯದೆ ಕಾನೂನು ಕೋಶದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಹೋಗಿದ್ದಾರೆ. ಕಾನೂನು ಕೋಶದ ಅಧ್ಯಕ್ಷರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಯಿತು. ಒಟ್ಟು ಹದಿನಾರು ಅರ್ಜಿಗಳು ಬಂದಿದ್ದವು. ಎರಡು ಅರ್ಜಿಗಳು ಕೊನೆಯ ದಿನಾಂಕ ಮುಗಿದ ಮೇಲೆ ಬಂದಿದ್ದವು. ನಾಲ್ಕು ಅರ್ಜಿಗಳು ಸರಿಯಾದ ದಾಖಲೆ ಇರಲಿಲ್ಲ ಎಂಬ ಕಾರಣಕ್ಕೆ ತಿರಸ್ಕೃತಗೊಂಡವು. 10 ಜನ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಬಿ. ವಸ್ತ್ರದಮಠ ಎಂಬವರನ್ನು ಕಾನೂನು ಕೋಶದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು.
ಆದರೆ ಆಯೊಗದ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಲತಾಕುಮಾರಿಯವರು ‘ಆಯ್ಕೆ ಸಮಿತಿಯಲ್ಲಿ’ ಸಾಮಾಜಿಕ ಪ್ರಾತಿನಿಧ್ಯ ಇರಲಿಲ್ಲ, ಒಟ್ಟಾರೆ ಆಯ್ಕೆ ಪ್ರಕ್ರಿಯೆ ಕ್ರಮಬದ್ಧವಾಗಿಲ್ಲ ಎಂದು ಕಾನೂನು ಕೋಶದ ಅಧ್ಯಕ್ಷರ ನೇಮಕಾತಿ ಆದೇಶ ಹೊರಡಿಸಲಿಲ್ಲ.
ಕಾರ್ಯದರ್ಶಿ ಲತಾಕುಮಾರಿಯವರ ಈ ನಿರ್ಧಾರದಿಂದ ಕೆರಳಿ ಕೆಂಡವಾಗಿರುವ ಆಯೋಗದ ಅಧ್ಯಕ್ಷರಾದ ಶಿವಶಂಕರಪ್ಪ.ಎಸ್. ಸಾಹುಕಾರ್ ಮತ್ತು ಸದಸ್ಯರಾದ ವಿಜಯಕುಮಾರ್.ಡಿ.ಕುಚನೂರೆ, ಡಾ.ಎಂ.ಬಿ. ಹೆಗ್ಗಣ್ಣವರ, ಡಾ.ನರೇಂದ್ರ, ಬಿ.ವಿ.ಗೀತಾ ಮತ್ತು ಮುಸ್ತಫಾ ಹುಸೇನ್ ಸೈಯದ್ ಅಝೀಝ್ ಅವರು: ಕಾನೂನು ಕೋಶದ ಅಧ್ಯಕ್ಷ ಸ್ಥಾನಕ್ಕೆ ಅಧ್ಯಕ್ಷರು ಸೂಚಿಸಿರುವ ವ್ಯಕ್ತಿಯನ್ನೇ ಪರಿಗಣಿಸಿ ಆದೇಶ ಹೊರಡಿಸಬೇಕು. ಅಲ್ಲಿಯವರೆಗೆ ನಾವ್ಯಾರೂ ಸಭೆಗೆ ಹಾಜರಾಗುವುದಿಲ್ಲ ಎಂದು ಪತ್ರ ಬರೆದು ತಿಳಿಸಿದ್ದಾರೆ. ಹಾಗಾಗಿ ಅಂದಿನಿಂದ ಅಸಹಕಾರ ತಂತ್ರ ಅನುಸರಿಸುತ್ತಿದ್ದಾರೆ. ಕಾರ್ಯದರ್ಶಿ ಲತಾಕುಮಾರಿಯವರು ಸಭೆ ಕರೆದರೂ ಅಧ್ಯಕ್ಷರು ಮತ್ತು ಅವರೊಂದಿಗೆ ಗುರುತಿಸಿಕೊಂಡಿರುವ ಸದಸ್ಯರು ಕಳೆದ ಒಂದೂವರೆ ತಿಂಗಳಿಂದ ಗೈರು ಹಾಜರಾಗಿದ್ದಾರೆ. ಏನಿಲ್ಲವೆಂದರೂ ಆರೇಳು ಸಭೆಗಳಿಗೆ ಬಂದಿಲ್ಲ. ಪರಿಸ್ಥಿತಿ ಎಷ್ಟೊಂದು ವಿಕೋಪಕ್ಕೆ ಹೋಗಿದೆಯೆಂದರೆ; ಆಯೋಗದ ಕಾರ್ಯದರ್ಶಿ ಲತಾಕುಮಾರಿಯವರು ‘ಕರ್ತವ್ಯಲೋಪ, ಅಧಿಕಾರ ದುರುಪಯೋಗ, ದುರ್ನಡತೆ ತೋರಿಸಿರುವ ಅಧ್ಯಕ್ಷರು ಮತ್ತು ಆರು ಜನ ಸದಸ್ಯರ ಸದಸ್ಯತ್ವ ರದ್ದುಪಡಿಸಲು ಸೂಕ್ತ ಕ್ರಮ ವಹಿಸಬೇಕು’ ಎಂದು ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅಷ್ಟ್ಟು ಮಾತ್ರವಲ್ಲ ಕಾರ್ಯದರ್ಶಿಯವರು ದಿ: 31-01-2024 ರಂದು ಆಯೋಗದ ಹಿರಿಯ ಸದಸ್ಯರಾದ ರೋನಾಲ್ಡ್ ಅನಿಲ್ ಫೆರ್ನಾಂಡಿಸ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದಾರೆ. ಆ ಸಭೆಯಲ್ಲಿ ಸದಸ್ಯರಾದ ಆರ್. ಗಿರೀಶ್, ಬಿ. ಪ್ರಭುದೇವ, ಶಾಂತಾ ಹೊಸಮನಿ ಉಪಸ್ಥಿತರಿದ್ದರು. ಅಂದಿನ ಸಭೆಯಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದ ವಿವಿಧ ಇಲಾಖೆಗಳ ಒಟ್ಟು 666 ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಗೆ ಅನುಮೋದನೆ ಕೂಡಾ ಪಡೆದುಕೊಂಡಿದ್ದಾರೆ. ಆ ಸಭೆ ನಡೆಯುವಾಗ ಆಯೋಗದ ಅಧ್ಯಕ್ಷರು ಅಲ್ಲಿಗೆ ಬಂದು ಸಭೆಯನ್ನು ಮುಂದೂಡಬೇಕೆಂದು ಹೇಳಿ ತೆರಳಿದರು.
ನಾವು ಹೇಳಿದ್ದೇ ನಡೆಯಬೇಕು ಎಂಬ ಅಹಂಭಾವದ ಅಧ್ಯಕ್ಷರು, ಕಾನೂನು ಪಾಲನೆ ಮಾಡುತ್ತಿದ್ದೇನೆಂದು ಹೇಳಿಕೊಳ್ಳುವ ಕಾರ್ಯದರ್ಶಿ ಲತಾಕುಮಾರಿಯವರ ಹಗ್ಗ ಜಗ್ಗಾಟದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಿವೆ. ಹತ್ತಕ್ಕೂ ಹೆಚ್ಚು ನೇಮಕಾತಿ ಅಧಿಸೂಚನೆಗಳು ಪೆಂಡಿಂಗ್ ಇವೆ. ಉದ್ಯೋಗಾಕಾಂಕ್ಷಿಗಳು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ. ವಕೀಲರ ಶುಲ್ಕ ಪಾವತಿ ವಿಷಯ ವಿರಾಟರೂಪ ತಾಳಿ ಆಯೋಗದ ಒಳಜಗಳ ಬೀದಿಗೆ ಬಂದು ನಗೆ ಪಾಟಲಿಗೀಡಾಗಿದೆ. ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ ಮತ್ತು ಸದಸ್ಯರಾದ ವಿಜಯಕುಮಾರ ಡಿ.ಕುಚನೂರೆ, ಡಾ. ಎಂ.ಬಿ. ಹೆಗ್ಗಣ್ಣವರ, ಡಾ.ನರೇಂದ್ರ, ಬಿ.ವಿ.ಗೀತಾ, ಮುಸ್ತಫಾ ಹುಸೇನ್ ಸೈಯದ್ ಅಝೀಝ್ ಕಾರ್ಯದರ್ಶಿ ಲತಾಕುಮಾರಿಯನ್ನು ಎತ್ತಂಗಡಿ ಮಾಡಿಸಲು ಯತ್ನಿಸುತ್ತಿದ್ದಾರೆ. ಈ ಹಿಂದೆ ಕಾರ್ಯದರ್ಶಿಯಾಗಿದ್ದ ಕಿಶೋರ್ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು-ಸದಸ್ಯರು ಒಣಪ್ರತಿಷ್ಠೆ ಬಿಟ್ಟು ಆಯೋಗದ ಇಮೇಜ್, ಉದ್ಯೋಗಾರ್ಥಿಗಳ ಹಿತ ಗಮನದಲ್ಲಿಟ್ಟುಕೊಂಡು ಕಾರ್ಯಾರಂಭ ಮಾಡಬೇಕು. ಕಾನೂನು ಕೋಶದ ಅಧ್ಯಕ್ಷಸ್ಥಾನ, ವಕೀಲರ ಶುಲ್ಕ, ನಾನೇ ಎಂಬ ಅಹಂಭಾವ ಎಲ್ಲವೂ ಅರ್ಥಹೀನ ಸಂಗತಿಗಳು. ಅವಕಾಶ ಸಿಕ್ಕಾಗ ನಾಡಿನ ಒಳಿತಿಗೆ ಶ್ರಮಿಸುವುದರಲ್ಲಿ ಎಲ್ಲರ ಹಿತ ಅಡಗಿದೆ. ಪ್ರತಿಷ್ಠೆ, ಸ್ವಜನ ಪಕ್ಷಪಾತ ಹೆಚ್ಚೆಂದು ಅಧ್ಯಕ್ಷರು-ಸದಸ್ಯರು, ಕಾರ್ಯದರ್ಶಿಗಳು ಪೂರ್ವಾಗ್ರಹ ಪೀಡಿತರಾಗಿದ್ದರೆ ಸರಕಾರವೇ ಮಧ್ಯಪ್ರವೇಶ ಮಾಡಬೇಕು. ಅಗತ್ಯಬಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕರ್ನಾಟಕ ಲೋಕಸೇವಾ ಆಯೋಗದ ಎಲ್ಲರೊಂದಿಗೆ ಸಭೆ ನಡೆಸಿ ಗೊಂದಲ ನಿವಾರಿಸಬೇಕು. ಅಷ್ಟು ಮಾತ್ರವಲ್ಲ ಕರ್ನಾಟಕ ಲೋಕಸೇವಾ ಆಯೋಗದ ವಿಶ್ವಾಸಾರ್ಹತೆ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ಮದ್ದು’ ಅರೆಯುವುದು ಇಂದಿನ ಅಗತ್ಯವಾಗಿದೆ. ಕರ್ನಾಟಕ ಲೋಕಸೇವಾ ಆಯೋಗವನ್ನು ಅತ್ಯಂತ ಪಾರದರ್ಶಕ ಸಂಸ್ಥೆಯನ್ನಾಗಿ ರೂಪಾಂತರಿಸಿದರೆ ಕರ್ನಾಟಕದ ಘನತೆ ಗೌರವ ಹೆಚ್ಚುತ್ತದೆ. ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರಾವಧಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಸುಧಾರಣೆಯಾಗದಿದ್ದರೆ ಇನ್ಯಾವತ್ತೂ ಅದು ವಿಶ್ವಾಸಾರ್ಹ ಸಂಸ್ಥೆಯಾಗುವುದಿಲ್ಲ. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರು ಆತ್ಮಾವಲೋಕನ ಮಾಡಿಕೊಂಡು ಕಾರ್ಯಪ್ರವೃತ್ತರಾಗಬೇಕು.