‘ಕರ್ನಾಟಕ’ದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಸಾಗಿ ಬಂದ ಹಾದಿ

ಹಲವು ಸಮುದಾಯಗಳು ತಮ್ಮ ಜಾತಿ, ವೃತ್ತಿ, ಬದುಕುವ ರೀತಿ, ಇವೆಲ್ಲಾ ಅಪಮಾನಗಳನ್ನು, ಬಚ್ಚಿಟ್ಟು ಕೊಂಡೇ ಜೀವ ಸವೆಸುತ್ತಿದ್ದು, ತೀಕ್ಷ್ಣವಾದ ಸಾಮಾಜಿಕ ದೋಷದ ಭಾರದಿಂದಾಗಿ ಅವರಿಗೆ ಆರ್ಥಿಕ ಸ್ವಾವಲಂಬನೆ ಎಂದೆಂದಿಗೂ ಸಾಧ್ಯವಾಗಿರುವುದಿಲ್ಲ ಎಂಬ ಭಾವನೆ ದೇವರಾಜ ಅರಸರ ಆಂತರ್ಯದಲ್ಲಿ ಹುದುಗಿತ್ತು. ಅರಸು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನಂತರದಲ್ಲಿ ಪ್ರಮುಖವಾಗಿ ಕೈಗೆತ್ತಿಕೊಂಡ ಕೆಲಸವೆಂದರೆ ಆಗಸ್ಟ್ 8, 1972ರಂದು ಮೊದಲನೇ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿದ್ದು.

Update: 2024-11-13 05:37 GMT

ಭಾಗ- 1

ಅರಸೊತ್ತಿಗೆಯ ಸಂಸ್ಥಾನದ ಹೆಸರು ‘ಮೈಸೂರು’ ಎಂದಾಗಿತ್ತು. ನಮಗೆ ಸ್ವಾತಂತ್ರ್ಯ ದೊರಕಿದ 26 ವರ್ಷ ಕಳೆದ ನಂತರವಷ್ಟೇ ಅದು ತನ್ನ ನಾಮಾಂಕಿತವನ್ನು ಬದಲಾಯಿಸಿ ಕರ್ನಾಟಕವೆಂದು ಕರೆಸಿಕೊಂಡ ದಿನ ನವೆಂಬರ್ 1, 1973. ಇದರ ಹಿನ್ನೆಲೆಯಲ್ಲಿ ಇದ್ದವರು ಅಂದಿನ ಧೀಮಂತ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು. ಅವರಿಂದ ಅನುಷ್ಠಾನಗೊಂಡ ಜನೋಪಯೋಗಿ ಕಾರ್ಯಗಳು ಹತ್ತು ಹಲವಾರು. ಅವುಗಳನ್ನು ಕರ್ನಾಟಕದ ಜನ ಇಂದಿಗೂ ಸ್ಮರಿಸಿಕೊಂಡು ಅರಸರನ್ನು ಮೆಚ್ಚಿ ಸ್ತುತಿಸುತ್ತಾರೆ. ‘ಕರ್ನಾಟಕ’ ಉದಯವಾಗಿ 50 ವರ್ಷಗಳು ಸಂದಿವೆ. ಈ ಅವಧಿಯಲ್ಲಿ ಕಾವೇರಿ-ಕೃಷ್ಣೆಯರಲ್ಲಿ ಹರಿದ ನೀರೆಷ್ಟೋ ಲೆಕ್ಕವಿಟ್ಟವರಾರು!?

ಎಲ್.ಜಿ. ಹಾವನೂರ್ ಆಯೋಗ:

ಈ ಐವತ್ತು ವರ್ಷಗಳ ಕಾಲಾವಧಿಯಲ್ಲಿ, ಒಂದು ಮಿತಿಯಲ್ಲಿ ನಾನಾ ಬಗೆಯ ಪ್ರಗತಿ ಕಂಡ ರಾಜ್ಯ ಕರ್ನಾಟಕ ಎಂಬುದರಲ್ಲಿ ಎರಡು ಮಾತಿಲ್ಲ. ದಿವಂಗತ ಡಿ. ದೇವರಾಜ ಅರಸು ಅವರು ಸಾಮಾಜಿಕ ಬದಲಾವಣೆಗಾಗಿ ಹಪಹಪಿಸಿ ಹಮ್ಮಿಕೊಂಡ ಮಹತ್ಕಾರ್ಯವೆಂದರೆ, ಅದು ಹಿಂದುಳಿದ ವರ್ಗಗಳಿಗಾಗಿ ಸಾರ್ವಜನಿಕ ವಲಯದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕೊಡಬೇಕೆಂಬ ಉತ್ಕಟ ಹೆಬ್ಬಯಕೆ. ಅವರಲ್ಲಿ ಶೋಷಿತ ವರ್ಗಗಳನ್ನು ಕುರಿತು ಇದ್ದ ಅಂತಃಕರಣ, ಹಲವು ಸಮುದಾಯಗಳು ತಮ್ಮ ಜಾತಿ, ವೃತ್ತಿ, ಬದುಕುವ ರೀತಿ, ಇವೆಲ್ಲಾ ಅಪಮಾನಗಳನ್ನು, ಬಚ್ಚಿಟ್ಟು ಕೊಂಡೇ ಜೀವ ಸವೆಸುತ್ತಿದ್ದು, ತೀಕ್ಷ್ಣವಾದ ಸಾಮಾಜಿಕ ದೋಷದ ಭಾರದಿಂದಾಗಿ ಅವರಿಗೆ ಆರ್ಥಿಕ ಸ್ವಾವಲಂಬನೆ ಎಂದೆಂದಿಗೂ ಸಾಧ್ಯವಾಗಿರುವುದಿಲ್ಲ ಎಂಬ ಭಾವನೆ ಅರಸರ ಆಂತರ್ಯದಲ್ಲಿ ಹುದುಗಿತ್ತು. ಅರಸು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನಂತರದಲ್ಲಿ ಪ್ರಮುಖವಾಗಿ ಕೈಗೆತ್ತಿಕೊಂಡ ಕೆಲಸವೆಂದರೆ ಆಗಸ್ಟ್ 8, 1972ರಂದು ಮೊದಲನೇ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿದ್ದು. ಅದರ ಅಧ್ಯಕ್ಷತೆಯನ್ನು ವಹಿಸಿಕೊಂಡವರು ಲಕ್ಷ್ಮಣ್ ಜಿ. ಹಾವನೂರ್. ಅಂದಿಗೆ ಪ್ರಸಿದ್ಧ ವಕೀಲರಾಗಿದ್ದುಕೊಂಡು ಶೋಷಿತ ವರ್ಗಗಳ ಅಭ್ಯುದಯಕ್ಕಾಗಿ ಅನವರತ ಹಂಬಲಿಸುತ್ತಿದ್ದವರು.

ಹಾವನೂರ್ ಅವರು ಸ್ವತಃ ಜಾತಿ ವ್ಯವಸ್ಥೆಯ ಕಹಿಯನ್ನು ಉಂಡವರು. ಅವರು ತಾವು ಸರಕಾರಕ್ಕೆ ಸಲ್ಲಿಸಿದ ವರದಿಯ ಸಂದರ್ಭದಲ್ಲಿ ಆಡಿರುವ ಈ ಮಾತುಗಳು ಜಾತಿ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ‘‘ಜಾತಿ ವ್ಯವಸ್ಥೆಯನ್ನು ನಿರ್ಮೂಲ ಮಾಡುವಂತಹ ಅವಕಾಶ ಸಂವಿಧಾನದಲ್ಲಿ ಇಲ್ಲ. ಕ್ವಚಿತ್ ಈ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಿದರೆ ನಮ್ಮ ಸಂವಿಧಾನದ ಪರಿವಿಡಿ ಹಾಗೂ ಇನ್ನಿತರ ಕಾನೂನುಗಳು ಈಗಿರುವುದಕ್ಕಿಂತ ಅರ್ಧ ಭಾಗದಷ್ಟು ಕಡಿಮೆಯಾಗುತ್ತವೆ.’’

ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆಯ ಪರಿಣಾಮ ತಳ ಸಮುದಾಯಗಳು ಅನುಭವಿಸುತ್ತಿರುವ ನೋವು-ಯಾತನೆ, ಅಸಮಾನತೆ, ತರತಮ ಭಾವಗಳನ್ನು ನಿರ್ಮೂಲನೆ ಮಾಡುವ ದಿಸೆಯಲ್ಲಿ ನಿವಾರಣಾ ಕ್ರಮಗಳನ್ನು ಸಂವಿಧಾನದಲ್ಲಿ ಬಾಬಾ ಸಾಹೇಬರು ಅಳವಡಿಸಿದ್ದಾರೆ. ಆದರೆ ಜಾತಿ ವ್ಯವಸ್ಥೆಯನ್ನು ಅವುಗಳಿಂದ ಮೂಲೋತ್ಪಾಟನೆ ಮಾಡಲು ಅವಕಾಶವಿಲ್ಲ! ಹಾಗೊಂದು ವೇಳೆ, ಜಾತಿ ವ್ಯವಸ್ಥೆ ನಿರ್ಮೂಲನೆ ಆದಲ್ಲಿ, ಅಂತಹ ವ್ಯವಸ್ಥೆಯ ದುಷ್ಪರಿಣಾಮದಿಂದ ಉಂಟಾಗಿರುವ ಅಸಮತೋಲನವನ್ನು ಪರಿಹರಿಸಲು ಈಗಿರುವ ಅರ್ಧದಷ್ಟು ಕಾನೂನುಗಳು ಅಂತ್ಯಗೊಳ್ಳುತ್ತವೆ ಎಂಬುದೇ ಆ ಮಾತುಗಳಲ್ಲಿರುವ ಧ್ವನಿ ಮತ್ತು ಸಾರಾಂಶ. ಅಷ್ಟೇ ಅಲ್ಲದೆ ಅವು ದಾರ್ಶನಿಕ ಸ್ವರೂಪವನ್ನೂ ಪಡೆದುಕೊಂಡಿವೆ.

ಅಷ್ಟಕ್ಕೂ ಶೋಷಿತರನ್ನು ಕೈಹಿಡಿದೆತ್ತಲು ಮೀಸಲಾತಿಯೇ ಏಕೆ ಬೇಕು? ಮೀಸಲಾತಿಯೆಂಬುದು ಶಾಶ್ವತವಲ್ಲ. ಅದೊಂದು ತಾತ್ಕಾಲಿಕ ವ್ಯವಸ್ಥೆ! ಇದು ಭಾರತಕಷ್ಟೇ ಸೀಮಿತವಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನ, ಕೆನಡಾ, ಬ್ರೆಝಿಲ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಮಲೇಶ್ಯ ಮುಂತಾದ ದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತಿದೆ. ಪ್ರೊಟೆಕ್ಟೀವ್ ಡಿಸ್ಕ್ರಿಮಿನೇಷನ್, ಆ್ಯಂಟಿ ಡಿಸ್ಕ್ರಿಮಿನೇಷನ್, ಅಫರ್ ಮೇಟಿವ್ ಆ್ಯಕ್ಷನ್ ಮತ್ತು ಸೋಶಿಯಲ್ ಜಸ್ಟಿಸ್ ಎಂಬವುಗಳೇ ಅವು. ಸಾಮಾಜಿಕ ನ್ಯಾಯವೆಂಬುದಕ್ಕೆ ‘ಸರ್ವರಿಗೂ ಸಮಪಾಲು- ಸಮ ಬಾಳು’ ಎಂಬ ಅರ್ಥವೈಶಾಲ್ಯವಿದೆ. ದೇಶದ ಸಾಮಾಜಿಕ ರೋಗಗ್ರಸ್ತ ಜಾತಿ ವ್ಯವಸ್ಥೆಯಲ್ಲಿ ಅಸಮಾನತೆ-ತಾರತಮ್ಯ ಕರಾಳ ನೃತ್ಯವಾಡುತ್ತಿವೆ. ಇದನ್ನು ಕೊಂಚ ಮಟ್ಟಿಗಾದರೂ ಹೋಗಲಾಡಿಸುವ ಹಿನ್ನೆಲೆಯಲ್ಲಿ ಮೂಡಿ ಬಂದುದೇ ‘ಆದ್ಯತಾ ಉಪಚಾರ ತತ್ವ’. ಈ ತತ್ವದ ಹಿನ್ನೆಲೆಯೇ ‘ಮೀಸಲಾತಿ’. ಮೈಸೂರು ಸಂಸ್ಥಾನದ ಆಳರಸರ ಅವಧಿಯಲ್ಲಿ ಮೀಸಲಾತಿ ಹುಟ್ಟು ಪಡೆದು, ಅದು ಸ್ವಾತಂತ್ರ್ಯಗಳಿಸಿದ ನಂತರದಲ್ಲಿಯೂ ರಾಜ್ಯಗಳ ಪುನರ್ವಿಂಗಡಣೆ ಆಗುವವರೆಗೂ ಚಾಲ್ತಿಯಲ್ಲಿತ್ತು. 1959ರ ಸಮಯದಲ್ಲಿ ಶಿಕ್ಷಣ ಪ್ರವೇಶಕ್ಕಾಗಿ ಹೊರಡಿಸಿದ ಎರಡು ಆದೇಶಗಳು ನ್ಯಾಯಾಲಯದಲ್ಲಿ ಅನೂರ್ಜಿತಗೊಂಡವು. (ರಾಮಕೃಷ್ಣ ಸಿಂಗ್ vs ಮೈಸೂರು ರಾಜ್ಯ) ಆನಂತರ ಬಂದುದೇ ಡಾ. ನಾಗನಗೌಡ ಸಮಿತಿ. ಆ ಸಮಿತಿ ವರದಿಯ ಹಿನ್ನೆಲೆಯಲ್ಲಿ ಜಾರಿಗೆ ತಂದ ಮೀಸಲಾತಿ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಲಾಜಿ vs ಮೈಸೂರು ಪ್ರಕರಣದಲ್ಲಿ ಬಿದ್ದು ಹೋಯಿತು. ಈ ಸಂದರ್ಭದಲ್ಲೇ ಮೀಸಲಾತಿಯ ಕೋಟಾ ಶೇ.50ರ ಮಿತಿ ಮೀರಬಾರದು ಎಂಬ ಕಟ್ಟಾಜ್ಞೆಯನ್ನು ನ್ಯಾಯಾಲಯ ವಿಧಿಸಿತು. ಅದಾದ 10 ವರ್ಷಗಳ ನಂತರವೇ ಎಲ್.ಜಿ. ಹಾವನೂರ್ ಅವರ ಮೊದಲನೇ ಹಿಂದುಳಿದ ವರ್ಗಗಳ ಆಯೋಗ ರಚಿಸಿದ್ದು.

ಸ್ವತಂತ್ರ ಭಾರತದಲ್ಲಿ ಸಂವಿಧಾನ ಅನುಷ್ಠಾನಗೊಂಡ ನಂತರ ಉದ್ಯೋಗದಲ್ಲಿ ಸಾಕಷ್ಟು ಪ್ರಾತಿನಿಧ್ಯ(ವಿಧಿ 16.4) ಪಡೆಯದ ಹಿಂದುಳಿದ ವರ್ಗಗಳನ್ನು ಗುರುತಿಸಲು ಸಾಧ್ಯವಾಗುವ ಪರಿಭಾಷೆ ಎಂಬುದು ಇರಲಿಲ್ಲ. 1951ರಲ್ಲಿ ಸಂವಿಧಾನ ತಿದ್ದುಪಡಿ ಮಾಡಿ 15(4) ಮತ್ತು 29(2) ಎಂಬೆರಡು ಉಪವಿಧಿಗಳನ್ನು ಸೇರ್ಪಡೆ ಮಾಡಲಾಯಿತು. ತಿದ್ದುಪಡಿ ಅನ್ವಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ನಾಗರಿಕರನ್ನು ‘ಹಿಂದುಳಿದ ವರ್ಗ’ ಎಂದು ಕರೆಯಲಾಯಿತು.

ಹಾವನೂರು ಆಯೋಗ ಹಿಂದುಳಿದ ವರ್ಗಗಳ ನಾಗರಿಕರಿಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿರುವ ಅಂಶಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಆಧರಿಸಿ ಧರ್ಮ ಮತ್ತು ಸಾಮಾಜಿಕ ನ್ಯೂನತೆ, ಆರ್ಥಿಕ ಪರಿಸ್ಥಿತಿ, ಶಿಕ್ಷಣ, ವೃತ್ತಿ, ರಾಜಕೀಯ ಸ್ಥಾನಮಾನ, ವಸತಿ, ಕಲೆ- ಸಂಸ್ಕೃತಿ ಇವೇ ಮುಂತಾದ ವಿಷಯಗಳನ್ನು ಒಳಗೊಂಡ ಪ್ರಶ್ನಾವಳಿಗಳನ್ನು ರೂಪಿಸಿ 783 ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಸಂಘ- ಸಂಸ್ಥೆಗಳಿಂದ ಉತ್ತರಗಳನ್ನು ಅದು ಪಡೆದುಕೊಂಡಿದೆ.

ಆಯೋಗ ಪ್ರತೀ ತಾಲೂಕಿಗೆ ಕನಿಷ್ಠ ಒಂದರಂತೆ 193 ಗ್ರಾಮಗಳು ಮತ್ತು ನಗರ/ಪಟ್ಟಣ/ಪುರಸಭೆ ವ್ಯಾಪ್ತಿಯಲ್ಲಿ 204 ಬ್ಲಾಕುಗಳನ್ನು ಆಯ್ಕೆ ಮಾಡಿಕೊಂಡು ಒಟ್ಟು 3,55,000 ಜನಸಂಖ್ಯೆಯನ್ನು ಒಳಗೊಂಡ 63,650 ಕುಟುಂಬಗಳನ್ನು ಸಮೀಕ್ಷೆ ಮಾಡಿದೆ. ಸಮೀಕ್ಷೆಯಲ್ಲಿ 171 ಜಾತಿ, ಬುಡಕಟ್ಟು ಮತ್ತು ಕೋಮುಗಳನ್ನು ಗುರುತು ಮಾಡಲಾಗಿದೆ. ಇಂತಹ ಸಮೀಕ್ಷೆಗೆ ಜಾಗತಿಕವಾಗಿ ಗೊತ್ತುಪಡಿಸಿರುವ ಗರಿಷ್ಠ ಮಿತಿ ಶೇ.1ರಷ್ಟಿದ್ದರೆ, ಆಯೋಗ ಶೇ. 18ರಷ್ಟು ಸಮೀಕ್ಷೆಗೆ ಒಳ ಪಡಿಸಿರುವುದು ಗಮನಿಸಬೇಕಾದ ಅಂಶ.

ಮುಂದುವರಿದು, ಆಯೋಗ ಲೋಕಸಭೆ/ ರಾಜ್ಯಸಭೆ/ವಿಧಾನಸಭೆ/ವಿಧಾನಪರಿಷತ್ ಸದಸ್ಯರು, ತಾಲೂಕು ಅಭಿವೃದ್ಧಿ ಮಂಡಳಿ, ಗ್ರಾಮ ಪಂಚಾಯತ್, ಪುರಸಭೆ/ನಗರಸಭೆ/ಮಹಾನಗರಪಾಲಿಕೆ ಅಧ್ಯಕ್ಷರು ಮತ್ತು ಸದಸ್ಯರು, ವಕೀಲರು, ವೈದ್ಯರು, ಸಮಾಜ ಸೇವಾ ಕಾರ್ಯಕರ್ತರು, ಮಾಜಿ ಮಂತ್ರಿಗಳು, ಮಾಜಿ ಶಾಸಕರುಗಳ ಮಾಹಿತಿಗಳನ್ನು ಸಂಗ್ರಹಿಸಿದೆ. ಹಾಗೆಯೇ ರಾಜ್ಯದಲ್ಲಿ ವ್ಯಾಪಕವಾಗಿ ಆಯೋಗ ಪ್ರವಾಸ ಮಾಡಿ ಜಾತಿ-ಕೋಮುಗಳಿಗೆ ಸಂಬಂಧಿಸಿದ ಸಂಘ-ಸಂಸ್ಥೆಗಳನ್ನು ಭೇಟಿ ಮಾಡಿ ಅವುಗಳ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳನ್ನು ಅರಿತುಕೊಂಡಿದೆ. ಅದೂ ಅಲ್ಲದೆ, 365 ಗಣ್ಯರ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿರುವುದು ವಿಶೇಷ ಮತ್ತು ಅಗತ್ಯವಾಗಿ ಬೇಕಾದ ಅಂಶ ಕೂಡಾ.

ಮಾರ್ಚ್ 31, 1972ಕ್ಕೆ ಅನ್ವಯಿಸುವಂತೆ ಸರಿಸುಮಾರು 98 ಇಲಾಖೆ, ಸಂಸ್ಥೆ, ನಿಗಮ- ಮಂಡಳಿಗಳಿಂದ ಸೇವಾ ವಿವರಗಳನ್ನು ಆಯೋಗ ಸಂಗ್ರಹಿಸಿದೆ. ಜಾತಿಗಳ ಶೇಕಡಾವಾರು ಅಂದಾಜು ಜನಸಂಖ್ಯೆ ಮತ್ತು ಅವು ಹೊಂದಿರುವ ಶೇಕಡಾವಾರು ಪ್ರಾತಿನಿಧ್ಯವನ್ನು ತುಲನಾತ್ಮಕ ಅಧ್ಯಯನಕ್ಕೆ ಒಳಪಡಿಸಿ ಜಾತಿ /ಕೋಮುಗಳು ಸಾಕಷ್ಟು ಪ್ರಾತಿನಿಧ್ಯ ಪಡೆದಿವೆಯೇ ಅಥವಾ ಇಲ್ಲವೇ ಎಂಬುದನ್ನು ಆಯೋಗ ಖಚಿತ ಪಡಿಸಿಕೊಂಡಿದೆ. ಈ ಅಂಕಗಣಿತ ಕ್ರಮದಿಂದ 89 ಜಾತಿ/ಕೋಮುಗಳಲ್ಲಿ 21 ಜಾತಿ/ಕೋಮುಗಳು ಸಾಕಷ್ಟು ಪ್ರಾತಿನಿಧ್ಯ ಪಡೆದುಕೊಂಡಿವೆ. ಬಂಟ, ಬ್ರಾಹ್ಮಣ, ಕೊಡವ, ಕ್ಷತ್ರಿಯ, ಲಿಂಗಾಯತ, ರಜಫೂತ, ವೈಶ್ಯ, ಕ್ರೈಸ್ತ, ಜೈನ(ಶ್ವೇತಾಂಬರ) ಮುಂತಾದವುಗಳೇ ಅವು.

ಅಲ್ಲದೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಆಯೋಗ 1972ರ ಮಾರ್ಚ್ ತಿಂಗಳಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತೇರ್ಗಡೆ ಆಗಿರುವ ವಿವರಗಳನ್ನು ಸುಮಾರು 1,869 ಪ್ರೌಢ ಶಾಲೆಗಳಿಂದ ಸಂಗ್ರಹಿಸಿದೆ. ಆ ವರ್ಷ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ರಾಜ್ಯ ಸರಾಸರಿ ಸಂಖ್ಯೆ ಪ್ರತೀ ಸಾವಿರಕ್ಕೆ 1.69 ಇರುತ್ತದೆ. ಅದೇ ವರ್ಷದಲ್ಲಿ ಯಾವುದೇ ಜಾತಿ ಮತ್ತು ಕೋಮುಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ ರಾಜ್ಯ ಸರಾಸರಿಗಿಂತ ಕೆಳಮಟ್ಟದಲ್ಲಿ ಇದ್ದಲ್ಲಿ ಅಂತಹ ಜಾತಿ/ಕೋಮುಗಳನ್ನು ‘ಶೈಕ್ಷಣಿಕವಾಗಿ ಹಿಂದುಳಿದ’ವು ಎಂದು ಆಯೋಗ ತೀರ್ಮಾನಿಸಿದೆ. ಈ ಪರೀಕ್ಷಾ ವಿಧಾನದಲ್ಲಿ 18 ಜಾತಿ/ಕೋಮುಗಳು ರಾಜ್ಯ ಸರಾಸರಿಗಿಂತ ಮೇಲ್ಮಟ್ಟದಲ್ಲಿವೆ ಎಂದು ಆಯೋಗ ಕಂಡು ಕೊಂಡಿದೆ. ಅವುಗಳಲ್ಲಿ ಮುಖ್ಯವಾದವು-ಬ್ರಾಹ್ಮಣ, ಬಂಟ, ಕೊಡವ, ಕ್ಷತ್ರಿಯ, ಲಿಂಗಾಯತ, ಮರಾಠಾ, ಮೊದಲಿಯಾರ್, ವೈಶ್ಯ, ಕ್ರೈಸ್ತ, ಸಿಖ್ ಮುಂತಾದವು.

ಎಂ.ಆರ್.ಬಾಲಾಜಿ vs ಮೈಸೂರು ಈ ಪ್ರಕರಣದಲ್ಲಿ ಮೀಸಲಾತಿ ಕೋಟಾವನ್ನು ಮಿತಿಗೊಳಿಸಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗಮನದಲ್ಲಿರಿಸಿಕೊಂಡು ಹಾವನೂರ್ ಹೇಳಿರುವ ಮಾತುಗಳು ಹೀಗಿವೆ- ‘‘ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಮಟ್ಟಿಗೆ ಸಂವಿಧಾನದ ಭಾಷೆ ಸರಳವೂ ಮತ್ತು ಅಸಂದಿಗ್ಧವೂ ಆಗಿದೆ. ಆದರೆ ಸಂವಿಧಾನದ ಆಶಯಗಳನ್ನು ವ್ಯಾಖ್ಯಾನಿಸುವ ನ್ಯಾಯಾಂಗದ ಭಾಷೆ ತೀರಾ ಸಂದಿಗ್ಧವೂ ಮತ್ತು ತೊಡಕಿನದೂ ಆಗಿದೆ.... ಮೀಸಲಾತಿಯ ವ್ಯಾಪ್ತಿಯನ್ನು ಶೇ.50ರಷ್ಟಕ್ಕೆ ಮಿತಿಗೊಳಿಸುವುದರಿಂದ ಸಂವಿಧಾನದ ವಿಧಿಗಳಾದ 15(4) ಮತ್ತು 16(4)ರ ಭಾಷೆಯನ್ನು ಮೀರಿ ನ್ಯಾಯಾಂಗ ಮುಂದೆ ಹೋಗಿದೆ; ಹೀಗಾದುದರಿಂದ ‘ಹಿಂದುಳಿದ ವರ್ಗ’ಗಳು ಎಂದು ಗುರುತಿಸುವ ಭಾರೀ ಜನಸಂಖ್ಯೆಯ ಜನಸಮುದಾಯಕ್ಕೆ ತಕ್ಕಂತೆ ಮೀಸಲಾತಿ ಕಲ್ಪಿಸಲು ಸರಕಾರವನ್ನು ತಡೆಹಿಡಿದಿದೆ. ಹಾವನೂರ್ ಆಯೋಗ ನ್ಯಾಯಾಲಯದ ಆಜ್ಞೆ ಪರಿಪಾಲಿಸಿದೆ ಎಂಬುದೇ ವಿಶೇಷ. (ಪ.ಜಾ.-15, ಪ.ಪಂ.-3, ಹಿಂ.ಕೋ.-16, ಹಿಂ.ಜಾ.-10, ಹಿಂ.ಪಂ.-6 ಹೀಗೆ ಒಟ್ಟು ಶೇ.50). ಶೇ.50ರಷ್ಟನ್ನು ಮೀರಿಲ್ಲದಿರುವುದೇ ಅದರ ಹೆಗ್ಗಳಿಕೆ.

ಆಯೋಗವು ಮುಸ್ಲಿಮ್ ಸಮುದಾಯವನ್ನು ಒಟ್ಟಾರೆ ಹಿಂದುಳಿದ ವರ್ಗವೆಂದು ಪರಿಗಣಿಸಿಲ್ಲ. ಮುಸ್ಲಿಮ್ ಸಮುದಾಯ ಒಂದು ಧಾರ್ಮಿಕ ಅಲ್ಪಸಂಖ್ಯಾತ ವರ್ಗವಾದುದರಿಂದ ಒಂದು ವಿಶೇಷ ಗುಂಪು ಎಂದು ಪರಿಗಣಿಸಿ ಮೀಸಲಾತಿ ನೀಡಬಹುದು ಎಂದು ಆಯೋಗ ಸರಕಾರಕ್ಕೆ ಸಲಹೆ ಮಾಡಿದೆ.

ಆಯೋಗವು ಮೂರು ವರ್ಷಕ್ಕೂ ಹೆಚ್ಚು ಕಾಲ ವ್ಯಯಿಸಿ ಸಮ ಸಮಾಜ ನಿರ್ಮಾಣದ ಕನಸು ಸಾಕಾರವಾಗುವ ದಿಸೆಯಲ್ಲಿ ಚಾರಿತ್ರಿಕ ಮತ್ತು ಅನನ್ಯ ಎನ್ನಬಹುದಾದ ವರದಿಯನ್ನು ಸರಕಾರಕ್ಕೆ ನವೆಂಬರ್ 19, 1975ರಲ್ಲಿ ಸಲ್ಲಿಸಿತು.

ಹಿಂದುಳಿದ ವರ್ಗ ಎಂದು ಪರಿಗಣಿತವಾಗದ ಕೆಲವು ಸಮುದಾಯಗಳು ವರದಿಯನ್ನು ವಿರೋಧಿಸಿ ಹೋರಾಟಕ್ಕಿಳಿದವು. ಅವುಗಳಲ್ಲಿ ಪ್ರಮುಖವಾಗಿ ಲಿಂಗಾಯತವೂ ಒಂದು. ಆದರೆ ಆ ಹೋರಾಟಕ್ಕೆ ತಾತ್ವಿಕ ನೆಲೆಗಟ್ಟಾಗಲಿ ಅಥವಾ ವಸ್ತುನಿಷ್ಠ ಅಂಶಗಳ ಹಿನ್ನೆಲೆಯಾಗಲಿ ಇರಲಿಲ್ಲ. ಅದು ಕೇವಲ ರಾಜಕೀಯ ಸ್ವರೂಪದ ಅಬ್ಬರವಾಗಿತ್ತಷ್ಟೇ. ಆ ಸಂದರ್ಭದಲ್ಲಿ ವರದಿಯ ಪರ ವಿರೋಧಿಗಳ ನಡುವೆ ಮುಖಾಮುಖಿ ಚರ್ಚೆ ಮಾತ್ರ ನಡೆಯಲಿಲ್ಲ ಎಂಬುದು ಉಲ್ಲೇಖನೀಯ. ಹಾವನೂರ್ ಅವರು ವರದಿಗೆ ವಿರೋಧ ವ್ಯಕ್ತವಾದ ಸಂದರ್ಭದಲ್ಲಿ ಹೇಳಿರುವ ಈ ಕೆಳಗಿನ ಮಾತುಗಳನ್ನು ಗಮನಿಸೋಣ. ಅವು ಮನನೀಯ ಹಾಗೂ ಮಾನವೀಯವೆನಿಸಿವೆ. ‘‘ಕೆಳ ಜಾತಿಗಳವರಿಗೆ ತಾರತಮ್ಯದಿಂದ ರಕ್ಷಣೆ ನೀಡುವ ಪರಿಹಾರ ಸೌಕರ್ಯಗಳನ್ನು ಒದಗಿಸದಿದ್ದಲ್ಲಿ ಅವರ ಅಭಿವೃದ್ಧಿ ಸಾಧ್ಯವಿಲ್ಲ. ಇಂತಹ ರಕ್ಷಣಾತ್ಮಕ ಪರಿಹಾರ ಸೌಕರ್ಯಗಳ ವಿರುದ್ಧ ನಡೆಯುವ ಪ್ರತಿರೋಧಗಳು ಅಸಮತೆಯನ್ನು ಮುಂದುವರಿಸಿಕೊಂಡು ಹೋಗುವ ಮನೋವೃತ್ತಿಗೆ ನಿದರ್ಶನ’’. ಎಂಥಾದರು ಇರಲಿ, ವರದಿ ಮಾತ್ರ ಹೊಸ ದಿಕ್ಕಿನ ಚರ್ಚೆಗೆ ವಸ್ತುವಾಗಿ ಕರ್ನಾಟಕದಲ್ಲಿ ಮನೆ ಮಾತಾಗಿದ್ದಂತೂ ನಿಜ. ಸಾಮಾಜಿಕ ಬದ್ಧತೆಗೆ ಒಳಗಾಗಿದ್ದ ಬುದ್ಧಿಜೀವಿಗಳು ವರದಿಯ ಒಳ ತಿರುಳುಗಳನ್ನು ಪರಾಮರ್ಶಿಸಿ ಅದರ ಮಹತ್ವವನ್ನು ಹೆಚ್ಚಿಸಿದರು.

ವರದಿ ಸ್ವೀಕರಿಸಿದ ತಕ್ಷಣದಲ್ಲಿ ಸರಕಾರ ಅದನ್ನು ಅನುಸರಿಸಿ ಮೀಸಲಾತಿಯನ್ನು ಜಾರಿಗೊಳಿಸಲು ಸಾಧ್ಯವಾಗದಿದ್ದರೂ ಶಾಸಕಾಂಗದ ಉಭಯ ಸದನಗಳಲ್ಲಿ ಚರ್ಚೆಗೆ ಅವಕಾಶವಿತ್ತು ಸಮಯಕ್ಕಾಗಿ ಕಾದು ಫೆಬ್ರವರಿ 22, 1977ರಂದು ಮೀಸಲಾತಿ ಆದೇಶ ಹೊರಡಿಸಿತು. ಎರಡು ಪ್ರವರ್ಗಗಳಾಗಿ ವಿಂಗಡಿಸಿ ಒಂದನ್ನು ಬಿ.ಸಿ.ಟಿ. ಎಂದು ಮತ್ತೊಂದನ್ನು ಬಿ.ಸಿ.ಎಂ. ಎಂದು ಕರೆಯಿತು. ವರದಿಯಲ್ಲಿ ಸೇರದ ಮತ್ತೊಂದು ಪ್ರವರ್ಗವನ್ನು ರಚಿಸಿ ಅದಕ್ಕೆ ‘ಹಿಂದುಳಿದ ವಿಶೇಷ ಗುಂಪು’ ಎಂದು ಹೆಸರಿಸಿ, ಆ ವಿಶೇಷ ಗುಂಪಿಗೆ ಶೇ.5ರಷ್ಟು ಮೀಸಲಾತಿಯನ್ನು ನಿಗದಿ ಪಡಿಸಿತು.

ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದರೂ(ವಿಧಿ 15.4)ಕೆಲವು ಜಾತಿಗಳು ಸಾಕಷ್ಟು ಪ್ರಾತಿನಿಧ್ಯ (ವಿಧಿ 16.4) ಪಡೆದಿವೆ ಎಂದು ವರದಿಯಲ್ಲಿ ಕೈ ಬಿಡಲಾಗಿದ್ದರೂ ಸರಕಾರ ಮೀಸಲಾತಿ ಪಟ್ಟಿಗೆ ಸೇರಿಸಿತು. ಅವುಗಳೆಂದರೆ- ಅರಸು, ಬಲಿಜ, ದೇವಾಡಿಗ, ಗಾಣಿಗ, ನಾಯಿಂದ, ರಜಪೂತ್, ಸತಾನಿ ಮುಂತಾದವು. ಆಯೋಗದ ವರದಿಯಲ್ಲಿ ಸೇರಿಲ್ಲದ ಈ ಜಾತಿಗಳನ್ನು ಸರಕಾರ ಮೀಸಲಾತಿ ಪಟ್ಟಿಗೆ ಸೇರಿಸಿರುವುದನ್ನು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ, ಅವುಗಳನ್ನು ಪಟ್ಟಿಯಿಂದ ಹೊರಗಿಡಲು ನ್ಯಾಯಾಲಯ ಆದೇಶಿಸಿತು (ಎಸ್.ಸಿ. ಸೋಮಶೇಖರಪ್ಪ vs ಕರ್ನಾಟಕ). ಉಚ್ಚ ನ್ಯಾಯಾಲಯದ ಆದೇಶದನ್ವಯ ಸರಕಾರ ಪರಿಷ್ಕೃತ ಆದೇಶವನ್ನು ಮೇ 1, 1979ರಲ್ಲಿ ಹೊರಡಿಸಿತು.

ಆನಂತರ, ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬರುತ್ತದೆ (ಕೆ.ಸಿ. ವಸಂತ್ ಕುಮಾರ್ vs ಕರ್ನಾಟಕ). ನ್ಯಾಯಾಲಯದಲ್ಲಿ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಗುರುತಿಸಲು ಆಯೋಗ ಅಳವಡಿಸಿರುವ ಮಾನದಂಡಗಳ ಕುರಿತು ವಾದ-ಪ್ರತಿವಾದ ನಡೆಯುವ ಸಂದರ್ಭದಲ್ಲಿ ಕರ್ನಾಟಕ ಸರಕಾರ ಹೊಸ ಆಯೋಗವನ್ನು ರಚಿಸುವುದಾಗಿ ನ್ಯಾಯಾಲಯಕ್ಕೆ ಶಪಥ ಪತ್ರ ಸಲ್ಲಿಸುವುದರೊಂದಿಗೆ ಪ್ರಕರಣ ಅಂತ್ಯವಾಯಿತು.

ಹಾವನೂರ್ ವರದಿ ಮತ್ತು ಸಾರ್ವಜನಿಕ ಅಭಿಪ್ರಾಯ:

ರಾಜ್ಯಾದ್ಯಂತ ವರದಿಯಲ್ಲಿ ಸೇರದ ಜಾತಿಗಳು ಮತ್ತು ಸಂಘ-ಸಂಸ್ಥೆಗಳು ವ್ಯಾಪಕವಾಗಿ ವಿರೋಧಿಸಿ ಬೀದಿಗಿಳಿದವು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಜೆ.ಬಿ.ಮಲ್ಲಾರಾಧ್ಯರು ಪತ್ರಿಕಾಗೋಷ್ಠಿ ನಡೆಸಿ, ‘‘ರಾಜ್ಯದಲ್ಲಿರುವ ಲಕ್ಷಾಂತರ ಮಂದಿ ವೀರಶೈವರು ಅನಕ್ಷರಸ್ಥರಾಗಿದ್ದು ದಟ್ಟ ದಾರಿದ್ರ್ಯ ದಿಂದ ಗುಡಿಸಲುಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ವೀರಶೈವರನ್ನು ಹಿಂದುಳಿದ ವರ್ಗಗಳ ಆಯೋಗವು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ನಿರ್ಲಕ್ಷಿಸಿದೆ’’ ಎಂದರು. ತರಳಬಾಳು ಜಗದ್ಗುರುಗಳು ಹಾವನೂರ್ ವರದಿ ರಾಜ್ಯಾಂಗಕ್ಕನುಗುಣವಾಗಿಲ್ಲ ಎಂದು ಹೇಳಿ ‘‘ಮನುಷ್ಯನು ಮನುಷ್ಯನೇ, ಪ್ರಜೆಯೂ ಪ್ರಜೆಯೇ ಅವನಿಗೆ ಜಾತಿ ವಗೈರೆ ಕಾರಣಗಳಿಂದ ಯಾವ ವಿಶಿಷ್ಟತೆಯೂ ಇರಬೇಕಾಗಿಲ್ಲ’’ ಎಂದು ಹೇಳಿ ಹಾವನೂರ್ ವರದಿಯು ವೀರಶೈವರಿಗೆ ಅಷ್ಟೇ ಅಲ್ಲ; ಸರ್ವ ಭಾರತೀಯರ ಬೆಳವಣಿಗೆ ಮತ್ತು ಭದ್ರತೆಗೆ ಆತಂಕಕಾರಿಯಾಗಿದೆ ಎಂದು ಹೇಳಿದ್ದರು. ಶಾಸಕರಾಗಿದ್ದ ಭೀಮಣ್ಣ ಖಂಡ್ರೆ ಅವರು ವರದಿಗೆ ವಿಧಾನಸಭಾಂಗಣದಲ್ಲೇ ಬೆಂಕಿ ಹಚ್ಚುವ ಕ್ಷುಲ್ಲಕ ಕೆಲಸವನ್ನೂ ಮಾಡಿದರು.

ಹಾವನೂರ್ ವರದಿಯನ್ನು ವಿರೋಧಿಸುವುದರ ನಡುವೆ ಕೆಲವು ಪ್ರಜ್ಞಾವಂತರಾದ ಪ್ರೊ. ಎಂ.ಡಿ. ನಂಜುಂಡಸ್ವಾಮಿ, ಮಾಜಿ ಸಚಿವ ಜಿ.ಬಿ. ಶಂಕರ್ ರಾವ್, ಪ್ರೊ. ಧರ್ಮಲಿಂಗಂ, ಎಂ.ಪಿ. ಪ್ರಕಾಶ್ ಮುಂತಾದವರು ವರದಿಯನ್ನು ಸಮರ್ಥಿಸಿಕೊಂಡರು

ಒಟ್ಟಿನಲ್ಲಿ, ಸಂವಿಧಾನದ ವಿಧಿ15 (4) ಮತ್ತು ವಿಧಿ16 (4) ಕ್ಕೆ ಅನ್ವಯಿಸುವಂತೆ ಮೀಸಲಾತಿ ಕಲ್ಪಿಸಿದ ಅಂದಿನ ಸರಕಾರದ ಧುರೀಣ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಹೃದಯದಲ್ಲಿ ಶಾಶ್ವತವಾಗಿ ಸ್ಥಾನ ಪಡೆದುಕೊಂಡರು. ವರದಿಗೆ ಕಾರಣರಾದ ಹಾವನೂರ್ ಕರ್ನಾಟಕದ ಮನೆ ಮಾತಾದರು; ಅವರು ಸಲ್ಲಿಸಿದ ವರದಿ ಬಹುಜನರ ದೃಷ್ಟಿಯಲ್ಲಿ ಹಿಂದುಳಿದ ವರ್ಗಗಳ ಬೈಬಲ್ ಎನಿಸಿಕೊಂಡು ಮೆಚ್ಚುಗೆ ಪಡೆಯಿತು.

ಟಿ. ವೆಂಕಟಸ್ವಾಮಿ ಆಯೋಗ:

ಕರ್ನಾಟಕ ಸರಕಾರ ಸಲ್ಲಿಸಿದ ಮುಚ್ಚಳಿಕೆ ಅನ್ವಯ (ಕೆ.ಸಿ.ವಸಂತಕುಮಾರ್ vs ಕರ್ನಾಟಕ) ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಎರಡನೇ ಹಿಂದುಳಿದ ಆಯೋಗವನ್ನು 1983ರಲ್ಲಿ ಟಿ.ವೆಂಕಟಸ್ವಾಮಿಯವರ ಅಧ್ಯಕ್ಷತೆಯಲ್ಲಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿತು. ಅಲ್ಲದೆ 14 ಮಂದಿ ಸದಸ್ಯರನ್ನೂ ಕೂಡ ನೇಮಕ ಮಾಡಲಾಯಿತು.

ಆಯೋಗ ಹಿಂದುಳಿದಿರುವಿಕೆಯನ್ನು ಗುರುತಿಸಲು ಹಾಕಿಕೊಳ್ಳ ಬೇಕಾದ ಮಾನದಂಡಗಳು ಜಾತಿ ಮತ್ತು ಕೋಮುಗಳ ಜನಸಂಖ್ಯೆ, ಅವುಗಳ ಸಾಮಾಜಿಕ ಸ್ಥಿತಿಗಳಾದ ಕಸುಬು, ಶಿಕ್ಷಣ, ಆರ್ಥಿಕ ಪ್ರಗತಿ, ಉದ್ಯೋಗದಲ್ಲಿ ಪ್ರಾತಿನಿಧ್ಯ, ವಸತಿ ಸೌಕರ್ಯ, ಕೌಟುಂಬಿಕ ಕಲ್ಯಾಣ ಕಾರ್ಯಕ್ರಮಗಳ ಅಳವಡಿಕೆ ಮತ್ತು ಕುಡಿತದ ವ್ಯಸನ ಇವುಗಳ ಬಗ್ಗೆ ಸಾರ್ವಜನಿಕರಿಂದ ಸಲಹೆ ಮತ್ತು ಅಭಿಪ್ರಾಯ ಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ ಪ್ರಶ್ನಾವಳಿಗಳನ್ನು ಆಯೋಗ ಸಿದ್ಧಪಡಿಸಿತ್ತು. ರಾಜ್ಯಾದ್ಯಂತ ಸುಮಾರು 714 ಸಂಘ-ಸಂಸ್ಥೆಗಳು ಮತ್ತು 6,286 ವಿವಿಧ ವರ್ಗಗಳ ಗಣ್ಯ ವ್ಯಕ್ತಿಗಳಿಗೆ ಪ್ರಶ್ನಾವಳಿಗಳನ್ನು ನೀಡಿ ಅವುಗಳಲ್ಲಿ 425 ಸಂಘ- ಸಂಸ್ಥೆಗಳಿಂದ ಮತ್ತು 261 ವ್ಯಕ್ತಿಗಳಿಂದ, ಆಯೋಗವು ಪ್ರಶ್ನಾವಳಿ ಗಳಿಗೆ ಉತ್ತರಗಳನ್ನು ಪಡೆದುಕೊಂಡಿದೆ. ಹಾಗೆಯೇ ರಾಜ್ಯ ಸರಕಾರದ ಸುಮಾರು 205 ಇಲಾಖಾ ಮುಖ್ಯಸ್ಥರುಗಳಿಂದ ಉತ್ತರಗಳನ್ನೂ ಸಹ ಪಡೆದುಕೊಂಡಿತ್ತು.

ಆಯೋಗವು ವಿಧಿ 15(4)ರಂತೆ ಪಟ್ಟಿ ಮಾಡಿದ ಜಾತಿಗಳನ್ನು ವಿವಿಧ ಕೋನಗಳಿಂದ ಪರಿಶೀಲಿಸಿ ವಿಧಿ 16(4)ರ ಅನ್ವಯ ಮೀಸಲಾತಿಗಾಗಿ ಶಿಫಾರಸು ಮಾಡಿದೆ, ಹಾಗೆ ಶೇಕಡವಾರು ಮೀಸಲಾತಿಯನ್ನು ಸಹ ಗುಂಪು ‘ಎ’ ಗೆ ಶೇ.14 ಗುಂಪು ‘ಬಿ’ಗೆ ಶೇ.13ರಷ್ಟನ್ನು ಮೀಸಲಾತಿ ಕೋಟಾ ನಿಗದಿ ಮಾಡಿದೆ. ಹಿಂದುಳಿದವರಿಗೂ ಭಡ್ತಿಯಲ್ಲಿ ಮೀಸಲಾತಿ ನೀಡಬೇಕೆಂದು ಆಯೋಗ ಶಿಫಾರಸು ಮಾಡಿದ್ದುದು ಒಂದು ಹೆಗ್ಗುರುತು.

ಆಯೋಗ 1986ರ ಮಾರ್ಚ್ ತಿಂಗಳ ಅಂತ್ಯದಲ್ಲಿ ವರದಿಯನ್ನು ಸರಕಾರಕ್ಕೆ ಸಲ್ಲಿಸಿತು. ಕರ್ನಾಟಕ ರಾಜ್ಯಾದ್ಯಂತ ವರದಿಯು ಸಂಚಲನ ಉಂಟುಮಾಡಿ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು. ಮೀಸಲಾತಿ ಪಟ್ಟಿಯಲ್ಲಿ ಸೇರಿರದ ಜಾತಿಗಳೆಲ್ಲ ಹೋರಾಟಕ್ಕಿಳಿದವು. ಪ್ರಮುಖ ರಾಜಕೀಯ ನಾಯಕರು ಮತ್ತು ಜಾತಿಗಳ ಸಂಘ-ಸಂಸ್ಥೆಗಳ ಮುಖ್ಯಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಸಂಪುಟದ ತೀರ್ಮಾನ:

ಅಕ್ಟೋಬರ್ 7, 1986ರ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಸರಕಾರವು ವೆಂಕಟಸ್ವಾಮಿ ವರದಿಯನ್ನು ತಿರಸ್ಕರಿಸಿ ಹೊಸ ಆಯೋಗವನ್ನು ರಚಿಸಲು ತೀರ್ಮಾನಿಸಿತು. ಹೊಸ ಆಯೋಗ ವರದಿ ಸಲ್ಲಿಸುವವರೆಗೆ ತಾತ್ಕಾಲಿಕ ಮೀಸಲಾತಿ ಪಟ್ಟಿಯನ್ನು ಮೂರು ವರ್ಷಗಳ ಅವಧಿಗೆ, ಹಿಂದುಳಿದ ವರ್ಗಗಳನ್ನು 5 ಗುಂಪುಗಳಾಗಿ ಯಥೇಷ್ಟವಾಗಿ ವಿಂಗಡಿಸಿ ಹೊಸ ಆದೇಶವನ್ನು ಹೊರಡಿಸಿತು. ಕರ್ನಾಟಕ ಸಮಾಜದಲ್ಲಿ ಇರುವಂತಹ ಕೇವಲ ನಾಲ್ಕೈದು ಜಾತಿಗಳನ್ನಷ್ಟೇ ಹೊರಗಿಟ್ಟು ಉಳಿದೆಲ್ಲವುಗಳನ್ನೂ ಹಿಂದುಳಿದ ವರ್ಗ ಎಂದು ಪರಿಗಣಿಸಿ ವಾಸ್ತವ ನೆಲೆಗಟ್ಟಿನ ಹಿಂದುಳಿದ ವರ್ಗಗಳಿಗೆ ಮಹಾದ್ರೋಹ ಬಗೆಯಿತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎನ್. ಲಿಂಗಪ್ಪ

contributor

Similar News